ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಂಭು.. ಅರ್ಜಂಟ್ ಒಂದ್ ಸಲ ಬಾ ಮಾರಾಯ ರಂಗಮಂದಿರಕ್ಕೆ..

ಕೆರೆಮನೆ ಶಿವಾನಂದ ಹೆಗಡೆ 

‘ಶಂಭು…. ಅರ್ಜಂಟ್ ಒಂದ್ ಸಲ ಬಾ ಮಾರಾಯ ರಂಗಮಂದಿರಕ್ಕೆ.. ಬತ್ಯಾ?’ ಎನ್ನುವಾಗ ನನ್ನ ಧ್ವನಿ ಉಡುಗಿ ಹೋಗಿ, ಆತಂಕ ಅಸಹಾಯಕತೆ ನನಗೇ ಕಾಣುತ್ತಿತ್ತು.

‘ಆಯ್ತು ಈಗ ಬತ್ತೆ ಹೆಗ್ಡ್ರೆ’ ಆ ಕಡೆಯಿಂದ ಶಂಭು ಹೇಳಿದಾಗ ಏನೋ ಒಂದು ಧೈರ್ಯ ಬಂತು.

ಜೂನ್ 23ರಂದು ರಾತ್ರಿ ಇಡೀ ಸುರಿದ ಮಳೆಯ ಹೊಡೆತ ತಾಳಲಾರದೇ ಮರುದಿನ ಮಧ್ಯಾಹ್ನದ ಹೊತ್ತಿಗೆ ರಂಗಮಂದಿರದ ಪಶ್ಚಿಮ ಭಾಗದಲ್ಲಿ ಭೂಕುಸಿತವಾಗಿ ನಮ್ಮ ಕಂಪೌಂಡ್ ಕುಸಿದು ಪಕ್ಕದವರ ತೋಟದಲ್ಲಿ ಕಲ್ಲು ಮಣ್ಣಿನ ರಾಸಿಯೇ ಬಿತ್ತು. ಮಳೆ ಜೋರಾಗಿ ಹುಯ್ಯುತ್ತಿದ್ದರಿಂದ ಬೇರೆ ಏನೂ ಮಾಡಲಾಗದ ಅಸಹಾಯಕತೆ ಮತ್ತೆ ಇನ್ನೂ ಹೆಚ್ಚಿನ ಅವಾಂತರಗಳು ಆದರೆ ಎಂಬ ಭಯ..!

ಮಧ್ಯಾಹ್ನ ನಾನು ಕೇಂದ್ರಕ್ಕೆ ಹೋಗುತ್ತಿದ್ದಂತೆ ಅಲ್ಲಿದ್ದ ನಮ್ಮವರ ಮುಖದಲ್ಲಿ ಆತಂಕವೇ ಕುಣಿಯುತ್ತಿತ್ತು. ಧೋ ಎಂದು ಸುರಿವ ಮಳೆ ಇನ್ನೊಂದು ತಾಸು ಹೊಯ್ದರೂ ಒಂದು ಸ್ನಾನ ಗೃಹ, ಶೌಚಾಲಯ ಸಮೇತ ಕೆಳಗೆ ಕುಸಿದು ಬೀಳಬಹುದು!!. ನನಗೆ ಏನು ಮಾಡಲೂ ತೋಚುತ್ತಿಲ್ಲ! ಆತ್ಮೀಯರಿಗೆ ದೂರವಾಣಿ ಕರೆ ಮಾಡಿ ಬರುವಂತೆ ತಿಳಿಸಿದೆ. ಕೆ.ಜಿ. ಹೆಗಡೆಯವರು, ಗಣೇಶ ಶಾಸ್ತ್ರಿಯವರು ಮತ್ತು ಮಿತ್ರ ಮಂಜುನಾಥ ನಾಯ್ಕ, ಮಹಾಬಲ ಗೌಡರು ಹೀಗೆ ಹಲವರು ಬಂದು ನೋಡಿ ಸಾಂತ್ವನ ಸಮಾಧಾನ ಹೇಳಿದರು.

ಏನೇ ಹೇಳಿದರೂ ಮನಸ್ಸು ವಿಹ್ವಲಗೊಂಡಿತು. ಮಾರನೆಯ ದಿನ ಕಾರಣಾಂತರದಿಂದ ಗೌಹಾಟಿಗೆ (ಅಸ್ಸಾಂ) ಹೋಗಬೇಕು. ಇಲ್ಲಿನ ಪರಿಸ್ಥಿತಿ ಹೇಗೋ ಏನೋ ಎಂಬ ಆತಂಕ. ಕಂಪೌಂಡ್ ಕುಸಿದು ಬೇರೆಯವರ ತೋಟದಲ್ಲಿ ಮಣ್ಣು ಕಲ್ಲು ರಾಶಿ ಬಿದ್ದಿದೆ. ಬೇಡದ ಮಾತುಗಳು ಕಿವಿಗೆ ನಾಟುತ್ತಿದೆ. ಸೋರಬೋರ್ಗುಡುವ ಮಳೆ ಒಂದಾದರೆ, ನೋವು ತರುವ ಮಾತು ಬೇರೆ. ಮಳೆ ನಿಲ್ಲದೇ ಏನೂ ಮಾಡುವಂತಿಲ್ಲ.

ಆದಿತ್ಯವಾರವಾದ್ದರಿಂದ ಕೆಲಸಕ್ಕೂ ಯಾರೂ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಯಾರಾದರೂ ಬಂದು ಒಂದು ಹಂತದ ಕೆಲಸ ಮಾಡಿದರೆ ಧೈರ್ಯ ಬರುತ್ತದೆ. ಹಾಗಾಗಿ ಕೊನೆಗೆ…ನೆನಪಾದದ್ದು ನಮ್ಮೂರಿನ ಹಕ್ಕಲಕೇರಿ ಚಿಕ್ಕ ಮಜರೆಯ ಶಂಭು ಗೌಡ. ಫೋನಾಯಿಸಿದ ಸ್ವಲ್ಪ ಹೊತ್ತಿನಲ್ಲೇ ಬಂದರು.

ಈ ಶಂಭು ಗೌಡರು ನಮ್ಮೂರಿನಲ್ಲಿ ಎಂಥಹ ಗಟ್ಟಿಯ ಸವಾಲಿನ ಕೆಲಸಕ್ಕೂ ಸಿದ್ಧ. ಶಂಭು ಕೆಲಸ ಆರಂಭಿಸಿದರೆ ನಿಶ್ಚಿಂತೆ. ಇವನ ಕಾಯಕ ಸಾಮರ್ಥ್ಯ ಅಸಾಧ್ಯ! ನಮ್ಮ ರಂಗಮಂದಿರದ ಹಲವಾರು ಕಠಿಣ ಕೆಲಸ ನಿರ್ವಹಿಸಿದ ಶಂಭು, ನನಗೆ ಬಾಲ್ಯ ಸ್ನೇಹಿತರಲ್ಲಿ ಒಬ್ಬ. ಕಡು ಕಷ್ಟದ ಕೆಲಸ ಅಂದ್ರೆ ಬಲು ಇಷ್ಟ. ಕೈಯ ಆಯುಧ, ಸಲಕರಣೆಗಳು ಅವನ ಮಾತನ್ನ ಚಾಚೂತಪ್ಪದೇ ಪಾಲಿಸುತ್ತದೆ. ಪಟ್ ಅಂತ ಎತ್ತಿ ಇಟ್ಟ ಪಿಕಾಸಿಗೆ ಕಬ್ಬಿಣದಂತ ನೆಲ “ಕುಂಯ್” ಎಂದು ಶರಣಾಗುತ್ತದೆ. ಮಾಡುವ ಕೆಲಸದ ಅಚ್ಚುಕಟ್ಟಿಗೆ ಭೂಮಿಯೇ ಶಬ್ಬಾಸ್ ಎನ್ನುತ್ತದೆ.

ಸ್ವಲ್ಪ ಮೂಗಿನ ನೇರಕ್ಕೆ ವಾದಿಸುವ ಗುಣವಿದ್ದರೂ, ಸ್ವಲ್ಪ ಮುಂಗೋಪ ಕಂಡರೂ ಅಂತರಂಗ ಮೃದು, ಮುಗ್ದ. ಅಂತಹ ಶ್ರಮಜೀವಿಯನ್ನ ಇಂದಿನ ಸಂದರ್ಭದಲ್ಲಿ ಕಾಣುವುದು ವಿರಳ. ಕೊಟ್ಟ ಕೆಲಸ ಕೈಯಲ್ಲಿ ಇರುವಾಗ ಹಗಲು, ರಾತ್ರಿ ಮಳೆ ಬಿಸಿಲು,ಅಮಾಸೆ, ಹುಣ್ಮೆ ಹಬ್ಬ ಹರಿದಿನ ಎಲ್ಲವೂ ಶಂಭುಗೆ ಶರಣಾಗುತ್ತದೆ. ಕಲ್ಲೆಂಬ ಕಲ್ಲು ಕರಗಿ ಬಾಯ್ಬಿಟ್ಟು ಹೋಳಾಗುತ್ತದೆ. ಕಟ್ಟಡ, ಪಾಯ, ಗೋಡೆಯನ್ನ ಸರಸರ ಕಟ್ಟಿ ನಿಮ್ಮನ್ನು ಬೆರಗುಗೊಳಿಸುವ ಶಂಭುವಿನಂತ ಕೆಲಸಗಾರರು ಖಂಡಿತಾ ಸಿಗುವುದಕ್ಕಿಲ್ಲ. ಸೂಕ್ಷ್ಮವಾಗಿ ನೋಡಿದ್ದೇನೆ. ಇವನಿಗೆ ಕೆಲಸ ಮಾಡುವುದೇ ಒಂದು ಪ್ರೀತಿ. ಆ ಪ್ರೀತಿಯ ಶಕ್ತಿಯೇ ವಿಸ್ಮಯ ಪಡುವಷ್ಟು ಬಲಿಷ್ಠವಾಗಿದೆ.

‘ಈಗ ಬತ್ತೆ’ಎಂದ ಶಂಭು ಬಂದೇ ಬಿಟ್ಟ. ‘ಮಾರಾಯ ಎಂತಾದರೂ ಮಾಡು. ಆ ಕಡೆ ಸರಿಮಾಡಿಕೊಡು. ನಾಳೆನೇ ಕೆಲಸಕ್ಕೆ ಬಾ’ ಎಂದು ವಿನಂತಿಸಿದೆ.. ಆಯ್ತು ನೀವು ಚಿಂತೆ ಬಿಡಿ, ಎಂದವನೇ ಅಲ್ಲಿ ಭೂಮಿ ಇನ್ನೂ ಕುಸಿಯದ ಹಾಗೆ ಉದ್ದಕ್ಕೂ ಪ್ಲಾಸ್ಟಿಕ್ ಮುಚ್ಚಿ ಕಲ್ಲು ಹೇರಿ ಒಂದು ವ್ಯವಸ್ಥೆ ಮಾಡಿದ. ಮರುದಿನದಿಂದ ಅಂದರೆ ಜೂನ್ 24 ಕ್ಕೆ ಕಟ್ಟುವ ಕೆಲಸ ಶುರುಮಾಡಿ, ಜೂನ್ 29ಕ್ಕೆ ಒಂದೇ ವಾರದೊಳಗೆ ಸುಮಾರು #15 ಅಡಿ ಕೆಳಗಿಂದ #38 ಅಡಿ ಉದ್ದದ ತಡೆಗೋಡೆ (compound wall) ನಿರ್ಮಿಸಿಬಿಟ್ಟ. ಈ ಮಧ್ಯೆ ಉದ್ದಾನುದ್ದಕ್ಕೂ ಬಿಡದೇ ಹೊಯ್ಯುವ ಮಳೆಯನ್ನು ಲೆಕ್ಕಿಸದೇ ತನ್ನ ಕೆಲಸ ಮುಂದುವರಿಸಿದ. ಶಂಭು ಎಸೆದ ಸವಾಲಿಗೆ ಪ್ರಕೃತಿಯ ಆಟ ನಡೆಯಲಿಲ್ಲ. ನಮ್ಮ ಕಟ್ಟಡ ಬಚಾವಾದದ್ದು ಹೀಗೆ! ಮೊನ್ನೆಯ ಕರಾಳ ಅನುಭವ ಮರೆಯುವಂತೆ ಮಾಡಿದ ಅವನ ಹೆಗಲ ಮೇಲೆ ಕೈ ಇಟ್ಟು ಧನ್ಯವಾದ ಹೇಳಿದೆ.

ಈತ ತನ್ನ ಎರಡೂ ಮಕ್ಕಳಲ್ಲಿ ಒಬ್ಬ ಸಿವಿಲ್ ಮತ್ತೊಬ್ಬ ಡಿಪ್ಲೋಮಾ ಇಂಜಿನೀಯರಿಂಗ್ ಮಾಡಿಸಿದ್ದಾನೆ. ಅವರು ಊರಿಗೆ ಬಂದಾಗ ಅವರು ಇವನೊಟ್ಟಿಗೆ ಕೆಲಸ ಮಾಡಬೇಕು. ಮಣ್ಣು ಕಲ್ಲು ಹೊರಲೇಬೇಕು. ತನ್ನ ಜೊತೆಗೆ ಗಪ್ ಚಿಪ್ ಕೆಲಸ ಮಾಡ ಬೇಕು. “ಮತ್ತೆ ಈ ಇಂಜಿನಿಯರ್ ಗಳೆಲ್ಲ ಎಂತ ಮಾಡ್ತಾರೆ ಗೊತ್ತು” ಎಂಬ ಅವನ ಕಿರು ನಗೆ ಬರಿತ ವ್ಯಂಗ್ಯದ ಅವನದ್ದೇ ಶೈಲಿಯ ಮಾತನ್ನ ಕೇಳಬೇಕು. ಆದರೆ ಅವನ ಕೆಲಸದ ಕೌಶಲ್ಯಕ್ಕೆ ಶ್ರಮಕ್ಕೆ ಅರ್ಹತೆಗೆ ಬಾಯ್ಮುಚ್ಚಿ ಕೆಲಸ ಮಾಡ್ಬೇಕಲ್ಲದೆ ಬೇರೆ ವಿಧಿ ಇಲ್ಲ. ಇವನೊಟ್ಟಿಗೆ ಕೆಲಸಕ್ಕೆ ಬರುವುದಕ್ಕೆ ಎಲ್ಲರೂ ಒಪ್ಪುವುದಿಲ್ಲ. ಕಾರಣ ಇವನ ಶ್ರಮದೊಟ್ಟಿಗೆ ಕೆಲಸ ಮಾಡುವುದು ಸುಮಾರಿನವರ್ಯಾರಿಗೂ ಅಸಾಧ್ಯ. ಶ್ರಮಜೀವಿಗಳನ್ನ ಕಂಡರೆ ಇವನಿಗೆ ಪ್ರೀತಿ.

ನಮ್ಮೂರಿನ ಪ್ರಧಾನ ದೇವ ಶಂಭುಲಿಂಗೇಶ್ವರ. ಹೀಗಾಗಿ ಇಲ್ಲಿ ಹೆಚ್ಚಿನವರ ಹೆಸರು ಶಂಭು, ಶಂಕರ, ಈಶ್ವರ ಇತ್ಯಾದಿ. ಇವ ಹಕ್ಕಲಕೇರಿ ಶಂಭು! ಇರುವ ಸಾಮಾನ್ಯ ಆಳ್ತನದಲ್ಲೇ ಅಪೂರ್ವ ಶಕ್ತಿ ಸಾಮರ್ಥ್ಯ ತುಂಬಿಕೊಂಡಿದೆ. ಬದುಕಿನ ಶಾಲೆಯಲ್ಲಿ ಕಲಿತ ಅನುಭವ ಯಾರಿಗೂ ಕಡಿಮೆಯಿಲ್ಲ. ಇಂತಹ ಶಂಭು ಗೌಡರು ಒಬ್ಬ ಕಲಾಪ್ರೇಮಿ. ನಮ್ಮ ಎಲ್ಲಾ ಆಟಕ್ಕೆ ಮುದ್ದಾಂ ಹಾಜರ್. ಕೆಲಸಮಾಡುವಾಗ ಸದಾ ಯಕ್ಷಗಾನದ ಹಾಡನ್ನು ಮಾತ್ರ ಕೇಳುವುದು ಅವನ ಅಭ್ಯಾಸ. ಆ ಆಟದ ಪ್ರೀತಿಯಲ್ಲೇ ನಮ್ಮ ರಂಗಮಂದಿರದ ಎಲ್ಲಾ ಕೆಲಸಕ್ಕೂ ಪ್ರೀತಿಯಿಂದ ಕೈಜೋಡಿಸುವುದು ನಡೆದುಬಂದಿದೆ. ಇದಕ್ಕೆ ನಾನು ಸದಾ ಅವನಿಗೆ ಆಭಾರಿ.

ಅಂತೂ ಈ ಮಳೆಗಾಲದ ಮೊದಲ ಆಟ ಇದೇ ಆಯ್ತು..!

‘ತ..ದಿ..ಗಿ..ಣ ಬಸೋಲ್ …!!’ ಅಂದ್ರೆ.. ತೋಟ, ಮನೆ, ಕಟ್ಟಡ, ರಸ್ತೆ ಇತ್ಯಾದಿಗಳಲ್ಲಿ ಆಗಬಾರದ್ದು ಆಗಿಹೊದಾಗ ಒಂಚೂರು ಮನಸ್ಸನ್ನ ಹದಗೊಳಿಸಲು ಕೊಂಚ ವ್ಯಂಗ್ಯ,ವಿನೋದ ಬಳಸಿ ಕೆಲವು ಕಡೆ ಹಾಗೆ ಹೇಳುವ ರೂಡಿ ಇದೆ! – ಕಳಕೊಂಡವರು ಬೇರೆಯವರಾದರೆ ಮಾತ್ರ…..!

ಮಳೆಗಾಲಕ್ಕೆ ಬರ್ಜರಿ GST ಕಟ್ಟಿ ಕುಂತಿದ್ದೇನೆ.

‍ಲೇಖಕರು avadhi

10 July, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading