ಸಂಪು ಕಾಲಂ : ಪಂಪನನ್ನು ಓದಿಸುವ ತೇಜಸ್ವಿ


ಕನ್ನಡದ ರತ್ನತ್ರಯರು…. ಎಂದು ರಸಪ್ರಶ್ನೆಯಲ್ಲಿ ಪ್ರಶ್ನೆ ಕೇಳಿದರೆ ಥಟ್ಟನೆ ಬಜರ್ ಒತ್ತಿ “ಪಂಪ, ರನ್ನ, ಪೊನ್ನ” ಎಂದು ಮತ್ತು ಆದಿಕವಿ ಎಂದಾಕ್ಷಣ “ಪಂಪ” ಎಂದು ಹೇಳುವಷ್ಟು ಮಾತ್ರ ಪಂಪನ ಬಗ್ಗೆ ತಿಳಿದಿತ್ತು. ನಂತರ ನನಗೆ ಪಂಪನ ಕಿರು ಪರಿಚಯ ಮಾಡಿಸಿದ್ದು ನನ್ನ ಮೇಷ್ಟ್ರೇ ಆಗಿದ್ದ ನನ್ನ ಅಪ್ಪ.
ಆ ಪ್ರೌಢ (ಪ್ರೌಢ ಎನ್ನುವುದು ಮಾತಿನಲ್ಲಷ್ಟೇ ಎಂಬುದು ಈಗ ಅನಿಸುವ ವಿಷಯ ಎಂಬುದು ಬೇರೆ ಮಾತು!) ಶಾಲೆಯಲ್ಲಿ ಕನ್ನಡ ಬೋಧಿಕೆಯಲ್ಲಿ ಇರುತ್ತಿದ್ದ ಹಳೆಗನ್ನಡದ ಒಂದೆರಡು ಪುಟದ ಪಠ್ಯಗಳ ನಡುವೆ “ಸೂಳ್ಪಡೆಯಲಪ್ಪುದು ಕಾಣಾ ಮಹಾಜನಾಂಗದೊಳ್” ಎಂಬ ಪಂಪನ ಸಾಲುಗಳು. ಅದು ಯಾವುದೋ ಬೇರೆ ಭಾಷೆ ಅನಿಸುವಷ್ಟು ಹೊಸತಾಗಿದ್ದ ಹಳೆಗನ್ನಡ. ಆ ಸಾಲುಗಳು ಓದುವುದೇ ಒಂದು ರೋಮಾಂಚನ. ಒಬ್ಬರಿಗೊಬ್ಬರು ಆ ಪದ್ಯಗಳನ್ನು ಪಂದ್ಯಕಟ್ಟಿ ತಪ್ಪಿಲ್ಲದೆ ಓದಲು ಪ್ರಯತ್ನಿಸಿ ಸೋಲುವುದು, ನಗುವುದು ನಮಗೊಂದು ಆಟವಾಗಿ ಹೋಗಿತ್ತು.
ತರಗತಿಯಲ್ಲಿನ ಅಧ್ಯಾಪಕರು ಎಂಬುದನ್ನು ಮರೆತು (ಅಪ್ಪಾ ಎನ್ನುವುದನ್ನು ಮೊದಲೇ ಮರೆತು) ನಾನು ಸಂಪೂರ್ಣ ಮಹಾಭಾರತದ ಭಾಗವಾಗಿ ಹೋಗುತ್ತಿದ್ದುದು, ಅವರು ಪೂರ್ಣ ಪದ್ಯವನ್ನು ಒಮ್ಮೆ ನಿರರ್ಗಳವಾಗಿ, ಸೂಕ್ತ ರೀತಿಯಲ್ಲಿ… “ಕುಲಮನೆ ಮುನ್ನಂಮುಗ್ಗಡಿಸಿಪಿರೇಂಗಡ, ನಿಮ್ಮ ಕುಲಂಗಳಾಂತು ಮಾರ್ಮಲೆವವನನ್ ಅಟ್ಟಿ ತಿಂಬುವೆ, ಕುಲಂ ಕುಲಮಲ್ತು, ಚಲಂ ಕುಲಂ, ಗುಣಂ ಕುಲಂ, ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ, ಬಗೆವಾಗಳೀ ಕಲಹದೊಳಣ್ಣ, ನಿಮ್ಮ ಕುಲಮಾಕುಲಮಂ ನಿಮಗುಂಟುಮಾಡುಗುಂ” … ಎಂದು ಓದುತ್ತಿದ್ದಾಗ. ತಮಾಷೆಯೆಂದರೆ, ನಾವು ಓದಲು ಪ್ರಯತ್ನಿಸಿದಾಗ ಗ್ರೀಕೋ, ಲ್ಯಾಟಿನ್ ತರಹ ಅನಿಸಿದ್ದ ಸಾಲುಗಳು, ಅಪ್ಪ ಓದುವಾಗ ಒಂದಷ್ಟು ಸುಲಭವಾಗಿ ಅರ್ಥವಾಗಿ ಬಿಡುತ್ತಿತ್ತು.
ಆಗ ಹತ್ತಿದ ಪಂಪನನ್ನು ಓದಲೆಬೇಕೆಂಬ ನಿಶೆ ಅನೇಕ ಕಾರಣಗಳಿಂದ, ಸಂದರ್ಭಗಳಿಂದ ಹಿಂದಿನ ಬೆಂಚ್ ಸೇರಿಬಿಟ್ಟಿತ್ತು. ಆ ನಿಶೆಗೆ ಕಿಚ್ಚು ಹಚ್ಚಿ ಮತ್ತೆ ಉರಿವಂತೆ ಮಾಡಿದ್ದು ತೇಜಸ್ವಿಯವರ “ಪಂಪ (ಒಂದು ಮೌಲ್ಯ ವಿವೇಚನೆ)” ಎಂಬ ಒಂದು ಪುಟ್ಟ ಪ್ರಬಂಧ. ಪ್ರಬಂಧದ ಮೊದಲಲ್ಲೇ ಸೆಳೆಯುವುದು “ಒಂದು ಭಾಷೆಯಲ್ಲಿ ಬರುವ ಮೊದಲ ಸಮರ್ಥ ಕವಿಯ ಅರ್ಧಾಂಶವನ್ನು ಭಾಷೆಯೂ, ಭಾಷೆಯ ಅರ್ಧಾಂಶವನ್ನು ಕವಿಯೂ ಬೇಕುಬೇಕಾದ ಕಡೆಗೆ ತಿರುಗಿಸಲು ಸಾಧ್ಯವಾಗದ ಕೊಂಬೆಗಳಂತೆ ಯಾವುದೋ ಒಂದು ದಿಶೆಯಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿಸಿ ಬಿಡುತ್ತಾರೆ.” ಎಂಬ ವಾಕ್ಯ. ಎರಡು ಮೂರು ಪುಟಗಳ ಶಾರ್ಟ್ ಆದರೆ ಸ್ಟ್ರಾಂಗ್ ಆದ ಈ ಪ್ರಬಂಧ, ಯುಗದ ಕವಿ ಪಂಪ, ಇಂದಿಗೂ ಪ್ರಸ್ತುತ ಹೇಗೆ ಎನ್ನುವುದನ್ನು ಒಂದೇ ಒಂದು ಚಂಪೂ ವೃತ್ತದ ಉಲ್ಲೇಖದ ಮೂಲಕ ಪರಿಣಾಮಕಾರಿಯಾಗಿ ವಿವರಿಸುತ್ತದೆ. ಈ ಪ್ರಬಂಧ ‘ಜುಗಾರಿ ಕ್ರಾಸ್’, ‘ಕರ್ವಾಲೋ’ ಗಳಲ್ಲಿ ಬಿಂಬಿತವಾಗಿರುವ ತೇಜಸ್ವಿಯ ಸರಳ, ಸಾಮಾನ್ಯ ಭಾಷೆಗೆ ಸೆಡ್ಡು ಹೊಡೆಯುವಂತೆ ಕೊಂಚ ಸಂಕೀರ್ಣವೇ ಆಗಿದೆ. ಆದರೂ ಇದೊಂದು ಶೂರ್ ಶಾಟ್!
ಪ್ರಾಚೀನ ಕವಿಗಳು ಸೃಷ್ಟಿಸಿದ ಸಾಹಿತ್ಯಿಕ ಭಾಷಾವಾರು ಮೌಲ್ಯಗಳನ್ನು ತಿಳಿಯುವುದು ಇಂದಿನ ಬರಹಗಾರರಿಗೆ ಬಹಳ ಮುಖ್ಯ ಎಂಬ ಮಾತನ್ನು ಪ್ರತಿಪಾದಿಸುವುದಕ್ಕೆ ತೇಜಸ್ವಿ ಪಂಪಭಾರತದ ಮೊದಲ ಸನ್ನಿವೇಶವನ್ನೇ ತೆಗೆದುಕೊಳ್ಳುತ್ತಾರೆ. ಪಂಪಭಾರತದ ಚಂಪೂ ಪ್ರಾಕಾರವನ್ನು ಅಂದಿನ ಕಾಲದ ‘ಅನಿವಾರ್ಯ ಸಾಹಿತ್ಯ ಪ್ರಾಕಾರ” ಎಂದೇ ಕರೆಯುತ್ತಾರೆ. ಈ ತರ್ಕದ ಹಿಂದಿನ ಅವರ ಭಾವ ಸೂಚ್ಯವಾಗಿಲ್ಲ. ಅವರ ಆಯ್ಕೆಯ ಗದ್ಯ-ಪದ್ಯ ಮಿಶ್ರಿತವಾದ ಚಂಪೂವಿನ ಸಾಲುಗಳು ಇವು:
“ಮೃಗಯಾವ್ಯಾಜದಿನೊರ್ಮೆಶಂತನು ತೊಳಲ್ತರ್ಪಂ
ಪಳಂಚಲ್ಕೆ ತನ್ಮ್ರುಗಶಾಬಾಕ್ಷಿಯ
ಕಂಪುತಟ್ಟಿ ಮಧುಪಂಬೋಲ್ ಸೋಲ್ತು;
ಕಂಡೊಲ್ದು
ನಲ್ಮೆಗೆ ದಿಬ್ಯಂಬಿಡಿವಂತೆವೊಲ್ ಪಿಡಿದು;
“ನೀಂಬಾ ಪೋಪಮ್” ಎಂದಂಗೆ
ಮೆಲ್ಲಗೆ ತತ್ಕನ್ಯಕೆ ನಾಣ್ಚಿ
“ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ”
ಎಂಬುದುಂ”
ಈ ಸನ್ನಿವೇಶ ಮಹಾಭಾರತದ ಮೊಟ್ಟ ಮೊದಲ ಭಾಗಗಳಲ್ಲಿ ಒಂದು. ಶಂತನು ಮಹಾರಾಜ ಬೇಟೆಗೆಂದು ಅಲೆಯುತ್ತಿದ್ದಾಗ ದಾರಿಯಲ್ಲಿ ಸತ್ಯವತಿಯು ಕಂಡು ಆಕೆಯ ಸೌಂದರ್ಯಕ್ಕೆ ಮನಸೋತು, ತನ್ನೊಡನೆ ಹೋಗಲು ಕರೆಯುತ್ತಾನೆ. ಆಗ ಆ ಕನ್ನಿಕೆ ನಾಚಿ, ಹಾಗಾದರೆ ನನ್ನ ತಂದೆಯನ್ನು ಕೇಳಿ ಎಂದು ಹೇಳುತ್ತಾಳೆ. ಮೇಲಿನ ಸಾಲುಗಳ ಭಾವಾರ್ಥವಿದು.

ಮನುಷ್ಯನ ಎಷ್ಟೋ ಸೂಕ್ಷ್ಮ ಸಂವೇದನೆಗಳನ್ನು ಪಂಪ ಈ ಕೆಲವೇ ಸಾಲಿನ ಕಾವ್ಯದಲ್ಲಿ ಎಷ್ಟು ಅಪೂರ್ವವಾಗಿ ಚಿತ್ರಿಸುತ್ತಾನೆ ಎಂಬುದು ಇಲ್ಲಿ ಗಮನಾರ್ಹ. ಆ ಸಾಲುಗಳನ್ನು ಗಮನಿಸಿದರೆ, ಅಲ್ಲಿ ಗದ್ಯ, ಪದ್ಯ, ನಾಟಕ ಎಲ್ಲಾ ಪ್ರಾಕಾರಗಳನ್ನು ಮನೋಜ್ಞವಾಗಿ ಪಂಪ ಬಳಸಿಕೊಂಡಿದ್ದಾನೆ. ಜೊತೆಗೆ ಹಾಸ್ಯ, ಪ್ರೇಮ, ಕಾಮ, ಪುರುಷ ಪ್ರಧಾನ ಅಧಿಕಾರಗಳು, ಆಶ್ಚರ್ಯ, ಆನಂದ ಇತ್ಯಾದಿ ಸಾಕಷ್ಟು ವೈವಿಧ್ಯ ವಿಚಾರಗಳನ್ನು ಬಹಳ ಚುಟುಕಾಗಿ, ಚುರುಕಾಗಿ ವಿವರಿಸುತ್ತಾನೆ. ಈ ಸಾಲುಗಳನ್ನು ತೇಜಸ್ವಿ ಮೂರು ಭಾಗಗಳನ್ನಾಗಿ ವಿಭಾಗಿಸಿ ವಿವರಿಸುತ್ತಾರೆ. ಮೊದಲೆರಡು ಸಾಲುಗಳು ಇಲ್ಲಿ ಅಮುಖ್ಯ. ನಂತರದ ಮೂರು ಸಾಲುಗಳು ಶಂತನುವಿನ ಕಾಮಿಸುವಿಕೆ, ಮತ್ತು ಮೋಡಿಗೊಳಗಾದ ಸಂದರ್ಭವನ್ನು ಬೆರಗುಗೊಳಿಸುವಂತಹ ರೂಪಕಗಳ ಮೂಲಕ ಹೇಳುತ್ತದೆ. ಮೂರನೆಯ ಭಾಗ ನಾಟಕೀಯ ಸಂಭಾಷಣೆ.
ಬಹುಶಃ ಇತರ ಪ್ರಾಕಾರದ ಬರಹಗಳಾಗಿದ್ದರೆ ಸುಮಾರು ಪುಟಗಟ್ಟಲೆ ವಿವರಿಕೆ ಬೇಡುವ ಸಾಕಷ್ಟು ಸೂಕ್ಷ್ಮ ಸಂವೇದನೆಗಳನ್ನು, ಭಾವಗಳನ್ನು ಪಂಪ ಕೆಲವೇ ಸಾಲುಗಳಲ್ಲಿ ಅದ್ಭುತವಾಗಿ ಹಿಡಿದಿಡುತ್ತಾನೆ. ನನಗೆ ಮೊದಲು ಗೊತ್ತಿರದ, ತೇಜಸ್ವಿ ತಿಳಿಸಿದ ಮತ್ತೊಂದು ಕಥೆಯ ಭಾಗ ಎಂದರೆ, ಪರಾಶರ ಮುನಿಯ ಕಥೆ. ಹೊಳೆಯನ್ನು ದಾಟಿಸು ಎಂದು ಪರಾಶರ ಮುನಿ ಸತ್ಯವತಿಯನ್ನು ಕೇಳಿದಾಗ “ಸಾಸಿರ್ವರೇರಿದೊಡಲ್ಲದೀಯೋಡಂ ನಡೆಯದು” (ಸಾವಿರ ಮಂದಿ ಏರದೆ ಈ ದೋಣಿ ಸಾಗದು) ಎನ್ನುತ್ತಾಳೆ ಆಕೆ. ಆಗ ಪರಾಶರ ನಾನೊಬ್ಬನೇ ಸಾವಿರ ಮಂದಿಯ ಭಾರ ತೂಗುತ್ತೇನೆ, ಎಂದು ಹೇಳಿ ದೋಣಿ ಏರುತ್ತಾನೆ. ನಂತರ ಸತ್ಯವತಿಯನ್ನು ಕೂಡಿ ವೇದವ್ಯಾಸನ ತಂದೆಯಾಗುತ್ತಾನೆ. ಪುನಃ ಕನ್ಯೆಯಾಗಲು ಸತ್ಯವತಿಗೆ ವರವನ್ನು ಕೊಡುತ್ತಾನೆ. ಈ ಕಥೆಯನ್ನು ವಿವರಿಸುತ್ತಾ, ತೇಜಸ್ವಿ ನಮಗೆ ತಿಳಿಸುವುದು ಪಂಪನ ಬರಹಾ ಕೌಶಲ್ಯದ ಬಗ್ಗೆ.
ಪರಾಶರನ ಅತೀಂದ್ರಿಯ ಶಕ್ತಿ ಅರಿತ ಸತ್ಯವತಿ, ಆತ ಕೇಳಿದೊಡನೆ ಮಾತಿಲ್ಲದೆ ಗಂಧರ್ವ ವಿವಾಹಕ್ಕೆ ಒಪ್ಪುತ್ತಾಳೆ. ಆದರೆ, ಶಂತನು “ನೀಂಬಾ ಪೋಪಮ್” ಎಂದು ಹಿಂದೂ ಮುಂದೂ ವಿಚಾರಿಸದೆ ಕರೆದಾಗ ಆತನ ಮಿತಿಯನ್ನು, ಅಲ್ಪಮತಿಯನ್ನು ಅರಿತ ಸತ್ಯವತಿ ತಕ್ಷಣ “ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ” ಎಂದು ಜಾರಿಕೊಳ್ಳುತ್ತಾಳೆ. ಸತ್ಯವತಿಯ ಈ ಸೂಕ್ಷ್ಮಗ್ರಾಹೀ ಮತಿಯನ್ನು ಶಂತನನ ಕಾಮಾಂಧತೆಯನ್ನು ಸೂಕ್ಷ್ಮವಾಗಿಯೂ, ತೀಕ್ಷ್ನವಾಗಿಯೂ ಪಂಪ ವಿವರಿಸುತ್ತಾನೆ. ಈ ವಿಶ್ಲೇಷಣೆಯನ್ನು ತೇಜಸ್ವಿಯವರು ವರ್ಣನಾತ್ಮಕವಾಗಿ ವಿವರಿಸಿದ್ದಾರೆ.
ಒಬ್ಬ ಬರಹಗಾರನಿಗೆ ಬೇಕಾದ ಪಂಪನ ಇಂತಹ ಸೂಕ್ಷ್ಮ ಗ್ರಾಹೀ ಮನಸು, ಪಾತ್ರಾವಾಹನಾ ಸಂವೇದನೆ ಮತ್ತು ಹೆಚ್ಚು ವಿವರಗಳನ್ನು ವಾಚ್ಯವಾಗದಂತೆ ಸೂಚ್ಯವಾಗಿ ವಿವರಿಸುವ ಭಾಶಾಕೌಶಲ್ಯ ಎಲ್ಲವೂ ಚಿರಂತನವಾದದ್ದು, ಕಾಲಾತೀತವಾದದ್ದು ಎಂಬುದು ತೇಜಸ್ವಿಯವರ ಸರಿಯಾದ ಗ್ರಹಿಕೆ. ಪಂಪನ, ಒಂದು ಪುಟ್ಟ ಚಂಪೂ ವೃತ್ತ ನಮ್ಮನ್ನು ಇಷ್ಟೆಲ್ಲಾ ಕಾಡುವಂತೆ ಮಾಡಿ ಆತನ ಇನ್ನೂ ಹೆಚ್ಚಿನ ಓದಿನ ವಿಶಾಲ ಸಾಗರಕ್ಕೆ ನಮ್ಮನ್ನು ತೇಲಿ ಬಿಡುವುದು ತೇಜಸ್ವಿಯ ಪ್ರಬಂಧದ ಆಶಯ.
 
 

‍ಲೇಖಕರು G

January 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

 1. sunil rao

  Pampa…aata nijakkoo mahaapurusha!!
  Pampa bharatha nanna ati mecchina odu…
  Barahada topic bahala ishta aaytu.

  ಪ್ರತಿಕ್ರಿಯೆ
 2. ನೀಹಾರಿಕಾ

  ‘ಕಾಣಾ ಮಹಾಜಿರಂಗದೊಳ್ ‘ ಎಂದಿರಬೇಕು .ನೀವು ಬರೆದಿರುವಂತೆ’ ಮಹಾಜನಾಂಗ’ ಅಲ್ಲ. ಮಹಾಯುದ್ಧದಲ್ಲಿ ಪ್ರತಿಯೊಬ್ಬರ’ ಸರದಿಯೂ’ ಬರುತ್ತದೆ ಎಂದರ್ಥ. ಹಾಗೆಯೇ ‘ಪ್ರಾಕಾರ ‘ ಅಲ್ಲ ‘ ಪ್ರಕಾರ’ ಆಗಬೇಕು. ಪ್ರಾಕಾರ ಅಂದರೆ ಆವರಣದ ಗೋಡೆ ಅಂತ ಅರ್ಥವಾಗುತ್ತದೆ.

  ಪ್ರತಿಕ್ರಿಯೆ
 3. samyuktha

  Thanks Niharika avare. Tejaswi avaru tamma lekhanadalli ‘Praakaara’ ende upayogisiddaare.

  ಪ್ರತಿಕ್ರಿಯೆ
 4. ಜಗದೀಶ್ ಕೊಪ್ಪ

  ಸೂಳ್ಪಡಿಯಲಪ್ಪುದ ಕಾಣಾ ಮಹಾಜಿ
  ರಂಗದೋಳ್. ಇದು, ದುರ್ಯೋಧನ ಕುರುಕ್ಷೇತ್ರ ಯುದ್ದಕ್ಕೆ ಭೀಷ್ಮನಿಗೆ ಸೇನಾಧಿಪತಿಯಾಗಿ ಪಟ್ಟ ಕಟ್ಟಿದಾಗ ಕರ್ಣ ಮುನಿಸಿಕೊಳ್ಳುತ್ತಾನೆ. ತನ್ನಂತಹ ಯುವಕನಿಗೆ ಬಿಟ್ಟು ಮುದಕನಿಗೆ ಪಟ್ಟ ಕಟ್ಟಲಾಯಿತೆಂದು ಮೊದಲಿಸಿದ ಕರ್ಣ ನಿಗೆ ಭೀಷ್ಮ ‘ ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಳುಪಾಗದು” ಎನ್ನುತ್ತಾ ನಿನಗೂ ಯುದ್ಧರಂಗದಲ್ಲಿ ಸರದಿ ಬರುತ್ತದೆ ಎಂಬ ಭಾವಾರ್ಥದಲ್ಲಿ ಹೇಳಿದ ಮಾತು.

  ಪ್ರತಿಕ್ರಿಯೆ
 5. Ishwara Bhat

  ಬಹಳ ಚೆನ್ನಾಗಿದೆ ಬರಹ. ಪಂಪಭಾರತ, ಗದಾಯುದ್ಧ,ಕುಮಾರವ್ಯಾಸಭಾರತ ಕನ್ನಡದ ಅನರ್ಘ್ಯ ರತ್ನಗಳು.

  ಪ್ರತಿಕ್ರಿಯೆ
 6. Anil Talikoti

  ‘ಸಂಪಿ’ನಿಂದ ‘ಪೊನ್ನ’ರಳಿಸಲು ‘ಪಂಪು’ ‘ರನ್ನ್’ ಮಾಡಿದಂತೆ -ತುಂಬಾ ಚೆನ್ನಾಗಿದೆ

  ಪ್ರತಿಕ್ರಿಯೆ
 7. Raj

  There are many many immortal works in Halegannada, but because of our own prejudices and inferiority complexes instead of being proud and let the world know about them the last couple of generations (lets not even talk about the current generation) have lost it completely and I feel very sad about the fact that we may lose this rich literature completely if the current trend continues. Hoping at some point in time we, as a community realize this and start looking at our rich heritage again freshly..

  ಪ್ರತಿಕ್ರಿಯೆ
 8. ರೋಹಿತ್

  ಇತ್ತೀಚೆಗೆ ಪುಸ್ತಕದಂಗಡಿಗೆ ಹೋಗಿದ್ದಾಗ ತೇಜಸ್ವಿಯವರ ಪುಸ್ತಕವೊಂದನ್ನು ಆಯ್ದುಕೊಂಡು ಪುಟ ತಿರುವುತ್ತಿದ್ದಾಗ ನೀವು ಈ ಲೇಖನದಲ್ಲಿ ಉಲ್ಲೇಖಿಸಿರುವ ಭಾಗವನ್ನು ಓದಿದ್ದೆ! ಆದರೆ, ಆಗ ಆ ಪುಸ್ತಕವನ್ನು ಖರೀದಿಸಿರಲಿಲ್ಲ.
  ಈಗ, ಇಲ್ಲಿ ನೀವು ಅದರ ಬಗ್ಗೆಯೇ ಲೇಖನ ಬರೆದಿದ್ದೀರಿ! ಆಶ್ಚರ್ಯ! 🙂
  ’ಪ್ರೌಢ’ಶಾಲೆಯ ಹಳೆಗನ್ನಡವನ್ನು, ಪಂಪನನ್ನು, ತೇಜಸ್ವಿಯನ್ನು ಮತ್ತೊಮ್ಮೆ ನೆನಪಿಸಿದ್ದಕ್ಕೆ ವಂದನೆಗಳು ಮೇಡಂ… 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: