ಇಮ್ರೋಝ್ ಎಂಬ ‘ಅಮೃತ’

ಪ್ರೇಮ ಎಂದರೆ ಹೀಗಿರಬೇಕು ಎಂದು ಜೀವಿಸಿ ತೋರಿಸಿದ ಅಮೃತಾ ಮತ್ತು ಇಮ್ರೋಝ್

ಮ ಶ್ರೀ ಮುರಳಿ ಕೃಷ್ಣ

**

ಲಿವಿಂಗ್‌ ಟುಗೆದರ್‌ ಎಂದರೆ ಇಂದಿನ ದಿನಮಾನಗಳಲ್ಲೂ ನಿಕೃಷ್ಟವಾಗಿ ಕಾಣುವ ಹಲವರು ನಮ್ಮ ನಡುವೆ ಇದ್ದಾರೆ. ಆದರೆ ಒಂದು ಗಂಡು ಮತ್ತು ಹೆಣ್ಣು ತಮಗೆ ವಿವಾಹ ಎಂಬ ಸಂಸ್ಥೆಯಲ್ಲಿ ಆಸ್ಥೆಯಿಲ್ಲ ಎಂಬ ನಿರ್ಧಾರವನ್ನು ತಳೆದು, ಎಷ್ಟೇ ಪ್ರತಿರೋಧ ಬಂದರೂ ಒಟ್ಟಿಗೆ ಜೀವಿಸುವುದನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ.  ನಿಜ, ಮಧ್ಯಮವರ್ಗಕ್ಕಿಂತಲೂ ಉಚ್ಚವರ್ಗದಲ್ಲಿ ಇಂತಹ ಸಂಬಂಧಗಳು ಇರುತ್ತವೆ.  ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಇವು ಸಾಮಾನ್ಯವಾಗಿ ಕಂಡು ಬರುವ ಸಂಗತಿಗಳಾಗಿವೆ.

ಇಂತಹ ಸಂಬಂಧದ ಬಗೆಗೆ ಪ್ರಸ್ತಾಪವಾದಾಗಲೆಲ್ಲ, ಜಾನ್‌ ಪಾಲ್‌ ಸಾರ್ತ್ರ ಮತ್ತು ಸಿಮೊನ್‌ ದಿ ಬುವ ಅವರ ಲಿವಿಂಗ್‌ ಟುಗೆದರ್‌ ನಿದರ್ಶನ ನೆನಪಿಗೆ ಬರುತ್ತದೆ! ಇವರು ಫ್ರಾನ್ಸ್‌ ದೇಶದವರಾಗಿದ್ದರು. ಸಾರ್ತ್ರ ಒಬ್ಬ ತತ್ವಶಾಸ್ತ್ರಜ್ಞ, ನಾಟಕಕಾರ, ಕಾದಂಬರಿಕಾರ, ರಾಜಕೀಯ ಕಾರ್ಯಕರ್ತರಾಗಿ ಅಸ್ತಿತ್ವವಾದದ ಜನಕರೆಂದೇ ಖ್ಯಾತರಾಗಿದ್ದಾರೆ.  ಸಿಮೊನ್‌ ದಿ ಬುವ ಒಬ್ಬ ತತ್ವಶಾಸ್ತ್ರಜ್ಞೆ, ಬರಹಗಾರ್ತಿ, ಸಾರ್ವಜನಿಕ ಬುದ್ಧಿಜೀವಿ ಮತ್ತು ಮಹಿಳಾವಾದಿಯಾಗಿದ್ದರು.  ಕೆಲವರು ಆಕೆಯನ್ನು ʼಆಧುನಿಕ ಮಹಿಳಾವಾದದ ತಾಯಿʼ ಎಂದು ಕರೆಯುತ್ತಾರೆ. ʼ ದಿ ಸೆಕೆಂಡ್‌ ಸೆಕ್ಸ್‌ ʼ ಎಂಬುದು ಆಕೆಯ ಜನಪ್ರಿಯ ಪುಸ್ತಕ. ಅವರು ಒಂದೇ ಸೂರಿನಡಿ ಬಾಳುತ್ತಿರಲಿಲ್ಲ! ಆದರೂ ಒಟ್ಟಿಗೆ ಸುಮಾರು ಐದು ದಶಕಗಳ ಸಾಂಗತ್ಯ ಅವರದ್ದಾಗಿತ್ತು.   ಮುಕ್ತ ಸಂಬಂಧದಲ್ಲಿದ್ದ ಅವರಿಗೆ ತಮ್ಮದೇ ಪ್ರಿಯಕರ, ಪ್ರಿಯತಮೆಯರಿದ್ದರು ಎಂದು ಹೇಳಲಾಗುತ್ತದೆ.  ಆದರೆ ಅಮೃತಾ ಮತ್ತು ಇಮ್ರೋಝ್‌ ಸುಮಾರು ನಲ್ವತ್ತು ವರ್ಷಗಳ ಕಾಲ ವಿವಾಹವಾಗದೆ ಒಂದೇ ಮನೆಯಲ್ಲಿ ಜೀವಿಸಿದರು! 1960 ದಶಕದ ಭಾರತದಲ್ಲಿ ಶುರುವಾದ ಈ ಲಿವಿಂಗ್‌ ಟುಗೆದರ್‌ ಸಂಬಂಧ ಒಂದು ದಿಟ್ಟ ನಡೆಯಾಗಿತ್ತು!

ಅಮೃತಾ ಪ್ರೀತಮ್‌(ಜನನ 1919) ಪಂಜಾಬಿ ಸಾಹಿತ್ಯವಲ್ಲದೆ ಇಡೀ ಭಾರತದ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಒತ್ತಿದ ಧೀಮಂತ ಬರಹಗಾರ್ತಿಯಾಗಿದ್ದರು. ಅವರು ತಮ್ಮ ಹದಿನಾರನೇ ವಯಸ್ಸಿನಲ್ಲಿ ಪ್ರೀತಮ್‌ ಸಿಂಗ್‌ರನ್ನು ವಿವಾಹವಾದರು.  ಆದರೆ ಅವರ ದಾಂಪತ್ಯ ಸುಗಮ ಹಾದಿಯಲ್ಲಿ ಸಾಗಲಿಲ್ಲ.  ಮದುವೆಯಾದ ಒಂಬತ್ತು ವರ್ಷಗಳ ನಂತರ ಒಂದು ಮುಷೈರಾದಲ್ಲಿ ಅವರು ಕವಿ ಮತ್ತು ಹಿಂದಿ ಸಿನಿಮಾಗಳ ಖ್ಯಾತ ಗೀತರಚನಕಾರರಾಗಿದ್ದ ಸಾಹಿರ್‌ ಲೂಧಿಯಾನ್ವಿಯನ್ನು ಭೇಟಿಯಾದರು: ಆಕರ್ಷಿತರಾದರು.  ಅವರ ನಡುವೆ ಪ್ರೇಮ ಅಂಕುರಿಸಿತು.  ಆದರೆ ಅದು ವೈವಾಹಿಕ ಹಂತವನ್ನು ತಲುಪಲಿಲ್ಲ.  ತಮ್ಮ ಆತ್ಮಕಥೆಯ ಪುಸ್ತಕ ʼ ರಸೀದಿ ಟಿಕೆಟ್‌ʼ ನಲ್ಲಿ ಸಾಹಿರ್‌ ಜೊತೆಗಿನ ತಮ್ಮ ಪ್ರೇಮ ವೃತ್ತಾಂತವನ್ನು ನೇರವಾಗಿಯೇ ಬರೆದಿದ್ದಾರೆ.  1960ರಲ್ಲಿ ಅವರು ತಮ್ಮ ಪತಿಯಿಂದ ವಿಚ್ಛೇದನವನ್ನು ಪಡೆದರು.

ನಂತರ ಅಮೃತಾರ ಜೀವನದಲ್ಲಿ ಇಂದ್ರಜಿತ್‌ ಅವರ ಪ್ರವೇಶವಾಯಿತು. ಇಂದ್ರಜಿತ್‌ ಅವರ ಕಾವ್ಯನಾಮ ಇಮ್ರೊಝ್‌ ಎಂದಾಗಿತ್ತು. ಅವರು ನಿಷ್ಣಾತ ಚಿತ್ರಕಲಾವಿದರಾಗಿದ್ದರು. ಅಮೃತಾಗಿಂತ ಸುಮಾರು ಹತ್ತು ವರ್ಷ ಚಿಕ್ಕವರಾಗಿದ್ದರು ಇಮ್ರೋಝ್. ಇವರನ್ನು ಭೇಟಿ ಮಾಡಿದ ತರುವಾಯ ಅಮೃತಾ ʼ ಶಾಮ್‌ ಕಾ ಫೂಲ್‌ʼ(ಸಂಜೆಯ ಕುಸುಮ) ಎಂಬ ಕವನವನ್ನು ಬರೆದರು.  ಒಮ್ಮೆ ಮಾತನಾಡುತ್ತ ಅಮೃತಾ “ ಇಮ್ರೋಝ್….ನೀನು ನನ್ನ ಜೀವನದಲ್ಲಿ ತಡವಾಗಿ ಬಂದಿದ್ದೀಯೆ……” ಎಂದಿದ್ದರು!  ʼ ರಸೀದಿ ಟಿಕೆಟ್‌ ʼನಲ್ಲಿ “ಸುಮಾರು ಇಪ್ಪತ್ತು ವರ್ಷಗಳ ಕಾಲ, ನಾನು ನನ್ನ ಕನಸುಗಳಲ್ಲಿ ಒಬ್ಬ ಪುರುಷನ ಸೆಲುಏಟ್(‌Silhouette)ನನ್ನು ಕಾಣುತ್ತಿದ್ದೆ. ಆತ ಕಿಟಕಿಯ ಪಕ್ಕ ಕುಳಿತುಕೊಂಡು, ತನ್ನ ಕೈನಲ್ಲಿ ಪೈಂಟಿಂಗ್‌ ಬ್ರಷ್‌ ಹಿಡಿದುಕೊಂಡಿರುತ್ತಿದ್ದ.  ಆತನ ಮುಖ ನನಗೆ ಗೋಚರಿಸುತ್ತಿರಲಿಲ್ಲ…….” ಎಂಬಿತ್ಯಾದಿಯಾಗಿ ಅಮೃತಾ ಬರೆದಿದ್ದಾರೆ. ಇಮ್ರೋಝ್‌ರನ್ನು ಭೇಟಿ ಮಾಡಿದ ನಂತರ  ಯುವತಿಯಾಗಿದ್ದಾಗ ಕಂಡ ಕನಸು ಅವರನ್ನು  ಮತ್ತಷ್ಟು ಕಾಡಿರಬಹುದು! ಇಮ್ರೋಝ್‌ರಲ್ಲಿ ಅಮೃತಾರಿಗೆ ತಮ್ಮ ಕನಸಿನ ಪುರುಷ ಸಿಕ್ಕರು! ಇಮ್ರೋಝ್‌ರಿಗೆ ಅಮೃತಾರಲ್ಲಿ ತಮ್ಮ ಸ್ಪೂರ್ತಿಯ ವಿಶ್ವ ದೊರಕಿತು! ಹೀಗೆ ಅನುರಾಗ ಬಂಧನದ ಗಝಲ್‌ ಶುರುವಾಯಿತು!

ಇಮ್ರೋಝ್‌ರೊಡನೆ ಸಾಂಗತ್ಯ ಪ್ರಾರಂಭವಾದ ತರುವಾಯ ಕೂಡ ಅಮೃತಾ ಸಾಹಿರ್‌ ಅವರ ಬಗೆಗೆ ಗಾಢಾನುರಕ್ತರಾಗಿದ್ದರು! ಇಮ್ರೋಝ್‌ ಸ್ಕೂಟರನ್ನು ಓಡಿಸುತ್ತಿದ್ದಾಗ, ಅಮೃತಾ ಪಿಲ್ಲಿಯನ್‌ ಸೀಟ್‌ನಲ್ಲಿ ಕುಳಿತಿರುತ್ತಿದ್ದರು.  ಅವರು ಇಮ್ರೋಝ್‌ರ ಬೆನ್ನ ಮೇಲೆ ಏನನ್ನೋ ಗೀರುತ್ತಿದ್ದರು! ಒಮ್ಮೆ ಅವರಿಗೆ ಅಮೃತಾರ ಗೀರುವಿಕೆಯ ಅರ್ಥದ ಅರಿವಾಯಿತು! ಅವರು ಸಾಹಿರ್‌ರ ಹೆಸರನ್ನು ಗೀರುತ್ತಿದ್ದರು! ಆದರೆ ಅಮೃತಾರನ್ನು ತುಂಬ ಪ್ರೀತಿಸುತ್ತಿದ್ದ ಇಮ್ರೋಝ್ರಿಗೆ ಇದು ತಪ್ಪಾಗಿ ಕಾಣಲೇ ಇಲ್ಲ! “ ಆಕೆಯ ಭಾವನೆ ಆಕೆಯದ್ದೇ ಆಗಿದೆ, ನನ್ನ ಬೆನ್ನು ಕೂಡ ಆಕೆಯದೇ…ನನಗೇಕೆ ಕೆಟ್ಟದ್ದೆನಿಸಬೇಕು? ಸಾಹಿರ್‌ ಕೂಡ ನನ್ನ ಭಾಗವಾಗಿದ್ದಾರೆ. ಅವರ ಹೆಸರು ನನ್ನ ಬೆನ್ನ ಮೇಲಿದೆ…” ಎಂದು ಒಂದು ಸಂದರ್ಶನದಲ್ಲಿ ತಿಳಿಸಿದ್ದರು! ಸಾಹಿರ್‌ ಗತಿಸಿದ ನಂತರ ಅಮೃತಾ ತಮ್ಮ ಡೈರಿಯಲ್ಲಿ “ ಆಜ್‌ ಮೇರಾ ಖುದಾ ಮರ್‌ ಗಯಾ “( “ ಇಂದು ನನ್ನ ದೇವರು ಗತಿಸಿದರು “). ಎಂದು ಬರೆದಿದ್ದರು!

ಪುರಾಣದಲ್ಲಿ ಒಂದು ಕಥೆಯಿದೆ.  ಒಮ್ಮೆ ಪಾರ್ವತಿ, ಪರಮೇಶ್ವರರು ಒಂದು ಹಣ್ಣನ್ನು ತಮ್ಮ ಮಕ್ಕಳಾದ ಷಣ್ಮುಖ ಮತ್ತು ಗಣಪರಲ್ಲಿ ಯಾರಿಗೆ ನೀಡಬೇಕು ಎಂಬ ಸಂದಿಗ್ಧದಲ್ಲಿ ಬೀಳುತ್ತಾರೆ.  ಆಗ ತಾನು ಹಿರಿಯ, ತನಗೇ ನೀಡಬೇಕೆಂದು ಷಣ್ಮುಖ ಪಟ್ಟುಹಿಡಿಯುತ್ತಾನೆ! ಇಂತಹ ಸಂದರ್ಭಗಳಲ್ಲವೇ ನಾರದನ ಪ್ರವೇಶವಾಗುವುದು! ಆತ  ಒಂದು ಪರೀಕ್ಷೆಯನ್ನು ಇಬ್ಬರು ಸಹೋದರರಿಗೆ ಒಡ್ಡುತ್ತಾನೆ. ಯಾರು ಮೊದಲು ವಿಶ್ವವನ್ನು ಸುತ್ತು ಹಾಕಿ ಬರುತ್ತಾರೋ, ಅವರಿಗೆ ಆ ಹಣ್ಣು ದೊರಕುತ್ತದೆ ಎಂಬ ವಿಷಯವನ್ನು ಮುಂದಿಡುತ್ತಾನೆ. ಷಣ್ಮುಖ ಇದೇನು ಮಹಾ ಎಂದು ಜಂಬದಿಂದ ತನ್ನ ವಾಹನವಾದ ನವಿಲ ಮೇಲೆ ವಿಶ್ವಪರ್ಯಟನೆಗೆ ತೊಡಗುತ್ತಾನೆ. ಡೊಳ್ಳು ಹೊಟ್ಟೆಯ ಗಣಪ ತನ್ನ ಇಲಿಯ ವಾಹನದ ಮೇಲೆ ಕುಳಿತು ವಿಶ್ವವನ್ನು ಸುತ್ತು ಹಾಕಿ ಬರುವುದು ಕನಸೇ ಸರಿ ಎಂಬುದು ಷಣ್ಮುಖನ ಲೆಕ್ಕಾಚಾರ.  ಗಣಪ ತನ್ನ ತಂದೆ-ತಾಯಿಯರಿಗೆ ಒಂದು ಪ್ರದಕ್ಷಿಣೆ ಹಾಕಿ, ನಮಸ್ಕರಿಸಿ ಕುಳಿತುಬಿಡುತ್ತಾನೆ! ಆ ಹಣ್ಣು ಆತನ ಪಾಲಾಗುತ್ತದೆ! ವಿಶ್ವವನ್ನು ಸುತ್ತು ಹಾಕಿ ಬಂದ ಷಣ್ಮುಖ ಬುಸುಗುಡುತ್ತಾನೆ!

ಈ ಪುರಾಣದ ಕಥೆಯನ್ನು ಸ್ಮರಿಸಲು ಒಂದು ಕಾರಣವಿದೆ.  ತಮ್ಮ ನಡುವೆ ವಯಸ್ಸಿನ ಅಂತರವಿದ್ದದ್ದು ಅಮೃತಾರ ಅರವಿನಲ್ಲಿತ್ತು.  ಒಮ್ಮೆ ಅವರು ಇಮ್ರೋಝ್‌ರಿಗೆ “ ಹೊರಗಿನ ವಿಶ್ವವನ್ನು ಕಂಡು, ವಾಪಸ್ಸು ಬಂದು, ನಿನಗೆ ನನ್ನ ಬಳಿ ಇರಬೇಕು ಎಂದೆನಿಸಿದರೇ ಇರು……..” ಎಂದು ತಿಳಿಸುತ್ತಾರೆ.  ಆಗ ಇಮ್ರೋಝ್‌ ಅಮೃತಾರ ಸುತ್ತ ಏಳು ಬಾರಿ ಸುತ್ತು ಹೊಡೆಯುತ್ತಾರೆ. ನಂತರ “ ನಾನು ಇಡೀ ವಿಶ್ವವನ್ನು ಕಂಡಿದ್ದೇನೆ: ಸಂಚರಿಸಿದ್ದೇನೆ.  ನಾನು ಈಗ ಇಲ್ಲಿದ್ದೇನೆ, ನಿನಗಾಗಿ…….” ಎಂದು ತಿಳಿಸುತ್ತಾರೆ!

ಒಮ್ಮೆ ದೆಹಲಿಯಿಂದ ಮುಂಬೈಗೆ ಕಾರಿನಲ್ಲಿ ಬರುತ್ತಿರುವಾಗ, ಪೊಲೀಸರು ಅವರನ್ನು ಅಡ್ಡಗಟ್ಟುತ್ತಾರೆ.  ಅವರ ಬಳಿ ಮಾದಕ ಪಾನಿಯದ ಬಾಟಲುಗಳಿವೆಯೇ ಎಂದು ತಲಾಶ್‌ ಮಾಡುತ್ತಾರೆ.  ಏನೂ ಸಿಗುವುದಿಲ್ಲ! ನಂತರ ಇಮ್ರೋಝ್‌ ಮುಗುಳ್ನಗುತ್ತ “ಪಾಪ! ಕಾರಿನಲ್ಲಿ ಅವರಿಗೆ ನಿನ್ನಂತಹ ನಶೆಯ ವಸ್ತುವಿರುವುದನ್ನು ಹುಡುಕಲು ಸಾದ್ಯವಾಗಲಿಲ್ಲ…..”ಎಂದು ಅಮೃತಾರಿಗೆ  ಹೇಳುತ್ತಾರೆ!

ಅಮೃತಾ 2005ರಲ್ಲಿ ಅಸುನೀಗಿದರು. ಸ್ವಲ್ಪ ಮುನ್ನ ಅವರು ಇಮ್ರೋಝ್‌ರನ್ನು  ಉದ್ದೇಶಿಸಿ ʼ ಮೈ ತೇರೆ ಫಿರ್‌ ಮಿಲಂಗಿ” ಎಂಬ ತಮ್ಮ ಅಂತಿಮ ಕವನವನ್ನು ಬರೆದರು! ನಂತರ ಇಮ್ರೋಝ್‌ ಕಾವ್ಯವನ್ನು ಬರೆಯಲು ಶುರು ಮಾಡಿದರು!

ಬೇಷರತ್ತಾಗಿ ಅಮೃತಾರನ್ನು ಪ್ರೇಮಿಸಿದ ಇಮ್ರೋಝ್‌ ತಮ್ಮ ತೊಂಬತ್ತೇಳನೆಯ ವಯಸ್ಸಿನಲ್ಲಿ ಕೆಲವು ದಿನಗಳ ಹಿಂದಿ ಕೊನೆಯುಸಿರೆಳೆದರು. ಎರಡು ಸೃಜನಶೀಲ ವ್ಯಕ್ತಿಗಳ ನಡುವಿನ ಈ ಉದಾತ್ತ ಪ್ರೇಮವನ್ನು ಏನೆಂದು, ಹೇಗೆಂದು ವರ್ಣಿಸಬೇಕು? ಮಡಿವಂತರಿಗೆ ಇಂತಹ ಪ್ರೇಮ ಅಪಥ್ಯವಾಗಬಹುದು! ಆದರೆ ಗಡಿಗಳಿಲ್ಲದ ಪ್ರೇಮವನ್ನು ಗುರುತಿಸುವವರಿಗೆ ಇದು ಇನ್ನೊಂದು ಪ್ರಪಂಚವನ್ನು ಅನಾವರಣಗೊಳಿಸಬಲ್ಲದು!

ಇಮ್ರೋಝ್‌ ಭಾಯಿ……..ಆಪ್ಕೋ ಆಖ್ರಿ ಸಲಾಂ……..

‍ಲೇಖಕರು avadhi

December 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: