ರಾಧಾಕೃಷ್ಣ ಕೆ ಉಳಿಯತ್ತಡ್ಡ ಓದಿದ ‘ಮರುಳನ ಶಾಯಿರಿ ಲೋಕ’

 ರಾಧಾಕೃಷ್ಣ ಕೆ ಉಳಿಯತ್ತಡ್ಡ

ವಿಶ್ವ ಸಾಹಿತ್ಯ ಲೋಕದಲ್ಲಿ ‘ಶಾಯಿರಿ’ ಪ್ರಕಾರಕ್ಕೆ ವಿಶೇಷವಾದ ಸ್ಥಾನವಿದೆ. ಅದು ಪ್ರೇಮಿಗಳ ಹೃದಯದ ಭಾಷೆ, ಪ್ರೇಮದ ಅಭಿವ್ಯಕ್ತಿ ಮಾಧ್ಯಮ, ಕಾವ್ಯದ ಕೆನೆಯಂತಿರುವ ಶಾಯಿರಿ ಆತ್ಮಾನಂದದ ಬೆಳಕು, ಉರ್ದು ಭಾಷೆಯಲ್ಲಿ ಹುಲುಸಾಗಿ ಬೆಳೆದು ನಿಂತಿರುವ ಈ ಕಾವ್ಯ ಪ್ರಕಾರ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಯಲ್ಲಿ ಉಗಮಗೊಂಡು ಕನ್ನಡದಲ್ಲೂ ವಿಕಾಸಗೊಳ್ಳುತ್ತಿದೆ.

ಹೊಸ ಜನಾಂಗದ ಕಣ್ಣು ತೆರೆಸಿದ ಶಾಯಿರಿಯಲ್ಲಿ ನವೋದಯದ ಭಾವ, ರಮ್ಯದ ಜೀವವಿದೆ. ನವ್ಯದ ನೋವ ಮರೆಸುವ ಶಕ್ತಿ ಇದೆ. ಸಿದ್ಧವಸ್ತು, ಸಿದ್ಧ ಭಾಷೆ, ಸಿದ್ಧ ಶೈಲಿಯ ಏಕತಾನತೆಯಿಂದ ಸೊರಗಿ ಹೋದ ಕಾವ್ಯಾಸಕ್ತರು ಶಾಯಿರಿಯನ್ನು ಒಪ್ಪಿಕೊಂಡು ಭಾವ-ಅನುಭಾವದ ಮಥನದಲ್ಲಿ ಅಪ್ಪಿಕೊಳ್ಳುತ್ತಿರುವುದು ಸ್ವಾಗತಾರ್ಹ.

ಆಪ್ತಮಿತ್ರ ಮರುಳಸಿದ್ದಪ್ಪ ದೊಡ್ಡಮನಿಯವರು ‘ಮರುಳನ ಶಾಯಿರಿ ಲೋಕ’ವನ್ನು ಓದುಗರಿಗೆ ತೆರೆದಿಟ್ಟಿzರೆ. ಇದರಲ್ಲಿರುವ ಪ್ರೀತಿಯ ಜೀವಪರತೆಯ ಸಾಲುಗಳು ಪ್ರೇಮಿಗಳ ಹೃದಯ ಭಾಷೆಯಾಗಿ ನಮ್ಮ ಮುಂದಿದೆ. ಪ್ರೇಮ, ಕಾಮ, ವಿರಹ, ತುಡಿತ, ಮಿಡಿತ ಎಲ್ಲವೂ ಇಲ್ಲಿವೆ. ಸಶಕ್ತ ಪದಬಂಧಗಳಲ್ಲಿ ಕಾವ್ಯ ಶಿಲ್ಪವಾಗಿವೆ. ದೊಡ್ಡಮನಿಯವರು ತನ್ನ ಅನುಭವ ಮತ್ತು ಅಧ್ಯಯನದ ಹಿನ್ನೆಲೆಯಲ್ಲಿ ಮೃದುವಾದ, ಸುಂದರವಾದ, ಸೊಗಸಾದ ರಚನೆಗಳನ್ನು ನೀಡಿzರೆ. ಅದು ಪ್ರೇಮ ಜೀವನದ ಸೊಗಸು. ನಾಜೂಕುತನದ ಸಹಜವಾದ, ತೀP ತೆಯ ಶಾಯಿರಿಗಳು ಹೊಸ ಭಾಷೆ, ಪ್ರತಿಮೆ, ಆಕೃತಿಗಳನ್ನು ಹೊಂದಿ ಆವಿಷ್ಕಾರಗೊಂಡು ಓದುಗರನ್ನು ಬೆರಗಾಗಿಸುತ್ತದೆ.

ಇಲ್ಲಿ ಕವಿ ಪ್ರೇಮ ಲೋಕದಲ್ಲಿ ವಿಹರಿಸುತ್ತಾರೆ. ಪ್ರಿಯಕರನಾಗಿ ಸ್ವಗತ ಸಂವಾದದ ಮೂಲಕ ನಮ್ಮೆಲ್ಲರನ್ನು ಭಾವ ಪ್ರಪಂಚಕ್ಕೆ ಕರೆದೊಯ್ಯುತ್ತಾರೆ. ಶಾಯಿರಿಯ ಹೃದಯವೇ ಪ್ರೀತಿ, ಪ್ರೇಮ, ಜೀವನೋತ್ಸಾಹ ತುಂಬುವ ಧನಾತ್ಮಕ ಅಂಶಗಳನ್ನು ಹೊಂದಿರುವಂಥದ್ದು. ಕವಿ ಬಳಸಿಕೊಂಡ ರೂಪಕ, ಪ್ರತಿಮೆ ಕಾವ್ಯಗುಣದಿಂದ ಕೂಡಿದ್ದು ಚಿಂತನೆಗೆ ಹಚ್ಚುತ್ತದೆ.

ನೀವ್ಯಾಕರ ಪ್ರೀತಿ ಮ್ಯಾಗ
ಶಾಯಿರಿ ಬರಿತಿರಿ ಅಂತಾರ
ಎದಿ ತುಂಬಾ ಪ್ರೀತಿ ಐತಿ ಅನ್ನೋದು
ಗೊತ್ತಿಲ್ಲದ ಅವರು ಮಾತಾಡತಿರತಾರ
ವಾಸ್ತವವನ್ನು ತೆರೆದಿಡುವ ಸಾಲುಗಳಿವು. ಕಾವ್ಯಧೋರಣೆಯನ್ನು ಸಮಕಾಲೀನ ಸಂದರ್ಭದಲ್ಲಿ ಪ್ರೀತಿಯ ಮಹತ್ವವನ್ನು ಒಪ್ಪಿಕೊಳ್ಳುವ ಶಾಯಿರಿಯಿದು, ಅನುಭವ ಎಂಬುದು ಕವಿತೆಗೆ ಮಾತ್ರ ಮುಖ್ಯವಾಗುವುದಿಲ್ಲ. ಬದುಕನ್ನು ಸೂಕ್ಷ್ಮವಾಗಿ ನೋಡುವ ವಿಧಾನದಲ್ಲೂ ಮುಖ್ಯವಾಗುತ್ತದೆ. ಸುಮಾರು ೧೩೦ಕ್ಕೂ ಹೆಚ್ಚು ಶಾಯಿರಿಗಳಿರುವ ‘ಮರುಳನ ಶಾಯಿರಿ ಲೋಕ’ವನ್ನು ಓದುವಾಗ ಬೆಡಗು-ಬೆರಗು ಎರಡೂ ವೇದ್ಯವಾಗುತ್ತದೆ. ಪ್ರತಿ ಪುಟದ ಮಧ್ಯದಲ್ಲಿ ಕಾಣುವ ಚಿತ್ರ ಶಾಯಿರಿಯ ಅರ್ಥವನ್ನು ವಿಸ್ತಾರಗೊಳಿಸುತ್ತದೆ.

ಪ್ರೇಮ ಲೋಕದಲ್ಲಿ ವಿಹರಿಸಿದಾಗ ಇನಿಯಳ ನಗುವಿಗೆ ಇನಿಯನ ಎದೆ ಕನ್ನಡಿಯಾಗುತ್ತದೆ. ಒಡೆದು ಪುಡಿಪುಡಿಯಾದಾಗ ಸಿಡಿದು ಬಿದ್ದ ಚೂರುಗಳಲ್ಲಿ ನಗುವಿನ ಮುಖ ಪ್ರತಿಫಲಿಸುತ್ತದೆ. ಆತನ ಎದೆಯಲ್ಲಿ ಮಡುಗಟ್ಟಿದ ನೋವನ್ನು ಮರೆಸುತ್ತದೆ. ಆಕೆಯ ಮುಖದ ಬೆಳಕಿನಲ್ಲಿ ಬಿಂಬದೊಳಗಿನ ಪ್ರೀತಿ ಬಿಂಬ ಕಾಣುತ್ತದೆ. ಎದೆಗೆ ಕಣ್ಣಿನ ಬಾಣ ಚುಚ್ಚಿದಾಗ ಹರಿವ ನೆತ್ತರಲ್ಲೂ ಪ್ರೀತಿ ಅರಳುತ್ತದೆ. ನಗುವಿನಲ್ಲಿ ತುಂಬಿ ತುಳುಕುತ್ತದೆ. ಪ್ರೀತಿ ಎಂಬ ವಿಷ ಕುಡಿದ ಪ್ರಿಯತಮ, ಆಕೆಯಿಲ್ಲದ ಬದುಕು ಬದುಕೇ ಅಲ್ಲ ಎಂಬ ನಿರ್ಧಾರಕ್ಕೆ ಬರುತ್ತಾನೆ. ಪ್ರೀತಿಗೆ ನಿಯಂತ್ರಿಸುವ ಶಕ್ತಿಯಿದೆ ಅದು ಸಮುದ್ರದ ಹಾಗೆ. ತೆರೆಯೆದ್ದು ಬಂದರ ಯಾರೂ ಉಳಿಯಲಾರರು. ಅದೇ  ರೀತಿ ಪ್ರೀತಿ ಹೊಳೆಯ ಹಾಗೆ ದಡಮೀರಿ ಹರಿದರೆ ಆಪತ್ತು.

ಇನಿಯಳ ನಡಿಗೆಗೆ ನವಿಲೂ ನಾಚಿಕೊಳ್ಳುತ್ತದೆ. ಹುಡುಗರನ್ನು ಆ ನಡಿಗೆ ಹುಚ್ಚರಾಗಿಸುವುದು ಸಹಜ. ಇಬ್ಬರ ಕಣ್ಣು ಕಣ್ಣು ಕೂಡಿದಾಗ ಮನಸ್ಸು ನೂರಾರು ಅರ್ಥಗಳನ್ನು ಹೊಳೆಯಿಸುತ್ತದೆ. ಬಾಚಿ ಕಟ್ಟಿದ ಕೇಶರಾಶಿಗೆ ಹರೆಯದ ಹುಡುಗರು ಮರುಳಾಗದಿರರು ಬಿಚ್ಚಿ ಜಾಡಿಸಿದರೆ ನವಿಲು ಕುಣಿದಂತೆ.

ನಯ ಮುಂಗುರುಳು, ಕಣ್ಣು, ಎದೆ, ಮುಖ, ಕೋಮಲತೆಯಿಂದ ಕೊಬ್ಬಿ ನಿಮಿರಿನಿಂತ ಅಂಗಾಂಗಗಳು ಚಕಿತಗೊಳಿಸುವುದು. ಇದನ್ನೆಲ್ಲ ಕಂಡಾಗ ನಲ್ಲನಿಗೆ ನಶೆ ಏರುವುದು ಸಹಜ. ಹರೆಯ ಬಂದಾಗ ಎಲ್ಲವೂ ಚಂದ ಅದನ್ನು ಕಣ್ಣು ಹೇಳುತ್ತದೆ, ಮಾತನಾಡುತ್ತದೆ. ಪ್ರಿಯತಮೆಯೊಂದಿಗಿರುವಾಗ ಕತ್ತಲೆ ಸರಿದು ಬೆಳಕಾಗುತ್ತದೆ ನಕ್ಕರೂ ಅದೇ ಸ್ವರ್ಗ. ಪ್ರೀತಿ ಎಂಬ ರೋಗಕ್ಕೆ ಮದ್ದು ಇಲ್ಲವೇ ಇಲ್ಲ. ಇಂತಹಾ ಅನುಭವ ಸತ್ಯಗಳನ್ನು ಮರುಳಸಿದ್ದಪ್ಪ ಶಾಯಿರಿಗಳ ಮೂಲಕ ಅಭಿವ್ಯಕ್ತಿಸಿದ್ದಾರೆ.

ಪ್ರೀತಿ ಬಹಳ ಗಾಢವಾದುದು ಪ್ರಿಯತಮೆ ಗುಂಡಿಟ್ಟರೂ ಪ್ರಿಯಕರ ಸಾಯಲಾರ. ಪ್ರೀತಿಯನ್ನು ಯಾವ ರೀತಿಯಲ್ಲಿ ನಾಶಪಡಿಸಿದರೂ ಅದಕ್ಕೆ ಅಳಿವಿಲ್ಲ. ಮನಸಾಕ್ಷಿಯಿದ್ದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳಿದರೆ ಸುಂದರ ದಾಂಪತ್ಯ. ಪ್ರೀತಿ ಮನಸ್ಸುಗಳನ್ನು ಒಂದಾಗಿಸುತ್ತದೆ. ಪವಿತ್ರವಾದ ಪ್ರೀತಿ ಹಲವಾರು ಆಶಯ ಸಂದೇಶಗಳನ್ನು ನೀಡುತ್ತದೆಂಬ ಸತ್ಯ ವಾಕ್ಯಗಳು ಈ ಸಂಕಲನ ರಚನೆಗಳಲ್ಲಿವೆ.

ಎಲ್ಲವೂ ಕಲಾತ್ಮಕವಾಗಿವೆ. ಸರಳವಾದ ಭಾಷೆ, ನೇರ ಅಭಿವ್ಯಕ್ತಿ  ಅನುಭವದ ಆವಿಷ್ಕಾರಕ್ಕೆ ನವಿರು ರೂಪ ಕೊಡಲಾಗಿದೆ. ಕೆಲವೊಮ್ಮೆ ಭಾವಗಳು, ಆಶಯಗಳು ಪುನರುಕ್ತಿಯಾಗಿದ್ದರೂ ಶೈಲಿಯಲ್ಲಿ ಹೊಸತನವಿದೆ. ‘ದೀಪ’ ದ ಮೂಲಕ ತನ್ನ ಕಾವ್ಯ ಕೃಷಿಯ ಉದ್ದೇಶವನ್ನು ಮತ್ತು ಧೋರಣೆಯನ್ನು ಮರುಳಸಿದ್ದಪ್ಪ ಅವರು ಕನ್ನಡ  ಜನಮಾನಸಕ್ಕೆ ತಿಳಿಯಪಡಿಸುವುದು ಹೀಗೆ
ದೀಪ ತನ್ನ ಸುತ್ತಲೂ ಕತ್ತಲಾ ತುಂಬಿಕೊಂಡರೂ
ತಾ ಮಾತ್ರ ಬೆಳಕು ಕೊಡಾಕ ಕುಂತಿರತೈತಿ
ಅeನ, ಅಂಧಕಾರ, ಹೊಡೆದು ಓಡಿಸಿ
ನಮ್ಮನ್ನ ಬೆಳಕಿನ ಕಡೆ ಕರಕೊಂಡು ಹೋಗತೈತಿ
ದೊಡ್ಡಮನಿ ಅವರೊಳಗಿನ ಕವಿ ಇಲ್ಲಿನ ಶಾಯಿರಿಗಳ ಮೂಲಕ ಎದ್ದು ನಿಲ್ಲುತ್ತಾರೆ. ಕೆಲವೇ ಸಾಲುಗಳಲ್ಲಿ ಗಾಢವಾದುದನ್ನೂ ಸರಳವಾದುದನ್ನು ಹಿಡಿದಿಡುವ ಚಮತ್ಕಾರ ಮಾಡಿದ್ದಾರೆ. ಇದೊಂದು ಆಡು ಮಾತಿನ ಕಾವ್ಯ, ವಿಭಿನ್ನ ದೃಷ್ಟಿಕೋನದಿಂದ ಜೀವನಾನುಭವವನ್ನು ನಿರೂಪಿಸುವ ಪ್ರಯತ್ನ ಇಲ್ಲಿ ಕಾಣುತ್ತದೆ.

‘ಮುತ್ತಿನ ಹನಿ’, ‘ಹನಿ ಹನಿ ಭಾವ ಧನಿ’ ಹನಿಗವನ ಸಂಕಲನಗಳನ್ನು ನೀಡಿದ ಕವಿ ‘ನೆಲದ ದನಿ’ ಕಥಾ ಸಂಕಲವನ್ನು ಸಂಪಾದಿಸಿ ಜನಪ್ರಿಯರಾಗಿದ್ದಾರೆ. ‘ಮರುಳನ ಶಾಯಿರಿ ಲೋಕ’ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಮನ ಸೆಳೆಯಲಿ, ಮರುಳಸಿದ್ಧಪ್ಪ ದೊಡ್ಡಮನಿಯವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಇದು ಹಾರೈಕೆ.

‍ಲೇಖಕರು Admin

November 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: