ಶ್ರೀನಿವಾಸ ಪ್ರಭು ಅಂಕಣ: ಅದು ಯಾವ ವಿಶ್ವ ಪ್ರಶಸ್ತಿಗಿಂತ ಕಡಿಮೆ ಹೇಳಿ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 121
——————

ಈ ಟಿವಿ ಕನ್ನಡ ವಾಹಿನಿ ಪ್ರಾರಂಭಿಸಿದ ಒಂದು ಮಹತ್ವದ ಕಾರ್ಯಕ್ರಮ ಮಾಲಿಕೆಯೆಂದರೆ “ಈ ಟಿವಿ ವರ್ಷದ ಕನ್ನಡಿಗ”. ಪ್ರತಿವರ್ಷವೂ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಾನ್ ಸಾಧಕರೊಬ್ಬರನ್ನು ವರ್ಷದ ಕನ್ನಡಿಗನೆಂದು ಗುರುತಿಸಿ ಅದ್ದೂರಿ ಸಾರ್ವಜನಿಕ ಸಮಾರಂಭದಲ್ಲಿ ಗೌರವಿಸುವ ಸತ್ಸಂಪ್ರದಾಯವದು. ಈ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ಎಂದಿನಂತೆ ಗೆಳೆಯ ಶ್ರೀಧರ್ ವಹಿಸಿಕೊಂಡಿದ್ದ; ನಿರೂಪಣೆಯ ಹೊಣೆಯೂ ನನ್ನ ಹೆಗಲೇರಿತ್ತು! ಪ್ರಪ್ರಥಮ ವರ್ಷದಲ್ಲಿ ಈ ಗೌರವಕ್ಕೆ ಪಾತ್ರರಾದವರು ನಟಸಾರ್ವಭೌಮ, ಕನ್ನಡನಾಡಿನ ಕಣ್ಮಣಿ ಡಾ॥ ರಾಜ್ ಕುಮಾರ್ ಅವರು. ನನ್ನ ಮೆಚ್ಚಿನ ನಟನಿಗೆ, ಮಾನಸ ಗುರುವಿಗೆ ಸಲ್ಲುತ್ತಿರುವ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆಯ ಜವಾಬ್ದಾರಿ ನನ್ನ ಪಾಲಿಗೆ ಬಂದಾಗ ನನ್ನ ಆನಂದಕ್ಕೆ ಪಾರವೇ ಇಲ್ಲ! ಕಾರ್ಯಕ್ರಮವೂ ಸಹಾ ಗೆಳೆಯ ಶ್ರೀಧರನ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಸುಸೂತ್ರವಾಗಿ ನೆರವೇರಿತು. ಕಾರ್ಯಕ್ರಮ ಮುಗಿದ ಮೇಲೆ ‘ಅಣ್ಣಾವ್ರು’ ಪ್ರೀತಿಯಿಂದ ಹೆಗಲು ತಟ್ಟಿ “ಭಾಳ ಚೆನ್ನಾಗಿ ನಡೆಸಿಕೊಟ್ರಿ ಕಾರ್ಯಕ್ರಮಾನ!” ಎಂದು ತಮ್ಮದೇ ಶೈಲಿಯಲ್ಲಿ ನುಡಿದಾಗ ಮತ್ತೊಮ್ಮೆ ರೋಮಾಂಚನ!!

“ವರ್ಷದ ಕನ್ನಡಿಗ” ಪ್ರಶಸ್ತಿ ಪ್ರದಾನ ಮಾಲಿಕೆಯನ್ನು ಈ ಟಿವಿ ಕನ್ನಡ ವಾಹಿನಿ ಐದು ವರ್ಷಗಳ ಕಾಲ ನಡೆಸಿತು. ಡಾ॥ರಾಜ್ ಕುಮಾರ್ ಅವರ ನಂತರ ಈ ಗೌರವಕ್ಕೆ ಪಾತ್ರರಾದ ಶ್ರೇಷ್ಠರೆಂದರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ॥ ವೀರೇಂದ್ರ ಹೆಗ್ಗಡೆಯವರು , ಜಸ್ಟೀಸ್ ಎಂ.ಎನ್.ವೆಂಕಟಾಚಲಯ್ಯನವರು, ಸನ್ಮಾನ್ಯ ರವಿಶಂಕರ್ ಗುರೂಜಿಯವರು ಹಾಗೂ ಗಂಗೂಬಾಯಿ ಹಾನಗಲ್ ಅವರು. ಈ ಐದೂ ವರ್ಷಗಳು ನಿರೂಪಣೆಯ ಜವಾಬ್ದಾರಿಯನ್ನು ನಾನೇ ಹೊತ್ತು ನಿರ್ವಹಿಸಿದ್ದೆ. ರವಿಶಂಕರ್ ಗುರೂಜಿಯವರಿಗೆ ಪ್ರಶಸ್ತಿ ನೀಡಿದ ಸಮಾರಂಭದಲ್ಲಿ ಮಾತ್ರ ನಟಿ ಮಾಲವಿಕಾ ಅವರು ನನ್ನೊಟ್ಟಿಗೆ ನಿರೂಪಣೆಯನ್ನು ನಡೆಸಿಕೊಟ್ಟರು. ಪ್ರತಿ ವರ್ಷವೂ ನಾಡಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆದ ಈ ಕಾರ್ಯಕ್ರಮ ಮಾಲಿಕೆ ಆ ಕಾಲದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಪ್ರಶಸ್ತಿ ಪ್ರದಾನದ ಜೊತೆಗೆ ವರ್ಣರಂಜಿತವಾಗಿ, ಅದ್ದೂರಿಯಾಗಿ ಸಜ್ಜುಗೊಳ್ಳುತ್ತಿದ್ದ ವೇದಿಕೆಯಲ್ಲಿ ನಾಡಿನ ಅನೇಕ ಖ್ಯಾತ ಕಲಾವಿದರು ಪಾಲ್ಗೊಂಡು ರಸಿಕರ ಮನ ಸೂರೆಗೊಳ್ಳುತ್ತಿದ್ದರು. ಕನ್ನಡ ಸಂಸ್ಕೃತಿಗೆ ಕನ್ನಡಿ ಹಿಡಿಯುವಂತಹ ಹಿನ್ನೆಲೆಯ ರಂಗಸಜ್ಜಿಕೆ, ಅದ್ಭುತ ಧ್ವನಿ ವ್ಯವಸ್ಥೆ, ನಯನ ಮನೋಹರ ವರ್ಣಮಯ ಬೆಳಕಿನಾಟ, ಕರಾರುವಾಕ್ಕಾದ ಶಿಸ್ತಿನ ನಿರ್ವಹಣೆ…ಪ್ರತಿಯೊಂದೂ ಪ್ರಶಂಸಾರ್ಹವೇ! ಮನಸ್ಸಿಗೆ ಮುದ ನೀಡಿದ, ತೃಪ್ತಿಯನ್ನೂ ನೀಡಿದ ಸುಂದರ ಸಾಂಸ್ಕೃತಿಕ ಹಬ್ಬವಿದು.

ವಾರ್ತಾಇಲಾಖೆಯವರು ಪ್ರತಿ ವರ್ಷ ಚಲನಚಿತ್ರ ರಂಗದ ಆ ವರ್ಷದ ಶ್ರೇಷ್ಠರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾರಷ್ಟೇ…ಒಂದು ವರ್ಷ ಈ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆಯ ಹೊಣೆಯನ್ನು ನಾನು ವಹಿಸಿಕೊಂಡಿದ್ದೆ. ಆ ಬಾರಿ ಡಾ॥ಶಿವರಾಜ್ ಕುಮಾರ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ದೊರಕಿತ್ತು. ಪಾರ್ವತಮ್ಮ ರಾಜ್ ಕುಮಾರ್ ಅವರೂ ಸಹಾ ಒಂದು ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದರು. ಅಂದಿನ ಈ ಒಂದು ಘಟನೆ ಸದಾ ನನ್ನ ನೆನಪಿನಲ್ಲಿರುವಂಥದ್ದು. ನಾನು ಪಾರ್ವತಮ್ಮನವರನ್ನು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಆಹ್ವಾನಿಸಿದೆ. ಅವರು ಪ್ರಶಸ್ತಿ ಸ್ವೀಕರಿಸಿ ರಂಗದ ಬಲಭಾಗದ ವಿಂಗ್ ನಿಂದ ಹೊರ ಹೊರಟರು. ನಾನು ಮುಂದಿನ ಪ್ರಶಸ್ತಿ ಭಾಜನರನ್ನು ಆಹ್ವಾನಿಸಿ ಪರಿಚಯಿಸಲು ವೇದಿಕೆಗೆ ತೆರಳಿದೆ. ನಾಲ್ಕಾರು ನಿಮಿಷಗಳ ಆ ಕರ್ತವ್ಯವನ್ನು ಮುಗಿಸಿ ವಿಂಗ್ ನತ್ತ ತೆರಳಿ ನೋಡಿದರೆ ಪಾರ್ವತಮ್ಮನವರು ಅಲ್ಲಿಯೇ ನಿಂತಿದ್ದಾರೆ! ನಾನು ಅವರ ಬಳಿ ಹೋಗಿ ನಮಸ್ಕರಿಸಿದೆ. “ನಿಮ್ಮನ್ನ ಮಾತಾಡಿಸಿಕೊಂಡು ಹೋಗೋಣಾಂತಾನೇ ಕಾಯ್ತಾ ಇದ್ದೀನಪ್ಪಾ” ಎಂದರು ಅಮ್ಮ! ಆಶ್ಚರ್ಯದಿಂದಲೇ ‘ಹೇಳಿ ಅಮ್ಮಾ’ ಎಂದ ನನಗೆ ಅವರ ಮುಂದಿನ ಮಾತು ಕೇಳಿ ಮತ್ತಷ್ಟು ಆಶ್ಚರ್ಯವಾಯಿತು! “ನಮಗೆ, ಅದರಲ್ಲೂ ಯಜಮಾನ್ರಿಗೆ ನಿಮ್ಮ acting ತುಂಬಾ ಇಷ್ಟ ಕಣ್ರಪ್ಪಾ..ನಿಮ್ಮ ಹರಿಶ್ಚಂದ್ರನ ಪಾತ್ರ ಅಂತೂ ಅವರಿಗೆ ತುಂಬಾ ಹಿಡಿಸಿಬಿಟ್ಟಿದೆ..ಈ ಒಂದು ಮಾತನ್ನ ನಿಮಗೆ ಹೇಳಿಬಿಟ್ಟು ಹೋಗೋಣಾಂತಲೇ ಇಲ್ಲೇ ಕಾಯ್ತಾ ನಿಂತಿದ್ದೆ” ಎಂದು ಅಮ್ಮ ನುಡಿದಾಗ ನನ್ನ ಪರಿಸ್ಥಿತಿ ಏನಾಗಿದ್ದಿರಬಹುದು ಊಹಿಸಿಕೊಳ್ಳಿ!

ಆಗ ನಾನು “ಸೀತೆ” ಧಾರಾವಾಹಿಯಲ್ಲಿ ಉಪಕಥೆಯಾಗಿ ಬರುವ ಹರಿಶ್ಚಂದ್ರನ ಕಥಾಭಾಗದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದೆ. ‘ಶರಪಂಜರ’ ಧಾರಾವಾಹಿಯ ಸಹ ಕಲಾವಿದೆ ಋತು, ಚಂದ್ರಮತಿಯ ಪಾತ್ರವನ್ನೂ ರಂಗನಟ ರಮೇಶ್ ಪಂಡಿತ್ ವಿಶ್ವಾಮಿತ್ರನ ಪಾತ್ರವನ್ನೂ ನಿರ್ವಹಿಸಿದ್ದರು. ನನ್ನ ಮೆಚ್ಚಿನ ನಟ ಡಾ॥ರಾಜ್ ಕುಮಾರ್ ಅವರು ಹರಿಶ್ಚಂದ್ರನಾಗಿ ನೀಡಿರುವ ಅಮೋಘ ಅಭಿನಯ ನಮ್ಮೆಲ್ಲರ ನೆನಪಿನಲ್ಲಿ ಸದಾ ಹಸಿರಾಗಿರುವಂಥದ್ದು. ಅಂಥ ಶ್ರೇಷ್ಠ ನಟ ಅದೇ ಪಾತ್ರದಲ್ಲಿ ನನ್ನ ಅಭಿನಯವನ್ನು ನೋಡಿ ಮೆಚ್ಚಿದ್ದಾರೆಂದರೆ ಅದು ಯಾವ ವಿಶ್ವ ಪ್ರಶಸ್ತಿಗಿಂತ ಕಡಿಮೆ ಹೇಳಿ! “ನಿಮ್ಮ ಮಾತು ಕೇಳಿ ನನಗಾಗ್ತಿರೋ ಸಂತೋಷ ಅಷ್ಟಿಷ್ಟಲ್ಲ ಅಮ್ಮಾ..ಇದು ನನ್ನ ಬದುಕಿನಲ್ಲಿ ನನಗೆ ಸಿಕ್ಕಿರೋ ಬಹಳ ದೊಡ್ಡ ಆಶೀರ್ವಾದ ಅಂತ ನಾನು ಭಾವಿಸ್ತೇನೆ” ಎಂದು ನುಡಿದು ಪಾರ್ವತಮ್ಮನವರಿಗೆ ಕೃತಜ್ಞತೆಗಳನ್ನರ್ಪಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ನನಗಾಗಿ ಕಾದುನಿಂತು ನನ್ನನ್ನು ಅಭಿನಂದಿಸಿ ಮೆಚ್ಚುಗೆ ಸೂಚಿಸಿದ ಆ ತಾಯಿಯ ಸರಳತೆ—ಸೌಜನ್ಯಗಳಿಗೆ ನಾನು ಮಾರುಹೋದೆ. ನಾನು ಸದಾ ಸ್ಮರಿಸಿಕೊಳ್ಳುವ ಅಮೃತ ಗಳಿಗೆಗಳಲ್ಲಿ ಇದೂ ಒಂದು.

ಹಲವು ಕಾರಣಗಳಿಗೆ ನಾನು ಮರೆಯಲು ಸಾಧ್ಯವೇ ಇಲ್ಲದ ಮತ್ತೊಂದು ಪ್ರಸಂಗವೆಂದರೆ ‘ಬೆಂಗಳೂರು ಹಬ್ಬ’ದಲ್ಲಿ ನಾನು ನಿರೂಪಣೆಯ ಚುಕ್ಕಾಣಿ ಹಿಡಿದದ್ದು. ಪ್ರಖ್ಯಾತ ನೃತ್ಯ ಕಲಾವಿದರಾದ ಪ್ರತಿಭಾ ಪ್ರಹ್ಲಾದ್ ಹಾಗೂ ಪದ್ಮಿನಿ ರವಿ ಅವರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ‘ಬೆಂಗಳೂರು ಹಬ್ಬ’ ದಲ್ಲಿ ಒಂದು ವರ್ಷ ನಿರೂಪಣೆಯನ್ನು ನಡೆಸಿಕೊಡಲು ನನಗೆ ಆಹ್ವಾನ ನೀಡಿದ್ದರು. ಕಾರ್ಯಕ್ರಮದ ವಿವರಗಳೆಲ್ಲವನ್ನೂ ಪಡೆದುಕೊಂಡು ಪೂರ್ವಭಾವೀ ಸಿದ್ಧತೆಗಳೆಲ್ಲವನ್ನೂ ಮಾಡಿಕೊಂಡು ಸಮಾರಂಭ ನಡೆಯುತ್ತಿದ್ದ ರವೀಂದ್ರ ಕಲಾಕ್ಷೇತ್ರಕ್ಕೆ ಸಂಜೆ ನಾನು ಹೋದೆ. ನನಗೆ ನೆನಪಿರುವ ಮಟ್ಟಿಗೆ ಪಾಟೀಲ ಪುಟ್ಟಪ್ಪನವರು ಅಂದು ಒಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಮಾರಂಭಕ್ಕೆ ಆಗಮಿಸಿದ್ದ ಮಂತ್ರಿವರೇಣ್ಯರನ್ನೂ ಮುಖ್ಯ ಅತಿಥಿಗಳನ್ನೂ ವೇದಿಕೆಗೆ ಆಹ್ವಾನಿಸಲು ನಾನು ಇನ್ನೇನು ಅನುವಾಗಬೇಕು, ಅಷ್ಟರಲ್ಲಿ ಮಡದಿ ರಂಜನಿಯ ಕರೆ. ‘ಬೇಗ ಹೇಳು ರಂಜು, ಹೆಚ್ಚು ಸಮಯ ಇಲ್ಲ’ ಎಂದು ನಾನು ಅವಸರ ಪಡಿಸಿದರೆ ರಂಜನಿ ಬಿಕ್ಕುತ್ತಾ ನುಡಿದಳು: “ನಮ್ಮಣ್ಣ ರವಿ ಹೋಗ್ಬಿಟ್ಟ ಪ್ರಭೂಜೀ..accident ಆಗಿದೆಯಂತೆ….” ಒಂದು ಕ್ಷಣ ಏನು ಹೇಳಲೂ ತೋಚಲಿಲ್ಲ. ಏನು ಮಾಡುವುದೆಂದು ತಿಳಿಯದಂಥ ಸಂದಿಗ್ಧ ಸ್ಥಿತಿ. ಇನ್ನೇನು ಆರಂಭಿಸಬೇಕಿರುವ ಕಾರ್ಯಕ್ರಮವನ್ನು ಬಿಟ್ಟು ಹೋಗುವುದಾದರೂ ಹೇಗೆ? “ಬಾಬು ಅಣ್ಣ ಆಸ್ಪತ್ರೆಗೆ ಹೋಗಿದ್ದಾನೆ.. ಪೋಸ್ಟ್ ಮಾರ್ಟಮ್ ನಡೀತಿದೆಯಂತೆ..ಬಹುಶಃ ಬೆಳಿಗ್ಗೆ ವೇಳೆಗೆ ಬಾಡೀನ…” ಎನ್ನುತ್ತಾ ಮತ್ತೆ ಬಿಕ್ಕಿದಳು ರಂಜನಿ. ನಾನು ಕಾರ್ಯಕ್ರಮವನ್ನು ಬಿಟ್ಟು ಹೊರಟರೂ ಹೋಗಿ ಮಾಡುವುದಾದರೂ ಏನು? ಮನೆಯವರಿಗೆ ಸಾಂತ್ವನ ಹೇಳಬಹುದಷ್ಟೇ. ‘ಏನು ಮಾಡಲಿ? ಬೇಗ ಹೇಳು’ ಎಂದು ರಂಜನಿಯನ್ನೇ ಕೇಳಿದೆ. ‘ಪರವಾಗಿಲ್ಲ..ಕಾರ್ಯಕ್ರಮ ಮುಗಿಸಿ ತಕ್ಷಣ ಹೊರಟು ಬನ್ನಿ’ ಎಂದಳು ರಂಜನಿ.ಸರಿ ಎಂದವನೇ ವೇದಿಕೆಗೆ ಧಾವಿಸಿ ಕಾರ್ಯಕ್ರಮದ ನಿರೂಪಣೆಯನ್ನು ಆರಂಭಿಸಿದೆ. ಎರಡು ತಾಸಿನ ಕಾರ್ಯಕ್ರಮ ಅತ್ಯಂತ ಸುಗಮವಾಗಿ ನೆರವೇರಿತು. ಕೊನೆಯ ಭಾಗದ ನಿರೂಪಣೆಯನ್ನು ಮುಗಿಸಿದವನೇ ಸೀದಾ ಮನೆಯತ್ತ ಧಾವಿಸಿದೆ. ಮನೆಯಲ್ಲಿ ಎಲ್ಲರೂ ಈ ಅನಿರೀಕ್ಷಿತ ಅವಘಡದಿಂದ ಕಂಗಾಲಾಗಿಹೋಗಿದ್ದರು. ರಂಜನಿಯಂತೂ ವಿಪರೀತ ಸಂಕಟ ಪಡುತ್ತಿದ್ದಳು. ಒಡಹುಟ್ಟಿದ ಅಣ್ಣನನ್ನು ಕಳೆದುಕೊಂಡ ದುಃಖ ಒಂದು ಕಡೆಗಾದರೆ ಅವಳ ಶೋಕಕ್ಕೆ ಮತ್ತೂ ಒಂದು ಕಾರಣ ಸೇರಿಕೊಂಡಿತ್ತು.

ಅಂದು ಬೆಳಿಗ್ಗೆ ಮಕ್ಕಳನ್ನು ಸ್ಕೂಲು ಕಾಲೇಜಿಗೆ ಕಳಿಸಿ ನಾನೂ ಶೂಟಿಂಗ್ ಗೆ ತೆರಳಿದ ಮೇಲೆ ರಂಜನಿ ಕಾಲೇಜ್ ಗೆ ಹೊರಡಲು ಸಿದ್ಧಳಾಗುತ್ತಿದ್ದಳಂತೆ. ಬಾಗಿಲು ಬಡಿದ ಶಬ್ದವಾಗಿದೆ; ಯಾರು ಎಂದು ರಂಜನಿ ಕೂಗಿ ಕೇಳಿದ್ದಕ್ಕೆ ಹೊರಗಿನಿಂದ ಬಂದ ಉತ್ತರ: ‘ನಾನು ಕಣೇ ರಂಜು, ರವಿ’. ಕಾಲೇಜಿಗೆ ಹೊರಡುವ ಗಡಿಬಿಡಿಯಲ್ಲಿದ್ದ ರಂಜನಿ, “ರವಿ, ಕಾಲೇಜ್ ಗೆ ಈಗಲೇ ತುಂಬಾ ತಡ ಆಗಿಬಿಟ್ಟಿದೆ. ಸಂಜೆ ಬರ್ತೀಯೇನೋ?” ಎಂದಿದ್ದಾಳೆ. ‘ಸರಿ ಕಣಮ್ಮಾ’ ಎಂದವನೇ ರವಿ ಹೊರಟು ಹೋಗಿದ್ದಾನೆ. ಹಾಗೆ ಹೋದವನು ಸಂಜೆ ಮಾತ್ರವಲ್ಲ, ಮತ್ತೆಂದೂ ಮರಳಿ ಬರಲಾಗದ ಲೋಕಕ್ಕೇ ತೆರಳಿಬಿಟ್ಟಿದ್ದಾನೆ. “ಅಯ್ಯೋ..ಎಂಥಾ ಕೆಲಸ ಮಾಡಿಬಿಟ್ಟೆ ನಾನು! ಮನೆ ಬಾಗಿಲಿಗೆ ಬಂದ ಅಣ್ಣನನ್ನ ಒಳಗೆ ಕರೀದೇ ಮುಖಾನೂ ನೋಡದೆ ಹಾಗೇ ಕಳಿಸಿಬಿಟ್ಟೆನಲ್ಲಾ..ನೋಡಿ..ಈಗ ಬೇಕೂಂದ್ರೆ ನೋಡೋಕೆ ಸಿಗುತ್ತಾ ಅವನ ಮುಖ? ಛೆ..” ಎಂದು ಮಮ್ಮಲ ಮರುಗುತ್ತಿದ್ದ ರಂಜನಿಗೆ ಸಾಂತ್ವನ ಹೇಳುವುದು ಸುಲಭದ ಕೆಲಸವಾಗಿರಲಿಲ್ಲ. ಈಗಲೂ ಆ ದಾರುಣ ಪ್ರಸಂಗವನ್ನು ನೆನೆಸಿಕೊಂಡು ರಂಜನಿ ಆಗಾಗ್ಗೆ ತಪ್ಪಿತಸ್ಥ ಭಾವನೆಯಿಂದ ಕೊರಗುತ್ತಾಳೆ.

ಗ್ಲೋಬಲ್ ಕನ್ಸಲ್ಟೆಂಟ್ಸ್ ಸಂಸ್ಥೆಯ ಆಶ್ರಯದಲ್ಲಿ ರಂಗಣ್ಣ ಹಾಗೂ ಪ್ರಭಾಕರ ರಾವ್ ಎಂಬ ಕನ್ನಡ ಕಾವ್ಯ ಸಂಗೀತ ಪ್ರೇಮಿಗಳು ‘ಸುಗಮ ಸಂಗೀತದ ಸರದಾರ’ ಸಿ. ಅಶ್ವಥ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವೇ ‘ಕನ್ನಡವೇ ಸತ್ಯ’. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ಆವರಣದಲ್ಲಿ ಆಯೋಜನೆಗೊಂಡ ಈ ಭಾವಗೀತಾ ಗಾಯನ ಕಾರ್ಯಕ್ರಮಕ್ಕೆ ಕನ್ನಡ ಜನ ಸ್ಪಂದಿಸಿದ ರೀತಿ—ನೀಡಿದ ಉತ್ತೇಜನ ‘ನ ಭೂತೋ ನ ಭವಿಷ್ಯತಿ’. ಈ ಅದ್ಭುತ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಾನು ಹಾಗೂ ಅಪರ್ಣಾ ವಹಿಸಿಕೊಂಡಿದ್ದೆವು. ಸಾವಿರ ಸಾವಿರ ಸಂಖ್ಯೆಯಲ್ಲಿ ಅರಮನೆ ಮೈದಾನಕ್ಕೆ ಪ್ರವಾಹದೋಪಾದಿಯಲ್ಲಿ ಜನಸಾಗರ ಹರಿದು ಬಂದದ್ದು ನಿಜಕ್ಕೂ ಒಂದು ಅಪೂರ್ವ ದಾಖಲೆ. ಯಾವುದೋ ಪಾಶ್ಚಾತ್ಯ ಸಂಗೀತಗಾರರೋ ಬ್ಯಾಂಡ್ ಗಳೋ ನಮ್ಮಲ್ಲಿಗೆ ಬಂದು ಪ್ರದರ್ಶನ ನೀಡುವಾಗ ಜನ ಕಿಕ್ಕಿರಿದು ನೆರೆಯುವಂತೆ ಅಚ್ಚ ಕನ್ನಡದ ಕಾರ್ಯಕ್ರಮವೊಂದಕ್ಕೆ ಸೇರಿದ್ದು ಎಲ್ಲರ ನಿರೀಕ್ಷೆಗಳನ್ನೂ ಮೀರಿದ್ದೇ ಆದರೂ ಹೆಮ್ಮೆಯನ್ನೂ ಗರ್ವವನ್ನೂ ಮೂಡಿಸಿದ್ದು ಪರಮ ಸತ್ಯ!

ಅಂದು ಅರಮನೆಯ ಆವರಣದಲ್ಲಿ ಜರುಗಿದ್ದು ಹಬ್ಬ; ಕನ್ನಡ ಕಾವ್ಯ ಸಂಗೀತದ ಹಬ್ಬ; ನಾಡ ಹಬ್ಬ! ನಾಡಿನ ಬಹುತೇಕ ಎಲ್ಲ ಖ್ಯಾತ ಗಾಯಕ—ಗಾಯಕಿಯರೂ ವಾದ್ಯ ಸಂಗೀತಗಾರರೂ ಅಂದು ಅಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರತಿಯೊಂದು ಹಾಡಿಗೂ ತಲೆದೂಗುತ್ತಾ ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಿದ್ದ ಪ್ರೇಕ್ಷಕರ ಮೆಚ್ಚುಗೆಯ ಸಿಳ್ಳೆ—ಚಪ್ಪಾಳೆ— ಹರ್ಷೋದ್ಗಾರಗಳಿಂದ ಮತ್ತಷ್ಟು ಉತ್ತೇಜಿತರಾದ ಕಲಾವಿದರು ತಾವೂ ಹಾಡಿ ಕುಣಿದು ಸಂಭ್ರಮಿಸಿ ಕಾಮನಬಿಲ್ಲನ್ನೇ ಧರೆಗಿಳಿಸಿಬಿಟ್ಟರು. ಇಡಿಯ ಕಾರ್ಯಕ್ರಮದ ರೂವಾರಿಯಾಗಿದ್ದ ಅಶ್ವಥ್ ಅವರದಂತೂ ನೆರೆದಿದ್ದ ಅಗಾಧ ಜನಸ್ತೋಮವನ್ನು ಮಂತ್ರಮುಗ್ಧರನ್ನಾಗಿಸಿದ, ಹುಚ್ಚೆಬ್ಬಿಸಿ ಕುಣಿಸಿದ ಎತ್ತರದ ದನಿಯ ಜೋರು ಗಾಯನ! ಇಂಥದೊಂದು ಅಭೂತಪೂರ್ವ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟದ್ದು ನನ್ನ ಪಾಲಿಗೆ ಒದಗಿ ಬಂದ ಸುಯೋಗವೆನ್ನಬೇಕು!

ಅಲ್ಲಿಂದಾಚೆಗೆ ಅಶ್ವಥ್ ಅವರ ಗಾಯನ ಸಂಜೆಯ ಯಾವುದೇ ಕಾರ್ಯಕ್ರಮವಿರಲಿ ಅದರ ನಿರೂಪಣೆಯ ಹೊಣೆ ನನ್ನ ಪಾಲಿಗೆ ಬರುತ್ತಿತ್ತು! ಅದೇನೋ ಅಶ್ವಥ್ ಅವರಿಗೆ ನನ್ನ ನಿರೂಪಣೆಯೆಂದರೆ ಬಲು ಮೆಚ್ಚುಗೆ! “ನೀವು ನಿರೂಪಣೆ ಮಾಡೋಕೆ ಬಂದುಬಿಟ್ರೆ ನಂಗೆ ತುಂಬಾ ಸಮಾಧಾನ ಕಣ್ರೀ…ಯಾಕ್ಹೇಳಿ? ನೀವು ತುಂಬಾ ತಲೆಹರಟೆ ಮಾಡೋಲ್ಲ..ಎಷ್ಟು ಹೇಳಬೇಕೋ ಅಷ್ಟು ಮಾತ್ರ ಹೇಳಿ ತೆಪ್ಪಗೆ ಬಂದುಬಿಡ್ತೀರಾ! ಇಲ್ಲದ್ದೆಲ್ಲಾ ಕಥೆ ಹೇಳ್ಕೊಂಡು ಪಿಟೀಲು ಕುಯ್ಯೋಲ್ಲ” ಎಂದು ಬೈಯ್ಯುವ ಧಾಟಿಯಲ್ಲಿಯೇ ಮೆಚ್ಚುತ್ತಾ ಹೇಳುತ್ತಿದ್ದರು ಅಶ್ವಥ್! ಮೈಸೂರಿನಲ್ಲಿ ಆಯೋಜನೆಗೊಂಡ ಕನ್ನಡವೇ ಸತ್ಯ ಕಾರ್ಯಕ್ರಮ, ಏಟ್ರಿಯಾ ಹೋಟಲಿನಲ್ಲಿ ವಿಭಿನ್ನವೂ ಆಪ್ತವೂ ಆದ ಶೈಲಿಯಲ್ಲಿ ರೂಪುಗೊಂಡಿದ್ದ ಸಂಗೀತ ಸಂಜೆ, ‘ಹರ್ಷವಾಹಿನಿ’…ಇವೇ ಮೊದಲಾದ ಅನೇಕ ಅಶ್ವಥ್ ರ ಕಾರ್ಯಕ್ರಮಗಳಿಗೆ ನಾನು ನಿರೂಪಣಾ ಸಾರಥ್ಯವನ್ನು ವಹಿಸಿದ್ದೆ.

‘ಹರ್ಷವಾಹಿನಿ ‘ ಕಾರ್ಯಕ್ರಮದ ಬಗ್ಗೆ ಕೆಲವು ಮಾತುಗಳನ್ನು ಹೇಳಲೇಬೇಕು.
ಹರ್ಷಕ್ರಿಯಾ ಫೌಂಡೇಷನ್ ವತಿಯಿಂದ ಆ ಸಂಸ್ಥೆಯ ರೂವಾರಿಯೇ ಆದ ಡಾ॥ ಹರೀಶ್ ಅವರು ಪರಿಭಾವಿಸಿದ ಕಾರ್ಯಕ್ರಮವೇ ‘ಹರ್ಷವಾಹಿನಿ’. ಸಿ.ಅಶ್ವಥ್ ಅವರ ನೇತೃತ್ವದಲ್ಲಿ ನಾಡಿನ ಅನೇಕ ಖ್ಯಾತ ಕಲಾವಿದರು ಪಾಲ್ಗೊಂಡಿದ್ದ ಈ ಕಾವ್ಯ ಗಾಯನ ಕಾರ್ಯಕ್ರಮದ ವಿಶೇಷತೆಯೆಂದರೆ ಇಲ್ಲಿ ಪ್ರಸ್ತುತಗೊಂಡಂಥವು ಮುಖ್ಯವಾಗಿ ‘ಧ್ಯಾನಾಭಿಮುಖ ಭಾವಗೀತೆ’ಗಳು. ಹರೀಶ್ ಜೀ ಅವರದು ಬಹುಮುಖೀ ಪ್ರತಿಭೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ—ಡಾಕ್ಟರೇಟ್ ಗಳನ್ನು ಗಳಿಸಿರುವ ಹರೀಶ್ ಜೀ ಪ್ರಚಂಡ ಕರಾಟೆ ತಜ್ಞರು! ಅಷ್ಟೇ ಅಲ್ಲ, ಪ್ರಸಿದ್ಧ ‘ರೀಕಿ’ ಚಿಕಿತ್ಸಾ ವಿಧಾನವನ್ನು ಕರಗತ ಮಾಡಿಕೊಂಡು ನೂರಾರು ಮಂದಿಗೆ ಯಶಸ್ವೀ ಚಿಕಿತ್ಸೆ ನೀಡಿರುವಂಥವರು. ಕೌನ್ಸೆಲಿಂಗ್ ಮೂಲಕ ಅನೇಕರಿಗೆ ಸಾಂತ್ವನ ನೀಡಿ ಬದುಕಿನಲ್ಲಿ ಭರವಸೆ ಮೂಡಿಸಿರುವಂಥವರು. ಧ್ಯಾನಾಭಿಮುಖ ಭಾವಗೀತೆಗಳ ಗಾಯನದ ಮೂಲಕ ಸುಪ್ತ ಆಧ್ಯಾತ್ಮಿಕತೆಯನ್ನು ಜಾಗೃತಗೊಳಿಸುವ, ತನ್ಮೂಲಕ ಮಾನಸಿಕ ನೆಮ್ಮದಿ—ಶಾಂತಿಗಳನ್ನು ಪಡೆಯುವ ಪ್ರಯೋಗವನ್ನು ‘ಹರ್ಷವಾಹಿನಿ’ಯ ಮೂಲಕ ಸಾರ್ಥಕವಾಗಿ ನಡೆಸಿದಂಥವರು ಹರೀಶ್ ಜೀ. ಅಶ್ವಥ್ ಅವರೂ ಸಹಾ ಈ ಕಾರ್ಯಕ್ರಮದ ಗೀತ ಪ್ರಸ್ತುತಿಯಲ್ಲಿ ತಮ್ಮ ಎಂದಿನ ಏರು ಜೋರುದನಿಯ ರಭಸದ ಶೈಲಿಯನ್ನು ಬದಿಗೊತ್ತಿ ಮೆಲುದನಿಯ, ಮಂದಗತಿಯ, ಸಾಂತ್ವನದ ಶೈಲಿಯನ್ನು ಅಳವಡಿಸಿಕೊಂಡದ್ದು ಹೊಸದೊಂದು ಅನುಭವ ಲೋಕವನ್ನೇ ತೆರೆದುಬಿಟ್ಟಿತು.

ಈ ಕಾರ್ಯಕ್ರಮದ ನಿರೂಪಣೆಯ ನಂತರ ಹರೀಶ್ ಜೀ—(ಅವರ ಶಿಷ್ಯರು ಅವರನ್ನು ಪ್ರೀತಿಯಿಂದ ಕರೆಯುವಂತೆ ಮಾಸ್ಟರ್ ಜೀ) —ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಹತ್ತಿರದವರಾಗಿಬಿಟ್ಟರು. ಇಂದಿಗೂ ನಾವು ಅವರಿಂದ ಅನೇಕ ಸಂದರ್ಭಗಳಲ್ಲಿ ಮಾರ್ಗದರ್ಶನವನ್ನು ಪಡೆಯುತ್ತೇವೆ. ಸಂದರ್ಭಾನುಸಾರ ಆ ವಿವರಗಳನ್ನು ನಿಮ್ಮ ಮುಂದೆ ತೆರೆದಿಡುತ್ತೇನೆ.

‍ಲೇಖಕರು avadhi

December 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: