ಕಂಬನಿಯ ಮಣಿಮಾಲೆಗಳ ಪೋಣಿಸಿದರೆ ಹೆಸರು ತುಷಾರ ಹಾರ
ಶಮ ನಂದಿಬೆಟ್ಟ
**
ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಪುಸ್ತಕ ತರಿಸಿಕೊಂಡಿದ್ದರೂ ಓದಲು ಧೈರ್ಯ ಬಾರದೇ ಕಪಾಟಿನೊಳಗೇ ಇಟ್ಟಿದ್ದೆ. ತಂಗಿಯೊಬ್ಬಳ ಕರೆಯಲ್ಲಿ ಇತ್ತೀಚಿನ ಓದಿನ ಮಾತು ಬಂದಾಗ “ನಾನು ಓದಿದೆ ಅಕ್ಕ; ಎಂಟು ತಿಂಗಳು ನಡೆದ ಎಲ್ಲವನ್ನೂ ದಿನಚರಿಯ ಹಾಗೆ ತೆರೆದಿಟ್ಟಿದ್ದಾರೆ; ತೀರ ಡಿಸ್ಟರ್ಬ್ ಮಾಡಲಿಲ್ಲ. ಅದೂ ನಿಮ್ಮಂಥ ಗಟ್ಟಿ ಜನ ಆರಾಮಾಗಿ ಓದಹುದು” ಎಂದಿದ್ದಳು. ಅವತ್ತು ಪುಸ್ತಕ ಕಪಾಟಿನ ಹಿಂದಿನ ಸಾಲಿನಿಂದ ಮುಂದೆ ಬಂತೇ ಹೊರತು ತೆರೆದೋದುವ ಧೈರ್ಯ ಬರಲಿಲ್ಲ. ಮೊನ್ನೆ ಅಮ್ಮನ ಹಳೆಯ ಗೆಳತಿಯೊಬ್ಬರ ಜತೆ ಮಾತಾದಾಗ ಸಾವಿನ ಕುರಿತೇ ಒಂದಷ್ಟು ಮಾತುಗಳು. ಮಾರನೇ ದಿನ ಸಿದಾ ಈ ಪುಸ್ತಕ ಕೈಗೆತ್ತಿಕೊಂಡು, ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.
ಈ ತಾಯಿ ಶ್ಯಾಮಲಾ ಮಾಧವ ಅವರ ಪರಿಚಯ ಇಲ್ಲದಿದ್ದರೂ ಹೆಸರು ಕೇಳಿದ್ದೆ. ತಾಯಿ ಮಡಿಲು ಬರಿದಾಗಿಸಿಕೊಂಡ ಕಥೆ ಈ ಪುಸ್ತಕದ ತುಂಬಾ ಹರಡಿದೆ. ಅದರ ಬಗ್ಗೆ ಬರೆಯಬೇಕೆಂದರೆ ಏನು ಬರೆಯಲಿ ? ಕ್ಯಾನ್ಸರ್ ಬಗ್ಗೆ ಬಂದ ಅನೇಕ ಬರಹಗಳು, ಕೆಲವು ಪುಸ್ತಕಗಳನ್ನು ಓದಿದ್ದುಂಟು. ಮೊತ್ತ ಮೊದಲ ಬಾರಿಗೆ ನಾನು ಓದಿದ್ದು ನೇಮಿಚಂದ್ರರ ಕಥೆಯಲ್ಲಿ. ಕಥಾ ನಾಯಕನ ಹೆಸರು ರಮೇಶ ಎಂದು ನೆನಪು; ಅವನು ಸಾವಿಗೆ ತೀರ ಸಮೀಪಿಸಿದ ಹೊತ್ತಿನಲ್ಲಿ ಹೆಂಡತಿ ಮುಂದಿನ ಬದುಕು ಕಟ್ಟುವ ಅನಿವಾರ್ಯತೆಯಿಂದ ಶಾಲೆಗೆ ಕೆಲಸಕ್ಕೆ ಸೇರುವ ಕಥೆಯದು. ದಿನಗಳಲ್ಲ, ತಿಂಗಳುಗಟ್ಟಲೇ ಡಿಸ್ಟರ್ಬ್ ಮಾಡಿತ್ತು. ತೀರ ಹತ್ತಿರಾದವರು ಅಚಾನಕ್ ಹೋಗಿ, ಕ್ಯಾನ್ಸರ್ ಮಾರಿ ತುಂಬ ಸಜ್ಜನರನ್ನೂ ತಿಂದು ತೇಗಿದ ನಂತರ ಕ್ಯಾನ್ಸರ್ ಬಗೆಗಿನ ಯಾವ ಓದು ಕೂಡ ತೀರ ಕಲಕದ ಮಟ್ಟಿಗೆ ಮಾಗಿದ್ದೇನೆ ಎಂದುಕೊಂಡಿದ್ದೆ. ಅದನ್ನು ಈ ಪುಸ್ತಕ ಸುಳ್ಳು ಮಾಡಿತು.
ತನ್ನ ಒಡನಾಡಿಗಳ ಮಟ್ಟಿಗೆ ಗುರುದೇವ್ ಆಗಿದ್ದ ಜೀವ, ಎಷ್ಟೋ ಕಿರಿಯರಿಗೆ ಮಾರ್ಗದರ್ಶನ ನೀಡಿ, ವೃತ್ತಿ ಬದುಕು ಕಟ್ಟುವಲ್ಲಿ ಮೊದಲ ಇಟ್ಟಿಗೆಯಾಗಿದ್ದ ಜೀವ, ಕುಟುಂಬದ ಸ್ಪೂರ್ತಿ ಚಿಲುಮೆ, ಯಾವ ಕ್ಷಣದಲ್ಲಿ ಬೇಕಾದರೂ ನೆಚ್ಚಬಹುದಾದ ಜೀವ, ದೇಶ ವಿದೇಶಗಳ ಬಹಳಷ್ಟು ಪ್ರತಿಷ್ಟಿತ ಸಂಸ್ಥೆಗಳಿಗೆ ಕೆಲಸ ಮಾಡಿಯೂ ಯಾವುದೂ ತನ್ನದಲ್ಲವೆಂಬ ಹಾಗೆ ಸರಳವಾಗಿ ಬದುಕುತ್ತಿದ್ದ ವಿನಮ್ರತೆಯ ಜೀವಕ್ಕೆ ಹೆಸರಿಟ್ಟರೆ ಅದು ತುಷಾರ ಎನಿಸಿದ್ದು https://www.weremember.com/tushar-uchil/5r2x/memories ಓದಿದ ನಂತರ. ತನ್ನ ಸುತ್ತಲೂ ಬೆಳಕನ್ನಷ್ಟೇ ಹರಡಿದ ಹಣತೆ ನಿಧಾನವಾಗಿ ಸೊರಗುತ್ತ, ಬೆಳಕು ಆರದಂತೆ ಎಣ್ಣೆಯೆರೆದು ಕಾಯುತ್ತಿದ್ದವರ ತೊರೆದು ನಂದಿ ಹೋಗಿತ್ತು.
ಸಾಹಿತ್ಯವನ್ನು ಬಹಳ ನೆಚ್ಚಿಕೊಂಡ ಶ್ಯಾಮಲಾರವರಿಗೆ ಹಗುರಾಗಬಲ್ಲೆ ಎನಿಸಿ ಬರೆದರೇನೋ.. ಆದರಿದು ಹಾಗೆ ಹಗುರಾಗುವ ನೋವೂ ಅಲ್ಲ; ಎದೆಯ ಭಾರ ಇಳಿವುದೂ ಇಲ್ಲ. ಆದರೂ ಬರೆದಿದ್ದಾರೆ; ಇಂಥದ್ದೇ ನೋವಿನಿಂದ ಬಳಲುವವರಿಗೆ ಕಿರುದೀವಿಗೆಯಾದರೂ ಆಗಬಹುದು ಎನಿಸಿತೇನೋ. ಬದುಕಿನ ಆತ್ಮವಿಶ್ವಾಸದ ಅಮೃತ ಬಳ್ಳಿ ಹೀಗೆ ಒಣಗಿದಾಗ ಆ ತಾಯಿ, ತಮ್ಮ, ಖಾಸಾ ಗೆಳೆಯ ಗೆಳತಿಯರು ಹೇಗೆ ತಡಕೊಂಡರೋ ಕಾಣೆ. ತಾಯಿಗೋ ಮಗು; ಆದರೆ ತಮ್ಮನೊಬ್ಬ ಈ ಕಾಲದಲ್ಲಿ ಹೀಗೆ ಕಣ್ಣಲ್ಲಿ ಕಣ್ಣಿಟ್ಟು ತಿಂಗಳುಗಟ್ಟಲೆ ಕಾಯುವುದು ಅಪೂರ್ವ; ಅಂಥ ತಮ್ಮನಿಗೆ ನಮನ.
ಬದುಕು ಎಲ್ಲವನ್ನೂ ಮೀರಿದ್ದು; ನೆನಪುಗಳ ಜೊತೆಗೇ ಸಾಗುವುದು ಅನಿವಾರ್ಯ. ಕೊನೆಗೆ ಬೆನ್ನುಡಿಯಲ್ಲಿ ನೇಮಿಚಂದ್ರರು ಇದನ್ನು ಬಹಳ ಸೊಗಸಾಗಿ ಹೇಳಿದ್ದಾರೆ. ಮಗನ ಕುರಿತಾದ ಎಲ್ಲ ನೋವುಗಳನ್ನು ಹಂಚಿಕೊಂಡ ತಾಯಿ ಆತ ತೀರಿಕೊಂಡು ವರ್ಷ ತುಂಬುವುದರೊಳಗೆ ಬಂದ ತಮ್ಮ ತಾಯಿಯ ನೂರನೇ ಹುಟ್ಟು ಹಬ್ಬದ ವಿಚಾರವನ್ನೂ ಹಂಚಿಕೊಳ್ಳುತ್ತ ಬದುಕು ಪ್ರೀತಿಯ ಕಥೆಯಿದು, ಬದುಕು ಮುಂದುವರೆಯುತ್ತದೆ ಎನ್ನುತ್ತ ಪುಸ್ತಕ ಆಶಾವಾದದೊಂದಿಗೆ ಕೊನೆಯಾಗುತ್ತದೆ.
ಇದನ್ನು ಓದುತ್ತಿದ್ದ ಹಾಗೇ ಹೊರದೇಶದಲ್ಲಿದ್ದ ಗೆಳತಿಯೊಬ್ಬಳು ಕಳಿಸಿದ ಸಂದೇಶದಲ್ಲಿ “ನಂಗೊತ್ತಿಲ್ಲ ಎಷ್ಟು ದಿನ ಬದುಕಿರ್ತೀನಿ; ಅಷ್ಟು ದಿನಗಳಲ್ಲಿ ಮಾಡಲಿಕ್ಕೆ ದೇವರು ಏನು ಟಾಸ್ಕ್ ಅಥವಾ ನಂಗೇನು ಪ್ರತಿಭೆ ಕೊಟ್ಟಿದಾನೆ ಅದನ್ನು ಬಳಸಿಕೊಂಡು ಏನು ಮಾಡಬಹುದೋ ಎಲ್ಲ ಮಾಡಬೇಕು” ಅಂದಿದ್ದು ಕಾಕತಾಳೀಯ.
“ನಿಮ್ಮಂಥ ಗಟ್ಟಿ ಜನ ಆರಾಮಾಗಿ ಓದಹುದು” ಎಂದವಳೇ ತಂಗ್ಯವ್ವಾ I beg to differ from you. ಈ ಪುಸ್ತಕವನ್ನು ನಿನ್ನ ಹಾಗಲ್ವೇ ಹುಡುಗಿ; ತಾಯಿಯಾಗಿ ಓದಿದೆ. ಹಾಗಾಗಿಯೇ ಇರಬಹುದು, ಓದಿ ಮುಗಿಸಿದ ನಂತರ 3-4 ರಾತ್ರಿಗಳು ನಿದ್ದೆಗೆ ರಜೆ.
ಕಾಡಿದ್ದು ಇದಷ್ಟೇ ಅಲ್ಲ; ಬದುಕಿನ ಕ್ಷಣಿಕತೆ, ನಶ್ವರ ಎಂಬ ಅರಿವು ಇದ್ದು ಕೂಡ ನಾವು ಹುಟ್ಟು ಹಾಕಿಕೊಳ್ಳುವ ದ್ವೇಷ, ವಿನಾಕಾರಣ ಮಾಡುವ ಕೊಲೆ, ರಕ್ತಪಾತಗಳು, ರಾಜಕೀತ ಪ್ರೇರಿತ ಅನಾಚಾರಗಳು, ಮಗು ಎಂಬ ಹಂತವನ್ನೇ ದಾಟಿರದ ಕೂಸುಗಳ ಮೇಲಾಗುವ ಅತ್ಯಾಚಾರಗಳು; ಅದಕ್ಕಿಂತ ಹೆಚ್ಚಾಗಿ ದುರುಳರನ್ನು ಕಾಯಲು ನಿಲ್ಲುವ ರಾಕ್ಷಸರು ಎಲ್ಲ ಒಂದಾದ ಮೇಲೊಂದು ಚಿತ್ತ ಭಿತ್ತಿಗೆ ಅಪ್ಪಳಿಸಿದವು. “ಎದೆಗೂ ಎದೆಗೂ ನಡುವಿದೆ ಹಿರಿಗಡಲು; ಮುಟ್ಟಲಾರೆವೇನು ? ಸೇತುವೆ ಕಟ್ಟಲಾರೆವೇನು?” ಇನ್ನಿಲ್ಲದಂತೆ ಅನುರಣಿಸಿತು.
0 ಪ್ರತಿಕ್ರಿಯೆಗಳು