ಸತೀಶ್ ಹುಳಿಯಾರ್ ಅವರ ಕವನ ಸಂಕಲನ ‘ಯಾರೋ ಇರುವ ಭಾವನೆ’ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.
ಈ ಸಂಕಲನಕ್ಕೆ ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ಮಾತುಗಳು ಇಲ್ಲಿವೆ-
ಡಾ.ಎಚ್.ಎಸ್. ವೆಂಕಟೇಶಮೂರ್ತಿ
**
ಸತೀಶ್ ಹುಳಿಯಾರ್ ಬರೆದ ಕವಿತೆಗಳನ್ನು ಕುತೂಹಲದಿಂದ ಓದಿದೆ. ಅವರ ಶುದ್ಧ ಸಾತ್ವಿಕ ವ್ಯಕ್ತಿತ್ವದ ಅಭಿವ್ಯಕ್ತಿಯಾಗಿ ನನಗೆ ಅವರ ಕವಿತೆಗಳು ಕಂಡು ಬಂದವು. ತಮ್ಮ ತಾಯಿ, ತಂದೆ, ಪತ್ನಿ, ಮಗಳ ಬಗ್ಗೆ ಅವರ ತೀವ್ರವಾದ ಪ್ರೀತಿಯ ಭಾಷಾ ತುಣುಕುಗಳಾಗಿ ಅವರ ಕವಿತೆಗಳನ್ನು ನಾನು ಗ್ರಹಿಸಿದೆ. ಜೊತೆಗೆ ನಾಡು ನುಡಿಯ ಬಗ್ಗೆ ಅಷ್ಟೆ ಅಭಿಮಾನದಿಂದ ಹಚ್ಚಿಕೊಂಡು ಅವರು ಬರೆದಿದ್ದಾರೆ.
ಲೇಖಕ ಪ್ರಾಮಾಣಿಕನಾಗಿದ್ದಾಗ ಕಾವ್ಯರೂಪದಲ್ಲಿ ಅನುಭವವನ್ನು ಹರಿಬಿಡುವ ಕವಿತೆ ಕೂಡ ಸ್ವಾದಿಷ್ಟವಾಗಬಲ್ಲದು. ಅನುಭವ ಅಭಿವ್ಯಕ್ತಿಯ ಅಖಂಡತೆ ಸಾಧಿಸುವ ಬರವಣಿಗೆಯೊಂದಿಗೆ ಇದನ್ನು ಹೋಲಿಸುವಂತಿಲ್ಲ. ಇದನ್ನೊಂದು ಬಗೆಯ ಖಾಸಗಿ ಕಾವ್ಯವೆಂದು ಕರೆಯಬಹುದು. ಸತೀಶರ ಕವಿತೆಗಳು ಈ ಖಾಸಗಿ ಕಾವ್ಯ ಪ್ರಕಾರಕ್ಕೆ ಸೇರುವಂಥವು.
ಸಿದ್ಧ ಪಾತ್ರೆಯಲ್ಲಿ ಪಾಕವನ್ನು ತುಂಬಿಡುವ ಇಂಥ ರಚನೆಗಳಲ್ಲಿ ಅನೇಕ ಪ್ರಿಯವಾಗುವ ಕವಿತೆಗಳನ್ನೂ ಸತೀಶ್ ಬರೆದಿದ್ದಾರೆ. ಅಲ್ಲಿ ಸಾಕಷ್ಟು ಭಾವ ಸೂಕ್ಷ್ಮತೆಯೂ ಕಂಡು ಬರುತ್ತದೆ. ನಾನು ನಾನು ನಾನು, ನೀನು ಬಂದ ಮೇಲೆ ಉಷೆಯೊಂದು ಮೂಡಿತು, ಯಾರೋ ಇರುವ ಭಾವನೆ, ಅಮ್ಮನಿಲ್ಲದ ಮನೆ, ಗುಬ್ಬಚ್ಚಿ-ಇವು ಆಕರ್ಷಕ ರಚನೆಗಳು. ಅವುಗಳನ್ನು ಓದುವಾಗ ಅಲ್ಲಿ ಕಾಣುವ ಸರಳತೆ ಪ್ರಾಮಾಣಿಕತೆ ಭಾವಸ್ಪಂದನಕ್ಕೆ ನಾನು ಮರುಳಾಗಿದ್ದೇನೆ.
ಕವಿತೆ ತನ್ನ ಖಾಸಗಿ ಜಗತ್ತಿಂದ ಮುಕ್ತಗೊಂಡು ಸಾರ್ವತ್ರಿಕೆ ಸಾಧಿಸುವುದು ಕವಿ ಎದುರಿಸುವ ಬಹು ದೊಡ್ಡ ಸವಾಲು. ಮುಂದೆ ಸತೀಶ್ ಅಂಥ ಸವಾಲನ್ನು ತಮ್ಮ ಬರವಣಿಗೆಯಲ್ಲಿ ಎದುರಿಸುವರೇ ಕಾದು ನೋಡಬೇಕಾಗಿದೆ.
0 ಪ್ರತಿಕ್ರಿಯೆಗಳು