ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್ – ಸೈನಿಕರ ಭೋಜನ ಕೂಟ..

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

21

ಚೆಚೆನ್ಯಾ ಗಡಿಯ ಕೋಟೆಗಳನ್ನು ಕಾಯುತ್ತಿದ್ದ ನಮ್ಮ ಮುಂಚೂಣಿ ಸೈನಿಕರ ಬದುಕು ಮಾಮೂಲಾಗಿ ಸಾಗುತ್ತಿತ್ತು. ಆಗಲೇ ಹೇಳಿದ ಘಟನೆ ನಡೆದ ನಂತರ ಎರಡು ಕಾದಾಟಗಳು ನಡೆದಿದ್ದವು. ಸೈನಿಕರು, ಮಿಲೀಶಿಯದವರು ಕುದುರೆಗಳನ್ನೇರಿ ಪಹರೆ ಕೆಲಸ ನಡೆಸಿದ್ದರು. ದಾಳಿ ನಡೆಸಿದ ಬೆಟ್ಟಸೀಮೆಯ ಜನ ಎರಡು ಸಂದರ್ಭಗಳಲ್ಲೂ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದರು. ವಾಝ್ವಿಶಾನ್ಕ್ನಲ್ಲಿ ಒಮ್ಮೆ ಅವರು ಕಸಾಕ್‍ನನ್ನು ಕೊಂದಿದ್ದರು, ನೀರು ಕುಡಿಯುತಿದ್ದ ಎಂಟು ಕೊಸಾಕ್ ಕುದುರೆಗಳನ್ನು  ವಶಮಾಡಿಕೊಂಡಿದ್ದರು. ಒಂದು ಔಲ್‍ಅನ್ನು ನಾಶಮಾಡಿ ಆದಮೇಲೆ ರಶಿಯನ್ನರು ಮತ್ತೆ ದಾಳಿ ಮಾಡಲಿಲ್ಲ. ಆದರೂ ಪ್ರಿನ್ಸ್ ಬಾರಿಯಾಟಿನ್ಸ್‌ಕಿಯನ್ನು ಲೆಫ್ಟ್ ಫ್ಲಾಂಕಿನ ಹೊಸ ಕಮಾಂಡರ್ ಆಗಿ ನೇಮಕ ಮಾಡಿದ್ದರಿಂದ ದೊಡ್ಡ ಪ್ರಮಾಣದ ದಾಳಿ ಸದ್ಯದಲ್ಲೇ ನಡೆದೀತು ಅನ್ನುವ ನಿರೀಕ್ಷೆ ಇತ್ತು. 

ಪ್ರಿನ್ಸ್ ಬಾರಿಯಾಟಿನ್ಸ್‌ಕಿ ವೈಸ್‍ರಾಯನ ಹಳೆಯ ಗೆಳೆಯ, ಕಬಾರ್ಡ ರೆಜಿಮೆಂಟಿನ ಮುಖ್ಯಸ್ಥ. ಇಡೀ ಲೆಫ್ಟ್ ಫ್ಲಾಂಕ್‍ನ ಕಮಾಂಡರನಾಗಿ ಅವನು ಗ್ರೋಜ್ನಿಗೆ ಬಂದ ತಕ್ಷಣ ಇದು ಚಕ್ರವರ್ತಿಯ ಅಪೇಕ್ಷೆ ಎಂದು ವೊರಾನ್ತಸೋವ್‌ಗೆ ಚೆರ್ನಿಶೋವ್‌ ಏನು ತಿಳಿಸಿದ್ದನೋ ಅದನ್ನು ನೆರವೇರಿಸಲು ಪಡೆಯೊಂದನ್ನು ವ್ಯವಸ್ಥೆ ಮಾಡಿದ. ಆ ಪಡೆಯ ಸೈನಿಕರೆಲ್ಲ ವಾಝ್ವಿಶಾನ್ಕ್ನಲ್ಲಿ ಒಟ್ಟು ಗೂಡಿ, ಕೋಟೆಯಿಂದ ಹೊರಟು  ಕುರೆನ್‌ನತ್ತ ಸಾಗಿದರು. ಅಲ್ಲಿ ತಂಗಿದ ಪಡೆ ಕಾಡಿನ ಮರಗಳನ್ನು ಕಡಿದು ನೆಲವನ್ನು ಸಮತಟ್ಟು ಮಾಡುತಿತ್ತು.  

ಯುವಕ ವೊರಾನ್ತಸೋವ್‌ ವೈಭವಪೂರ್ಣವಾದ ಗುಡಾರದಲ್ಲಿ ನೆಲೆಯಾಗಿದ್ದ. ಅವನ ಹೆಂಡತಿ ಮೇರಿ ವಾಸೆಲೇವ್ನಾ ಆಗಾಗ ಅಲ್ಲಿಗೆ ಬಂದು ರಾತ್ರಿ ಅಲ್ಲೇ ಉಳಿಯುತಿದ್ದಳು. ಬಾರಿಯಾಟಿನ್ಸ್‌ಕಿಗೂ ಮೇರಿ ವಾಸೆಲೇವ್ನಾಗೂ ಇದ್ದ ಸಂಬಂಧ ಗುಟ್ಟಾಗಿಯೇನೂ ಉಳಿದಿರಲಿಲ್ಲ. ಅವಳು ಪಾಳೆಯಕ್ಕೆ ಬಂದಾಗಲೆಲ್ಲ ಆಸ್ಥಾನದ ವಲಯಕ್ಕೆ ಸೇರಿರದ ಅಧಿಕಾರಿಗಳು, ಪೇದೆಗಳಾಗಿ ಕೆಲಸ ಮಾಡುತಿದ್ದ ಸಾಮಾನ್ಯ ಜನರು ಅವಳನ್ನು ಕೆಟ್ಟ ಮಾತು ಬಳಸಿ ಬೈದುಕೊಳ್ಳುತ್ತಿದ್ದರು. ಯಾಕೆಂದರೆ ಅವಳು ಬಂದಾಗಲೆಲ್ಲ ಪೇದೆಗಳು, ಸಾಮಾನ್ಯ ಅಧಿಕಾರಿಗಳು ಕಾಡಿನಲ್ಲಿ ಅಡಗಿ ಕಾವಲು ಕಾಯುವ ಕೆಲಸಕ್ಕೆ ಪಾಳೆಯದಿಂದ ದೂರ ಉಳಿಯಬೇಕಾಗುತ್ತಿತ್ತು. 

ಬೆಟ್ಟಗಾಡಿನ ಜನರು ಬಂದೂಕುಗಳನ್ನು ತಂದು ಪಾಳೆಯದ ಮೇಲೆ ಆಗಾಗ ಗುಂಡು ಹಾರಿಸುತ್ತಿದ್ದರು. ಅವರು ಹಾರಿಸಿದ ಗುಂಡು ಸಾಮಾನ್ಯವಾಗಿ ಗುರಿ ತಪ್ಪುತಿದ್ದವು. ಹಾಗಾಗಿ ನಮ್ಮ ಸೇನೆ ಅಂಥ ದಾಳಿಯನ್ನು ತಡೆಗಟ್ಟಲು ವಿಶೇಷವಾದ ಆಸಕ್ತಿಯನ್ನೇನೂ ತೋರುತ್ತಿರಲಿಲ್ಲ. ಆದರೆ, ಬಂದೂಕಿನ, ತೋಪಿನ ಸದ್ದು ಕೇಳಿ ಮೇರಿ ವಾಸೆಲೇವ್ನಾಗೆ ಭಯವಾಗದಿರಲೆಂದು, ಅಕಸ್ಮಾತ್ ಗುಂಡು ತಗುಲಿ ತೊಂದರೆಯಾಗದಿರಲಿ ಎಂದು ಕಾಡಿನಲ್ಲಿ ಅಡಗಿ ಕಾವಲು ಕಾಯುವ ಕೆಲಸಕ್ಕೆ ಸೈನಿಕರನ್ನು ಕಳಿಸುತ್ತಿದ್ದರು. ಒಬ್ಬ ಹೆಂಗಸಿಗೆ ಭಯವಾಗದಿರಲೆಂದು ರಾತ್ರಿಯೆಲ್ಲಾ ಕಾಡಿನಲ್ಲಿ ಕಾವಲು ಕಾಯಬೇಕಾದ ಕೆಲಸದಿಂದ ಸೈನಿಕರಿಗೆ, ಹಾಗೇ ಮೇಲ್ವರ್ಗದವರಲ್ಲದ ಅಧಿಕಾರಿಗಳಿಗೆ ಸಿಟ್ಟು ಬರುತ್ತಿತ್ತು. ಕೆಟ್ಟ ಪದಗಳನ್ನು ಬಳಸಿ ಅವಳನ್ನು ಬೈದುಕೊಳ್ಳುತ್ತಿದ್ದರು. 

ಬಟ್ಲರ್ ರಜೆಯನ್ನು ಪಡೆದುಕೊಂಡು ತನ್ನ ಕೋಟೆಯಿಂದ ಹೊರಟು ಇಲ್ಲಿಗೆ ಬಂದಿದ್ದ. ಕೆಡೆಟ್ ಕಾರ್ಪ್ಸ್ ದಿನಗಳಲ್ಲಿ ತನ್ನ ಮೆಸ್ ಗೆಳೆಯರಾಗಿದ್ದವರನ್ನು, ಕುರೆನ್‌ ರೆಜಿಮೆಂಟಿನಲ್ಲಿ ಜೊತೆಯ ಅಧಿಕಾರಿಗಳಾಗಿದ್ದು ಈಗ ಇಲ್ಲಿ ಅಡ್ಜುಟೆಂಟ್‍ಗಳಾಗಿಯೋ ಆರ್ಡರ್ಲಿ ಅಧಿಕಾರಿಗಳಾಗಿಯೋ ಸೇವೆ ಸಲ್ಲಿಸುತಿದ್ದವರನ್ನು ಮಾತಾಡಿಸಿಕೊಂಡು ಹೋಗಲು ಬಂದಿದ್ದ. ಒಂದಷ್ಟು ಹೊತ್ತು ಎಲ್ಲ ಬಹಳ ಚೆನ್ನಾಗಿತ್ತು, ಅವನೂ ಖುಷಿಯಾಗಿದ್ದ. 

ಬಟ್ಲರ್‌ ಪೋಲ್ಟೊರಾಟ್ಸ್‌ಕಿಯ ಗುಡಾರದಲ್ಲಿ ಉಳಿದುಕೊಂಡ. ಅಲ್ಲಿದ್ದ ಅವನ ಪರಿಚಯದವರೆಲ್ಲ ಪ್ರೀತಿಯಿಂದ ಮಾತಾಡಿಸಿದರು. ಆಮೇಲೆ ಹೋಗಿ ವೊರಾನ್ತಸೋವ್‌ನನ್ನು ಭೇಟಿ ಮಾಡಿದ. ಅವನ ಪರಿಚಯ ಬಟ್ಲರ್‌ಗೆ ಅಷ್ಟೋ ಇಷ್ಟೋ ಇತ್ತು. ಸ್ವಲ್ಪ ದಿನ ಅವರಿಬ್ಬರೂ ಒಂದೇ ರೆಜಿಮೆಂಟಿನಲ್ಲಿದ್ದರು. ವೊರಾನ್ತಸೋವ್‌ ಅವನನ್ನು ಪ್ರೀತಿಯಿಂದ ಬರಮಾಡಿಕೊಂಡ. ಪ್ರಿನ್ಸ್‌ ಬಾರಿಯಾಟಿನ್ಸ್‌ಕಿಯ ಪರಿಚಯ ಮಾಡಿಸಿದ. ಈಗ ವರ್ಗವಾಗಿ ಬಾರಿಯಾಟಿನ್ಸ್‌ಕಿ ಅಧಿಕಾರ ಒಪ್ಪಿಸಿ ತೆರಳುತ್ತಿರುವ ಜನರಲ್ ಕೊಸೊಲೋವ್ಸ್‌ಕಿಯ ಬೀಳ್ಕೊಡುಗೆಯ ಭೋಜನಕೂಟಕ್ಕೆ ಬರುವಂತೆ ಆಹ್ವಾನ ನೀಡಿದ. 

ಊಟ ಅದ್ಭುತವಾಗಿತ್ತು. ಆರು ಗುಡಾರಗಳನ್ನು ಸಾಲಾಗಿ ಹಾಕಿ, ಆರು ಗುಡಾರದುದ್ದಕ್ಕೂ ಊಟದ ಮೇಜು ಅಣಿಮಾಡಿದ್ದರು. ಊಟದ ಸಲಕರಣೆ, ಮದ್ಯದ ಬಾಟಲಿಗಳನ್ನೆಲ್ಲ ಜೋಡಿಸಿದ್ದರು. ಪೀಟರ್ಸ್‍ಬರ್ಗಿನಲ್ಲಿ ಗಾರ್ಡ್ಸ್‌ಗಳ ಜೀವನ ಶೈಲಿಯನ್ನು ನೆನಪಿಸುವ ಹಾಗಿತ್ತು ಈ ಭೋಜನ ಕೂಟ. ಎರಡು ಗಂಟೆಯ ಹೊತ್ತಿಗೆ ಊಟ ಬಡಿಸಿದರು. ಮೇಜಿನ ಒಂದು ಬದಿಯ ಮಧ್ಯಭಾಗದಲ್ಲಿ ಕೊಸೊಲೋವ್ಸ್‌ಕಿ ಕುಳಿತಿದ್ದ; ಮೇಜಿನ ಇನ್ನೊಂದು ಬದಿಯಲ್ಲಿ ಬಾರಿಯಾಟಿನ್ಸ್‌ಕಿ ಕುಳಿತಿದ್ದ. ಕೊಸೊಲೋವ್ಸ್‌ಕಿಯ ಬಲಕ್ಕೆ ಎಡಕ್ಕೆ ವೊರಾನ್ತಸೋವ್‌ ಮತ್ತವನ ಹೆಂಡತಿ ಇದ್ದರು. ಉಳಿದಂತೆ ಮೇಜಿನ ಎರಡೂ ಬದಿಗಳಲ್ಲಿ ಕಬಾರ್ಡ ಹಾಗೂ ಕುರೆನ್‌ ರೆಜಿಮೆಂಟಿನ ಅಧಿಕಾರಿಗಳಿದ್ದರು. ಬಟ್ಲರ್ ಕೂತಿದ್ದ ಕುರ್ಚಿ ಪೋಲ್ಟೊರಾಟ್ಸ್‌ಕಿಯ ಎಡದ ಬದಿಗಿತ್ತು. ಇಬ್ಬರೂ ಸುತ್ತಲಿನ ಅಧಿಕಾರಿಗಳ ಜೊತೆಯಲ್ಲಿ ಖುಷಿಯಾಗಿ ಹರಟುತ್ತ ವೈನು ಕುಡಿಯುತ್ತಿದ್ದರು. ರೋಸ್ಟ್ ಅನ್ನು ಬಡಿಸುತ್ತಿರುವಾಗ ಆರ್ಡರ್ಲಿಗಳು ಮೇಜಿನ ಸುತ್ತ ಓಡಾಡುತ್ತ ಶಾಂಪೇನ್ ಗ್ಲಾಸುಗಳನ್ನು ಭರ್ತಿ ಮಾಡುತ್ತಿದ್ದರು. ನಿಜವಾಗಿ ಕಳವಳಪಡುತ್ತ ಬಟ್ಲರ್ ಕಿವಿಯಲ್ಲಿ,  ‘ನಮ್ಮ ಕೊಸೊಲೋವ್ಸ್‌ಕಿ ಈಗ ಮರ್ಯಾದೆ ಕಳಕೊಳ್ಳುತ್ತಾನೆ!’ ಅಂದ ಪೋಲ್ಟೊರಾಟ್ಸ್‌ಕಿ.

‘ಯಾಕೆ?’

‘ಯಾಕೆ ಅಂದರೆ ಅವನೀಗ ಭಾಷಣ ಮಾಡಬೇಕು. ಅವನಿಗೆ ಮಾತಾಡಕ್ಕೆ ಬರಲ್ಲ. ಭಾಷಣ ಮಾಡುವುದು ಅಂದರೆ ಫಿರಂಗಿಯ ಗುಂಡುಗಳ ನಡುವೆ ನುಗ್ಗಿ ವೈರಿಗಳ ಕಂದಕ ಗೆದ್ದುಕೊಳ್ಳುವಷ್ಟು ಸುಲಭವಲ್ಲ! ಅದರಲ್ಲೂ ಅವನ ಜೊತೆಯಲ್ಲಿ ಮಹಿಳೆ ಇದ್ದಾಳೆ, ಶ್ರೀಮಂತ ವರ್ಗದ ಅಧಿಕಾರಿಗಳಿದ್ದಾರೆ!’ ಅಂದ. ‘ಅವನು ಭಾಷಣ ಮಾಡುವುದನ್ನ ನೋಡುವುದಕ್ಕೇ ಕಷ್ಟ ಆಗತ್ತೆ,’ ಎಂದು ಆಫೀಸರುಗಳು ತಮ್ಮಲ್ಲೆ ಮಾತಾಡಿಕೊಂಡರು. 

ಈಗ ಹೊತ್ತು ಬಂದಿತ್ತು. ಬಾರಿಯಾಟಿನ್ಸ್‌ಕಿ ಎದ್ದು ನಿಂತು, ಶಾಂಪೇನ್ ಗ್ಲಾಸನ್ನು ಮೇಲೆತ್ತಿ ಹಿಡಿದು ಕೊಸೊಲೋವ್ಸ್‌ಕಿಯನ್ನು ಉದ್ದೇಶಿಸಿ ಕೆಲವು ಮಾತುಗಳನ್ನು ಹೇಳಿದ. ಅವನ ಮಾತು ಮುಗಿದ ಮೇಲೆ ಕೊಸೊಲೋವ್ಸ್‌ಕಿ ಎದ್ದು ನಿಂತು ತಡವರಿಸುತ್ತ ಮಾತು ಶುರು ಮಾಡಿದ—

‘ಮಾನ್ಯರೇ, ಆಳುವ ಮಹಾಪ್ರಭುಗಳವರ ಇಚ್ಛೆಗನುಸಾರವಾಗಿ ನಾನು ನಿಮ್ಮನ್ನು ಬಿಟ್ಟು, ಏನು ಹೇಳುತ್ತಿದ್ದೇನೆಂದರೆ, ನಿಮ್ಮನ್ನು ತೊರೆದು, ಪಯಣಿಸುತ್ತಿದ್ದೇನೆ. ಪರಂತು, ನಾನು ಸದಾ ತಮ್ಮೊಡನೆಯೇ ಇರುವಂಥವನಾಗಿರುತ್ತೇನೆಂದು ತಾವು ಭಾವಿಸಬೇಕಾಗಿ ನಾನಾದರೂ ತಮ್ಮನ್ನು ಕೋರುತ್ತೇನೆ. 

ಒಬ್ಬಂಟಿಯಾಗಿರತಕ್ಕಂಥಾ ಸೈನಿಕನು ಯುದ್ಧಭೂಮಿಯಲ್ಲಿ ಮಹಾ ಯೋಧನಲ್ಲ ಎಂಬ ಗಾದೆಯನ್ನು ತಾವಾದರೂ ಕೇಳಿದವರೇ ಆಗಿರುತ್ತೀರಿ. ಏನು ಹೇಳುತ್ತಿದ್ದೇನೆಂದರೆ ನಾನು ಯಥಾಕ್ರಮದಲ್ಲಿ ಸ್ವೀಕರಿಸಿರುವಂಥಾ ಪ್ರತಿಯೊಂದು ಮನ್ನಣೆಯೂ ಪರಮ ಕೃಪಾಳುಗಳಾದ ಮಹಾ ಪ್ರಭುಗಳು ತಮ್ಮ ಔದಾರ್ಯದಲ್ಲಿ ಅಂದರೇ ವಿಶಾಲವೆನ್ನತಕ್ಕಂಥಾ ತಮ್ಮ ಹೃದಯದಿಂದ ನನ್ನ ಮೇಲೆ ಧಾರೆಗೈದಿರುವ ಬಿರುದು ಬಾವಲಿಗಳೂ ಸ್ಥಾನ ಮಾನಗಳೂ, ನಾನು ಪರಿಗ್ರಹಿಸಿರುವ ಒಳ್ಳೆಯ ಹೆಸರೂ ಇವೆಲ್ಲವೂ ಖಂಡಿತವಾಗಿ ಇವೆಲ್ಲವೂ (ಗದ್ಗದಿತನಾಗಿ ಮಾತಾಡಿದ) ನಿಮ್ಮ ಕಾರಣದಿಂದಲೇ ದೊರೆತಿರುವಂಥವಾಗಿವೆ ಗೆಳೆಯರೇ, ಪರಮಾಪ್ತರೇ, ನಿಮಗೆ ಮಾತ್ರವೇ ಜೀವಮಾನಪರ್ಯಂತವೂ ಆಭಾರಿಯಾಗಿರುತ್ತೇನೆ.’ ಅವನ ಮುಖದ ಸುಕ್ಕು ಮತ್ತಷ್ಟು ಹೆಚ್ಚಾದವು, ಅವನ ಕಣ್ಣಲ್ಲಿ ಬಿಕ್ಕಳಿಕೆ ಹುಟ್ಟಿ ಕಣ್ಣಲ್ಲಿ ಕಂಬನಿ ಮೂಡಿದವು. ‘ನನ್ನ ಹೃದಯಾಂತರಾಳದಿಂದ ನನ್ನ ಅತ್ಯಂತ ಪ್ರಾಮಾಣಿಕವಾದ, ಹೃತ್ಪೂರ್ವಕವಾದ ಕೃತಜ್ಞತೆಗಳನ್ನು ನಾನಾದರೂ ಯಾವ ರೀತಿಯಲ್ಲಿ ತಮಗೆ ಸಲ್ಲಿಸಲಿ!’ ಎಂದವನೇ ಕೊಸೊಲೋವ್ಸ್‌ಕಿ ಮಾತು ಮುಂದುವರಿಸಲಾಗದೆ ಪಕ್ಕಕ್ಕೆ ತಿರುಗಿ ಅಧಿಕಾರಿಗಳನ್ನು ಆಲಂಗಿಸಿಕೊಳ್ಳಲು ತೊಡಗಿದ. ಪ್ರಿನ್ಸೆಸ್ ಕರ್ಚೀಫಿನಲ್ಲಿ ಮುಖ ಮರೆಸಿಕೊಂಡಳು. ಪ್ರಿನ್ಸ್ ಪಟಪಟನೆ ಕಣ್ಣು ರೆಪ್ಪೆ ಬಡಿದ, ವಿಸ್ಮಿತನಾಗಿ ಬಾಯಿ ತೆರೆದು ಕೂತ. ಅನೇಕ ಅಧಿಕಾರಿಗಳ ಕಣ್ಣು ವದ್ದೆಯಾದದು. ಕೊಸೊಲೋವ್ಸ್‌ಕಿನ ಪರಿಚಯ ಅಷ್ಟಾಗಿ ಇರದಿದ್ದ ಬಟ್ಲರ್ ಕಣ್ಣೀರು ತಡೆಯಲು ವಿಫಲನಾದ. ಕಂಡದ್ದೆಲ್ಲವೂ ಅವನಿಗೆ ಬಹಳ ಇಷ್ಟವಾದವು. 

ಮುಂದೆ ಅನೇಕ ಸ್ವಸ್ತಿವಾಚನಗಳು ನಡೆದವು. ಬಾರಿಯಾಟಿನ್ಸ್‌ಕಿ, ವೊರಾನ್ತಸೋವ್‌, ಆಫೀಸರುಗಳು, ಸೈನಿಕರುಗಳ ಆರೋಗ್ಯಭಾಗ್ಯಕ್ಕಾಗಿ ಚಿಯರ್ಸ್ ಹೇಳಿ ವೈನು ಹೀರಿದರು. ಭೋಜನ ಕೂಟಕ್ಕೆ ಬಂದಿದ್ದ ಅತಿಥಿಗಳೆಲ್ಲರೂ ಎಂದಿನಂತೆ ಸೈನ್ಯಕ್ಕೆ ಸಹಜವಾದ ರೀತಿಯಲ್ಲಿ ಅಮಲೇರಿಸಿಕೊಂಡು ಉತ್ಸಾಹಿತರಾಗಿದ್ದರು. ಹವೆ ಬಹಳ ಚೆನ್ನಾಗಿತ್ತು. ಹಿತವಾದ ಇಳಿ ಬಿಸಿಲಿತ್ತು, ಪ್ರಶಾಂತ ವಾತಾವರಣವಿತ್ತು. ತಾಜಾ ಗಾಳಿ ಚೈತನ್ಯ ಮೂಡಿಸುತ್ತಿತ್ತು. 

ಎಲ್ಲೆಲ್ಲೂ ಮೋಜುಬೆಂಕಿಯ ಚಟಪಟ ಸದ್ದು ಕೇಳಿಸುತ್ತಿತ್ತು. ಕೆಲವು ಗುಂಪುಗಳಿಂದ ಹಾಡು ಕೇಳಿಸುತ್ತಿತ್ತು. ಎಲ್ಲರೂ ಯಾವುದೋ ಉತ್ಸವದ ಖುಷಿಯಲ್ಲಿದ್ದಾರೆ ಎಂದು ನೋಡುವವರಿಗೆ ಅನ್ನಿಸುತ್ತಿತ್ತು. ಬಟ್ಲರ್ ಅತ್ಯಂತ ಸಂತೋಷಚಿತ್ತನಾಗಿ, ಭಾವುಕನೂ ಆಗಿ ಪೋಲ್ಟೊರಾಟ್ಸ್‌ಕಿಯ ಬಳಿಗೆ ಹೋದ. ಹಲವು ಅಧಿಕಾರಿಗಳು ಅಲ್ಲಿ ಸೇರಿ ಇಸ್ಪೀಟು ಆಟಕ್ಕೆ ಸಿದ್ಧರಾಗಿದ್ದರು. ಅಡ್ಜುಟೆಂಟ್ ಒಬ್ಬಾತ ನೂರು ರೂಬಲ್‍ಗಳನ್ನು ಇರಿಸಿ ಬ್ಯಾಂಕ್ ಆರಂಭ ಮಾಡಿದ. ಬಟ್ಲರ್ ತನ್ನ ಪ್ಯಾಂಟ್‍ನ ಜೇಬನ್ನು ಭದ್ರವಾಗಿ ಅದುಮಿಕೊಂಡು ಎರಡು ಮೂರು ಸಾರಿ ಟೆಂಟಿನಿಂದ ಎದ್ದು ಹೋದ. ಕೊನೆಗೂ ಆಟದ ಸೆಳೆತ ತಪ್ಪಿಸಿಕೊಳ್ಳಲು ಆಗದೆ ಅವನೂ ಆಟಕ್ಕೆ ಸೇರಿದ. ಯಾವತ್ತೂ ಇಸ್ಪೀಟು ಆಡುವುದಿಲ್ಲವೆಂದು ತಾನೇ ಮಾಡಿದ್ದ ಶಪಥ, ತನ್ನಣ್ಣನಿಗೆ ಕೊಟ್ಟಿದ್ದ ಮಾತು ಎಲ್ಲವನ್ನೂ ಮರೆತ. ದುಡ್ಡು ಕಟ್ಟುವುದಕ್ಕೆ ಶುರು ಮಾಡಿದ. ಒಂದು ಗಂಟೆ ಕಳೆಯುವುದರೊಳಗೆ ಅವನ ಮುಖವೆಲ್ಲ ಕೆಂಪಾಗಿ, ಮೈ ಬೆವರಿ, ಲೆಕ್ಕ ಬರೆದು ಕೈಗೆಲ್ಲ ಸೀಮೆ ಸುಣ್ಣ ಮೆತ್ತಿಕೊಂಡು ಅವನು ಎರಡೂ ಮೊಳಕೈ ಮೇಜಿನ ಮೇಲೂರಿ, ಕೂತ. 

ಅವನ ಮೊಳಕೈಗಳ ಕೆಳಗೆ ಇದ್ದ ‘ಮೂಲೆ ಮುರಿದ’, ಹಾಗೂ ‘ವರ್ಗಾವಣೆ’ ಸೂಚಿಸುವ ಕಾರ್ಡುಗಳನ್ನು ನೋಡುತ್ತ, ಒಟ್ಟು ಎಷ್ಟು ಹಣ ಬೆಟ್ ಕಟ್ಟಿ ಸೋತಿರಬಹುದೆಂದು ಲೆಕ್ಕ ಹಾಕಿದ. ಅವನು ಆಗಲೇ ಎಷ್ಟು ಸೋತಿದ್ದನೆಂದರೆ ಲೆಕ್ಕ ಹಾಕುವುದಕ್ಕೇ ಭಯವಾಗುತ್ತಿತ್ತು. ಲೆಕ್ಕ ಹಾಕದಿದ್ದರೂ ಮುಂಗಡ ಪಡೆಯಬಹುದಾದ ಸಂಬಳದ ಪೂರ್ತಿ ದುಡ್ಡು, ಸ್ವಂತದ ಕುದುರೆ ಎಲ್ಲ ಸೇರಿದರೂ ಕೊಡಬೇಕಾದ ಮೊತ್ತಕ್ಕೆ ಸಮನಾಗುವುದಿಲ್ಲ ಅನ್ನುವುದು ತಿಳಿದಿತ್ತು. ಅವನೇನೋ ಇನ್ನೂ ಆಡುವುದಕ್ಕೆ ಸಿದ್ಧವಾಗಿದ್ದ. ಅಡ್ಜುಟೆಂಟ್ ಮಾತ್ರ ತನ್ನ ಸ್ವಚ್ಛವಾಧ ಬಿಳಿಯ ಕೈಯಲ್ಲಿ ಹಿಡಿದಿದ್ದ ಎಲೆಗಳನ್ನು ಇನ್ನು ಸಾಕು ಎಂದು ಖಚಿತವಾಗಿ ಹೇಳಿ, ಮಡಿಸಿಟ್ಟು, ಬಟ್ಲರ್‍ ನಿಂದ ಸಂದಾಯವಾಗಬೇಕಾದ ಹಣವನ್ನು ಕೂಡಿಸಿ ಲೆಕ್ಕ ಹಾಕಿದ. ಗೊಂದಲಗೊಂಡ ಬಟ್ಲರ್ ಒಟ್ಟು ಹಣ ಈಗಲೇ ಕೊಡಲು ಆಗದು, ಮನೆಗೆ ಹೋಗಿ ಕಳಿಸುತ್ತೇನೆ ಎಂದು ನೆಪಗಳನ್ನು ಹೇಳುವುದಕ್ಕೆ ಶುರು ಮಾಡಿದ. ಹಾಗೆ ಹೇಳುತ್ತ ಸುತ್ತಲೂ ನೋಡಿದರೆ ಪ್ರತಿಯೊಬ್ಬರೂ ಅವನ ಬಗ್ಗೆ ಅಯ್ಯೋ ಪಾಪ ಅನ್ನುವಂಥ ಮುಖ ಮಾಡಿಕೊಂಡಿದ್ದರೂ ಅವರು ಯಾರೂ—ಪೋಲ್ಟೊರಾಟ್ಸ್‌ಕಿ ಕೂಡ—ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೆ ಹಿಂಜರಿಯುತ್ತಿದ್ದರು. ಅವನು ಆಟಕ್ಕೆ ಸೇರದಿದ್ದರೇ ಚೆನ್ನಾಗಿರುತ್ತಿತ್ತು, ವೊರಾನ್ತಸೋವ್‌ ಮನೆಗೆ ಹೋಗಿದ್ದರೆ ಎಲ್ಲ ಸರಿಯಾಗಿರುತ್ತಿತ್ತು. ಈಗ ಅವನ ಸ್ಥಿತಿ ಭಯಂಕರವಾಗಿತ್ತು.

ಗೆಳೆಯರಿಗೆ, ಪರಿಚಿತರಿಗೆ ಎಲ್ಲರಿಗೂ ಹೋಗಿಬರುತ್ತೇನೆಂದು ಹೇಳಿ ಬಟ್ಲರ್ ಮನೆಗೆ ಹೋಗಿ ಮಲಗಿದ, ಆಟದಲ್ಲಿ ದೊಡ್ಡ ಮೊತ್ತ ಸೋತವರು ಸಾಮಾನ್ಯವಾಗಿ ಮಾಡುವ ಹಾಗೆ ಹದಿನೆಂಟು ಗಂಟೆಗಳ ಕಾಲ ದೀರ್ಘವಾದ ನಿದ್ರೆಯಲ್ಲಿ ಮುಳುಗಿದ್ದ. ತನ್ನ ಜೊತೆಗೆ ಬಂದಿದ್ದ ಕೊಸಾಕ್‍ಗೆ ಭಕ್ಷೀಸು ಕೊಡಲು ಐವತ್ತು ಕೊಪೆಕ್ ಹಣ ಕೊಡು ಎಂದು ಕೇಳಿದ್ದರಿಂದ, ಹಾಗೇ ಅವನ ಮುಖದಲ್ಲಿ ದುಃಖ ಮಡುಕಟ್ಟಿರುವುದು ಕಣ್ಣಿಗೆ ಬಿದ್ದದ್ದರಿಂದ, ಏನು ಕೇಳಿದರೂ ಒಂದೆರಡು ಮಾತುಗಳಲ್ಲಿ ಬಟ್ಲರ್ ಉತ್ತರ ಕೊಡುತ್ತಿದ್ದುದರಿಂದ ಇಸ್ಪೀಟಿನಲ್ಲಿ ಅವನು ಬಹಳ ಹಣ ಸೋತಿರಬೇಕು ಎಂದು ಮೇರಿ ದ್ಮಿತ್ರಿಯೇವ್ನಾ ಊಹಿಸಿದಳು. ಅವನಿಗೆ ರಜೆ ಕೊಟ್ಟು ತಪ್ಪು ಮಾಡಿದೆ ಎಂದು ಮೇಜರ್ ನನ್ನು ನಿಂದಿಸಿದಳು.  

ಮಾರನೆಯ ದಿನ ಮಧ್ಯಾಹ್ನ ಎಚ್ಚರವಾದಾಗ ತಾನಿರುವ ಪರಿಸ್ಥಿತಿ ತಟ್ಟನೆ ಬಟ್ಲರ್ ಮನಸಿಗೆ ಬಂದಿತ್ತು. ಇದೀಗ ಎಚ್ಚರವಾಗಿದ್ದರೂ ಮತ್ತೆ ನಿದ್ರೆಯಲ್ಲಿ ಮುಳುಗಿ ಎಲ್ಲವನ್ನೂ ಮರೆಯುವುದಕ್ಕಾದರೆ ಎಷ್ಟು ಚೆನ್ನ ಅನ್ನಿಸಿತು. ಅದು ಸಾಧ್ಯವಿರದ ಮಾತು. ಆಟದಲ್ಲಿ ಅವನನ್ನು ಸೋಲಿಸಿದ ಅಪರಿಚಿತನಿಗೆ ಕೊಡುವುದಕ್ಕೆ ನಾಲ್ಕು ನೂರ ಎಪ್ಪತ್ತು ರೂಬಲ್‍ಗಳನ್ನು ವ್ಯವಸ್ಥೆ ಮಾಡಬೇಕಾಗಿತ್ತು. ಅವನು ಮಾಡಿದ ಮೊದಲ ಕೆಲಸವೆಂದರೆ ತನ್ನಣ್ಣನಿಗೆ ಪತ್ರ ಬರೆದು ತಾನು ಮಾಡಿದ ಪಾಪವನ್ನು ಒಪ್ಪಿಕೊಂಡು, ಕೊನೆಯ ಬಾರಿಗೆ ಬೇಡುತ್ತಿದ್ದೇನೆ, ದಯವಿಟ್ಟು ದು ನೂರು ರೂಬಲ್ ಕೊಡು, ಅದಕ್ಕಾಗಿ ನಮ್ಮಿಬ್ಬರಿಗೆ ಸೇರಿರುವ ಗಿರಣಿಯನ್ನು ನಿನಗೇ ಬಿಟ್ಟುಕೊಡುತ್ತೇನೆ ಎಂದು ಕೋರಿಕೊಂಡ. ಆಮೇಲೆ ನಂಟರಲ್ಲಿ ಅತಿ ಜಿಪುಣಳಾಗಿದ್ದ ಹೆಂಗಸಿಗೆ ಪತ್ರ ಬರೆದು ಬೇಕಾದಷ್ಟು ಬಡ್ಡಿ ತೆಗೆದುಕೋ ನನಗೆ ತಕ್ಷಣವೇ ಐದು ನೂರು ರೂಬಲ್ ಸಾಲ ಕೊಡು ಎಂದು ಕೇಳಿಕೊಂಡ. ಕೊನೆಗೆ ಮೇಜರನನ್ನು ಕಾಣಲು ಹೋದ. ಅವನ ಬಳಿ-ಸರಿಯಾಗಿ ಹೇಳಬೇಕೆಂದರೆ ಮೇರಿ ದ್ಮಿತ್ರಿಯೇವ್ನಾಳ ಬಳಿ—ಖಂಡಿತ ದುಡ್ಡಿರುತ್ತದೆ ಅನ್ನುವ ನಂಬಿಕೆಯಲ್ಲಿ ಐನೂರು ರೂಬಲ್ ಸಾಲ ಕೇಳಿದ. 

‘ನಾನೇನೋ ಈಗಲೇ ಕೊಟ್ಟೇನು, ಅದಕ್ಕೆ ಮೇರಿ ದ್ಮಿತ್ರಿಯೇವ್ನಾ ಬಿಡಲ್ಲ. ಬಹಳ ಬಿಗಿ ಅವಳ ಕೈ. ಯಾವ ದೆವ್ವಕ್ಕೆ ತಾನೇ ಅರ್ಥ ಆಗತ್ತೆ ಹೆಂಗಸರ ಬುದ್ದಿ?…ಏನಾದರೂ ಮಾಡಿ ನೀನು ಪಾರಾಗಲೇಬೇಕು…ಆ ಕ್ಯಾಂಟೀನಿನವನ ಹತ್ತಿರ ದುಡ್ಡಿರಬೇಕು, ಕೇಳಿ ನೊಡಿದೆಯಾ?’ ಅಂದ ಮೇಜರ್.  

ಕ್ಯಾಂಟೀನಿನವನನ್ನು ಕೇಳಿ ಫಲವಿಲ್ಲ ಅನ್ನುವುದು ಬಟ್ಲರ್‌ಗೆ ಗೊತ್ತಿತ್ತು. ಅವನಿಗೆ ಇನ್ನು ಮುಕ್ತಿ ದೊರೆತರೆ ಅವನ ಅಣ್ಣನಿಂದ, ಅಥವಾ ಜಿಪುಣಿ ನಂಟಳಿಂದಲೇ ಸಿಗಬೇಕಾಗಿತ್ತು. 

[ ಮುಂದುವರೆಯುವುದು]

‍ಲೇಖಕರು avadhi

March 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: