ಶ್ರೀನಿವಾಸ ಪ್ರಭು ಅಂಕಣ – ನಿಂತ ಪಾಠ ಮತ್ತೆ ಶುರುವಾಗಲೇ ಇಲ್ಲ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

22

ಈ ಬಾರಿ ಘಟಿಕೋತ್ಸವವನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬಾರದೆಂದು ಮೊದಲಿನಿಂದಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಒಟ್ಟಾರೆಯಾಗಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕೆ ಒಂದು ಚಿನ್ನದ ಪದಕ, ನನ್ನ ವಿಶೇಷ ಅಧ್ಯಯನದ ವಿಷಯಗಳಾಗಿದ್ದ ಭಾಷಾವಿಜ್ಞಾನ ಹಾಗೂ ಸಂಸ್ಕೃತಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕೆ ಮತ್ತೊಂದು ಚಿನ್ನದ ಪದಕ – ಹೀಗೆ ಎರಡು ಪದಕಗಳು ನನಗೆ ಲಭಿಸಿದ್ದವು. ಅಂದಿನ ರಾಜ್ಯಪಾಲರು ಘಟಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರಿಂದಲೇ ಪ್ರಥಮ rank ಪ್ರಶಸ್ತಿ ಪತ್ರವನ್ನೂ ಚಿನ್ನದ ಪದಕಗಳನ್ನೂ ಸ್ವೀಕರಿಸುವಾಗ ಹೆಮ್ಮೆಯಿಂದ ಎದೆ ಉಬ್ಬಿತ್ತು. ಬದುಕಿನ ಒಂದು ಹಂತವನ್ನು ಯಶಸ್ವಿಯಾಗಿ ದಾಟಿದ್ದೇನೆ; ಈ ಯಶಸ್ಸಿನ ಉತ್ತೇಜನದಿಂದ ಮುಂದಿನ ಹಂತಗಳಲ್ಲೂ ಗೆಲುವಿನಿಂದ ಮುಂದುವರಿಯುತ್ತೇನೆಂಬ ಆತ್ಮವಿಶ್ವಾಸದಿಂದ ಬೀಗುತ್ತಿದ್ದೆ. ಆದರೆ ಈ ಸಂಭ್ರಮದ ಬಲೂನಿಗೆ ಸೂಜಿಮೊನೆ ತಾಗಲು ಬಹಳ ಸಮಯವೇನೂ ಬೇಕಾಗಲಿಲ್ಲ.

ಆಗಿನ ದಿನಗಳಲ್ಲಿ ಪ್ರಥಮ rank ಗಳಿಸಿದ ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಪತ್ರಿಕೆಗಳಲ್ಲಿ ವಿವರಗಳ ಸಮೇತ ಪ್ರಕಟಿಸುವ ಒಂದು ಪರಿಪಾಠ ಇತ್ತು. ನಾನೂ ಸಹ ನನ್ನದೊಂದು ಭಾವಚಿತ್ರ ಹಾಗೂ ಸರ್ಟಿಫಿಕೇಟ್ ಗಳನ್ನು ತೆಗೆದುಕೊಂಡು ಪ್ರಜಾವಾಣಿ ಕಚೇರಿಗೆ ಹೋದೆ. ಅಲ್ಲಿ ಸಂಪಾದಕ ವರ್ಗದ ಒಬ್ಬರ ಬಳಿಗೆ ಹೋಗಿ ನನ್ನ ವಿವರಗಳನ್ನು ಹೇಳಿ ಅರ್ಜಿ ಮತ್ತು ಫೋಟೋಗಳನ್ನು ನೀಡಿದೆ. ಎಲ್ಲವನ್ನು ನೋಡಿದ ಅವರು ನಮ್ಮ ಕೇಂದ್ರದ ಬಗ್ಗೆ, ನಮ್ಮ ಮೇಷ್ಟ್ರುಗಳ ಬಗ್ಗೆ ಸಾಕಷ್ಟು ಮಾತನಾಡಿ ಅನೇಕ ಪ್ರಶ್ನೆಗಳನ್ನು ಕೇಳಿದರು.. ತುಂಬಾ ವಿಶ್ವಾಸದಿಂದ ಮಾತಾಡಿಸಿ ಪೇಪರ್ ನಲ್ಲಿ photo ಪ್ರಕಟಿಸುವುದಾಗಿ ಭರವಸೆಯನ್ನೂ ನೀಡಿದರು. ಕೊನೆಯಲ್ಲಿ ನಾನು ಬಹಳ ಮುಗ್ಧನಾಗಿ ‘ನಿಮ್ಮ ಹೆಸರು ಗೊತ್ತಾಗಲಿಲ್ಲ ಸರ್’ ಎಂದೆ. ಒಂದು ಕ್ಷಣ ಕೊಂಚ ವಿಚಲಿತರಾದಂತೆ ಕಂಡ ಅವರು ತಕ್ಷಣವೇ ನಸುನಗುತ್ತಾ ‘ನಾನು YNK’ಎಂದರು! ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ, ಪತ್ರಿಕಾ ಮಾಧ್ಯಮಕ್ಕೆ Y N ಕೃಷ್ಣಮೂರ್ತಿ ಅಲಿಯಾಸ್ YNK ಅವರು ಅನುಪಮ ಕೊಡುಗೆಯನ್ನು ನೀಡಿದವರು; ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಗಳಿಂದ ಜನಮನ ಸೂರೆಗೊಂಡಿದ್ದವರು. ಅಂಥವರನ್ನು ಪೆದ್ದುಪೆದ್ದಾಗಿ ‘ನಿಮ್ಮ ಹೆಸರೇನು’ ಎಂದು ಕೇಳಿದೆನಲ್ಲಾ ಎಂದು ನನಗೇ ನಂತರ ಮುಜುಗರವಾಯಿತು. ಒಂದೆರಡು ದಿನಗಳ ನಂತರ ಸೆಂಟ್ರಲ್ ಕಾಲೇಜಿನಲ್ಲಿ ಸಿಕ್ಕ ನರಹಳ್ಳಿ ಬಾಲು, ‘ಏನೋ.. YNK ಅವರನ್ನು ನಿಮ್ಮ ಹೆಸರೇನು ಅಂತ ಕೇಳಿದೆಯಂತೆ!’ ಎಂದು ಮೃದುವಾಗಿ ಛೇಡಿಸಿದ. ಅದು YNK ಅವರೊಂದಿಗಿನ ನನ್ನ ಪ್ರಪ್ರಥಮ ಭೇಟಿ. ಮುಂದಿನ ದಿನಗಳಲ್ಲಿ ಅವರಿಂದ ನಾನು ಕಲಿತದ್ದು ಅಪಾರ. ಮುಂದಿನ ಪುಟಗಳಲ್ಲಿ ಆ ವಿವರಗಳನ್ನು ದಾಖಲಿಸುತ್ತೇನೆ.

ಘಟಿಕೋತ್ಸವ ಮುಗಿದ ಒಂದೆರಡು ದಿನಗಳಲ್ಲೇ ಕನ್ನಡ ಅಧ್ಯಯನ ಕೇಂದ್ರಕ್ಕೆ ಹೋಗಿ ನಿರ್ದೇಶಕರಾಗಿದ್ದ ಡಾ॥ಜಿ. ಎಸ್. ಶಿವರುದ್ರಪ್ಪನವರನ್ನು ಭೇಟಿಯಾದೆ. ಸಾಧಾರಣವಾಗಿ ಮೊದಲ rank ಬಂದವರನ್ನು ಕೇಂದ್ರದಲ್ಲಿಯೇ ಸಹಾಯಕ ಸಂಶೋಧಕರಾಗಿ ನೇಮಿಸಿಕೊಳ್ಳುವ ಒಂದು ಪರಿಪಾಠವಿತ್ತು. ನಾನೂ ಜಿ. ಎಸ್. ಎಸ್. ಅವರಲ್ಲಿ ಮನವಿ ಮಾಡಿಕೊಂಡೆ: ‘ನನಗೆ ಸಹಾಯಕ ಸಂಶೋಧಕನಾಗಿ ಕೇಂದ್ರದಲ್ಲಿಯೇ ಕೆಲಸ ಮಾಡಲು ತುಂಬಾ ಆಸಕ್ತಿ ಇದೆ ಸರ್.ದಯವಿಟ್ಟು ಅವಕಾಶ ಮಾಡಿಕೊಡಿ.’ ‘ಇಲ್ಲ ಶ್ರೀನಿವಾಸ ಪ್ರಭು.. sorry.. ಈ ಸಲ ನಮ್ಮಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ನೀವು ಬೇರೆ ಕಾಲೇಜ್ ಗಳಲ್ಲಿ ಉಪನ್ಯಾಸಕರ ಕೆಲಸಕ್ಕೆ ಪ್ರಯತ್ನ ಪಡೋದು ಒಳ್ಳೇದು’ ಎಂದು ಜಿ. ಎಸ್. ಎಸ್. ಅವರು ಒಂದೇ ಬೀಸಿನಲ್ಲಿ ನನ್ನ ಬೇಡಿಕೆಯನ್ನು ತಳ್ಳಿಹಾಕಿಬಿಟ್ಟರು. ಸರಿ, ಹುದ್ದೆಯೇ ಖಾಲಿಯಿಲ್ಲವೆಂದ ಮೇಲೆ ಮಾಡುವುದಾದರೂ ಏನಿದೆ? ಎಂದು ನಿರಾಸೆಯಿಂದ ಮನೆಗೆ ಮರಳಿದೆ.

ಆಗ ಕೆಂದ್ರದಲ್ಲಿ ರೀಡರ್ ಆಗಿದ್ದ ಡಾ॥ ಚಿದಾನಂದಮೂರ್ತಿಗಳು ನನಗೆ ಸೊಗಸಾದ ಪ್ರಮಾಣಪತ್ರವೊಂದನ್ನು ಬರೆದುಕೊಟ್ಟಿದ್ದರು. ಅದನ್ನು ಓದಿದವರು ಯಾರೇ ಆಗಲಿ ಕಣ್ಣುಮುಚ್ಚಿಕೊಂಡು ನನಗೆ ಕೆಲಸ ಕೊಟ್ಟುಬಿಡಬೇಕು—ಅಷ್ಟು ಒಳ್ಳೆಯ ಮಾತುಗಳನ್ನು ನನ್ನ ಬಗ್ಗೆ ಬರೆದಿದ್ದರು ಚಿದಾನಂದ ಮೂರ್ತಿಗಳು. ಈಗಲೂ ಆ ಪತ್ರ ನನ್ನ ಕಡತದಲ್ಲಿ ಭದ್ರವಾಗಿದೆ. ಪ್ರಥಮ rank, ಎರಡು ಚಿನ್ನದ ಪದಕಗಳು, ಸೊಗಸಾದ ಪ್ರಮಾಣ ಪತ್ರಗಳು… ಒಂದು ಅಧ್ಯಾಪಕನ ಕೆಲಸ ಪಡೆದುಕೊಳ್ಳಲು ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು ಎಂದು ನಾನು ತುಂಬು ವಿಶ್ವಾಸದಲ್ಲೇ ಇದ್ದೆ. ಶ್ರೀಮಂಗಲ, ಭದ್ರಾವತಿ, ತುಮಕೂರು, ತಿಪಟೂರು, ಶಿವಮೊಗ್ಗ, ಅನೇಕ ಗ್ರಾಮೀಣ ಪ್ರದೇಶಗಳು… ಎಲ್ಲ ಕಡೆಯೂ ಕಾಲೇಜ್ ಗಳಲ್ಲಿ ಸಂದರ್ಶನಕ್ಕೆ ಹೋಗಿಬಂದೆ. ಆದರೆ ಆ ಸಂದರ್ಶನಗಳು ಕೇವಲ ಔಪಚಾರಿಕವೆಂದೂ ಆ ಪ್ರಕ್ರಿಯೆಯನ್ನು ನಡೆಸದೆ ಆಯ್ಕೆಗೆ ಅವಕಾಶವಿಲ್ಲದಿದ್ದ ಕಾರಣಕ್ಕೆ ಅಂಥದೊಂದು ನಾಟಕವನ್ನು ನಡೆಸುತ್ತಾರೆಂದೂ ಅರ್ಥವಾಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ.

ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ, ‘ನೀವು first rank ಪಡೆದಿರೋರು.. ನಾಳೆ ಬೆಂಗಳೂರಲ್ಲಿ ದೊಡ್ಡ ಕಾಲೇಜಲ್ಲಿ ಕೆಲಸ ಸಿಕ್ಕಿದರೆ ಹಾರಿಬಿಡ್ತೀರಿ.. ನಾವು ಮತ್ತೆ ಸಂದರ್ಶನ ಮಣ್ಣುಮಸಿ ಅಂತ ಒದ್ದಾಡಬೇಕು.. ನಮಗೆ second class ಬಂದಿರೋರೇ ಸಾಕು ಬಿಡಿ’ ಎಂದು ಅವಕಾಶ ನಿರಾಕರಿಸುತ್ತಿದ್ದರು. ಮತ್ತಷ್ಟು ಕಾಲೇಜ್ ಗಳಲ್ಲಿ ಆಡಳಿತ ವರ್ಗದವರ ಜಾತಿಯ ಅಭ್ಯರ್ಥಿಗೇ ಆದ್ಯತೆ; ಮತ್ತೆ ಕೆಲವು ಕಡೆ ದೊಡ್ಡ ದೊಡ್ಡವರ ಶಿಫಾರಸ್ಸಿನ ಅಭ್ಯರ್ಥಿಗೆ ಮನ್ನಣೆ. ಈ ಎಲ್ಲಾ ಭರಾಟೆಗಳಲ್ಲಿ ಕೇವಲ ಚಿನ್ನದ ಪದಕಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡ,ಬೇರೆ ಯಾವ ‘ವಿಶೇಷ’ ಅರ್ಹತೆಗಳೂ ಇಲ್ಲದ ನನ್ನಂಥವನನ್ನು ಕೇಳುವವರಾದರೂ ಯಾರು? ನಿಧಾನವಾಗಿ ಮತ್ತೆ ನಿರಾಸೆ—ಹತಾಶೆಗಳು ಆವರಿಸಿಕೊಳ್ಳತೊಡಗಿದವು. ‘ಇಂದಲ್ಲ ನಾಳೆ ಒಂದು ಒಳ್ಳೇ ಕೆಲಸ ಸಿಕ್ಕೇ ಸಿಕ್ಕುತ್ತದೆ.. ಅಷ್ಟು ನಿರಾಶನಾಗಬೇಡ’ ಎಂದು ಮನೆಯವರು ಧೈರ್ಯ ತುಂಬುತ್ತಲೇ ಇದ್ದರು.

ಒಂದೆರಡು ಕಡೆ ಆಯ್ಕೆಯಾಗದಿದ್ದರೆ ಅದು ಬೇರೆ ಮಾತು; ಸಾಲುಸಾಲಾಗಿ 20-25 ಕಡೆಗಳಲ್ಲಿ ‘ನಮಗೆ ನಿಮ್ಮ ಅಗತ್ಯವಿಲ್ಲ’ ಎಂದು ಅಟ್ಟಿಬಿಟ್ಟರೆ ಆತ್ಮಸ್ಥೈರ್ಯ ಕುಸಿಯದೇ ಇರುತ್ತದೆಯೇ? ಅದೇ ವೇಳೆಗೆ ಸರಿಯಾಗಿ ಮೈಸೂರು ವಿಶ್ವ ವಿದ್ಯಾಲಯದ ಎಂ ಎ ಪದವೀಧರರೊಬ್ಬರನ್ನು ನಮ್ಮ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಸಂಶೋಧಕರಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಬಂದಪ್ಪಳಿಸಿತು. ಕೇವಲ ಕೆಲ ತಿಂಗಳ ಹಿಂದೆ ಇಲ್ಲದಿದ್ದ ಹುದ್ದೆ ಇದ್ದಕ್ಕಿದ್ದಂತೆ ಸೃಷ್ಟಿಯಾಗಿತ್ತು! ಅವರ ಗರಡಿಯಲ್ಲೇ ಪಳಗಿ ಮೊದಲ rank ಗಳಿಸಿದ್ದ ನಾನು ಅವರ ಕಣ್ಣಿಗೇ ಬೀಳಲಿಲ್ಲ! ಕಷ್ಟಪಟ್ಟು ದೂರ ಅಟ್ಟಿದ್ದ ಚಿಕ್ಕಂದಿನ ಹಿಂಜರಿಕೆ-ಕೀಳರಿಮೆಗಳು ನಿಧಾನವಾಗಿ ಮತ್ತೆ ಆಕ್ರಮಿಸಿಕೊಳ್ಳತೊಡಗಿದವು. ವಿಚಿತ್ರ ಚಡಪಡಿಕೆ-ತಲ್ಲಣಗಳು ಕಾಡುತ್ತಾ ಖಿನ್ನತೆ-ಸ್ವಾನುಕಂಪಗಳು ಮತ್ತೆ ಗೂಡು ಕಟ್ಟಿಕೊಳ್ಳತೊಡಗಿದವು.

ದಿನನಿತ್ಯದ ಸಣ್ಣಪುಟ್ಟ ಹಾಗೂ ಕೆಲ ‘ವಿಶೇಷ’ ಖರ್ಚುಗಳನ್ನು (ಬಿಯರ್ ಮತ್ತು ಸಿಗರೇಟು) ತೂಗಿಸುವುದಕ್ಕಾದರೂ ಎಲ್ಲಿಯಾದರೂ ಒಂದು ಕೆಲಸವನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಇತ್ತು ನನಗೆ. ಒಂದು ದಿನ ನ್ಯಾಷನಲ್ ಕಾಲೇಜ್ ನಲ್ಲಿ ‘ಸದ್ದು.. ವಿಚಾರಣೆ ನಡೀತಿದೆ’ ನಾಟಕದ ತಾಲೀಮಿನ ವೇಳೆ ಪರೇಶ ಕೇಳಿದ: ‘ಒಬ್ಬ ದೊಡ್ಡ ಮನುಷ್ಯರಿಗೆ ಕನ್ನಡ ಪಾಠ ಹೇಳಿಕೊಡಬೇಕು.. ಅದೂ ಇಂಗ್ಲೀಷ್ ನಲ್ಲಿ. ಆಗುತ್ತಾ?.’ ಇಂಗ್ಲೀಷ್ ಭಾಷೆಯಲ್ಲಿ ಯಾವುದೇ ಮಟ್ಟದ ಪ್ರಾವೀಣ್ಯತೆ ಇಲ್ಲದೇ ಹೋದರೂ ಸಂವಹನ ಸಲೀಸಾಗಿ ಸಾಧ್ಯವಾಗುವಷ್ಟು ಆ ಭಾಷೆಯನ್ನು ಬಲ್ಲವನಾಗಿದ್ದೆ. ಜೊತೆಗೆ ಕನ್ನಡ ಸಾಹಿತ್ಯವನ್ನೇನೂ ಬೋಧಿಸಬೇಕಿಲ್ಲ.. ಅವರಿಗೆ ಕನ್ನಡದಲ್ಲಿ ವ್ಯವಹರಿಸಲು ಅನುಕೂಲವಾಗುವಷ್ಟು ತಿಳುವಳಿಕೆ ದೊರೆತರೆ ಸಾಕಿತ್ತು. ಭಂಡಧೈರ್ಯದಿಂದ ‘ಆಗಲಿ, ಹೇಳಿಕೊಡುತ್ತೇನೆ’ ಎಂದು ಒಪ್ಪಿಕೊಂಡುಬಿಟ್ಟೆ.

ಆ ದೊಡ್ಡ ಮನುಷ್ಯರು ಯಾರೆಂದರೆ ಭೊರುಕಾ ಸ್ಟೀಲ್ ಪ್ಲಾಂಟ್ ನ MD ಆಗಿದ್ದ ಸುರಿಂದರ್ ಅಗರವಾಲ್ ಅವರು. ಅವರ ಮನೆ ಇದ್ದದ್ದು ಜಯಮಹಲ್ ಬಡಾವಣೆಯಲ್ಲಿ. ನಾನು ಬೆಳಿಗ್ಗೆ ಎಂಟರ ಸುಮಾರಿಗೆ ನನ್ನ ಲೇಡೀಸ್ ಸೈಕಲ್ ನಲ್ಲಿ ಅವರ ಮನೆಗೆ ಹೋಗುವುದು, ಅಲ್ಲಿಂದ ಅವರ ಐಷಾರಾಮಿ ಕಾರ್ ನಲ್ಲಿ ಅವರೊಟ್ಟಿಗೆ ವೈಟ್ ಫೀಲ್ಡ್ ಬಳಿ ಇದ್ದ ಅವರ ಫ್ಯಾಕ್ಟರಿ ತನಕ ಹೋಗುವುದು, ದಾರಿಯುದ್ದಕ್ಕೂ ಅವರಿಗೆ ಕನ್ನಡದಲ್ಲಿ ಮಾತಾಡುವುದು ಹೇಗೆಂಬ ಕುರಿತಾಗಿ ಪಾಠ ಮಾಡುವುದು, ಅವರನ್ನು ಫ್ಯಾಕ್ಟರಿಗೆ ಬಿಟ್ಟು ಮರಳಿ ಅದೇ ಕಾರ್ ನಲ್ಲಿ ಅವರ ಮನೆಯ ಬಳಿ ಬಂದು ನನ್ನ ಸೈಕಲ್ ತೆಗೆದುಕೊಂಡು ಹೊರಡುವುದು… ಹೀಗಿತ್ತು ಆ ಸಮಯದ ನನ್ನ ದಿನಚರಿ.

ಮೊದಲನೆಯ ದಿನ ಅವರ ಮನೆಗೆ ಹೋದವನೇ ಹೊರಭಾಗದಲ್ಲಿ ಸೈಕಲ್ ಅನ್ನು ನಿಲ್ಲಿಸಿ ಒಳಹೋಗುವಷ್ಟರಲ್ಲಿ ಅವರ ಡ್ರೈವರ್ ರಾಮಲಾಲ್ ದುಡುದುಡು ಓಡಿ ಬಂದು ಸೈಕಲ್ ಅನ್ನು ತಾನೇ ದೂಡಿಕೊಂಡು ಹೋಗಿ ಗ್ಯಾರೇಜಿನ ಒಂದು ಮೂಲೆಯಲ್ಲಿ ನಿಲ್ಲಿಸಿದ. ಗಲಿಬಿಲಿಗೊಂಡ ನಾನು ಪ್ರಶ್ನಾರ್ಥಕವಾಗಿ ಅವನ ಮುಖವನ್ನೇ ನೋಡಿದೆ. ರಾಮಲಾಲ್ ದೇಶಾವರಿ ನಗೆ ಬೀರುತ್ತಾ ‘ವೋ ಕ್ಯಾ ಹೈ ಕೀ ಅಂದರ್ ಸೇಫ್ಟಿರೆಹತಾ ಹೈ ಔರ್ ಲೋಗ್ ಭೀ ದೇಖತೇ ಹೈ ನ’ ಎಂದ. ಓಹೋ! ಇದು ಹೀಗೆ! ನನ್ನ ಸಾಧಾರಣ ಸೈಕಲ್ ನ ಸುರಕ್ಷತೆಯ ಕಾಳಜಿಗಿಂತ ದೊಡ್ಡ ದೊಡ್ಡ ಮನುಷ್ಯರೇ ಇದ್ದ ಆ ಶ್ರೀಮಂತ ಬಡಾವಣೆಯಲ್ಲಿ ತನ್ನ ಧಣಿಯಂತಹ ದೊಡ್ಡ ಮನುಷ್ಯರ ಮನೆಯ ಮುಂದೆ ಯಃಕಶ್ಚಿತ್ ಒಂದು ಸೈಕಲ್ ತಾಸುಗಟ್ಟಲೆ ನಿಂತಿರುವುದು ಯಜಮಾನರ ಗೌರವಕ್ಕೆ ಧಕ್ಕೆ ಎಂದೇ ಆತ ಭಾವಿಸಿದ್ದ!ತುಂಬಾ ಕಸಿವಿಸಿ ಅನ್ನಿಸಿ ಏನೂ ಮಾತಾಡದೆ ಒಳಗಡೆಗೆ ಹೊರಟುಹೋದೆ.

ಹೀಗೆ ಪಾಠ ಆರಂಭಿಸಿ ಒಂದು ತಿಂಗಳ ಮೇಲೆ ಒಂದು ವಾರ ಕಳೆದರೂ ಅಗರವಾಲ್ ಸಾಹೇಬರು ಸಂಬಳದ ವಿಚಾರವನ್ನೇ ಎತ್ತಲಿಲ್ಲ! ಎಷ್ಟು ಕೊಡುತ್ತಾರೆಂಬುದೂ ಕೂಡಾ ತಿಳಿಯದೆ ಪ್ರತಿನಿತ್ಯ ಕುತೂಹಲ—ನಿರೀಕ್ಷೆಗಳಲ್ಲೇ ಮುಳುಗೇಳುತ್ತಿದ್ದೆ. ತಮ್ಮ ವ್ಯವಹಾರಗಳಲ್ಲೇ ವ್ಯಸ್ತರಾಗಿರುತ್ತಿದ್ದ ಅಗರವಾಲರಿಗೆ ಒಮ್ಮೆ ನೆನಪಿಸದೆ ಸಂಬಳ ಮಂಜೂರಾಗದೆಂದು ನನಗೆ ಖಾತ್ರಿಯಾಗಿಹೋಯಿತು. ವಿಧಿಯಿಲ್ಲದೇ ಪರೇಶನ ಮೊರೆಹೋಗಿ ವಿಷಯವನ್ನು ಅವನ ಗಮನಕ್ಕೆ ತಂದೆ. ರಾಯಭಾರ ಯಶಸ್ವಿಯಾಯಿತು! ಮರುದಿನ ಕಾರ್ ನಲ್ಲಿ ಕೂರುತ್ತಿದ್ದಂತೆಯೇ ಅಗರವಾಲ್ ಸಾಹೇಬರು ತಮ್ಮ ಸಫಾರಿ ಸೂಟ್ ನ ಜೇಬಿನಿಂದ ಗರಿಗರಿಯಾದ ಮೂರು ನೂರರ ನೋಟುಗಳನ್ನು ತೆಗೆದು ನನ್ನ ಕೈಗಿರಿಸಿ, ‘ನಿಂಗೆ ಹೊಳ್ಳೇದ್ ಆಗ್ಲಿ’ ಎಂದು ಅಚ್ಚಕನ್ನಡದಲ್ಲೇ ಹರಸಿದರು. ಮುನ್ನೂರು ರೂಪಾಯಿಗಳು! ನನ್ನ ಸ್ವಂತ ದುಡಿಮೆ! ಖುಷಿಗೆ ಪಾರವೇ ಇಲ್ಲದಂತಾಯಿತು. ಆದರೆ ಈ ಖುಷಿಯೂ ಬಹಳ ದಿನ ಬಾಳಲಿಲ್ಲ. ಒಂದಷ್ಟು ದಿನಗಳ ನಂತರ ಅಗರವಾಲ್ ರು ಅಮೇರಿಕಾ ಪ್ರವಾಸಕ್ಕೆ ಹೊರಟು ಆ ಕಾರಣಕ್ಕೆ ನಿಂತ ಪಾಠ ಮತ್ತೆ ಶುರುವಾಗಲೇ ಇಲ್ಲ.

1974 ರಲ್ಲಿಯೇ ಆಗ ಕನ್ನಡ ಹವ್ಯಾಸಿ ರಂಗಭೂಮಿಯ ಒಂದು ಪ್ರಮುಖ ತಂಡವಾಗಿದ್ದ ಕನ್ನಡ ಸಾಹಿತ್ಯ ಕಲಾಸಂಘದ ವತಿಯಿಂದ ಅಬ್ಬೂರು ಜಯತೀರ್ಥ ಅವರು ‘ಆಷಾಢದ ಒಂದು ದಿನ’ ನಾಟಕವನ್ನು ಮಾಡಿಸಿದರು. ಅಬ್ಬೂರರೂ ಕೂಡಾ ಏಜೀಸ್ ಆಫೀಸ್ ನಲ್ಲೇ ಕೆಲಸ ಮಾಡುತ್ತಿದ್ದು ನಳಿನಿ ಅಕ್ಕನ ಸಹೋದ್ಯೋಗಿಯಾಗಿದ್ದರು.’ಆಷಾಢದ ಒಂದು ದಿನ’ ನಾಟಕದ ಮುಖ್ಯ ಭೂಮಿಕೆಯ ನಿರ್ವಹಣೆಗಾಗಿ ಅಬ್ಬೂರರು ನಳಿನಿ ಅಕ್ಕನನ್ನೇ ಆರಿಸಿದರು. ನಾನು ಹೆಚ್ಚು ಕಡಿಮೆ ಪ್ರತಿನಿತ್ಯ ಅಕ್ಕನ ಜೊತೆ ರಿಹರ್ಸಲ್ ಗೆ ಹೋಗುತ್ತಿದ್ದೆ. ರಿಹರ್ಸಲ್ ನಲ್ಲಿ ಅಬ್ಬೂರರು ಕಲಾವಿದರಿಗೆ ಸಂಭಾಷಣೆಗಳನ್ನು ಹೇಳಿಕೊಡುತ್ತಿದ್ದ ರೀತಿ, ಚಲನವಲನಗಳ ತಾರ್ಕಿಕ ವಿನ್ಯಾಸವನ್ನು ಅಭ್ಯಾಸ ಮಾಡಿಸುತ್ತಿದ್ದ ಶೈಲಿ, ಒಟ್ಟಾರೆ ದೃಶ್ಯವನ್ನು ರಂಗಕ್ಕೆ ಅನನ್ಯವಾಗಿ ಒಗ್ಗಿಸುತ್ತಿದ್ದ ಪ್ರಕ್ರಿಯೆ… ಎಲ್ಲವನ್ನೂ ಗಮನಿಸುತ್ತಾ ರಂಗನಿರ್ದೇಶನದ ಪ್ರಾಥಮಿಕ ಪಾಠಗಳನ್ನು ರೂಢಿಸಿಕೊಂಡೆ. ನಳಿನಿ ಅಕ್ಕನಂತೂ ತನ್ನ ಪಾತ್ರದಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದಳು.

ಸದಾ ಸರ್ವಕಾಲ ಅವಳ ಪಾತ್ರದ್ದೊಂದೇ ಧ್ಯಾನ ಅವಳಿಗೆ. ಪದೇ ಪದೇ ಮಾತುಗಳನ್ನು ನೆನಪಿಸಿಕೊಳ್ಳುವುದು, ಮನೆಯಲ್ಲಿದ್ದಾಗ ಚಲನವಲನಗಳ ಅಭ್ಯಾಸ, ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಮುಖದ ಹಾವಭಾವಗಳನ್ನು ತಿದ್ದಿಕೊಳ್ಳುವುದು… ಹೀಗೆ ತನ್ನ ಪಾತ್ರದ ಭಾವಕೋಶದಿಂದ ಅವಳು ಹೊರ ಬರುತ್ತಿದ್ದುದೇ ಅಪರೂಪ. ಆಫೀಸ್ ಗೆ ಹೋಗುವಾಗ ಬಸ್ ನಲ್ಲಿ ಕೂತಿರುತ್ತಿದ್ದ ಅಕ್ಕನ ತುಟಿಗಳು ಮೆಲ್ಲಗೆ ಚಲಿಸುತ್ತಲೇ ಇರುತ್ತಿದ್ದವು.. ಮನಸ್ಸಿನಲ್ಲಿ ಸಂಭಾಷಣೆಗಳ ಮೆರವಣಿಗೆ ಸಾಗುತ್ತಿತ್ತು! ಹೀಗೆ ಒಬ್ಬ ಕಲಾವಿದನ ತನ್ಮಯತೆ-ಬದ್ಧತೆ-ತೊಡಗುವಿಕೆಗಳ ಪಾಠಗಳನ್ನು ಅಕ್ಕನಿಂದಲೇ ಕಲಿಯತೊಡಗಿದೆ. ‘ಆಷಾಢದ ಒಂದು ದಿನ’ ನಾಟಕವೂ ರಂಗದ ಮೇಲೆ ಸೊಗಸಾಗಿ ಮೂಡಿಬಂದು ನಳಿನಿ ಅಕ್ಕ ಹವ್ಯಾಸಿ ರಂಗಭೂಮಿಯ ಒಬ್ಬ ಅತ್ಯಂತ ಭರವಸೆಯ ಪ್ರತಿಭಾವಂತ ನಟಿಯಾಗಿ ರೂಪುಗೊಂಡಳು.

ಇದೇ ಸಂದರ್ಭದಲ್ಲಿನ ಒಂದೆರಡು ಪ್ರಸಂಗಗಳು ನೆನಪಾಗುತ್ತಿವೆ. ಪ್ರಸಿದ್ಧ ಸಾಹಿತಿ—ಪತ್ರಕರ್ತ ಬಾಬು ಕೃಷ್ಣಮೂರ್ತಿಗಳು ಆಗಷ್ಟೇ ತಮ್ಮ ಮಹತ್ವಾಕಾಂಕ್ಷೆಯ ‘ಅಜೇಯ’ ಕೃತಿಯನ್ನು ಬರೆದು ಮುಗಿಸಿದ್ದರು. ಚಂದ್ರಶೇಖರ ಆಜಾ಼ದ್ ರ ಬದುಕು—ಹೋರಾಟಗಳನ್ನು ಅಪೂರ್ವ ರೀತಿಯಲ್ಲಿ ದಾಖಲಿಸಿದ್ದ ಈ ಕೃತಿಯಲ್ಲಿ ಬರುವ ಅಸಂಖ್ಯಾತ ಹೆಸರುಗಳ ಅಕಾರಾದಿ ಪಟ್ಟಿಯನ್ನು ತಯಾರಿಸುವ ಕೆಲಸದಲ್ಲಿ ನಾನು ಹಾಗೂ ಕವಿ ಸುಧಾರ್ಥಿಯವರು ಬಾಬು ಜೀ ಅವರಿಗೆ ನೆರವಾಗಿದ್ದೆವು. ಒಂದು ಐತಿಹಾಸಿಕ ಕಾದಂಬರಿಯ ರಚನೆಯ ವೇಳೆಯಲ್ಲಿ ಬರಹಗಾರ ಎದುರಿಸುವ ಸವಾಲುಗಳು, ಆತನ ಜವಾಬ್ದಾರಿ-ಬದ್ಧತೆಗಳನ್ನು ಕುರಿತಾಗಿ ಬಾಬು ಕೃಷ್ಣಮೂರ್ತಿಯವರು ಅನೇಕ ಸಂಗತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು.

ಒಂದು ದಿನ ವೈನಿ, ಆಪ್ತ ಗೆಳೆಯ ರಘುನಂದನ್ ನ ತಾಯಿ ಇಂದಿರಮ್ಮ, ನನಗೂ ಮತ್ತೊಬ್ಬ ಆಪ್ತ ಮಿತ್ರ ನಾಗೇಶನಿಗೂಮನೆಗೆ ಬರುವಂತೆ ಹೇಳಿಕಳಿಸಿದರು. ನಾಗೇಶನೂ ಅದಾಗ Statistics MSc ಮುಗಿಸಿ ಕೆಲಸದ ಅನ್ವೇಷಣೆಯಲ್ಲಿದ್ದ. ವೈನಿ ತಮ್ಮ ಮನೆಯಲ್ಲೇ ಹತ್ತಾರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಜಾಸ್ತಿಯಾಗಿ ಅವರೊಬ್ಬರಿಗೇ ಪಾಠಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಅಲ್ಲಿಗೆ ಬರುತ್ತಿದ್ದ ಹೈಸ್ಕೂಲ್ ಮಕ್ಕಳಿಗೆ ಕನ್ನಡ ಹಾಗೂ ಸಂಸ್ಕೃತ ವಿಷಯಗಳನ್ನು ಹೇಳಿಕೊಡಲು ಸಾಧ್ಯವೇ ಎಂದು ನನ್ನನ್ನು ಕೇಳಿದರು. ನಾಗೇಶನಿಗೆ ಗಣಿತದ ಪಾಠದ ಜವಾಬ್ದಾರಿ. ವೈನಿಯವರು ತಾವೇ ಸ್ವತಃ ಮಕ್ಕಳಿಂದ ಬಹಳ ಕಡಿಮೆ ಫೀಸ್ ತೆಗೆದುಕೊಳ್ಳುತ್ತಿದ್ದರೂ ನಮ್ಮಿಬ್ಬರಿಗೂ 50-50 ರೂಪಾಯಿಗಳ ಸಂಬಳ ನಿಗದಿ ಮಾಡಿದರು. ಆ ಕಾಲಕ್ಕೆ ಅದು ಸಣ್ಣ ಮೊತ್ತವೇನೂ ಆಗಿರಲಿಲ್ಲ.. ಅದೂ ಒಬ್ಬ ನಿರುದ್ಯೋಗಿ ಯುವಕನಿಗೆ. ಸಂತೋಷವಾಗಿ ಒಪ್ಪಿಕೊಂಡೆ. ಕ್ಲಾಸ್ ಗೆ ಹೋಗಿಬರಲು ಹೇಗೂ ವೈನಿಯವರೇ ಕೊಟ್ಟಿದ್ದ ಚಂದ್ರಿಕಾಳ ಲೇಡೀಸ್ ಸೈಕಲ್ ನನ್ನ ಬಳಿಯೇ ಇತ್ತಲ್ಲಾ! ಅಂತೂ ಕಾಲೇಜ್ ನಲ್ಲಿ ಉಪನ್ಯಾಸಕನ ಕೆಲಸ ಸಿಗದೆ ಹೋದರೂ ಹೈಸ್ಕೂಲ್ ಮಕ್ಕಳಿಗೆ ಪಾಠ ಹೇಳುವ ಕೆಲಸ ಸಣ್ಣ ಮಟ್ಟದಲ್ಲಿಯೇ ಆದರೂ ಆರಂಭವಾಯಿತು.

ನಾವು ಮನೆ ಬದಲಿಸಿಕೊಂಡು ತುಸು ದೂರ ಹೋದರೂ ಹದಿನೆಂಟನೇ ಮುಖ್ಯ ರಸ್ತೆಯ ಛಾಯಣ್ಣನ ಸಂಪರ್ಕವೇನೂ ತಪ್ಪಿರಲಿಲ್ಲ. ಒಮ್ಮೆ ಅವನನ್ನು ನೋಡಲು ಹೋದಾಗ ಛಾಯಣ್ಣ ಗಿಟಾರ್ ಅಭ್ಯಾಸ ಮಾಡುತ್ತಾ ಕುಳಿತಿದ್ದ. ಬಾಲ್ಯದಿಂದಲೇ ಹಾಡು-ಸಂಗೀತದ ಹುಚ್ಚು ಹಿಡಿಸಿಕೊಂಡಿದ್ದ ನಾನು ಪರಿಸ್ಥಿತಿಗಳ ಒತ್ತಡದಿಂದಾಗಿ ಸಂಗೀತ ಕಲಿಯಲಾಗದೇ ಆಸೆಗಳನ್ನು ಹತ್ತಿಕ್ಕಿಕೊಂಡಿದ್ದೆ. ಈಗ ಛಾಯಣ್ಣನ ಕೈಯಲ್ಲಿ ಗಿಟಾರ್ ನೋಡುತ್ತಿದ್ದಂತೆ ಆಸೆಗಳು ಗರಿಗೆದರತೊಡಗಿದವು. ದಿನೇ ದಿನೇ ಗಿಟಾರ್ ಕಲಿಯುವ ಹಂಬಲ ಹೆಚ್ಚಾಯಿತು. ವೈನಿಯವರ ಮನೆ ಪಾಠಗಳಿಂದ ಬರುತ್ತಿದ್ದ ದುಡ್ಡಿನ ಹೆಚ್ಚಿನಂಶ ಸಿನೆಮಾ ನೋಡುವುದಕ್ಕೇ ಖರ್ಚಾಗುತ್ತಿತ್ತಾದರೂ ಚೂರುಪಾರು ಶೇಖರಿಸಿಟ್ಟುಕೊಂಡಿದ್ದೆ.

ಒಂದು ಸುಮುಹೂರ್ತದಲ್ಲಿ ಛಾಯಣ್ಣನಿಂದ ವಿವರಗಳನ್ನು ಪಡೆದುಕೊಂಡು ಮೆಜೆಸ್ಟಿಕ್ ನ ಆಜುಬಾಜಿನಲ್ಲಿರುವ ಅದಾವುದೋ ಪೇಟೆಯಲ್ಲಿದ್ದ ಅರುಣಾ ಮ್ಯೂಸಿಕಲ್ಸ್ ಗೆ ಹೋಗಿ ಒಂದು ಸಾಧಾರಣ ಗಿಟಾರ್ ಖರೀದಿಸಿಯೇ ಬಿಟ್ಟೆ. ಆಗ ಒಂದು ಸಾಧಾರಣ ಗಿಟಾರ್ ಬೆಲೆ ತೊಂಬತ್ತು ರೂಪಾಯಿ. ಅಲ್ಲಿ ನೋಡಿದರೆ ಎರಡು ಹಳೆಯ ಬುಲ್ ಬುಲ್ ತರಂಗ್ ಗಳನ್ನು ಕಡಿಮೆ ಬೆಲೆಗೆ ಮಾರಾಟಕ್ಕಿಟ್ಟಿದ್ದರು. ಬುಲ್ ಬುಲ್ ತರಂಗ್ ನುಡಿಸಲು ಕಲಿಸುವ ಗೈಡ್ ಗಳೂ ಸಹಾ ಆ ಅಂಗಡಿಯಲ್ಲಿದ್ದವು. ಅಷ್ಟನ್ನೂ ಒಟ್ಟಿಗೆ ನೂರು ರೂಪಾಯಿಗೆ ಖರೀದಿ ಮಾಡಿ ಸಂಭ್ರಮದಿಂದ ಮನೆಗೆ ತಂದೆ. ‘ನನ್ನ ಮಿತ್ರನ ವಾದ್ಯಗಳು.. ಅವನ ಬಳಿ ಇನ್ನೂ ಎರಡೆರಡು ವಾದ್ಯಗಳಿವೆ.. ಸ್ವಲ್ಪ ದಿನ ಇಟ್ಟುಕೊಂಡಿರು ಅಂತ ಕೊಟ್ಟಿದಾನೆ’ ಎಂದೊಂದು ಸುಳ್ಳು ಒಗಾಯಿಸಿದೆ. ನಿಜ ಹೇಳಿದ್ದರೂ ಅವರೇನೂ ಅನ್ನುತ್ತಿರಲಿಲ್ಲವಾದರೂ ನನಗೇ ಒಳಗೆ ತಪ್ಪಿತಸ್ಥ ಭಾವನೆ ಕಾಡುತ್ತಿತ್ತು.

‘ನೂರು ರೂಪಾಯಿ ಕೊಟ್ಟು ಈ ವಾದ್ಯಗಳನ್ನು ತರುವ ಬದಲು ಆ ಹಣವನ್ನು ಮನೆಯ ಖರ್ಚಿಗೆ ಕೊಡಬಹುದಿತ್ತೇನೋ’ ಎಂದು ಒಳಗೊಳಗೇ ಕುಟುಕುತ್ತಿದ್ದುದರಿಂದ, ಅದರಿಂದ ಬಚಾವಾಗಲು ಒಂದು ಸುಳ್ಳು ಹೇಳಿಬಿಟ್ಟೆ. ಗಿಟಾರ್ ತರುವುದೇನೋ ತಂದೆ, ಆದರೆ ನುಡಿಸುವುದಾದರೂ ಹೇಗೆ? ಹತ್ತಿರದಲ್ಲಿ ಯಾರೂ ಗಿಟಾರ್ ಕಲಿಸುವವರಿಲ್ಲ. ಛಾಯಣ್ಣ ಹೋಗುತ್ತಿದ್ದ ಗಿಟಾರ್ ಸ್ಕೂಲ್ ನಲ್ಲಿ ಫೀಸ್ ತುಂಬಾ ಹೆಚ್ಚು; ಜೊತೆಗೆ ಸಂಜೆಯ ಪಾಠಗಳು ಬೇರೆ… ನಾನು ವೈನಿ ಮನೆಪಾಠ ತಪ್ಪಿಸಿಕೊಂಡು ಹೋಗುವುದು ಆಗದ ಕೆಲಸ. ಛಾಯಣ್ಣನೇ ಬಿಡುವಾದಾಗ ಒಂದಷ್ಟು ಮೊದಲ ಹಂತದ ಪಾಠಗಳನ್ನು ಹೇಳಿಕೊಡುತ್ತಿದ್ದ. ನಾನೂ ಮನೆಯಲ್ಲಿ ಬುಲ್ ಬುಲ್ ತರಂಗ್ ನ ಯಾವ ಮನೆ ಗಿಟಾರ್ ನ ಫ್ರೆಟ್ ನ ಯಾವ ಮನೆಗೆ ಸರಿಹೊಂದುತ್ತದೆಂದು ಸಮೀಕರಣ ಮಾಡಿಕೊಂಡು ಬುಲ್ ಬುಲ್ ನ ಗೈಡ್ ಮೂಲಕ ಗಿಟಾರ್ ಕಲಿಯುತ್ತಿದ್ದೆ. ಹೀಗೇ ಒಂದಷ್ಟು ದಿನಗಳುರುಳಿದವು.

ನಮ್ಮ ಮನೆಯ ಸಮೀಪದಲ್ಲೇ ಸಮುದಾಯ ತಂಡದ ವೆಂಕಟೇಶ ಮೂರ್ತಿ ಎಂಬ ಕಲಾವಿದರು ರೂಂ ಮಾಡಿಕೊಂಡಿದ್ದರು. ಆಗಾಗ್ಗೆ ಅವರ ರೂಂ ಗೆ ಹೋಗಿ ಅವರು ಕೊಡಿಸುತ್ತಿದ್ದ ಬಿಯರ್ ಹೀರುತ್ತಾ ಇಂಗ್ಲೀಷ್ ಮೇಷ್ಟ್ರಾಗಿದ್ದ ಅವರ ಜೊತೆ ನಾಟಕ—ಸಾಹಿತ್ಯಗಳ ಬಗ್ಗೆ ಒಂದಷ್ಟು ಚರ್ಚೆ ಮಾಡಿಕೊಂಡು ಬರುತ್ತಿದ್ದೆ. ಒಮ್ಮೆ ಅವರ ರೂಂ ನಲ್ಲೇ ಭೇಟಿಯಾದ ಅವರ ಮಿತ್ರರೊಬ್ಬರು ಆಗ ನನಗೂ ಬಹು ಪ್ರಿಯನಾಗಿದ್ದ ಹಿನ್ನೆಲೆಗಾಯಕ ಮುಕೇಶ್ ನ ಹಾಡುಗಳನ್ನು ಸೊಗಸಾಗಿ ಹಾಡುತ್ತಿದ್ದರು. ಒಂದು ಇಂತಹ ಗೋಷ್ಠಿಯ ನಡುವೆ ಪ್ರಾಸಂಗಿಕವಾಗಿ ಆ ಮಿತ್ರರು, ‘ಒಂದು ಗಿಟಾರ್ ಕೊಳ್ಳಬೇಕೆಂದು plan ಮಾಡುತ್ತಿದ್ದೇನೆ’ ಎಂದರು. ಅದೇ ಸಮಯದಲ್ಲಿ ನನ್ನ ಕೈ ಸಂಪೂರ್ಣವಾಗಿ ಖಾಲಿಯಾಗಿ ಸಿಗರೇಟ್ ಖರ್ಚಿಗೂ ದುಡ್ಡಿಲ್ಲದಂತಾಗಿತ್ತು. ಅವರು ಗಿಟಾರ್ ಕೊಳ್ಳುವ ಯೋಚನೆ ಇದೆ ಅನ್ನುತ್ತಿದ್ದಂತೆಯೇ ಮಿಂಚು ಹೊಳೆದಂತಾಗಿ ಸೀದಾ ಸೈಕಲ್ ಏರಿ ಮನೆಗೆ ಹೋಗಿ ಗಿಟಾರ್ ಅನ್ನು ತಂದು ಅವರ ಮುಂದಿಟ್ಟುಬಿಟ್ಟೆ. ‘ಆರು ತಿಂಗಳೂ ಆಗಿಲ್ಲ ತೊಗೊಂಡು… ನೋಡಿ.. ನಿಮಗಿಷ್ಟವಾದರೆ ಇದನ್ನೇ ತೊಗೋಬಹುದು’ ಎಂದೆ. ಎರಡೇ ನಿಮಿಷದಲ್ಲಿ 70ರೂಪಾಯಿಗೆ ವ್ಯಾಪಾರ ನಿಕ್ಕಿಯಾಗಿ ಹೋಯಿತು. ಆ ಕೂಡಲೇ ಅವರೂ ಜೇಬಿನಿಂದ ಹಣ ತೆಗೆದು ಕೊಟ್ಟೇಬಿಟ್ಟರು! ಹಣ ಜೇಬು ಸೇರಿ ಕೊಂಚ ನಿರಾಳವಾದರೂ ಮನಸ್ಸು ಭಾರವಾಗಿ ಹೋಯಿತು.

ಆರು ತಿಂಗಳ ಕಾಲ ಸತತ ಸಂಗಾತಿಯಾಗಿದ್ದ ಗಿಟಾರ್ ಅನ್ನು ತೊಡೆಯ ಮೇಲಿಟ್ಟುಕೊಂಡು ಒಮ್ಮೆ ತಡವಿ, ನನ್ನ ಅತ್ಯಂತ ಪ್ರೀತಿಯ ಮುಕೇಶನ ‘ಜಾನೇ ಕಹಾ ಗಯೇ ವೋ ದಿನ್’ ಹಾಡನ್ನೊಮ್ಮೆ ನುಡಿಸಿ ಕಣ್ಣೊರಸಿಕೊಂಡು ಅಲ್ಲಿಂದ ದಡಕ್ಕನೆದ್ದು ಸೈಕಲ್ ಏರಿ ಹೊರಟುಬಿಟ್ಟೆ. ಯಾರದೋ ಮನೆಯ ರೇಡಿಯೋದಲ್ಲಿ ಮೊಳಗುತ್ತಿದ್ದ ಅದೇ ಮುಕೇಶನ ಹಾಡು ತುಸು ದೂರದವರೆಗೂ ಹಿಂಬಾಲಿಸುತ್ತಿತ್ತು: ‘ಜಾನೇ ಕಹಾ ಗಯೇ ವೊ ದಿನ್….’

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: