“ನಮೋ ವೆಂಕಟೇಶ, ನಮೋ ತಿರುಮಲೇಶ, ಮಹಾನಂದಮಾಯೆ, ಓ ಮಹಾದೇವ ದೇವ..”, ಊರಾಚೆಯ ಬಯಲಿನಲ್ಲಿದ್ದ ಟೂರಿಂಗ್ ಟಾಕೀಸ್ ನ ದೊಡ್ಡ ದೊಡ್ಡ ಸ್ಪೀಕರ್ ಗಳಿಂದ ಈ ಹಾಡು ಕೇಳುತ್ತಿದ್ದಂತೆಯೇ ನಮಗೆಲ್ಲಾ ರೋಮಾಂಚನ, ಇನ್ನೇನು ಫಿಲಂ ಶುರು ಅಂತ. ಫಿಲಂ ನೋಡಲು ನಾವು ಥಿಯೇಟರ್ ಗೆ ಹೋಗಬೇಕು ಅಂತೇನೂ ಇರಲಿಲ್ಲ, ರೂಮಿನ ಎತ್ತರದ ಕಿಟಕಿ ಬಳಿ ಕೋಡುಬಳೆಯಂತೆ ಸುತ್ತಿಟ್ಟಿರುತ್ತಿದ್ದ ಹಾಸಿಗೆಗಳ ರಾಶಿಯೇರಿ ಕೂತು, ಕಿಟಕಿಗೆ ಕಿವಿ ನೆಟ್ಟರೆ ಸಾಕು ಸಿನಿಮಾ ಸೌಂಡ್ ಟ್ರಾಕ್ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಆಗೆಲ್ಲಾ ಇಡೀ ಇಡೀ ಸಿನಿಮಾ ಬಾಯಿಪಾಠ ಆಗಿರುತ್ತಿತ್ತು!
“ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು, ನಿನ್ನ ಕೈಲಾಡೋ ಗೊಂಬೆ ನಾನಯ್ಯ, ಗೊಂಬೆ ನಾನಯ್ಯ, ತಾನ ತಂದಾನ ತಾನ, ತಾನ ತಂದಾನ ತಾನ..” ಕಲಿತದ್ದು ಇಲ್ಲಿ, ಕುಣಿದದ್ದು ಇಲ್ಲಿ, “ಏಮಂಟಿವೇಮಂಟಿವಿ, ಇದಿ ಕ್ಷಾತ್ರ ಪರೀಕ್ಷಮೇ ಕಾದಿ, ಕ್ಷತ್ರಿಯ ಪರೀಕ್ಷ ಕಾದು ಕದ? ಕಾದು, ಕಾಕೂಡದು (ಏನಂದಿರೇನಂದಿರಿ, ಇದು ಕ್ಷಾತ್ರ ಪರೀಕ್ಷೆಯೇ ಹೊರತು, ಕ್ಷತ್ರಿಯ ಪರೀಕ್ಷೆ ಅಲ್ಲ ಅಲ್ಲವಾ, ಹಾಗಲ್ಲ, ಹಾಗಿರಕೂಡದು), ಧನುರ್ವಿದ್ಯಾ ಪ್ರದರ್ಶನಕ್ಕೆ ಬಂದ ಕರ್ಣನನ್ನು, ಅವನು ಸೂತ ಕುಲದವನೆಂದು ಛೇಡಿಸಿದಾಗ ಧುರ್ಯೋದನ ಅಬ್ಬರಿಸಿ ಹೇಳುವ ಈ ಮಾತನ್ನು ಕೇಳಿ ರೋಮಾಂಚನಗೊಂಡಿದ್ದು ಇಲ್ಲಿ, ಭಾಗ್ಯವಂತರು ನೋಡಿ ಅತ್ತದ್ದು, ಗುರುಶಿಷ್ಯರು ನೋಡಿ ನಕ್ಕಿದ್ದು, ಗುಟ್ಟಾಗಿ ಸ್ಕ್ರೀನಿನ ಹಿಂದೆ ಬಗ್ಗಿ ರಾಜಕುಮಾರ್ ಅಲ್ಲಿರಬೋದ ಅಂತ ನೋಡಿದ್ದು ಎಲ್ಲಾ ಇಲ್ಲಿಯೇ! ಅಜ್ಜಿ ಮನೆಗೆ ರಜಕ್ಕೆ ಹೋದರೆ ರಜೆ ಮುಗಿಯುವ ವೇಳೆಗೆ ನಾಲ್ಕೈದು ಸಿನಿಮಾ ಸಂಭಾಷಣೆ ಕಂಠಪಾಠ ಆಗಿರುತ್ತಿತ್ತು!
ನನ್ನ ಬಾಲ್ಯ, ಶಾಲೆ, ಕಾಲೇಜು ಎಲ್ಲಾ ಕೋಲಾರ ಜಿಲ್ಲೆಯಲ್ಲಿ. ಹೀಗಾಗಿ ನಾವು ಕನ್ನಡ, ತೆಲುಗು ಮತ್ತು ತಮಿಳು, ಈ ಮೂರೂ ಭಾಷೆಯ ಚಿತ್ರಗಳನ್ನೂ ನಿರ್ವಂಚನೆಯಿಂದ ನೋಡುತ್ತಿದ್ದೆವು! ಪೌರಾಣಿಕ, ಐತಿಹಾಸಿಕ ಚಿತ್ರಗಳ ಎನ್ ಟಿ ಆರ್, ಸಾಮಾಜಿಕ ಅದರಲ್ಲೂ ದುರಂತ ಪಾತ್ರಗಳ ಎ ಎನ್ ಆರ್, ತಮಿಳಿನಲ್ಲಿ ಮಿಂಚಿದ ಕನ್ನಡದ ಕೋಕಿಲಾ ಮೋಹನ್, ಯಾವಾಗಲೂ ಪೊಲಿಟಿಕಲಿ ಕರೆಕ್ಟ್ ಆಗೇ ಇರುತ್ತಿದ್ದ ಆರತಿ, ಭಾವುಕತೆಯ ಕಲ್ಪನ, ಬೊಂಬೆಯಂತಹ ಭಾರತಿ ಎಲ್ಲರೂ ನಮ್ಮವರೇ.
ಕುಡುಕರು ದುಃಖ ಆದರೆ ನೋವು ಮರೆಯಲು, ಸಂತೋಷ ಆದರೆ ಆಚರಿಸಲು ಕುಡೀತಾರಲ್ಲ ಹಾಗೆ ನಾವು ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಬಂದರೆ, ಸ್ಕೂಲಲ್ಲಿ ಮೇಷ್ಟ್ರು ಬೈದರೆ, ಶಿವರಾತ್ರಿ ಜಾಗರಣೆ ಮಾಡಬೇಕಾದರೆ, ನ್ಯೂ ಇಯರ್ ಸೆಲೆಬ್ರೇಟ್ ಮಾಡಬೇಕಾದರೆ ಎಲ್ಲಕ್ಕೂ ಓಡುತ್ತಿದ್ದದ್ದು ನಮ್ಮೂರಿನಲ್ಲಿದ್ದ ಎರಡು ಥಿಯೇಟರ್ ಗಳಿಗೇ, ಒಂಡು ವಿಜಯ, ಇನ್ನೊಂದು ಶ್ಯಾಮ್ ಸುಂದರ್. ಒಂದ್ಸಲ ಅಂತೂ ಬೆಳಗಾದರೆ ೭ ನೇ ತರಗತಿ ಪರೀಕ್ಷೆ, ರಾತ್ರಿ ಸೆಕೆಂಡ್ ಶೋಗೆ ಅಪ್ಪ ಅಮ್ಮನ ಜೊತೆ ನಾನು ’ನಾನೊಬ್ಬ ಕಳ್ಳ’ ಸಿನಿಮಾಗೆ ಅಮೋಘ ಮೂರನೇ ವೀಕ್ಷಣೆಗೆ. ಆಗ ನಮ್ಮ ಓದು ಪರೀಕ್ಷೆ ಬಗ್ಗೆ ಯಾರೂ ಅಷ್ಟು ತಲೆ ಕೆಡಿಸಿಕೊಳ್ಳುತ್ತಲೂ ಇರಲಿಲ್ಲ, ಅದು ಬೇರೆ ವಿಷಯ. ಆದರೆ ನನ್ನ ಗ್ರಹಚಾರಕ್ಕೆ ನಮ್ಮ ಮೇಷ್ಟ್ರು ನಿದ್ದೆ ಬಾರದೆ ಅದೇ ಶೋಗೆ ಬರಬೇಕೆ? ಅವರು ಬೆಳಗ್ಗೆ ಪರೀಕ್ಷೆ ಇಟ್ಟುಕೊಂಡು, ಅಚ್ಚುಕಟ್ಟಾಗಿ ಕಡ್ಲೆಬೀಜ ಪ್ಯಾಕೆಟ್ ಹಿಡಿದು ಮಗಳನ್ನು ಫಿಲಂಗೆ ಕರೆದುಕೊಂಡು ಬಂದ ಅಪ್ಪ ಅಮ್ಮನನ್ನು ನೋಡಿದ ನೋಟ ಇನ್ನೂ ಕಣ್ಣಿಗೆ ಕಟ್ಟಿದಂತಿದೆ!
ನಾವು ಕಾಲೇಜಿನಲ್ಲಿದ್ದಾಗ ’ಮುಂದಾನೈ ಮುಡಿಚ್ಚು’ ಅಂತ ಒಂದು ತಮಿಳಿನ ಸಿನಿಮಾ ಬಂದಿತ್ತು,. ಕನ್ನಡದ ಹಳ್ಳಿಮೇಷ್ಟ್ರು ರೀಮೇಕ್ ಅಂದರೆ ಸಿನಿಮಾ ಹೇಗಿರಬಹುದು ಊಹಿಸಿ.. ಕಾಲೇಜ್ ಒಂದು ಪಿರಿಯಡ್ ಚಕ್ಕರ್ ಹೊಡೆದು, ಅರ್ಧ ಓಡಿ, ಅರ್ಧ ನಡೆದು ಬಂದು, ಟಿಕೆಟ್ ಖರೀದಿಸಿ, ಬೆವರೊರೆಸಿಕೊಳ್ಳುತ್ತಾ ಕುಳಿತು ಪಕ್ಕಕ್ಕೆ ತಿರುಗಿದರೆ ನಮ್ಮ ಲೆಕ್ಚರರ್! ತಮಾಷೆ ಅಂದರೆ ಗುಂಪು ಕಟ್ಟಿಕೊಂಡು ಬಂದ ನಮಗಿಂತಾ ಅವಿವಾಹಿತರಾಗಿದ್ದ ಅವರಿಗೇ ಸಂಕೋಚ ಜಾಸ್ತಿಯಾಗಿ, ಕೂರಲಾರದೆ ಇಂಟರ್ವಲ್ ನಲ್ಲಿ ಓಡಿಹೋಗಿದ್ದು ಆಮೇಲೆ ಕಾಲೇಜು ಮುಗಿಯುವವರೆಗೂ ಜೋಕ್ ಆಗಿ ಚಾಲ್ತಿಯಲ್ಲಿತ್ತು.
ಆಗ ಸಿನಿಮಾ ನಮ್ಮ ಬದುಕಿನ ಅವಿಭಾಜ್ಯ ಅಂಗ. ಎಸ್ ಎಲ್ ಸಿ ಯಲ್ಲಿ ಒಳ್ಳೆ ಮಾರ್ಕ್ಸ್ ತೆಗೆದಿದ್ದಕ್ಕೆ ಅಪ್ಪ ಅಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾ ತೋರಿಸಿದ ದಾಖಲೆ ನಮ್ಮ ಮನೆಯಲ್ಲಿ ಇನ್ನೂ ಯಾರೂ ಮುರಿದಿಲ್ಲ! ರಾಜ್ ಕುಮಾರ್ ಫಿಲಂ ಬಂದರೆ ಬಸ್ ಮಾಡಿಕೊಂಡು ಊರ ಜನ ಬುತ್ತಿ ಕಟ್ಟಿಕೊಂಡು ಫಿಲಂ ನೋಡಲು ಬರುತ್ತಿದ್ದರು ಅಂದರೆ ನಂಬಬೇಕು ನೀವು. ಭಕ್ತ ಪ್ರಹ್ಲಾದ ರಿಲೀಸ್ ಆಗಿದ್ದ ಸಮಯ, ಟಿಕೆಟ್ ಸಿಗೋದು ಭಾರಿ ಕಷ್ಟ ಇತ್ತು. ಅಂದು ದೊಡ್ಡಮ್ಮನ ಮಗಳ ಮದುವೆ, ಬಸ್ ಇಳಿದು ಕಪಾಲಿ ಟಾಕೀಸ್ ಮುಂದೆ ಬರ್ತಾ ಇದೀವಿ, ಟಿಕೆಟ್ ಕೌಂಟರ್ ಖಾಲಿ ಇದೆ, ಟಿಕೆಟ್ ಸಿಗುತ್ತಿದೆ, ಇನ್ನೊಂದು ಯೋಚನೆ ಮಾಡದೆ, ಭಯಭಕ್ತಿಯಿಂದ ಫಿಲಂ ನೋಡಿ, ಮದುವೆಗೆ ತಡವಾಗಿ ಹೋಗಿದ್ದರ ಬಗ್ಗೆ ಒಂದಿಷ್ಟಾದರೂ ಪಶ್ಚಾತಾಪ ಆಗಿದ್ದರೆ ಕೇಳಿ!
ಈಗ ಯೋಚಿಸುತ್ತೇನೆ, ಆ ಸಿನಿಮಾಗಳಲ್ಲಿ ಹಾಗೆ ನಮ್ಮನ್ನು ಕಟ್ಟಿಹಾಕುವಂತಹುದ್ದೇನಿತ್ತು? ನಿಜಜೀವನದಲ್ಲಿ ಸಾಧಾರಣಕ್ಕೆಲ್ಲಾ ಕಣ್ಣೀರು ಹಾಕದ ನಾನು ಈಗಲೂ ಫಿಲಂ ನೋಡುವಾಗ ಒಂದು ಹನಿ ಸಂಕೋಚವಿಲ್ಲದೆ ಕಣ್ಣೀರು ಹಾಕುತ್ತೇನಲ್ಲ, ಅಂತಹ ಅದ್ಯಾವ ಶಕ್ತಿ ಇದೆ ಆ ಬಿಳಿಪರದೆಯ ಮೇಲಿನ ಬೆಳಕಿನ ಛಾಯೆಗಳಿಗೆ? ಆ ಅಳುವಿಗೆ ಭಾಷೆಯ ಹಂಗೇ ಇಲ್ಲ, ಬಾಲ್ಯದಲ್ಲಿ ನೋಡಿದ ’ಪಾಪಂ ಪಸಿವಾಡು’, ಕಾಲೇಜಿನ ದಿನಗಳ ’ಒರು ತಲೈ ರಾಗಂ’, ’ಬಂಧನ’, ’ಕಥೆ ಹೇಳುವೆ ನನ್ನ ಕಥೆ ಹೇಳುವೆ’ ಎಂದ ಅಲಮೇಲು, ಪ್ರೆಟ್ಟಿ ವುಮನ್, ಸ್ಟೆಪ್ ಮಮ್, ಅದು ಬಿಡಿ ಈಗಲೂ, ಎಷ್ಟನೆಯ ಸಲವೋ ನೋಡಿದರೂ ನಾಚಿಕೆಯಿಲ್ಲದೆ ಕಣ್ಣಿಂದ ಧಾರೆ ಹರಿಸುವ ’ತಾರೆ ಜಮೀನ್ ಪರ್’, ದೇವದಾಸ್…. ಇವುಗಳಲ್ಲಿ ಯಾವ ಒಂದು ಹೆಸರನ್ನು ಹೆಕ್ಕಿ ಇದು ನನ್ನನ್ನು ಕಾಡಿದ ಸಿನಿಮಾ ಎನ್ನಲಿ? ಇವೆಲ್ಲಾ ನನ್ನನ್ನು ಕಾಡಿದ್ದು ಹೌದು ಮತ್ತು ನಾನು ಅನ್ನುವ ನಾನು ಇದೆಲ್ಲಾ ಸೇರಿ ಆದದ್ದೂ ಹೌದು.
ಎಲ್ಲಾ ಗುಣಿಸಿ, ಭಾಗಿಸಿ, ಲೆಕ್ಕಾಚಾರ ಹಾಕಿದ ಮೇಲೆ ಉಳಿದದ್ದು ಒಂದು ಹೆಸರು, ಇಲ್ಲ ಅದು ಸಿನಿಮಾದ ಹೆಸರಲ್ಲ, ನಿರ್ದೇಶಕನ ಹೆಸರು, ಹೌದು, ಅದು ಮಣಿರತ್ನಂ. ತನ್ನ ಕಲೆಯಲ್ಲಿನ ಮಾಂತ್ರಿಕತೆ ಕಳೆದುಕೊಂಡು ಅದನ್ನು ಕೇವಲ ’ಪೆರ್ಫೆಕ್ಟ್’ ಆಗಿರುವ ಸೆಲ್ಯುಲಾಯಿಡ್ ಮಾಡಿದಕ್ಕಿಂತ ಮೊದಲಿನ ಮಣಿರತ್ನಂ. ಆತನ ಮೊದಲ ಚಿತ್ರ ಕನ್ನಡದಲ್ಲಿ, ಪಲ್ಲವಿ – ಅನುಪಲ್ಲವಿ. ಆಮೇಲೆ ತಮಿಳಿನಲ್ಲಿ ಮೌನ ರಾಗಂ, ಅಗ್ನಿನಕ್ಷತ್ರಂ, ನಾಯಗನ್, ತಿರುಡಾ ತಿರುಡಾ, ಗೀತಾಂಜಲಿ, ರೋಜ, ಬಾಂಬೆ ಚಿತ್ರಗಳನ್ನು ಕೊಟ್ಟ ಮಣಿರತ್ನಂ. ಪ್ರೇಮದಲ್ಲೊಂದು ಸಣ್ಣ ಹಠವನ್ನು, ಒಂದು ಹಿಡಿ ತುಂಟತನವನ್ನು, ’ನಗುವ ನಯನ, ಮಧುರ ಮೌನ’ ಹಾಡನ್ನು, ’ನನ್ಗೀಗ ಮುತ್ತು ಬೇಕು, ಕೊಡೋ’ ಎಂದು ಫೋನ್ ಮಾಡಿ ಕೇಳುವ ಹುಡುಗಿಯನ್ನು ಕಟ್ಟಿಕೊಟ್ಟ ಮಣಿರತ್ನಂ, ಮದುವೆಯ ಮೊದಲ ಉಡುಗೊರೆಯಾಗಿ ಗಂಡನಿಂದ ಡೈವೋರ್ಸ್ ಕೇಳುವ ನವವಧು, ಕೊಡುತ್ತೇನೆ ಎಂದು ಒಪ್ಪಿಕೊಳ್ಳುವ ಗಂಡ, ಅಪ್ಪನ ಎರಡನೆಯ ಸಂಬಂಧವನ್ನು ಧ್ವೇಷಿಸುವ ಮಗ, ಅದೇ ಎರಡನೆಯ ಹೆಂಡತಿಯ ಮಗಳನ್ನು ಟ್ರೇನಿನಲ್ಲಿ ಯಾರೋ ಚುಡಾಯಿಸಿದಾಗ, ’ಯಾರೋ ಅದು ನನ್ನ ತಂಗಿಯನ್ನು ರೇಗಿಸಿದ್ದು’ ಎಂದು ಅಬ್ಬರಿಸುವ ಅಣ್ಣ, ಉಯಿರೇ ಉಯಿರೇ ಎಂದು ಹಾಡಿದ ಅರವಿಂದ ಸ್ವಾಮಿ, ಕೂದಲು ಬಿಟ್ಟು, ಕತ್ತು ಆ ಕಡೆ ಈ ಕಡೆ ತಿರುಗಿಸುತ್ತಾ ಕೈ ಬೀಸಿ ಕರೆದ ಅಂಜಲಿ … ಎಂತಹ ಚಿತ್ರಗಳು, ಎಂತಹ ಪಾತ್ರಗಳು. ಹಾಗೆ ಚಿತ್ರ ಕಥೆಯಾಗಿ, ನಾಯಕನಾಗಿ, ನಾಯಕಿಯಾಗಿ, ಹಾಡಾಗಿ, ಕಂಬನಿಯಾಗಿ ಹನಿ ಹನಿ ನಮ್ಮೊಳಗಿಳಿಯುವಂತಹ ಚಿತ್ರಗಳನ್ನು ಕೊಟ್ಟ ಮಣಿರತ್ನಂ…
ಈ ಎಲ್ಲಾ ಚಿತ್ರಗಳಲ್ಲೂ ನಾನು ಮತ್ತೆ ಮತ್ತೆ ನೋಡಿದ್ದು, ಪ್ರೀತಿಸಿದ್ದು ಗೀತಾಂಜಲಿ. ತೆರೆಕಂಡ ಕಾಲಕ್ಕೆ ಅದು ಒಂದು ಪಾಥ್ ಬ್ರೇಕಿಂಗ್ ಚಿತ್ರ. ಅದುವರೆಗಿನ ಎಲ್ಲಾ ಸಿದ್ಧ ಫಾರ್ಮುಲಾಗಳನ್ನೂ ಅದು ಮುರಿದು ಹಾಕಿತ್ತು. ಇಲ್ಲಿ ನಾಯಕ, ನಾಯಕಿ ಇಬ್ಬರೂ ಅಲ್ಪಾಯುಷಿಗಳು, ಆದರೆ ಬದುಕನ್ನು ಅದಮ್ಯವಾಗಿ ಪ್ರೀತಿಸಬಲ್ಲರು, ಇಲ್ಲಿ ಅಪ್ಪ ಅಮ್ಮ ಅದುವರೆಗಿನ ಚಿತ್ರಗಳಂತೆ ಅತಿ ಭಾವುಕತೆ ತೋರುವವರಲ್ಲ, ಇಲ್ಲಿ ನಾಯಕ ನಾಯಕಿಯ ತಲೆಯನ್ನು ಬಳಸಿ, ಅವಳನ್ನು ಎದೆಗೊರಗಿಸಿಕೊಂಡು ಥೇಟ್ ಅಮ್ಮನಂತೆ ’ಓ ಪಾಪ ಲಾಲಿ’ ಹಾಡುತ್ತಾನೆ, ನಾಯಕಿ ಸಿಕ್ಕವರನ್ನು ’ಓಡಿ ಹೋಗೋಣವಾ’ ಎಂದು ಕೇಳಿ ಸತಾಯಿಸುವ ತುಂಟಿ, ಫೋನ್ ಮಾಡಿ ತನ್ನ ಹುಡುಗನಿಗೆ ಬಾರೋ ನನಗೀಗ ನಿನ್ನ ತೋಳು ಬೇಕು ಎಂದು ಕೇಳುವ ಪ್ರೇಮಿ, ಎಲ್ಲಾ ಆ ಕ್ಷಣದ ಖುಷಿಗಳ ಮೊತ್ತವೇ ಬದುಕು ಎಂದು ತನ್ನ ಸಾವನ್ನು ಲೆಕ್ಕಿಸದೆ ಬದುಕುತ್ತಿರುವಾಗಲೂ, ಅದೇ ಸ್ಥಿತಿಯಲ್ಲಿ ತನ್ನ ಪ್ರೇಮಿಯೂ ಇದ್ದಾನೆ ಎಂದು ಗೊತ್ತಾದ ಮೇಲೆ ಅದನ್ನು ಭರಿಸಲಾಗದ ಥೇಟ್ ಹೆಣ್ಣು ಅನ್ನಿಸೋ ಹುಡುಗಿ. ಈ ಚಿತ್ರದಲ್ಲಿ ಒಂದು ಸನ್ನಿವೇಶ ಬರುತ್ತದೆ, ಹುಡುಗ ಹುಡುಗಿ ಇಳಿಜಾರಿನಲ್ಲಿ, ಮರದ ನೆರಳಿನಲ್ಲಿ ಕೂತು ಪರಸ್ಪರ ಕಾಲೆಳೆದುಕೊಳ್ಳುತ್ತಾ, ಪ್ರೀತಿ ಮಾಡುತ್ತಾ ಇರುವಾಗ ಮೇಲೆ, ಕಾಲುದಾರಿಯಲ್ಲಿ ಒಂದು ಶವದ ಮೆರವಣಿಗೆ ಸಾಗುತ್ತಾ ಇರುತ್ತದೆ. ಎರಡೂ ಸತ್ಯಗಳೇ. ಈಗಲೂ ಸಹ ಬದುಕನ್ನು ಆ ಕ್ಷಣದ ಸತ್ಯದ ಹಾಗೆ ತೀವ್ರವಾಗಿ ಬದುಕಿಬಿಡಬೇಕು ಅಂದುಕೊಳ್ಳುವಾಗೆಲ್ಲಾ ಈ ಚಿತ್ರ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಮನಸ್ಸಿನಲ್ಲಿರುತ್ತದೆ.
ಅಂತಹ ಚಿತ್ರಗಳನ್ನು ಕೊಟ್ಟ ಆ ಮಾಂತ್ರಿಕನ ಮಾಯಾದಂಡ ಆಮೇಲೆ ಮುಕ್ಕೇಕಾಯಿತು? ’ರಾವಣ್’ ಯಾಕೋ ಸುಂದರ ಸ್ಕ್ರೀನ್ ಸೇವರ್ ಗಳ ಮೊತ್ತ ಅನ್ನಿಸಿದರೆ, ’ಕಡಲ್’ಗೆ ಆ ವಿನಾಯ್ತಿಯೂ ಇರಲಿಲ್ಲ. ಚಿತ್ರ ಪೂರ್ತಿ ನೋಡಲಾಗದೆ ಅರ್ಧದಲ್ಲೇ ಎದ್ದು ಬರುವಾಗ ಯಾಕೋ ನೋವು, ’ಮಣಿರತ್ನಂ’ ಚಿತ್ರ ಹೀಗಾಗಬಾರದಿತ್ತು ಅನ್ನೋ ತಳಮಳ. ಯಾಕೆ ನನ್ನೊಡನೆ ಅದ್ಭುತವಾಗಿ ಮೌನದಲ್ಲೂ ಸಂವಹಿಸುತ್ತಿದ್ದದ್ದ ಜೀವ ಇದ್ದಕಿದ್ದಂತೆ ನನ್ನ ಭಾಷೆಯನ್ನೇ ಮರೆತುಬಿಟ್ಟಿತು ಎನ್ನುವ ಸಂಕಟ.
ನನ್ನನ್ನು ಈಗಲೂ ಅಷ್ಟೇ ತೀವ್ರತೆಯಲ್ಲಿ ಕಾಡುವ ಚಿತ್ರಗಳು ಯಾಕೆ ಈಗ ನನ್ನ ಮೆಚ್ಚಿನ ನಿರ್ದೇಶಕನ ಮಾತನ್ನೇ ಕೇಳುತ್ತಿಲ್ಲ? ಹೊಸಿಲು ದಾಟಿದ್ದು ನಾನ, ಅವರಾ? ಯಾವುದೇ ಕಾಲಮಾನದಲ್ಲಿ ಇರುವ ಪ್ರೇಕ್ಷಕರ ಅಭಿರುಚಿ ಅವರ ಪಾಲಿಗೆ ಬರುವ ಚಿತ್ರಗಳನ್ನು ಪ್ರೇರೇಪಿಸುತ್ತದೆಯೋ ಅಥವಾ ಬರುವ ಚಿತ್ರಗಳು ಪ್ರೇಕ್ಷಕರ ಅಭಿರುಚಿಯನ್ನು ನಿರ್ದೇಶಿಸುತ್ತವೆಯೋ?
ಮೊನ್ನೆ ಚಿತ್ರೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಬಿ ಸುರೇಶ್, ’ಕೆಟ್ಟ ಸಿನಿಮಾಗಳು ಅಂತ ಯಾವುದೂ ಇರುವುದಿಲ್ಲ, ಇರುವುದೆಲ್ಲಾ ಚಿತ್ರಕ್ಕೆ ಇನ್ನೂ ತಯಾರಾಗದ ಕಾಲಮಾನ ಮತ್ತು ಪ್ರೇಕ್ಷಕರು ಮಾತ್ರ’ ಅಂತ ಹೇಳಿದಾಗಿನಿಂದ ತಲೆಯಲ್ಲಿ ಗುಂಗಿಹುಳದ ಬೊಂಬೆಯಾಟ.
ಗುಲ್ಜಾರ್ ಕನ್ನಡಿಯಲ್ಲಿ ಕಂಡ ಗಾಲಿಬ್
ನನ್ನ ಭಾವ ಜಗತ್ತಿಗೂ, ಇಂಗ್ಲಿಷಿನ G ಅಕ್ಷರಕ್ಕೂ ಒಂದು ಸೂಫಿಯಾನಿ ಸಂಬಂಧವಿದೆ. ನನ್ನನ್ನು ಆಳವಾಗಿ ಕಲಕುವ, ನಾನು ಕನವರಿಸುವ, ಸ್ಪರ್ಶಕ್ಕೆ...
Arre ella …. ella … ella maathugaloo nannave !!! Enjoyed the first part of the article and felt sad about maniratnam …. sooooper ….
Ha ha ha nimma cinema anubhavagalu maatra exellent..
Maduveginta cinema important aagiddu…great!!!
Bahusha naanu ishtu hucchaagi cinema nodilla ansatte…kela mattige nodi
Ha ha ha nimma cinema anubhava maatra exellent.
Maduve scene mattu nimma lecturer jote nodida cinema abbaa…u r daring…
Naanu ishtu intense aagi cinema nodilla…bahusha nanna generation li nanna kaadida chitra ashtaagi sigalilla.
Haleyaddannu kedaki nodiddene…noduttene…
Manirathnam dull aagiddara bagge nijakkoo prashne ide..
Ondu sala padmapani jodidaar heltidru,,
Obba music director na avadhi or validity kevala 20varsha anta…bahusha cinemakke innu kadme irabahudeno..
ಸಂಧ್ಯಾ,
ನನಗಾಗ ಅರೇಳು ವರ್ಷಗಳಿರಬಹುದು. ನಾನೂ ಕೂಡ ಬೆಂಗಳೂರಿನ ಗಾಂಧೀನಗರದಲ್ಲಿರುವ ’ಮೂವಿಲ್ಯಾಂಡ್” ಟಾಕೀಸಿನಲ್ಲಿ
ಅನೇಕ ತೆಲುಗು ಚಿತ್ರಗಳನ್ನು ನೋಡಿದ್ದೇನೆ. ಕಾಫೀಪುಡಿ ಅಂಗಡಿಯ ಎತ್ತರದ ಹೊಸ್ತಿಲಿನ ಮೇಲೆ ಪಾದಗಳನ್ನು ಸಾಧ್ಯವಾದಷ್ಟು ಎತ್ತಿ,
ಕತ್ತು ದೀರ್ಘವಾಗಿಸಿ ನಿಂತಾಗ ಅಲ್ಪ ಸ್ವಲ್ಪ ಕಾಣುತ್ತಿದ್ದ ಕಪ್ಪುಬಿಳುಪಿನ ಚಲಿಸುವ ಚಿತ್ರಗಳನ್ನು ಬೆರಗಿನಿಂದ ನೋಡಿ ಸಾರ್ಥಕಭಾವ
ಅನುಭವಿಸಿದ್ದಿದೆ! ಎನ್.ಟಿ.ಆರ್ ಜಮುನ ನಾಗೇಶ್ವರರಾವ್ ಸಾವಿತ್ರಿ ಸೂರ್ಯಕಾಂತಂ (ತೆಲುಗಿನ ರಮಾದೇವಿ) ಎಲ್ಲರೂ
“ಗುಂಡಮ್ಮ ಕಥಾ” ಎಂಬ ಚಿತ್ರದ ನೂರರ ಹೊತ್ತಿಗೆ ಟಾಕೀಸಿಗೆ ಬಂದದ್ದನ್ನು ಮರೆಯಬಹುದೆಂತು? ’ ಭಾರ್ಯಾ ಭರ್ತುಲು’
ವಾರಸತ್ವಂ ಸುಮಂಗಲಿ ಯಾವುದನ್ನು ಹೆಸರಿಸಲಿ? ಮೊನ್ನೆ ಮೊನ್ನೆ ಈ ಹಳೆಯ ನಟಿಯರ ಸಂದರ್ಶನವನ್ನು ಯು-ಟ್ಯೂಬ್ನಲ್ಲಿ ಗಂಟೆಗಟ್ಟಲೆ ನೋಡಿ “ನನಗೆ ಇಷ್ಟು ಚೆನ್ನಾಗಿ ತೆಲುಗು
ಅರ್ಥವಾಯಿತಾ ” ಎಂದು ಆಶ್ಚರ್ಯಪಟ್ಟೆ. ಇದೇ ಭಾವ ತಮಿಳು ಹಿಂದಿಯ ಬಗೆಗೂ! ಹಾಗಂತ ನಾನು ಅಪ್ಪಟ ಕನ್ನಡತಿ!
ನಿಮ್ಮ ಎಲ್ಲ ಅನುಭವಗಳು ನಿಮಗಿಂತ ಹಿರಿಯಳಾದ ನನ್ನವೂ!
ಇನ್ನು ಮಣೀರತ್ನಂ ಎಂಬ ಮಾಂತ್ರಿಕನ ಮಂತ್ರದಂಡ ಕಳೆದೇಹೋಗಿದೆ!
ಬಿ ಸುರೇಶ್ ಅವರ ಮಾತುಗಳು ಪೂರ್ಣ ಸತ್ಯ ಅನ್ನಿಸುತ್ತಿಲ್ಲ.
ಉಷಾ ಫಾಟಕ್
ಹೌದು ಮಣಿರತ್ನಂ ರ ಇತ್ತೀಚಿನ ಸಿನಿಮಾಗಳ ಅವರ ನಿರ್ದೇಶನ ತೇಜಸ್ಸಿನ ಕುರಿತಾಗಿ ಒಂದು ಚರ್ಚೆ ಗಂಭೀರವಾಗಿ ಚಾಲ್ತಿಯಲ್ಲಿದೆ. ಅವರ ಕೊನೆಯ ಮೂರ್ನಾಲ್ಕು ಚಿತ್ರಗಳು ಸಂಪೂರ್ಣವಾಗಿ ಮಣಿರತ್ನಂ ಅವರನ್ನ ಮಣಿರತ್ನಂ ಆಗಿ ಒಪ್ಪಿಕೊಳ್ಳಲಾರದಷ್ಟು ಅಸಹಜತೆಗೆ ಈಡು ಮಾಡಿವೆ. ಮಣಿರತ್ನಂ ಮತ್ತೆ ವಾಪಾಸ್ ಬೇಕಿದೆ ಅದೇ ಹಳೆಯ ಮಣಿರತ್ನಂ ಆಗಿ. ಕನ್ನಡಕ್ಕೆ ಹೇಗೆ ಒಬ್ಬರೇ ಕಾಸರವಳ್ಳಿಯೋ ಹಾಗೆ ತಮಿಳಿಗೆ ಕೇವಲ ಒಬ್ಬರೇ ಮಣಿರತ್ನಂ.
ಇನ್ನು ನಿಮ್ಮ ಸಿನಿಮಾ ಮೋಹ, ಅದರೆಡೆಗಿನ ಅಫೆಕ್ಷನ್ ಗಳನ್ನ ನೋಡಿದ್ರೆ ನೀವು ಅಸಾಧ್ಯ ಅನ್ನಿಸ್ತೀರ. ಎಗ್ಸಾಮ್ ಇಟ್ಕೊಂಡು ಸಿನಿಮಾ ನೋಡಿದ ಕೀರ್ತಿ ನಿಮ್ಮದಾದ್ರೆ.. ವರ್ಲ್ಡ್ ಕಪ್ ಕ್ರಿಕೆಟ್ ನೋಡಿದ ಕೀರ್ತಿ ನಮ್ಮದಷ್ಟೇ.. ಬರಹ ಬಹಳ ಇಷ್ಟವಾಯ್ತು ಸಂಧ್ಯಕ್ಕ. ನಮ್ಮನೆಯೂ ಒಂದು ಟಾಕೀಸ್ ಪಕ್ಕದಲ್ಲಿ ಇದ್ದಿದ್ದರೆ ನಿಮ್ಮೆಲ್ಲ ಭಾವನೆಗಳಿಗೂ ನಾನ್ ಕೂಡಾ ವಾರಸುದಾರನಾಗಬಹುದ್ದಿತ್ತೇನೋ.
Adenu, neevu nanna manada maatugalannella tilidu, illi baredu bittiddiralla anta acchhariyaaytu!
Geetanjali – eegaloo my favourite.
Nanagantoo…Kelavu baari, Ade haleya Maniratnam’ beku, avara chitragalu beku anta sanna makkalante hatha hidiyona anta annisuttade!
Thanks for giving us a nice article.
‘ನಮ್ಮ ಹೃದಯದೊಂದಿಗೆ ಸಂವಹಿಸುತ್ತಿದ್ದ ಭಾಷೆಯನ್ನು ಕಳೆದು ಕೊಂಡ ಜೀವ’ ನಮ್ಮಂತಹ ಸಮಕಾಲೀನರ ಎಲ್ಲಾ ಹೃದಯಗಳು, ಜೀವಗಳು ಅನುಭವಿಸಿದ ಭಾವ …ಸಂಧ್ಯಾ ತುಂಬಾ .. ತುಂಬಾ ಮನಸ್ಸಿನೊಳಗೆ ಆಳವಾಗಿ ಇಳಿದು ಒಂದು ಹತ್ತು ನಿಮಿಷದಲ್ಲಿ ನಮ್ಮ ಬಾಲ್ಯದ ಅನುಭವಗಳ ರಿವೈಂಡ್ ಮಾಡಿ ತೋರಿಸಿದ ನಿಮ್ಮ ಬರಹ ಹೆಚ್ಚು ಖುಷಿ ಸ್ವಲ್ಪ ದುಗುಡ ಉಳಿಸಿತು. ಬಾಷೆ ಅರ್ಥವಾಗದಿದ್ದರೂ ಭಾವ ಅರ್ಥ ಮಾಡಿಸುವ ಶಕ್ತಿ ಆಗಿನ ನೀವು ಹೇಳಿದ ಸಿನೆಮಾಗಳಿಗೆ ಇದ್ದ ಕಾರಣ ನಾವು ಅದರೆಡೆಗೆ ಆಕರ್ಶಿತರಾಗುತಿದ್ದೆವು.. ಅಂತಹ ಸ್ಟ್ರಾಂಗ್ ಇಂಪ್ಯಾಕ್ಟ್ ಮಾಡುವ ಶಕ್ತಿ ಕಡಿಮೆ ಯಾಗುತ್ತಿದೆಯೇನೋ ಅನ್ನಿಸುತ್ತದೆ.
ತುಂಬಾ ಅದ್ಭುತವಾಗಿ ಬರೆದಿದ್ದೀರಿ .
ನಿಮ್ಮ ಬಾಲ್ಯದ ಸಿನಿಮಾ ನೆನಪುಗಳು ಮತ್ತೆ ನನ್ನನ್ನು ಹೊಸ ಬಾಲ್ಯಕ್ಕೆ ಕರೆದೊಯ್ಯಿತು . ನಮಗೆ ಹೊಸ ಜಗತ್ತನ್ನು ಪರಿಚಯಿಸಿದ್ದ ಅಂದಿನ ಲಕ್ಷ್ಮಿ ,ಅಮೃತ ,ರಾಯಲ್ ,ಸಂತೋಷ್ ,ರಾಧಿಕ. ಮುಬಾರಕ್ ,ಗೀತಾ ,ವಾಹಿನಿ ,ನವರಂಗ್ ,ಎಸ್ ,ಎಲ್ ಎನ್ ,ಲಕ್ಷ್ಮಿರಂಗಾ ,ಸಂಧ್ಯಾ ಎ /ಸಿ , ಚಾಂದ್ ೭೦ಎಂ ಎಂ ..ಯೆಲ್ಲಾ ಥಿಯೇಟರ್ ಗಳು ಮತ್ತು ಟೆಂಟ್ ಗಳು ಒಮ್ಮೆಲೇ ನೆನಪಿಗೆ ಬಂದವು .
ಕಳೆದು ಹೋದ ಮಣಿರತ್ನಂ ಬಗ್ಗೆ ನಮಗೂ ಬೇಸರವಿದೆ .ಬಹುಶ ‘ಬಾಂಬೆ ‘ ನಂತರ ಅವರ ಫ್ಲಾಪ್ಸ್ ಶುರುವಾದವು ಅನಿಸುತ್ತದೆ (‘ ದಿಲ್ ಸೆ ,ಕಣ್ಣತ್ತಿಲ್ … ‘ ‘ಗುರು ,ಕಡಲ್ ). ಸಾಮಾನ್ಯ ಪ್ರೇಕ್ಷಕನಿಗೆ ಜಾಗತಿಕ ಸಮಸ್ಯೆಗಳಂಥ ಸಬ್ಜೆಕ್ಟ್ ಕಬ್ಬಿಣದ ಕಡಲೆಯಾಗಿದ್ದವು . ಅವರ ಹಳೆಯ ಸಿನೆಮಾಗಳ ಮೆಲೋಡಿ , ಅವರ ಟಿಪಿಕಲ್ ಶೈಲಿಯ ಹಾಡುಗಳು ,ನೇಟಿವಿಟಿ ಕಾಣದೆ ಕಂಗಾಲಾದದ್ದಂತು ನಿಜ.ಕೇವಲ ಬುದ್ಧಿವಂತ ಪ್ರೇಕ್ಷಕರಿಗಾಗಿ ಮಣಿರತ್ನಂ ಸಿನಿಮಾ ಎಂದು ಭಾವಿಸಿದ ಪ್ರೇಕ್ಷಕ ‘ ಬೋರ್ ‘ ಎಂಬ ಕಾರಣ ಕೊಡಲಾರಂಭಿಸಿದ.
ವಾಹ್ ….. ಎಷ್ಟು ಚಿತ್ರಗಳು ಹಾದು ಹೋದವು… ಕಣ್ಣ ಮುಂದೆ ಹೆಚ್ಚಿನವು ನಾನು ಇಷ್ಟ ಪಟ್ಟು ನೋಡಿದ ಸಿನೆಮಾಗಳೇ… ಮತ್ತೆ ಮತ್ತೆ ನೋಡುವಂಥವುಗಳೇ .. ಬಹಳ ಚೆನ್ನಾಗಿದೆ ಮೇಡಂ ಲೇಖನ.
I second what Bharatji said… Its just like that the same here….
naanuu flash backge hogibitte.swarasyavAgi odisikondu hoguva shaily nimmadu. anubhavagalu yaavattuu interesting.
adbutha bararha
nimma modalene vaakyave nanna haleya nenapu marukalisidavu,
ನಾನೂ ಕೂಡಾ ನಿಮ್ಮ ಮಾಯಾನಗರಿಯ ಕಾಯಂ ಸದಸ್ಯನು. ಬ್ಯಾಕ ಟು ಬ್ಯಾಕ ಮೂರು ಸಿನಿಮಾ ನೋಡಿದವನು, ಮರುದಿನ ಪರೀಕ್ಷೆ ಇಟ್ಟುಕೊಂಡು ‘ಗೈಡ’ ಸಿನಿಮಾ ನೋಡಿದವನು. ಅದು ಬಿಟ್ಟು ಬೇರಾವ ಮನೋರಂಜನೆ ಇಲ್ಲದ್ದೂ ಕಾರಣವೋ ಏನೋ? ಪಾಪ -ಮಣಿರತ್ನಂ ಅನಿಸಿದ್ದೂ ನಿಜ. ತುಂಬಾ ಇಷ್ಟವಾಯಿತು.
-ಅನಿಲ
ಸಿನೆಮಾ ಅಂದರೂ ಸಂಧ್ಯಾ, ನಾಟಕ ಅಂದರೂ ಸಂಧ್ಯಾ, ಚೆಂದದ ಹಾಡು, ಗಝಲ್, ಚಿತ್ರ ಗೀತೆ, ಶಾಯರಿ ಅಂದರೂ ಸಂಧ್ಯಾ, ಅದ್ಭುತವಾದ ಭಾವಲಹರಿಯ ಬರಹ ಅಂದರೂ ಸಂಧ್ಯಾ, ತೀರ ತೀರ ಪ್ರಾಕ್ಟಿಕಲ್ ಬರಹ ಅಂದರೂ ಸಂಧ್ಯಾ…. ಇದ್ಯಾಕೋ ಜಾಸ್ತಿಯಾಯ್ತು… ಈ ಅಸಿಡಿಟಿ ತಾಳಲಾರೆ… ಮದ್ದುಂಟೇ ಅಥವಾ ಮುದ್ದುಂಟೇ 🙂