
ಶ್ರೀನಿವಾಸ ಜಾಲವಾದಿ
ಸ್ವಗತದಲಿ ಹೇಳಿಹಳು
ಯಶೋಧೆ ತನ್ನ ಮನದ
ತಾಕಲಾಟ!
ಜಗದೇಳ್ಗೆಗಾಗಿ ತನ್ನೀನಿಯನನು
ತ್ಯಾಗಗೈದವಳಿಗೇ ಗೊತ್ತು
ಅಗಲಿದವರ ನೋವೆನೆಂದು!
ಜಗದ ಕಣ್ಣಿಗೆ ಝಗಝಗಿಸುವ
ಅರಮನೆಯ ಐಸಿರಿ ವೈಭೋಗ
ಅವಳಿಗೆ ಮಣ್ಣು ಹುಡಿ!
ಇನಿಯನ ಬಿಸಿಯುಸಿರಿಲ್ಲದ
ಸಿರಿ ಸಾಗರ ಕಸಿದಿದೆ
ಅವಳ ಮನದ ನೆಮ್ಮದಿ !
ಗಾಂಧಿ ಕೂಡ ಕಸ್ತೂರ ಬಾ ಗೆ
ಬಿಸಿ ತುಪ್ಪವೇ !
ಜಗದೊದ್ಧಾರನ ಸಂಭಾಳಿಸುವುದು
ಮುಗುದೆಗೆ ಬಲು ಘನಘೋರ ಕಷ್ಟ
ವಲ್ಲದೇ ಇನ್ನೇನೂ?

ಹಲವು ಪ್ರಶ್ನೆಗಳಿಗೆ ಉತ್ತರಗಳೇ
ಇಲ್ಲವಲ್ಲ?
ಹಲವು ಮಾತುಗಳಿಗೆ ಅರ್ಥವೇ
ಇಲ್ಲವಲ್ಲ?
ಹಲವು ಮೌನಗಳಿಗೆ ಬುದ್ಧನೇ
ಕಾರಣನಲ್ಲ !
ಜಗವಳಿದ ಮೇಲೆ ಪರಿಹಾರ ದೊರ
ಕಿದರೇನು ಫಲ?
ಗೌತಮನ ನಿರ್ಗಮನ ಜಗಕೆ ಹೊಸ
ಭಾಷ್ಯ ಬರೆದರೇನು?
ಯಶೋಧೆಯ ಕಳವಳಕೆ ನವ ಚೈತನ್ಯ ನೀಡಿತೇನು?
ಆಸೆ ದುರಾಸೆಗಳೇ ಜಗದ ಜಂಗು
ಎಂದವನಿಗೆ
ಯಶೋಧೆಯೇ ಸ್ಪೂರ್ತಿ ಎಂದರೆ
ತಪ್ಪೇನು?
ಸಂಸಾರ ಸಾಗರ ಹೊಕ್ಕು ಯಶೋಧೆ
ಯೊಂದಿಗೆ ಕಂಡ ಕೆಂಡ ಸತ್ಯವಿದು!
ಸತ್ಯದ ಗುಹೆಗೆ ಯಶೋಧೆ ಕಂಗಳ
ಅಶ್ರು ತೆಕ್ಕಿಸಿ ಜಗದ ಸತ್ಯಕೆ ಹೊಸ
ಭಾಷ್ಯ ಬರೆಯಿತು ಎಂದರೆ ನಿನಗೆ
ಸಹಿಸಲಾಗಲಿಲ್ಲವೆ ಹೇಳು ಮಿಥ್ಯೆ?
ಸಹಸ್ರಾರು ಯಶೋಧೆಯರ ತ್ಯಾಗ
ಫಲವೇ ಜಗಕೆ ಪ್ರೀತಿ ಸಿಂಚನದಾ
ಜಪ ಮಾಲೆಯ ಜೋಗ ಜಲಪಾತ!

ಈ ಜಗವು ನಶ್ವರ ಬದುಕು ಮಾಯಾ
ಜಾಲವೆಂದವನು ಸಿರಿ ಗರವ ಬೀಸಿ
ಒಗೆದ ದೊರೆ, ಅವನೇ ಅವನೇ ಈ
ಭೂ ಚೈತನ್ಯದ ಪರುಷಮಣಿಯೂ
ಅಮೃತ ಜೇನಿನ ನವ ತವನಿಧಿ
ಎಂದು ಸಮ್ಮತಿಸಿದಳು ಯಶೋಧೆ!
ರೋಗಿ ಮುದುಕ ಶವಗಳೇ ಇವನ
ಕಾಯಕವೆನೆಂದು ತಿಳಿ ಹೇಳಿದವು!
ಪರೋಪಕಾರ ತ್ಯಾಗವೇ ಜೀವಾಳ
ಜೀವಾಮೃತವೆಂದ ಯಶೋಧೆಯ
ಜೀವ ಜೀವಾಳದ ಉದಾರೋದ್ಧಾರ!
ಯಶೋಧೆಯಂತೆ ಗಂಧ ತೇದವರು
ಲೋಕ ಕಲ್ಯಾಣಕೆ ಮುನ್ನುಡಿ ಬರೆದು
ಅಲೌಕಿಕ ಅಪರಿಮಿತ ಬೆಳ್ಳಿ ಬೆಳಕಿನ
ಕಾಂತಿ ಹರಡಿದರು ಕಗ್ಗತ್ತಲೆ ನರಕ
ಕೂಪವನು ಬಯಲಾಗಿಸಿದವರು
ಇವರೇ ಅಲ್ಲವೇ ಜ್ಞಾನಗಣಿಗಳು
ಗುರು ಕರುಣೆಯ ಕಡಲುಗಳು!
ಯಶೋಧೆ ಬರೀ ಹೆಸರಲ್ಲ ಅದು
ಜ್ಞಾನ ವೈರಾಗ್ಯದ ಅಂತರಾತ್ಮ!






ಚೆನ್ನಾಗಿದೆ ಕವಿತೆ..