ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 6

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು.

ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ ಶಕ್ತಿಯನ್ನೇ ನಂಬಿ ಪತ್ರಿಕೋದ್ಯಮಕ್ಕೆ ಎಂಟ್ರಿ ಕೊಟ್ಟವರು. ಸಂತೋಷ, ತರಂಗ, ಸುಧಾ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.

ಮಾಸ್ತಿ ಪ್ರಶಸ್ತಿ ವಿಜೇತ ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಇಂದಿನಿಂದ ಪ್ರತಿ ದಿನವೂ ಪ್ರಕಟವಾಗುತ್ತದೆ.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಮೂರನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ

ನಾಲ್ಕನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಐದನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

6

ಚಳುವಳಿಗಾರ ಶೇಖರಪ್ಪನಿಗೆ ಸಿಕ್ಕ ಸುವರ್ಣಾವಕಾಶ…

ಹರಕೆ ಯಕ್ಷಗಾನದಾಟದ ಸಂದರ್ಭದಲ್ಲಿ ಚಂಡೆಮದ್ದಳೆ, ಭಾಗೋತರಗಿಂತ ಇವಳ ಯಕ್ಷಗಾನ ಏರುಗಡೆಯೇ ಜೋರು! ಕುಣಿದು ಕುಪ್ಪಳಿವುದೇನು? ಹಾಡುಗಾರಿಕೆ ರಾಗ ತಾರಕಕ್ಕೆ ಏರಿಸುವುದೇನು? ಕಾಕು ಹೊಡೆದು ಕುಣಿದುಕುಪ್ಪಳಿಸುವ ಜಾಪೇನು? ಮುಂಡಿಕೊಟ್ಟು ಗಿರಿಗಿರಿ ತಿರುಗುವುದೇನು? ಒಟ್ಟಿನಲ್ಲಿ ಅಬ್ಬರವೋ ಅಬ್ಬರ! ಕೊನೆಗೆ ಸುಸ್ತಾಗಿ ಒಂದು ಕಡೆ ಬಿದ್ದು ಒರಗಿದರೆ ಎಚ್ಚರ ಆಗುವ ಹೊತ್ತಿಗೆ ಸೂರ್ಯ ನೆತ್ತಿ ಇರಿಯುತ್ತಿರುತ್ತಾನೆ! ಮುದುರಿ ಅಸ್ತವ್ಯಸ್ತವಾದ ಸೀರೆ, ಬಸವಳಿದ ಮುಖ, ಬಣ್ಣಗೆಟ್ಟ ಮುಖ, ಕೆದರಿದ ಕೂದಲು, ಉದುರಿ ನೇತಾಡುವ ತುರುಬಿನಲ್ಲಿ ಮುಡಿದಿದ್ದ ಮಾಲೆ. ಗರಿ ಸುಟ್ಟತಾರೆ! ಸುತ್ತಮುತ್ತ ನೋಡಿದರೆ ಯಕ್ಷಗಾನವೂ ಇಲ್ಲ,, ಪ್ರೇಕ್ಷಕರೂ ಇಲ್ಲ.. ಖಾಲಿ ಖಾಲಿ ಬಯಲು…!

ಲಿಕ್ಕರ್ ಕುರಿತು ದೇಶ, ರಾಜ್ಯ ಮಟ್ಟಗಳಲ್ಲಿ ಪರ-ವಿರೋಧ ಚರ್ಚೆ ನಡೆಯುವಂತೆ, ತೇಲಪ್ಪನ ಬಾರ್ ಕುರಿತು ನಮ್ಮೂರಲ್ಲೂ ಬಹುಕಾಲದಿಂದಲೂ ನಡೆಯುತ್ತಿದೆ. ಎಲ್ಲೆಡೆ ಲಿಕ್ಕರ್ ಲಾಬಿಯೇ ಗೆಲ್ಲುವಂತೆ, ಇಲ್ಲಿಯೂ ತೇಲಪ್ಪನ ಕೊಟ್ಟೆಬಾರಿನದ್ದೇ ಮೇಲುಗೈ! ‘ಜಿಲ್ಲಾಮಟ್ಟದಿಂದ ಹಿಡಿದು ಬೆಂಗಳೂರು ತನಕ ಡೈರೆಕ್ಟ್ ಕನೆಕ್ಷನ್ ಉಂಟು ಮಾರಾಯ್ರೇ, ಅವನೇನ್ ಸಾಮಾನ್ಯ ಮನುಷ್ಯಾಂದುಕೋಬ್ಯಾಡಿ’ ವಕಾಲತ್ತು ವಹಿಸುತ್ತಾರೆ ನಾಣೀಭಟ್ಟರು!

ವಾದ-ವಿವಾದಗಳ ನಡುವೆಯೂ ತೇಲಪ್ಪನ ವ್ಯವಹಾರದ ಗ್ರಾಫ್ ಮೇಲೇರುತ್ತಾ ಹೋಗಿ ಕಾರ್, ಬೈಕ್, ಟ್ಯಾಕ್ಟ್ರ ಬಂದವು. ಗದ್ದೆ, ತೋಟ ಕೊಂಡ. ತೀರ್ಥಳ್ಳಿಪೇಟೆಯಲ್ಲಿ ಸೈಟ್ ಖರೀದಿಸಿ ಮನೆಕಟ್ಟಿದ. ಎಲ್ಲದರ ನಡುವೆಯೂ ಬಹಳ ವರ್ಷಗಳಿಂದಲೂ ಅವನೆದೆಯಲ್ಲೊಂದು ಬಯಕೆ ಬಚ್ಚಿಟ್ಟು ಕಾವು ಕೊಡುತ್ತಿತ್ತು. ಮನೆ ಸಮೀಪದ ನವಿಲೇಬ್ಯಾಣದ ಗಾಳಿಮರ ಬಸ್‌ಸ್ಟಾಪ್ ಬಳಿ ಮಗನಿಗೆ ಮನೆಕಟ್ಟಿ, ಪರ್ಮಿಟ್ ಪಡೆದು ಬಾರ್ ಓಪನ್ ಮಾಡಬೇಕು. ವ್ಯವಹಾರದಲ್ಲಿ ಈಗಾಗಲೇ ಪಳಗಿರೋದ್ರಿಂದ ಲಾಸ್ ಪ್ರಶ್ನೆಯೇಯಿಲ್ಲ. ನವಿಲೇಬ್ಯಾಣದ ಪಕ್ಕದ ರೋಡ್ ಬೇರೆ ನ್ಯಾಷನಲ್‌ ಹೈವೇ, ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿವೆ. ಪ್ರವಾಸಿಗರ ವಿಶೇಷ ಆಕರ್ಷಣೆಯೇ ಬಾರ್ ಅಲ್ಲವೇ!?

ತೇಲಪ್ಪನ ಕನಸು, ನನಸಾಗುವ ಸನ್ನಿವೇಶ ಅಚಾನಕವಾಗಿ ಒದಗಿಬರಬೇಕೇ? ಅದೃಷ್ಟ ಖುಲಾಯಿಸುವುದೆಂದರೆ ಹೀಗೆ ಅಲ್ಲವೇ!?

ನವಿಲೇಬ್ಯಾಣದ ಬಸ್‌ಸ್ಟಾಪ್ ಬಳಿ ಬೆಳೆದಿದ್ದ ನಡುತೋಪಿನ ಬಾರಿ ಗಾತ್ರದ ಆಕೇಶಿಯಾ, ನೀಲಗಿರಿ ಮರಗಳನ್ನು ಅರಣ್ಯ ಇಲಾಖೆಯವರು ಹರಾಜು ಹಾಕಿದರು. ಹರಾಜಿನಲ್ಲಿ ಹಿಡಿದ ಬಿಡ್‌ದಾರ, ಮರಗಳನ್ನು ಬುಡಹತ್ತ ಕಡಿಸಿ, ಆನೆ ತಂದು ದಿಮ್ಮಿಗಳನ್ನು ಲಾರಿಗಳಿಗೆ ಲೋಡ್ ಮಾಡಿ ಸಾಗಿಸಿದ. ಖಾಲಿಯಾದ ಹೆದ್ದಾರಿ ಪಕ್ಕದ ಬ್ಯಾಣದ ಪಟ್ಟೆ, ಮಾಮೂಲಿನಂತೆ ನಮ್ಮೂರ ಬಹಳ ಜನರ ಕಣ್ಣು ಕುಕ್ಕತೊಡಗಿತು.

ಈಗಾಗಲೇ ಬ್ಯಾಣದಲ್ಲಿ ಆಕ್ರಮವಾಗಿ ಮನೆಕಟ್ಟಿದವರ, ಬೇಲಿ ಹಾಕಿಕೊಂಡವರ ಅಕ್ರಮವನ್ನು ಸಕ್ರಮಗೊಳಿಸಿಕೊಡುವುದಾಗಿ ಚುನಾವಣಾ ಸಮಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ನೀಡಿದ್ದ ಭರವಸೆ ಒಂದಾದರೆ, ನೀಲಗಿರಿ, ಆಕೇಶಿಯಾ ಪರಿಸರದ ಮಾರಕ, ಅವುಗಳನ್ನು ಹೊಸದಾಗಿ ಬೆಳೆಯಲು ಅವಕಾಶ ನೀಡದಂತೆ ಆದೇಶಿಸಬೇಕೆಂದೂ ಪರಿಸರವಾದಿಗಳು ನಡೆಸಿದ ಹೋರಾಟದ ಪರ ಹೈಕೋರ್ಟ್ ತೀರ್ಪು ನೀಡಿ ಪಾಲಿಸುವಂತೆ ರಾಜ್ಯಸರ್ಕಾರಕ್ಕೆ ಆದೇಶಿಸಿತ್ತು.

ಆಮೇರೆಗೆ ಸರ್ಕಾರವೂ ಸುತ್ತೊಲೆ ಹೊರಡಿಸಿತ್ತು. ಈ ಸಂದರ್ಭದ ಸದುಪಯೋಗ ಪಡೆಯಲು ಬಹಳ ಜನ ಸನ್ನದ್ಧರಾಗಿದ್ದರೂ. ಮುನ್ನುಗಿ ಬೆಕ್ಕಿನ ಕೊರಳಿಗೆ ಯಾರಾದರೂ ಗಂಟೆಕಟ್ಟಲಿ, ಆಮೇಲೆ ನಾವೂ ರಂಗಕ್ಕಿಳಿದರಾಯ್ತೆಂಬ ಕಾತರ, ನಿರೀಕ್ಷೆಯಲ್ಲಿದ್ದರು..

ಆದರೆ ತೇಲಪ್ಪ ಕಾಯುವ ಸ್ಥಿತಿಯಲ್ಲಿರಲಿಲ್ಲ. ಆ ಆತುರಕ್ಕೆ ನಾಣಿಭಟ್ಟರೇ ಪ್ರೇರಕ. ಯಾವುದೇ ಕೆಲಸಕಾರ್ಯ ಪ್ರಾರಂಭಮಾಡುವುದಾದರೂ ತೇಲಪ್ಪ, ನಾಣೀಭಟ್ಟರನ್ನು ಕೇಳುವುದು, ಅವರು ಕವಡೆ ಹಾಕಿ ‘ಮಾಡು’ ಎಂದರೆ ಮುಂದುವರೆಯುವುದು. ‘ಬೇಡ’ ಎಂದರೆ ಬಾಲಮಡಚಿಕೂರುವುದು, ಬಹುಕಾಲದಿಂದಲೂ ಪಾಲಿಸಿಕೊಂಡು ಬಂದ ಪಾಲಸಿ!

ಅದಕ್ಕೆಲ್ಲಾ ನಾಣೀಭಟ್ಟರು ಗುಟ್ಟಾಗಿ ಸೇವಿಸುವ ತೀರ್ಥ, ತೇಲಪ್ಪ ಪುಕ್ಕಟೆಯಾಗಿ ಕೊಡುತ್ತಿದ್ದದ್ದೇ ದಕ್ಷಿಣೆ. ನಾಣೀಭಟ್ಟರ ವ್ಯಕ್ತಿತ್ತದ ವಿಶೇಷವೆಂದರೆ ಗಾಳಿ ಬೀಸಿದತ್ತ ಬಾಗುವುದು! ತೂರುವುದು!!

ಮನದಾಳದ ಅಭಿಲಾಷೆ ತೇಲಪ್ಪ ಪಿಸುಗುಟ್ಟಿದಾಗ, ಪಂಚಾಂಗ ತೆರೆದು ಕೈಯಲ್ಲಿ ಕವಡೆ ಗಸಗಸ ತಿಕ್ಕಿ ಜಗಲಿ ಮೇಲೆ ಹೊರಳಿಸಿ, ಬಲಗೈ ಹೆಬ್ಬೆರಳಲ್ಲಿ ನಾಲ್ಕು ಬೆರಳ ತುದಿ ಮುಟ್ಟುತ್ತಾ ಬಾಯಲ್ಲಿ ಏನೇನೋ ಗುಣಿಸಿ, ಭಾಗಿಸಿ ಲೆಕ್ಕಾಚಾರ ಹಾಕಿ ನಾಣೀಭಟ್ಟರು ಹೇಳಿದರು: ‘ಖಂಡಿತಾ, ತಡಮಾಡ ಬೇಡ. ಒಳ್ಳೇ ಸುಮುಹೂರ್ತ ತಾನಾಗಿ ಒದಗಿ ಬಂದಿದೆ. ಶುಕ್ರದೆಸೆ ಬೇರೆ, ಗುರುಬಲವೂ ಉಂಟು. ಜಾಗ ಆರಿಸಿ ಕೂಡಲೇ ಕೆಲಸಪ್ರಾರಂಭಿಸಿ ಶೀಘ್ರವಾಗಿ ಮುಗಿಸು. ಯಾಕಂದರೆ ನೀನು ಬಯಸಿದ ಜಾಗದ ಮೇಲೆ ಈಗಾಗಲೇ ಅನೇಕ ಅನಿಷ್ಟರ ಕಣ್ಣು ಬಿದ್ದಿದೆ.’

‘ತಡಬಡದ ಪ್ರಶ್ನೆಯೇ ಇಲ್ಲ. ನೀವು ಹೇಳಿದ್ಮೇಲಾಯ್ತು. ನೋಡ್ತಾಯಿರಿ, ಚಿಟಕೆ, ಚಿಟಕೆ ಹೊಡೆದ್ಹಾಗೆ ಕಟ್ಟಿ ಮುಗಿಸ್ತೀನಿ,’ ಎಂದ ತೇಲಪ್ಪ,

‘ಈಗ ಚೈತ್ರ, ಆಷಾಢ, ಶ್ರಾವಣದಲ್ಲಿ ಕೆಲಸಕಾರ್ಯ ಭರದಿಂದ ಸಾಗಲಿ, ಆಶ್ವೀಜ ಶುದ್ಧ ಮಾರ್ನಮಿ ಅಥವಾ ವಿಜಯದಶಮಿಗೆ ಗೃಹಪ್ರವೇಶ ಹುಡಿ ಹಾರಿಸುವಾ, ಆಗದಾ…?’

‘ನೀವಿದ್ದರೆ ಸಾಕು, ನನಗೆ ಹತ್ತಾನೆ ಬಲ. ವಿಜಯದಶಮಿಗೆ ಗೃಹಪ್ರವೇಶ ನಿಶ್ಚಯ, ಆದಿನ ಬೇರಾರ ಕಾರ್ಯಕ್ರಮ ಒಪ್ಪಿಕೋಬೇಡಿ ಮತ್ತೆ…’

‘ಕೊಟ್ಟಮಾತಿಗೆ ತಪ್ಪೋದುಂಟಾ? ತಪ್ಪಿದರೆ, ನೀನು ತೀರ್ಥಾನೇ ಬಂದ್ ಮಾಡಲ್ವಾ? ಮಹಾಖದೀಮ ಕಣೋ ನೀನು…’ ನಾಣೀಭಟ್ಟರ ಮೆಹರುಬಾನಿಗೆ ಅವರಿಗೆ ಸಲ್ಲಬೇಕಾದ ಕಾಣಿಕೆ ಕೊಟ್ಟು ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಹೊರಟ ತೇಲಪ್ಪನ ಮುಖದಲ್ಲಿ ವಿಜಯೋನ್ಮಾದದ ಕಳೆ ಚಿಮ್ಮುತ್ತಿತ್ತು!

ವಾರ ಕಳೆವುದರೊಳಗೆ ನವಿಲೇಬ್ಯಾಣದ ಬಸ್‌ಸ್ಟಾಪ್ ಬಳಿ ಕಲ್ಲುಕಂಬ, ಜಲ್ಲಿಕಲ್ಲು, ಮರಳು, ಜಂಬಿಟ್ಟಿಗೆ, ಮರದತೊಲೆ, ಬಲಗು -ಎಲ್ಲಾ ಬಂದು ಬಿದ್ದವು, ಭಾನುವಾರ ಸೂರ್ಯೋದಯದ ಶುಭಮುಹೂರ್ತದಲ್ಲಿ ನಾಣೀಭಟ್ಟರ ‘ಶುಕ್ಲಾಂಬರಧರ…’ಪೂಜೆ-ಪುನಸ್ಕಾರ, ಗಂಟೆ ಜಾಗಟೆ ಸದ್ದುಗದ್ದಲಗಳೊಂದಿಗೆ ಸಂಸಾರ ಸಮೇತರಾಗಿ ತೇಲಪ್ಪ ಕೆಸರುಗಲ್ಲು ಹಾಕಿ, ಪೂಜೆ ಮಾಡಿ, ಕಟ್ಟಡದ ಕೆಲಸಕಾರ್ಯ ನಿರ್ವಿಘ್ನವಾಗಿ ಮುಗಿಯಲೆಂದು ಭಕ್ತಿಯಿಂದ ಪ್ರಾರ್ಥಿಸಿ ದಂಪತಿಗಳು ಗಣಪತಿಗೆ, ನಾಣೀಭಟ್ಟರಿಗೆ ಅಡ್ಡಬಿದ್ದರು!

ತರ್ಲೆಗಳಿಲ್ಲದ ಊರುಂಟೇ? ಅದರಲ್ಲೂ ಅವರ ಸಂಖೆಯೇ ಹೆಚ್ಚಿರುವ ನಮ್ಮೂರಿನಲ್ಲಿ! ಅಂದಮೇಲೆ ಸುಮ್ಮನಿರಲು ಹೇಗೆ ಸಾಧ್ಯ? ತಗಳ್ಳಿ ಗುಸುಗಸು, ಪಿಸುಪಿಸು ಶರುವಾಯಿತು. ‘ನಮಗೂ ಜಾಗಬೇಕು…’ ‘ಜಾಗ ಸ್ಯಾಂಕ್ಷನ್ ಆಗದೇ ಮನೆಕಟ್ಟೋದು ಅಂದ್ರೆ…’ ‘ಆ ಜಾಗದಲ್ಲಿಯಾರೂ ಮನೆ ಕಟ್ಟಬಾರದು, ಗೋಮಾಳ ಅದು…’ ‘ಫಾರೆಸ್ಟ್ ಲ್ಯಾಂಡೋ, ರೆವಿನ್ಯೂದೋ, ಗ್ರಾಮ ಠಾಣವೋ ಯಾವುದೂ ನಿಖರವಾಗಿಲ್ಲವೆಂದ ಮೇಲೆ ಮನೆ ಕಟ್ಟೋದು ಸರಿಯೇ…?’ ‘ನಕ್ಸಲರ ಗಲಾಟೆ ಸಮಯದಲ್ಲಿ ಹಿಂದುಳಿದ ವರ್ಗದವರಿಗೇಂತಾ ಮೀಸಲಾದ ಜಾಗ ಅದು…’ ತಲೆಗೊಂದು ಮಾತು.

ಯಾರೇನೇ ಹೇಳಿದರೂ ತೇಲಪ್ಪ ಮಾತ್ರ ಡೋಂಟ್‌ಕೇರ್! ನೋಡನೋಡುತ್ತಿದ್ದಂತೆ ಅಡಿಪಾಯ ಅಗೆದದ್ದಾಯಿತು. ಕಲ್ಲುಕಂಬ ನಿಲ್ಲಸಿದ್ದಾಯಿತು. ಸೈಜ್ ಗಲ್ ನೆಲಗಟ್ಟಿನ ಕಾರ್ಯವೂ ಚರುಕಾಗಿ ನಡೆಯತೊಡಗಿದ್ದ ಕಂಡು ತರ್ಲೆಪಾರ್ಟಿಗಳ ಹೊಟ್ಟೆಯಲ್ಲಿ ತಳಮಳ ಹೆಚ್ಚಿತು. ಸಂಬಂಧಿಸಿದ ತಾಲೂಕು ಮಟ್ಟದ ಸಮಸ್ತ ಅಧಿಕಾರಿಗಳಿಗೂ, ಇಲಾಖಾ ಮುಖ್ಯಸ್ಥರುಗಳಿಗೂ ಮೂಗರ್ಜಿ ಗುಜರಾಯಿಸಿದ್ದಾಯ್ತು!

ಏನ್ಮಾಡಿದರೂ ಕೇಳುವವರಿಲ್ಲ! ಇನ್ನು ಸುಮ್ಮನಿರಬಾರದೆಂದು ತರ್ಲೆದಾರರು ತಾಲೂಕು ಮಟ್ಟದ ಹೋರಾಟಗಾರ ಶೇಖರಪ್ಪನ ಮೊರೆಹೊಕ್ಕರು. ಇಂಥ ಸನ್ನಿವೇಶವನ್ನೇ ಬಕಪಕ್ಷಿಯಂತೆ ಹೊಂಚು ಕಾಯುತಿದ್ದ ಚಳುವಳಿಗಾರ ಶೇಖರಪ್ಪನಿಗೆ ಸುವರ್ಣಾವಕಾಶ ಧಕ್ಕಿದಂತಾಯಿತು, ತಡಬಡಮಾಡದೇ ಮುಖಂಡತ್ವ ವಹಿಸಿಕೊಂಡ.

ಅವನ ನಾಯಕತ್ವದಲ್ಲಿ ತಾಲೂಕು ಆಫೀಸ್ ಎದುರು ಬ್ಯಾನರ್ ಹಿಡಿದು, ಧರಣೀ ಕುಳಿತು ‘ನವಲೇಬ್ಯಾಣ ಉಳಿಸಿ…!’ ‘ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ…!’ ‘ತೇಲಪ್ಪನ ಚೇಲಾಗಳಿಗೆ ಧಿಕ್ಕಾರ…!’ ಘೋಷಣೆ ಕೂಗಿದ್ದಾಯಿತು! ಹುಂಹೂಂ ಏನು ಮಾಡಿದರೂ, ಎಷ್ಟೇ ಬೊಬ್ಬೆ ಹೊಡೆದರೂ ಯಾವ ಇಲಾಖೆಯವರೂ, ಒಬ್ಬ ಅಧಿಕಾರಿಯೂ ಕಣ್ಣೆತ್ತಿ ನೋಡಿ ಕ್ಯಾರೇ ಅನ್ನಲಿಲ್ಲ!

ನವಿಲೇಬ್ಯಾಣದಲ್ಲಿ ನೋಡಿದರೆ ಫೌಂಡೇಷನ್ ಮುಗಿದು, ಬಲಗು, ತೊಲೆ ಕಲ್ಲುಕಂಬದ್ ಮೇಲೇರಿದವು. ಅಷ್ಟೇಅಲ್ಲ; ಪಕಾಶಿ, ರೀಪು, ಹೆಂಚು ಬಂದು ರಾಶಿ ಬಿದ್ದವು.

ಇನ್ನೂ ಸುಮ್ಮನಿದ್ದರಾಗದೆಂದು ಶೇಖರಪ್ಪ ಮತ್ತು ಹೋರಾಟಗಾರರು ಜಿಲ್ಲಾಧಿಕಾರಿಗಳ ಗಮನಸೆಳೆದು, ಕೂಡಲೇ ಸೂಕ್ತಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಲು ನಿರ್ಧರಿಸಿದರು. ಬಿಕ್ಕಲಂನಲ್ಲಿ ಪರ್ಮಿಟ್ ಇಲ್ಲದೇ ಬಾರ್ ವ್ಯವಹಾರದ ಪಾಯಿಂಟ್ ಸೇರಿಸಿ, ಖಾವಂದರ ಸನ್ನಿಧಾನಕ್ಕೆ… ಅರ್ಜಿ ಟೈಪ್ ಮಾಡಿಸಿ ಊರಿನ ಸಮಸ್ತರ ಸಹಿ ಸಂಗ್ರಹಣೆ ಮಾಡುವ ಸಲುವಾಗಿ ಮನೆಮನೆ ಹತ್ತಿಇಳಿಯ ಹೊರಟವರು ಮೊದಲು ಏರಿದ್ದೇ ನಾಣೀಭಟ್ಟರ ಮನೆ ಮೆಟ್ಟಲನ್ನು!

ಅರ್ಜಿ ಒಕ್ಕಣೆ ಕಂಡು ನಾಣೀಭಟ್ಟರು ಕಂಗಾಲು. ಕೆಸರುಗಲ್ಲು ಮುಹೂರ್ತ ಮಾಡಿದ ತಾನೇ, ತರ್ಲೆ ಅರ್ಜಿಗೆ ಪ್ರಥಮ ಸಹಿ ಗುಜರಾಯಿವುದೇ? ಹಾಕದಿದ್ದರೆ ಊರಿನವರೊಡನೆ ಸುಖಾಸಮ್ಮನೆ ನಿಷ್ಟುರ…! ದ್ವಂದ್ವಕ್ಕೆ ಸಿಲುಕಿದ ನಾಣೀಭಟ್ಟರು, ಬಹುಜನರ ಒತ್ತಾಯಕ್ಕೆ ಮಣಿದು, ಆದದ್ದಾಗಲಿಯೆಂದು ಕಣ್ಣುಮುಚ್ಚಿ ಸಹಿ ಗುಜರಾಯಿಸಿಯೇ ಬಿಟ್ಟರು! ರಿಜಿಸ್ಟರ್‌ಪೋಸ್ಟ್ ಮಾಡಿದ್ದರೂ ಜಿಲ್ಲಾಖಾವಂದರ ಸಮಕ್ಷಮದಿಂದ ಯಾವುದೇ ಪ್ರತಿಕ್ರಿಯೆಯಿಲ್ಲ. ಏನು ಮಾಡಲೂ ತೋಚದೇ ಎಂಎಲ್ಎಯ ಮೊರೆಹೊಕ್ಕರು… ದುರಾದೃಷ್ಟಕ್ಕೆ ಎಂಎಲ್‌ಎ ಸಾಹೇಬರೂ ಮಂತ್ರಿಸ್ಥಾನ ಪಡೆಯುವ ಹೋರಾಟದಲ್ಲಿ ಬೆಂಗಳೂರು-ದಿಲ್ಲಿ ನಡುವೆ ವಿಮಾನ ಏರಿಯಿಳಿಯುವುದರಲ್ಲೇ ಬಿಝಿಯಾಗಿದ್ದರು…

। ಇನ್ನು ನಾಳೆಗೆ ।

‍ಲೇಖಕರು Avadhi

May 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: