ಶೀಲಾ ಪೈ ಹೊಸ ಕಥೆ: ಅಮ್ಮನಿಗೊಂದು ಪತ್ರ

ಶೀಲಾ ಪೈ

ಹಲೋ ಅಮ್ಮ ,

ಈ ಪತ್ರವನ್ನು ಬರೆಯತೊಡಗಿದಾಗಲೇ ಇಪ್ಪತ್ತೈದು ವರ್ಷಗಳ ಈ ಜೀವಿತಾವಧಿಯಲ್ಲಿ ಇದುವರೆಗೂ ಯಾರಿಗೂ ಪತ್ರವನ್ನೇ ಬರೆದಿರಲಿಲ್ಲ ಎನ್ನುವುದರ ಅರಿವಾಯಿತು ನೋಡು!  ನಮ್ಮದು ಈ ಮೇಲ್ ಜನರೇಶನ್. ಬರೆಯುವುದು ಏನಿದ್ದರೂ ಮೇಲ್ ನಲ್ಲಿ, ವಾಟ್ಸಪ್ ನಲ್ಲಿ. ಆದರೆ ಅಮ್ಮಾ ನೀನು ಚಿಕ್ಕವಳಿದ್ದಾಗ ಪತ್ರಗಳನ್ನು ಬರೆಯುತ್ತಿದ್ದೆ  ಮತ್ತು ಪತ್ರಗಳ , ಗ್ರೀಟಿಂಗ್ ಕಾರ್ಡುಗಳ ಬರುವಿಕೆಯನ್ನು ಕಾತುರತೆಯಿಂದ ಇದಿರುನೋಡುತ್ತಿದ್ದೆ ಎಂದು ಹೇಳಿದ ನೆನಪಿದೆ. ಅದಕ್ಕೆ ಎಷ್ಟೋ ಸಲ ಹೇಳಬೇಕೆನಿಸಿದರೂ ಫೋನಿನಲ್ಲಿ ಅಥವಾ ಮನೆಗೆ ಬಂದಾಗ ಹೇಳಲಾರದೆ ಇದ್ದುದ್ದನ್ನು ಹೀಗಾದರೂ ಹೊರಹಾಕಲು ಸಾಧ್ಯವಾಗಬಹುದೇನೋ ನೋಡುವ ಎಂದು ಬರೆಯಲು ಕೂತಿದ್ದೇನೆ.

ನೆನಪುಗಳ ಹಿಂದೆ ಓಡಿದರೆ ತಂಗಿ ಮನೆಗೆ ಬಂದ ದಿನದ ನೆನಪಾಗುತ್ತದೆ. ನಾನಿನ್ನೂ ಒಂದನೇ ತರಗತಿಯಲ್ಲಿದ್ದೆ.  ಶಾಲೆಯಿಂದ ಒಂದು ದಿನ ವಾಪಾಸು ಬಂದಾಗ ಮನೆಯಲ್ಲಿ ನೀನಿರಲಿಲ್ಲ . ಊರಿನಿಂದ ವಾರದ ಹಿಂದೆ  ಅಜ್ಜಿ ಬಂದಿದ್ದರು. ನೀನೆಲ್ಲಿ ಹೋಗಿದ್ದೀ ಎಂದು ನನಗೆ ಬಹಳ ಚಿಂತೆಯಾಗಿತ್ತು. ನಾಲ್ಕು ದಿನಗಳ ನಂತರ ನೀನು ಮನೆಗೆ ವಾಪಸು  ಬಂದ ಖುಷಿ, ನನ್ನ ಜಾಗದಲ್ಲಿ  ಮಂಚದ ಮೇಲೆ ಮಲಗಿದ್ದ ತಂಗಿಯನ್ನು ನೋಡಿ ಆಶ್ಚರ್ಯಕ್ಕೆ ತಿರುಗಿತ್ತು. 

“ನಾನೆಲ್ಲಿ ಮಲಗಲಿ? ಅಮ್ಮ ಇದು ನನ್ನ ಜಾಗ”  ಅಂದಾಗ ನೀನು ಬರಿದೆ ನಕ್ಕುಬಿಟ್ಟಿದ್ದೆ . ಅಮ್ಮ ನಾನು ನಿಜಕ್ಕೂ ಕೇಳಿದ್ದೆ ತಮಾಷೆಗಲ್ಲ.  ಮಂಚದ ಮೇಲೆ ನಿಮ್ಮಿಬ್ಬರ ನಡುವಿನ ನನ್ನದೇ ಎಂದುಕೊಂಡಿದ್ದ ಜಾಗದಲ್ಲಿ ತಂಗಿ ಬಂದುಬಿಟ್ಟಿದ್ದಳು . ನೀನಿಡೀ ದಿನ ಮಲಗಿಕೊಂಡೇ ಇರುತ್ತಿದ್ದದ್ದು ನೋಡಿ ನನಗೆ ಊಟ ತಿಂಡಿ ಸೇರುತ್ತಿರಲಿಲ್ಲ . ಅಜ್ಜಿಯೋ ,ಕೆಲಸದವರೋ ದೊಡ್ಡ ದೊಡ್ಡ ತುತ್ತುಗಳನ್ನು ಬಾಯಿಗೆ ತುರುಕಿಸುವಾಗ ತಿನ್ನಲೇ ಆಗುತ್ತಿರಲಿಲ್ಲ , ನೀನ್ಯಾವಾಗ ಎದ್ದು ಮೊದಲಿನಂತೆ ನನ್ನ ಸ್ನಾನ ಊಟ ನೋಡಿಕೊಳ್ಳುತ್ತೀ ಎಂದು ನಾ  ಕಾಯುತ್ತಿದ್ದೆ . ಬೆಳ್ಳಗೆ ಗುಂಡಗೆ ಬೆಣ್ಣೆಯ ಮುದ್ದೆಯಂತಿದ್ದ ತಂಗಿ ನಂಗೆ ಇಷ್ಟವಾಗಿದ್ದಳು.   ಅಜ್ಜಿ ವಾಪಸು ಹೋದ ಮೇಲೆ ನೀನು ಅವಳನ್ನು ನೋಡಿಕೊಳ್ಳಲು ನನ್ನನ್ನು ಕರೆಯುತ್ತಿದ್ದಿ. “ಸರಿಯಾಗಿ ನೋಡಿಕೋ ಅಮ್ಮಣಿ , ನಾನು ಬೇಗ ಬರ್ತೇನೆ”  ಎಂದು ಸ್ನಾನಕ್ಕೆ ಹೋಗುತ್ತಿದ್ದ ನೆನಪಿದೆ.  ನಾನು ಒಮ್ಮಿಂದೊಮ್ಮೆ ಹಿರಿಯಳಾಗಿದ್ದೆ , ಅಕ್ಕನಾಗಿದ್ದೆ .

ಹೈಸ್ಕೂಲಿನಲ್ಲಿದ್ದೆನೆಂದು ಕಾಣುತ್ತದೆ . ಸ್ಕರ್ಟ್ ಹಾಕಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದಾಗ ಜಾಕಿ  ಪ್ಯಾಂಟು ಟಿ ಶರ್ಟು ಧರಿಸಿದ ಅಪರಿಚಿತ ಮಹಿಳೆಯೊಬ್ಬರು ಅಚಾನಕ್ಕಾಗಿ ನನ್ನನ್ನು ನಿಲ್ಲಿಸಿ ವ್ಯಾಕ್ಸಿಂಗ್ ಮಾಡಿಕೊಳ್ಳದೆ ಹೀಗೆಲ್ಲ ಓಡಾಡಬೇಡ ಚೆನ್ನಾಗಿರಲ್ಲ ಅಂತ ಮುಖಕ್ಕೆ ಹೊಡೆದಂತೆ ಹೇಳಿದಾಗ ಅವಾಕ್ಕಾಗಿದ್ದೆ. ಎಂತಹ ಅಧಿಕಪ್ರಸಂಗ ! ನಂಗೆ ಏನು ಹೇಳಲೂ ತೋಚಿರಲಿಲ್ಲ. ಸಿಟ್ಟಿನ ಜೊತೆ ಅವಮಾನ ಸೇರಿ ಕಣ್ಣಲ್ಲಿ ಬಂದ ನೀರನ್ನು ಕಷ್ಟಪಟ್ಟು ತಡೆದುಕೊಂಡಿದ್ದೆ. ಅಷ್ಟಕ್ಕೂ ನಾನು ಆವತ್ತು ಹಾಕಿಕೊಂಡಿದ್ದದ್ದು ಶಾಲೆಯ ಯೂನಿಫಾರ್ಮ್ ! ಬೂದು ಬಣ್ಣದ ಸ್ಕರ್ಟು ಚೌಕುಳಿಗಳಿದ್ದ ಶರ್ಟು.  ಆಗಿನ್ನೂ ಶಾಲೆಯಲ್ಲಿ ಯೂನಿಫಾರ್ಮ್ ಆಗಿ ಸ್ಕರ್ಟನ್ನೇ ಧರಿಸುತ್ತಿದ್ದೆವು . ಇಡೀ ಶಾಲೆಯ ಹೆಣ್ಣು ಮಕ್ಕಳು ವಾಕ್ಸಿಂಗ್ ಮಾಡಬೇಕಿತ್ತೇ ? ಮೈಮೇಲೆ ಕೂದಲು ಇರುವುದಕ್ಕೂ ಕಾರಣಗಳಿವೆ. ಅದನ್ನು ಹಾಗೆಯೆ ಇಟ್ಟುಕೊಳ್ಳುವುದು ನಮ್ಮ ಹಕ್ಕು .

ಇದೆಲ್ಲ ಅರ್ಥವಾದದ್ದು ಆಮೇಲೆ , ಅವಮಾನವಾದದ್ದು ಮೊದಲು . ನನ್ನಂಥವರಿಗೆ ಅಂತರ್ಜಾಲ ಒಂದು ವರವೇ ಆಗಿತ್ತು . ದಪ್ಪಹುಬ್ಬುಗಳನ್ನಿಟ್ಟುಕೊಂಡು  ಫ್ರಿಡಾ ಕಾಲೋಳ ಪಾತ್ರವನ್ನು ನಿರ್ವಹಿಸಿದ ಸಲ್ಮಾ ಹಾಯೆಕ್ ,  ಬಾಡಿ ಶೇಮಿಂಗ್ ನ ವಿರುದ್ಧ ದನಿಯೆತ್ತಿ ಮಾತನಾಡುವವರ  ಅಸಂಖ್ಯ ಅನುಭವಗಳ ಬಗ್ಗೆ ಓದಿದ ಮೇಲೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಅರಿವು ಮೂಡಿತ್ತು .

ಅಮ್ಮ , ಮಹಿಳೆಯರನ್ನು ಪುರುಷರು ಮಾತ್ರವಲ್ಲ ಇನ್ನೊಬ್ಬ ಮಹಿಳೆ ಕೂಡ ಮೆಟ್ಟಲು ಪ್ರಯತ್ನ ಮಾಡುತ್ತಾರೆ ಅಲ್ಲವೇ?. ಒಬ್ಬರು ಒಂದು ಹೆಜ್ಜೆ ಮುಂದೆ ಇಡುತ್ತಾ  ಇದ್ದಾರೆಂದರೆ ಆಸರೆಯಾಗುವ ಅಗತ್ಯವಿದೆ ಎನ್ನುವುದನ್ನು ನಾವಿನ್ನೂ ಕಲಿಯಬೇಕಾಗಿದೆ . ಬೇರೆ ಬೇರೆ ರೀತಿಯಲ್ಲಿ ತಲೆಗೆ ಕುಟ್ಟಿ ಕೊಡುವ ಕೆಲಸವನ್ನು ಹೆಂಗಳೆಯರು ಮಾಡುತ್ತಲೇ ಇರುತ್ತಾರೆ ಎನ್ನುವ ಅನುಭವ ನನಗಂತೂ ಬಹಳ ಸಲ ಆಗಿದೆ . ಅವತ್ತು ವರಮಹಾಲಕ್ಷ್ಮಿ ವ್ರತ.  ಬೆಳೆಗ್ಗೆಯಿಂದ ಮನೆಯಲ್ಲಿ ಸಂಭ್ರಮ , ಕೊಬ್ಬರಿ ಮಿಠಾಯಿ , ಕಡಲೆ ಉಸ್ಲಿ ಮಾಡಲು  ನಾನೂ ನಿನಗೆ ಸಹಾಯ ಮಾಡಿ ನಿನ್ನ ಕೈಯಲ್ಲಿ ಶಾಭಾಷ್ ಅನಿಸಿಕೊಂಡಿದ್ದೆ , ಸಂಜೆ ಮನೆ ತುಂಬಾ ಹೆಂಗಸರು , ನಾನು ಅಡಿಗೆಮನೆಯಲ್ಲೇ ಇದ್ದು ತಟ್ಟೆಗೆ ಪ್ರಸಾದ ಹಾಕುವುದು , ಕೊಡಬೇಕಾದ ತಾಂಬೂಲ ಜೋಡಿಸಿಡುವುದು ಮಾಡುತ್ತಿದ್ದೆ . ಹೊರಗೆ ತಂಗಿ ಹಾಡೊಂದಕ್ಕೆ ನ್ರತ್ಯ ಮಾಡಿದಾಗ ಎಲ್ಲರಿಗೂ ಬಹಳ ಖುಷಿ ,ಅವಳನ್ನು ಹೊಗಳಿದ್ದೇ ಹೊಗಳಿದ್ದು , ನಿನ್ನಹಾಗೆಯೇ ನೋಡಲು ಬೆಳ್ಳಗೆ  ಚಂದ ಇದ್ದವಳ ಮೇಲೆ ಎಲ್ಲರಿಗೂ ಮುದ್ದು ಉಕ್ಕಿ ಬರುತ್ತಿತ್ತು . ಇಡೀ  ದಿನ ಅಡಿಗೆಮನೆಯಲ್ಲಿದ್ದ ನನ್ನನ್ನು ಯಾರೂ ಕೇಳಲೇ ಇಲ್ಲ .

ನೆರೆಮನೆಯ ಸುಜಾತ ಆಂಟಿಯಂತೂ ನಾನು ಒಬ್ಬಳೇ ಸಿಕ್ಕಿದರೆ ನೋಡದಂತೆಯೇ ಮಾಡಿ ಹೋಗಿಬಿಡುತ್ತಿದ್ದರು . ಅವರು ನಿನ್ನನ್ನು ಮತ್ತು ತಂಗಿಯನ್ನು ನಗುನಗುತ್ತಾ ಮಾತನಾಡಿಸುವುದನ್ನು ಎಷ್ಟೋ ಸಲ ನೋಡಿದ್ದೆ.  ನನ್ನ ಚಂದದ ಅಮ್ಮಾ ನೀನು ಅವರಂತಿಲ್ಲ , ನಿನಗಿದೆಲ್ಲ ಗೊತ್ತೇ ಆಗುವುದಿಲ್ಲ ಅನ್ನುವುದು ನನಗೆ ಆಗಲೇ ಗೊತ್ತಿತ್ತು.  . ನೋಡಲು “ಚಂದ”  ಇರುವವರ ಅನುಭವಗಳು ಮತ್ತು “ಚಂದ” ಇಲ್ಲದವರ ಅನುಭವಗಳು  ಬೇರೆಯೇ ಇರುತ್ತವೆ ಎನ್ನುವುದು ನಂಗೆ ಬಹಳ ಬೇಗನೆ ಅರ್ಥ ಆಗಿತ್ತು . ಅದಕ್ಕೆಯೇ ಇರಬಹುದು ನಾನು ಓದಿ ದೊಡ್ಡವಳಾಗಿ ಸುಜಾತ ಆಂಟಿಯಂತವರನ್ನು ಮೀರಿ ಬೆಳೆಯಬೇಕು ಅಂತ ಅನಿಸಿದ್ದು . ಬರಿಯ ಪಿಯೂಸಿ ಓದಿ ಗೃಹಿಣಿಯಾಗಿದ್ದುಕೊಂಡು  ತನ್ನ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಮೆರೆಯುವವರು,  ಬೇರೆಯವರನ್ನು ಮೇಲೆ ಅಥವಾ ಕೆಳಗೆ ಇಡುವ ಹಕ್ಕನ್ನು ಯಾರು ಅವರಿಗೆ ಕೊಟ್ಟವರು? ನಾನಂತೂ ಕೊಡಬಾರದು ಅಂದುಕೊಂಡು ಬಿಟ್ಟೆ.

ಅಲ್ಲಿಯವರೆಗೆ ಪಠ್ಯಪುಸ್ತಕಗಳ ಮಧ್ಯೆ ಕಥೆ ಪುಸ್ತಕಗಳನ್ನಿಟ್ಟುಕೊಂಡು ಬರಿದೆ ಓದುವ ನಾಟಕ ಮಾಡುತ್ತಿದ್ದ ನಾನು ಗಂಭೀರವಾಗಿ ಓದಲು , ಲೆಕ್ಕಗಳನ್ನು ಬಿಡಿಸಲು ಶುರು ಮಾಡಿದ್ದು ಆಗಲೇ . ಸಂಜೆಯ ಹೊತ್ತು ಆಡಲು ಹೋಗುವುದನ್ನು ,ಗೆಳತಿಯರ   ಜೊತೆ ತಿರುಗಾಡುವುದನ್ನು ನಿಲ್ಲಿಸಿದೆ . ಒಳ್ಳೆಯ ಕಾಲೇಜಿನಲ್ಲಿ ಮೆರಿಟ್ ಸೀಟು ತೆಗೆದುಕೊಳ್ಳುವುದು ನನ್ನ ಏಕೈಕ ಗುರಿಯಾಗಿತ್ತು . ಇವತ್ತಿಗೂ ನೆನಪಿದೆ , ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸಯನ್ಸ್ ವಿಭಾಗದಲ್ಲಿ   ಸಿ ಇ  ಟಿ ಸೀಟು ಸಿಕ್ಕಿದಾಗ ಮೊದಲ ಬಾರಿಗೆ ಗೆದ್ದ ಅನುಭವವಾಗಿತ್ತು. ನಾನೂ ಒಬ್ಬಳು ಮನುಷ್ಯಳು ಎಂದೆನಿಸಿತ್ತು . ಖುಷಿಯಿಂದ ಕುಣಿಯುವುದೊಂದು ಬಾಕಿ .

ಆದರೆ ಅಷ್ಟು ಸುಲಭವಾಗಿ ನನ್ನ ಸಮಸ್ಯೆಗಳು ಮಾಯವಾಗಿಬಿಡುತ್ತವೆಂದು ನಾನು ಅಂದುಕೊಂಡದ್ದು ನನ್ನ ಮೂರ್ಖತನವೇ ಸೈ. ಕಾಲೇಜಿನಲ್ಲಿಯೂ ನೋಡಲು ಚೆನ್ನಾಗಿದ್ದು  ಠಾಕುಠೀಕಾಗಿ ಇರುವವರಿಗೆ ಎಲ್ಲವೂ ಸುಲಭವಾಗಿ ದಕ್ಕಿಬಿಡುತ್ತದೇನೋ ನನ್ನಂಥಹವರು ಏನಾದರೂ ಮಾಡಬೇಕೆಂದರೆ ದುಪ್ಪಟ್ಟು ಪರಿಶ್ರಮ ವಹಿಸಬೇಕೇನೋ ಅಂತೆಲ್ಲ ಅನುಭವಕ್ಕೆ ಬಂದು ಎಷ್ಟೋ ಸಲ ಖಿನ್ನಳಾಗಿಬಿಡುತ್ತಿದ್ದೆ .  ಸೇಳೆ ಮಾಡುತ್ತ ಕೂದಲು ಬಿಟ್ಟುಕೊಂಡು ಶೋಕಾಗಿ ಇರುವ ಹೆಣ್ಣುಮಕ್ಕಳೆಲ್ಲ ಬಾಯ್ ಫ್ರೆಂಡುಗಳನ್ನು ಬಹುಬೇಗ ಗಳಿಸಿಕೊಂಡುಬಿಟ್ಟರು . ನಾನು ನೇರವಾಗಿ ದಿಟ್ಟವಾಗಿ ಮಾತನಾಡುವವಳು ನನಗೆ ಸ್ನೇಹಿತರು ಧಾರಾಳವಾಗಿ ಸಿಕ್ಕರು  , ಬಾಯ್ ಫ್ರೆಂಡುಗಳಲ್ಲ. ಐ ಡಿಂಟ್ ಕೇರ್ ಅಮ್ಮ ನನಗೆ ನಾಟಕ ಮಾಡುವುದು ಯಾವಾಗಲೂ ಇಷ್ಟವಿರಲಿಲ್ಲ.  ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಒಳ್ಳೆ ಕಂಪೆನಿ ಸೇರಿಕೊಳ್ಳುವುದಕ್ಕಾಗಿಯೇ ತಯ್ಯಾರಿ ನಡೆಸುತ್ತಿದ್ದೆ. ಒಳ್ಳೆಯ ನೌಕರಿ ಸಿಗುವುದನ್ನೇ ಕಾಯುತ್ತಿದ್ದೆ.

ದೂರದ ಡೆಲ್ಲಿಯಲ್ಲಿ ನೌಕರಿ ಸಿಕ್ಕಾಗ ನನಗಂತೂ ಖುಷಿಯಾಗಿತ್ತು. ಪರಿಚಿತರಿಂದ ದೂರವಾಗಿ ಹೊಸ ಜಗತ್ತಿನಲ್ಲಿ  ನನ್ನನ್ನು ನಾನು ಹುಡುಕಿಕೊಳ್ಳಬೇಕು , ಎತ್ತರಕ್ಕೆ ಏರಬೇಕು ಎಂದೆಲ್ಲ ಕನಸು ಕಾಣುತ್ತ ಡೆಲ್ಲಿಯಲ್ಲಿ ಬದುಕು ಕಟ್ಟಿಕೊಳ್ಳಲು ಶುರುಮಾಡಿದ್ದೆ. ನನ್ನ ಕಂಪೆನಿಯಲ್ಲಿ ಮೆರಿಟೋಕ್ರಸಿ ಇರುವುದು ನನಗೊಂದು ವರವಾಯಿತು. ನನ್ನ ಶ್ರಮಕ್ಕೆ ತಕ್ಕಂತೆ ವರ್ಷ ವರ್ಷ ಬಡ್ತಿ ಸಿಕ್ಕಿತು , ಕಳೆದ ಸಲ ಪ್ರಮೋಷನ್ ಸಿಕ್ಕಿದ ಕೂಡಲೇ ನಿನಗೆ ಕರೆ ಮಾಡಿ ಎಲ್ಲಿಲ್ಲದ ಉಮೇದಿಯಿಂದ ವಿಷಯ ತಿಳಿಸಿದ್ದೆ , ನೀನು ಹ್ಞೂ ಎಂದವಳೇ ಮುಂದಿನ ಕ್ಷಣದಲ್ಲಿ ಯಾವುದೊ ಜಾತಕದ ಬಗ್ಗೆ ಹುಡುಗನ ಫೋಟೋ ಬಗ್ಗೆ ಮಾತಾಡಲು ಶುರು ಮಾಡಿದಾಗ ನಿಜಕ್ಕೂ ಬಹಳ ಬೇಜಾರಾಗಿಬಿಟ್ಟಿತ್ತು .  ನಿನ್ನ ತಪ್ಪನ್ನು ಹೇಳುತ್ತಿಲ್ಲ ಅಮ್ಮ ಬೇರೆ ಸಮಯದಲ್ಲಿ ಆಡಬಹುದಾದ ಮಾತಾಗಿತ್ತು ಅದು ಎಂದು ನನಗನಿಸಿದ್ದು ಸತ್ಯ. ಈ ನಡುವೆ ನಮ್ಮ ಫೋನು ಕರೆಗಳಲ್ಲಿ ಮದುವೆ ಎಂಬ ಮೂರಕ್ಷರ   ಪ್ರತ್ಯಕ್ಷ ಪರೋಕ್ಷ ರೂಪದಲ್ಲಿ ಸುಳಿದಾಡುತ್ತಲೇ ಇರುತ್ತದೆ. ಸಂಜೆಗಳಲ್ಲಿ , ವಾರಾಂತ್ಯದಲ್ಲಿ ಬಿಡುವಾಗಿದ್ದು ನಿನ್ನೊಡನೆ ಮಾತನಾಡಬೇಕೆನಿಸಿದರೂ ಮತ್ತೆ ಅದೇ ವಿಷಯ ಬರುತ್ತದೆ ಎಂಬ ಕಾರಣಕ್ಕಾಗಿ ಕರೆಯನ್ನೇ ಮಾಡದೆ ಸುಮ್ಮನಿರುವ ಅಭ್ಯಾಸ ಶುರುವಾಗಿ ಬಿಟ್ಟಿದೆ.

Ignorance is bliss ಇರಬಹುದೇನೋ ಆದರೆ ಒಂದು ಸಲ ಕಣ್ಣು ತೆರೆಯಿತೆಂದರೆ ಪ್ರತಿಯೊಂದೂ ಕಾಣತೊಡಗುತ್ತದೆ . ಬೇಕಿರಲಿ ಬೇಡದಿರಲಿ ಮನದಲ್ಲಿ ಅಚ್ಚೊತ್ತಿಬಿಡುತ್ತದೆ.  ಅದು ಒಬ್ಬರ ಮಾತಿನಲ್ಲಾಗಲೀ,  ನಡವಳಿಕೆಯಲ್ಲಾಗಲೀ ಯಾವುದೋ  ಒಂದು ಅಂಶ ಕಿರಿಕಿರಿ  ಉಂಟುಮಾಡಿತೆಂದರೆ ಅದನ್ನು ಕಡೆಗಣಿಸುವುದು ಕಷ್ಟವೇ. ಯಾಕೆ ಹೇಳುತ್ತಿದ್ದೇನೆಂದರೆ ನನ್ನ ಪ್ರೀತಿಯ ಗೆಳೆಯ ಕಶ್ಯಪ್ ನೋಡು ನಾವು ಒಟ್ಟಿಗೆ ಓದಿದವರು ಬೌದ್ಧಿಕವಾಗಿ ಸರಿಸಮಾನರು ಆದರೆ ಮದುವೆಯಂತಹ ವಿಷಯದ ಬಗ್ಗೆ ಮಾತು ಶುರುವಾಯಿತೆಂದರೆ.   ಅವನಿನ್ನೂ ಎರಡು ಮೂರು ದಶಕಗಳ  ಹಿಂದಿನ ಕಲ್ಪನೆಗಳನ್ನೇ ಇಟ್ಟುಕೊಂಡಿದ್ದಾನೆಂದು ನನಗನಿಸುತ್ತದೆ . ಮನೆ ನೋಡಿಕೊಳ್ಳುವ ಜವಾಬ್ದಾರಿ ಹೆಣ್ಣಿನದೇ ಎಂದು ನನ್ನೊಡನೆ ಗಂಟೆಗಟ್ಟಲೆ ಚರ್ಚೆ ಮಾಡುತ್ತಾನೆ .  ಹೆಂಡತಿ ಅಡಿಗೆ ಮಾಡಿಹಾಕಬೇಕೆಂದೇ ಅನಿಸುತ್ತದೆ ಅವನಿಗೆ .

ಸಮಾನತೆಯೆನ್ನುವುದು ಸಾಧ್ಯವಿಲ್ಲ , ಹೆಣ್ಣುಮಕ್ಕಳು ದೈಹಿಕವಾಗಿ ದುರ್ಬಲರು ಎಂದೆಲ್ಲ ಮಾತನಾಡಿದಾಗ ಸಮಾನತೆಯೆಂದರೆ ನಾವು ಕೇಳುವುದು ಬೌದ್ಧಿಕ ಸಮಾನತೆಯನ್ನು , ಪ್ರಕೃತಿ ಸಹಜ ವ್ಯತ್ಯಾಸಗಳನ್ನು ಯಾರೂ ನಿರಾಕರಿಸುತ್ತಿಲ್ಲ. ಸಮಾನ ಅವಕಾಶಗಳನ್ನು ಸೃಷ್ಟಿಸಿದಾಗ ಬೌದ್ಧಿಕವಾಗಿ  ಗಂಡು ಹೆಣ್ಣು ಸಮಾನರು ಎನ್ನುವುದನ್ನು ಅವನ ತಲೆಯೊಳಗೆ ಹಾಕಲು ನನ್ನಿಂದ ಸಾಧ್ಯವಾಗಲೇ ಇಲ್ಲ . ಸೆರೆಬ್ರಲ್ ಇಕ್ವಾಲಿಟಿ ಎನ್ನುವ ಪದವೇ ಅವನಿಗೆ ಅಪರಿಚಿತ .  ದೊಡ್ಡ ನಗರದಲ್ಲಿ ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದಿದ ಕಶ್ಯಪ್ ಈ ರೀತಿ ಯೋಚಿಸುತ್ತಾನೆಂದರೆ ಇನ್ನೂ ಎಷ್ಟು ಜನ ಹೀಗೆಯೇ  ಯೋಚಿಸುತ್ತಾರೋ ಎನ್ನುವುದನ್ನು ನೆನೆದರೆ ಮದುವೆ ಮಾಡಿಕೊಳ್ಳಲೇ ಭಯವಾಗುತ್ತದೆ .

ಹತ್ತು ದಿನದ  ನಂತರ ಬರೆಯುತ್ತಿದ್ದೇನೆ . ನಾನಿದ್ದ ಫ್ಲ್ಯಾಟನ್ನು ಆತುರದಿಂದ ಖಾಲಿಮಾಡಬೇಕಾಗಿ ಬಂದಿತು. ಬೇರೆ ಫ್ಲಾಟ್ ಸಿಕ್ಕಿದೆ , ಆದರೆ ಸ್ವಲ್ಪ ರಿಪೇರಿ ಇರುವುದರಿಂದ ಒಂದು ವಾರ ನಿಲ್ಲಲು ನೆಲೆಯಿಲ್ಲ , ಹೋಟೆಲಿಗೆ ಹೋಗೋಣ ಅಂತ ಅರೆಮನಸ್ಸಿನಿಂದ ಯೋಚಿಸುತ್ತಿದ್ದೆ  , ಆಫೀಸಿನ ಸೀನಿಯರ ಅಶಿಮಾ ತನ್ನ ಮನೆಗೇ ಬಾ ಎಷ್ಟು ದಿನ ಬೇಕಾದರೂ ಇರು ಎಂದು ಹೇಳಿದ್ದರಿಂದ ಒಂದು ವಾರದಿಂದ ಗಂಟು ಮೂಟೆ ಸಮೇತ ಅವಳಲ್ಲಿ ಠಿಕಾಣಿ ಹಾಕಿದ್ದೇನೆ. ನಾನು ಇಲ್ಲಿ ಬಂದದ್ದು ಒಳ್ಳೆಯದೇ ಆಯಿತು . ಸಂಸಾರವೆಂದರೆ ಹೀಗೂ ಇರುತ್ತದೆ ಎಂದು  ಅಶಿಮಳ ಮನೆಯಲ್ಲಿ ನೋಡಿಯೇ ಗೊತ್ತಾಯಿತು.

ಇಬ್ಬರೂ ಹೊರಗೆ ದುಡಿಯುವವರು. ಎಲ್ಲವೂ ಶಾಂತ , ಸುರಳೀತ.  ಮನೆಯಲ್ಲಿ ಅಡಿಗೆಗೆ , ಮನೆಕೆಲಸಕ್ಕೆ ಜನ ಬರುತ್ತಾರೆ . ನಾನು ಬಂದೆನೆಂದು ಇಲ್ಲಿ ತೊಂದರೆಯೇ ಆಗಿಲ್ಲ . ಮೊದಲ ಬಾರಿಗೆ ನಂಗೂ ಬೇರೊಬ್ಬರ ಮನೆಯಲ್ಲಿ ತಂಗಿದ್ದೇನೆಂದು ಅನ್ನಿಸಲೇ ಇಲ್ಲ . ನನ್ನದೇ ಮನೆಯೆಂಬಂತೆ ಆರಾಮಾಗಿದ್ದೆ . ಅಶಿಮಾ   ಎಷ್ಟರ ಮಟ್ಟಿಗೆ  ಒಳ್ಳೆಯವಳು ಅಂದರೆ ನಂಗೆ ಹಣ್ಣುಗಳೆಂದರೆ ಇಷ್ಟವೆಂದು ನಿತ್ಯವೂ  ಅಡಿಗೆಯವಳ ಕೈಯಲ್ಲಿ ತಾಜಾ ಹಣ್ಣುಗಳನ್ನು ಕತ್ತರಿಸಿ ಡಬ್ಬಿಯಲ್ಲಿ ಹಾಕಿ ಆಫೀಸಿಗೆ ಕೊಂಡೊಯ್ಯಲು  ಕೊಡುತ್ತಿದ್ದಾಳೆ . ನಿನಗೆ ಗೊತ್ತಾ ಅವಳ ಗಂಡ ರಾಹುಲ್ ಪಿಯಾನೋ ನುಡಿಸುವುದನ್ನು ಕಲಿಯುತ್ತಿದ್ದಾನೆ . ಮನೆಯಲ್ಲಿ ಸಣ್ಣ ಪಿಯಾನೋ ಇದೆ . ಅವರಿಬ್ಬರೂ ಹೊರಗೆ ಹೋದಾಗ ನಾನು ಅದರ ಮುಂದೆ ಕುಳಿತು ಮೆಲುವಾಗಿ ಕೈಯಾಡಿಸಿದೆ . ಜೀವನ ಅದೆಷ್ಟು ಚಂದ , ಸರಳ! ನಾವೇ ಗಂಟುಗಳನ್ನು ಹಾಕಿಕೊಳ್ಳುತ್ತೇವೇನೋ 

ಎಂದೆನಿಸಿಬಿಟ್ಟಿತು ಅಶಿಮಾಳ ಮನೆಯ ವಾತಾವರಣ ನೋಡಿ . ಮದುವೆಯಾಯಿತೆಂದು ಅಶಿಮಾಳ ಜೀವನ ಬದಲಾಗಲಿಲ್ಲವೆನ್ನುವುದನ್ನು  ನೋಡುವಾಗ ಮದುವೆ ಈಸ್ ನಾಟ್ ಸಚ್ ಆ ಬ್ಯಾಡ್  ಐಡಿಯಾ ಅಂತ ಅನಿಸಿತು.  ಆದರೆ ಎಷ್ಟು ಜನ ಅಶಿಮಾಳಂತೆ ಅದೃಷ್ಟವಂತರಿದ್ದಾರೆ ?  ಅಮ್ಮ ನಿನಗೂ ನೃತ್ಯ ಮಾಡುವುದೆಂದರೆ ಇಷ್ಟವಿತ್ತು ಅಲ್ಲವೇ ? ಮದುವೆಯಾದ ಮೇಲೆ ಆ ಬಗ್ಗೆ ಯೋಚಿಸಲೇ ಆಗಲಿಲ್ಲ , ಮದುವೆ   ಎನ್ನುವುದು  ಜೀವನದ ದಿಕ್ಕನ್ನು ಪೂರ್ತಿಯಾಗಿ ಬದಲಿಸಿಬಿಡುವುದಾದರೆ ಅಂತಹ ಬಂಧನ ಬೇಕೇ ? ನಿನ್ನನ್ನು ಮಾತ್ರವಲ್ಲ ನನ್ನ ಸ್ನೇಹಿತೆಯರ ಅಮ್ಮಂದಿರನ್ನು ನೋಡುವಾಗಲೂ ನನಗನಿಸುತ್ತದೆ ಯೋಚಿಸದೆಯೇ ಮದುವೆ ಮಾಡಿಕೊಂಡುಬಿಟ್ಟಿರಿ ನೀವೆಲ್ಲ ಎಂದು . ಯಾರೋ ನೂಕಿ ನೀರಿಗೆ  ಬಿದ್ದ ಮೇಲೆ ಕೈಕಾಲು ಬಡಿದು ಈಜು ಕಲಿತಂತೆ ಇದು .

ಯಾರದೋ ಮದುವೆಗೆಂದು ನೀನೊಮ್ಮೆ ಹೊಸ ರೇಷ್ಮೆ ಸೀರೆ ಕೊಂಡಾಗ ಅಪ್ಪನಿಗದೆಷ್ಟು ಸಿಟ್ಟು ಬಂದಿತ್ತು , ಅವರ ಮನೆ ಮದ್ವೆಗೆ ನಮಗ್ಯಾಕೆ ಖರ್ಚು ಎಂದು ಕಂಡಾಪಟ್ಟೆ ಗೌಜಿ ಮಾಡಿದ್ದ .  ನಾನೂ ಕೆಲಸಕ್ಕೆ ಹೋಗಬೇಕಿತ್ತು ಎಂದು ನೀನು ಕಣ್ಣೀರಾಗಿದ್ದೆ. ಅದನ್ನು ನೋಡಿ ನಾನಂತೂ ಕೆಲಸಕ್ಕೆ ಹೋಗುವವಳೇ ಎಂದು ಖಂಡಿತ ಮಾಡಿಕೊಂಡಿದ್ದೆ . ಮದುವೆ ಎಂದರೆ ಇನ್ನೊಬ್ಬರ ಜೊತೆ ಬಾಳುವುದೆಂದರೆ ಸ್ವಲ್ಪ ಮಟ್ಟದ ಹೊಂದಾಣಿಕೆ ಮಾಡಿಕೊಳ್ಳಲೇಬೇಕು ನಿಜ , ಆದರೆ ಪೂರ್ತಿ ಊಟ ತಿಂಡಿ ,  ಕಾಪಿಯ ಬ್ರಾಂಡ್ , ಮಸಾಲೆ, ಉಡುಪು ,ಕೊನೆಗೆ ಹೆಸರು ಸಹಿತ  ಪ್ರತಿಯೊಂದನ್ನು ಬದಲಾಯಿಸು ಅಂದರೆ ನಮ್ಮತನವನ್ನೇ ಕೊಂದುಕೊಂಡಂತೆ ಅಲ್ಲವೇ ಅಮ್ಮ ? ಅದು ಹೇಗೆ ಯಾರೋ ಮಾಡಿದ ನಿಯಮಗಳನ್ನು ಪಾಲಿಸುತ್ತ ಹೋದಿರಿ ನೀವು? ಯಾವಾಗಲೂ ಅಪ್ಪನಿಗೆ ,ಅಜ್ಜನಿಗೆ, ಮನೆಗೆ ಬಂದ ನೆಂಟರಿಗೆ ಏನಿಷ್ಟವೆಂದು ನೆನಪಿಟ್ಟುಕೊಳ್ಳುತ್ತ ಅದನ್ನೇ ಮಾಡುತ್ತ ದಿನಗಳನ್ನು ಕಳೆದುಬಿಟ್ಟೆಯಲ್ಲ , ನನಗೇನು ಇಷ್ಟ? ಎಂದು ಒಂದು ಸಲವೂ ಕೇಳಿಕೊಳ್ಳದೆಯೇ ? ನೀನು ಯಾವಾಗಲೂ ಫಿಶ್ ಕರಿಯ ಬೆಸ್ಟ್ ಪೀಸನ್ನು ಆರಿಸಿ ಅಪ್ಪನ ತಟ್ಟೆಗೇ ಹಾಕುತ್ತಿದ್ದದ್ದು ಕಣ್ಮುಂದೆ ಬರುತ್ತದೆ .

ಅಪ್ಪನಿಗೂ ಅದೇ ಅಭ್ಯಾಸವಾಗಿಬಿಟ್ಟಿತು . ಕೊನೆಗೆ ಅದು ಅವನ ಹಕ್ಕೇ ಆಯಿತು . ಮನೆಯಲ್ಲಿ ನಾವೂ ಇದ್ದೇವೆ ತಿನ್ನುವವರು ಎಂದು ಅವನಿಗೆ ಯಾವತ್ತಾದರೂ ಅನಿಸಿತ್ತೇ ? ಇದರಲ್ಲಿ ನಿನ್ನ ತಪ್ಪೂ ಇದೆಯಲ್ಲವೇ ? ನಿನಗೂ ಅನ್ಯಾಯ ಮಾಡಿಕೊಳ್ಳುವುದಲ್ಲದೆ ನಮ್ಮನ್ನೂ ಕಡೆಗಣಿಸಿಬಿಟ್ಟೆ. ಹಂಚಿಕೊಂಡು ತಿಂದರೇನಾಗುತ್ತಿತ್ತು ? ಇದು ಒಂದು ಉದಾಹರಣೆ ಮಾತ್ರ . ಮನೆಯಲ್ಲಿ ಇಂತಹದ್ದು ಯಾವಾಗಲೂ ಇರುತ್ತಿತ್ತು . ಮನೆಯಲ್ಲಿರುವವರು ಮಾತ್ರವಲ್ಲ ಕೆಲಸಕ್ಕೆ ಹೋಗುವ ವರೂ ಹೀಗೆಯೇ ಗೋಜಲುಗಳಲ್ಲಿ ಸಿಕ್ಕಿಕೊಳ್ಳುತ್ತಾರೆ ಅಂದುಕೊಳ್ಳುವಾಗ ಮಿನಿ ಅಂಟಿಯ ನೆನಪಾಗಿಯೇ ಆಗುತ್ತದೆ. ದಿನಾ ನೀಟಾಗಿ ಇಸ್ತ್ರಿ   ಮಾಡಿದ ಕಾಟನ್ ಸೀರೆಗಳನ್ನುಟ್ಟು ಆಫೀಸಿಗೆ ಶಿಸ್ತಾಗಿ ಹೋಗುತ್ತಿದ್ದವರನ್ನು ಕಂಡರೆ ನಂಗೆ ಬಹಳ ಗೌರವಮೂಡುತ್ತಿತ್ತು. ನಾನೂ ಹೀಗೆಯೇ ಆಗಬೇಕು ಅಂದುಕೊಳ್ಳುತ್ತಿದ್ದೆ.. ಅದೊಂದು ಭಾನುವಾರ ಬೆಳಿಗ್ಗೆ ಧಡಭಡ ಬಾಗಿಲು ಬಡಿಯುವ ಸದ್ದು ಕಿರುಚಾಟ ಕೇಳಿಸಿದ್ದು  ಅವರ ಮನೆಯಿಂದ ಎಂದು ನಂಗೆ ನಂಬಲಿಕ್ಕೇ ಆಗಲಿಲ್ಲ.

ನೀನು ಧಾವಿಸಿ ಹೋಗಿ ಅವರ ಮನೆಯ ಕಾಲಿಂಗ್ ಬೆಲ್ ಒತ್ತಿಬಿಟ್ಟಿದ್ದೆ. ಅವರ ಮನೆಯ ವಿಷಯದಲ್ಲಿ ನೀನು ಮೂಗು ತೂರಿಸಿದೆ ಎಂದು ಸಿಟ್ಟು ಮಾಡಿಕೊಳ್ಳುತ್ತಾರೇನೋ ಎಂದು ನಾನಂದುಕೊಂಡಿದ್ದರೆ ಹಾಗೇನೂ ಆಗದೆ ಅವರು ನಿನ್ನನ್ನಪ್ಪಿಕೊಂಡು ಅತ್ತಿದ್ದರು.  “ ಮ್ಯಾಥ್ಯೂ ಗೆ ಬಹಳ ಸಿಟ್ಟು ಬಂದಿತ್ತು , ಜಗಳಾಡಿದ. ಕೂದಲು ಎಳೆದಾಡಿದ,  ಕೆಳಗೆ ಬಿದ್ದುಬಿಟ್ಟೆ ,  ಎಷ್ಟೋ ಸಲ ಬಿಟ್ಟುಬಿಡೋಣ ಅನ್ನಿಸತ್ತೆ ಮಕ್ಕಳ ಮುಖ ನೋಡಿ ಸುಮ್ಮನಾಗುತ್ತೇನೆ” ಎಂದು ಹೇಳಿದ್ದು ಇವತ್ತಿಗೂ ನೆನಪಿದೆ. ಆರ್ಥಿಕವಾಗಿ ಸ್ವತಂತ್ರವಾಗಿರುವವರೂ ಹೀಗೆ ಯೋಚಿಸುವಾಗ ಗಂಡನ ಸಂಪಾದನೆಯಲ್ಲಿಯೇ  ಬದುಕಬೇಕಾದವರ ಪಾಡೇನು?  ಅಥವಾ ಇದೆಲ್ಲ ಅದೃಷ್ಟದ ಮಾತೇ ? ಏನೇನೋ ಯೋಚನೆಗಳು ಬರುತ್ತವೆ . ಸ್ನೇಹಿತರ ಗುಂಪು ಕಟ್ಟಿಕೊಂಡು ತಿರುಗಾಡಲು ಹೋದರೂ ಮನಸ್ಸಿಗೆ ಸುಖವೆನಿಸುವುದಿಲ್ಲ. ಸಮಯ ವ್ಯರ್ಥವಾಗುತ್ತಿದೆ, ಏನಾದರೂ ಮಾಡಬೇಕು , ಸಾಧಿಸಬೇಕು ಅನ್ನುವ ಅಸೆ. ಮುಂದೆ ಓದಲೇ ? ಎಂ ಬಿ ಎ ಮಾಡಲೇ ಎಂದು ಯೋಚಿಸುತ್ತಿದ್ದೇನೆ. ಪಿಯಾನೋ ಕಲಿಯಬೇಕು, ಪೇಂಟಿಂಗ್ ಮಾಡಬೇಕು, ನೃತ್ಯ  ಮಾಡಬೇಕು  ಎಂದೆಲ್ಲ ಮನಸ್ಸು ಹುಚ್ಚುಕಟ್ಟುತ್ತದೆ.

ಸಣ್ಣವರಿರುವಾಗ ಆಟದಲ್ಲಿ ಓಡಿ  ಸುಸ್ತಾದರೆ ಕೂತುಕೊಳ್ಳಬೇಕೆನಿಸಿದರೆ ಕೈಮೇಲೆತ್ತಿ “ಟೈಮ್ ಪ್ಲೀಸ್” ಕೇಳುತ್ತಿದ್ದೆವು . ಕೂತು ಹಗುರಾಗಿ ಮತ್ತೆ ಆಟಕ್ಕೆ ಸೇರಿಕೊಳ್ಳುತ್ತಿದ್ದೆವು. ಈಗಲೂ ನನಗೆ ಹಾಗೆಯೇ  ಅನಿಸುತ್ತದೆ . ಸಮಯ ಬೇಕು..  ನನಗೇನು ಬೇಕೆಂದು ನಾನೇ  ತಿಳಿಯಲು, ಸುತ್ತೂ ನೋಡಲು, ಇಷ್ಟವಾಗುವವನು ಸಿಗಲು.. ಇವನೊಡನೆ ಜೀವನವನ್ನು ಹಂಚಿಕೊಳ್ಳಬಲ್ಲೆ ಅಂತ ಅನಿಸಲು .  ಮೊದಲು ಓದು , ಆಮೇಲೆ ನೌಕರಿ , ಎಂದೆಲ್ಲ ಒದ್ದಾಡಿ ಈಗ ಸ್ವಲ್ಪ ಕಣ್ಣು ತೆರೆದು ನೋಡುತ್ತಿರುವಾಗ  ಮದುವೆ ಎನ್ನುವ ಬ್ರಹ್ಮರಾಕ್ಷಸನನ್ನು ಕರೆದು ನನ್ನ ಮುಂದಿಡದಿರು ಅಮ್ಮ, ಬೇಕು …. ಈಗ ಬೇಡ .  ಉದ್ದ ಬರೆದೆ , ನೀನಿದನ್ನು ಬಾಲ್ಕನಿಯಲ್ಲಿ ಹಾಕಿದ ಬೆತ್ತದ ಕುರ್ಚಿಯ ಮೇಲೆ ಕೂತು ಓದುವ ಕಲ್ಪನೆಯೇ ಖುಷಿ ಕೊಡುತ್ತಿದೆ . ನನ್ನ ಮುದ್ದಿನ ಅಮ್ಮ ಬಾಕಿ ವಿಷಯ ಕರೆ ಮಾಡಿದಾಗ .

                                                                                       ಲವ್ ಯು ಅಮ್ಮ

ಶ್ರೇಯಾ

‍ಲೇಖಕರು admin j

July 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: