ಸತೀಶ ಕುಲಕರ್ಣಿ
ಹಾವೇರಿ ಮಾಗಾವಿ ಟಾಕಿಜನ್ಯಾಗ ಹೋದವಾರ ೧೯: ೨೦: ೨೧ ಸಿನೇಮಾ ನೋಡಿದೆ. ಇದನ್ನ ನಮ್ಮ ಎಸ್.ಎಫ್.ಆಯ್. ಗೆಳೆಯರಾದ ಬಸವರಾಜ ಬೋವಿ, ಖಲಂದರ್, ಪುಟ್ಟಪ್ಪ ಹರವಿ, ವಿವೇಕ ಪಾನ್ಸೆ, ಜಿ.ಡಿ ಪೂಜಾರ ಆರ್ಗನೈಸ್ ಮಾಡಿದ್ರು. ನಮ್ಮ ಜೊತಿಗೆ ಹಾವೇರಿ ಪಿ.ಜಿ ಸೆಂಟರ್ ಆಡಳತಾಧಿಕಾರಿ ಪ್ರಶಾಂತ, ಕಾಂಮ್ರೆಡೆ ಹೊನ್ನಪ್ಪ ಮರಿಯಮ್ಮನವರ, ಸುಡಗಾಡ ಸಿದ್ಧ ಜನಾಂಗದ ಲೀಡರ್ ವಿಭೂತಿಶೆಟ್ಟಿ ಮುಂತಾದವರು ಬಂದಿದ್ರು.
ನನಗ ನಿರ್ದೇಶಕ ಮಂಸೋರೆ ಅವರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಪೂರ್ತಿ ಖಾಲಿ ತಲಿ ಮಾಡಿಕೊಂಡು ಥೆಟರಿಗೆ ಹೋಗಿದ್ದೆ. ಸಿನೇಮಾ ನೋಡಿ ಬಾಳ ಸಮಾಧಾನ ಮತ್ತ ಖುಷಿ ಆತು. ನಮ್ಮ ಎದುರಿಗೆ ನಡೆದ ಘಟನಾವಳಿಗಳ್ನ ಜೋಡಿಸಿಕೊಂಡು ಫಿಲ್ಮ ಮಾಡೋದು ಸವಾಲಿನ ಕೆಲ್ಸ, ಅಪಾಯನೂ ಹೌದು. ಆದರ ಮ. ಶ್ರೀ. ಮುರಳಿಕೃಷ್ಣ ಮಂಸೂರೆ ಎಂಬ ಉದ್ದಾನ ಹೆಸರಿನ ನಿರ್ದೇಶಕ ಬಾಳ ಚಂದನ ಸಿನೇಮಾ ಮಾಡ್ಯಾರ. ಯಾಕಂದ್ರ ಇಂಥಾ ಅನೇಕ ಹೋರಾಟಗಳಿಗೆ ಬಾಯಿ ಕೊಟ್ಟವರು ನಾವೆಲ್ಲ. ಖರೆ ಖರೇನ ನಡೆದ ಘಟನಾವಳಿಗಳನ್ನ ಆರ್ಟ ಮಾಡಿದ್ದು ಯಶಸ್ಸು ನಿರ್ದೇಶಕರದ್ದು.

ಹೋರಾಟ, ಕ್ರಾಂತಿ, ಚಳವಳಿ ಇವೆಲ್ಲ ಇವತ್ತ ಬ್ಯಾರಬ್ಯಾರೆ ರೂಪದಾಗ ಇರಬೇಕಾದ್ರ ಖರೆ ಅರ್ಥ ಹೊರಗ ಬರೋ ಹಂಗ ಸಿನೇಮಾ ಆಗ್ಯೇದ. ನಮ್ಮೊಳಗ ಮಲಗಿದ್ದ ಹೋರಾಟ ಕಿಚ್ಚನ್ನ, ಬೆಚ್ಚಗ ಮಾಡೇದ. ಒಂದು ರೀತಿಯೊಳಗ ಆವರಿಸಿಕೊಂಡು ಗಟ್ಟಯಾಗಿ ಹಿಡಕೊಂಡದ. ಯಾವ ಉದ್ವೇಗ ಇಲ್ದ, ವಾಸ್ತವ ಶೈಲಿಯೊಳಗ ಕಟ್ಟಿಕೊಟ್ಟಾರ. ಸಣ್ಣಸಣ್ಣ ಸಂಗತಿ, ಕಾಡುಮೇಡು, ಇದಕ್ಕ ಪೂರಕ ಆಗೊ ಹಂಗ ನಟನಾ ಎಲ್ಲಾ ಹಿಡಿಸಿದ್ವು. ವಿಶೇಷ ಅಂದ್ರ ಮಂಜು ಮತ್ತು ಅವ್ರ ತಂದಿ ಪಾತ್ರ.
ನಕ್ಸಲ್ ಹೆಸರನ್ಯಾಗ ಬೆದರಕಿ ಹಾಕಿ, ಈ ವ್ಯವಸ್ತಾ ಮಾಡೋ ದಬ್ಬಾಳಿಕೆಗೆ ಅದ್ರ ವಿರುದ್ಧ ಪತ್ರಕರ್ತ, ಲಾಯರ್ ಮತ್ತ ಹೋರಾಟಗಾರರು ನಿಡೋ ಸಪೋರ್ಟ ಇವತ್ತಿನ ದಿನದಾಗ ಬೇಕು. ಕಾಯ್ದೆ ಮತ್ತು ಸಂವಿಧಾನ ತಿಳುವಳಿಕೆ ಇದ್ರ ಮಾತ್ರ ಹೋರಾಟ ಗೆಲ್ಲಿಕೆ ಸಾಧ್ಯ. ಇಲ್ದಿದ್ರ ಯಾವ ಹೋರಾಟಾನೂ ಮಣ್ಣಾಗಿ ಬಿಡ್ತದ.
ಕ್ರೌರ್ಯ ನಾನಾ ಲೆವಲ್ಲನ್ಯಾಗ ಇರ್ತದ. ಅಡವಿ ಅಂದ್ರ ಆದಿ ಮನುಷ್ಯರ ಮನಿ ಇದ್ದಂಗ. ಅದರೊಳಗಿನ ನೋವು ಅವಮಾನ ಹಂಗ ಹೋರಾಟ, ಈ ಸಿನೇಮಾದಿಂದ ಕಂಡೆ. ಓದಿಗಿಂತ ವಾಸ್ತವ ದೊಡ್ಡದು. ಈಗಲೂ ಜನಹಿತ ಸಿದ್ದಾಂತದೊಳಗ ನಂಬಿಕಿ ಇರೋ ನನ್ನಂಥವರೆಲ್ಲಾರೂ ೧೯: ೨೦: ೨೧: ಸಿನೇಮಾ ನೋಡಬೇಕು.

0 ಪ್ರತಿಕ್ರಿಯೆಗಳು