ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಗನಗೌಡ ಹಿರೇಗೌಡ ಕವಿತೆ – ಸರ್ಪ ಸುತ್ತು..

ಸಂಗನಗೌಡ ಹಿರೇಗೌಡ

ಈ ನಿದ್ದೆಗಣ್ಣಿನ ನಖಗಳು
ಕಾಸಿದಾರದ ಒಡಲಿಂದ ಪಾರಾಗಿ
ಎದೆಯ ಹಿಂಭಾಗದ ಅನುವಿಗೆ
ಹೆಗ್ಗಣದ ಪ್ರಯೋಗ

ಕರ ಕರ ಪರ ಪರ ತುರಿಕೆ
ಎಷ್ಟೆಲ್ಲಾ ತೊಗಲ ಗುಟ್ಟುಗಳು ಗುಲ್ಲಾಗಿ
ಬನಿಯನ್ ಮೇಲಿಂದ ಚಿಮ್ಮುವ ಒಂದಷ್ಟು ಹಸಿರು
ಮತ್ತೊಂದಿಷ್ಟು ಕೆಂಪಗಿನ ದುರ್‍ವಾಸನೆಯ ಬೆವರು

ಯಾವ ಜಲುಮದ ಪಾಪ!
ಬಾಲ್ಯದ ಕೇರಿ ಹುಡುಗನ ಬೆನ್ನು ಕವರಿ
ಹನಮಂತ ಗುಡಿಯ ಹೊಕ್ಕಾಗ
ಕೋ ಕೋ ಆಟದ ಪೋಲ್ ಶಾಟ್
ತೀರಿಸಿಕೊಂಡ ನೆನಪು?

ಮನೆ ಹಿಂದಿನ ಕೊಳೆತ ಸಜ್ಜಿ ಕಣೆಕೆಯ
ಸಂದಿನಲಿ ಅದಾಗತಾನೆ ಹುಟ್ಟಿದ
ನಾಯಿಕುನ್ನಿಯ ಕಣ್ಣು ರ್‍ಯಾವಿ ಹಿಡಿದು
ಸಹಜತೆಯ ಹಿಚಿಕಿದ್ದು?

ಗೊತ್ತಿಲ್ಲ.
ಮತ್ಯಾಕೆ ಈ ಉರಿ?
ಧೋ ಎಂದು ಸುರಿದ ಮಳೆಗೆ
ಕೆಂದು ಬಣ್ಣದ ಹುಳುಗಳ ಕಾಲುದಾರಿಗೆ
ಹೆಬ್ಬೆಟ್ಟು ಒತ್ತಿ ಕವಲೊಡೆಸಿದ್ದೇ ಇರಬೇಕು?

ಇಲ್ಲ… ಇಲ್ಲ…
ಈ ಪಾಪ ಪುಣ್ಯದ ವ್ಯಾಖ್ಯಾನ
ನಾವೇ ಕಟ್ಟಿಕೊಂಡ ಮಾಪನವೆಂಬ ಕೀಲದ ಅಂಬೋಣ
ಹಾಗಾದರೆ..
ಮತ್ಯಾಕೆ ಈ ತೊಗಲು
ಕೊನೆಗಾಲದ ಅಮೃತಮತಿಯಂತೆ..?

ಹರಿದಾಡಿಂದತಾಗುತ್ತದೆ
ಆಗಾಗ…
ಹಾವು ಇರುವೆಗಳಂತೆ
ನನ್ನವೇ ಜಡಭರಿತ ನಖಗಳು
ಚೈತನ್ಯದ ಮೇಲೆ ಸವಾರಿ
ಜಡ ಮೃಡದ ಮಧ್ಯ
ಕಿಂಕರ ರಹಿತ ವೃತ್ತಿ???

‍ಲೇಖಕರು avadhi

3 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading