ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿಧಿ ಹೆಚ್ ವಿ ಕವಿತೆ – ಸವಾಲು…

ಶ್ರೀನಿಧಿ ಹೆಚ್ ವಿ

ಅಪರಚಿತನೊಬ್ಬ ಹಠಾತ್ತನೆ
ಎದುರುಗೊಂಡು ಪ್ರಶ್ನಿಸುತ್ತಿದ್ದಾನೆ
ನೀನು ಖುಷಿಯಾಗಿದ್ದೀಯ ಎಂದು

ಅವಸರದಲ್ಲಿ ಓಡುತ್ತಿದ್ದವನು
ಕೊಂಚ ಗಲಿಬಿಲಿಗೊಂಡು
ಸಾವರಿಸಿಕೊಳ್ಳುತ್ತಾ ನಿಂತೆ.
ನೀನ್ಯಾರಯ್ಯ ಕೇಳಕ್ಕೆ? ಅಂದುಬಿಡಲೆ
ಇಲ್ಲ, ಅದು ಪ್ರಶ್ನೆಗೆ ಉತ್ತರವಲ್ಲ.

ಸ್ನೇಹ ಸಂಬಂಧವಾಗಿದ್ದರೆ
ವ್ಯಂಗದ ನಗು ನಕ್ಕು, ಅವರ ಹೊಟ್ಟೆ ಉರಿಸಿ
ನಾನು ತಣ್ಣಗಾಗಬಹುದಿತ್ತು.
ಇವನೋ ಅಪರಿಚಿತ.

ಊಟವಾಯಿತೆ, ಕೆಲಸ ಮುಗಿಯಿತೆ,
ಅಂದರೆ ಮರುತ್ತರ ಕೊಟ್ಟುಬಿಡಬಹುದು.
ಇದೇನಿದು ಅಸಂಬದ್ಧ ಪ್ರಶ್ನೆ
ಖುಷಿಯಾಗಿದ್ದೀಯ ಎಂದು.
ಅಷ್ಟಕ್ಕೂ ಎದೆ ತಟ್ಟಿಕೊಂಡು
ಹೇಳುವವರಿದ್ದಾರೆಯೇ ನಾನು
ಖುಷಿಯಾಗಿದ್ದೇನೆ ಎಂದು.

ನನಗೇನು ಅವನ ಹಂಗು
ತಪ್ಪಿಸಿಕೊಂಡು ಓಡಿಬಿಡಲೆ,
ಆದರೆ ಆ ಪ್ರಶ್ನೆ
ಇರುಳ ಕರಾಳ ಕನಸಿನಂತೆ
ಬೆನ್ನು ಹತ್ತಿ, ರಾತ್ರಿಯೆಲ್ಲಾ
ನಿದ್ದೆಗೆಡಿಸಿಬಿಟ್ಟರೆ ಗತಿಯೇನು?

ಭಯವಾಯಿತು, ನೆನೆಯೋಣವೆಂದರೆ
ಸುಡುಗಾಡು ದೇವರು ಇಲ್ಲವಲ್ಲ,
ಅಕಸ್ಮಾತ್ ಇದ್ದರೂ
ಈ ಜಗತ್ತಿಗೆ ಮರೆಯಾಗಿ
ಅವನಿದ್ದಾನೆಯೆ ಖುಷಿಯಾಗಿ?

‍ಲೇಖಕರು Admin

8 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading