ಶಿವಕುಮಾರ ಮಾವಲಿ ಅವರ ಹೊಸ ಕೃತಿ ‘ಒಂದು ಕಾನೂನಾತ್ಮಕ ಕೊಲೆ’

ಶಿವಕುಮಾರ ಮಾವಲಿ ಅವರ ‘ಒಂದು ಕಾನೂನಾತ್ಮಕ ಕೊಲೆ’ ಈಗ ಓದುಗರಿಗೆ ಲಭ್ಯ

ಮಾವಲಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ

ಈ ಕೃತಿಗೆ ಶಿವಕುಮಾರ ಮಾವಲಿ ಅವರು ಬರೆದ ಮಾತುಗಳು ಇಲ್ಲಿವೆ-

ಕೃತಿಯನ್ನು ಕೊಳ್ಳಲು ಸಂಪರ್ಕಿಸಿ-  – 91641 49495

——

ನನ್ನ ವಿರೋಧಿ ಬದುಕಿರಲೇಬಾರದು ಎಂಬ ಹೊತ್ತಿನಲ್ಲಿ…


ಎಚ್ಚರ ಇಲ್ಲಿ‌ ಸರ್ಕಾರಗಳಿವೆ
ನೀವು ಹುಟ್ಟುವ ಮೊದಲೇ
ಅವು ಅಸ್ತಿತ್ವದಲ್ಲಿರುತ್ತವೆ
ನೀವು ಸತ್ತ ಮೇಲೂ
ಸರ್ಕಾರಗಳು ಸಾಯುವುದೇ ಇಲ್ಲ…

ಕೆಲ ವರ್ಷಗಳ ಹಿಂದೆ ಈ ಸಾಲುಗಳಿರುವ ಒಂದು ಪದ್ಯ ಬರೆದಿದ್ದೆ. ಅನಂತರ ಹಿಂದೆಂದಿಗಿಂತ ರಾಜಕೀಯವು ಜನರ ಮನಮನದಲ್ಲಿ, ಮನೆಮನೆಯಲ್ಲಿ ( ಮೊಬೈಲ್ ಮೊಬೈಲ್ ನಲ್ಲಿ ಎಂದರೂ ನಡೆಯುತ್ತದೆ) ವಿವಿಧ ಸಂವಹನ ಮಾಧ್ಯಮಗಳ ಮೂಲಕ ಹಾಜರಾಗಲು ಶುರುವಾಯಿತು. Man is a political animal ಎಂಬ ಅರಿಸ್ಟಾಟಲ್‌ ನ ಅಭಿಪ್ರಾಯವನ್ನು ಮೀರಿಸುವಂತೆ ಜನ ರಾಜಕೀಯವನ್ನು ಅನಗತ್ಯವಾಗಿ ತಮ್ಮ ಜೀವನದೊಳಗೆ ಬಿಟ್ಟುಕೊಳ್ಳುವುದನ್ನು ಈಗ ಕಾಣುತ್ತಿದ್ದೇವೆ.

ರಾಜಕೀಯವು ಜನರ ಜೀವನದೊಳಗೆ ಪ್ರವೇಶಿಸುವುದು ಸರ್ಕಾರದ ಮೂಲಕ. ಅರಸೊತ್ತಿಗೆಯ ಸಮಯದಲ್ಲಿ ಜನಕ್ಕೆ ರಾಜಕೀಯದಲ್ಲಿ ಕೆಲಸ ಇರಲಿಲ್ಲ. ಆದರೆ ಆಧುನಿಕ‌ ಗಣತಂತ್ರ ಸರ್ಕಾರಗಳು ಕೇವಲ ‘ಪೊಲೀಸ್ ಸ್ಟೇಟ್’ಗಳಾಗಿರದೆ ‘ವೆಲ್ ಫೇರ್ ಸ್ಟೇಟ್'(ಕಲ್ಯಾಣ ರಾಷ್ಟ್ರ) ಗಳೂ ಆಗಿವೆ. ತನ್ನ ಪ್ರಜೆಗಳ ರಕ್ಷಣೆ ಮಾಡುವುದರ ಜೊತೆಗೆ ಅವರ ಸರ್ವತೋಮುಖ ಅಭಿವೃದ್ಧಿಯ ಹೊಣೆಯನ್ನು ತಾವೇ ಹೊತ್ತುಕೊಂಡು ಹಲವಾರು ಯೋಜನೆಗಳನ್ನು , ಕಾನೂನುಗಳನ್ನು ರೂಪಿಸುತ್ತವೆ. ಆದರೆ ಆ ಯೋಜನೆ, ಕಾನೂನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ,ಜಾರಿಗೆ ತರುವಲ್ಲಿ ಸರ್ಕಾರದ ಅತಾರ್ಕಿಕ ನಿಲುವುಗಳು , ರಾಜಕಾರಣಿಗಳ ಸ್ವಾರ್ಥ , ಅಧಿಕಾರಿಶಾಹಿಗಳ ಭ್ರಷ್ಟತೆ ಮುಂತಾದವು ಸದಾ ಮುಳ್ಳುಗಳಾಗಿರುತ್ತವೆ.‌ ಅಭಿವೃದ್ಧಿ ಎಂದರೆ ಏನು ಎಂಬ ವ್ಯಾಖ್ಯಾನವನ್ನು ಅರ್ಥಶಾಸ್ತ್ರೀಯ ನೆಲೆಯಲ್ಲಿ ನೋಡುವುದಕ್ಕೂ ,ಸಮಾಜಶಾಸ್ತ್ರೀಯ ನೆಲೆಯಲ್ಲಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.‌

ಇಲ್ಲಿಯೇ ಜನ ಮತ್ತು ಸರ್ಕಾರದ ನಡುವೆ ವೈರುಧ್ಯವುಂಟಾಗುವುದು.‌ ದೇಶವೊಂದು ‘ನಂಬರ್ ಒನ್’ ಆಗುವುದು ಎಂಬುದರ ಅರ್ಥ ,ಅನರ್ಥಗಳು ಹಾಗೂ ಸರ್ಕಾರದ ನಿರ್ಧಾರಗಳು ಕೆಲವೊಮ್ಮೆ ಹೇಗೆ ನಿರರ್ಥಕವಾಗಿರುತ್ತವೆ ಎಂಬುದಕ್ಕೆ ಈ ನಾಟಕದ ವಸ್ತು ಉದಾಹರಣೆಯಾಗಿದೆ. ಇದೊಂದು ಅಸಂಗತದಂತೆ ಕಾಣುತ್ತಲೇ ನೈಜ ಪರಿಸ್ಥಿತಿ ಮತ್ತು ಪ್ರಶ್ನೆಗಳನ್ನು ನಮ್ಮ ಮುಂದಿಡುವ ಕಥೆ. ಏನೇನೋ ಕಾರಣಗಳಿಗೆ ಹಿಂಸೆಯತ್ತ ಹೆಜ್ಜೆಯಿಡುತ್ತಿರುವ ಸಮಾಜಕ್ಕೆ ‘ಕೊಂದವರುಳಿದರೆ ಕೂಡಲಸಂಗಮದೇವಾ ?’ ಎಂಬ ವಚನದ ಮೂಲಕ ಅಹಿಂಸೆಯ ಪ್ರಾಮುಖ್ಯತೆಯನ್ನು ಸಾರುವ ಪ್ರಯತ್ನ ನಾಟಕದಲ್ಲಿದ್ದು ,ಇದೊಂದು ಸೋಷಿಯೋ -ಪೊಲಿಟಿಕಲ್ ಕಮ್ ಸೈಕಲಾಜಿಕಲ್ ಥ್ರಿಲ್ಲರ್.

ಹಾಗೆ ನೋಡಿದರೆ ಈ ಪಾತ್ರಗಳ್ಯಾವೂ ಸೃಷ್ಟಿಸಿದವುಗಳಲ್ಲ. ನಮ್ಮ ನಿಮ್ಮ ಸುತ್ತ ಇರುವ ಜನರೇ. ಒಂದು ಅವಾಸ್ತವ ಸಂಗತಿಯನ್ನಿಟ್ಟುಕೊಂಡು ನೈಜ ಪಾತ್ರಗಳು ಮಾತಾಡುತ್ತವೆ.‌ ದೇಶವೊಂದರ ಆರ್ಥಿಕ ಅಭವೃದ್ದಿಯನ್ನು ಅಳೆಯುವ ಮಾನದಂಡಗಳು ಸಾಮಜಿಕ ಅಂಶಗಳನ್ನು ಪರಿಗಣಿಸಲು ಸೋತರೆ ಏನಾಗುತ್ತದೆ ? ದೇಶವನ್ನೋ ,ರಾಜ್ಯವನ್ನೋ ನಂಬರ್‌ ಒನ್ ಮಾಡಬೇಕು ಎಂಬ ಹಪಾಹಪಿ ಎಂಥಾ ಅನಾಹುತಗಳಿಗೆ ಕಾರಣವಾಗಬಲ್ಲದು ಎಂಬ ಅಂಶ ಈ ನಾಟಕದಲ್ಲಿದೆ.

ಇಲ್ಲಿನ ಯಾವ ಪಾತ್ರಗಳಿಗೂ ಹೆಸರಿಟ್ಟಿಲ್ಲ.‌ ಅವುಗಳ ಸಂಭಾಷಣೆಯಲ್ಲೇ ಆ ಪಾತ್ರಗಳ ಪರಿಚಯ ಪ್ರೇಕ್ಷಕರಿಗೆ ಮಾಡಿಸುವ ಉದ್ದೇಶ ಇದರ ಹಿಂದಿದೆ. ಈ ನಾಟಕ ನೋಡುವಾಗ ಪ್ರೇಕ್ಷಕರಿಗೆ ಕೆಲವು ನಿಜ ಜೀವನದ ತಮ್ಮ ಸುತ್ತಮುತ್ತಲಿನ ಕೆಲವರಾದರೂ ನೆನಪಾಗಿಯೇ ಆಗುತ್ತಾರೆ. ಹಾಗಾಗಿಯೇ ಯಾವ ಪಾತ್ರಕ್ಕೂ ಹೆಸರು ಬೇಡವೆನಿಸುತ್ತದೆ.

ಕೇವಲ ಸರ್ಕಾರ ಅಥವಾ ರಾಜಕೀಯ ವ್ಯವಸ್ಥೆಯನ್ನು ವಿಡಂಬನೆ ಮಾಡುವುದು ಈ ನಾಟಕದ ಉದ್ದೇಶವಲ್ಲ. ಪ್ರತಿ ಮನುಷ್ಯನೊಳಗಿನ ಅವ್ಯಕ್ತ ಅಸಹನೆ ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಮನುಷ್ಯರು ಕೊಲ್ಲಲು, ಕೊಲ್ಲಿಸಲು ಮತ್ತು ಸಾಯಲು ಸಿದ್ಧರಾಗುವುದನ್ನು ಕಂಡಾಗ ‘ತನಗಾಗದವನು ಅಥವಾ ತನಗಿಂತ ಭಿನ್ನ ಅಭಿಪ್ರಾಯ ಹೊಂದಿರುವವನು ಈ ಭೂಮಿಯ ಮೇಲೆ ಬದುಕುಳಿಯಲೇಬಾರದು’ ಎಂಬಂತೆ ವರ್ತಿಸುತ್ತಿರುವ ಸಮಾಜದಲ್ಲಿ ನಾವು ಬದುಕುತ್ತಿರುವ ಹೊತ್ತಿನಲ್ಲಿ ಸಾರ್ವಜನಿಕರಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಆಹ್ವಾನ ನೀಡುವುದೂ ಇದರ ಉದ್ದೇಶವಾಗಿದೆ.

ಇಲ್ಲಿನ ದೃಶ್ಯವೊಂದರಲ್ಲಿ, ಒಮ್ಮೆ ಮುಖ್ಯಮಂತ್ರಿ ತನ್ನ ಮಂತ್ರಿಗಳನ್ನು ಕೇಳುವ , ‘ ನಿಮ್ಮ ಇದುವರೆಗಿನ ಜೀವನದಲ್ಲಿ ನೀವು ಯಾರನ್ನಾದರೂ ಕೊಲ್ಲಬೇಕು ಎಂದು ಒಮ್ಮೆಯೂ ಯೋಚಿಸಿಲ್ಲವೇ?’ ಎಂಬ ಪ್ರಶ್ನೆ, ಪ್ರತಿಯೊಬ್ಬರಿಗೂ ಕೇಳುವ ಪ್ರಶ್ನೆಯೇ ಆಗಿದ್ದು, ನಮ್ಮೆಲ್ಲರ ಸುಪ್ತ ಮನಸ್ಸಿನ ಕನ್ನಡಿಯಂತೆ ಭಾಸವಾಗುತ್ತದೆ. ತಮ್ಮೆಲ್ಲ ಸಮಸ್ಯೆಗಳಿಗೆ ಸರ್ಕಾರವನ್ನು ದೂರುವ ವರ್ಗವೊಂದಿದ್ದರೆ, ಸರ್ಕಾರಕ್ಕೂ ನಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಬದುಕುವ ಮತ್ತೊಂದು ವರ್ಗವೂ ನಮ್ಮ ನಡುವಿದೆ. ಇವೆಲ್ಲದರ ನಡುವೆ ‘ಮಾಧ್ಯಮ’ಗಳೆಂಬ ಕಾರ್ಪೊರೇಟ್ ಪ್ರಭಾವಶಾಲಿಗಳು ಜನಾಭಿಪ್ರಾಯ ‘ರೂಪಿಸುವಲ್ಲಿ’ ನಿರತರಾಗಿವೆ. ಆಳುವ ಸರ್ಕಾರದ ಮೇಲಿನ ಪ್ರೇಮವನ್ನೇ ‘ದೇಶಪ್ರೇಮ’ವೆಂಬಂತೆ ಬಿಂಬಿಸಲು ಅವು ಸದಾ ಸನ್ನದ್ಧವಾಗಿವೆ. ಪಕ್ಷ ಮತ್ತು ಸರ್ಕಾರಕ್ಕೆ ತಕ್ಕಂತೆ ಅವು ಭಾಷೆಯನ್ನು ರೂಢಿಸಿಕೊಳ್ಳುತ್ತವೆ. ಇಂಥದ್ದನ್ನೆಲ್ಲ ಕಳೆದ ಕೆಲ ವರ್ಷಗಳಲ್ಲಿ ಕಂಡ ನನಗೆ ಈ ನಾಟಕದ ವಸ್ತು ಒಂದು ಸಾಲಿನದ್ದಾಗಿ ಮೂಡಿತ್ತು. ರಾಜಕೀಯ ಮತ್ತು ಸಮಾಜಶಾಸ್ತ್ರೀಯ, ಮುಖ್ಯವಾಗಿ ಮನುಷ್ಯರ ವರ್ತನೆಗಳಲ್ಲಿನ ನನ್ನ ಆಸಕ್ತಿ ಅದನ್ನು ನಾಟಕವಾಗಿ ಬೆಳೆಸಲು ಇಂಬು ನೀಡಿವೆ.

ಈ ನಾಟಕವನ್ನು ಮೊದಲ ಪ್ರದರ್ಶನಕ್ಕಾಗಿ ಸಿದ್ಧಗೊಳಿಸಿದ ನನ್ನ ಬಹುಕಾಲದ ಗೆಳೆಯ ಹೊಂಗಿರಣ ಚಂದ್ರು ಪರಿಣಾಮಕಾರಿಯಾಗಿ ವಿನ್ಯಾಸ ಮಾಡಿ ನಿರ್ದೇಶಿಸಿದ್ದಾನೆ. ನಮ್ಮನ್ನೆಲ್ಲ ರಂಗಭೂಮಿಗೆ ಕರೆತಂದ ಡಾ.ಸಾಸ್ವೆಹಳ್ಳಿ ಸತೀಶ್ ಮುಖ್ಯಮಂತ್ರಿಯ ಪಾತ್ರದಲ್ಲೂ , ಡಾ.ನಾಗಭೂಷಣ್ ದೇಶದ ಪ್ರಜೆಯೊಬ್ಬನ ಪಾತ್ರದಲ್ಲೂ ಅಭಿನಯಿಸಿ ನಾಟಕದ ತೂಕವನ್ನು ಹೆಚ್ಚಿಸಿದ್ದಾರೆ. ಉಳಿದ ಎಲ್ಲಾ ಕಲಾವಿದರೂ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.ಹೊಂಗಿರಣ ಶಿವಮೊಗ್ಗ ಅಭಿನಯಿಸಿದ ಈ ನಾಟಕದ ಮೂರು ಪ್ರದರ್ಶನಗಳನ್ನು ಖುದ್ದು ನೋಡಿ, ತೀರ ಅಗತ್ಯವಿರುವ ಕಡೆಗಳಲ್ಲಿ ಬದಲಾವಣೆ ಮಾಡಿ ಪ್ರಕಟಣೆ ಮಾಡಲು ಮುಂದಾಗಿದ್ದೇನೆ. ಈ ನಾಟಕವನ್ನು ಇನ್ನು ಹಲವಾರು ವರ್ಷ ಪ್ರದರ್ಶಿಸಿದರೂ ಇದು ಪ್ರಸ್ತುತವಾಗಬಲ್ಲದು ಎಂಬುದು ದುರಂತವೇ ಸರಿ. ದ್ವೇಷವನ್ನು ಪೋಷಿಸುವ ಪ್ರತಿ ಮನಸ್ಸು ‘ಕೊಂದವರುಳಿದರೆ ಕೂಡಲಸಂಗಮದೇವಾ’ ಎಂದು ಕೇಳಿಕೊಂಡರೆ ಎಷ್ಟು ಚೆಂದ ಅಲ್ಲವೆ ? ಎಂದು ಆಶಿಸುತ್ತಲೇ ಸಹೃದಯ ಕನ್ನಡದ ಓದುಗರು ಈ ನಾಟಕವನ್ನು ಹೇಗೆ ಸ್ವೀಕರಿಸಿಯಾರು ಎಂಬ ಕುತೂಹಲದಿಂದ ಅವರ ಅಭಿಪ್ರಾಯಗಳಿಗೆ, ಟೀಕೆ ಟಿಪ್ಪಣಿಗಳಿಗೆ ನಾನು ಮುಕ್ತನಾಗಿದ್ದೇನೆ .

‍ಲೇಖಕರು avadhi

August 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: