ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ- ಮಸಣದ ಹಾಡು

ಸಂತೆಬೆನ್ನೂರು ಫೈಜ್ನಟ್ರಾಜ್

ಬಹುಶಃ ಬಲಗಾಲಿಟ್ಟೇ
ಒಳಬಂದೆ ಅನ್ನಿಸುತ್ತೆ; ಅಲ್ಲಲ್ಲ ಹೊತ್ತು ತಂದಿದ್ದು,
ಎಷ್ಟು ಬೇಗ ಈ ಸಿನಿಮಾ ಮುಗಿತದೋ
ಅನ್ನೋ ಕಿರಿಕಿರಿಯಂತೆ!

ಆಗಲೇ ಮಣ್ಣ ಮನೆ ತಯಾರಿತ್ತು,
ಎಲ್ಲೋ ದೂರದಿ ಸಣ್ಣ ರಾಗ;
ಭಾವ ಬಂದಾಗ ನಾದಿನಿ ಉಲಿಯೋ ಸ್ವರ ಅದು.

ಮೊದಲು
ಇಬ್ಬರಿಳಿದು ನನ್ನ ಮಣ್ಣಿಗಿಳಿಸಿ ಇಟ್ಟರು
ಮುಖ ಮುಚ್ಚಿತ್ತು
ಅವರಾರಂದು ಗೊತ್ತಾಗಲಿಲ್ಲ;
ಅದೆಷ್ಟು ಕಾಟ
ಕೊಟ್ಟಿದ್ದೆನೋ ಏನೋ ಅವರಿಗೆ!
ತೆಪ್ಪಗಾದೆ
ಅದೇನೋ ಪುಡಿ ಹಾಕಿದರು, ಅತ್ತರು ಸಿಮುಕಿಸಿದರು

ಗಬ್ಬು ನಾರದಿರಲೆಂದು ಹಸಿದ
ನಾಯಿ ನರಿಗಳು ಎಳೆಯದಿರಲೆಂದು
ಮೇಲೆ ನಿಂತವರ ಮಾತದು.
ಈಗ ಹಿಡಿ ಹಿಡಿ ಮಣ್ಣು
ಅಂಗೈಲಿ ಹಿಡಿದು
ಅದೇನೋ ಹೇಳಿ ಮೊರದ ತುಂಬಾ
ತುಂಬಿ ಕೊಟ್ಟರು
ತಲೆಯಿಂದ ಕಾಲವರೆಗೆ ಸುರಿಯುತ್ತಾ ಬಂದರು;
ಬೇಡವಾದ್ದು ಎತ್ತಲೋ ಬಿಸುಟಂತೆ
ಮಣ್ಣ ಹುಡಿ ಮೈ ತುಂಬಾ!

ನನಗೋ ತಣ್ಣನೆಯ ಭಾವ
ಮತ್ತೆ ಅದೇ ಹಾಡು ಸ್ಪಷ್ಟ ಕೇಳುತಿದೆ
ಸಂತೋಷದ ದನಿ,
ಹಲವರು ಸ್ವಾಗತಿಸಿ ಹಾಡುವ ಹಾಡಂತಿತ್ತು!

ನೆಲಮಟ್ಟ ಮಣ್ಣು ಬಿತ್ತು
ಅದರ ಮೇಲೆ ರಾಶಿ ರಾಶಿ ಮತ್ತೆ ಮಣ್ಣ ಹೇರಿಕೆ
ಮಣ್ಣೇ ಕೊನೆಗೆಂಬಂತೆ
ಮಾತುಗಳು ಈಗ ಅಸ್ಪಷ್ಟ;
ಏನೋ ಕೂಗಿದಂತೆ ಎಲ್ಲೋ ದೂರದಲ್ಲಿ!

ಇಡೀ ಮಣ್ಣ ಮನೆ ಮೌನ ಮೌನ
ನಾನಷ್ಟೇ ಅಲ್ಲಿ
ಪುನಃ ಹಾಡು
ನಾನೂ ದನಿಗೂಡಿಸಿದೆ
ಹಾಡುತ್ತಾ ಹೋದೆ, ದೂರದಿಂದ ಯಾರೋ
ಬಂದು ಕೈ ಕುಲುಕಿ
ವೆಲ್ಕಂ ಎಂದರು, ನಕ್ಕರು, ನಗಿಸಿದರು
ಆ ಗಾಢ ಕತ್ತಲಲ್ಲೂ ನನ್ನ ಗುರ್ತಿಸಿದರು;
ಬೆಳಕಿದ್ದ ಬದುಕಲ್ಲಿ ದೂರ ಇಟ್ಟಿದ್ದರು ಎಂಬುದೇ
ಅಲ್ಲಿ ಸೋಜಿಗ!

ಅದೇ ಹಾಡು ಕೇಳುತ್ತಲೇ ಇದೆ
ನಾನೂ ಹಾಡುತ್ತಿದ್ದೆ, ಹಾಡುತ್ತಲೇ ಇದ್ದೆ
ಮಡದಿ ಕೂಗಿ
ತಿವಿದು ಎಚ್ಚರಿಸುತ್ತಲೇ ಇದ್ದಳು!!

‍ಲೇಖಕರು Avadhi

27 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading