ಶಾಂತಾಕುಮಾರಿ
ಒಳಗೊಳಗೇ ಖಾಲಿಯಾದ ಎದೆಯಲ್ಲೂ
ನಿನ್ನ ಪಿಸುಗುಡುವ ಕಂಗಳು ಬೆಸೆದು
ಆರಿದ ಅಗ್ಗಿಷ್ಟಿಕೆಗೆ ತಿದಿಯೂದಿದಂತೆ
ಭಗ್ಗನೆ ಹೊತ್ತಿಕೊಳ್ಳುವ ಭಾವ..
ಅದಾವುದೋ ಪೂರ್ವಜನ್ಮದ ಹೂವ ಘಮಲು
ಮತ್ತೇರಿಸುವ ಅಮಲು ಸುಖದ ಗೊಂಚಲು!
ಕತ್ತಲು ಕರಗಿದಂತೆ ನಿಶ್ಯಬ್ದವಾಗಿ ಕರಗುವ
ಉನ್ಮತ್ತ ಗಳಿಗೆಗಳು ಮಡಿಚಿಟ್ಟ ಸಂಧೂಕದಲ್ಲಿ
ಹಳೆಯ ರೇಶಿಮೆ ಸೀರೆಗಳ ಆಪ್ತ ಪರಿಮಳ!
ಒಳಗೊಳಗೇ ಖಾಲಿಯಾದ ಎದೆಯಲ್ಲೂ
ಒತ್ತಿಕೊಂಡ ನಿನ್ನ ತೋಳುಗಳು ಸುತ್ತಿ
ಒಲುಮೆ ಹೊಳೆ ಎದೆಯೊಳಗೆ ಜುಳುಜುಳು
ಪ್ರೇಮಪಾಶದ ಝಳಕ ನಕ್ಷತ್ರ ಬೆಳಕ
ನೆತ್ತಿಯಿಂದ ಕಾಲುಂಗುಷ್ಟದವರೆಗೂ ಹಬ್ಬಿ
ನಿನ್ನೊಳಗೆ ಕಳೆದ ನನ್ನ ಹುಡುಕಲಾಗಲಿಲ್ಲ
ನನ್ನೊಳಗಿನ ನಿನ್ನ ಹಾಗೇ ಮುಚ್ಚಿಟ್ಟು
ರೇಶಿಮೆ ಸೀರೆ ಬಿಸಿಲಿಗೆ ಹರಡಿ ಕೊಂಚ ಲಾವಂಚ
ಬಿಟ್ಟೂ ಬಿಡದ ಸುತ್ತಣ ಪ್ರಪಂಚ!

ಒಳಗೊಳಗೇ ಖಾಲಿಯಾದ ಎದೆಯಲ್ಲೂ
ನಿನ್ನ ಬೆಚ್ಚನೆ ಅಂಗಾಲುಗಳು ಆವರಿಸಿ
ವಿಸ್ಮಯವೊ ಎಂಬಂತೆ ನೀಲಿ ಆಗಸವಾಗಿ
ಬೆಳ್ಳಿಯುಂಗುರದಂತೆ ಚಂದ್ರ ಉದಯಿಸಿ
ಮಂದಾರ ಹೂವ ಜೀವ ಸಂಚರಿಸಿ
ನೀನು ನಾನು ಎಂಬುವುದೆಲ್ಲ ದಾಟಿ
ಎದೆಯ ತಂಬೂರಿ ಮೀಟಿ
ಬಳ್ಳಿ ದೇಹಕ್ಕೆ ರೇಶಿಮೆಯಂತೆ ನಿನ್ನ ಹೊದ್ದುಕೊಂಡೆ
ನನ್ನ ನಾ ಗೆದ್ದುಕೊಂಡೆ…






0 Comments