ಜಯರಾಮಾಚಾರಿ ಕಥೆ – ಬಿ ನಾರಾಯಣ ಮೂರ್ತಿ…

ಜಯರಾಮಾಚಾರಿ

ನಾರಾಯಣ ಮಧ್ಯರಾತ್ರಿಲಿ ಎರಡಕ್ಕೆ ಹೋಗಿ ಕುಕ್ಕರುಗಾಲಲ್ಲಿ ಕೂತವನು ಬಿದ್ದು ಬಿದ್ದು ನಗುತ್ತಿದ್ದ ಸದ್ದು ಹಾಲಿನಲ್ಲಿ ಮಲಗಿದ್ದ ಸಾವಿತ್ರಮ್ಮನಿಗೆ ಕೇಳಿ, ಪಕ್ಕದಲ್ಲೇ ಮಲಗಿದ್ದ ಯಜಮಾನರನ್ನು ಎದ್ದೇಳಿಸುವ ಎಂದುಕೊಳ್ಳುವಷ್ಟರಲ್ಲಿ, ಅವರೇ ತಮ್ಮ ದೊಡ್ಡ ಗೊರಕೆಗೆ ಒಂದು ಸ್ಟಾಪ್ ಕೊಟ್ಟು ‘ಏಯ್ ಏನೇ ಅವ್ನು ಹಂಗೆ ಕಿಸಿತಾ ಇದ್ದಾನೆ ಇಷ್ಟು ಹೊತ್ತಲ್ಲಿ’ ಎಂದು ಹೇಳಿ, ಬಲ ಮಗ್ಗುಲಾಗಿ ಮಲಗಿಕೊಂಡರು. ಸಾವಿತ್ರಮ್ಮ ಏನೋ ನೆನಪಾದವರಂತೆ ಯಜಮಾನರ ಕಿವಿ ಬಳಿ ಬಂದು ‘ಆ ಹೈದಂಗೆ ಒಂದು ಹೆಣ್ಣು ನೋಡಿ ಕಟ್ಟಿ ಹಾಕಬೇಕು ,ಒಸಿ ಕಿವಿಗೆ ಹಾಕೊಳ್ಳಿ’ ಎಂದರು.

ಸಾವಿತ್ರಮ್ಮನವರ ಧ್ವನಿಯಲ್ಲಿದ್ದ ಗಾಬರಿ ಕಂಡು ‘ಸರಿ ಮಾಡೋಣ ಮಕ್ಕೊ’  ಎಂದು ಯಜಮಾನರು ಅಂದು ಸುಮ್ಮನಾದರು. ಇತ್ತ ಇಂಡಿಯನ್ ಸ್ಟೈಲಿನ ಟಾಯ್ಲೆಟಿನಲ್ಲಿ ಜಾಸ್ತಿ ಹೊತ್ತು ಕಾಲು ಅಗಲಿಸಿ ಕೂರದೆ, ಒಂದು ಸಲ ಬಲಗಾಲ ಮೇಲೆ ಭಾರ ಹಾಕಿ, ಇನ್ನೊಂದು ಸಲ ಎಡಗಾಲ ಮೇಲೆ ಭಾರ ಹಾಕಿ, ಕಿವಿಯಲ್ಲಿ ಬ್ಲೂ ಟೂತ್ ಹೆಡ್ ಫೋನ್ ಸಿಗಿಸಿಕೊಂಡು ಕಾಮಿಡಿ ರೀಲ್ಸ್ ನೋಡುತ್ತಿದ್ದ ನಾರಾಯಣನಿಗೆ ಜಾಸ್ತಿ ಹೊತ್ತು ಕೂರಲಾಗದೆ ಅಂಡಿಗೆ ನೀರು ಎರಚಿಕೊಂಡು ಒರೆಸಿಕೊಂಡು ಬಂದು ಹಾಸಿಗೆ ಮೇಲೆ ಬಿದ್ದ. ಹಂಗೆ ಹಾಸಿಗೆ ಮೇಲೆ ಒದ್ದಾಡಿಕೊಂಡೇ ಮೊಬೈಲ್ ನೋಡುತ್ತಿದ್ದ, ಕ್ಯಾನ ಹತ್ತಿದ ಯಜಮಾನರು ‘ಲೇ ಮಲ್ಕೊಳ್ಳೋ ಸಾಕು ಬೆಳಗಿಂದ ನೋಡಿದ್ದು ಸಾಕಾಗಿಲ್ವ, ಬಿದ್ಕೊ’ ಎಂದರು. ಅವನು ಹೆಡ್ ಫೋನ್ ಸಿಗಿಸಿಕೊಂಡ ಕಾರಣ ಅದು ಕೇಳಿಸದೇ ಹಾಗೆ ಇದ್ದುದು ನೋಡಿ, ಅವನನ್ನು ಅಲ್ಲಾಡಿಸಿದಾಗ ಹೆಡ್ ಸೆಟ್ ತೆಗೆದು ‘ಏನಪ್ಪೋ’ ಅಂದ, ‘ಅಮ್ಮಿಕೊಂಡು ಮಲಕಲ್ಲಾ, ನಿದ್ದೆ ಮಾಡಬೇಕು, ಮೊಬೈಲ್ ಬೆಳಕು ಕಣ್ಣಿಗೆ ಬೀಳ್ತಿದೆ’ ಎಂದು ಸಿಟ್ಟಿನಿಂದ ಹೇಳಿದರು. ನಾರಾಯಣ ಆದರೂ ಮೊಬೈಲ್ ನೋಡುತ್ತಿದ್ದವನು ಫೇಸ್ಬುಕ್ ಮೆಸ್ಸೆಂಜರ್ ಲಿ ಸುಧೀರ ಆನ್ ಲೈನ್ ಲಿ ಇರೋದು ನೋಡಿ ಒಮ್ಮೆಲೇ ಬೆಚ್ಚಿ ಗಾಬರಿ ಬಿದ್ದು, ಬೆವರುತ್ತ, ಚಳಿ ಜ್ವರ ಬಂದವನಂತೆ ನಡುಗುತ್ತ ಮಲಗಿದ, ಸುಧೀರ ಗಹಗಹಿಸಿ ಜೋರಾಗಿ ನಕ್ಕಂತೆ ಆಯ್ತು.

ಸೂರ್ಯ ನೆತ್ತಿಗೆ ಬಂದಾಗ ಸಾವಿತ್ರಮ್ಮ ಮಗನನ್ನು ಎಬ್ಬಿಸಿ, ಕೈಗೆ ಬೆಲ್ಲದ ಟೀ ಕೊಟ್ಟು, “ಬೇಗ ಮುಖ ತೊಳ್ಕೊ ಬಿಸಿಬಿಸಿ ದೋಸೆ ತಿನ್ನುವಿ” ಎಂದು, ಎಂದೂ ಹೊರ ಬರಲಾಗದ ಗುಹೆಯಂತ ಅಡುಗೆ ಮನೆ ಹೊಕ್ಕರು. ನಾರಾಯಣ ಎದ್ದವನೇ ಕಿವಿಗೆ ಹೆಡ್ ಫೋನ್ ಸಿಗಿಸಿಕೊಂಡು ಮೊಬೈಲ್ ನಲ್ಲಿ ವಾಟ್ಸಾಪು, ಫೇಸ್ಬುಕ್, ಇಸ್ಟಾಗ್ರಾಮ್, ಟ್ವಿಟ್ಟರ್, ಮೊಜೊ, ಗೂಗಲ್ ಎಲ್ಲ ಹಾರಕಿಕೊಂಡು ಒಂದೊಂದು ಸೆಕೆಂಡಿಗೆ ಒಂದೊಂದು ನೋಡುತ್ತಾ, ಟೀ ಹೀರಿ ಬಿಸಾಕಿದ. ಬರಿ ಬನಿಯನ್, ಒಂದು ಶಾರ್ಟ್ ಹಾಕಿ ಹೊರಗಡೆ ಬಂದು ಯೂಟೂಬಲ್ಲಿ ಪೊಗರು ಸಿನಿಮಾದ ಹಾಡು ಹಾಕ್ಕೊಂಡು, ಅದನ್ನೇ ನೋಡ್ಕೊಂಡು, ಕತ್ತ ಅಲ್ಲಾಡಿಸುತ್ತ  ಹಲ್ಲುಜ್ಜುತ್ತಿದ್ದ. ಅದೇ ಸಮಯಕ್ಕೆ ಗೊತ್ತಿಲ್ಲದ ನಂಬರ್ ನಿಂದ ಕಾಲ್ ಬರುತ್ತಿತ್ತು, ಹಂಗೆಲ್ಲಾ ಅನಾಮಧೇಯ ಕಾಲ್ ರಿಸೀವ್ ಮಾಡಿ ಅಭ್ಯಾಸ ಇರದ ನಾರಾಯಣ ಅದನ್ನು ಅಲ್ಲೇ ಕಟ್ ಮಾಡಿ ಮತ್ತೆ ಹಾಡು ನೋಡುತ್ತಿದ್ದ, ಮತ್ತೆ ಕಾಲ್ ಬಂತು, ಮತ್ತೆ ಕಟ್ ಮಾಡಿದ, ಆಮೇಲೊಂದು ವಾಟ್ಸಾಪ್ ಕಾಲ್ ಬಂತು, ಕಟ್ ಮಾಡಿದ, ಅವನು ಕಟ್ ಮಾಡಿ ಹಾಡು ನೋಡಲಿಕ್ಕೂ, ಆ ಕಡೆ ಇಂದ ಕಾಲ್ ಬರಲಿಕ್ಕೂ ಶುರುವಾಗಿ ಕೊನೆಗೆ ಸಿಟ್ಟಿನಿಂದ ಕಾಲ್ ರಿಸೀವ್ ಮಾಡಿ “ಯಾರೀ ನೀವು” ಅಂದ, ಆ ಕಡೆಯಿಂದ “ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ಇಂದ ಕಾಲ್ ಮಾಡ್ತಾ ಇರೋದು, ಇಮ್ಮಿಡಿಯೇಟಿಲಿ ಸ್ಟೇಷನ್ ಗೆ ಬನ್ನಿ” ಎನ್ನುವ ಧ್ವನಿ ಕೇಳಿಸಿದೊಡನೆ, ಒಂದು ಕ್ಷಣ ನಿಜವ ಅಥವಾ ಯಾರಾದ್ರೂ ಆಟ ಆಡಿಸುತ್ತಿದ್ದರ? ಅಂತ ಅದೇ ಗ್ಯಾಪಲ್ಲಿ ಆ ನಂಬರ್ ಕಾಪಿ ಮಾಡಿ, ಟ್ರೂಕಾಲರ್ ಗೆ ಹಾಕಿದಾಗ ಅದರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಅಂತ ಇದ್ದುದು ನೋಡಿ ಬೆವರುವ ಹೊತ್ತಿಗೆ ಆ ಕಡೆ ಇಂದ “ಏನ್ರಿ ಕೇಳುಸ್ತಾ ಇದ್ದೀಯ, ಬರದೇ ಇದ್ರೆ ನಿಮ್ ಕಾಲ್ ಟ್ರೇಸ್ ಆಗಿದೆ ನಾವೇ ಹುಡುಕೊಂಡು ಬಂದು ಎಳಕೊಂಡು ಹೋಗಬೇಕಾಗುತ್ತೆ ಅರ್ಥ ಆಯ್ತಾ” ಎಂದು ಹೇಳಿ ಕಾಲ್ ಕಟ್ ಮಾಡಿದರು. ಬೆಳಬೆಳಗ್ಗೆ ಬೆವರುತ್ತಿದ್ದ ಮಗನ ನೋಡಿದ ಸಾವಿತ್ರಮ್ಮ ‘ಅದ್ಯಾಕ್ ಲಾ ಬೆವರುತ್ತಿದ್ದಿ, ಹೊರಗೆ ಬಿಸಿಲು, ಒಳಗೆ ಬಂದು ಬಾ ಬೇಗ ಉಣ್ಣು” ಎಂದು ಒಳಗೆ ಹೋದರು. ನಾರಾಯಣನಿಗೆ ಪೊಲೀಸ್ ಯಾಕೆ ಕಾಲ್ ಮಾಡಿರಬಹುದು ಎಂದು ಯೋಚಿಸಿದಾಗ ಅದರ ಒಂದು ಎಳೆ ನೆನಪಾಗಿ ಬೆವರಿನ ಜತೆ ಕಾಲುಗಳು ನಡುಗತೊಡಗಿದವು.

ನಾರಾಯಣ ಮೂರ್ತಿ ಮಂಡ್ಯದ ವಡ್ಡರಳ್ಳಿಯವ, ಸ್ಕೂಲಲ್ಲಿ ಹೆವಿ ಕಿತ್ತು ದಬಾಕಿ, ಕಾಲೇಜಿಗೆ ಸೇರಿ ಬೀಡಿ ಹೊಡೆಯಲು ಶುರು ಮಾಡಿ, ಬೀಡಿ ಹೋಗಿ ಸಿಗರೇಟು ಬಂದು, ಬೀರು ಹೋಗಿ ವಿಸ್ಕಿ ಬಂದು, ಮೊಬೈಲ್ ನಲ್ಲಿ ಸದಾ ಕಾಲ ಅದು ಇದು ನೋಡ್ಕೊಂಡು ಗ್ಯಾಪಲ್ಲಿ ಟಿಕ್ ಟಾಕ್ ಮಾಡಿಕೊಂಡು, ಹೆಣ್ಗಳ ಚಟ ಬೆಳೆಸಿಕೊಂಡಿದ್ದ. ಬೆಂಗಳೂರಿನ ಪೀಣ್ಯದಲ್ಲಿ ಒಂದು ಕೆಲಸ ಕೂಡ ಹಿಡಿದಿದ್ದ, ಎಲೆಕ್ಟ್ರಿಕಲ್ ಮೇಂಟೈನ್ರ್ ಆಗಿ, ಸದಾ ಒಂದು ಜೀನ್ಸ್ ಹಾಕ್ಕೊಂಡು, ಅದರ ಮೇಲೆ ಯುನಿಫಾರ್ಮ್ ಶರ್ಟ್ ಹಾಕೊಂಡು, ಅದರ ಮೇಲೆ ಹಾಫ್ ಜಾಕೆಟ್ ಹಾಕೊಂಡ್, ಯಾವಾಗಲೂ ಕಿವಿಗೆ ಬ್ಲೂಟೂತ್ ಹೆಡ್ ಫೋನ್ ಸಿಗಿಸಿಕೊಂಡು ಇರುತ್ತಿದ್ದ, ಅಲ್ಲೇ ಜಾಲಹಳ್ಳಿ ಬಳಿ ಒಂದು ಸಣ್ಣ ರೂಮ್ ಕೂಡ ಮಾಡಿಕೊಂಡಿದ್ದ. ಆಮೇಲೆ ಕಂಪನಿ ಕಡೆಯಿಂದ ಕ್ವಾಟರ್ಸ್ ಸಿಕ್ಕಿ ಅಲ್ಲಿಗೆ ಶಿಫ್ಟ್ ಆಗಿದ್ದ. ಅವನ ಸಿಂಡರಿತನಕ್ಕೆ ಒಂದೆರಡು ಎಳೆ ಹುಡುಗಿಯರು ಬಿದ್ದು, ಅವರ ಜೊತೆ ಮಾತು ಮೆಸೇಜ್, ವಿಡಿಯೋ ಕಾಲ್ ಎಲ್ಲ ಮಾಡಿ ಗಬಾರಕಿಕೊಂಡಿದ್ದ. ಅದರಿಂದ ಅವನಿಗೆ ಭಯಂಕರ ಆತ್ಮವಿಶ್ವಾಸ ಬೆಳೆದು ಯಾವ ಹುಡುಗಿಯನ್ನಾದರೂ ಬುಟ್ಟಿಗೆ ಹಾಕೋಬೌದು ಎನ್ನುವ ದೌಲತ್ತು ಬೆಳೆದಿತ್ತು.

ಇದೆ ದೌಲತ್ತಿನಿಂದ ಎರಡು ತಿಂಗಳ ಹಿಂದೆ ಕಂಪನಿಗೆ ಸೇರಿದ ನೇತ್ರಾವತಿಗೆ ಬಲೆ ಬೀಸಿದ್ದ. ಮೊದಲು ಮೊದಲು ಕೊಸರಾಡಿದರು ಆಮೇಲೆ ಅವನ ದಾರಿಗೆ ಬಂದಿದ್ದಳು. ಅವಳಿಗೆ ಮದುವೆ ಆಗಿ ಒಂದು ಮಗುವು ಕೂಡ ಇತ್ತು, ಗಂಡ ಆಟೋ ಓಡಿಸುತ್ತಿದ್ದ. ಅಷ್ಟೇನೂ ರಸಿಕನಲ್ಲದ ಅವನಿಂದ ನನಗೆ ಅಷ್ಟೊಂದು ಸಂಸಾರದ ಮಜಾ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಳು. ನಾರಾಯಣ ಅವಳಿಗೆ ಇದು ಟ್ರೈ ಮಾಡಿದ್ದೀರಾ? ಇದು ಟ್ರೈ ಮಾಡಿದ್ದೀರಾ? ಎಂದು ವಾತ್ಸಾಯನನ ಮೊಮ್ಮಗನಂತೆ ಸಕಲ ಭಂಗಿಯ ಫೋಟೋ ಕಳಿಸಿ ಅವಳನ್ನು ಕೆರಳಿಸುತ್ತಿದ್ದ.

“ಊಟಕ್ಕೆ ಹೋಗೋರ್ ಊಟಕ್ಕೆ ಹೋಗಿಬನ್ನಿ ಹತ್ತು ನಿಮಿಷ” ಎಂದು ಬಸ್ ನಿಂತು ಕಂಡಕ್ಟರ್ ಇಳಿದಾಗ ನಾರಾಯಣ ಬಸ್ ಎಲ್ಲಿದೆ ಎಂದು ಒಮ್ಮೆ ನೋಡಿ ವಾಸ್ತವಕ್ಕೆ ಬಂದ, ಕೆಳಗೆ ಇಳಿದು ಒಂದು ಶುಂಠಿ ಟೀ ಕುಡಿದು, ಜೊತೆಯಲ್ಲಿ ಧಮ್ ಎಳೆದು ಒಂದು ರೌಂಡ್ ಫೇಸ್ಬುಕ್, ವಾಟ್ಸಾಪು, ಇನ್ಸ್ಟಾ ನೋಡುವ ಹೊತ್ತಿಗೆ ಕಂಡಕ್ಟರ್ ಕರೆದ, ನಾರಾಯಣ ಬಸ್ ಹತ್ತಿ ಕೂತ.

ನೇತ್ರಾವತಿಯನ್ನ ಒಂದು ಲೆವೆಲ್ ಗೆ ದಾರಿಗೆ ತಂದಿದ್ದ ನಾರಾಯಣ, ಕಡೆಯ ಕೆಲಸಕ್ಕೆ ಸಿದ್ದನಾಗಿದ್ದ. ಒಂದೊಳ್ಳೆ ದಿನವನ್ನು ನೋಡಿ ರೂಮಿಗೆ ಅವಳನ್ನು ಕರೆಸಿಕೊಂಡು ಕೊನೆಯ ಆಟ ಮುಗಿಸೋಣ ಅಂದುಕೊಳ್ಳುತ್ತಿದ್ದ. ಅವಳಿಂದ ಕೂಡ ಯಾವ ವಿರೋಧ ಬರುತ್ತಿರಲಿಲ್ಲ, ಮಧ್ಯದಲ್ಲಿ ಅವಳು ಅಷ್ಟಾಗಿ ಮೆಸೇಜ್ ಮಾಡೋದು, ಕಾಲ್ ಮಾಡೋದು ಬಿಟ್ಟಾಗ, ಯಾಕೆ ಏನು ಎಂದು ಕೇಳಿದ್ದ. ಅದಕ್ಕವಳು ತನ್ನ ಗಂಡ ತನ್ನ ಮೊಬೈಲ್ ಚೆಕ್ ಮಾಡುತ್ತಾನೆ, ನೀನು ಕಾಲ್ ಮಾಡೋ ಸಮಯಕ್ಕೆ ಕಾಲ್ ಮಾಡ್ತಾನೆ, ಸ್ಸಾರಿ ಅಂದಿದ್ದಳು. ಅದಕ್ಕೆ ನಾರಾಯಣ ಅವಳಿಗೊಂದು ಹೊಸ ಸಿಮ್ ಕೊಡಿಸಿ ಇದರಿಂದ ಮಾಡು ನನಗೆ, ಯಾರಿಗೂ ಕೊಡಕ್ ಹೋಗಬೇಡ ಎಂದು ಹೇಳಿದ್ದ. ಸ್ವಲ್ಪ ದಿನಗಳಾದ ಮೇಲೆ ಅವಳ ಗಂಡನಿಗೆ ವಿಷಯ ತಿಳಿದು ನಾರಾಯಣನನ್ನು ಹುಡುಕಿಕೊಂಡು ಬಂದಿದ್ದ. ಕಂಡ್ರೆ ಸಿಗಿದುಹಾಕ್ತಿನಿ ಎಂದು ಗೇಟಿನ ಬಳಿ ಹಾರಾಡಿದ್ದ, ಒಳಗಿದ್ದರು ಅವನು ರಜದಲ್ಲಿದ್ದಾನೆ ಎಂದು ಕಂಪನಿಯ ವಾಚ್ ಮ್ಯಾನ್ ಸಮಾಧಾನ ಮಾಡಿ ಕಳಿಸಿದ್ದ. ಅದಾದ ಮೇಲೆ ಮೊದಲಿನಂತೆ ಅಲ್ಲದಿದ್ದರೂ ಆಗಾಗ್ಗೆ ಮಾತು ಮೆಸೇಜು ನಡಿಯುತಿತ್ತು. ಪೊಲೀಸ್ ಕಾಲ್ ಮಾಡಿರುವುದು ಕೂಡ ನೇತ್ರಾವತಿ ವಿಷಯಕ್ಕೆ ಎಂದು ಗೊತ್ತಾಯ್ತು, ಕೂಡಲೇ ಅವಳ ಜೊತೆ ಆಫೀಸಿನ ಕಾರಿಡಾರಿನಲ್ಲಿ ಮುತ್ತು ಕೊಡಿಸಿಕೊಂಡ, ಅವಳ ಜೊತೆ ಓಡಾಡಿದ, ಅವಳೇ ಕಳಿಸಿದ ಅರ್ಧ ಮತ್ತು ಪೂರ್ತ ಬೆತ್ತಲೆಯ ಫೋಟೋ, ವಿಡಿಯೊಗಳನೆಲ್ಲ ಡಿಲೀಟ್ ಮಾಡಿ, ಚಿನ್ನು ನೇತ್ರಾ1, ಚಿನ್ನುನೇತ್ರಾ2 ಎಂದು ಇದ್ದ ಎರಡು ನಂಬರುಗಳನ್ನು ಡಿಲೀಟ್ ಮಾಡಿದ. ಪೊಲೀಸ್ ಸ್ಟೇಷನ್ ಗೆ ಬಂದಾಗ ಯಾರನ್ನ ವಿಚಾರಿಸೋದು ಗೊತ್ತಾಗದೆ, ಬಾಗಿಲಲ್ಲೇ ಕೋವಿ ಹಿಡಿದು ಕೂತಿದ್ದ ಪೇದೆಯೊಬ್ಬನಿಗೆ ಕೇಳಿದ “ಸರ್ ಫೋನ್ ಬಂದಿತ್ತು ಸ್ಟೇಷನ್ ಗೆ ಬರೋಕ್ಕೆ ಯಾರನ್ನ ಮೀಟ್ ಮಾಡ್ಬೇಕು” ಎಂದು ಕೇಳಿದ, ಬಾಯಿ ತೆರೆಯದೆ ಕೈಯಲ್ಲೇ ಹಂಗೆ ಒಳಕ್ಕೆ ಹೋಗು ಎನ್ನುವಂತೆ ಸನ್ನೆ ಮಾಡಿದ, ಅವನು ಕೈ ತೋರಿದ ಜಾಗದ ದಿಕ್ಕು ಹಿಡಿದು ಒಳಗೆ ಹೋದ, ಒಳಗೆ ಮತ್ತಷ್ಟು ಗೊಂದಲವಾಯ್ತು, ಅಲ್ಲಿ ಖಾಕಿ ಹಾಕಿದ ಎಷ್ಟೋ ಜನರಿದ್ದು ಒಬ್ಬೊಬ್ಬರು ಒಂದೊಂದು ಕೆಲಸ ಮಾಡುತ್ತಾ ಇದ್ದರು. ಒಳಗೆ ಸಣ್ಣ ಸೆಲ್ ಕೂಡ ಇತ್ತು, ಅದರಳೊಗೊಬ್ಬ ಕಂಬಿಗಳಿಗೆ ಮುಖವನ್ನ ಆತುಕೊಂಡು ಇವನನ್ನೇ ನೋಡುತ್ತಿದ್ದ, ಸೆಲ್ ಗೋಡೆಗೆ ನಿಂತು ಇಬ್ಬರು ಬಾಲ ಅಪರಾಧಿಗಳು ನಿಂತಿದ್ದರು, ಅವರ ಕಾಲುಗಳನ್ನು ಚೈನ್ ಇಂದ ಕಟ್ಟಿ ಹಾಕಿದ್ದರು. ಅಲ್ಲಿಗೆ ಬಂದ ಖಾಕಿಯೊಬ್ಬ ಆ ಬಾಲಾಪರಾಧಿಗಳಿಗೆ ಕವರಿನಲ್ಲಿ ತಿಂಡಿ ಕೊಟ್ಟು, “ಇಲ್ಲೇ ಕೂತ್ಕೊಂಡು ತಿನ್ರೋ” ಎಂದು ಹೋದ. ನಾರಾಯಣ ಅಲ್ಲೇ ಪಕ್ಕದಲ್ಲಿ ಕಂಪ್ಯೂಟರ್ ಒತ್ತುತ್ತಿದ್ದ ಖಾಕಿಯೊಬ್ಬನನ್ನು “ಸರ್” ಎಂದು ಕರೆದ, ಅವನು ಇವನೆಡೆಗೆ ತಿರಸ್ಕೃತ ಲುಕ್ ಕೊಟ್ಟು ಏನು ಎಂದು ಕಣ್ಣಲ್ಲೇ ಕೇಳಿದ, ಅವನು ಕಾಲ್ ಬಂದಿತ್ತು ಸ್ಟೇಷನ್ ಗೆ ಬರೋಕ್ಕೆ ಅಂದ, ಲುಕ್ ಕೊಟ್ಟ ಖಾಕಿಯವ ಮತ್ತೆ ಕಣ್ಣ ಸನ್ನೆಯಲ್ಲೇ ಪಕ್ಕದ ರೂಮ್ ತೋರಿಸಿದ, ನಾರಾಯಣ ಅವನ ಕಣ್ಣು ತೋರಿಸಿದ ದಿಕ್ಕಿಗೆ ಹೋಗಿ ಮುಚ್ಚಿದ ಬಾಗಿಲು ನೂಕಿದ, ನೂಕಿದೊಡನೆ ಒಳಗಿದ್ದ ಎಂಟು ಕಣ್ಣುಗಳು, ನಾಲ್ಕು ಕತ್ತುಗಳು ಬಾಗಿಲಿನತ್ತ ತಿರುಗಿ ಇವನನ್ನೇ ನೋಡಿದವು. ಮುಖ್ಯ ಪೊಲೀಸ್ ಒಬ್ಬರು ಚೇರಿಗೆ ಒರಗಿದ್ದರು, ಅವರ ಮುಂದೆ ಕುಳಿತ ಇಬ್ಬರು ಬಿಳಿ ಬಟ್ಟೆ ಧರಿಸಿದ್ದರು, ಸ್ವಲ್ಪ ಬಾಗಿ ಕೂತಿದ್ದರು, ಅವರ ಬಲಕ್ಕೊಬ್ಬ ಖಾಕಿಯವ ಒಂದು ಕೈಯಲ್ಲಿ ಒಂದಷ್ಟು ಫೈಲ್ಸ್ ಎದೆಗಪ್ಪಿಕೊಂಡು, ಇನ್ನೊಂದು ಕೈಯನ್ನು ಬೆನ್ನ ಹಿಂದೆ ಮಡಚಿ ನಿಂತಿದ್ದ, ಅಷ್ಟು ಜನ ಇವನನ್ನ ನೋಡಿದರು, ಮುಖ್ಯ ಪೊಲೀಸ್ ಇವನನ್ನು ನೋಡಿ “ಏ ಕಾಮನ್ ಸೆನ್ಸ್ ಇಲ್ವೇನೋ, ಹೊರಗಡೆ ವೇಟ್ ಮಾಡು” ಅಂದ. ನಾರಾಯಣ ಗಾಬರಿಯಿಂದ ಸಾರಿ ಸರ್ ಎಂದು ಹೊರಗೆ ಬಂದು ನಿಂತ, ಅವನು ಹೊರಗೆ ಬಂದದ್ದು ನೋಡಿ ಒಳಗೆ ಸಬ್ ಇನ್ಸ್ಪೆಕ್ಟರ್ ಗುಡುಗಿದ್ದು ಕೇಳಿ, ಆವಾಗಲೇ ಕಣ್ಣಲ್ಲೇ ದಾರಿ ತೋರಿದ ಖಾಕಿಯವ “ಹೇ ಒಂದತ್ತು ನಿಮಿಷ ಕಾಯಕ್ಕೆ ಆಗೋಲ್ವೇನೋ ನಿಂಗೆ” ಎಂದು ಎದ್ದು ಹೋದರು. ಇಪ್ಪತ್ತೈದು ನಿಮಿಷಗಳ ನಂತರ ಒಳಗೆ ಕೂತಿದ್ದ ಇಬ್ಬರು ಬಿಳಿ ವಸ್ತ್ರಧಾರಿಗಳು ಹೊರಗೆ ಬಂದರು, ಇವನು ಬಾಗಿಲು ತೆರೆದು ಒಳಗೆ ಹೋಗಿ ನಿಂತ.

“ಏನೋ ನಿಂದು”

“ಸಾರ್ ಕಾಲ್ ಬಂದಿತ್ತು ಇವತ್ತೇ ಬನ್ನಿ ಅಂತ”

“ಕಾಲ್ ಬಂದಿತ್ತು ಅಂದ್ರೆ ಏನು ? ನೀನೇನ್ ಪಿ ಎಂ ಆ? ಹೆಸರಿಲ್ವಾ ನಿಂಗೆ”

“ಸರ್ ನಾರಾಯಣ ಮೂರ್ತಿ”

“ರೀ ನಾರಾಯಣ ಹೆಸರಲ್ಲಿ ಏನಾದ್ರೂ ಕೇಸ್ ಇದೆ ಏನ್ರಿ” ಎಂದು ಪಕ್ಕ ಕೈ ನಿಂತ ಪೇದೆಗೆ ಕೇಳಿದರು 

“ಅದೇ ಸರ್ ಆ ಸೂಸೈಡ್ ಕೇಸ್, ಅವರ ಗಂಡ ಬಂದು ಕಿರುಚಾಡ್ತಿದ್ದ ಸ್ಟೇಷನ್ ಲಿ ಅವನ ಹೆಂಡತಿ ನೇತ್ರ…”

“ಓ ಅದಾ, ಏ ಏನೋ ನಿಂಗೆ ಆ ನೇತ್ರ ಜೊತೆ”

“ಸರ್ …ಸರ್”

“ಮುಂದಿಕೆ ಹೇಳೋಲೆ, ರೀ ಒಳಗೆ ಹೋಗಿ ಆ ಲಾಠಿ ತಗೊಂಡ್ ಬನ್ರೀ”

“ಸರ್ ಏನಿಲ್ಲ ನಂಗೆ ಪರಿಚಯ ಅಷ್ಟೇ”

“ಪರಿಚಯ ಅಷ್ಟೇ ನ ..ಬರಿ ಪರಿಚಯ ಆದ್ರೆ ಯಾಕೆ ಅವ್ಳ ಜೊತೆ ಅಷ್ಟು ಕ್ಲೋಸ್ ಇದ್ದೆ”

“…..”

“ಏನ್ ಮಿಷನ್ ಬಿಟ್ಟಿದ್ದೀಯ ಅವಳಿಗೆ”

“ಸರ್..”

“ನೋಡು ನನಗೆ ಸಿಟ್ಟು ಬರಿಸಬೇಡ ಮುಚ್ಕೊಂಡ್ ಅದು ಏನ್ ನಿನ್ನ ಅವಳ ಸಂಬಂಧ ಹೇಳು ಇಲ್ಲ ಒದ್ದು ಒಳಗೆ ಹಾಕ್ತಿನಿ ರಾಸ್ಕಲ್ ತಂದು”

“ಸರ್ ಆಫೀಸಲ್ಲಿ ಪರಿಚಯ..ಹಂಗೆ ಒಸಿ ಕ್ಲೋಸ್ ಅಷ್ಟೇ ..ಅವರ ಗಂಡ ಬಂದು ಬೈಯ್ದ ಮೇಲೆ ಬಿಟ್ಟಿದ್ದೆ ಸರ್”

“ಮತ್ತೆ ಅವಳಿಗೆ ಯಾವುದೋ ಸಿಮ್ ಬೇರೆ ಕೊಡ್ಸಿದ್ದೀಯ ..ಏನ್ ವಿಡಿಯೋ ಕಾಲ್ ,ಫೋನ್ ಸೆಕ್ಸ್ ಆ ಬೋಳಿಮಗನೇ”

“ಸರ್ ಇಲ್ಲ ಅವರ ಸಿಮ್ ಪ್ರಾಬ್ಲಮ್ ಅಂದ್ರು ..ಅದುಕ್ಕೆ”

“ದಿನಕ್ಕೆ ಮೂವತ್ತು ಸಲ ಕಾಲ್ ಮಾಡಿದ್ದಿಯ ಡವ್ ಮಾಡ್ತಿಯಾ ..ರೀ ಶಿವಯ್ಯ ಆ ಕಾಲ್ ಸ್ಟೇಟ್ಮೆಂಟ್ ಕೊಡ್ರಿ ಸ್ವಲ್ಪ” ಶಿವಯ್ಯ ಫೈಲ್ ಲಿ ಹುಡುಕಿ ಕೊಟ್ಟರು 

“ಮೂವತ್ತು ಅಲ್ಲ ನಲವತ್ತೆರಡು ಸಲ..ಮದ್ವೆ ಆಗಿ ಹೆಣ್ ಮಗ ಇರೋ ಹುಡುಗಿ ಜೊತೆ ಏನೋ ನಿಂದು ಚಕ್ಕಂದ..”

ನಲವತ್ತೆರಡು ಅಂದಿದ್ ತಕ್ಷಣ ನಾರಾಯಣಗೆ ಕನ್ಫ್ಯೂಸ್ ಆಯ್ತು. ಅಬ್ಬಬ್ಬಾ ಅಂದ್ರೆ ಮೂಡು ಬಂದ ರಾತ್ರಿ ಹೊತ್ತು ಮೂರು ನಾಲ್ಕು ಬಾರಿ ಮಾಡಿರಬಹುದು, ಇವರೇನು ನಲವತ್ತು ಅಂತಾರಲ್ಲ ಅಂತ ಅನುಮಾನ ಬಂದು 

“ಸರ್ ಮ್ಯಾಕ್ಸಿಮಮ್ ನಾಲ್ಕು ಸಲ ಅಷ್ಟೇ ಕಾಲ್ ಮಾಡ್ತಾ ಇದ್ದಿದ್ದು”

“ನಾಲ್ಕ್ ಸಲ ಅಷ್ಟೇನಾ ..ಇಲ್ಲಿ ನೋಡೋ ರಾಸ್ಕಲ್ ನಲವತ್ತೆರಡು ಸಲ” ಅಂತ ಹೈಲೈಟ್ ಮಾಡಿದ ಫೋನ್ ನಂಬರ್ ತೋರಿಸಿದ ..ನಾರಾಯಣ ಹತ್ತಿರದಿಂದ ನೋಡಿ 

“ಸರ್ ಅದು ನನ್ ನಂಬರಲ್ಲ”

“ನಿನ್ ನಂಬರ್ ಅಲ್ವ… ನಾರಾಯಣಮೂರ್ತಿ ಅಂತ ಹೆಸರು ಇಲ್ವಾ ಇಲ್ಲಿ ..ಏನ್ ನಿಮ್ಮಪ್ಪನ ಹೆಸರ ?”

“ಸರ್ ನಾನು ಬಿ. ನಾರಾಯಣ ಮೂರ್ತಿ ಅಂತ, ಅಪ್ಪನ ಹೆಸರು ಬೋರೆಲಿಂಗ ಸರ್ “

“ಮತ್ತೆ ಇದು ಯಾರು ನಾರಾಯಣಮೂರ್ತಿ?” ಎಂದು ನಾರಾಯಣ ಕಡೆ, ಶಿವಯ್ಯ ಕಡೆ, ಸಾಹೇಬರು ನೋಡಿದರು 

“ಸರ್ ಅವನು ನಮ್ ಬ್ಯಾಚೊನೆ, ಅವನು ಕೆ.ನಾರಾಯಣಮೂರ್ತಿ, ನಾನ್ ಬಿ.ನಾರಾಯಣ ಮೂರ್ತಿ, ಹೆಸರು ಕನ್ಫ್ಯೂಸ್ ಆಗುತ್ತೆ ಅಂತ ಆಫೀಸಲ್ಲಿ ಬೆಳ್ಳಗಿದ್ದ ನನ್ನ ಬಿಳಿ ನಾರಾಯಣ ಅಂತ ಕರ್ರಗಿದ್ದ ಅವನನ್ನ ಕರಿ ನಾರಾಯಣ ಅಂತ ಕರೀತಾರೆ” 

ಆ ಗಂಭೀರ ಸ್ಥಿತಿಯಲ್ಲೂ ಸಾಹೇಬರಿಗೆ ನಗು ಬಂದು 

“ನೀನು ಬೆಳ್ಳಗಿದ್ದು ಬಚಾವ್ ಆದೆ, ಆ ಕರಿ ನಾರಾಯಣದು ಬೇರೆ ಯಾವುದಾದರು ನಂಬರ್ ಇದ್ರೆ ಕೊಡು, ಮತ್ತೆ ಈ ಕೇಸ್ ಕ್ಲೋಸ್ ಆಗುವರೆಗೂ ಕರೆದಾಗಲೆಲ್ಲ ಪೊಲೀಸ್ ಸ್ಟೇಷನ್ ಗೆ ಬರ್ತಾ ಇರ್ಬೇಕು, ಫೋನ್ ಸ್ವಿಚ್ ಆಫ್ ಮಾಡೋದು, ರಿಸೀವ್ ಮಾಡದೆ ಇರೋದು ಮಾಡುದ್ರೆ ಒದ್ದು ಎಳ್ಕೊಂಡ್ ಬಂದು ಸೆಲ್ ಗೆ ಹಾಕ್ತಿನಿ ಹುಷಾರ್ ..ಸರಿ ಹೊರಡು” ಎಂದರು, “ರೀ ಶಿವಯ್ಯ ಆ ಕರಿ ನಾರಾಯಣಮೂರ್ತಿನ ಟ್ರೇಸ್ ಮಾಡ್ರಿ ಇವನು ಕೊಡೋ ನಂಬರ್ ಇಟ್ಕೊಂಡು” ಎಂದು ಎದ್ದರು 

ನಾರಾಯಣ ಬದುಕ್ತು ಜೀವ ಅಂದು ಹೊರಗೆ ಬಂದು, ಶಿವಯ್ಯಗೆ ಕರಿ ನಾರಾಯಣನ ನಂಬರ್ ಕೊಟ್ಟು, ಅಲ್ಲಿಂದ ಕಾಲ್ಕಿತ್ತ. 

ಅಸಲು ಆದದ್ದು ಇಷ್ಟು, ನೇತ್ರಾವತಿಗೆ ಕಂಪನಿಯ ಪ್ರತಿ ಜೊಲ್ಲು ಗಂಡುನಾಯಿಗಳ ಪರಿಚಯವಿತ್ತು. ಏಕಕಾಲಕ್ಕೆ ಎಲ್ಲ ನಾಯಿಗಳಿಗೂ ಬಿಸ್ಕೆಟ್ ಬ್ರೆಡ್ ಹಾಕಿ ಸಮಯ ಬಂದಾಗ ಯಾರ ಜೊತೆ ಆದರೂ ಸೆಟಲ್ ಆಗಿಬಿಡುವ ಆಲೋಚನೆಯಿತ್ತು ಅನಿಸುತ್ತೆ. ಅಲ್ಲಿದ್ದ ಮಬ್ಬು ಹುಡುಗನೊಬ್ಬ ಅವಳಿಗೆ ಟ್ರೈ ಮಾಡಿದ್ದ, ಸುಧೀರ ಅಂತ, ತುಂಬಾ ಒಳ್ಳೆ ಹೆಸರು ಇತ್ತು. ಜೊತೆಗೆ ಒಳ್ಳೆ ಕೆಲಸಗಾರ, ಯಾವಾಗ ಮಿಕ ಒಳ್ಳೆ ಆಸಾಮಿ ಎಂದು ಗೊತ್ತಾಯಿತೋ ಅವನಿಗೆ ಪ್ರೀತಿಯ ಮಂಕು ಎರಚಿ ಅವನನ್ನು ಸಂಪೂರ್ಣ ಬಲೆಗೆ ಹಾಕಿಕೊಂಡಿದ್ದಳು. ಅವನು ಕೂಡ ಮದುವೆ ಆಗಲು ರೊಚ್ಚಿಗೆದ್ದಿದ್ದ, ಆ ವಿಷಯ ಗಂಡನಿಗೆ ತಿಳಿದು, ಗಂಡ ಕಂಪನಿಗೆ ಬಂದಾಗ ಸಿಕ್ಕಿ ಹಾಕಿಕೊಂಡಿದ್ದ, ಮೊದಲೇ ಕುಡಿದು ಬಂದಿದ್ದ ಅವನು ಕಂಪನಿಯ ಮುಂದೆಯೇ ಸುಧೀರನಿಗೆ ಹಿಗ್ಗಾ ಮುಗ್ಗ ಇಕ್ಕಿದ್ದ. ಅದರ ಮಾರನೇ ದಿನ ಕ್ವಾಟರ್ಸ್ ನಲ್ಲಿದ್ದ ಅವನು ತಂಗಿದ್ದ ರೂಮಿನ ಟೆರೇಸಿನಿಂದ ಕೆಳಗೆ ಜಿಗಿದು ಸತ್ತಿದ್ದ. ಜೊತೆಗೆ ಸೂಸೈಡ್ ನೋಟ್ ಕೂಡ ಬರೆದಿದ್ದ. ಅದರಲ್ಲಿ ನೇತ್ರಾವತಿಯೇ ಕಾರಣ ಎಂದು ಬರೆದಿದ್ದ. ಯಾವಾಗ ನೇತ್ರಾವತಿ ಹೆಸರು ಬಂತೋ ಅವಳ ಜೊತೆ ಟಚ್ ಲಿ ಇದ್ದ ಹುಡುಗರೆಲ್ಲ ಹುಷಾರಾಗಿ ಇದ್ದ ಬದ್ದ ಲಗೇಜ್ ಜೊತೆ ಊರು ಬಿಟ್ಟರು, ಅದರಲ್ಲಿ ನಾರಾಯಣ ಕೂಡ ಒಬ್ಬ. ಕೆಲವರು ಪೊಲೀಸರಿಗೆ ಇರುವ ವಿಷಯ ಹೇಳಿ ಕೈ ಕಾಲು ಹಿಡಿದು, ದುಡ್ಡು ಕೊಟ್ಟು ಬಚಾವಾದರು, ಪೊಲೀಸರು ಸಿಕ್ಕ ಹುಡುಗರ ಕೈಲಿ ಅವಳ ಜೊತೆ ಲವ್ವಿ ಡವ್ವಿ ಮಾಡುತ್ತಿದ್ದ ಅಷ್ಟು ಹುಡುಗರ ನಂಬರ್ ತಗೊಂಡು ರುಬ್ಬತೊಡಗಿದರು, ಅದರಲ್ಲಿ ನಾರಾಯಣ ಒಬ್ಬ. ಪೊಲೀಸರಿಗೆ ಬಿಳಿ ಮತ್ತು ಕರಿ ನಾರಾಯಣ ಇದ್ದಾರೆ ಎಂಬ ಐಡಿಯಾ ಇರಲಿಲ್ಲ, ನೇತ್ರಾವತಿ ಜೊತೆ ಇಬ್ಬರು ನಾರಾಯಣರು ಲಲ್ಲೆ ಚಕ್ಕಂದ ನಡೆಸಿದ್ದರು, ಇಬ್ಬರು ಸಿಮ್ ಕಾರ್ಡ್ ಕೊಡಿಸಿದ್ದರು, ಅದೃಷ್ಟವಶಾತ್ ಪವಾಡ ರೀತಿಯಲ್ಲಿ ತನ್ನ ಕುತ್ತಿಗೆಗೆ ಬಿದ್ದ ಗಂಟನ್ನು ಬಿಳಿ ನಾರಾಯಣಮೂರ್ತಿ ಕರಿ ನಾರಾಯಣ ಮೂರ್ತಿ ಕೊರಳಿಗೆ ಹಾಕಿ ಬಚಾವಾದ.

ಆಮೇಲೆ ಏನಾಯ್ತು ಯಾರಿಗೂ ಗೊತ್ತಾಗಲಿಲ್ಲ, ಸಿಕ್ಕ ಹುಡುಗರನ್ನ ಒಂದು ರೌಂಡ್ ಪೊಲೀಸರು ರುಬ್ಬಿ ಕಳಿಸಿದ್ದರು, ನೇತ್ರಾವತಿಗೆ ಜೈಲು ಶಿಕ್ಷೆ ಆಯ್ತು ಎಂದು ಕೆಲವರ ಅಭಿಪ್ರಾಯ, ಇನ್ನು ಕೆಲವರ ಪ್ರಕಾರ ನೇತ್ರಾವತಿ ಪೊಲೀಸ್ ಸಬ್ ಇನ್ಸ್ಪೆಕ್ಟರನ್ನೇ ಬುಟ್ಟಿಗೆ ಹಾಕೊಂಡು ಕೇಸ್ ಇಂದ ಬಚಾವಾದಳು ಎಂದು, ಅವಳು ಊರು ಬಿಟ್ಟು ಹೋದಳೆಂದು ಇನ್ನು ಕೆಲವರು.

ಎಷ್ಟೋ ತಿಂಗಳಾದ ಮೇಲೆ ಡಿ ಅಕ್ಟಿವೇಟ್ ಆಗಿದ್ದ ನೇತ್ರಾವತಿಯ ಫೇಸ್ಬುಕ್ ಮತ್ತೆ ಆಕ್ಟಿವ್ ಆಗಿ ಕಾರಿನ ಪಕ್ಕ ನಿಂತು ಹೊಸ ಪ್ರೊಫೈಲ್ ಫೋಟೋ ಹಾಕಿದ್ದಳು, ಓ ಯಾವುದೋ ಗೂಡು ಪಾರ್ಟಿಯನ್ನೇ ಹಿಡಿದಿದ್ದಾಳೆ ಎಂದು ಮಾತಾಡಿಕೊಂಡರು, ಅಲ್ಲಿಗೆ ಆ ಕತೆ ಮುಗಿಯಿತು. 

ಆರು ತಿಂಗಳ ನಂತರ ಆಫೀಸಲ್ಲಿ ಕಿವಿಗೆ ಹೆಡ್ ಫೋನ್ ಸಿಗಿಸಿಕೊಂಡು ಹಾಡು ಕೇಳುತ್ತ ಫೇಸ್ ಬುಕ್ ವಾಟ್ಸಾಪಲ್ಲಿ ಮುಳುಗಿದ್ದ ಬಿ.ನಾರಾಯಣಮೂರ್ತಿಗೆ ಕಾಲ್ ಬರುತ್ತೆ, ಕೆಳಗೆ ಬಿ12 ಕ್ಯಾಬಿನ್ ನ ಏ.ಸಿ ವರ್ಕ್ ಆಗ್ತಿಲ್ಲ ಎಂದು, ಅವನು ಹಾಡು ಕೇಳುತ್ತಲೇ ಅಲ್ಲಿಗೆ ಹೋಗುತ್ತಾನೆ. ಅದು ನೇತ್ರಾವತಿ ಕೆಲಸ ಮಾಡುತಿದ್ದ ಜಾಗ, ಅದು ಕೂಡ ಅವನಿಗೆ ಮರೆತು ಹೋಗಿದೆ, ಆ ಜಾಗಕ್ಕೆ ಹೊಸ ಹುಡುಗಿ ಮೊನ್ನೆಯಷ್ಟೇ ಸೇರಿದ್ದಾಳೆ, ರಿಮೋಟ್ ಕೊಡಿ ಎಂದು ತೆಗೆದುಕೊಂಡು ಅದನ್ನ ಅಲ್ಲಾಡಿಸಿ ಸೆಲ್ ತೆಗೆದು ಉಫ್ ಎಂದು ಉಗಿದು ಮತ್ತೆ ಹಾಕಿ ಆನ್ ಮಾಡಿದಾಗ “ಏ.ಸಿ ಆನ್ ಆಯ್ತು, ತಗೊಳ್ಳಿ ಇವಾಗ ವರ್ಕ್ ಆಗ್ತಿದೆ” ಎಂದು ಕೊಟ್ಟ, ಹುಡುಗಿಯನ್ನ ನೋಡಿದ, ಮಜಭೂತಾಗಿದ್ದಳು, ಅವಳು ನಗುತ್ತ ಥ್ಯಾಂಕ್ಸ್ ಎಂದು ಹೇಳಿದಳು, ಅವನು “ಈ ಬೇಸಿಗೇಲಿ ನೀವು ಸೀರೆ ಹಾಕೊಂಡ್ ಬಂದ್ರೆ ಸೆಕೆನೇ ಮೇಡಂ, ಮಾಡರ್ನ ಡ್ರೆಸ್ ಹಾಕೊಳ್ಳಿ ಯಾರು ಏನು ಅನೊಲ್ಲ, ಆ ಐ ಟಿ ಡಿಪಾರ್ಟ್ಮೆಂಟ್ ಹೆಣ್ ಮಕ್ಳು ನೋಡಿ “ಎಂದು ನಕ್ಕ. ಅವಳು ನಗುತ್ತ “ಅಯ್ಯೋ ನಾನು ಅದೇ ಹಾಕೊಳ್ಳೋದು ಇವಾಗಷ್ಟೇ ಜಾಯ್ನ್ ಅಲ್ವ?”ಎಂದು ವಯ್ಯಾರದಲ್ಲಿ ನಕ್ಕಳು. “ಹೇ ಚಾನ್ಸ್ ಏ ಇಲ್ಲ ಬಿಡಿ ನೀವು ನೋಡುದ್ರೆ ಮಾಡ್ರನ್ ಡ್ರೆಸ್ ಹಾಕೊಳ್ಳೋಲ್ಲ ಅನ್ಸುತ್ತೆ” ಎಂದು ಕಿಚಾಯಿಸಿದ, ಅವಳು ಮೊಬೈಲ್ ತೆಗೆದು ತನ್ನ ಹಳೆಯ ಮಾಡ್ರನ್ ಡ್ರೆಸ್ ಹಾಕಿದ ಫೋಟೋ ತೋರಿಸತೊಡಗಿದಳು, ಅವನು ಎಲ್ಲವನ್ನು ನೋಡುತ್ತಾ ಮನಸಲ್ಲೇ ಹೊಸ ಸ್ಕೆಚ್ ಹಾಕತೊಡಗಿದ

‍ಲೇಖಕರು avadhi

March 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: