ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಕುಮಾರ ಮಾವಲಿ ಕವಿತೆ – ನಾನು ಸತ್ತ ದಿನ…

ಶಿವಕುಮಾರ ಮಾವಲಿ

ನಾನು ಸತ್ತ ದಿನ
ಸ್ನೇಹಿತರನ್ನು ಕೇಳಬೇಡಿ
ಅವರು ಸುಳ್ಳು ಹೇಳುತ್ತಾರೆ

ನಾನು ಸತ್ತ ದಿನ
ಸಹೋದ್ಯೋಗಿಗಳನ್ನು ಕೇಳಬೇಡಿ
ಅವರು ಅನಗತ್ಯ ಹೊಗಳುತ್ತಾರೆ

ನಾನು ಸತ್ತ ದಿನ
ವೈರಿಗಳನ್ನು ಕೇಳಬೇಡಿ
ನನ್ನ ಅಸ್ತಿತ್ವವನ್ನೇ ಅವರು ಪ್ರಶ್ನಿಸುತ್ತಾರೆ

ನಾನು ಸತ್ತ ದಿನ
ನೆರೆಹೊರೆಯವರನ್ನು ಕೇಳಬೇಡಿ
ಕೋಳಿ ಜಗಳಗಳ ಬಗ್ಗೆ ಅವರು ಹೇಳುವುದಿಲ್ಲ

ನಾನು ಸತ್ತ ದಿನ
ಕುಟುಂಬದವರನ್ನು ಮಾತಾಡಿಸಬೇಡಿ
ಅವರನ್ನು ಅಳಲು ಬಿಟ್ಟುಬಿಡಿ

ನಾನು ಸತ್ತ ದಿನ
ಸಾಲಗಾರರನ್ನು ವಿಚಾರಿಸಬೇಡಿ
ಒಂದಕ್ಕೆ ನಾಲ್ಕು ಸೇರಿಸಿ ಹೇಳುತ್ತಾರೆ.

ನಾನು ಸತ್ತ ದಿನ
ದೇವರಿಗೆ ಪ್ರಾರ್ಥನೆ ಸಲ್ಲಿಸಬೇಡಿ
ಅದು ನನಗೆ ಕೇಳಿಸುವುದಿಲ್ಲ

ನಾನು ಸತ್ತ ದಿನ
ನಾನು ನಕ್ಷತ್ರವಾಗುತ್ತೇನೆ ಎಂದು
ಮುಗ್ದ ಮನಸ್ಸುಗಳಿ ಸುಳ್ಳು ಹೇಳಬೇಡಿ

ನಾನು ಸತ್ತ ದಿನ
ಮತ್ತೆ ಹುಟ್ಟಿ ಬಾ ಎಂದು ಫಲಕ ಹಾಕಬೇಡಿ
ಮರು ಜನ್ಮದಲ್ಲಿ ನನಗೆ ನಂಬಿಕೆಯಿಲ್ಲ

ನಾನು ಸತ್ತ ದಿನ
ಇಷ್ಟೇ ತಿಳಿಯಿರಿ :
ಇನ್ನು ಮುಂದೆ ನಾ ನಿಮ್ಮೊಡನೆ ಇರುವುದಿಲ್ಲ.
ಕೆಲವು ದಿನ ನನ್ನ ನೆನಪುಗಳು ನಿಮ್ಮೊಡನೆ ಇರಬಹುಷ್ಟೆ.‌

‍ಲೇಖಕರು Admin

21 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading