ಸಂಧ್ಯಾ ಹೊನಗುಂಟಿಕರ್ ಓದಿದ ‘ಎಂದೆಂದಿಗೂ’

‘ಎಂದೆಂದಿಗೂ’ ಮುಗಿಯದ ಮಾತುಗಳು

ಸಂಧ್ಯಾ ಹೊನಗುಂಟಿಕರ್

ಹಲವು ಕಥೆಗಳನ್ನು ಬರೆದು ಯಶಸ್ವಿಯಾದರೂ ಬರವಣಿಗೆಯ ಖುಷಿಯಯನ್ನು ಅನುಭವಿಸಲಾರದೆ ಕಾದಂಬರಿ ಬರೆದವರು ಅನೇಕರು ಸಿಗುತ್ತಾರೆ.ಕತೆಯ ವಿಸ್ತೃತ ರೂಪವೆ ಕಾದಂಬರಿ ಎಂದು ಹೇಳಲಾಗದು. ಶ್ರೀಧರ ಬಳೆಗಾರ ರೆಂಬ ಸಾಹಿತಿ ಕಥೆಯೆಂದರೆ ಒಂದು ಮರ. ಕಾದಂಬರಿಯೆಂದರೆ ಒಂದು ಕಾಡು. ಹಲವು ಮರಗಳ ನಡುವಿನ ಅವಿನಾಭಾವ ಸಂಬಂಧವನ್ನು ಬಿಂಬಿಸುವ ಕಾಡು ಕಾದಂಬರಿಗೆ ಅತ್ಯಂತ ಸಮರ್ಪಕವಾಗಿ ಹೋಲುತ್ತದೆ ಎಂದು ಹೇಳಿದ್ದಾರೆ .

ಡಾ. ಸತ್ಯನಾರಾಯಣ ಆಲದರ್ತಿ ಅವರು ಅನೇಕ ವರುಷಗಳ ಹಿಂದೆಯೇ ಅನೇಕ ಸಣ್ಣ ಕತೆಗಳನ್ನು ಬರೆದರೂ ಸಹ ಕಥಾಸಂಕಲನವನ್ನು ಪ್ರಕಟಿಸದೆ ಬಹು ದೀರ್ಘ ಸಮಯದ ನಂತರ ಕಾದಂಬರಿಯನ್ನು ಬರೆದು ಮೊದಲು ಪ್ರಕಟಿಸುತ್ತಿರುವುದು ಆಶ್ಚರ್ಯವೇ ಹೌದು. ಅಲ್ಲದೆ ಇಷ್ಟು ಸುದೀರ್ಘವಾದ ಅಂತರದ ನಂತರವೂ ಒಂದು ಕಾದಂಬರಿಯನ್ನು ಬರೆಯಲು ಬೇಕಾದ ಶಿಸ್ತು, ಜ್ಞಾನ, ವ್ಯವಧಾನ ಎಲ್ಲವನ್ನೂ ಅನ್ವಯಿಸಿಕೊಂಡು ಬರೆದಿರುವುದು ಬಹಳ ಮಹತ್ತ್ವದ್ದು ಎನಿಸುತ್ತದೆ.

‘ಎಂದೆಂದಿಗೂ’ ಈ ಕೃತಿಯಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಹಲವಾರು ಪ್ರಮುಖ ಪಾತ್ರಗಳಿದ್ದು ಎಲ್ಲವೂ ಉತ್ತಮ ಪುರುಷದಲ್ಲಿಯೇ ಕಾದಂಬರಿಯನ್ನು ನಿರೂಪಿಸುತ್ತಾ ಹೋಗುತ್ತದೆ. ಈ ಕಾದಂಬರಿಯು ಬಹುಮುಖ್ಯವಾಗಿ ಅಂತರ್ಜಾತಿಯ ವಿವಾಹದ ದುರಂತ ಕಥೆಯನ್ನು ಹೇಳುತ್ತದೆ ಎಂದೆನಿಸಿದರೂ ಅದರ ಒಡಲೊಳಗೆ ಅನೇಕ ವೈಚಾರಿಕ ಅಂಶಗಳನ್ನು, ಸಿದ್ಧಾಂತಗಳನ್ನು, ನಂಬಿಕೆಗಳನ್ನು, ಮೂಢನಂಬಿಕೆಗಳನ್ನು, ಇತಿಹಾಸ, ಸಂಸ್ಕೃತಿ ಮುಂತಾದವುಗಳ ದರ್ಶನ ಮಾಡಿಸುತ್ತಾ ಹೋಗುತ್ತದೆ. ಅಲ್ಲದೆ ಓದುಗನೊಂದಿಗೆ ಸಂವಾದಿಸುತ್ತಾ, ಚರ್ಚಿಸುತ್ತಾ ಸಾಗುತ್ತವೆ.

ಯೌವನದ ತುರಿಯಾವಸ್ಥೆಯಲ್ಲಿಯ ಪ್ರೇಮ ಕಾಮದ ಅನೇಕ ಸನ್ನಿವೇಶಗಳು, ಘಟನೆಗಳು ಅತ್ಯಂತ ಸಾಮಾನ್ಯವಾಗಿ ಸರಳವಾಗಿ ಚಿತ್ರಿತಗೊಂಡರೂ ಹಿನ್ನೆಲೆಯಲ್ಲಿ ಪ್ರಾದೇಶಿಕವಾದ ,ಐತಿಹಾಸಿಕ, ಸೈದ್ಧಾಂತಿಕ ದೃಶ್ಯಗಳನ್ನು ಕೃತಿಕಾರ ಕಟ್ಟಿಕೊಡುತ್ತಾ ಬರುವುದು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ ಎನ್ನಬಹುದು ಹಂಪಿಯಲ್ಲಿ ಪ್ರೇಮಿಗಳಾದ ಡಾ. ವೇಣುಗೋಪಾಲ ಹಾಗೂ ವೈದೇಹಿಯು ಸುತ್ತಾಡುವಾಗ ಹಂಪಿಯ ಸಾಂಸ್ಕೃತಿಕ , ಐತಿಹಾಸಿಕ ವೈಭವವನ್ನು ನೆನಪಿಸುತ್ತಲೆ ಇಂದು ನಾವು ಅವುಗಳ ಮೌಲ್ಯವನ್ನು ಕಾಪಿಡುವಲ್ಲಿ ಸೋತಿದ್ದೆವೆಂಬ ಹಳಹಳಿಕೆಯೂ ಚಿತ್ರಿತವಾಗಿದೆ.

ಇಂದಿನ ಕಾರ್ಪೊರೇಟ್ ಬದುಕಿನಲ್ಲಿ ಎಲ್ಲವೂ ವಲಯಗಳಂತೆ ವೈದ್ಯಕೀಯ ವೃತ್ತಿಯೂ ತನ್ನ nobility ಯನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ಇಲ್ಲಿಯ ಕಥಾನಾಯಕ ಒಬ್ಬ ವೈದ್ಯನಾಗಿದ್ದು ಬದುಕಿನುದ್ದಕ್ಕೂ ಆದರ್ಶ, ಪ್ರಾಮಾಣಿಕತೆ, ಮಾನವೀಯತೆಯನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರುತ್ತಾನೆ. ಬಹುಶಃ ಮುಂದಿನ ದಿನಗಳಲ್ಲಿ ಇಲ್ಲಿಯ ಪ್ರಧಾನ ಪಾತ್ರವಾದ ಡಾ ವೇಣುಗೋಪಾಲ್ ಪವಾಡ ಪುರುಷನಾಗಿ ಓದುಗನಿಗೆ ಪರಿಚಯವಾಗುವ ಸಾಧ್ಯತೆಗಳಿವೆ. ಇಂತಹ ಪಾತ್ರಗಳ ನಿರ್ಮಿತಿಯ ಸಾಧ್ಯತೆ, ಅಸಾಧ್ಯತೆಗಳ ಬಗ್ಗೆ ನನ್ನ ಅಭಿಪ್ರಾಯವಲ್ಲ. ಅತ್ಯಂತ ಕೆಲವೇ ವರುಷಗಳಲ್ಲಿ ವೈದ್ಯಕೀಯ ವೃತ್ತಿಯಲ್ಲಿ ಅಘಾದವಾದ ಸ್ಥಿತ್ಯಂತರವನ್ನು ಕಂಡು ದಿಗ್ಭ್ರಮೆಗೊಂಡಿರುವೆ ಎಂದರೆ ತಪ್ಪಾಗಲಿಕ್ಕಿಲ್ಲ. ನಿಜ. ವೇಣುಗೋಪಾಲನೆಂಬ ವೈದ್ಯ ಕೆಲವೇ ವರ್ಷಗಳ ಹಿಂದೆ ಮಾನವೀಯತೆಯನ್ನು ಬಿಂಬಿಸುವ ವೈದ್ಯಕೀಯ ಕ್ಷೇತ್ರದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ.ಈ ಪಾತ್ರದ ಮೂಲಕ ಆ ಕಾಲದ ಮತ್ತು ಆ ಸಂದರ್ಭಗಳ ಒಟ್ಟು ಬದುಕಿನ ಮೌಲ್ಯವನ್ನು ಹಿಡಿದಿಟ್ಟಿರುವ ಕಾರಣಕ್ಕೆ ಈ ಕೃತಿ ಓದಲು ಅನಿವಾರ್ಯವೆನಿಸುತ್ತದೆ .

ವೈದೇಹಿ ಎಂಬುವವಳು ಡಾ. ವೇಣು ಅವರನ್ನು ಅತಿಯಾಗಿ ಪ್ರೀತಿಸುವ ಮೇಲ್ಜಾತಿಯ ಹುಡುಗಿ. ಕುಟುಂಬವನ್ನು, ಸಮಾಜವನ್ನು ಎದುರಿಸಲಾಗದೆ ತನ್ನ ಪ್ರೀತಿಯನ್ನು ತ್ಯಾಗ ಮಾಡುವ ಅಸಹಾಯಕ ಹಾಗೂ ದುರ್ಬಲವಾದ ಪಾತ್ರ. ಆದರೆ ವಿವಾಹವೆಂಬ ವ್ಯವಸ್ಥೆಯ ಆಚೆ ಆಕೆಯ ಪ್ರೇಮದ ಕಲ್ಪನೆ, ನಂಬಿಕೆ ಮಹತ್ತರವಾದುದು . ಅನಿವಾರ್ಯತೆಗೆ ಮದುವೆಗೆ ಕೊರಳೊಡ್ಡಿ ತಾನು ಹುಟ್ಟಿದ ಮನೆಯವರನ್ನೂ ನೋಯಿಸದೆ ಮತ್ತು ತಾನು ಕಟ್ಟಿಕೊಂಡ ಕುಟುಂಬಕ್ಕೂ ತೊಂದರೆಯಾಗದಂತೆ ಸಹಕರಿಸುವಂತಹ ಸಂಯಮ ಬಹುಶಃ ಭಾರತದ ಅನೇಕಾನೇಕ ಮಹಿಳೆಯರ ಸ್ಥಿತಿಯಾಗಿದೆ.

ಅಪ್ಪಟ ಪ್ರೀತಿಯನ್ನು ಹುಗಿದಿಟ್ಟು ತನ್ನ ಉಳಿದ ಬದುಕಿನ ನಾಟಕದಲ್ಲೂ ಪರಿಪೂರ್ಣ ಪಾತ್ರ ನಿರ್ವಹಿಸುವುದು ಹೆಣ್ಣಿಗೆ ಮಾತ್ರ ಸಾಧ್ಯ. ಇಬ್ಬರ ಪ್ರೇಮವೂ ಪರಿಶುದ್ಧವಾಗಿದ್ದು ಡಾ .ವೇಣು ಅದನ್ನು ತನ್ನೆದೆಯೊಳಗೆ ಕಾಪಿಟ್ಟು ಅವಿವಾಹಿತನಾಗಿ ಉಳಿಯುತ್ತಾನೆ. ಆದರೆ ವೈದೇಹಿ ತನಗಿಷ್ಟವಿಲ್ಲದಿದ್ದರೂ ಮದುವೆ, ಕುಟುಂಬ ಎಂಬ ಅನಿವಾರ್ಯತೆಗೆ ಬಾಗುತ್ತಾಳೆ.

ಅಪ್ಪಟ ಪ್ರೇಮಿಯಾಗಿ ತನ್ನಿಚ್ಛೆಯಂತೆ ಉಳಿಯುವಲ್ಲಿ ಪುರುಷ ಮತ್ತು ಮಹಿಳೆಗೆ ಇರುವ ಅವಕಾಶದ ಮಿತಿ ಅಥವಾ ತಾರತಮ್ಯ ಇಲ್ಲಿ ಸ್ಪಷ್ಟವಾಗಿ ಬಿಂಬಿತವಾಗಿದೆ. ಗಂಡು ಮದುವೆಯಾಗದೆ ಉಳಿದರೆ ಕುಟುಂಬ ವ್ಯವಸ್ಥೆಗೆ ಮಹತ್ವದ ಧಕ್ಕೆ ಬಾರದು.ಆದರೆ ಹೆಣ್ಣು ಮದುವೆಯಾಗದೆ ಉಳಿದರೆ ಆಕೆ ಎಲ್ಲಿ ಇರಬೇಕು? ತವರಿನಲ್ಲಿ ಅವಳಿಗೆ ಸ್ಥಳವಿದೆಯೇ? ಸಮಾಜದಲ್ಲಿ ಒಬ್ಬ ಹೆಣ್ಣು ಮಗಳು ಒಂಟಿಯಾಗಿ ಬದುಕುವುದು ಎಷ್ಟು ವಿಹಿತ? ಎಂಬ ಹಲವಾರು ಪ್ರಶ್ನೆಗಳು ಎದುರಾಗುತ್ತವೆ.ಹೀಗಾಗಿ ಒಟ್ಟು ಸಮಾಜದ ಕುಟುಂಬದ ಸಾಮಾಜಿಕ ಕಟ್ಟಳೆಗಳು ಮಹಿಳೆಗೆ ಮಾತ್ರ ನಿರ್ಮಿತವಾದವು ಎಂಬ ಭಾವನೆ ವೈದೇಹಿಯ ಪಾತ್ರ ಸೂಚ್ಯವಾಗಿ ಸ್ಪಷ್ಟಗೊಳಿಸುತ್ತದೆ.

ಫೇಮಿಬಾಯಿ ಈ ಕೃತಿಯ ಮತ್ತೊಂದು ಮುಖ್ಯ ಸ್ತ್ರೀ ಪಾತ್ರ .ಲಂಬಾಣಿ ಜನಾಂಗದ ಹೆಣ್ಣು ಮಗಳೊಬ್ಬಳು ಅದೇ ಜನಾಂಗದ ದುಷ್ಟ ಪುರುಷನ ಕಾಮುಕತನಕ್ಕೀಡಾಗಿ ಗರ್ಭವರ್ತಿಯಾದಾಗ ಭ್ರೂಣದಲ್ಲಿಯೇ ಅದರ ಕತ್ತನ್ನೊತ್ತದೆ ಹೆಣ್ಣು ಜೀವಕ್ಕೊಂದು ಜನ್ಮವಿತ್ತದ್ದು ಒಂದು ಸಾಹಸವೇ ಸರಿ. ಆದರೆ ಸಮಾಜದ ಅಪವಾದಕ್ಕೆ ಬೆದರಿ ನೇರವಾಗಿ ಮಗುವನ್ನು ಪೋಷಿಸಲಾಗುವುದಿಲ್ಲ. ಅದೇ ಮಗು ಡಾ. ವೇಣು ಅವರಲ್ಲಿ ಬೆಳೆಯುತ್ತಿರುವುದನ್ನು ತಿಳಿದು ತನ್ನ ತಾಯ್ತನವನ್ನು ಧಾರೆ ಎರೆದು ಮಗುವನ್ನು ಪೋಷಿಸುತ್ತಾಳೆ. ಹೀಗೆ ಪರ್ಯಾಯ ಮಾರ್ಗವಾಗಿ ತಾಯಿತನವನ್ನು ಅನುಭವಿಸುವ ಪ್ರೇಮಿಬಾಯಿ ಎಂಬ ಪಾತ್ರದಲ್ಲೂ ‘ತಾಯಿ’ ಎಂಬ ಸ್ಥಾನಮಾನದ ಕುರಿತಾಗಿ ಬಹಳ ಸೂಕ್ಷ್ಮವಾದ ಒಳನೋಟಗಳನ್ನು ನೀಡುತ್ತದೆ .

ಮುಂದೆ ಇದೇ ಫೇಮಿಬಾಯಿ ಒಬ್ಬ ಹೆಣ್ಣು ಮಗಳಿಗಿರುವ ಕಟ್ಟುಪಾಡುಗಳನ್ನು ಮೀರುತ್ತಾ ತನಗಿರುವ ಸಾಧ್ಯತೆಗಳನ್ನು ಕಂಡುಕೊಂಡು ಆಕೆ ಬೆಳೆಯುವುದಿದೆಯಲ್ಲ ಅದು ಅತ್ಯಂತ ಮುಖ್ಯವಾದ ಸಂಗತಿ ಎನಿಸುತ್ತದೆ.ವೇಣು ಅವರ ಮಾರ್ಗದರ್ಶನದಲ್ಲಿ ಆಕೆ ಲಂಬಾಣಿ ಜನಾಂಗದ ಅಭಿವೃದ್ದಿಗಾಗಿ ತೊಡಗಿಕೊಳ್ಳುವುದರ ಮೂಲಕ ತನ್ನ ಜೀವನವನ್ನು ಸಾರ್ಥಕಗೊಳಿಸಿ ಕೊಳ್ಳುತ್ತಾಳೆ .ಮುಂದೆ ಡಾ.ವೇಣು ಅವರನ್ನು ಮದುವೆಯಾಗಲು ಮಗಳು ಸುಜಾತ ಸೂಚಿಸಿದಾಗಲೂ ಆಕೆಯ ನಿರ್ಣಯ ಅತ್ಯಂತ ಮಾದರಿಯಾಗಿದೆ. ಸಂಸಾರವೆಂಬುವುದರ ಆಚೆ ತನ್ನ ವ್ಯಕ್ತಿತ್ವ ಕಟ್ಟಿಕೊಳ್ಳುವ ಫೇಮಿಬಾಯಿಯೇ ಈ ಕೃತಿಯ ನಿಜವಾದ ನಾಯಕಿ ಎಂದು ನನ್ನ ಅನಿಸಿಕೆ.

ಈ ಕಾದಂಬರಿಯ ಇನ್ನಿತರ ಪ್ರಮುಖ ಪಾತ್ರಗಳಾದ ಡಾ. ವೇಣು ಅವರ ಮಗಳು ಡಾ.ಸುಜಾತಾ ಮತ್ತು ಮನಶಾಸ್ತ್ರದ ಉಪನ್ಯಾಸಕಿ ಪದ್ಮನಯನಾ, ಸುಜಾತಳಿಗೆ ಎದೆಹಾಲುಣಿಸಿದ ಅಹಲ್ಯಾಬಾಯಿ, ಇವರು ಇಲ್ಲಿಯ ಕಥೆಯ ಚಲನಶೀಲತೆಗೆ ಪೂರಕ ಪಾತ್ರಗಳಾಗುತ್ತಾರೆ. ಆದರೆ ವಿಶಿಷ್ಟವಾದ ಇನ್ನೊಂದು ಪಾತ್ರ ಎಂದರೆ ಡಾ.ವೇಣು ಅವರ ಕೃಷಿ ಭೂಮಿ ಸಂಪದ. ಡಾಕ್ಟರ್ ಅವರ ಒಟ್ಟು ಜೀವನದಲ್ಲಿ ವೈದೇಹಿ, ಪ್ರೇಮಿಬಾಯಿ, ಸುಜಾತಾನಂಥ ಹೆಣ್ಣುಜೀವಗಳು ಒಂದಷ್ಟು ಬದುಕಿಗೆ ನೆಮ್ಮದಿ ನೀಡಿದರಾದರೂ ಕೊನೆಯಲ್ಲಿ ಆಧಾರವೆಂದು ತಿಳಿದುಕೊಂಡಿದ್ದು ಈ ಭೂಮಿ ತಾಯಿಯನ್ನು ಮಾತ್ರ. ಇಲ್ಲಿ ಎಲ್ಲಾ ಪಾತ್ರಗಳು ಸ್ವಗತದಲ್ಲಿಯೇ ಕಥೆಯನ್ನು ನಿರೂಪಿಸಿದಂತೆ ಕೃಷಿ ಭೂಮಿಯೂ ಒಂದು ಪಾತ್ರವಾಗಿ ನಿರೂಪಣೆ ಮಾಡುವುದು ಅತ್ಯಂತ ವಿಶೇಷವಾಗುತ್ತದೆ. ಭೂಮಿಯನ್ನು ತಾಯಿಯೆಂದು ಕೊನೆಯವರೆಗೂ ಆಸರೆಯಾಗಿರುವಳೆಂದು, ಎಲ್ಲವನ್ನೂ ಸಹನೆಯಿಂದ ಒಳಗೊಳ್ಳುವ ಧಾರಕಶಕ್ತಿಯುಳ್ಳವಳೆಂದು ಡಾಕ್ಟರ್ ವೇಣು ಅವರು ಭಾವನಾತ್ಮಕವಾಗಿ ಅವಳನ್ನೆ ಆಧಾರವಾಗಿಸಿಕೊಂಡಿದ್ದೂ ಕೃಷಿಯಲ್ಲಿ ತೊಡಗಿಕೊಂಡಿದ್ದು ಕೂಡ ಅತ್ಯಂತ ಗಮನಾರ್ಹ ಸಂಗತಿ.

ಒಟ್ಟಾರೆ ಈ ಕಾದಂಬರಿಯಲ್ಲಿ ಮುಖ್ಯಪಾತ್ರವೆಂದು ಡಾ. ವೇಣುಗೋಪಾಲ್ ಎಂದೆನಿಸಿದರೂ ಸ್ತ್ರೀ ಪಾತ್ರಗಳೇ ಕಥೆಯುದ್ದಕ್ಕೂ ಮೈಚಾಚಿ ಕೊಂಡಿರುವುದು ವಿಶೇಷ. ತನಗೆ ದಕ್ಕದ ಪ್ರೀತಿಯ ಹಳಹಳಿಕೆಯಲ್ಲಿ ಕೊರಗುತ್ತ, ಸಮಾಜದಲ್ಲಿಯ ಘಾತುಕರ ದುಂಡಾವರ್ತಿಗೆ ಬಲಿಯಾಗುತ್ತ, ನಿಯೋಜಿತ ಸಮಾಜದ ಕುಟುಂಬದ ಕಟ್ಟುಪಾಡುಗಳ ಬಂಧನಕ್ಕೊಳಗಾಗಿ ಸಂಬಂಧಗಳಿಂದ ದೂರವಾಗಿ ನಲುಗುತ್ತ ಹೀಗೆ ನಮ್ಮ ಹೆಣ್ಣುಮಕ್ಕಳು ನಿರಂತರವಾಗಿ ಬಳಲುತಿದ್ದಾರೆ. ಎಂದೆಂದಿಗೂ ಇದು ಮುಗಿಯದ ಕತೆಯೇ ಹೌದು. ಈ ಕಾದಂಬರಿಯಲ್ಲಿ ಬರುವ ಹೆಣ್ಣುಮಕ್ಕಳ ಜೀವನದ ತಿರುವುಗಳು ಒಂದು ಆಯಾಮವಾದರೆ ನಮ್ಮ ದೇಶದ ಜ್ಞಾನಶಾಖೆಗಳ ಒಟ್ಟು ಚಿಂತನ ಇನ್ನೊಂದು ಆಯಾಮವೆಂದು ಪರಿಗಣಿಸಬಹುದು.

ಸಾಮಾಜಿಕ, ಸೈದ್ಧಾಂತಿಕ, ರಾಜಕೀಯ ಕ್ಷೇತ್ರಗಳ ಕಾಲಕ್ಕನುಗುಣವಾದ ವ್ಯಾಪಕವಾದ ಮತ್ತು ತೀವ್ರವಾದ ಬದಲಾವಣೆಗಳನ್ನು ಕಂಡ ಮತ್ತು ಅತ್ಯಂತ ಅನುಭವಿಗಳಾದ ಡಾ. ಸತ್ಯನಾರಾಯಣ ಆಲದರ್ತಿಯವರ ಈ ಕೃತಿ ಮೇಲ್ನೋಟಕ್ಕೆ ಕೆಲವು ಪಾತ್ರಗಳ ಮೂಲಕ ಒಂದು ಪ್ರೇಮಕಥೆಯನ್ನು ಕಟ್ಟಿಕೊಟ್ಟಿದೆ ಎಂದೆನಿಸಿದರೂ ಅದರ ಆಳದಲ್ಲಿ ಅನೇಕ ಸಂಗತಿಗಳ ಬೀಜವನ್ನು ಬಿತ್ತಿದ್ದಾರೆ. ಕಾಲಚಕ್ರದ ಚಲನೆಯನ್ನು ಗಮನಿಸುತ್ತಾ ಪಲ್ಲಟಗೊಂಡ ನಂಬಿಕೆ, ತತ್ತ್ವ, ಸಿದ್ಧಾಂತಗಳಿಗೆ ತಮ್ಮ ವೈಚಾರಿಕ ನಿಲುವನ್ನು ಇಲ್ಲಿ ಅನೇಕ ಸಂದರ್ಭದಲ್ಲಿ ಮಂಡಿಸುತ್ತಾರೆ. ಈ ಮೂಲಕ ಸಹೃದಯನಲ್ಲೂ ವೈಚಾರಿಕ ಕಿಡಿಯನ್ನು ಹುಟ್ಟಿಸುತ್ತಾರೆ. ಗಾಂಧಿ ತತ್ವ ಮತ್ತು ಅಹಿಂಸೆಯ ಹುಸಿ ಪ್ರಸ್ತುತತೆ ಕುರಿತಾದ ವಿಚಾರ ,ಜಾತೀಯತೆ ಎಂಬ ಸಾಂಕ್ರಮಿಕ ರೋಗ, ಹಿಂದೂ ಮುಸ್ಲಿಂ ಬಾಂಧವ್ಯ, ಕೊರವಂಜಿ ಕಣಿ ಹೇಳುವ, ಭವಿಷ್ಯ ಕೇಳುವ ಸನ್ನಿವೇಶ ಇವೆಲ್ಲವನ್ನೂ ಆಮೂಲಾಗ್ರವಾದ ಅಧ್ಯಯನ ಮತ್ತು ಶೋಧದ ಮೂಲಕ ಕಂಡುಕೊಳ್ಳಬೇಕಾದ ಅವಶ್ಯಕತೆಯನ್ನು ಬಿಂಬಿಸುತ್ತಾರೆ. ಪ್ರಸ್ತುತವಾಗಿರುವ ಇಂದಿನ ಪ್ರಕ್ಷುಬ್ಧ ಸಂದರ್ಭದಲ್ಲಿ ಇವುಗಳ ಜಿಜ್ಞಾಸೆ ಅತಿ ಅವಶ್ಯಕ ಎಂದು ಈ ಕೃತಿ ಮನಗಾಣಿಸುತ್ತದೆ.

ಈ ಕೃತಿ ವೈಜ್ಞಾನಿಕವಾದ ಚಿಂತನೆಗಳನ್ನೂ ಹಲವೆಡೆ ಸೂಚಿಸುತ್ತದೆ.ಉದಾಹರಣೆಗೆ ಫೇಮಿಬಾಯಿಯಲ್ಲಿ ಕಾಮುಕನೊಬ್ಬನ ಅತ್ಯಾಚಾರದಿಂದ ಜನಿಸಿದ ಸುಜಾತ ಎಂಬ ಒಬ್ಬ ಹೆಣ್ಣುಮಗಳು ಡಾ.ವೇಣು ಅವರ ಸ್ವಸ್ಥ ಪರಿಸರದಲ್ಲಿ,ಸಂಸ್ಕಾರದಲ್ಲಿ ಬೆಳೆದು ಯೋಗ್ಯಳಾಗಿ, ಎತ್ತರಕ್ಕೆ ಬೆಳೆದು ನಿಲ್ಲುತ್ತಾಳೆ.ಈ ಮೂಲಕ Genetic Theory ಹಾಗೂ environment Theory ಇವುಗಳ ಕುರಿತಾದ ಸಂವಾದವೂ ಇಂದಿನ ದಿನಗಳಲ್ಲಿ ಸೂಕ್ಷ್ಮವಾಗಿ ಪರಿಶೀಲನೆಗೆ ಒಡ್ಡಿಕೊಳ್ಳಬೇಕು ಎಂಬುದನ್ನು ಕೂಡ ಕಾದಂಬರಿಕಾರ ಸೂಚಿಸುತ್ತಾರೆ .

ನಿವೃತ್ತ ಜೀವನದಲ್ಲಿ ಬತ್ತದ ಉತ್ಸಾಹಿಗಳಾದ, ದೀರ್ಘ ಅನುಭವದ ಸಾರವನ್ನು ಮೊಗೆದು ಕೊಟ್ಟಿರುವ ಡಾ. ಸತ್ಯನಾರಾಯಣ ಆಲದರ್ತಿಯವರ ಈ ಕೃತಿ ಸಾಹಿತ್ಯದ ಕಾದಂಬರಿ ಪ್ರಕಾರಕ್ಕೆ ಸೂಕ್ತವಾಗಿದೆ ಎಂದು ಕಾದಂಬರಿಯನ್ನೇ ಬರಿಯದ ನಾನು ಪ್ರಮಾಣೀಕರಿಸುವ ಹುಂಬತನ ನನ್ನದಲ್ಲ. ಒಬ್ಬ ಓದುಗಳಾಗಿ ನಾನು ಕಂಡುಕೊಂಡ ಅಂಶಗಳು ಇಲ್ಲಿವೆ ಎಂದು ಮಾತ್ರ ಹೇಳಬಲ್ಲೆ. ಇಂತಹ ಓದಿಗೆ ಅವಕಾಶ ನೀಡಿದ ಡಾ. ಸತ್ಯನಾರಾಯಣ ಅವರಿಗೂ ಶ್ರೀನಿವಾಸ ಜಾಲವಾದಿ ಅವರಿಗೂ ಕೃತಜ್ಞತೆಗಳು

‍ಲೇಖಕರು Admin

July 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: