ಶಿವು ಕೆ ನೋಡಿದ ಇರಾನಿ ಸಿನಿಮಾ

ಶಿವು ಕೆ

ಬದುಕಲ್ಲಿ ನಟಿಸಲು ಸಾಧ್ಯವೇ? ಇಷ್ಟಕ್ಕು ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ನಾನು ನೋಡಿದ ಒಂದು ಅದ್ಬುತ ಸಿನಿಮಾ! ಅದ್ಬುತವೆಂದ ಮಾತ್ರಕ್ಕೆ ಆತ್ಯುಕೃಷ್ಟ ತಾಂತ್ರಿಕತೆ ಹೊಂದಿದ ದುಬಾರಿ ವೆಚ್ಚದ ಅವತಾರ್, ಟೈಟಾನಿಕ್, ಅವೆಂಜರ್ ಸರಣಿ, ಡೈನೋಸಾರ್,… ಸಾಲಿನ ಸಿನಿಮಾಗಳಾಗಲಿ, ಅಥವ ಅತ್ಯುತ್ತಮ ಕತೆ, ಚಿತ್ರಕತೆ, ಉತ್ತಮ ನಟನೆಯಿಂದಲೇ ಕಲಾಕೃತಿಗಳೆನಿಸಿದ ನೂರಾರು ಸಿನಿಮಾಗಳು ನಮ್ಮ ನೆನಪಿಗೆ ಬಂದುಬಿಡಬಹುದು. ಆದ್ರೆ ಅವುಗಳನ್ನು ಒಮ್ಮೆ ಬದಿಗೆ ಸರಿಸಿಬಿಡಿ.

ಯಾವುದೇ ಅದ್ದೂರಿ ಸೆಟ್‍ಗಳಿಲ್ಲದೇ, ತಾಂತ್ರಿಕವಾಗಿಯೂ ಉತ್ತಮವಲ್ಲದ, ತೀರ ಸರಳವೆನಿಸುತ್ತಾ, ನೇರವಾದ, ಅದಕ್ಕಿಂತ ಸಹಜತೆಯನ್ನೇ ಕೃತಿಯನ್ನಾಗಿಸಿಕೊಂಡು, ಇರಾನಿನ ಪ್ರಖ್ಯಾತ ನಿರ್ದೇಶಕ ‘ಜಾಫರ್ ಫನಾಯ್’ನ ‘ದಿ ಮಿರರ್’ ಚಿತ್ರವನ್ನು ನೋಡಿದಾಗ ನನಗೆ ಮೂಡಿದ ಪ್ರಶ್ನೆಯಿದು. ಇದರ ಕತೆಯೇ ಒಂದು ರೀತಿಯಲ್ಲಿ ವಿಭಿನ್ನಕ್ಕಿಂತ ವಿಭಿನ್ನವೆಂದು ನನ್ನ ಅನಿಸಿಕೆ. ಮೊದಲ ತರಗತಿ ಓದುತ್ತಿರುವ ಒಂದು ಪುಟ್ಟ ಸ್ಕೂಲ್ ಹುಡುಗಿ ‘ಮಿನಾ’ ಮೇಲೆ ಕೇಂದ್ರಿಕೃತವಾಗಿ ಕೇವಲ ರಸ್ತೆಯ ಮೇಲೆ ಚಿತ್ರಿಕರಿಸಿದ ಚಿತ್ರವಿದು.

ನೀವು ಸಿನಿಮಾವನ್ನು ನೋಡಲು ಪ್ರಾರಂಭಿಸಿದಾಗ ಆ ಪುಟ್ಟ ಹುಡುಗಿಯ ನಟನೆಯನ್ನು ನೋಡುತ್ತಾ ನೀವು ಆ ಪಾತ್ರದಲ್ಲಿ ಒಂದಾಗಿ ಆ ಹುಡುಗಿಯ ಎಲ್ಲಾ ಭಾವನೆಗಳು ನಿಮ್ಮಲ್ಲೂ ಉಂಟಾಗಿ ಆ ತನ್ಮಯತೆಯಿಂದ ಮೈಮರೆತಿರುವಾಗಲೇ, ಇನ್ನು ಮುಂದೆ ನಾನು ನಟಿಸೋಲ್ಲ, ನನಗಿಷ್ಟವಿಲ್ಲವೆಂದು ತನಗೆ ಕೃತಕವಾಗಿ ಕೈಗೆ ಹಾಕಿದ್ದ ಬ್ಯಾಂಡೇಜ್ ಕಿತ್ತು ಬಿಸಾಡಿ, ಅರ್ಧ ಸಿನಿಮಾ ನಡುವೆಯೇ ಇಡೀ ಸಿನಿಮಾ ತಂಡವನ್ನು ಬಿಟ್ಟು ಆ ಪುಟ್ಟ ಹುಡುಗಿ ಹೊರಬಂದಾಗ ನಿಮಗೆ ಹೇಗನ್ನಿಸಬಹುದು? ನೀವು ಕೂಡ ಮರುಕ್ಷಣವೇ ವಾಸ್ತವಕ್ಕೆ ಬಂದುಬಿಡುತ್ತೀರಿ.

ನನಗೆ ಇಂಥ ಅವಕಾಶ ಸಿಕ್ಕಿದ್ದರೆ ಹೀಗೆ ಅರ್ಧಕ್ಕೆ ಕೈಯೆತ್ತಿ ಬರುತ್ತಿರಲಿಲ್ಲ. ಪೂರ್ತಿಯಾಗಿ ನಟಿಸಿ ಮುಗಿಸಿಕೊಡುತ್ತಿದ್ದೆ. ಈ ಹುಡುಗಿಗೇನು ಪೆಚ್ಚಾ? ಅಂತ ನನಗನ್ನಿಸಿದಂತೆ ನಿಮಗೂ ಅನ್ನಿಸುತ್ತದೆ. ಆ ಮಗುವಿನಿಂದಾಗಿ ಅರ್ಧಕ್ಕೆ ನಿಂತ ಸಿನಿಮಾ ಬಗ್ಗೆ ನಿರ್ದೇಶಕ ಅಧೀರನಾಗುವುದಿಲ್ಲ. ಆದ್ರೆ ಇದೆಲ್ಲವನ್ನೂ ಮೀರಿ ಆ ಕ್ಷಣದಲ್ಲಿ ಆತನ ತಲೆ ಕೆಲಸ ಮಾಡಲಾರಂಭಿಸುತ್ತದೆ. ಇದುವರೆಗೂ ತನ್ನ ನಿಯಂತ್ರಣದಲ್ಲಿಯೇ ಇದ್ದ ಸಿನಿಮಾ ಕತೆಯನ್ನು, ಆ ಸನ್ನಿವೇಶದ ನಂತರ ಮುಂದೇನಾಗುತ್ತದೆಯೋ ನೋಡೇಬಿಡೋಣವೆಂದು ತನ್ನ ನಿಯಂತ್ರಣದಲ್ಲಿ ಇಲ್ಲದ ಮುಂದಿನ ಸನ್ನಿವೇಶಗಳನ್ನು ಯಥಾವತ್ತಾಗಿ ಚಿತ್ರೀಕರಿಸುವುದೇ ಆ ಚಿತ್ರದ ಸೊಬಗು.

ಶಾಲೆ ಬಿಟ್ಟ ಕೂಡಲೇ ಗೇಟು ತೆರೆದುಕೊಂಡು ಹೊರಬರುವ ಪ್ರಾಥಮಿಕ ಶಾಲಾ ಮಕ್ಕಳು ರಸ್ತೆ ದಾಟುವುದರೊಂದಿಗೆ ಪ್ರಾರಂಭವಾಗುತ್ತದೆ ಈ ಸಿನಿಮಾ. ಕಾಂಪೌಂಡ್ ಹೊರಗೆ ಕಾದು ಕುಳಿತ ಮಕ್ಕಳನ್ನು ಅವರವರ ತಂದೆ ತಾಯಿಯರು ಕರೆದುಕೊಂಡು ಹೋಗುತ್ತಿದ್ದರೂ ಅದೊಂದು ಪುಟ್ಟ ಹುಡುಗಿ ಹಾಗೇ ಕುಳಿತಿರುತ್ತದೆ. ನಿತ್ಯವೂ ಸರಿಯಾದ ಸಮಯಕ್ಕೆ ಬಂದು ಕರೆದುಕೊಂಡು ಹೋಗುವ ಆ ಮಗುವಿನ ತಾಯಿ ಇನ್ನೂ ಬಂದಿಲ್ಲವಾದ್ದರಿಂದ ಆ ಹುಡುಗಿ ಕಾಯುತ್ತಿರುತ್ತಾಳೆ. ಎಡಗೈ ಮುರಿದಿದ್ದರಿಂದಲೇ ಏನೋ ಅದಕ್ಕೆ ಬ್ಯಾಂಡೇಜ್ ಹಾಕಿಸಿಕೊಂಡಿದ್ದ ಆ ಮಗು ಸ್ಕೂಲ್ ಕಾಂಪೌಂಡ್ ಬಳಿ ನಿಂತುಕೊಂಡು ತನ್ನ ತಾಯಿಗಾಗಿ ಕಾಯುವ ಕೆಲವು ಕ್ಷಣಗಳನ್ನು ನೋಡುತ್ತಿದ್ದರೆ ನೀವು ಆ ಕ್ಷಣಕ್ಕೆ ನೀವು ಪಾತ್ರದಲ್ಲಿ ಒಂದಾಗಿಬಿಡುತ್ತೀರಿ.

ಚಿತ್ರದಲ್ಲಿನ ಆ ಕ್ಷಣಗಳಲ್ಲಿ ಆ ಮಗು ಅನುಭವಿಸುವ ಆತಂಕ, ಕಾಯುವಿಕೆ, ಇನ್ನೂ ಬರದಿದ್ದಲ್ಲಿ ನಾನು ತಪ್ಪಿಸಿಕೊಂಡುಬಿಡುತ್ತೇನಾ? ಮರುಕ್ಷಣದಲ್ಲಿ ಇಲ್ಲ ಅಮ್ಮ ಬಂದೇ ಬರುತ್ತಾರೆ ಅನ್ನುವ ಭರವಸೆ ಇದೆಲ್ಲವನ್ನು ಸಹಜವಾಗಿ ಕಣ್ಣಿನಲ್ಲೇ ವ್ಯಕ್ತಪಡಿಸುವ ಆ ಮಗುವಿನ ನಟನೆ ನಿಮ್ಮನ್ನು ಬಾಲ್ಯದ ನೆನಪಿಗೆ ತಳ್ಳಿಬಿಡುತ್ತದೆ. ಅಮ್ಮ ಇನ್ನೇನು ಬಂದುಬಿಡುತ್ತಾರೆ ಅಲ್ಲಿನವರೆಗೆ ಸ್ವಲ್ಪ ಕಾಯುತ್ತಿರು ಅಂತ ಹೇಳುವ ಆಕೆಯ ಮತ್ತೊಬ್ಬ ಟೀಚರ್, ಆ ಟೀಚರನ್ನೇ ನೋಡಲು ಬರುವ ವ್ಯಾಪಾರಿ, ಅವರಿಬ್ಬರ ನಡುವೆ ವ್ಯಾಪಾರದ ವಿಚಾರದ ದಾಕ್ಷಿಣ್ಯಕ್ಕೆ ಮಗುವನ್ನು ಮನೆಗೆ ತಲುಪಿಸುತ್ತೇನೆ ಎಂದು ಒಪ್ಪಿಕೊಳ್ಳುವ ಆತನ ಮೊಪೆಡ್ ಮೇಲೆ ಆ ಮಗು ಜಾಗಮಾಡಿಕುಳಿತುಕೊಳ್ಳುವ ಪರಿ, ದಾರಿಯುದ್ದಕ್ಕೂ ಸಾಗುವ ಅವರಿಬ್ಬರ ಸಂಭಾಷಣೆ, ಅಷ್ಟರಲ್ಲಿ ಒಂದು ಬಸ್ ಸ್ಟ್ಯಾಂಡ್ ಕಂಡು ನನ್ನಮ್ಮ ಇಲ್ಲೆ ಬಸ್ ಹತ್ತೋದು ಅಂತ ಆ ಪುಟ್ಟ ಹುಡುಗಿ ಇಳಿದುಬಿಡುತ್ತಾಳೆ. ಮತ್ತೆ ಅಲ್ಲಿಗೆ ಬಂದ ಒಂದು ಬಸ್ಸನ್ನು ಹತ್ತಿಬಿಡುತ್ತಾಳೆ.

ಬಸ್ಸಿನಲ್ಲಿ ಆವಳ ಅಮ್ಮ ಇರುವುದಿಲ್ಲ. ಆದ್ರೆ ಚಲಿಸುವ ಬಸ್ಸಿನಲ್ಲಿ ತಕ್ಷಣಕ್ಕೆ ಇಳಿಯುವಂತಿಲ್ಲ. ಆ ಬಸ್ಸು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಅಷ್ಟರಲ್ಲಿ ಈ ಹುಡುಗಿ ದಾರಿ ತಪ್ಪಿರುತ್ತಾಳೆ. ಅಮ್ಮ ಕಾಣುತ್ತಾಳ ಅಂತ ಆಗಾಗ ಕಿಟಕಿಯಲ್ಲಿ ನೋಡುತ್ತಿರುವಂತೆಯೇ ಬಸ್ಸಿನ ಕೊನೆ ನಿಲ್ದಾಣ ಬಂದುಬಿಡುತ್ತದೆ. ಆ ಬಸ್ ಚಾಲಕ ಈ ಹುಡುಗಿಯನ್ನು ಮತ್ತೊಬ್ಬ ಬಸ್ ಚಾಲಕನಿಗೆ ಮನೆತಲುಪಿಸುವಂತೆ ಜವಾಬ್ದಾರಿ ವಹಿಸುವುದು, ಆತನು ಮತ್ತೊಂದು ಬಸ್ಸಿನಲ್ಲಿ ಈಕೆಯನ್ನು ಕರೆದೊಯ್ಯುವುದು…

ಹೀಗೆ ಆ ಹುಡುಗಿ ದಾರಿತಪ್ಪಿದ ಪುಟ್ಟ ಹುಡುಗಿಯಾಗಿಬಿಡುತ್ತಾಳೆ. ಇಷ್ಟೆಲ್ಲದರ ನಡುವೆ ನಿರ್ಧೇಶಕರು ರಸ್ತೆಯಲ್ಲಿ, ಟ್ರಾಫಿಕ್ಕಿನಲ್ಲಿ, ಬಸ್ಸಿನಲ್ಲಿ, ನಡೆಯುವ ಸಂಭಾಷಣೆಗಳು, ಶಬ್ದಗಳನ್ನು ಯಥಾವತ್ತಾಗಿ ಸೇರಿಸಿರುವುದರಿಂದ ಚಿತ್ರಕ್ಕೆ ಮತ್ತಷ್ಟು ಸಹಜತೆಯನ್ನು ತಂದುಕೊಡುತ್ತಾರೆ.

ಬಸ್ಸಿನಲ್ಲಿ ಜ್ಯೋತಿಷ್ಯ ಹೇಳುವ ಹೆಂಗಸು, ತನ್ನ ಸೊಸೆಯ ಮೇಲೆ ದೂರನ್ನು ಹೇಳುತ್ತಲ್ಲೇ ಮಗನನ್ನು ಹೊಗಳುತ್ತಾ ದಾರಿಯುದ್ದಕ್ಕೂ ವಟಗುಟ್ಟುವ ಮುದುಕಿ, ಅಗಾಗ ಇರಾನ್ ಕೊರಿಯಾ ಫುಟ್‍ಬಾಲ್ ಆಟದ ಬಗ್ಗೆ ಚರ್ಚೆಗಳು, ಬಸ್ಸಿನಲ್ಲಿ ಬರುವ ಬಿಕ್ಷುಕನ ಹಾಡು… ಇಂಥ ಅನೇಕ ವಾಸ್ತವ ಚಿತ್ರಣವನ್ನು ಹಾಗೇ ಕಟ್ಟಿಕೊಡುತ್ತಲೇ… ಆ ಮಗು ಬಸ್ಸಿನಲ್ಲಿ ಆನುಭವಿಸುವ ಮುಗ್ದತೆ, ಆತಂಕ, ಗೊಂದಲ, ಭಯ, ಅದಕ್ಕೆ ತೀರ್ವತೆಯನ್ನು ತಂದುಕೊಡುವಂತೆ ನಡುವೆ ಆ ಹುಡುಗಿಯನ್ನು ಬಸ್ಸಿಂದ ಇಳಿಸಿಬಿಡುವ ನಿರ್ವಾಹಕ, ಗೊತ್ತಿಲ್ಲದ ಜಾಗದಲ್ಲಿ ಆ ಹುಡುಗಿ ಕಳೆದು ಹೋಗಿರುವೆನೆಂಬ ಭಾವದಲ್ಲಿ ಅನುಭವಿಸುವ ಆತಂಕ, ಅದರ ಕಡೆಗೆ ಗಮನ ಕೊಡದೇ ತಮ್ಮದೇ ಲೋಕದಲ್ಲಿರುವ ಜನರು, ಅಮ್ಮ ಸಿಕ್ಕಿ ಇನ್ನೂ ನನ್ನನ್ನು ಮನೆಗೆ ಕರೆದುಕೊಂಡು ಹೋಗಲಿಲ್ಲವಲ್ಲ ಎನ್ನುವ ದಿಗಿಲಿಗೆ ಇನ್ನೇನು ಅವಳ ಕಣ್ಣಂಚಿನಿಂದ ಒಂದು ಹನಿ ಕೆನ್ನೆಯ ಮೇಲೆ ಇಳಿಯಬೇಕು ಎನ್ನುವಷ್ಟರಲ್ಲಿ ನೀವದನ್ನು ನೋಡುತ್ತಾ ಅನುಭವಿಸುತ್ತಾ ನಿಮ್ಮ ಕಣ್ತುಂಬಿ ಹನಿಯೊಂದು ಜಾರಿರುತ್ತದೆ.

ಆ ಮಗುವಿನ ಕಣ್ಣಿಂದ ಒಂದೂ ಹನಿಯನ್ನು ದುಮುಕಿಸಿದೇ ಅದೇ ಭಾವದಿಂದ ನಿಮ್ಮ ಕಣ್ಮಂಚಲ್ಲಿ ಹನಿ ದುಮುಕಿಸುವುದು ಆ ನಿರ್ದೇಶಕನ ಗೆಲವು. ಇಷ್ಟರ ಮಟ್ಟಿಗೆ ನಿಮ್ಮನ್ನು ಮಗುವಾಗಿಸುವ ನಿರ್ದೇಶಕನನ್ನು ಮೀರಿ ಇಡೀ ಸಿನಿಮಾ ಇಲ್ಲಿಂದ ತಿರುವು ಪಡೆದುಕೊಳ್ಳುತ್ತದೆ. ಆಷ್ಟೊಂದು ಸಹಜವಾಗಿ ಅಭಿನಯಿಸಿದ್ದ ಆ ಪುಟ್ಟಹುಡುಗಿ ತನ್ನ ಎಡಗೈಗೆ ಕಟ್ಟಿದ್ದ ಬ್ಯಾಂಡೇಜ್ ಕಿತ್ತೆಸೆದು ನಾನು ಇನ್ನು ನಟಿಸೊಲ್ಲ ಅಂತ ಹೊರನಡೆದುಬಿಡುತ್ತಾಳೆ.

ಯಾರು ಎಷ್ಟು ಹೇಳಿದರೂ ಆ ಹುಡುಗಿ ಒಪ್ಪುವುದಿಲ್ಲ. ಕೆಲವೊಮ್ಮೆ ಮಕ್ಕಳು ಹಟ ಹಿಡಿದರೆ ಏನು ಮಾಡಿದರೂ ಒಪ್ಪಿಕೊಳ್ಳುವುದಿಲ್ಲ. ಇಲ್ಲೂ ಅದೇ ಆಗುತ್ತದೆ. ಅಷ್ಟರಲ್ಲಿ ನೀವು ವಾಸ್ತವಕ್ಕೆ ಬಂದುಬಿಡುತ್ತೀರಿ. ಅರ್ಧಕ್ಕೆ ನಿಂತ ಸಿನಿಮಾ ಬಗ್ಗೆ ನೀವು ಸೇರಿದಂತೆ ಎಲ್ಲರೂ ಯೋಚಿಸುತ್ತಿದ್ದರೆ, ನಿರ್ದೇಶಕ ಮುಂದೆ ಏನಾಗುತ್ತದೆಯೋ ನೋಡೋಣ, ಮತ್ತದೇ ಹುಡುಗಿಯನ್ನು ಹಿಂಭಾಲಿಸಿ ಸೂಟಿಂಗ್ ಮಾಡೋಣವೆಂದು ನಿರ್ಧರಿಸುತ್ತಾನೆ.

ಇಲ್ಲಿಂದ ಮುಂದೆ ನಿಮಗೆ ಕಾಣಸಿಗುವುದು ಸಿನಿಮಾವಲ್ಲದ ಸಿನಿಮಾ. ಇದುವರೆಗೂ ನಿರ್ದೇಶಕರ ಅಣತಿಯಂತೆ ದಾರಿತಪ್ಪಿದ ಹುಡುಗಿಯಂತೆ ನಟಿಸಿದ್ದ ಆ ಪುಟ್ಟ ಹುಡುಗಿ, ಸಿನಿಮದಿಂದ ಅರ್ಧಕ್ಕೆ ಹೊರಬಂದ ಮೇಲೆ ಈಗ ನಿಜಕ್ಕೂ ಮನೆಗೆ ವಾಪಸ್ ಹೋಗಲು ದಾರಿಗೊತ್ತಿರುವುದಿಲ್ಲ. ಆಕೆಯ ಬಳಿ ಆಡ್ರೆಸ್ ಕೂಡ ಇರುವುದಿಲ್ಲ.

ಇಲ್ಲಿಂದ ಮುಂದೆ ನಟನೆಯನ್ನು ಮೀರಿದ ಬದುಕಿನ ಕ್ಷಣಗಳನ್ನು ಹಾಗೆ ಸೆರೆಯಿಡಿಯಲು ಆ ಮಗುವಿಗೆ ಗೊತ್ತಿಲ್ಲದಂತೆ ಕ್ಯಾಮೆರಾ ಹಿಡಿದು ಆಕೆಯನ್ನು ಹಿಂಭಾಲಿಸುತ್ತಾರೆ.. ವಾಸ್ತವಕ್ಕೆ ತೀರ ಹತ್ತಿರವೆನ್ನುವಂತೆ ಸಿನಿಮಾ ತೆಗೆಯುವ ಇರಾನಿನ ನಿರ್ದೇಶಕರು ಇಲ್ಲಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಆಗುವ ಅನಿರೀಕ್ಷಿತ ಘಟನೆಯಿಂದ ಕತೆ ತಮ್ಮ ನಿಯಂತ್ರಣ ತಪ್ಪಿದಾಗಲೂ ಮುಂದೇನಾಗಬಹುದು ನೋಡೇಬಿಡೋಣ ಅಂತ ಪ್ರೇಕ್ಷಕನ ಕುತೂಹಲವನ್ನು ತಾವು ಅನುಭವಿಸುತ್ತಾ ಚಿತ್ರೀಕರಿಸಲು ಪ್ರಾರಂಭಿಸುತ್ತಾರೆ.

ಇಲ್ಲಿಂದ ಮುಂದೇನಾಗುತ್ತದೆಯೆನ್ನುವುದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು. ಹೌದು ನಾವು ನಿಜಬದುಕಿನಲ್ಲಿ ನಟಿಸಲು ಸಾಧ್ಯವಾ? ಅಂತ. ಇದೇ ಪ್ರಶ್ನೆ ನಿರ್ದೇಶಕ ಜಾಫರ್ ಫನಾಯ್‍ಗೂ ಮೂಡಿರಬೇಕು. ಈಗ ನಿಮಗೂ ಮೂಡಿರಬೇಕಲ್ಲವೇ? ಸಿನಿಮಾ ಅಂತ್ಯವಾದ ಮೇಲೆ ಬದುಕಿನಲ್ಲಿ ಖಂಡಿತ ನಟಿಸಲು ಸಾಧ್ಯವಿಲ್ಲ ಅಂತ ನನಗನ್ನಿಸಿತು.

ಸಿನಿಮಾ ನಟನೆಯಲ್ಲಿ ಎಲ್ಲಾ ಭಾವನೆಗಳಲ್ಲೂ ತೀರ್ವತೆಯನ್ನು ಬಯಸುತ್ತಾರೆ ನಿರ್ದೇಶಕರು. ಪ್ರಾರಂಭದಲ್ಲಿ ಉತ್ತಮವಾಗಿ ಎಲ್ಲಾ ಭಾವನೆಗಳನ್ನು ಅದ್ಬುತವಾಗಿ ಕಣ್ಣಲ್ಲೇ ಬಿಂಬಿಸುವ ಆ ಮಗುವಿಗೆ ಇದ್ದಕ್ಕಿದ್ದಂತೆ ಅವೆಲ್ಲ ಇಷ್ಟವಿಲ್ಲದಂತಾಗಿಬಿಡುವುದು, ಅದು ಕೃತಕತೆಯೆನಿಸಿ ಅದರಿಂದ ಹೊರಬಂದುಬಿಡುವುದು ನೋಡಿದಾಗ, ಒಮ್ಮೆ ಆ ಮಗುವಿನ ನಿರ್ಧಾರ ನಮ್ಮದೇ ಅನ್ನಿಸಿಬಿಡುತ್ತದೆ.

ನಾವು ಕೂಡ ನಮ್ಮ ನಿತ್ಯ ಜೀವನದಲ್ಲಿ ನಮ್ಮ ಸಹಜ ಭಾವನೆಗಳನ್ನು ನಮಗರಿವಿಲ್ಲದಂತೆ ಮರೆತು ಯಾವುದೋ ಒತ್ತಾಸೆಗೆ, ಒತ್ತಡಕ್ಕೆ, ಮರ್ಜಿಗೆ, ಓಲೈಕೆಗೆ, ಮಣಿದು ನಟಿಸಲಾರಂಭಿಸಿಬಿಡುತ್ತೇವಲ್ವಾ? ಇಲ್ಲಿ ಮಗು ನಟನೆಯನ್ನು ದಿಕ್ಕರಿಸಿ ಹೊರಬಂದುಬಿಡುವುದು ನಮನ್ನೆಲ್ಲಾ ಆ ಕ್ಷಣದಲ್ಲಿ ಎಚ್ಚರಿಸಿದಂತಾಗಿಬಿಡುತ್ತದೆ. ಇದು ನಿರ್ದೇಶಕನ ಉದ್ದೇಶವಾ? ಕುತೂಹಲವಾ? ಅವನಲ್ಲೂ ಮಗುವಿನಂತ ಆಸೆ ಮೊಳಕೆಯೊಡೆಯಿತಾ? ಇವೆಲ್ಲಾ ಸಿನಿಮಾ ನೋಡಿ ಮುಗಿದಾಗ ನನ್ನೊಳಗೆ ಮೂಡಿದ ಪ್ರಶ್ನೆಗಳು ಅಭಿಪ್ರಾಯಗಳು. ಇಷ್ಟೊಂದು ವಿಚಾರಗಳನ್ನೊಳಗೊಂಡ ಸಿನಿಮಾದಲ್ಲಿ ತಪ್ಪುಗಳಿಲ್ಲವೇ ಅಂತ ನಿಮಗನ್ನಿಸಬಹುದು. ಖಂಡಿತ ಅನೇಕ ತಪ್ಪುಗಳಿವೆ.

ಮೊದಲರ್ಧ ವಿಭಿನ್ನ ಚಿತ್ರಕತೆಯಿಂದ ಬಿಗಿಯಾಗಿ ಸಾಗುವ ಸಿನಿಮಾ, ನಂತರ ಚಿತ್ರಕತೆಯಿಲ್ಲದೇ ಸಾಗುವುದರಿಂದ ಮೊದಲರ್ಧದಲ್ಲಿರುವ ಭಾವನೆಗಳ ತಾಕಲಾಟ ದ್ವಿತಿಯಾರ್ಧದಲ್ಲಿ ಇರುವುದಿಲ್ಲ. ಏಕೆಂದರೆ ಕ್ಯಾಮೆರಾ ಹುಡುಗಿಯನ್ನು ಹಿಂಬಾಲಿಸುವಾಗ ರಸ್ತೆಯ ನಡುವಿನ ಟ್ರಾಪಿಕ್ಕಿನಿಂದಾಗಿ ಅವಳು ಅನೇಕ ಸಲ ಮರೆಯಾಗಿಬಿಡುತ್ತಾಳೆ, ಅನೇಕ ಬಾರಿ ಅವಳನ್ನು ಕ್ಯಾಮೆರಾವೇ ಹುಡುಕಲಾರಂಭಿಸುತ್ತದೆ. ಆಗ ಅರೆರೆ ಇದೇನಿದು ಸಿನಿಮಾನಾ ಅನ್ನಿಸುವುದು ಅವಾಗಲೇ. ಸನ್ನಿವೇಶಗಳೇ ಆ ರೀತಿ ಇರುವಾಗ ಅವೆಲ್ಲಾ ತಪ್ಪುಗಳಲ್ಲವೆಂದು ನನ್ನ ಭಾವನೆ.

ಪ್ರತಿ ಸಿನಿಮಾದಲ್ಲೂ ಒಂದು ಕ್ಲೈಮ್ಯಾಕ್ಸ್ ಇರುತ್ತದೆಯೆನ್ನುವುದು ಎಲ್ಲರ ಭಾವನೆ. ಇದೊಂಥರ ಕ್ಲೈಮ್ಯಾಕ್ಸ್ ಇಲ್ಲದೇ ಅಂತ್ಯವಾಗುವ ಸಿನಿಮಾವೆಂದು ಹೇಳಬಹುದು. ಇವೆಲ್ಲಾ ಈ ‘ದಿ ಮಿರರ್’ ಸಿನಿಮಾ ನೋಡಿದಾಗ ಕಾಡಿದ ಅನುಭವಗಳು. ನಿಮಗೂ ಹೀಗೆ ಕಾಡುವಂತ ಅನುಭವ ಆಗಬೇಕಿದ್ದರೆ ಆ ಸಿನಿಮಾವನ್ನು ನೋಡಿ. ೧೯೯೭ರಲ್ಲಿ ತಯಾರಾದ ಸಿನಿಮಾ ಇಸ್ತಾನ್‍ಬುಲ್ ಫಿಲ್ಮೊತ್ಸವದಲ್ಲಿ ‘ಗೋಲ್ಡನ್ ಟುಲಿಫ್, ಲೊಕಾರ್ನೋ ಫಿಲ್ಮ್ ಫ಼ೆಸ್ಟಿವಲ್‍ನಲ್ಲಿ ‘ಗೋಲ್ಡನ್ ಲೆಪ್ಪರ್ಡ್’, ಸಿಂಗಪೂರ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ‘ಸಿಲ್ವರ್ ಸ್ಕ್ರೀನ್ ಆವರ್ಡ್’, ಬಹುಮಾನಗಳನ್ನು ಗೆದ್ದಿದೆ.

ಇಂಥದೊಂದು ಪ್ರಯತ್ನವನ್ನು ನಮ್ಮ ಭಾರತದ ಯಾವುದೇ ಭಾಷೆಯಲ್ಲಿ ಮಾಡಲು ನಮ್ಮ ನಿರ್ದೇಶಕರು ಸಿದ್ಧರಾಗುತ್ತಾರ? ಸಿನಿಮಾಗೆ ಹಣ ಹಾಕಿ ಹಣವನ್ನೇ ವಾಪಸ್ಸು ಪಡೆಯುವ ಉದ್ದೇಶವನ್ನು ಹೊಂದಿರುವ ನಮ್ಮ ನಿರ್ದೇಶಕರು, ನಿರ್ಮಾಪಕರುಗಳೆಲ್ಲಾ ತಮ್ಮ ಆತ್ಮ ತೃಪ್ತಿಗಾದರೂ ಒಮ್ಮೆ ಇಂಥದೊಂದು ಸಿನಿಮಾವನ್ನು ನೋಡಬೇಕು.

‍ಲೇಖಕರು Avadhi

June 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: