ಎಚ್ ಆರ್ ರಮೇಶ ಹೊಸ ಕಥೆ- ಸುಶ್ಮಿತಳ ಸೋಶಿಯಾಲಜಿ ದಿನಗಳು

ಎಚ್ ಆರ್ ರಮೇಶ

ಮಳೆ ಝೀ ಎಂದು ಸುರಿಯುತ್ತಿತ್ತು. ಮುಂಗಾರು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಸಮ್ಮರ್ ಸೆಮಿಸ್ಟರ್ ಬ್ರೇಕ್ ಮುಗಿದು ಕಾಲೇಜು ಪುನಃ ಆರಂಭವಾಗಿ ಹದಿನೈದು ದಿನಗಳು ಕಳೆದಿದ್ದವು. ಅವೊತ್ತು ಬೆಳಗ್ಗೆ ಹನ್ನೊಂದು ಗಂಟೆಯಾಗಿತ್ತು. ದಟ್ಟವಾದ ಮೋಡಗಳು ಕವಿದಿದ್ದುದರಿಂದ ಗಡಿಯಾರವನ್ನು ನೋಡಿ ಮಾತ್ರ ಸರಿಯಾದ ಸಮಯವನ್ನು ತಿಳಿಯಬಹುದಿತ್ತು.

ಮಳೆ ಸುರಿಯುತ್ತಿದ್ದುದರಿಂದ ಮತ್ತು ಕಾಲೇಜು ಪುನರಾರಂಭಗೊಂಡು ಕೆಲವೇ ದಿನಗಳು ಆಗಿದ್ದುದರಿಂದ ಕ್ಯಾಂಪಸ್ಸಿನಲ್ಲಿ ಹುಡುಗ ಹುಡುಗಿಯರು ಅಷ್ಟೊಂದು ಪ್ರಮಾಣದಲ್ಲಿ ಕಾಣುತ್ತಿರಲಿಲ್ಲ. ಅದರೂ ಅಲ್ಲೊಬ್ಬರು ಇಲ್ಲೊಬ್ಬರು ಛತ್ರಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದುದು ಬರುತ್ತಿದ್ದುದನ್ನು ಕಾಣಬಹುದಿತ್ತು.

ಅಂತಹ ಮಳೆಯಲ್ಲೂ ನಾಕೈದು ಹುಡುಗರು ಇಬ್ಬರು ಹುಡುಗಿಯರು ಬ್ಯಾಸ್ಕೆಟ್ ಬಾಲನ್ನು ಆಡುತ್ತಿದ್ದರು. ಇದನ್ನು ಕಂಡು ಮಳೆಯೇ ಅವಮಾನಿತಗೊಂಡಂತಿತ್ತು. ತಂಪು ಹವಾ ಕೆನ್ನೆಗಳನ್ನು ಸವರಿ ಕಚಗುಳಿಯನ್ನು ಇಡುತ್ತಿತ್ತು. ಕ್ಯಾಂಪಸ್ಸಿನಲ್ಲಿನ ಸಿಮೆಂಟ್ ಬೆಂಚುಗಳು ಮತ್ತು ಕಲ್ಲು ಬೆಂಚುಗಳು ಖಾಲಿಯಾಗಿದ್ದವು. ಆದರೂ ಆ ಮಳೆಯಲ್ಲೂ ಅವುಗಳ ಮೇಲೆ ಬೇಸಿಗೆಯ ವಸಂತದ ನೆನಪುಗಳು ಇನ್ನೂ ಮೆತ್ತಿಕೊಂಡಿದ್ದವು. ಸುಶ್ಮಿತ ಕ್ಯಾಂಪಸ್ಸಿನಲ್ಲಿನ ಮೆಡಿಸಿನಲ್ ಗಾರ್ಡನ್ ಮುಂದಿನ ಸಿಮೆಂಟಿನ ಛತ್ರಿಯಾಕಾರದ ಹೊದಿಕೆಯಿರುವ ಕಲ್ಲುಬೆಂಚಿನ ಮೇಲೆ ಕುಳಿತಿದ್ದಳು. ಟುಲಿಪ್ ಹೂಗಳಿರುವ ನಸುಗೆಂಪು ಬಣ್ಣದ ಚೂಡಿದಾರವನ್ನು ಧರಿಸಿ ಅದರ ಮೇಲೆ ನೇರಳೆ ಬಣ್ಣದ ಜರ್ಕಿನ್ ಅನ್ನು ಹಾಕಿಕೊಂಡಿದ್ದಳು.

ಮಳೆ ಮಾತ್ರ ತನ್ನ ಪಾಡಿಗೆ ತಾನು ಲಯ ಬದ್ಧವಾಗಿ ಸುರಿಯುತ್ತಿತ್ತು. ಒಮ್ಮೊಮ್ಮೆ ಮಂಜು ಆವರಿಸಿಕೊಂಡು ಅದರ ಲಯ ಬೇರೆ ಪಲುಕನ್ನು ಗತಿಯನ್ನು ಪಡೆಯುತ್ತಿತ್ತು. ಒಂದು ಪುಟ್ಟ ಪಕ್ಷಿ ಮಳೆಯಲ್ಲಿ ಪಲ್ಟಿಹೊಡೆಯುತ್ತ ಅಂತರಿಕ್ಷದಲ್ಲಿ ಸ್ವಲ್ಪಹೊತ್ತು ಹಾರಾಡಿ ಹತ್ತಿರದ ಮರದ ಒಳಗಡೆ ಸೇರಿಕೊಂಡಿತು. ಪುಸ್ತಕ ಮತ್ತು ತನ್ನಿತರೆ ಖಾಸಗೀ ವಸ್ತುಗಳನ್ನು ಇಟ್ಟುಕೊಂಡಿದ್ದ ಪುಟ್ಟ ಬ್ಯಾಗನ್ನು ಜರ್ಕಿನ್ ಒಳಗಡೆ ಇಟ್ಟುಕೊಂಡು ಎರಡೂ ಕೈಗಳನ್ನು ಕಟ್ಟಿಕೊಂಡು ಬಿಗಿಯಾಗಿ, ಮಳೆಯನ್ನು ಮತ್ತು ಆಗೊಮ್ಮೆ ಈಗೊಮ್ಮೆ ಹಾದುಹೋಗುವ ಮಂಜನ್ನು ಮತ್ತು ಜೊತೆಗೆ ತಂಪು ಹವಾವನ್ನು ಅನುಭವಿಸುತ್ತಿದ್ದುದನ್ನು ಅವಳ ಎಡಗೆನ್ನೆಯ ಮೇಲೆ ಮೂಡುವ ಗುಳಿಯಲ್ಲಿ ಕಾಣಬಹುದಿತ್ತು.

ದೂರದಿಂದ ನೋಡಿದರೆ ಪುರಾಣದ ಅಪ್ಸರೆ ಮಾಡ್ರನ್ ವೇಷದಲ್ಲಿ ಇದ್ದಂತೆ ಕಾಣುತ್ತಿತ್ತು ಅವಳು ಕುಳಿತಿರುವ ದೃಶ್ಯ. ಅವಳ ಹಿಂಬಿದಿಯಿಂದ ಹೂವಿನ ಪರಿಮಳ ಅವಳ ನಾಸಿಕಕ್ಕೆ ತಟ್ಟಿ ಮಾಯವಾಗುತ್ತಿತ್ತು. ಮಳೆಯ ಸದ್ದಿನಲ್ಲಿ ಅದನ್ನು ಅಷ್ಟಾಗಿ ಗಮನಿಸಿರಲಿಲ್ಲ. ಆದರೆ ಅದು ಒಮ್ಮೊಮ್ಮೆ ತೀವ್ರಗತಿಯಲ್ಲಿ ಬಂದು  ಅವಳ ವಜ್ರದ ಬಿಂದುವಿನ ನತ್ತಿನಿಂದ ಹೊಳೆಯುತ್ತಿರುವ ಸಂಪಿಗೆ ಹೂವಿನಂತಹ ಮೂಗನ್ನು ಅಪ್ಪಳಿಸಿ ಹೋಗುತ್ತಿತ್ತು. ಅವಳು ಒದ್ದೆಯಾಗಿಲ್ಲದಿದ್ದರೂ ಅವಳ ಹಣೆಯ ಮುಂದಲೆಯಲ್ಲಿ ಬಾಚಣಿಗೆಯಿಂದ ತಪ್ಪಿಸಿಕೊಂಡು ಬಿಡಿಹೂವುಗಳಂತೆ ಇದ್ದ ಕೂದಲ ಎಳೆಗಳ ಮೇಲೆ ಮಳೆಯ ಪುಟ್ಟ ಪುಟ್ಟ ಬಿಂದುಗಳು ಅವಳ ಮುಖಕ್ಕೆ ಇನ್ನಷ್ಟು ಮೆರುಗನ್ನು ಕೊಡುತ್ತಿದ್ದವು.

ಪರಿಮಳಕ್ಕೆ ಜಾಗೃತಗೊಂಡು ಸಡನ್ನಾಗಿ ಹಿಂದಕ್ಕೆ ತಿರುಗಿದಳು. ಅಲ್ಲಿ ಯಾವ ಹೂವೂ ಕಾಣಲಿಲ್ಲ. ಬದಲಿಗೆ ಸಿಮೆಂಟಿನ ಛತ್ರಿಯ ಕೋಲುಮಾತ್ರ ಇತ್ತು. ಮತ್ತೆ ಸುತ್ತ ಮುತ್ತ ನೋಡಿದಳು. ಇವಳ ಮೂಗನ್ನು ಆಕರ್ಷಿಸಿದ್ದಂತಹ ಯಾವ ಪರಿಮಳದ ಹೂವು ಅಲ್ಲಿ ಅವಳಿಗೆ ಕಂಡುಬರಲಿಲ್ಲ. ಮತ್ತೆ ಬಲಗಿವಿಯ ಹಿಂಭಾಗಕ್ಕೆ ಕೈ ಹಾಕಿದಳು. ಹೈರ್ ಪಿನ್ನು. ಅಲ್ಲಿ ಮೃದುವಾದ ಸ್ಪರ್ಶದ ಅನುಭವವಾಯಿತು. ಮತ್ತೊಮ್ಮೆ ತನ್ನ ಐದೂ ಬೆರಳುಗಳನ್ನು ಅದರ ಮೇಲೆ ಆಡಿಸಿದಳು. ಹೂಪಕಳೆಗಳ ನಯ. ಓ ಮೈಡಿಯರ್ ಸಂಪಿಗೆ ಎಂದುಕೊಂಡಳು.

ಪುನಃ ಎರಡೂ ಕೈಗಳನ್ನು ಉಜ್ಜಿಕೊಂಡು ಕೆನ್ನೆಗಳಿಗೆ ಒತ್ತಿಕೊಂಡಳು. ಈಗ ಅವಳಿಗೆ ಸಂಪಿಗೆ ಅವಳನ್ನು ಆವರಿಸಿಕೊಂಡಿರುವದು ಅರಿವಾಯಿತು. ಮತ್ತೊಮ್ಮೆ ಅಂಗೈಗಳನ್ನು ಉಜ್ಜಿಕೊಂಡು ಅದರ ಬಿಸಿಯನ್ನು ಕೆನ್ನೆಗಳಿಗೆ ಸ್ಪರ್ಶಿಸಿಕೊಂಡಳು. ಮತೊಮ್ಮೆ ತನ್ನ ಬಲಗೈಯಿಯ ಮಧ್ಯದ ಬೆರಳನ್ನು ಹೂವಿನ ಬಳಿ ಕೊಂಡೊಯ್ದಳು. ಅದನ್ನು ಪುನಃ ತನ್ನ ನಾಸಿಕದ ತುದಿಗೆ ಸ್ಪರ್ಶಿಸಿಕೊಂಡಳು. ಬೆರಳ ತುದಿಯಲ್ಲಿರುವುದನ್ನು ಆಕಾಶದಲ್ಲಿ ಹುಡುಕುತ್ತಿದ್ದೇನಲ್ಲ ಎಂದು ಕೊಂಡಳು. ಸ್ಟೋನ್ ಹಿಲ್ಲಿನ ಬಳಿಯ ಅವಳ ಮನೆಯ ಮುಂದೆ ಸಂಪಿಗೆ ಮರ.

ಬೆಳಗ್ಗೆ ಛತ್ರಿಯನ್ನು ಹಿಡಿದುಕೊಂಡು ಕೈಗೆ ಸಿಗದಷ್ಟು ಎತ್ತರದಲ್ಲಿರುವ ಹೂವನ್ನು ಜೀ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಜಂಪ್ ಮಾಡುತ್ತಿದ್ದಳು ಅದನ್ನು ಕೀಳಲು. ಆಗ ಅಲ್ಲಿಗೆ ರೈನ್ ಕೋಟು ಮತ್ತು ಜರ್ಕಿನ್ ಹಾಕಿಕೊಂಡು, ಹೆಲ್ಮೆಟ್ ಧರಿಸಿಕೊಂಡು ರಾಜಾಸೀಟಿನ ಕಡೆಯಿಂದ ಒಂದು ವ್ಯಕ್ತಿ ಬಂದು ಅವಳ ಮನೆಯ ಮುಂದೆ ಬಂದನು. ಅವನು ತುಸು ದೂರ ಹೋಗಿದ್ದವನು ಅವಳು ಹೂವನ್ನು ಕೀಳಲು ಛತ್ರಿಯನ್ನು ಹಿಡಿದುಕೊಂಡು ಜಂಪು ಮಾಡುತ್ತಿದ್ದುದನ್ನು ಕಂಡು ವಾಪಸ್ಸು ಬಂದಿದ್ದನು.

ಅವಳು ಹೂವನ್ನು ಕೀಳುವುದರಲ್ಲಿ ಮಗ್ನಳಾಗಿದ್ದುದರಿಂದ ಮತ್ತು ಜೀ ಗುಡುವ ಮಳೆಯ ಸದ್ದಿನಲ್ಲಿ ಅವನು ಅಲ್ಲಿಗೆ ಬಂದದ್ದನ್ನು ಗಮನಿಸಲಿಲ್ಲ. ಅವನು ಮೆಲ್ಲನೆ ಬೈಕನ್ನು ನಿಲ್ಲಿಸಿ, ಅವಳ ಹತ್ತಿರ ಬಂದು ತನ್ನ ರೈನ್ ಕೋಟಿನ ಹಿಂಭಾಗಕ್ಕೆ ಸಿಕ್ಕಿಸಿಕೊಂಡಿದ್ದ ಉದ್ದನೆಯ ಪಾಪಿ ಛತ್ರಿಯನ್ನು ತೆಗೆದುಕೊಂಡು, ಅದರ ಚೂಪಾದ ತುದಿಯ ಕಡೆ ಹಿಡಿದುಕೊಂಡು ಸುಲಭದಲ್ಲಿ ಛತ್ರಿಯ ಹಿಡಿಯ ಕೊಕ್ಕೆಯಲ್ಲಿ ಆ ಹೂವನ್ನು ಕಿತ್ತನು. ಅಲ್ಲಿಗೆ ಬಂದ ಆತನನ್ನು ಅವಳು ಆ ಅವತಾರದಲ್ಲಿ ಗುರುತಿಸಲು ಆಗಲಿಲ್ಲ. ಕ್ಷಣ ಬೆಚ್ಚಿಬಿದ್ದಳು. ಅವನು ಅವಳು ಗಾಬರಿಗೊಂಡದ್ದನ್ನು ಗಮನಿಸಿ ಅದನ್ನು ಕಂಡು ಖುಷಿಪಡುತ್ತಿದ್ದನು. ನಂತರ ಅವಳಿಗೆ ಸಿನಿಮೀಯ ಶೈಲಿಯಲ್ಲಿ ಕೊಡಲು ಮುಂದಾದ. ಯಾರು ನೀವು?

ಅವನು ತನ್ನ ಹೆಲ್ಲೆಟಿನ ಮುಖವನ್ನು ಮುಚ್ಚಿರುವ ಗ್ಲಾಸನ್ನು ತುಸು ಮೇಲಕ್ಕೆ ಎಳೆದುಕೊಂಡ.

ಥೂ, ಗೂಬೆ, ಸುಕೃತ್ ನೀನ್ಯಾವಾಗ ಬಂದೋ?!

ಅದೇ ನೀನು ಛತ್ರಿ ಹಿಡಕೊಂಡು ಜಂಪು ಮಾಡುತ್ತಿದ್ದಲ್ಲ ಆಗ.

ಒಂದು ಕ್ಷಣ ಗಾಬರಿಯಾತು.

ಏನಿಷ್ಟು ಬೇಗ ಕಾಲೇಜಿಗೆ?

ಮನೇಲಿ ಕೂತು ಯಾಕೋ ಬೇಜಾರಾಯಿತು. ಹಂಗೆ ಒಂದು ಧಮ್ಮೆಳೆದು ಫ್ರೆಂಡ್ಸ್ ಹತ್ತರಿ ಹರಟೆ ಹೊಡೆಯೋಣ ಅಂತ ಬಂದೆ.

ಮಳೆ ಸುರಿಯುತ್ತಿತ್ತು. ಬೀಸುವ ಗಾಳಿಗೆ ಅಂತರಿಕ್ಷದಲ್ಲಿ ಅಲೆಯಾಗಿ ಒಮ್ಮೊಮ್ಮೆ ತೇಲುತ್ತಿತ್ತು. ಸುಶ್ಮಿತ ತನ್ನ ಎಡಗೈಯಲ್ಲಿ ನೀಲಿಕೊಡೆ ಮತ್ತು ತನ್ನ ಬಲಗೈಯಲ್ಲಿ ಸುಕೃತ್ ಕೊಟ್ಟ ಸಂಪಿಗೆ ಹೂವನ್ನು ಹಿಡಿದುಕೊಂಡಿದ್ದಳು.

ಬರ್ತೀಯಾ?

ಇಷ್ಟು ಬೇಗ?

ಬೇಕಾದರೆ ಮುಂದೆ ಅಂಗಡಿ ಇದೆಯಲ್ಲ ಅಲ್ಲಿ ಕಾಯುತ್ತಿರುತ್ತೇನೆ, ರೆಡಿಯಾದ ಮೇಲೆ ಒಂದು ಮೆಸೇಜಾಕು ಬರ್ತೀನಿ. ಹಾರ್ಟ್ ಚಿಲ್ಲಾಗಿದೆ. ಐ ಫೀಲ್ ಸ್ಮೋಕಿಂಗ್. ಈ ಮಳೇಲಿ ಧಮ್ಮ್ ಎಳೆಯುತ್ತಿದ್ದರೆ ಸ್ವರ್ಗ ಸುಖ. ಹೊರಗಿನ ಕೋಲ್ಡ್ ಗೆ ಒಳಗೆ ಬೆಂಕಿ ಹಚ್ಚಿಕೋಬೇಕಮ್ಮ. ಒಳಗೆ ಬಾ. ಫಸ್ಟ್ ಒಂದು ಸಿಗರೇಟ್ ಹೊಡಿಬೇಕು. ಮನೆ ಒಳಗೆ ಇದ್ದು ಇದ್ದು ಐ ಫೀಲ್ ಕೇಜ್ಡ್, ಐ ವಾಂಟ್ ಫ್ಲೈ ಇನ್ ದ ಸ್ಪೇಸ್ ಔಟ್ ಸೈಡ್.

ಸರಿ ಸರಿ ಒಂದು ಸ್ವಲ್ಪಹೊತ್ತು ಬಿಟ್ಟರೆ ಇಲ್ಲೇ ಒಂದು ಕವಿತೆ ಬರೆದು ಬಿಡುತ್ತೀಯ. ಬೈ ದ ವೇ, ಅಪ್ಪ ಡ್ರಾಪ್ ಮಾಡ್ತೀನಿ ಅಂತಿದ್ದರು. ಸರಿ.

ಮಧ್ಯಾಹ್ನ ಒಂದು ಸ್ವಲ್ಪ ಜಾಸ್ತಿ ಹಾಕ್ಕೊಂಬ ಊಟವನ್ನು ಲಂಚ್ ಬಾಕ್ಸಲ್ಲಿ. ಅದೇ ಪಲಾವ್, ಅದೇ ಬಜ್ಜಿ. ಬೋರು.

ಅವನಿಗೆ ಬಾಯ್ ಹೇಳಿ ಸುಶ್ಮಿತ ಒಳಗೆ ಬಂದಳು. ರಾತ್ರಿ ಕದಡಿದ್ದ ಮನೆಯ ಶಾಂತ ವಾತಾವರಣ ಇನ್ನೂ ತಹಬದಿಗೆ ಬಂದಿರಲಿಲ್ಲ. ಒಳಗಿನ ಮೌನ ಯಾವಾಗ ಬೇಕಾದರೂ ಸ್ಫೋಟಗೊಳ್ಳುವ ಹಾಗೆ ಇತ್ತು. ಮನಸ್ಸಿನಲ್ಲಿ ಸದ್ಯ ಅವನು ಒಳಗೆ ಬರದೇ ಇದ್ದದ್ದೇ ಒಳೇದು ಆಯಿತು ಎಂದುಕೊಂಡಳು.

ಒಳಗಡೆ ಹೋಗುವಾಗ ಇವೊತ್ತು ಫಸ್ಟ್ ಅವರ್ ಯಾವ ಕ್ಲಾಸು, ಟೊಂಟಿಯೆತ್ ಸೆಂಚುರಿ ಬ್ರಿಟಿಷ್ ಲಿಟರೇóಚರ್, ಶಶಿ ಸರ್ ಕ್ಲಾಸ್ ಮಿಸ್ಸ ಮಾಡಿಕೊಳ್ಳುವ ಛಾನ್ಸೇ ಇಲ್ಲ. ಸೆಕೆಂಡ್ ಅವರ್ ಸೋಷಿಯಲಜಿ. . ಮಾಡ್ರನ್ ಸೊಸೈಟಿ. ವತ್ಸಲ ಮೇಡಮ್ ಕ್ಲಾಸು.  ಅವಳ ಡೀಪ್ ನೆಕ್‍ಬ್ಲೌಸು, ಸೀರೆ, ಲಿಪ್‍ಸ್ಟಿಕ್, ಮೇಕಪ್, ಸೆಂಟ್ ಹೀಲ್ಡ್ ಸ್ಟಾಂಡಲ್, ಬರೀ ಇವುನ್ನೇ ನೋಡುವುದಕ್ಕೆ ಹೋಗಬೇಕು, ಬೇಡಪ್ಪ, ಇವೊತ್ತು ಸೋಷಿಯಲಜಿ ಕ್ಲಾಸ್ ಬಂಕ್ ಮಾಡಬೇಕು.

ಈ ಸೋಷಿಯಲಜಿ ಲಕ್ಚರರ್ಸ್ ಔಟ್ ಡೇಟೆಡ್. ಯಾವುದೋ ಕಾಲದ ಕಿತ್ತೋಗಿರುವ ಥಿಯರಿಗಳನ್ನು ಹೇಳ್ತಾರೆ. ಮನೆಯೊಳಗಿನ ವಾಸ್ತವತೆ ಬೇರೇನೆ ಇರುತ್ತೆ. ಈ ಗಂಡ ಹೆಂಡತಿ ಎನ್ನುವುದನ್ನು ಯಾವನು ಮಾಡಿದನ್ಪಪ, ಥೂ, ಹೇಸಿಗೆ. ಅಪ್ಪ ಅಮ್ಮ ಹಂದಿನಾಯಿಗಳ ಥರ ಕಿತ್ತಾಡುತ್ತಾರೆ. ಲವ್ ಮ್ಯಾರೇಜ್ ಬೇರೆ ಇವರ ಮುಖಕ್ಕೆ. ಈ ಥರ ಕಿತ್ತಾಡಿಕೊಂಡು ಜೀವನ ಮಾಡುವುದಕ್ಕೆ ಯಾಕಾದರು ಮದುವೆಯಾದರೋ. ಥೂ ಇವರು ಮದುವೆ ಯಾಗದಿದ್ದರೆ ನಾನು ಹುಟ್ಟುತ್ತನೇ ಇರುತ್ತಿರಲಿಲ್ಲ. ಮತ್ತಿವರದು ಇಂಟರ್ ಕ್ಯಾಸ್ಟ್! ಮತ್ತೆ ಇಬ್ಬರು ತಮ್ಮ ತಮ್ಮ ಜಾತಿಯಲ್ಲೇ ಬಿದ್ದು ಒದ್ದಾಡುತ್ತಿದ್ದಾರೆ. ಮಗಳ ಬಗ್ಗೆ ಒಂದಿಷ್ಟಾದರೂ ಗ್ಯಾನ ಇಲ್ಲ. ಇವರಿಗೆಲ್ಲ ಯಾಕಪ್ಪ, ಮಕ್ಕಳು, ಕುಟುಂಬ ಅಂಥ.

ವತ್ಸಲ ಮೇಡಮ್ಮನ್ನು ಒಂದಸಲ ನಮ್ಮನೆಗೆ ಕರೆದುಕೊಂಡು ಬಂದು ತೋರಿಸಬೇಕು ಇವರಿಬ್ಬರು ಹೆಂಗೆ ಜಗಳ ಆಡ್ತಾರೆ ಅಂಥ ಅಂದುಕೊಂಡಳು. ಮತ್ತೆ ಮುಂದುವರೆದು ಅವಳ ಮನಸ್ಸಿನಲ್ಲಿ ಅವಳ ಮತ್ತು ಅವಳ ಅಪ್ಪ, ಅಮ್ಮರ ಮಾತುಗಳು ಎಷ್ಟೇ ಅದುಮಿಟ್ಟುಕೊಂಡರು ಧುಮ್ಮಿಕ್ಕ ತೊಡಗಿದವು. ನಿನ್ನನ್ನು ಮದುವೆಯಾಗಿ ನನ್ನ ಕುಟುಂಬದ ಪ್ರಿಸ್ಟೇಜ್ ಹಾಳು ಮಾಡಿದೆ ಅಂತ ಅಮ್ಮ.

ಅಪ್ಪ, ಅಮ್ಮ, ಎಲ್ಲ ಸಂಬಂಧಿಕರು ಬೇಡ ಅಂದರೂ ಎಲ್ಲರ ಮಾತನ್ನು ಮೀರಿ ನಿನ್ನನ್ನು ಮದುವೆಯಾಗಿ ಎಲ್ಲನೂ ತೊರೆದ ಹಾಗೆ ಆಯಿತು ಎಂದು  ಅಪ್ಪ ನಮ್ಮ ಜಾತೀಲಿ ಯಾರನ್ನಾದರು ಕಟ್ಟಿಕೊಂಡಿದ್ದರೆ ಇಷ್ಟೊತ್ತಿಗೆ ಫಾರಿನ್ ನಲ್ಲಿ ಸೆಟಲ್ ಆಗಬಹುದಿತ್ತು ಅಂಥ ಅಮ್ಮ. ನಮ್ಮದೇ ಸಂಬಂಧದಲ್ಲಿ ಒಂದು ಆವರೇಜ್ ಎಜುಕೇಟೆಡ್ ಹುಡುಗಿನ ಮದುವೆಯಾಗಿದ್ದಿದ್ದರೆ ಅಪ್ಪ ಅಪ್ಪ ಆದರೂ ನೆಮ್ಮದಿಯಿಂದ ಇರುತ್ತಿದ್ದರು. ತಾತ ಇದೇ ಕೊರಗಿನಲ್ಲಿ ಜೀವ ಬಿಟ್ಟರು.

ದೊಡ್ಡವರ ಸಹವಾಸ ಬೇಡ ಅಂತ ಸಾರಿ ಸಾರಿ ಹೇಳಿದರು. ಅವರ ಮಾತನ್ನು ಕೇಳದೆ ಕೆಟ್ಟೆ. ಆಗಬೇಕಿತ್ತು. ಭ್ರಮೆನೆ ನಿಜ ಅಂದುಕೊಂಡು ಕೆಟ್ಟಿದ್ದು ನಾನು, ನೀನಲ್ಲ. ಅಂಥ ಅಮ್ಮ. ನೀನಲ್ಲ ನಾನು ಅಂಥ ಅಪ್ಪ. ಶಟ್ ಅಪ್ ಎಂದಿದ್ದಳು ಸುಶ್ಮಿತ ಈ ಮಾತುಗಳನ್ನು ಕೇಳಿ. ನಿಮ್ಮೆದುರಿಗೆ ನಿಮ್ಮ ಮಗಳು ಇದ್ದಾಳೆ ಅಂಥ ಮಿನಿಮಮ್ ಕಾಮನ್ ಸೆನ್ಸ್ ಇಲ್ಲ. ನೀವು ಯಾವ ಸೀಮೆ ಪೇರೆಂಟ್ಸ್. ಡೈವೋರ್ಸ್ ತಗೊಂಡು ನಿಮ್ಮ ಪಾಡಿಗೆ ನೀವು ಇರ್ರಿ. ನಾನು ಎಲ್ಲಾದರೂ ಇಚಿಡಿಪೆಂಡೆಂಟ್ ಆಗಿ ಇರ್ತಿನಿ. ನಿಮ್ಮ ಸಹವಾಸ ಬೇಡ. ಐ ನೆವರ್ ಫೀಲ್ ಯು ಆರ್ ಮೈ ಪೇರೆಂಟ್ಸ್. ಥೂ ನಾಚಿಕೆಯಾಗಬೇಕು. ದಿನಾ ಕಿತ್ತಾಡುತ್ತೀರಲ್ಲ ನಾಚಿಕೆ ಯಾಗುವುದಿಲ್ಲವೆ ನಿಮಗೆ?

ಒಳಗಡೆ ಹೋದಳು. ಸಂಪಿಗೆ ಕಂಪು ಅವಳನ್ನು ಸುತ್ತುವರೆದಿತ್ತು. ಅವಳ ಅಮ್ಮ ಪೋನಿನಲ್ಲಿ ಮಾತಾಡುತ್ತಿದ್ದರು. ಅಪ್ಪ ತನ್ನ ಬಟೆಗಳ ಇಸ್ತ್ರಿ ಮಾಡುತ್ತಿದ್ದರು. ಥೂ ಅದನ್ನು ಯಾವನಾದರೂ ಚಟ್ಟಿ ಅಂಥಾನಾ? ಉಪ್ಪಿಲ್ಲ, ಖಾರ ಇಲ್ಲ. ಎಂದು ಬೈಯುತ್ತಿದ್ದರು. ತಿಂಡಿ ತಿನ್ನು ಕಾಲೇಜಿಗೆ ಬಿಟ್ಟು ಹಂಗೆ ಡ್ಯೂಟಿಗೆ ಹೋಗ್ತೀನಿ. ಇನ್ನಮೇಲೆ ಹೊಸ ಕೋರ್ಟಲ್ಲಿ ಕೆಲಸ. ಇನ್ನೊಂದು ವಾರದಲ್ಲಿ ಎಲ್ಲ ಶಿಫ್ಟ್ ಆಗುತ್ತೆ. ಕೆಲವರು ಇವೊತ್ತಿನಿಂದನೆ ಕೆಲಸ ಸ್ಟಾರ್ಟ್ ಮಾಡಬೇಕಂತೆ. ನಿಮ್ಮ ಕಾಲೇಜಿನ ಹಿಂದೆನೆ ಕೋರ್ಟ್ ವಿದ್ಯಾನಗರದಲ್ಲಿ ಎಂದರು ಸುಶ್ಮಿತಳ ಅಪ್ಪ. ಇವೊತ್ತು ಬೇಡ. ನಾನೊಬ್ಬಳೆ ಹೋಗ್ತಿನಿ. ಬೇಡ ಇವೊತ್ತು ಡ್ರಾಪ್ ಮಾಡ್ತೀನಿ.

ಬೆಳಬೆಳಗ್ಗೆನೆ ಜಗಳದ ಮೂಡಿನಲ್ಲಿ ಇರದಿದ್ದುದರಿಂದ ಸುಶ್ಮಿತ ಆಯ್ತು ಬಿಡು ಅಂದಳು. ತಿಂಡಿ ಏನು? ಕಡುಬಾ? ಯಾವಳು ತಿಂತಾಳೆ ಅದು ಚಟ್ನಿ ಜೊತೆಗೆ, ಚಿಕನ್ ಇದ್ದಿದ್ದರೆ ಚೆನ್ನಾಗಿರ್ತಿತ್ತು. ಅದಕ್ಕೆ ನಾನು ತಿನ್ನಲಿಲ್ಲ. ಅಲ್ಲೆ ಎಲ್ಲಾದರು ತಿಂತೀನಿ ಅಂದರು. ಸುಶ್ಮಿತ ಅವಳ ಅಮ್ಮನ ಮುಖವನ್ನು ನೋಡುತ್ತ ಎರಡು ಕಡುಬುಗಳನ್ನು ತಟ್ಟೆಯಲ್ಲಿ ಹಾಕಿಕೊಂಡು ತಿಂದಳು. ಡ್ಯಾಡ್ ಡ್ರಾಪ್ಸ್ ಮಿ, ಯು ಗೋ, ಐ ವಿಲ್ ಮೀಟ್ ಯು ಅಟ್ ಕಾಲೇಜ್ ಎಂದು ಮೆಸೇಜನ್ನು ಕಳುಹಿಸಿದಳು.

ತಟ್ಟೆಯನ್ನು ಸಿಂಕಿನಲ್ಲಿ ಇಟ್ಟು ತನ್ನ ಕೋಣೆಗೆ ಹೋಗಿ, ಟುಲಿಪ್ ಹೂವುಗಳ ಚಿತ್ರಿವಿರುವ ನಸುಗೆಂಪು ಬಣ್ಣದ ಚೂಡಿದಾರವನ್ನು ಹಾಕಿ ಅದರ ಮೇಲೆ ನೇರಳೆಬಣ್ಣದ ಜರ್ಕಿನ್ ಅನ್ನು ಹಾಕಿಕೊಂಡಳು. ಮಮ್ಮಿ ಬಾಯ್ ಎಂದಳು. ಲಂಚ್ ಬಾಕ್ಸ್ ಎಂದು ಅವಳ ಅಮ್ಮ ಕೇಳಿದ್ದಕ್ಕೆ ಬೇಡ ಕ್ಯಾಂಟಿನ್‍ನಲ್ಲೇ ತಿಂತೀನಿ ಎಂದಳು. ಅವಳ ಪೋರ್ಟಿಕೋದ ಪಕ್ಕದ ಗೋಡೆಗೆ ನೇತುಹಾಕಿದ್ದ ರೈನ್ ಕೋಟನ್ನು ಹಾಕಿಕೊಂಡು ಬೈಕನ್ನು ಸ್ಟಾರ್ಟ್ ಮಾಡುತ್ತಿದ್ದರು.

ಸುಶ್ಮಿತ ಹೊರಗಡೆ ಬಂದು ಅವಳೂ ಸಹ ರೈನ್ ಕೋಟನ್ನು ಹಾಕಿಕೊಂಡು ಬೈಕಿನ ಬಳಿ ಬಂದಳು. ಅಮ್ಮನಿಗೆ ಹೇಳಿದಾ ಅಂಥ ಕೇಳುವವಳಿದ್ದಳು. ಯಾಕೋ ಕೇಳಲಿಲ್ಲ. ಅವಳ ಅಮ್ಮ ಒಳಗಡೆಯಿಂದ ಬಂದು ನಾನು ಇವೊತ್ತು ಬರೋದು ಲೇಟಾಗುತ್ತೆ, ಡಿ.ಸಿ.ಮೇಡಮ್ಮ ಜೊತೆಗೆ ಮೀಟಿಂಗ್ ಇದೆ, ಎಂದಳು. ಆಯ್ತು ಎಂದಳು ಸುಶ್ಮಿತ. ಓಕೆ ಬಾಯ್ ಎಂದಳು. ಅವಳ ಅಪ್ಪ ಬೈಕನ್ನು ಚಾಲುಮಾಡಿಕೊಂಡು ಹೊರಟರು. ಸುಕೃತ್ ಅವನು ಹೇಳಿದ್ದ ಅಂಗಡಿಯ ಬಳಿಯೇ ನಿಂತಿದ್ದ. ಕೈಯಲ್ಲಿ ಸಿಗರೇಟು ಇತ್ತು.

ಹಿಂದಕ್ಕೆ ತಿರುಗಿ ಕೈ ಸಂಜ್ಞೆಯನ್ನು ಮಾಡಿದಳು ಕಾಲೀಜಿನ ಹತ್ತಿರ ಸಿಗುತ್ತೇನೆ ಎಂದು. ಅವಳ ಮನಸ್ಸಿನಲ್ಲಿ ಕಾಲೇಜಿಗೆ ಬರುವ ಮುಂಚಿನ ಈ ಸಂಗತಿಗಳು ಮಳೆಯ ಜೊತೆಯಲ್ಲಿ ಜೀಂ ಗುಡುತ್ತಿದ್ದವು. ಕೈಯನ್ನು ಬಿಚ್ಚಿಕೊಂಡು ತನ್ನ ಬಲಗೈಯನ್ನು ತೊಡೆಯ ಮೇಲೆ ಇಟ್ಟುಕೊಂಡು ಅಂಗೈಯನ್ನು ಅಗಲಿಸಿ ಅದರ ಮೇಲೆ ಕೆನ್ನೆಯನ್ನು ಇಟ್ಟು ಕೊಂಡಳು. ಅವಳ ಮನಸ್ಸಿನಲ್ಲಿ ನೆನಪುಗಳು, ಯೋಚನೆಗಳು ಮಳೆಯಂತೆ ಸುರಿತ್ತಲೆ ಇದ್ದವು. ಕಾರಿಡಾರಿನಲ್ಲಿ ಅಸ್ಪಷ್ಟವಾಗಿ ಹುಡುಗ ಹುಡುಗಿಯರ ಅಲ್ಲೊಂದು ಇಲ್ಲೊಂದು ಸದ್ದು ಕೇಳಿಬರುತ್ತಿತ್ತು. ಸುಶ್ ಮ್ಯಾಮ್ ಕ್ಲಾಸಲ್ಲಿದ್ದಾರೆ ಬಾ ಎಂದು ಯಾರೋ ಕೂಗಿದ್ದು ಅವಳಿಗೆ ಕೇಳಿಸಲಿಲ್ಲ. ಹತ್ತಿರದಲ್ಲೇ ಸುಕೃತ್ ಬಂದು ಸುಶ್ ಎಂದ. ತಟ್ಟನೆ ತಿರುಗಿದಳು. ಸಾರಿ ಎಂದಳು.

ಗೊತ್ತಾಯಿತು ಬಿಡು. ಐ ಅಂಡರ್ ಸ್ಟ್ಯಾಂಡ್ ಎಂದ. ಯಾಕೋ ಒಂಥರ ಇದೀಯ?

ಇರ್ತವಲ್ಲ ಫ್ಯಾಮಿಲಿ ಪ್ರಾಬ್ಲಮ್.

ಕಾಲೇಜಿಗೆ ಯಾಕೆ ಹೊತ್ತುಕೊಂಡು ಬರುತ್ತೀಯಾ ಫ್ಯಾಮಿಲಿನಾ?

ಅವಳ ಮುಂದಿದ್ದ ರಸ್ತೆಯಲ್ಲಿ ಕೆಲವು ಹುಡುಗಿಯರು ಛತ್ರಿಗಳನ್ನು ಹಿಡಿದುಕೊಂಡು ಹೋಗುತ್ತ ಇವಳ ಕಡೆ ತಿರುಗಿ ಸುಶ್ ಏನ್ ಬಂಕಾ ಎಂದರು?

ಹೌದು. ನೀವು?

ನಾವೂ. ಕ್ಯಾಂಟೀನಿನಲ್ಲಿ ಕೂತಿದ್ದವಾ, ಪ್ರಿನ್ಸಿ ಅಲ್ಲಿಗೂ ಬಂದು ಬೆರೆಸಿದರು. ಅದಕ್ಕೆ ಕೆಳಗೆ ಹೋಗ್ತಾ ಇದಿವಿ. ಹಾಯ್ ಸುಕೃತ್ ಎಂದರು ಸುಕೃತ್‍ಗೆ. ಹಾಯ್ ಎಂದು, ಪ್ರಿನ್ಸಿಗೆ ಹೇಳ್ತಿನಿ ತಾಳಿ, ಎಂದು ರೇಗಿಸಿದ. ಹೇಳು ಹೂ ಕೇರ್ಸ್ ಎಂದರು ನಗುತ್ತ ಮುಂದೆ ಹೋದರು. ಸುಕೃತ್ ಇವೊತ್ತು ಬರ್ತಡೇ ಕಣ್ರೆ ಎಂದಳು ಸುಶ್ಮಿತ. ಮುಂದೆ ಹೋಗುತ್ತಿದ್ದ ಆ ಹುಡುಗಿಯರು ನಿಂತು, ಟ್ರೀಟ್ ಎಲ್ಲಿ ಹಿಲ್ ವ್ಯೂ?

ಅಲ್ಲ, ಮಹೀಂದ್ರ, ಎಂದ.

ಲೇ, ನಮ್ಮ ಕ್ಯಾಂಟೀನಿನಲ್ಲಿ ಪಲಾವ್ ಕೊಡಿಸಿಲಿ ಸಾಕು ಈ ಮಹಾಶಯ ಎಂದು ಸುಶ್ಮಿತ ಹೇಳಿದಳು. ಆ ಹುಡುಗಿಯರು ಮತ್ತೆ ಮಾತನ್ನು ಮುಂದುವರೆಸದೆ ತಮ್ಮ ಪಾದಗಳನ್ನು ಬೆಳೆಸಿದರು. ಮಳೆ ಒಂದೇ ಸಮನೆ ಸುರಿಯುತ್ತಿತ್ತು. ಗಾಳಿನು ಬಂದಿದ್ದರಿಂದ ಅವರು ಹಿಡಿದಿದ್ದ ಛತ್ರಗಳು ಮಗುಚಿ ಉಲ್ಟಾ ಆದವು. ಅವುಗಳನ್ನು ಮತ್ತೆ ಸರಿಮಾಡಿಕೊಳ್ಳುವಷ್ಟರಲ್ಲಿ ಅರ್ಧ ಒದ್ದೆಯಾದರು ಅವರು.

ಸುಕೃ ಎಂದಳು.

ಏನು?

ನನಗೆ ಒಂದು ನೈಂಟಿ ಹೊಡಿಬೇಕು ಅನ್ನಿಸುತ್ತಿದೆ.

ಅದಕ್ಕೇನು, ಈಗಲೇ, ಬ್ಯಾಗಲ್ಲಿದೆ ಕೊಡಲಾ, ರಾತ್ರಿದು ಮಿಕ್ಕಿತ್ತು. ಜೊತೆಗೆ ಚಿಪ್ಸ್ ಇದೆ ಎಂದ. ಮತ್ತೆ ಮುಂದುವರೆದು, ಸಿಗರೇಟು ಇದೆ ಎಂದ.

ಥೂ ಕಾಲೇಜಿನ ನೂರಡಿ ಅಂತರದಲ್ಲಿ ಅವನ್ನೆಲ್ಲ ಮಾಡಬಾರದು ಅಂತ ಗೊತ್ತಿಲ್ಲ, ಬ್ಯಾಗಲ್ಲಿ ಇಟ್ಟುಕೊಂಡಿದಿಯ ಅವುನ್ನ ಎಂದಳು.

ಸುಮ್ಮನೆ ಹೇಳಿದ್ದು, ಬೇಕಾ ಹೇಳು ಈಗಲೆ ಹೋಗಿ ತರ್ತಿನಿ ಎಂದ.

ಬೇಡ, ಆದರೆ ಕುಡಿಬೇಕು ಅನ್ನಿಸುತ್ತಿದೆ ಎಂದಳು.

ನಮ್ಮ ದೇಶ ಉದ್ಧರ ಅಂದಹಾಗೆನೆ ಹುಡುಗಿಯರೆಲ್ಲ ಕುಡಿಯುವುದನ್ನು ಕಲಿತರೆ ಎಂದ.

ವೆಸ್ಟ್ರನ್ ಕಂಟ್ರೀಸ್‍ಲಿ ಇದೆಲ್ಲ ಮಾಮೂಲು. ಅವರ ಫಿಲಮ್‍ಗಳಲ್ಲಿ ಹೀರೋಯಿನ್ ಗಳು ಏನು ಬೋಲ್ಡ್, ಸಿಗರೇಟ್ ಸೇದೋದು, ಡ್ರಿಂಕ್ಸ್ ಮಾಡೋದು, ಅಲ್ಲಿಯ ಹುಡುಗಿಯರದು ಸ್ವಚ್ಛಂದವಾದ ಬದುಕು. ನಮ್ಮದು ಇದೆ. ಅದು ಮಾಡಬೇಡ, ಇದು ಮಾಡಬೇಡ ಬರೀ ಬೇಡನೇ ಆತು.

ನೀನು ಮಾಡು ಯಾರು ಬೇಡ ಅಂತಾರೆ?

ಟೈಮನ್ನುನೋಡಿಕೊಂಡ. ಟೈಮಯ್ತು ಲ್ಯಾಬಿದೆ ಮತ್ತೆ ಸಿಗ್ತೀನಿ. ಅದೆಂತದೋ ಪ್ಲಾಂಟ್ ಪ್ಯಾಥೋಲಜಿ ಅಂತೆ. ಎಂದು ತನ್ನ ಬಲಗೈಯಿ ಮುಷ್ಟಿಯನ್ನು ಹಿಡಿದುಕೊಂಡ. ಅವಳು ಸಹ ಮುಷ್ಟಿಯನ್ನು ಮಾಡಿದಳು. ಇಬ್ಬರು ಎರಡು ಮುಷ್ಟಿಗಳನ್ನು ತಾಗಿಸಿದರು. ಸುಕೃತ್ ಕಾಲೇಜಿನ ಒಳಗಡೆ ಓಡಿದ. ಮಳೆ ಮಂದ್ರಸ್ಥಾಯಿಯಲ್ಲಿ ಹೊಡೆಯುತ್ತಿತ್ತು.

ಮಧ್ಯಾಹ್ನ ಕ್ಯಾಂಟಿನಿನಲ್ಲಿ ಇಬ್ಬರು ಪಲಾವ್ ತಿಂದರು.

ಯಾಕೆ ಲಂಚ್ ಬಾಕ್ಸ್ ತರಲಿಲ್ಲ ಎಂದ.

ಯಾಕೋ ಬೇಜಾರ. ಹೊರಗಡೆ ತಿನ್ನಬೇಕು ಅನ್ನಿಸಿತು ಅದಕ್ಕೆ ಎಂದಳು. ಮಧ್ಯಾಹ್ನದ ಎರಡು ತರಗತಿಗಳನ್ನು ಕೇಳಿ ಮನೆಗೆ ಹೊರಟಳು. ಸುಕೃತ್ ಅವರಿಬ್ಬರು ಪಲಾವ್ ತಿನ್ನುವಾಗಲೇ ಹೇಳಿದ್ದ ಪ್ರಾಜೆಕ್ಟ್ ಟಾಪಿಕ್ ಡಿಸ್ಟ್ರಿಬ್ಯೂಷನ್ ಇದೆ ಬರುವುದಕ್ಕೆ ಆಗುವುದಿಲ್ಲ ಎಂದು. ಅವಳಿಗೆ ಮಧ್ಯಾಹ್ನ ಎರಡೇ ತರಗತಿಗಳು ಇದ್ದಿದ್ದರಿಂದ ಸಾಯಂಕಲದ ತನಕ ಕಾಯುವ ಅಗತ್ಯವಿರಲಿಲ್ಲ. ಒಬ್ಬಳೆ ತನ್ನ ನೀಲಿಕೊಡೆಯನ್ನು ಹಿಡಿದುಕೊಂಡು ಹೊರಟಳು. ಸಾಯಿ ಗ್ರೌಂಡಿನ ಪಕ್ಕದ  ಸಿಮೆಂಟ್ ರಸ್ತೆಯ ಮೇಲೆ ಹೋಗುತ್ತಿದ್ದಳು. ಅಲ್ಲಿಗೆ ಐದಾರು ಜನರ ಹುಡುಗರ ಗುಂಪೊಂದು ಬಂದು ಸುಶ್ಮಿತ ಅವನ ಜೊತೆ ಸೇರಬೇಡ ಎಂದರು ಬೆದರಿಸುವ ಧಾಟಿಯಲ್ಲಿ.

ಯಾರ ಜೊತೆ?

ಸುಕೃತ್ ಜೊತೆ. ಅವನದು ಯಾವ ಕ್ಯಾಸ್ಟ್ ಅಂತ ಗೊತ್ತಿದೆಯಾ?

ಫ್ರೆಂಡ್‍ಶಿಪ್‍ಗು ಕ್ಯಾಸ್ಟ್ಗು ಎಲ್ಲಿಯ ಸಂಬಂಧ. ಅಷ್ಟಕ್ಕೂ ನಾನು ಇಂತಿಂಥವರ ಜೊತೆನೆ ಇರಬೇಕು ಅಂತ ಹೇಳುವುದಕ್ಕೆ ನೀವ್ಯಾವ ದೊಣ್ಣೆನಾಯಕರು, ನನ್ನ ಕ್ಯಾಸ್ಟ್ ಗೊತ್ತಾ ನಿಮಗೆ, ನನಗೆ ಕ್ಯಾಸ್ಟೇ ಇಲ್ಲ, ಅಪ್ಪಂದೇ ಬೇರೆ, ಅಮ್ಮುಂದೇ ಬೇರೆ ಎಂದು, ಮುಂದುವರೆದು, ನಂದು ಅವನದು ಫಸ್ಟ್ ಈಯರಿಂದನೂ ಫ್ರೆಂಡ್‍ಶಿಪ್. ಮೂರು ವರ್ಷಗಳು ಜೊತೆಗೆ ಅಡ್ಡಾಡುತ್ತೀದ್ದೀವಿ. ಅಷ್ಟಕ್ಕೂ ನೀವ್ಯಾರು ಕೇಳೋಕೆ, ನಿಮ್ಮ ಬಳಿ ನಮ್ಮ ಬಗ್ಗೆ ನಾನು ಯಾಕೆ ಹೇಳಿಕೊಳ್ಳಲಿ. ಹೋಗಿ ಆಚೆ ಎಂದಳು.

ನಿಮ್ಮ ಅಮ್ಮ ನಮ್ಮ ಕಮ್ಯುನಿಟಿ ಪ್ರೆಸಿಡೆಂಟ್. ಅವರಿಗೆ ಮುಜುಗರ ತರಬೇಡ ಎಂದರು.

ನೀವ್ಯಾರೋ ಹೇಳುವುದಕ್ಕೆ. ಅಷ್ಟಕ್ಕೂ ನನ್ನ ಅಮ್ಮನಿಗೆ ಮುಜುಗರ ಆದರೆ ನಿಮಗೆ ಯಾಕೆ ಮುಜುಗರ ಆಗಬೇಕು ಎಂದಳು ಸಿಟ್ಟಿನಿಂದ. ಮಳೆ ಸುರಿಯುತ್ತಿತ್ತು. ಆ ಹುಡುಗರು ಮಳೆಯಲ್ಲಿ ಒದ್ದೆಯಾಗುತ್ತಲೇ ಇದ್ದರು.

ನಿನಗೆ ಒಳ್ಳೆಯದಕ್ಕೆ ಹೇಳೋದು ಮುಂದಿನ ಪರಿಣಾಮ ಹೇಗಿರುತ್ತೋ ಗೊತ್ತಿಲ್ಲ, ಇದರ ಮೇಲೆ ನಿನ್ನಿಷ್ಟ. ಅವನ ಅಮ್ಮ ನಮ್ಮ ಕಮ್ಯುನಿಟಿಯ ಛತ್ರದಲ್ಲಿ ಮುಸುರೆ ತೊಳೆಯುತ್ತಾಳೆ ಗೊತ್ತಾ, ಅಂತವನ ಜೊತೆ ನೀನು ಅಡ್ಡಾಡುವುದು ಸರಿಬರಲ್ಲ ಎಂದರು.

ಸಂಜೆ ಫೋನಿನಲ್ಲಿ ಇದನ್ನೆಲ್ಲ ಸುಕೃತ್‍ಗೆ ಹೇಳಬೇಕೆಂದುಕೊಂಡಳು. ಆದರೆ ಇದನ್ನೆಲ್ಲ ಹೇಳಿ ಅವನ ಮೂಡನ್ನ ಅಪ್‍ಸೆಟ್ ಮಾಡುವುದು ಬೇಡ ಎಂದುಕೊಂಡು ಸುಮ್ಮನಾದಳು.

ಮರುದಿನ ಕಾಲೇಜಿಗೆ ಹೋದಾಗ ಇಡೀ ಕಾಲೇಜಿನಲ್ಲಿ ಸುಕೃತ್‍ಗೆ ರಾತ್ರಿ ವೆಸ್ಟ್‍ಎಂಡ್ ಹತ್ತಿರ ಹೆಲ್ಮೆಟ್‍ಗಳಿಂದ ಹೊಡೆದು, ಮೆದುಳಿಗೆ ತೀವ್ರವಾದ ಪೆಟ್ಟುಬಿದ್ದು ಆಸ್ಪತ್ರೆಗೆ ಸೇರಿಸಿರುವ ಸುದ್ದಿ ಹರಡಿತ್ತು. ಇವಳಿಗೆ ತಕ್ಷಣಕ್ಕೆ ನಿನ್ನೆ ಇವಳ ಹತ್ತಿರ ಬಂದಿದ್ದ ಹುಡುಗರ ಗುಂಪು ನೆನಪಾಗತೊಡಗಿತು. ತಕ್ಷಣಕ್ಕೆ ಆಸ್ಪತ್ರೆಗೆ ಹೊರಟಳು. ಆಸ್ಪತ್ರೆಯಲ್ಲಿ ಸುಕೃತ್ ಕಡೆಯವರು ಇವಳನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು. ಅದನ್ನು ಲೆಕ್ಕಿಸದೆ ರಿಸಿಪ್ಷನಿಸ್ಟ್‍ಳನ್ನು ಸುಕೃತ್ ಬಗ್ಗೆ ವಿಚಾರಿಸಿದಳು. ಅದಕ್ಕೆ ರಿಸೆಪ್ಷನಿಸ್ಟ್ ಮೆದುಳಿಗೆ ತುಂಬಾ ಇಂಜುರಿಯಾಗಿರುವುದರಿಂದ ಕಾನ್ಷಿಯಸ್ ಇನ್ನೂ ಬಂದಿಲ್ಲ, ಕೋಮದಲ್ಲಿದ್ದಾರೆ ಪೇಷೆಂಟ್ ಎಂದು ಹೇಳಿದಳು.

ಮರುದಿನ ಬೆಳಗ್ಗೆ ನನ್ನ ಮಗನ ಪ್ರಾಣ ಹೋತಲ್ಲೆ, ಎನ್ನುವ ಆಕ್ರಂಧನ, ರೋಧನ, ಕಿರುಚಾಟ ಕೇಳಿಬಂತು ಅವಳಿಗೆ. ತಕ್ಷಣಕ್ಕೆ ಹೊರಗಡೆ ಹೋದಳು. ಅಲ್ಲಿ ಯಾರೂ ಇರಲಿಲ್ಲ. ಸುತ್ತೆಲ್ಲ ನೋಡಿದರೂ ಯಾವ ಮನುಷ್ಯನ ಸುಳಿವೂ ಇರಲಿಲ್ಲ. ಮಳೆ ನಿರಂತರವಾಗಿ ಸುರಿಯುತ್ತಿತ್ತು. ಜೊತೆಗೆ ಗಾಳಿಯೂ. ಒಳಬಂದಳು. ತನ್ನ ಕೋಣೆಗೆ ಹೋಗುವಲ್ಲಿ ಇದ್ದ ಟೀಪಾಯಿಯ ಮೇಲೆ ಸಿಗರೇಟಿನ ಪ್ಯಾಕು, ಮತ್ತು ಆಮೆಯಾಕಾರದ ಆಶ್ ಟ್ರೇ, ಮತ್ತು ಲೈಟರ್ ಇದ್ದವು. ಆಶ್ ಟ್ರೇ ಮುಕ್ಕಾಲು ಭಾಗ ತುಂಬಿಹೋಗಿತ್ತು. ಸಿಗರೇಟ್ ಪ್ಯಾಕನ್ನು ಮತ್ತು ಲೈಟರನ್ನು ಎತ್ತಿಕೊಂಡು ಟೇರೆಸಿನ ಕಡೆ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದಳು. ಬಯಲಿಗೆ ಮುಖಮಾಡಿ ನಿಂತುಕೊಂಡಳು.

ಇಡೀ ಶಹರವನ್ನು ಸಿಗರೇಟಿನ ಬೂದಿಯಂತಹ ಬಣ್ಣದ ಮಂಜು ಆವರಿಸಿಕೊಂಡಿತ್ತು. ಮಳೆಯ ತುಂತುರು ಹನಿಯೂ ಬೀಳುತ್ತಿತ್ತು. ಗಾಳಿಗೆ ಮಂಜಿನ ಮೋಡಗಳು ಓಡುತ್ತಿದ್ದವು. ಸಿಗರೇಟಿನ ಪ್ಯಾಕನ್ನು ತೆರೆದು, ಒಂದನ್ನು ಎತ್ತಿಕೊಂಡು ತುಟಿಗಳ ನಡುವೆ ಇಟ್ಟುಕೊಂಡು ಅದರ ತುದಿಗೆ ಲೈಟರಿನಿಂದ ಬೆಂಕಿಯನ್ನು ಹೊತ್ತಿಸಿದಳು. ಒಂದು ಧಮ್ಮನ್ನು ಜೋರಾಗಿ ಒಳಗಡೆ ಎಳೆದುಕೊಂಡಳು. ಸಿಗರೇಟಿನ ತುದಿ ಒಲೆಯ ಕೆಂಡದ ರೀತಿ ನಿಗಿನಿಗಿ ಉರಿಯತೊಡಗಿತು. ಅದು ಮುಗಿದು ಮತ್ತೊಂದಕ್ಕೆ ಬೆಂಕಿಯನ್ನು ತಾಗಿಸಿದಳು. ಅದು ಉರಿಯುತ್ತ ಸುಟ್ಟು ಬೂದಿಯಾಗ ತೊಡಗಿತು.

ಆಗ ಅವಳಿಗೆ ಕಳೆದ ವರ್ಷದ ಬೇಸಿಗೆಯಲ್ಲಿ ಕೂಟುಹೊಳೆಗೆ ಹೋಗಿದ್ದಾಗ ಕಾಲುಜಾರಿ ಬಿದ್ದಿದ್ದ ಅವಳನ್ನು ಸುಕೃತ್ ಎತ್ತಿಕೊಂಡು ಬಂದ ನೆನಪು ಧಗ್ಗೆಂದು ಉರಿಯತೊಡಗಿತು. ತೀವ್ರವಾಗಿ ಉಸಿರನ್ನು ಎಳೆದುಕೊಂಡಳು. ಸಿಗರೇಟಿನ ತುದಿಯಲ್ಲಿನ ಬೆಂಕಿ ಕೆಂಪಾಗಿ ಪ್ರಕಾಶಿಸತೊಡಗಿತು. ಅದು ಮುಗಿದು ಮತ್ತೊಂದನ್ನು ಎತ್ತಿಕೊಂಡಳು. ಸಿಗರೇಟು ಸುಟ್ಟು ಬೂದಿಯಾಗುತ್ತಿತ್ತು. ಎದುರಿನ ಶಹರ ಮಳೆಯಲ್ಲಿ, ಮಂಜಿನಲ್ಲಿ ಮುಚ್ಚಿಹೋಗಿದ್ದರೂ ಬೆಂಕಿಯಲ್ಲಿ ಸುಟ್ಟುಹೋಗುತ್ತಿರುವಂತೆ ಕಾಣುತ್ತಿತ್ತು ಅವಳಿಗೆ.

ಮತ್ತಷ್ಟು ಜೋರಾಗಿ ಉಸಿರನ್ನು ಎಳೆದುಕೊಂಡು ಹೊಗೆಯನ್ನು ಬಿಟ್ಟಳು. ಸಿಗರೇಟಿನ ತುದಿಯಲ್ಲಿನ ಬೆಂಕಿ ನಿಗಿನಿಗಿ ಕಂಡದ ಥರ ಉರಿಯುತ್ತಿತ್ತು. ಎದುರಿನ ಶಹರ ಬೆಂಕಿಯ ಜ್ವಾಲೆಯಲ್ಲಿ ಆವೃತ್ತಗೊಂಡು ದಹನವಾಗುತ್ತಿತ್ತು. ಬೆಂಕಿಯ ಜ್ವಾಲೆಗಳು ಆಕಾಶದ ಎತ್ತರಕ್ಕೆ ಚಾಚಿಕೊಂಡಿದ್ದವು. ಮಳೆಯಲ್ಲೂ ಬೆಂಕಿಯ ಜ್ವಾಲೆ ಹಬ್ಬುತ್ತಿತ್ತು. ಕಣ್ಣಂಚಿನ ಎದುರಲ್ಲೇ ಇದ್ದ ಸಂಪಿಗೆ ಮರದಲ್ಲಿ  ಹೂವು ಆಗಷ್ಟೇ ಅರಳಿಕೊಂಡು ಹೊಳೆಯುತ್ತಿತ್ತು. ಅದರ ಪಕಳೆಗಳ ಮೇಲೆ ಮಳೆಯ ಹನಿಗಳೂ ಸಹ.

‍ಲೇಖಕರು Avadhi

June 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: