’ಮೈಯೇ ಸೂರು, ಮನವೇ ಮಾತು’ – ಬಸವರಾಜು ಕಲ್ಗುಡಿ ಅವರ ಹೊಸ ಪುಸ್ತಕ

೫-೯-೨೦೧೩ ರಂದು ಬಿಡುಗಡೆಯಾದ ಬಸವರಾಜ ಕಲ್ಗುಡಿ ಅವರ ಮೈಯೇ ಸೂರು, ಮನವೇ ಮಾತು ಪುಸ್ತಕಕ್ಕೆ ಅವರು ಬರೆದ ಮೊದಲ ಮಾತುಗಳು ಅವಧಿ ಓದುಗರಿಗಾಗಿ.

ಅಭಿನವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಬಸವರಾಜ ಕಲ್ಗುಡಿ

ಮೊದಲ ಮಾತುಗಳು


ಯು. ಆರ್. ಅನಂತಮೂರ್ತಿಯವರ ಗೌರವ ಮಾಲಿಕೆಯಲ್ಲಿ ನನ್ನ ಈ ಪುಸ್ತಕವು ಬರುತ್ತಿರುವುದು ಸಂತೋಷವನ್ನು ಕೊಟ್ಟಿದೆ. ಈ ಪುಸ್ತಕದ ಲೇಖನಗಳು ಬಹಳ ವರ್ಷಗಳಿಂದ ಲೇಖನಗಳಾಗಿಯೇ ಬೇರೆ ಬೇರೆ ಕಡೆಗಳಲ್ಲಿ ಹಂಚಿಹೋಗಿದ್ದವು. ಮೇಲುನೋಟಕ್ಕೆ ಈಗ ಅವುಗಳು `ಮಿಸಳಭಾಜಿ’ಯಂತೆ ಕಾಣುತ್ತವೆ. ಆದರೆ ಸಾಹಿತ್ಯ ಸಂಸ್ಕೃತಿಯ ಅಧ್ಯಯನದಲ್ಲಿ ನಡೆಯುವ ಚಿಂತನೆಗಳು, `ಸಾಹಿತ್ಯ’ವನ್ನು ವಿಶಾಲವಾದ ಅರ್ಥದಲ್ಲೇ ಗ್ರಹಿಸುತ್ತವೆ. ಹೀಗಾಗಿ ನಾನು ಸಾಹಿತ್ಯ ಮತ್ತು ಸಾಹಿತ್ಯೇತರ ಭಾಷೆಯನ್ನು ಹಿಡಿದು ಮಾಡಿದ ವಿಶ್ಲೇಷಣೆಗಳು ಒಂದಕ್ಕೊಂದು ಪೂರಕವಾಗಿಯೇ ನಡೆಯಬಲ್ಲವು ಎನ್ನುವ ಧೈರ್ಯದಿಂದ ಈ ಎಲ್ಲ `ಮಿಸಳಭಾಜಿ’ಯನ್ನು ಒಂದೆಡೆಗೆ ತಂದೆ. ಇದರ ಹಿಂದೆ ಭಂಡ ಧೈರ್ಯವನ್ನು ತುಂಬಿದವರು ಪರೋಕ್ಷವಾಗಿ ಡಾ. ಶೆಟ್ಟರ್ ಹಾಗೂ ಶ್ರೀ ರವಿಕುಮಾರ್ ಅವರು.
ಈ ಲೇಖನಗಳ ಮೊದಲ ಭಾಗ ಬಹುಪಾಲು ಮಧ್ಯಕಾಲೀನ ಸಾಹಿತ್ಯ, ಸಂಸ್ಕೃತಿ ಕುರಿತಾಗಿದೆ. ಬಹುಪಾಲು ಲೇಖನಗಳು ತಮಿಳು-ಕನ್ನಡ ಸಂಸ್ಕೃತಿಯ ಒಡನಾಟದ ಸೂಕ್ಷ್ಮಗಳನ್ನೂ, ಭಾರತೀಯ ಮಟ್ಟದ ಜ್ಞಾನಚಿಂತನೆಗಳು ಕನ್ನಡದ ಜೊತೆಗೆ ಮಾಡಿದ ಪ್ರಮುಖ ಮುಖಾಮುಖಿಯನ್ನು ಒಳಗೊಂಡಿವೆ. ಹೀಗಾಗಿ ಇವು ಕನ್ನಡದ ಜ್ಞಾನ ಚಿಂತನೆಯ ಸ್ವರೂಪವನ್ನು ಅರಿಯುವ ಹೊಸ ಪ್ರಾರಂಭಿಕ ಪ್ರಯತ್ನಗಳೆಂದು ಹೇಳಬಲ್ಲೆ. ಕನ್ನಡದ ಜ್ಞಾನ ಪ್ರಪಂಚವು ಹಾಗೆ ಏಕಾಏಕಿ ಶೂನ್ಯದಿಂದ ಉದ್ಭವವಾಗಿಲ್ಲ. ಹಾಗೆ ನೋಡಿದರೆ ಯಾವ ಜ್ಞಾನವೂ ಶೂನ್ಯದಿಂದ ಹುಟ್ಟುವುದಿಲ್ಲ. ಜೀವನದ ಅನುಭವಗಳು ಹುಟ್ಟಿಸುವ ಲೌಕಿಕ-ಅಲೌಕಿಕ ಗ್ರಹಿಕೆಗಳು ಅನೇಕ ಬಗೆಯ ತಾತ್ವಿಕ ಚಿಂತನೆಗೆ, ಜ್ಞಾನದ ಬೆಳವಣಿಗೆಗೆ ಪ್ರೇರಣೆಗಳಾಗಿವೆ. ಬಯಲಿನ (ಶೂನ್ಯ?) ಕಡೆಗೆ ಹೋಗುವ ಜ್ಞಾನದ ವಿಸ್ತಾರವಾದ ಚಿಂತನೆಯ ಹರವು ಕನ್ನಡದ ಒಂದು ವಿಶಿಷ್ಟ ಸಂಗತಿಯೂ ಆಗಿದೆ.
ಮನುಷ್ಯನ ಸ್ವಸಾಧನೆಯ ಮಹತ್ತರವಾದ ಪ್ರಯೋಗಗಳು ನಡೆದದ್ದು ಮೊದಲಿಗೆ ಶ್ರಮಣಧಾರೆಗಳಾದ ಬೌದ್ಧ ಮತ್ತು ಜೈನ ಪರಂಪರೆಯಲ್ಲಿ. ದೇಹ, ಲೋಕ ಮತ್ತು `ಪ್ರಜ್ಞಾ’ ಈ ಅಂಶಗಳಿಗೆ ಪ್ರಾಮುಖ್ಯ ಕೊಟ್ಟ ಮಹತ್ತರವಾದ ತಿರುಳು, ಮಧ್ಯಕಾಲೀನ ಸಂದರ್ಭದಲ್ಲಿ ಒಂದು ದೊಡ್ಡ ಬೆಳವಣಿಗೆಗೆ ದಾರಿಯಾದಂತೆ ತೋರುತ್ತವೆ. ಅವೈದಿಕ, ತಳಸಮುದಾಯದ ಸಿದ್ಧ ಮತ್ತು ನಾಥ ಪರಂಪರೆಗಳು, ದೇಹದ `ಶಕ್ತಿ’ಯನ್ನು ಅರಿಯುವ ವಿಭಿನ್ನ ಪ್ರಯೋಗಗಳಿಗೆ ಕೈ ಹಾಕಿದ್ದು ಒಂದು ದೊಡ್ಡ ಘಟನೆಯೇ. ಅಖಿಲ ಭಾರತ ವ್ಯಾಪ್ತಿಯ ಈ ಪರಂಪರೆ ಕನ್ನಡದ ಉದ್ದಗಲಗಳಲ್ಲಿ ಮಾಡಿದ ಪ್ರಭಾವ, ಮಧ್ಯಕಾಲೀನ ವಚನ ಚಳುವಳಿಯ ಜೊತೆಗೆ ನಡೆಸಿದ ಮುಖಾಮುಖಿ – ಇವುಗಳ ತಳಸ್ಪರ್ಶಿ ಅಧ್ಯಯನ ಗಾಢವಾಗಿ ನಡೆಯಬೇಕಾಗಿದೆ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ನಾಥ ಪರಂಪರೆಯ ಕುರುಹುಗಳಿವೆ. ಮಧ್ಯಕಾಲೀನ ಸಂದರ್ಭದಲ್ಲಿ ಬಹು ಪ್ರಬಲವಾಗಿದ್ದ ಸಿದ್ಧ, ನಾಥ ಪಂಥಗಳು ಸಂಸ್ಕೃತ, ಖಡೀಬೋಲಿ ಮತ್ತು ದೇಶೀ ಭಾಷೆಯನ್ನು ತಮ್ಮ ತತ್ವ ಸಿದ್ಧಾಂತ ಹಾಗೂ ಕ್ರಿಯಾಚರಣೆಯ ಸ್ವರೂಪವನ್ನು ಹೇಳಲು ಬಳಸಿಕೊಂಡಿವೆ. ದಕ್ಷಿಣ ಸಿದ್ಧ ಮತ್ತು ಉತ್ತರದ ಸಿದ್ಧರ ನಡುವೆ ಒಂದು ಬಗೆಯ ಒಡನಾಟವಿದೆ. ಬಹುಶಃ ಉತ್ತರದ ನಾಥ ಪರಂಪರೆ, ದಕ್ಷಿಣದ ತಮಿಳಿನ ಸಿದ್ಧ ಪರಂಪರೆ ಕೆಲವು ಕಡೆಗಳಲ್ಲಿ ಕಲಸಿ ಹೋಗಿರುವ ಉದಾಹರಣೆಗಳಿವೆ.
ಒಂದಂತೂ ಸ್ಪಷ್ಟ – ದೇಹ ಮತ್ತು ಮನಸ್ಸು ಮತ್ತು ಇವುಗಳಿಗಿರುವ ಆದ್ಯಂತಿಕ ಶಕ್ತಿಯನ್ನು ಬೌದ್ಧ ದರ್ಶನದ ನಂತರ ವ್ಯಾಪಕ ನೆಲೆಯಲ್ಲಿ ಭಾರತೀಯ ಜೀವನಾಡಿಯಲ್ಲಿ ತಂದವುಗಳು ಇವು. ಸಾಧನಾ ಮಾರ್ಗದ ಈ ಪರಂಪರೆಗಳು – ತಂತ್ರ ಆಚರಣೆಯ ಅನೇಕ ಸಿದ್ಧಾಂತಗಳನ್ನು ಕಟ್ಟಿದವು. ಬಹುಪಾಲು `ಶೂದ್ರ’ರೆಂದು ಕರೆಯಲಾಗುವ ಕಾಯಕ ಜೀವಿಗಳ ನೆಲೆಯಿಂದ ಹೊರಟ ಈ ಪರಂಪರೆಗಳಿಗೆ, ಕಾಯ ಮತ್ತು ಮನಸ್ಸು ಒಂದು ದೊಡ್ಡ ಭಿತ್ತಿಯಾದದ್ದು ಸಹಜವೇ ಆಗಿದೆ.
ಕನ್ನಡದ ವಚನ ಚಳುವಳಿಯ ಕೇಂದ್ರಸ್ಥ ಆಶಯವಾದ ದೇಹ-ಮನಸ್ಸು-ಅರಿವು ಸಂಬಂಧಿ ಚಿಂತನೆಗಳು, ಸಿದ್ಧ-ನಾಥ ಪರಂಪರೆಯೊಂದಿಗೆ ಪ್ರೇರಣೆ ಪಡೆದವುಗಳೇ ಆಗಿರಬೇಕು. ಈ ಪರಂಪರೆಗಳ ಜೊತೆಗಿನ ಮುಖಾಮುಖಿಯಲ್ಲಿ ಅವುಗಳಿಗಿಂತ ಭಿನ್ನವಾದ ತಾತ್ವಿಕ ನೆಲೆಗಟ್ಟನ್ನು ಕಟ್ಟಿಕೊಂಡ ವಚನ ಜ್ಞಾನದ ಬಗ್ಗೆ ಹೊಸ ಚಿಂತನೆಗಳನ್ನು ಮಾಡವ ಅಗತ್ಯವಿದೆ. ಗೋರಖನೊಡನೆ-ಅಲ್ಲಮನ ಮುಖಾಮುಖಿಯ ಐತಿಹ್ಯ, ಶ್ರೀಶೈಲ ಜೊತೆಗಿನ ಅಕ್ಕಮಹಾದೇವಿಯ ಒಡನಾಟ; ಈಗಲೂ ಶ್ರೀಶೈಲದಲ್ಲಿ ಅಕ್ಕನು ನೆಲೆನಿಂತಿದ್ದ ಕುರುಹುಗಳು- ಹೀಗೆ ವಿವಿಧ ನೆಲೆಗಳಲ್ಲಿ ಈ ಸಂಬಂಧದ ಅಂಶಗಳು ನಮಗೆ ಗೋಚರಿಸುತ್ತವೆ.
ಈ ಹಿನ್ನೆಲೆಯಲ್ಲಿಯೇ ವಚನ ಚಳುವಳಿಯು ಲೌಕಿಕವನ್ನು ವಾಸ್ತವ ಮತ್ತು ಬದಲಾಗಬೇಕೆಂಬ ದ್ರವ್ಯವೆಂದು ಭಾವಿಸಿದ್ದು ಸಹಜವಾದ ಪ್ರಕ್ರಿಯೆಯಾಗಿದೆಯನ್ನುವುದನ್ನು ಗುರುತಿಸಬೇಕು. ಇತ್ತೀಚೆಗೆ ಕೆಲವು ದಾಖಲಾಪಂಡಿತ ವಿದ್ವಾಂಸರು ದಾಖಲೆಯಾಗಿರುವ ವಚನಗಳನ್ನು ಇಟ್ಟುಕೊಂಡು ಪದಬಳಕೆಯ ಶೇಕಡಾವಾರು ಸಂಖ್ಯೆಯ ಆಧಾರದ ಮೇಲೆ, ಚಳುವಳಿಗೆ ಸಾಮಾಜಿಕ ಗುಣಗಳನ್ನು ಆದೇಶಿಸುತ್ತಿದ್ದೇವೆ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ದೇಹವು ಸತ್ಯ, ದೇಹದ ಸತ್ವವೂ ಸತ್ಯ ಎಂದು ಹೇಳುವ ಪರಂಪರೆಗಳಿಗೆ ಶ್ರೇಣೀಕರಣ ಹಾಗೂ ಜಾತಿ-ಕುಲ ತಾರತಮ್ಯದ ವಿರೋಧವು ಬಹು ಸಹಜವಾದ ಪ್ರಕ್ರಿಯೆಯಾಗಿರುತ್ತದೆ. ಈ ವಿರೋಧದ ಪ್ರಕ್ರಿಯೆಯು ಎಷ್ಟು ತೀವ್ರತರವಾಗಿರುತ್ತದೆನ್ನುವುದನ್ನು ಪದ ದಾಖಲಾತಿಗಳಲ್ಲಿ ಮಾತ್ರ ಕಾಣಲಾಗುವುದಿಲ್ಲ. ಕನ್ನಡದ ಮೌಖಿಕ ಪರಂಪರೆಗಳಲ್ಲಿ, ಐತಿಹ್ಯಗಳಲ್ಲಿ ಇದು ಎದ್ದು ಕಾಣುವ ಅಂಶವಾಗಿದೆ.
ಹರಳಯ್ಯ-ಮಧುವರಸರ ಮಕ್ಕಳ ಮದುವೆಯ ಐತಿಹ್ಯ, ಶ್ರೇಷ್ಠತೆಯನ್ನು ಸಾರುತ್ತಿದ್ದ ಮೇಲುವರ್ಣದ ವಿರುದ್ಧ, ಅನೇಕ ತಳವರ್ಗದ ವಚನಕಾರರು ತಮ್ಮ ಕಾಯಕದ ಶ್ರೇಷ್ಠತೆಯನ್ನು ಮೆರೆಯುವ ಅನೇಕ ಕಥನಗಳು, ಉಳ್ಳಿಯನ್ನು ಶ್ರೇಷ್ಠ ಭೋಜ್ಯ ಪದಾರ್ಥವೆಂದು ಸಾರುವ ಬಸವಣ್ಣನ ಸಂಬಂಧದಲ್ಲಿ ನಡೆದ ಘಟನೆ, ಹೀಗೆ ಹಲವಾರು ಮೌಖಿಕ ಪರಂಪರೆಯ ಕಥನಗಳನ್ನು ಉದಾಹರಿಸಬಹುದು. ಜಾತಿ-ಮೂಲದ ಬಣ್ಣಗಳ ಹಾಗೂ ವರ್ಣಶ್ರೇಷ್ಠತೆಯ ಉಚ್ಚಾಟನೆಯ ಅಂಶಗಳೇ ಇಲ್ಲಿ ಪ್ರಧಾನವಾಗಿವೆ. ಇದು ಕೇವಲ ವಚನ ಚಳುವಳಿಯ ವೈಶಿಷ್ಟ್ಯ ಮಾತ್ರವಾಗಿರಲಿಲ್ಲ. ವಚನ ಚಳುವಳಿಯ ಜೊತೆಗೆ ಮುಂದಿನ ಕಾಲಮಾನಗಳಲ್ಲಿ ಸಂವಾದ ಮಾಡಿದ ಎಲ್ಲ ಅವೈದಿಕ, ತಳವರ್ಗದ ಧಾರ್ಮಿಕ ಪರಂಪರೆಗಳ ವೈಶಿಷ್ಟ್ಯವೂ ಇದೇ ಆಗಿತ್ತು. ಹದಿಮೂರನೆಯ ಶತಮಾನದಿಂದ ಉತ್ತರ ಕರ್ನಾಟಕದ ಉದ್ದಗಲಗಳಲ್ಲಿ ಹರಡಿದ ಸ್ವರವಚನಕಾರರ ಅಲೆಮಾರಿ ಪರಂಪರೆ, ಕೊಡೇಕಲ್ ಬಸವಣ್ಣ ಪರಂಪರೆ, ನಿರ್ವಾಣಸ್ವಾಮಿ, ದಕ್ಷಿಣಕ್ಕೆ ಬಂದರೆ ಮಂಟೆಸ್ವಾಮಿ, ಮಲೆಯ ಮಹದೇಶ್ವರ ಪರಂಪರೆಗಳನ್ನು ಉದಾಹರಿಸಬಹುದು. ಜಾತಿಯನ್ನು ಮೀರುವ `ಸಂಕರ’ದ ಶ್ರೇಷ್ಠತೆಯನ್ನು, ಆಚರಣೆಯನ್ನು ಮೀರುವ ವ್ಯಕ್ತಿತ್ವದ ಪಾರಮ್ಯವನ್ನು ಇವು ಎತ್ತಿ ಹಿಡಿಯುತ್ತವೆ: ಈ ಬಗೆಗಿನ ಒಳನೋಟಗಳಿಗೆ ಇಲ್ಲಿರುವ ಮೊದಲ ಭಾಗದ ಲೇಖನಗಳು ಒಂದು ಪೂರ್ವ ಪೀಠಿಕೆಯಾಗಿ ಬಂದಿವೆಯೆಂದೇ ಭಾವಿಸುತ್ತೇನೆ.
ಕನ್ನಡ ಸಂಸ್ಕೃತಿಯಲ್ಲಿನ ಇಂಥದ್ದೊಂದು ಹುಡುಕಾಟದಿಂದ ಭಿನ್ನವಾದ ಮನುಷ್ಯನ ಬದುಕನ್ನು ಕುರಿತ ಅನ್ವೇಷಣೆಯು ಪ್ರಾರಂಭವಾಗಿದ್ದದ್ದು ಇಂಗ್ಲಿಷ್ ವಸಾಹತು ಪೂರ್ವದಿಂದ. ಈ ಪುಸ್ತಕದ ಎರಡನೆಯ ಭಾಗದ ಆಧುನಿಕ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಈ ಹೊಸ ಸಂಬಂಧದ ವಿವಿಧ ವಿನ್ಯಾಸಗಳನ್ನು ಹಿಡಿಯಲು ಯತ್ನಿಸಿವೆ. ಪ್ರಜ್ಞಾಪೂರ್ವಕವಾಗಿ ಮೊದಲ ಭಾಗ ಹಾಗೂ ಎರಡನೆಯ ಭಾಗಗಳ ನಡುವೆ ಇರುವ ತಾತ್ವಿಕವಾದ ವ್ಯತ್ಯಾಸವನ್ನು ಇಲ್ಲಿ ದೀರ್ಘವಾಗಿ ಚಚರ್ಿಸಿಲ್ಲವಾದರೂ ಓದುಗರು ಈ ವ್ಯತ್ಯಾಸದ ಸೂಕ್ಷ್ಮಗಳನ್ನು ಗ್ರಹಿಸಿಯಾರು ಎನ್ನುವ ನಂಬಿಕೆ ನನಗಿದೆ.
ನಾಲ್ಕನೆಯ ಭಾಗದ ಲೇಖನಗಳು ಕನ್ನಡದ ಆಚೆಗಿನ ಲೋಕಜ್ಞಾನವನ್ನು ನಾನು ನನ್ನೊಳಗೆ ತಂದುಕೊಂಡ ವಿಭಿನ್ನ ಆಯಾಮಗಳ ಕೆಲವೊಂದು ತುಣುಕುಗಳೆಂದು ಹೇಳಬಲ್ಲೆ. ಕನ್ನಡದ ಸಾಹಿತ್ಯ ಸಂಸ್ಕೃತಿ ಕುರಿತ ನನ್ನ ಚಿಂತನೆ ಬರವಣಿಗೆಯಲ್ಲಿ ಇವುಗಳಂಥ ಅನೇಕ ಪ್ರಭಾವಗಳು ಅನೇಕ ಬಗೆಗಳಲ್ಲಿ ಬಂದಿರಬೇಕು. ಬರಹಕ್ಕೆ ತರುವಂತೆ ಒತ್ತಾಯ ಮಾಡಿದ್ದ ಗೆಳೆಯರ ಕಾರಣದಿಂದ ಕೆಲವು ಲೇಖನಗಳು ಇಲ್ಲಿ ಅಕ್ಷರರೂಪ ಕಂಡಿವೆ.
ಈ ಪುಸ್ತಕದ ಕೊನೆಯ ಭಾಗದ ಲೇಖನಗಳು ಉಳಿದ ಲೇಖನಗಳ ರೀತಿ, ಸ್ವರೂಪಕ್ಕೆ ಹೊಂದುವುದಿಲ್ಲವೆಂದು ಮೇಲುನೋಟಕ್ಕೆ ಓದುಗರಿಗೆ ಅನ್ನಿಸುವುದು ಸಹಜ. ಆದರೆ ಸಂಶೋಧನೆಯಲ್ಲಿ `ಎಂಪಿರಿಸಿಸ್ಟ್’ ಮಾದರಿಗೆ ಇರುವ ಮಿತಿಯನ್ನು ಗುರುತಿಸಲು ಪ್ರಾರಂಭದ ನನ್ನ ಅಧ್ಯಯನದಿಂದಲೂ ಒಂದು ಪ್ರಯತ್ನ ನಡದೇ ಇತ್ತು. ಕನ್ನಡ ಇತಿಹಾಸ/ಸಂಸ್ಕೃತಿ ಸಂಶೋಧನೆಯಲ್ಲಿ ಈ ಮಾದರಿಯು ಈಗಲೂ ಜನಪ್ರಿಯವಾದ ಪರಂಪರಾಗತ ಮಾದರಿಯಾಗಿದೆ. ಪ್ರಾಚೀನ ಸಂಸ್ಕೃತಿಯ ಶಾಸನವೆಂಬ ಬರಹಗಳನ್ನು ಹಾಗೆ ಏಕಾಏಕಿ ಸತ್ಯವೆಂದಾಗಲೀ, ವಾಸ್ತವದ ನಿರೂಪಣೆಗಳೆಂದಾಗಲೀ ಭಾವಿಸಲು ಸಾಧ್ಯವಿಲ್ಲ. ಬಹುಪಾಲುಕಡೆ ಅಕ್ಷರಗಳ ನಡುವಣ ಖಾಲಿ ಸ್ಥಳದಲ್ಲಿ ವಾಸ್ತವವನ್ನು ಹುಡುಕಬೇಕಾಗುತ್ತದೆ. ಸಂಶೋಧಕನ ಸೃಜನಶೀಲತೆ, ವ್ಯುತ್ಪತ್ತಿಗಳನ್ನು ಇಂಥ ಚಿಂತನೆಯು ಅಪೇಕ್ಷಿಸುತ್ತದೆ. ಆ ರೀತಿಯ ಸಂಶೋಧನೆಯ ವಿನ್ಯಾಸ ಈಗ ಅತ್ಯಂತ ಅವಶ್ಯಕವಾಗಿದೆ. ನಮ್ಮಲ್ಲಿ ಜನಪದ ಅಭಿವ್ಯಕ್ತಿ ಮತ್ತು ಪ್ರಾಚೀನ ಶಾಸನ ಮುಂತಾದ ಬರವಣಿಗೆಗಳನ್ನು ವಿಶ್ಲೇಷಣೆ ಮಾಡುವ ರೀತಿಯು ಹೊಸಹಾದಿಯನ್ನು ಹುಡುಕಬೇಕಾಗಿದೆ.
ಈ ಭಾಗದ ಇನ್ನೂ ಕೆಲವು ಲೇಖನಗಳು ಪ್ರಸ್ತುತ ಸಮಸ್ಯೆಗಳಾದ ಮೀಸಲಾತಿ, ಮತ್ತು ಮಹಿಳೆಯರ ಸಮಸ್ಯೆಯನ್ನು ಕುರಿತು ಯೋಚಿಸಿದಂಥವು.
ಇಲ್ಲಿಯ ಬಹುಪಾಲು ಲೇಖನಗಳು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ ಹೋದಂತೆ ಹೊಳಹುಗಳನ್ನು ಕೊಡುತ್ತ ಹೋದವುಗಳು. ನನ್ನ ಇಷ್ಟು ದಿನಗಳ ವಿದ್ಯಾರ್ಥಿ ಸಮುದಾಯಕ್ಕೆ ನಾನು ಮೊದಲ ಕೃತಜ್ಞತೆಗಳನ್ನು ಹೇಳಬೇಕು.
ನನ್ನ ಆಲೋಚನೆಗಳ ಜೊತೆಗೆ ಸಂವಾದ ಮಾಡಿದ, ಸಂಕಟದ ಕ್ಷಣಗಳಲ್ಲಿ ಜೊತೆಗಿದ್ದ ಗೆಳೆಯರನ್ನು ನೆನೆಯುವುದು ಧರ್ಮವೆಂದು ಭಾವಿಸಿದ್ದೇನೆ. ಸಾಕ್ಷಿಪ್ರಜ್ಞೆಯಂತೆ ನನ್ನೊಳಗೆ ಈಗಲೂ ಇರುವ ಇಬ್ಬರು ಕಿರಂ ಹಾಗೂ ಶ್ರೀನಿವಾಸರಾಜು ಅವರು, ನನ್ನ ಅಂತರಂಗದಲ್ಲಿ ಉಳಿದ ಗುರು, ಅಜ್ಞಾತವಾಸಿ ಕೆವಿಎನ್, ಗುರುಗಳಾದ ಬರಗೂರು, ಕೆ. ಮರುಳಸಿದ್ಧಪ್ಪ, ಗೆಳೆಯರಾದ ಎಚ್.ಎಸ್.ಆರ್, ಓಎಲ್ಎನ್, ದಂಡಪ್ಪ, ಸುಗತ, ಕೊಡಸೆ, ನಟರಾಜ್ ಹುಳಿಯಾರ್, ರಹಮತ್ ಅವರನ್ನು ನೆನಪಿಸಿಕೊಳ್ಳುವುದು ಋಣದ ಕಾರ್ಯ.
ಸಾಹಿತ್ಯದ ಚರ್ಚೆಯನ್ನು ನನ್ನೊಡನೆ ಚೇಷ್ಟೆ ಮಾಡುತ್ತಲೇ ಪ್ರೀತಿಯ ಕಾರ್ಯವೂ, ಲೀಲಾಜಾಲದ ಕ್ರಿಯೆಯೂ ಎನ್ನುವಂತೆ ಮಾಡುತ್ತಿರುವ ತುಂಟ ಗೆಳೆಯರಾದ ವಿಜಯಶಂಕರ, ಕೆ. ಸತ್ಯನಾರಾಯಣ ಮತ್ತು ವಿದ್ಯಾಶಂಕರ್ ಅವರನ್ನು ಇಲ್ಲಿ ನೆನಪಿಸಿಕೊಳ್ಳದಿದ್ದರೆ ಕರಕಷ್ಟ. ಇಲ್ಲಿಯ ಅನೇಕ ಲೇಖನಗಳನ್ನು ಸಮರ್ಪಕವಾಗಿಸಿದ ಎಚ್. ಶಶಿಕಲಾ ಅವರಿಗೆ ನನ್ನ ವಂದನೆಗಳು.
ಈ ಸಂಕಲನದ ಅನೇಕ ಹಳೆಯ ಲೇಖನಗಳನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ನನಗೆ ಗೊತ್ತಾಗದ ಹಾಗೆ ರವಿಯವರಿಗೆ ಕೊಟ್ಟು ಪ್ರಕಟವಾಗಬೇಕೆಂದು ಒತ್ತಾಯಿಸುತ್ತಿದ್ದ ಗೀತಾ ಹಾಗೂ ಇಲ್ಲಿಯ ಕೆಲವು ಬರಹಗಳ ವಿಷಯವನ್ನು ಕುರಿತು ಉತ್ಸಾಹದಿಂದ ಮಾತನಾಡುತ್ತಿದ್ದ ಎಂ.ಎಸ್. ಆಶಾದೇವಿ, ಹೇಮಾ ಅವರಿಗೂ ನನ್ನ ನಮನಗಳು.
ಮೈಸೂರಿನ ಹಿರಿಯ ಲೇಖಕರಾದ ಜಿ. ಎಚ್. ನಾಯಕ ಹಾಗೂ ಎನ್. ಬೋರಲಿಂಗಯ್ಯ ಅವರು ನನ್ನ ಮೇಲಿಟ್ಟ ಪ್ರೀತಿ ವಿಶ್ವಾಸಗಳು ನನ್ನ ಅಂತರಂಗವನ್ನು ಕಲಕಿವೆ. ಅವರಿಗೆ ನನ್ನ ಗೌರವದ ನಮಸ್ಕಾರಗಳು.
ಕನ್ನಡದ ಮುಖ್ಯ ಹಾಗೂ ವಿಭಿನ್ನ ಸಂವೇದನೆಗಳಾದ ಯು. ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ ಹಾಗೂ ದೇವನೂರ ಮಹಾದೇವ ಅವರ ಒಡನಾಟವು ಕನ್ನಡಕ್ಕಿರುವ ಸತ್ವವು ಎಷ್ಟು ಮಹತ್ವದ್ದು ಎಂದು ತಿಳಿಯುವಂತೆ ಮಾಡಿದೆ. ಆ ಗೌರವಕ್ಕಾಗಿ ಈ ಪುಸ್ತಕವನ್ನು ಅವರಿಗೆ ಕೊಡಮಾಡುವುದು ನನಗೆ ಅತ್ಯಂತ ಪ್ರೀತಿಯ ಕೆಲಸವಾಗಿದೆ. ಅಂತೆಯೇ ನನ್ನಲ್ಲಿ ವ್ಯಕ್ತಿತ್ವದ ಒಂದು ಭಾಗವಾದ ನಿಶ್ಶಬ್ದಕ್ಕೆ. ಇದು ನನ್ನನ್ನು ತಡೆಯುವಂತೆ, ತಾಳುವಂತೆ, ಸಮಭಾಗಿಯಾಗಿರುವಂತೆ, ಹೆಚ್ಚು ಮುನ್ನುಗ್ಗದಂತೆ, ಜೀವನವನ್ನು ನಿಶ್ಶಬ್ದವಾಗಿ ಅನುಭವಿಸುವಂತೆ ಮಾಡಿದೆ. ಅದೊಂದು ದೊಡ್ಡ ಹೆಣ್ಣುತತ್ವ. ಆದ್ದರಿಂದಲೇ ಅದು `ನಿಶ್ಶಬ್ದಿ’.
ಇಲ್ಲಿಯ ಅನೇಕ ಲೇಖನಗಳನ್ನು ಪ್ರಕಟಮಾಡಿದ ಎಲ್ಲ ಸಂಪಾದಕರಿಗೆ ನಾನು ನನ್ನ ಗೌರವವನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ.
ಅನಂತಮೂರ್ತಿಯವರ ಗೌರವಮಾಲಿಕೆಯ ಪ್ರಧಾನ ಸಂಪಾದಕರಾಗಿರುವ ಶ್ರೇಷ್ಠ ಇತಿಹಾಸಜ್ಞರಾದ ಎಸ್. ಶೆಟ್ಟರ್ ಅವರಿಗೂ, ಮಾಲಿಕೆಯ ಸಂಪಾದಕರಾಗಿರುವ ಇಸ್ಮಾಯಿಲ್ ಹಾಗೂ ರವಿಕುಮಾರ್ ಅವರಿಗೂ ನನ್ನ ವಂದನೆಗಳು.
ಅದೆಷ್ಟೋ ಕಾಲದಿಂದ ಲೇಖನಗಳನ್ನು ಪ್ರೀತಿಯಿಂದ ಜತನವಾಗಿಟ್ಟು ಈ ಪುಸ್ತಕದ ಪ್ರಕಟಣೆಯ ಸಕಲಭಾರವನ್ನು ಹೊತ್ತ ರವಿಕುಮಾರ್-ಚಂದ್ರಿಕಾ ಅವರಿಗೆ, ಪುಟವಿನ್ಯಾಸ ಮಾಡಿದ ಶ್ರೀಧರ್, ಮುಖಪುಟ ವಿನ್ಯಾಸ ಮಾಡಿದ ಗುರುಪ್ರಸಾದ್, ಸುಂದರವಾಗಿ ಮುದ್ರಿಸಿದ ಲಕ್ಷ್ಮೀ ಮುದ್ರಣಾಲಯದ ಸಿಬ್ಬಂದಿಗೂ ನನ್ನ ನಮಸ್ಕಾರಗಳು.
 
 
 

‍ಲೇಖಕರು avadhi

September 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Neela

    Sir,
    Nimma pustaka indina saalndharbhada jarooriyaagide. Odutteve mattu odisutteve. e avakaash kalpisida nimage manadumbi abhinandanegalu…
    Neela

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: