ಸಂಪು ಕಾಲಂ : ಬೆಂಗಳೂರಿನಲ್ಲಿ ಆತ ಕೇಳಿದ್ದು ’ಮೇಡಂ ಹಿಂದೀ ಮಾಲೂಮ್?’


ಆಫೀಸ್ ನಲ್ಲಿ ಮೊನ್ನೆ ಒಮ್ಮೆ ನಮ್ಮ ಪ್ಯಾಂಟ್ರೀಗೆ ಫೋನಾಯಿಸಿ, “ಭಯ್ಯಾ, ಚಾಯ್ ರೆಡಿ ಹೈ ಕ್ಯಾ” ಎಂದು ಅತ್ಯಂತ ಸ್ವಾಭಾವಿಕವಾಗಿ ಕೇಳಿಬಿಟ್ಟೆ. ಅದನ್ನು ಕೇಳಿದ ನನ್ನ ತಮಿಳು ಸಹೋದ್ಯೋಗಿಯೊಬ್ಬಳು “ನಿಮ್ಮಂಥವರೇ ಆ ಹಿಂದಿಯವರನ್ನು ತಲೆಯ ಮೇಲೆ ಕೂರಿಸಿಕೊಂಡಿರುವುದು” ಎಂದು ಬಿಟ್ಟಳು. ನನ್ನ ಭಾಷಾ ಪ್ರೇಮದ ಬಗ್ಗೆ ಅಪಾರ ನಂಬಿಕೆಯಿದ್ದ ನನಗೆ ಆಕೆಯ ಮಾತು ಎಷ್ಟು ಸತ್ಯ ಎಂಬುದು ಆ ಕ್ಷಣ ಅರ್ಥವಾಗಲಿಲ್ಲ. ಆ ಮಾತು ಕೇಳಿದ ತಕ್ಷಣ ಬದಲಾದ ನನ್ನ ಮುಖ ರೇಖೆಗಳನ್ನು ಗುರುತಿಸಿದ ಆಕೆ, ಹತ್ತಿರ ಬಂದು ಸಾಂತ್ವನ ರೂಪದಲ್ಲಿ ಕೆಲವು ಘಟನೆಗಳು, ಮಾತುಗಳನ್ನು ಹಂಚಿಕೊಂಡಳು. ಅವೆಲ್ಲದರಿಂದ ನನಗೆ ನನ್ನ ಮೇಲೆಯೇ ನಾಚಿಕೆ ಹೆಚ್ಚಾಯಿತೇ ಹೊರತು ಸಮಾಧಾನವಾಗಲಿಲ್ಲ.
ತಮಿಳುನಾಡಿನ ಜನ ಹೇಳಿ ಕೇಳಿ ತಮ್ಮ ಭಾಷೆಯ ಬಗೆಗೆ ಇನ್ನಿಲ್ಲದಷ್ಟು ಭಕ್ತಿ ಭಾವವನ್ನು, ಪ್ರೇಮವನ್ನು ಉಳಿಸಿ, ಬೆಳೆಸುತ್ತಿರುವವರು. ಮನೆಯ ಪಕ್ಕದ ಬೀದಿಯಲ್ಲಿ ಕಾಣುವ ದಾರಿಹೋಕ ಕುಡಿದು ಓಲಾಡುತ್ತಾ, “ನಾ ತಮಿಳ್ ಕಾರ” ಎಂದು ರಜನಿಕಾಂತ್ ಸ್ಟೈಲ್ ನಲ್ಲಿ ಮಾತನಾಡುವವನಿಂದ ಹಿಡಿದು ದೊಡ್ಡ ಜ್ಞಾನಿಗಳವರೆಗೂ ಇರುವ ಒಂದು ದೊಡ್ಡ ಕಾಮನ್ ಫ್ಯಾಕ್ಟರ್ ಎಂದರೆ ಅವರಲ್ಲಿನ ಭಾಷಾಪ್ರೇಮ. ಜಗತ್ತಿನ ಯಾವುದೇ ಮೂಲೆಯಲ್ಲೂ ಅವರನ್ನು ಬಲಗೊಳಿಸುವುದೇ ಅವರ ಈ ಭಾಷಾಂಧತೆ ಎನಿಸಿಬಿಡುವಷ್ಟು ಭಾಷೆಯ ಬಗೆಗಿನ ಒಲವು.
ಅಂತಹ ತಮಿಳು ಹುಡುಗಿಯೊಬ್ಬಳು ಹೇಳಿದ ಕೆಲ ಘಟನೆಗಳು ಹೀಗಿವೆ: ಆಕೆ ತಾನಾಗಿಯೇ ಕಷ್ಟ ಪಟ್ಟು ಕನ್ನಡ ಪದಗಳ ಕೂಡಿಸಿ, ಮುರುಕು ಧಾಟಿಯಲ್ಲೇ “ಗೇಟ್ ಎಷ್ಟು ಹೊತ್ತಿಗೆ ತೆಗೀತಾರೆ?” ಎಂದು ಕೇಳಿದರೆ, ಆ ಗೇಟ್ ಬಳಿ ಇದ್ದ ರಕ್ಷಕನು “ಹಿಂದಿ ಮಾಲೂಮ್ ಹೈ ಕ್ಯಾ ಮೇಡಂ?” ಎಂದು ಕೇಳಿಬಿಟ್ಟನಂತೆ. ಆಕೆಯ ಟೀಂನಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳು ಉತ್ತರ ಭಾರತದವಳು. ಆಕೆ ನಾರ್ತಿ ಎಂಬೊಂದೇ ಕಾರಣಕ್ಕೆ ಬಹಳ ಬೀಗುವವಳು. ಅವಳು ಬಹಳ ಅಧಿಕಾರಯುತವಾಗಿ “ಭಾರತದಲ್ಲಿ ಇರಲು, ಯು ಮಸ್ಟ್ ಲರ್ನ್ ಹಿಂದಿ” ಎಂದಳಂತೆ. ಆಕೆಯ ಮಗ ಶಾಲೆಯಲ್ಲಿ ಭಾಷಾ ಆಯ್ಕೆಗೆ ಕನ್ನಡ ಬೇಡ ಹಿಂದಿ ಬೇಕು ಎಂದು ಕೇಳಿದ್ದು, ಆತನ ಎಲ್ಲ ಸ್ನೇಹಿತರು ಹಿಂದಿ ಮಾತನಾಡುತ್ತಾರೆ ಎಂದು.
ಇವೆಲ್ಲ ಅನುಭವಗಳನ್ನು ಹೇಳುತ್ತಾ ಆಕೆ ಕೊಟ್ಟ ಖಾರದ ಪಂಚ್ ಎಂದರೆ, “ನೀವು ಕನ್ನಡದವರು ಮಾಡುವ ತಪ್ಪೇ ಇದು, ಇವರನ್ನೆಲ್ಲಾ ಪ್ರೋತ್ಸಾಹಿಸುತ್ತೀರಾ, ಅದಕ್ಕೇ ಬೆಂಗಳೂರಿನಲ್ಲಿ ಕನ್ನಡ ಇಲ್ಲದೆಯೂ ಸರಾಗವಾಗಿ ಬದುಕಬಹುದು. ನಿಮ್ಮಲ್ಲಿ ಭಾಷಾಭಿಮಾನ ಕಡಿಮೆ”! ಅವಳ ಈ ಮಾತು ಕೇಳಿದ ಕೂಡಲೇ, ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಎಂಬಂತೆ ಕನ್ನಡ ಭಾಷೆ, ಭಾಷಾಭಿಮಾನ, ಭಾಷೆಯ ಬೆಳವಣಿಗೆ ಎಂತೆಲ್ಲಾ ಮಾತಾಡೋ ನಾನು ಹಿಂದಿಯವರ ಬಳಿ, ಅವರು ಹಿಂದಿಯಲ್ಲಿ ಮಾತನಾಡಿದ ತಕ್ಷಣ ಥಟ್ ಅಂತ ಹಿಂದಿಯಲ್ಲೇ ಉತ್ತರ ಕೊಡುವುದು ನೆನಪಾಯಿತು.
ಬಟ್ಟೆ ಅಂಗಡಿಗೆ ಹೋಗಿ “ಇದೆಷ್ಟಪ್ಪಾ?” ಎಂದಾಗ ಆತ ಧಿಮಾಕಿನ ಧಾಟಿಯಲ್ಲಿ “ಮೇಡಂ ಹಿಂದಿ-ಇಂಗ್ಲಿಷ್” ಎಂದರೆ, ಎರಡನೇ ಯೋಚನೆ ಇಲ್ಲದೆ “ಯೆ ಕಿತನಾ ಹೈ?” ಎಂದು ನಾನೇ ಕೇಳಿದ್ದು ನನ್ನ ನೆನಪನ್ನು ರಾಚಿತು. ಹೆಜ್ಜೆ ಹೆಜ್ಜೆಗೂ ಹಿಂದಿ ಭಾಷೆಗೆ ನಾವೆಷ್ಟು ಒಗ್ಗಿರುವೆವು ಎಂಬುದರ ಅರಿವು ಮೂಡಿತು. ಈ ಮಾತನ್ನು ಹೇಳುವಾಗ ನಾನು ಹಿಂದಿ ಭಾಷೆಯ ವಿರೋಧಿಯಲ್ಲ ಎಂಬುದನ್ನು ಸ್ಪಷ್ಟಪಡಿಸ ಬಯಸುತ್ತೇನೆ. ಒಂದು ಭಾಷೆಯಾಗಿ ಹಿಂದಿ ಅತ್ಯಂತ ಪ್ರಿಯವಾದುದು ಮತ್ತು ಕಲಿಯಲೇ ಬೇಕಾದದ್ದು. ಆದರೆ, ಯಾವುದೇ ಭಾಷೆಯನ್ನು ನಾವು ಒಂದು ಭಾಷೆಯಾಗಿ ಅಷ್ಟೇ ಪ್ರೀತಿಸಬೇಕೆ ಹೊರತು ಅದರ ಬಗೆಗೆ ಒಂದು ರಾಜಕೀಯ ವ್ಯಾಮೋಹ ಬೆಳೆಸಿಕೊಂಡರೆ ಭಾಷೆ ಆಪ್ಯಾಯತೆ ಕಳೆದುಕೊಂದು ಒಂದು ಹೇರಿಕೆಯಾಗಿ ಮಾರ್ಪಾಡಾಗುತ್ತದೆ.
ಭಾಷೆಯೊಂದು ನಮ್ಮ ಸಂವಹನದ ನೇರ ಮೂಲ. ಆದ್ದರಿಂದ ಸಂಸ್ಕೃತಿ, ಸಂವೇದನೆಗಳು ನಮ್ಮಲ್ಲಿ ಟಿಸಿಲೊಡೆಯುವುದಕ್ಕೆ ಹೆಚ್ಚು ಕಡಿಮೆ ಒಂದು ಭಾಷೆ ಜವಾಬ್ದಾರಿ ಹೊರುತ್ತದೆ. “ನಮ್ಮ ಭಾಷೆ” ಎನ್ನುವವರ ಬಗ್ಗೆ “ಸಂಕುಚಿತ ಮನೋಭಾವದವರು” ಎಂಬ ಹಣೆಪಟ್ಟಿ ಹಚ್ಚುವ ಮುನ್ನ ನಾವು ಯೋಚಿಸಬೇಕಾದ್ದು, ನಮ್ಮನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವುದು, ಬಲಪಡಿಸುವುದು, ನಮ್ಮಲ್ಲಿ ಒಂದು ಸಾಮಾಜಿಕ ಶಕ್ತಿ ತುಂಬುವುದು ಒಂದು ಭಾಷೆಯೇ ಆಗಿದೆ. ಇದಕ್ಕೆ ಸಾಮಾಜಿಕ, ರಾಜಕೀಯ ಮತ್ತಿತ್ತ್ಯಾದಿ ಎಲ್ಲ ರಂಗಗಳಲ್ಲಿ ಬಹಳ ಪವರ್ಫುಲ್ ಆಗಿರುವ ನಮ್ಮ ಸೋದರ ರಾಜ್ಯಗಳೇ ಉದಾಹರಣೆ.
ಇಂದು ನಮ್ಮ ಬೆಂಗಳೂರಿನಲ್ಲಿ ಕನ್ನಡವಿಲ್ಲದೆ ನಾವು ಬದುಕಲು ಸಾಧ್ಯ ಮತ್ತು ಒಂದು ಹೆಸರಾಂತ ಶಾಲೆ ಪ್ರಾಥಮಿಕ ಹಂತದಲ್ಲೇ (ಕನ್ನಡವಿಲ್ಲದಿದ್ದರೂ) ಹಿಂದಿ (ಶಾಲೆಗೆ ಸೇರುವ ಮೊದಲೇ ಇರಬೇಕಾದ) ಜ್ಞಾನದ ಬಗ್ಗೆ ಕರಾರು ಮಾಡುವ ಜರೂರು ನಮ್ಮಲ್ಲಿ ಒಪ್ಪಿಗೆಯಾಗಿ ಹೋಗಿ, ಈ ನಿಟ್ಟಿನಲ್ಲಿ ಚಕಾರ ಎತ್ತಿದರೆ ನಾವೇ “ನ್ಯಾರೋ ಮೈಂಡೆಡ್ ಫೂಲ್ಸ್” ಆಗಿ ಕಂಡು ಬರುವ ಪರಿಸ್ಥಿತಿ ಎದುರಾಗಿದೆ. ಇದು ಇಂದಿನ ನಗ್ನ ಸತ್ಯ ಮತ್ತು ಮುಂದೆ ಕಾಣಬಹುದಾದ ಕರಾಳ ಸೋಲಿನ ಸಂಕೇತ.

ತ್ರಿಭಾಷಾ ಸೂತ್ರದಲ್ಲಿ ಇರುವ ತಪ್ಪಾದರೂ ಏನು? ಹಿಂದಿ ನಮ್ಮ ರಾಷ್ಟ್ರಭಾಷೆ, ಕಲಿತಲ್ಲಿ ತಪ್ಪೇನು? ಸಂವಹನಕ್ಕೆ ಯಾವ ಭಾಷೆ ಆದರೇನು? ಎಂದೆಲ್ಲಾ ವಿತ್ತಂಡವಾದ ಮಾಡುವ ಭೂಪರಿಗೆ ಕೆಲ ಮಾಹಿತಿ:
ಮೊದಲಿಗೆ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. 1920 ರಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ದಕ್ಷಿಣ ಭಾರತದ ಜನರನ್ನು ತಲುಪಲು, ಹಿಂದಿ ಭಾಷೆಯಲ್ಲಿ ನಡೆಯುತ್ತಿದ್ದ ಎಲ್ಲಾ ಚರ್ಚೆಗಳೂ, ಮಂಡನೆಗಳೂ ದಕ್ಷಿಣ ಭಾರತದವರನ್ನೂ ತಲುಪಬೇಕು ಎಂಬ ಸದುದ್ದೇಶದಿಂದ ಮಹಾತ್ಮಾ ಗಾಂಧೀಜಿಯವರು “ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ” ಎಂಬ ಸಮಿತಿ ರಚಿಸಿದರು. ಸಂವಹನ ಮಾಧ್ಯಮಗಳು ಕಡಿಮೆಯಿದ್ದ ಆ ಸಂದರ್ಭದಲ್ಲಿ ಹಿಂದೀ ಭಾಷೆ ಹೆಚ್ಚು ಜನರನ್ನು ತಲುಪುತ್ತದೆ ಎಂಬ ನಂಬಿಕೆ ಇತ್ತು. ಆದರೆ ಇದು ಸಲ್ಲ ಎಂದು ತಮಿಳು ನಾಡಿನ ಪೆರಿಯಾರ್ ಮುಂತಾದ ಎಷ್ಟೋ ಮಂದಿ ವಿರೋಧಿಸಿ ಹಿಂದೀ ನಮಗೆ ಅನವಶ್ಯಕ ಎಂದು ಉಲಿದರು. ಈ ಹಿಂದೀ ವಿರೋಧೀ ಚಳುವಳಿ ಸಾಕಷ್ಟು ನಡೆದು ತಮಿಳು ನಾಡು ಹಿಂದೀ ಕಲಿಕೆಯಿಂದ ಹೊರತಾಯಿತು.
ಪ್ರತೀ ದೇಶಕ್ಕೆ ಒಂದು ಪ್ರಮುಖ ಭಾಷೆ ಇರುತ್ತದೆ. ನಮ್ಮಲ್ಲಿ ಹಿಂದೀ ಭಾಷೆ ಶೇಕಡಾ 41ರಷ್ಟು ಇರುವುದರಿಂದ ಅದನ್ನೇ ರಾಷ್ಟ್ರ ಭಾಷೆಯಾಗಿಸಬೇಕು ಎಂಬ ಸಾಕಷ್ಟು ಚರ್ಚೆಗಳು ಮುಂದಾದವು. ಆದರೆ, ನಿಖರ ಅಂಕಿ ಅಂಶಗಳ ಪ್ರಕಾರ ಮೂಲ ಹಿಂದೀ ಭಾಷೆ ಶೇಕಡಾ 25 ರಷ್ಟೇ ಆಗಿದ್ದು, ಭಾರತದಲ್ಲಿ ಇನ್ನೂ ಸಾಕಷ್ಟು ಭಾಷೆಗಳಿದ್ದು, ಬಹುಭಾಷಾ ರಾಷ್ಟ್ರವಾದದ್ದರಿಂದ ಬರೀ ಕೇಂದ್ರದ ಆಡಳಿತ ಭಾಷೆಯನ್ನಾಗಿ ಮಾತ್ರ ಹಿಂದಿಯನ್ನು ಆಯ್ಕೆ ಮಾಡಿದರು. ಮತ್ತು ರಾಜ್ಯದ ಎಲ್ಲ ಭಾಗಗಲ್ಲಿ ತಂತಮ್ಮ ಪ್ರಾದೇಶಿಕ ಭಾಷೆಯೇ ಇರಬೇಕೆಂದು ಅದರ ಜೊತೆಗೆ ಇಂಗ್ಲಿಷ್ ಒಂದಷ್ಟು ಕಾಲ (ಆದರೆ “ಒಂದಷ್ಟು ಕಾಲ” ಎಂದರೆ “ಎಂದೆಂದಿಗೂ” ಎಂಬ ಹೊಸ ಅರ್ಥ ಪಡೆದುಕೊಂಡು ಬಿಟ್ಟಿರುವುದು ಬೇರೆ ವಿಷಯ!) ಚಾಲ್ತಿಯಲ್ಲಿರಲಿ ಎಂದು ನಿಬಂಧನೆಗಳನ್ನು ಖಚಿತ ಪಡಿಸಿದ್ದರು. ಆದರೆ, ಇದು ಬರೀ ಕಾಗದ ಪತ್ರಗಳಲ್ಲಿ ನಿಜವಾಗಿ, ಪ್ರಾಯೋಗಿಕವಾಗಿ ಹುಸಿಯಾಯಿತು.
ಹಿಂದೀ ಇಂದು ಎಲ್ಲೆಡೆ ತನ್ನ ಮನ್ನಣೆ (ಒಂದು ಹೆಜ್ಜೆ ಹೆಚ್ಚಾಗಿಯೇ) ಪಡೆದುಬಿಟ್ಟಿದೆ. ದೇವನಾಗರೀ ಭಾಷೆಗೆ ಹತ್ತಿರವಾದ ಹಿಂದೀ, ಸಂಸ್ಕೃತ ಭಾಷೆಗಳನ್ನು ದೈವಿಕವಾಗಿಯೇ ನೋಡುವ ಪರಿ ಇಂದಿಗೂ ಪ್ರಸ್ತುತವಾಗಿದೆ. ಇದರಿಂದ ಕನ್ನಡಿಗರಿಗೆ ಜರುಗುತ್ತಿರುವ ನಷ್ಟವಾದರೂ ಏನು ಎಂಬ ಪ್ರಶ್ನೆಗೆ ಸುಲಭ ಉತ್ತರ, ಕಡೆಗಣಿಕೆ. ನಮ್ಮಲ್ಲಿ ಹಿಂದೀ ಭಾಷೆ ಹಂತ ಹಂತವಾಗಿ ಹೇಗೆ ಪಸರಿಸುತ್ತಿದೆ ಎಂದರೆ, ಇಂದು ನಮಗೆ ಕನ್ನಡವೇ ಬೇಡ. ಪ್ರತಿ ಗಲ್ಲಿ, ಪ್ರತಿ ಕ್ಷೇತ್ರ, ಪ್ರತಿ ಸಾಮಾಜಿಕ ಬೆಳವಣಿಗೆಯ ಮೈಲಿಗಲ್ಲುಗಳಲ್ಲಿ ಹಿಂದೀ ತನ್ನ ಹೆಡೆಯೆತ್ತಿದೆ. ನಗರದ ಚಿಕ್ಕಪೇಟೆ, ಜೆ.ಸಿ ರಸ್ತೆಗಳಲ್ಲಿ ಒಂದು ಸುತ್ತು ಹಾಕಿದರೆ, ಹಿಂದೀ ಕಲಿಕೆಯ ಪ್ರಾಮುಖ್ಯತೆ ನಮ್ಮ ಅರಿವಿಗೆ ಬರುತ್ತದೆ. ಒಬ್ಬ ನೆರೆ ರಾಜ್ಯದ ವ್ಯಕ್ತಿಗೆ ನಮ್ಮ ನಾಡಿನಲ್ಲಿ ಕನ್ನಡ ಕಲಿತರೂ, ಹಿಂದಿ ಬಾರದಿದ್ದ ಕಾರಣಕ್ಕೆ ಬದುಕು ದುಸ್ತರವಾಗುತ್ತಿದೆ ಎಂಬ ಪ್ರಾಕ್ಟಿಕಲ್ ದುರಂತಕ್ಕಿಂತ ಹೆಚ್ಚಿನ ಉದಾಹರಣೆಯ ಅವಶ್ಯಕತೆ ಇಲ್ಲ ಎಂದೆನಿಸುತ್ತದೆ.
ಈ ಹಿಂದೀ ಹೇರಿಕೆ ನಮ್ಮ ನಾಡನ್ನಷ್ಟೇ ಅಲ್ಲದೆ ಇಡೀ ದ್ರಾವಿಡ ಸಮುದಾಯವನ್ನೇ ಹೇಗೆ ಆಕ್ರಮಿಸಿದೆ ಮತ್ತು ಅದರ ಸಾಧ್ಯತೆ ಹೇಗಾಯಿತು ಎಂಬ ಸೂಕ್ಷ್ಮ ಗ್ರಹಿಕೆಗಳನ್ನು ಹೀಗೊಬ್ಬರು (ಹೆಸರು ಮರೆತಿದ್ದೇನೆ) ತಮ್ಮ ಒಂದು ಲೇಖನದಲ್ಲಿ ಇಂಟೆರೆಸ್ಟಿಂಗ್ ಆಗಿ ಉಲ್ಲೇಖಿಸಿದ್ದರು. ಅವರ ಪ್ರಕಾರ ನಾವು ದ್ರಾವಿಡರು ನಮ್ಮ ದೌರ್ಬಲ್ಯಗಳಿಂದಲೇ ಹಿಂದೀ ಪ್ರಭಾವಳಿಗೆ ಒಳಗಾಗಿದ್ದೇವೆ ಎಂದು. ಹಿಂದಿ ಭಾಷೆ ಒಂದು ಅನಿವಾರ್ಯವಲ್ಲದಿದ್ದರೂ ಕಲಿಯಬೇಕಾದ ಭಾಷೆ. ದ್ರಾವಿಡರಲ್ಲಿ ಪ್ರಮುಖರಾದ ಕನ್ನಡಿಗರು ಮತ್ತು ತಮಿಳರು ತಮ್ಮದೇ ಆದ ರೀತಿಯಲ್ಲಿ ಹಿಂದೀ ಭಾಷೆಗೆ ಪ್ರೇಮ ಮತ್ತು ದ್ವೇಷದ ರಾಗಗಳನ್ನು ಸಮೀಕರಿಸಿ ಬಿಟ್ಟಿದ್ದೇವೆ. ಇವೆರಡೂ ಸರಿಯಲ್ಲದ್ದು. ನಾವು ಕನ್ನಡಿಗರು ಹಿಂದೀ ಭಾಷೆಯನ್ನು ತುಂಬಾ ಧಾರಾಳವಾಗಿ ಸ್ವಾಗತಿಸಿಕೊಂಡು ಬಿಟ್ಟಿದ್ದೇವೆ. ಮತ್ತು ತಮಿಳಿಗರು ಹಿಂದೀ ಭಾಷೆಗೆ ಸುತರಾಂ ಬಾಗಿಲು ತೆರೆಯದೆ ಹೊರದೂಡಿಬಿಟ್ಟಿದ್ದಾರೆ. ಯಾವುದೇ ಒಂದು ವಿಚಾರವನ್ನು ವಿರೋಧಿಸಲಾದರೂ ಅದರ ಬಗ್ಗೆ ಅರಿವು ಪಡೆದುಕೊಳ್ಳುವುದು ಅವಶ್ಯಕ. ಈ ಒಂದು ಅರಿವಿನಿಂದ ತಮಿಳು ಹೊರತಾಗಿದೆ ಮತ್ತು ಯಾವುದೇ ವಿಚಾರವನ್ನು ಒಂದು ಮಿತಿಯಲ್ಲಿಟ್ಟು ಬೇಕಾದಷ್ಟೇ ಹೀರಿಕೊಳ್ಳುವ ಶಕ್ತಿ, ಯುಕ್ತಿಯನ್ನು ಹಿಂದೀಯ ಅತಿಯಾದ ವ್ಯಾಮೋಹದಿಂದ ಕನ್ನಡವೂ ಕಳೆದುಕೊಂಡು ಬಿಟ್ಟಿದೆ. ಈ ಕಳೆದುಕೊಂಡಿರುವ ಸ್ಥಿಮಿತವೇ ನಮ್ಮಲ್ಲಿ ಒಂದು ದೌರ್ಬಲ್ಯವಾಗಿ ಮಾರ್ಪಟ್ಟಿದೆ.
ಈ ದೌರ್ಬಲ್ಯ ಒಂದು ಪ್ರಬಲ ಶಕ್ತಿಯಾಗಿ ಹಿಂದೀ ಭಾಷೆಯ ಆಕ್ರಮಣ ನಾಡಿನ ಎಲ್ಲೆಡೆಯೂ ಜರುಗುತ್ತಿದೆ. ನಮ್ಮ ಭಾಷೆಯನ್ನು ಕಡೆಗಣಿಸುವ ಪರಭಾಷಾ ಪ್ರೇಮ ಎಂದಿಗೂ ಸಖ್ಯವಲ್ಲ. ಇಂದು ಕ.ರ.ವೇ ಭಯದಿಂದಲೋ ಎಂಬಂತೆ, ಶಾಪಿಂಗ್ ಮಾಲುಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ಇತ್ಯಾದಿ ಎಡೆಗಳಲ್ಲಿ ಕನ್ನಡದ ಫಲಕಗಳು ಕಾಣಹತ್ತಿವೆ. ಆದರೆ ಅದಕ್ಕಿಂತ ಮುಖ್ಯವಾಗಿ ಹಿಂದೀ ಬೋರ್ಡುಗಳು ರಾರಾಜಿಸುತ್ತಿವೆ. ನಗರದಲ್ಲಿ ಹಿಂದೀ ಮಾತನಾಡಬಲ್ಲವರಂತೂ ಶೇಕಡಾ 99 ಎಂದರೂ ತಪ್ಪಾಗಲಾರದು. ಆಟೋದವರಿಂದ ಹಿಡಿದು, ಮಾರಾಟ ಮಳಿಗೆಗಳು, ಕಚೇರಿಗಳೂ, ಮಾಧ್ಯಮಗಳೂ ಸಾಲದೆಂಬಂತೆ ಶಿಕ್ಷಣ ಕ್ಷೇತ್ರದಲ್ಲೂ ಹಿಂದೀ ಭಾಷೆ ಕಡ್ಡಾಯವಾಗಿ ತನ್ನ ದಾಪುಗಾಲು ಚಾಚುತ್ತಿರುವುದು ಒಂದು ಆರೋಗ್ಯಕರ ಬೆಳವಣಿಗೆಯೇ ಎಂಬುದು ಆಲೋಚಿಸಬೇಕಾದ ಸಂಗತಿ.
ನಾನಾಗಲೇ ಹೇಳಿದಂತೆ ಹಿಂದೀ ಭಾಷಾ ಕಲಿಕೆಗೆ ನನ್ನ ವಿರೋಧವಿಲ್ಲ. ಅದು ನನ್ನಿಷ್ಟದ ಭಾಷೆ ಸಹ. ಆದರೆ, ಯಾವುದೇ ಭಾಷೆ ನಮ್ಮ ಸ್ವಭಾಷೆಗೂ ಮೀರಿ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಹಂತ ನಮ್ಮ ನಾಡಿನಲ್ಲೇ ತಲುಪಹತ್ತಿದೆ ಎಂದರೆ, ಇದು ಒಂದು ಗಮನಿಸಬೇಕಾದ ಅಲಾರಂ ಅಲ್ಲವಾ!
 
 

‍ಲೇಖಕರು avadhi

September 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. Soory Hardalli

  I also had lot of problems while teaching Kannada for the colleagues from other states. My experiences are similar to yours.

  ಪ್ರತಿಕ್ರಿಯೆ
 2. ಪು. ಸೂ . ಲಕ್ಷ್ಮೀನಾರಾಯಣ ರಾವ್

  ನಿಮ್ಮ ಲೇಖನ ತುಂಬಾ ಪ್ರಸ್ತುತವಾಗಿದೆ. ಆದರೆ ನೀವು ತಿಳಿಸಿರುವುದಕ್ಕಿಂತ ಹೆಚ್ಚಾಗಿ ಕನ್ನಡಿಗರ ಮೇಲೆ ಹಿಂದೀ ಹೇರಿಕೆ ಆಗುತ್ತಿದೆ. ನಿಮ್ಮ ತಮಿಳು ಗೆಳತಿ ಕನ್ನಡಿಗರ ಬಗ್ಗೆ ಹೇಳಿರುವ ಮಾತುಗಳು ಅಕ್ಷರಶಃ ಸತ್ಯ. ನಾನೊಮ್ಮೆ (ಸು. ೨೫ ವರ್ಷಗಳ ಹಿಂದೆ ) ಊಟದ ಮೇಜಿನ ಮೇಲಿಡಲು ‘ಕೋಸ್ಟರ್ ‘ಗಳನ್ನು ತರಲು ಮಾಮೂಲ್ಪೇಟೆಗೆ ಹೋಗಿದ್ದೆ. ಅಲ್ಲಿ ಅವೆನ್ಯೂ ರಸ್ತೆಯಿಂದ ಹಿಡಿದು ಗೂಡ್ಶೆಡ್ ರಸ್ತೆವರೆಗೆ ಎಲ್ಲಾ ಪ್ಲಾಸ್ಟಿಕ್ ಅಂಗಡಿಗಳೇ. ಮೊದಲನೇ ಅಂಗಡಿಯಲ್ಲೇ ಕನ್ನಡದಲ್ಲಿ ಕೇಳಿದ್ದಕ್ಕೆ ತಿರಸ್ಕಾರದ ಪ್ರತಿಕ್ರಿಯೆಯನ್ನು ಪಡೆದೆ. ಸರಿ ನೋಡೋಣ ಅಂತ ಹೇಳಿ ಕೊನೆವರೆಗೆ ಒಂದು ಅಂಗಡಿಯನ್ನು ಬಿಡದೆ ಎಲ್ಲ ಅಂಗಡಿಗಳಲ್ಲಿ ಕನ್ನಡದಲ್ಲಿಯೇ ಕೇಳುತ್ತ ಹೋದೆ. ಬಹುಮಂದಿ ನನ್ನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಕೆಲವರು ಉತ್ತರಿಸಿದರಾದರು ಅದು ಹಿಂದಿಯಲ್ಲೇ. ಅಷ್ಟೇ ಅಲ್ಲ ಅವರಲ್ಲಿ ಸಿಡುಕು, ತಿರಸ್ಕಾರಗಳು ತುಂಬಿದ್ದವು. ನನಗೆ ಮೈಯೆಲ್ಲ ಉರಿಯಿತು. ಆದರೆ ಏನು ಮಾಡಲು ಆಗಲಿಲ್ಲ. ಹಿಂಸೆ, ಅವಮಾನಗಳಿಂದ ನರಳಿದೆ. ನಾವು ಕನ್ನಡಿಗರು ಔದಾರ್ಯದ ಉರುಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ಹಿಂದಿಯನ್ನಾಗಲಿ ಹಿಂದಿಯವರನ್ನಾಗಲಿ ಖಂಡಿತ ದ್ವೇಷಿಸಬಾರದು. ಆದರೆ ಪ್ರತಿಯೊಬ್ಬ ಕನ್ನಡಿಗನೂ ತನ್ನ ಭಾಷೆಯನ್ನು ಉಳಿಸಿಕೊಳ್ಳಲು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಬೇಕು. ಈ ಹೊತ್ತು ಸಹ ಕನ್ನಡವನ್ನು ನಂಬಿ ಬದುಕಲು ಸಾಧ್ಯವಿದೆ. ಷಂಡತನವನ್ನು ಮೈಗೂಡಿಸಿಕೊಂಡುಬಿಟ್ಟಿದ್ದೇವೇನೋ ಅಂತ ಅನ್ನಿಸಿ ಖೇದವಾಗುತ್ತದೆ !…….. , ಕನ್ನಡಿಗರೇ ಕನ್ನಡದ ಅವನತಿಗೆ ಕಾರಣರಾಗಿದ್ದಾರೆಂದರೆ ತಪ್ಪಾಗಲಾರದು.

  ಪ್ರತಿಕ್ರಿಯೆ
  • ಸೋಮಲಿಂಗ ಜಿ

   ಕನ್ನಡಿಗರೇಕೆ ಅಂಗಡಿ ಇಡಲಿಲ್ಲ, ಉದ್ಯಮಶೀಲರಾಗಲಿಲ್ಲ ಎಂದು ಬೇಸರ ಪಡಲಿಲ್ಲ ನೀವು. ಕನ್ನಡಿಗ ಗಿರಾಕಿಗಳ ಷಂಡತನಕ್ಕೆ ಬೇಸರ ಪಟ್ಟಿರಿ. ನಿಮ್ಮ ವಿಚಾರಧಾರೆ ನನಗೆ ಬಹಳ ಹಿಡಿಸಿತು.

   ಪ್ರತಿಕ್ರಿಯೆ
   • ಪು. ಸೂ . ಲಕ್ಷ್ಮೀನಾರಾಯಣ ರಾವ್

    ಮಾನ್ಯ ಸೋಮಲಿಂಗ ರವರಿಗೆ ಧನ್ಯವಾದ. ನನ್ನ ಅಂದಾಜಿನ ಪ್ರಕಾರ ಸು. ೧೮ -೧೯ ನೇ ಶತಮಾನದ ವೇಳೆಗೆ ಬ್ರಿಟಿಷರು ಮದ್ರಾಸ್, ಸೂರತ್ ಮತ್ತು ಕಲಕತ್ತಗಳಲ್ಲಿ ತಮ್ಮ ಪ್ರಾದೇಶಿಕ ಕಛೇರಿಗಳನ್ನು ಸ್ಥಾಪಿಸಿ ಅಲ್ಲಿ ಉದ್ಯಮಗಳನ್ನು ಆರಂಭಿಸಿದರು. ಅದೇ ಸಂದರ್ಭದಲ್ಲಿ ಇಲ್ಲಿ ನಮ್ಮ ಕರ್ನಾಟಕದಲ್ಲಿ ಒಡೆಯರ್ ಸಂಸ್ಥಾನ ಬ್ರಿಟಿಷರ ಅಧೀನದಲ್ಲಿ ಇದ್ದು ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲಕ್ಕೆ ಶಿಕ್ಷಣ,ಕೃಷಿ,ಸಾಮಾಜಿಕ ಸುಧಾರಣೆ,ಕುಟುಂಬ ಯೋಜನೆ,ಬ್ಯಾಂಕಿಂಗ್ ಉದ್ಯಮ ಇತ್ಯಾದಿ ಜನೋಪಯೋಗಿ ಕಾರ್ಯಕ್ರಮಗಳು ಚೆನ್ನಾಗಿ ನಡೆಯುತ್ತಿದ್ದವು. ಆಮೇಲಾಮೇಲೆ ನಮ್ಮಲ್ಲಿ ಚಿಕ್ಕ ಚಿಕ್ಕ ಉದ್ಯಮಗಳು ಶುರುವಾದರೂ ಆ ಮೂರು ಕಡೆಗಳಿಂದ ಪರಿಣತರನ್ನು ಕರೆಸಿಕೊಳ್ಳಲಾಯಿತು. ಆ ಪರಿಣಿತರು ಸಹ ಕನ್ನಡಿಗರನ್ನು ಕಡೆಗಣಿಸಿ ಇಲ್ಲಿಗೆ ಅವರೂರಿನವರನ್ನು ಕರೆಸಿಕೊಂಡು ಬೆಳೆಸತೊಡಗಿದರು. ಇನ್ನು ಈಗಿನ ಕರ್ನಾಟಕದ ಉತ್ತರಕ್ಕೆ ಒಂದು ಕಡೆ ನಿಜಾಮರ ಮತ್ತೊಂದು ಕಡೆ ಮರಾಠರ ಆಡಳಿತಕ್ಕೆ ಒಳಪಟ್ಟ ಕನ್ನಡ ಮತ್ತು ಕನ್ನಡಿಗರು ಅಲ್ಲೂ ಸಹ ಹಿನ್ನಡೆಯನ್ನು ಅನುಭವಿಸಬೇಕಾಯ್ತು. ಬಹುಶಃ ಇತ್ಯಾದಿ ಹಲವು ಅಂಶಗಳು ನಾವು ಉದ್ಯಮದಲ್ಲಿ ಹಿಂದೆಬೀಳಲು ಕಾರಣವಾಯ್ತೇನೋ ಅಂತ ಅನ್ನಿಸುತ್ತೆ.

    ಪ್ರತಿಕ್ರಿಯೆ
    • ಸೋಮಲಿಂಗ ಜಿ

     ಮುಕ್ಕಾಲು ಪಾಲು ಕನ್ನಡಿಗರು ಇದ್ದಲ್ಲೆ ಮೊಳೆ ಹೊಡೆದುಕೊಂಡು, ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡು ತಮ್ಮ ಪುಕ್ಕಲುತನವನ್ನು ಮುಚ್ಚಿಕೊಂಡು ಬದುಕುವವರು. ಕರಾವಳಿ ಕರ್ನಾಟಕದ ಜನ ಇದಕ್ಕೆ ಸ್ವಲ್ಪ ಅಪಾದನೆ. ಸ್ವಂತ ಉದ್ಯಮದ ಮಾತು ಬಿಡಿ, ಕೇಂದ್ರ ಸರಕಾರದ ಹುದ್ದೆಗಳಿಗೆ ಅರ್ಜಿ ಹಾಕಿದ ಕನ್ನಡಿಗರು ಎಷ್ಟಿದ್ದಾರೆಂಬ ಅಂಕಿ-ಅಂಶ ಒಮ್ಮೆ ನೋಡಿ. ನಮ್ಮ ದೌರ್ಬಲ್ಯದಿಂದ ನಮಗೆ ದುಸ್ಥಿತಿ ಅಷ್ಟೆ. ಭಾಷೆ ಎಂಬುದು ಮೊಳೆಯಾಗಬಾರದು.

     ಪ್ರತಿಕ್ರಿಯೆ
 3. umesh desai

  ಚರ್ಚೆಗೆ ಯೋಗ್ಯದ್ದು ಇದು ಬಿಎಂಟಿಸಿ ಕಂಡಕ್ಟರ್ ಹಿಡಿದು ಎಲ್ಲರು ಈ ನಾರ್ತಿಗಳ ಜೊತೆ
  ಹಿಂದಿಯಲ್ಲಿ ಮಾತಾಡ್ತರೆ..ಹಿಂದೆ ಬಹು ಹಿಂದೆ ನಮ್ಮ ಕೆಲರಾಜಕೀಯನಾಯಕರ ಕೃಪೆಯಿಂದ
  ಪಿಎಸ್ ಯುಗಳು ಬೆಂಗಳೂರಿನಲ್ಲಿ ಮಾತ್ರ ಸ್ಥಾಪಿತವಾದವು..ಆ ಲಾಭ ಪಡೆದವ್ರು ತಮಿಳಿಗರು,,ನೆರೆಮನೆಯವನ
  ಜೊತೆ ಇದ್ದು ಅವನಿಗೆ ತಮ್ಮ ಭಾಷೆ ಕಲಿಸಿದ್ರು..ಬೆಂಗಳೂರು ಕನ್ನಡಿಗರು ಅವಾಗ ತೆಪ್ಪಗಿದ್ದವರು ಈಗೇಕೆ
  ಗೊಣಗ್ತಾರೋ ಗೊತ್ತಿಲ್ಲ..!!

  ಪ್ರತಿಕ್ರಿಯೆ
 4. ಶಮ, ನಂದಿಬೆಟ್ಟ

  ಸಂಪು, ನನಗೂ ಬಹಳಷ್ಟು ಸಲ ಇಂಥ ನುಭವಗಳು ಆಗಿವೆ. ಻ದರಲ್ಲೂ ಎಂ.ಜಿ ರಸ್ತೆ, ಕಮರ್ಷಿಯಲ್ ರಸ್ತೆಗಳಲ್ಲಿ ಹೆಚ್ಚು. ಅಮಗಡಿಯಾತ ಹಿಂದಿಯೋ ಇಂಗ್ಲಿಷಿನಲ್ಲೋ ಮಾತಾಡಿದರೆ ನಾನು ಕನ್ನಡದಲ್ಲೇ ಮುಂದುವರಿಸುತ್ತೇನೆ. (ಇವಳೆಂಥ ಗುಗ್ಗು ಎಂಬಂತೆ ಅವನು ನನ್ನನ್ನು ನೋಡದಾಗ ಕೂಡ). ಕೊನೆಗೆ ಬರುವಾಗ “ನನಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತಾಡಲು ಬರುವುದಿಲ್ಲ ಅಂತಲ್ಲ; ಆದರೆ ನಾನು ನನ್ನ ಭಾಷೆಯನ್ನು ಪ್ರೀತಿಸುತ್ತೇನೆ” ಅಂತ ಇಂಗ್ಲಿಷಿನಲ್ಲೇ ಹೇಳಿ ಬಂದು ಬಿಡುತ್ತೇನೆ. ಎಲ್ಲಿ ಹೋದರೂ ಅವರಿಗೆ ಕನ್ನಡ ಬರುವುದಿಲ್ಲ ಎಂಬುದು ಖಾತ್ರಿ ಆದರೆ ವ್ಯವಹಾರದ ಻ನಿವಾರ್ಯತೆಗೆ ಮಾತ್ರ ಬೇರೆ ಭಾಷೆ ಬಳಸುತ್ತೇನೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: