ವೈ ಎಂ ಯಾಕೊಳ್ಳಿ ಓದಿದ ‘ತುಂಬಿದ ತೊರೆ’

ಡಾ ವೈ ಎಂ ಯಾಕೊಳ್ಳಿ

ತಮ್ಮ ಅನೇಕ ಗಟ್ಟಿ ಬರಹಗಳ ಮೂಲಕ ನಾಡಿನಲ್ಲಿ ವೈಚಾರಿಕ ಚಿಂತಕರೆ೦ದೂ ವಿಮರ್ಶಕರೆಂದೂ ಹೆಸರಾದವರು ದಾನೇಶ್ವರಿ.ಬಿ. ಸಾರಂಗಮಠರವರು. ಸಾಮಾನ್ಯವಾಗಿ ಎಲ್ಲರೂ ಕಾವ್ಯ, ಕಥೆ ಎಂದು ಸೃಜನಶೀಲ ಸಾಹಿತ್ಯ ಪ್ರಕಾರಗಳನ್ನೇ ಆಯ್ದುಕೊಳ್ಳುವ ಸಂದರ್ಭದಲ್ಲಿ ತುಸು ಭಿನ್ನವಾದ ಹೆಜ್ಜೆ ಇರಿಸಿ ತಮ್ಮ ಬರಹ ಮಾಧ್ಯಮವಾಗಿ ವಿಮರ್ಶೆಯನ್ನೇ ಆಯ್ದುಕೊಂಡವರು ಅವರು. ಈಗಾಗಲೆ ನಾಡಿನ ಓದುಗರ ಕೈಗೆ ಅಂತರಾಳ (೨೦೧೧), ಪದ ಸಿಂಚನ (೨೦೧೨) ಮತ್ತು ನುಡಿದೀಪ (೨೦೨೦) ಎಂಬ ಮೂರು ಕೃತಿಗಳನ್ನು ನೀಡಿದ ಅವರು ಈಗ ೨೦೨೨ ರಲ್ಲಿ ‘ತುಂಬಿದ ತೊರೆ’ ಎಂಬ ಕೃತಿಯನ್ನು ನಮ್ಮ ಮುಂದಿರಿಸಿದ್ದಾರೆ. ವೃತ್ತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಹಿರಿಯ ಶಿಕ್ಷಕಿಯರೂ ಆಗಿರುವ ಶ್ರೀಮತಿ ಸಾರಂಗಮಠ ಅವರು ಅಧ್ಯಯನಶೀಲ ಮತ್ತು ಒಳನೋಟಗಳುಳ್ಳ ಬರಹಗಾರರು ಎನ್ನುವದನ್ನು ಸಾಬೀತು ಮಾಡಿದ್ದಾರೆ

‘ತುಂಬಿದ ತೊರೆ’ ವಿಮರ್ಶೆ ಅವಲೋಕನಗಳು ಮತ್ತು ಮುನ್ನುಡಿಗಳ ಸಂಕಲನ. ೨೪ ಲೇಖನಗಳು ಇಲ್ಲಿವೆ. ಕಾದಂಬರಿ ಕಾವ್ಯ, ವಚನ ಸಾಹಿತ್ಯದ ಅಧ್ಯಯನದ ಗ್ರಂಥ ಮತ್ತು ಇನ್ನಿತರ ಕೃತಿಗಳನ್ನು ಕುರಿತು ತಮ್ಮ ಓದಿನ ಅನುಭವ ನಿಷ್ಠ ಮತ್ತು ಪ್ರಾಮಾಣಿಕ ಅಭಿಪ್ರಾಯಗಳನ್ನು ಇಲ್ಲಿ ನೇರವಾಗಿ ಧಾಖಲಿಸಿದ್ದಾರೆ. ಸಾರಂಗಮಠ ಅವರ ವಿಮರ್ಶಾ ಬರಹದ ಮುಖ್ಯ ಗುಣವೆಂದರೆ ಅವರ ಸಮತೋಲಿತ ಬರಹ ಮತ್ತು ತಾನು ಮುಂದೆ ಬರದೇ ಕೃತಿಯ ಅಂತರಾಳದ ವಿವರಗಳನ್ನು ಮತ್ತು ವಿಶೇಷತೆಗಳನ್ನು ಹೇಳಿ ಕೃತಿಯನ್ನು ಮುಂದೆ ಬಿಡುವ ಗುಣ. ಇವು ಒಂದು ಒಳ್ಳೆಯ ವಿಮರ್ಶೆಯ ಲಕ್ಷಣಗಳು. ಅವರ ಯಾವ ಬರಹದಲ್ಲಿಯೂ ಶ್ರೀಮತಿ ಸಾರಂಗಮಠರು ತಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪಲಿ ಎಂದು ಹೇಳಲು ಹೋಗುವದಿಲ್ಲ. ಒಂದು ಕೃತಿಯನ್ನು ತಾನು ಓದಿದ ರೀತಿಯನ್ನು ಅಥವಾ ಈ ಕೃತಿ ನನಗೆ ಹೀಗೆ ಹೀಗೆ ಗ್ರಹಿತವಾಗಿದೆ ಎನ್ನವುದನ್ನು ಹೇಳುತ್ತಾರೆ.

ಮೊದಲ ಭಾಗವೆನ್ನಬಹುದಾದ ಐದು ಲೇಖನಗಳು ನಾಡಿನ ಹಿರಿಯ ಕಾದಂಬರಿಕಾರರ ಕಾದಂಬರಿಗಳ ಪರಿಚಯವನ್ನು ಮಾಡಿಕೊಡುವ ಲೇಖನಗಳು. ಸಿದ್ದಯ್ಯ ಪುರಾಣಿಕರ ತ್ರಿಭುವನಮಲ್ಲ, ಶ್ರೀಕೃಷ್ಣ ಆಲನಹಳ್ಳಿಯವರ ಕಾಡು, ಎಂ. ಕೆ. ಇಂದಿರಾ ಅವರ ಫಣಿಯಮ್ಮ, ಶಿವರಾಮ ಕಾರಂತರ ಚೋಮನದುಡಿ ಮತ್ತು ಈಚೆಗೆ ಪ್ರಕಟವಾದ ಡಾ ಚಂದ್ರಶೇಖರ ಕಂಬಾರರ ‘ಶಿವನ ಡಂಗುರ’ ಈ ಕಾದಂಬರಿಗಳ ಅವಲೋಕನವನ್ನು ಇಲ್ಲಿ ಮಾಡಿದ್ದಾರೆ.

ಕಾವ್ಯಾನಂದರೆ೦ದು ಹೆಸರಾದ ಸಿದ್ಧಯ್ಯ ಪುರಾಣಿಕರು ಕನ್ನಡ ನವೋದಯ, ನವ್ಯ, ಪ್ರಗತಿಶಿಲ ಪಂಥಗಳು ತುಂಬ ಭರಾಟೆಯಿದ್ದಾಗಲೇ ಮುಖ್ಯ ಕವಿಗಳಾಗಿ ಮತ್ತು ಆಧುನಿಕ ವಚನಕಾರರಂದು ಹೆಸರಾದವರು. ಆದರೆ ಯಾವ ಒಂದು ಪಂಥಕ್ಕೂ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೇ ಬರಹವನ್ನು ಸಾಮಾಜಿಕ ಅಭಿವ್ಯಕ್ತಿ ಎಂದು ಬರೆಯುತ್ತಾ ಹೋದವರು. ಎಂಟು ಕವನ ಸಂಕಲನ, ಮೂರು ವಚನ ಸಂಕಲನಗಳು, ನಾಲ್ಕು ನಾಟಕಗಳು, ಒಂದು ಕಾದಂಬರಿ, ಎರಡು ಕಥಾ ಸಂಕಲನಗಳು, ಮಕ್ಕಳ ಕವನ ಸಂಕಲನಗಳು, ಮಕ್ಕಳ ನಾಟಕ, ಜೀವನ ಚರಿತ್ರೆಗಳು, ಅನೇಕ ಸಂಪಾದನಾ ಕೃತಿಗಳು ಹೀಗೆ ಅಪಾರವಾದ ಸಾಹಿತ್ಯ ಸೃಷ್ಟಿಯನ್ನು ಮಾಡಿದವರು. ಅವರ ಏಕಮಾತ್ರ ಐತಿಹಾಸಿಕ ಕಾದಂಬರಿ ‘ತ್ರಿಭುವನ ಮಲ್ಲ’. ಕಲ್ಯಾಣಿ ಚಾಲುಕ್ಯರ ಅರಸ ಆರನೆಯ ವಿಕ್ರಮಾದಿತ್ಯನ ಕುರಿತಾದ ಕಾದಂಬರಿ. ಸಿದ್ದಯ್ಯ ಪುರಾಣಿಕರನ್ನು ‘ಹೈದ್ರಾಬಾದ ಕರ್ನಾಟಕದ ಸಾಹಿತ್ಯಲೋಕದ ದ್ರುವತಾರೆ’ ಎಂದು ಗುರುತಿಸಿರುವ ಸಾರಂಗಮಠ ಅವರು ಕನ್ನಡ ನಾಡಿನಲ್ಲಿ ಆಡಳಿತ ಮಾಡುತ್ತಲೇ ಸಾಹಿತ್ಯ ರಚಿಸಿದವರ ಸಾಲಿನಲ್ಲಿ ಸಿದ್ಧಯ್ಯ ಪುರಾಣಿಕರ ಹೆಸರು ಪ್ರಮುಖವಾ ಗಿರುವದನ್ನು ಗುರುತಿಸಿದ್ದಾರೆ. ಅವರು ಅಧಿಕಾರಿಗಳಾಗಿ ಆಯ್ಕೆಯಾದಾಗ ಮಾಸ್ತಿಯವರು ‘ಇದು ಕನ್ನಡಕ್ಕಾದ ನಷ್ಟ’ ಎಂದುದನ್ನು ನೆನಪಿಸುತ್ತಾರೆ. ಆದರೆ ಪುರಾಣಿಕರು ಅಧಿಕಾರಿಯಾದರೂ ಕನ್ನಡವನ್ನು ಕೈಬಿಡಲಿಲ್ಲ ಎಂಬುದನ್ನೂ ಗುರುತಿಸುತ್ತಾರೆ.

ಚಾಲುಕ್ಯ ದೊರೆ ತ್ರಿಭುವನಮಲ್ಲನನ್ನು ಕಾದಂಬರಿಯ ನಾಯಕನನ್ನಾಗಿ ಮಾಡಿಕೊಂಡ ಪುರಾಣಿಕರು ಸಮಚಿತ್ತದಿಂದ ವಸ್ತುವನ್ನು ಗ್ರಹಿಸಿದ್ದನ್ನು “ಐತಿಹಾಸಿಕ ಘಟಣೆಗಳನ್ನು ಆಧರಿಸಿ ಬರೆದ ಕಾದಂಬರಿಗಳಲ್ಲಿ ಸಂಘರ್ಷವನ್ನು ವಸ್ತುನಿಷ್ಠ ನೆಲೆಯಲ್ಲಿ ಗ್ರಹಿಸಿದ್ದಾರೆ. ವಸ್ತು ಇತಿಹಾಸವಾದರೂ ವರ್ತಮಾನದ ಬದುಕಿಗೆ ಅದು ಹೇಗೆ ಸಂಗತ ಎನ್ನುವ ಪ್ರಶ್ನೆ ಇವ್ಯಾವವೂ ಪುರಾಣಿಕರನ್ನು ಬಾಧಿಸದೇ ರಾಜನೊಬ್ಬನ ಮೇಲಿನ ಅಭಿಮಾನ, ಭಾವುಕತೆಯಿಂದ ವಸ್ತುನಿಷ್ಠತೆಯಿಂದ ನೋಡಿದ್ದಾರೆ.” (ಪು ೨)ಎನ್ನುತ್ತಾರೆ. (ಭಾವುಕತೆ ಮತ್ತು ವಸ್ತುನಿಷ್ಠತೆ ಎರಡೂ ರೀತಿಯಿಂದ ಹೇಗೆ ನೋಡಲು ಸಾಧ್ಯ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ) ವಿಕ್ರಮಾದಿತ್ಯನ ಸಾಧನೆಗಳನ್ನು ಕಾದಂಬರಿಕಾರರು ಚಿತ್ರಿಸಿರುವದನ್ನು ಗ್ರಹಿಸಿರುವ ಲೇಖಕರು ಅವನಕೌಟುಂಬಿಕ ಜೀವನದ ಸೂಕ್ಷö್ಮಗಳನ್ನು ಚಿತ್ರಿಸಿರುವದನ್ನು ಗುರುತಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಕನ್ನಡ ನವ್ಯ ಕಾಲದ ಮುಖ್ಯ ಕಾದಂಬರಿಕಾರ ಕಥೆಗಾರ ಶ್ರೀಕೃಷ್ಣ ಆಲನಹಳ್ಳಿಯವರು. ಕನ್ನಡ ನಾಡು ಬಹು ಬೇಗ ಕಳೆದು ಕೊಂಡ ಒಂದು ಉಜ್ವಲ ಪ್ರತಿಭೆ. ಅವರ ಮೊದಲ ಕಾದಂಬರಿ ಕಾಡು(೧೯೭೧) ಕಾದಂಬರಿಯನ್ನು ಸಾಮಾಜಿಕ ಕಾದಂಬರಿ ಎಂದು ಗುರುತಿಸುತ್ತಾರೆ. ಕಾಡಿನ ದುರಂತ ವ್ಯಕ್ತಿಯ ದುರಂತವಾಗುತ್ತಾ ಹೋಗುವದನ್ನು ಶೋದಿಸುವ ವಿಮರ್ಶಕರು ಕಾದಂಬರಿ ಹಳ್ಳಿಯೊಂದರ ಜೀವನವನ್ನು ಚಿತ್ರಿಸುತ್ತಲೆ ಸಾಂಕೇತಿಕ ಕಾದಂಬರಿಯಾಗಿರುವದನ್ನು ಗುರುತಿಸುತ್ತಾರೆ. ಅಲ್ಲಿ ನಿರ್ಮಿತವಾಗಿರುವ ದಟ್ಟ ಜಾನಪದ ವಾತಾವರಣವನ್ನು, ಕಾದಂಬರಿಯ ಭಾಷಿಕ ವೈಶಿಷ್ಟö್ಯವನ್ನು ಗುರುತಿಸುತ್ತಾ ಹೋಗಿರುವದು ಮಹತ್ವದ್ದಾಗಿದೆ. ಮಹತ್ವದ ಅಂಶವೆ೦ದರೆ ಅವರ ವಿಮರ್ಶೆ ಈ ಕೃತಿಯ ಮಿತಿಯನ್ನೂ ಗುರುತಿಸುತ್ತದೆ. “ಹಾಗೇ ಓದಿಕೊಂಡು ಹೋಗುವಾಗ ಮುದೇನಾಯಿತು ? ಎಂಬ ಕುತೂಹಲದಲ್ಲಿರುವಾಗಲೇ ಎಲ್ಲ ಮುಗಿದು ಕಥೆಯ ಅಂತ್ಯವಾಗುವದು. ಕೊನೆಯಲ್ಲಿ ಓದುಗನ ಮನಸ್ಸಿನಲ್ಲಿ ಏಳುವ ಕ್ರೌರ್ಯದ ಅಸಾಮಾಧಾನಕ್ಕೆ ಅಂತ್ಯಗಾಣಿಸದೇ ಬಿಟ್ಟದ್ದು ಲೇಖಕರ ಮಿತಿಯನ್ನು ತೋರಿಸುತ್ತದೆ” (ಉ-೧೮) ಎನ್ನುವದನ್ನು ಗಮನಿಸಬೆಕು.

ಕನ್ನಡದ ಶ್ರೇಷ್ಠ ಕಾದಂಬರಿಗಾರ್ತಿಯಾಗಿದ್ದ ಎಂ.ಕೆ. ಇಂದಿರಾ ಅವರ ಬಹು ಮುಖ್ಯ ಕಾದಂಬರಿಯ ಅವಲೋಕನ “ಎಂ.ಕೆ ಇಂದಿರಾ ಅವರ ಫಣಿಯಮ್ಮ ‘ಸಾವಿರದ ಚಿಂತನ” ಎಂಬ ಲೇಖನವಾಗಿದೆ. ಕಾದಂಬರಿ ಚಲನಚಿತ್ರವಾಗಿ ರಾಷ್ಟç ಪ್ರಶಸ್ತಿ ಪಡೆದುದನ್ನು ಹೇಳುತ್ತ ಫಣಿಯಮ್ಮ ಕಾದಂಬರಿಯಾಗಿ ಒಳಗೊಂಡ ವಿಶೇಷತೆಗಳನ್ನು ಲೇಖಕರು ವಿವರಿಸಿದ್ದಾರೆ. “ಮಲೆನಾಡು ಪರಿಸರ ಜೀವನಶೈಲಿಯೇ ಚಿತ್ರಣ, ಪಾತ್ರಗಳಿಗೆ ತಕ್ಕುದಾದ ಭಾಷೆಯ ಬಳಕೆ ನಮ್ಮ ಗಮನ ಸೆಳೆಯುತ್ತದೆ. ಹತ್ತೊಂಬತ್ತು ಇಪ್ಪತ್ತನೆಯ ಶತಮಾನದಲ್ಲಿನ ಸಂಪ್ರದಾಯ ಮಡಿವಂತ ಕುಟುಂಬ ಜೀವನವನ್ನು ನಮ್ಮೆದುರು ತೆರದಿಡುವದನ್ನು ಕಾಣಬಹುದು”. ಒಂಬತ್ತನೆಯ ವಯಸ್ಸಿಗೆ ಸರಿಯಾಗಿ ನೋಡದೇ ಇದ್ದ ಹುಡುಗನನ್ನು ಮದುವೆಯಾಗಿ ಒಂದೆರಡು ತಿಂಗಳಲ್ಲಿ ವಿಧವೆಯಾದ ಫಣಿಯಮ್ಮ ಮುಂದೆ ಇಡೀ ಜೀವನದುದ್ದ ಮನೆಯವರ ಪರವಾಗಿ ದುಡಿಯುವದು , ಸಮಯ ಸಂದರ್ಭ ಬಂದಾಗಲೆಲ್ಲ ಮಹಿಳೆಯರ ಪರವಾಗಿ ನಿಲ್ಲುವದು ಆಕೆಯ ಮಾನವೀಯ ವ್ಯಕ್ತಿತ್ವದ ಮುಖವಾಗಿವೆ.

ಬಹಳ ಸೂಕ್ಷ್ಮವಾಗಿ ಪುರುಷ ವರ್ಗದ ಅನ್ಯಾಯವನ್ನು ಸುಬ್ಬರಾಯನ ನಡೆಯಲ್ಲಿ ವಿಡಂಬಿಸುತ್ತಾರೆ. ಆತ ಬೇರೆ ಜಾತಿಯ ಹೆಂಗಸರ ಸಂಗ ಮಾಡಿದಾಗಲೆಲ್ಲ ಕೆರೆಯಲ್ಲಿ ಮುಳುಗಿ ಜನಿವಾರ ಬದಲಿಸಿ ಶುದ್ಧನಾಗಿ ಮನೆಗೆ ಬರುವದು, ವಿಧವೆಯಾದ ಪಾರ್ವತಿಯು ತನ್ನ ಕೂದಲನ್ನು ಬಲಾತ್ಕರವಾಗಿ ಬೋಳಿಸಿದುರ ವಿರುದ್ಧ ಬಂಡೆದ್ದ ಮೈದುನನಿಗೆ ಬಸುರಿಯಾಗಿ ಮಗುವನ್ನು ಮನೆಯವರು ಒಪ್ಪಬೇಕೆಂದು ಪಟ್ಟು ಹಿಡಿಯುವದು ಇವೆಲ್ಲ ಕಾದಂಬರಿಯ ವಿಶಿಷ್ಟಾಂಶಗಳು ಎಂದು ಲೇಖಕರು ಗುರುತಿಸಿರುವದು ಅವರ ಸೂಕ್ಷ್ಮದೃಷ್ಟಿಗೆ ಸಾಕ್ಷಿಯಾಗಿದೆ. “ ವಿಧವೆಯಂಬ ಬಲೆಗೆ ತಳ್ಳಿದ ಒಬ್ಬ ಹೆಣ್ಣಿನಲ್ಲಿ ಅದೆಂಥ ಅದಮ್ಯ ಶಕ್ತಿಯಿರಬಹುದು ಎನ್ನುವದಕ್ಕೆ ಫಣಿಯಮ್ಮ ಸಾಕ್ಷಿಯಾಗಿ ನಿಲ್ಲುತ್ತಾಳೆ. “ ಎಂದ ಅವರ ಮಾತು ನಿಜವಾದದ್ದಾಗಿದೆ.

ಕನ್ನಡದಲ್ಲಿ ಇನ್ನೂ ದಲಿತ ಸಾಹಿತ್ಯ ಒಡಮೂಡದೇ ಇದ್ದಾಗ ಬಂದ ಸಾಮಾಮಾಜಿಕ ನ್ಯಾಯದ ಪರವಾದ ಚಿಂತನೆ ಮಾಡಿದ ಬಹುಮುಖ್ಯ ಕಾದಂಬರಿ ಶಿವರಾಮ ಕಾರಂತರ ‘ಚೋಮನ ದುಡಿ’. ಇದು ೧೯೩೩ ರಲ್ಲಿ ಪ್ರಕಟವಾಯಿತು. ಈ ಕೃತಿಯನ್ನು ಕುರಿತು ಲೇಖಕರು “ಚೋಮನದುಡಿ ಕಾದಂಬರಿಯು ಕೆಲವು ಸಂಗತಿಗಳತ್ತ ಮುಖ ಮಾಡಿದೆ. ಒಂದು- ದಲಿತರ ಭೂಮಿ ಪ್ರಶ್ನೆ. ಎರಡು-ದಲಿತರ ತಾರತಮ್ಯ ಮತ್ತು ದಲಿತರ ಮೇಲಾಗುವ ದೌರ್ಜನ್ಯ. ಮೂರು-ದಲಿತರ ಸಾಮಾಜಿಕ ದೌರ್ಬಲ್ಯಗಳು ಮತ್ತು ಸಾಂಸ್ಕೃತಿಕ ನಂಬಿಕೆಗಳು . ನಾಲ್ಕು-ತಮ್ಮದಲ್ಲದ ವ್ಯವಸ್ಥೆ ಮತ್ತು ತಮ್ಮ ಪರವಲ್ಲದ ವ್ಯವಸ್ಥೆಯೂ ಅಲಕ್ಷಿತರನ್ನು ಹೇಗೆ ಧರ್ಮ ದೇವರುಗಳ ಹೆಸರಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ನೋಡಿದೆ. ಐದು -ಈ ಕೃತಿ ಘಟ್ಟದ ಅಗ್ರಹಾರ ಕೇಂದ್ರಿತವಾಗಿದ್ದರೂ ಇದರ ವಸ್ತು ಇಂದಿಗೂ ಬಯಲು ಸೀಮೆಯ ತೀರಾ ಬಡವರಾದ ತಳವರ್ಗದವರ ಆಳದ ಕಥನವಾಗಿದೆ” ಹೀಗೆ ಈ ಕಾದಂಬರಿಯ ಪ್ರತಿಯೊಂದು ಅಂಶವನ್ನೂ ಲೇಖಕಿ ಶೋಧನೆಗೆ ಒಳಪಡಿಸುತ್ತಾರೆ. ಒಂದು ತುಂಡು ಭೂಮಿಗಾಗಿ ತುಡಿಯುವ ಚೋಮನ ಬದುಕು ಮತ್ತು ಅವನಸುತ್ತಲಿನವರ ಬದುಕು ಶೋಷಣೆಗೆ ಒಳಗಾಗುತ್ತ ಹೋಗುವದನ್ನು ಕಡೆಗೂ ತನ್ನ ಆಸೆಯನ್ನು ಈಡೇರಿಸಿಕೊಳ್ಳದ ಚೋಮನ ದುರಂತ ಬದುಕನ್ನೂ ಚಿತ್ರಿಸಿದ ಈ ಕಾದಂಬರಿ ಇಂದಿಗೂ ಮಹತ್ವದ ಕಾದಂಬರಿಯಾಗಿರುವದನ್ನು ಗುರುತಿಸಿದ್ದಾರೆ.

ಡಾ.ಚಂದ್ರಶೇಖರ ಕಂಬಾರ ಅವರು ನವ್ಯದ ಶ್ರೇಷ್ಠ ಬರಹಗಾರರಾದರೂ ನವ್ಯೋತ್ತರ ಸಂದರ್ಭದಲ್ಲಿ ಬಹುಮುಖ್ಯ ಕೃತಿಗಳನ್ನು ನೀಡುತ್ತಾ ಬಂದವರು. ಅವರ ಇತ್ತೀಚಿನ ಕಾದಂಬರಿ ‘ಶಿವನ ಡಂಗುರ’ ವನ್ನು ಅವಲೋಕನ ಮಾಡಿದ ಲೇಖನ ‘ಕನ್ನಡ ನೆಲದ ಸಂವೇದನೆ’ ಎನ್ನುವದು. “ಸಮಕಾಲೀನ ಬದುಕಿನಲ್ಲಿ ನಡೆಯುವ ತಲ್ಲಣಗಳ ಚಿತ್ರಣವಿದು . ಹಳ್ಳಿಯೊಂದರ ಬದುಕಿನ ಸುತ್ತ ನಡೆಯುವ ಜಾಗತೀಕರಣದ ಹೆಸರಿನಲ್ಲಿ ನಿಸರ್ಗವನ್ನು ನಾಶ ಮಾಡುವದು. ಅಭಿವೃದ್ಧಿಯ ಹೆಸರಿನಲ್ಲಿ ಈ ನೆಲದ ಸತ್ವವನ್ನೇ ಹೀರುತ್ತಿರುವ ಯೋಜನೆಗಳ ದುಷ್ಪರಿಣಾಮ, ಬಡವರ ಮೇಲೆ ಶ್ರೀಮಂತರು ನಡೆಸುವ ದೌರ್ಜನ್ಯ, ಕೊಲೆ ಅತ್ಯಾಚಾರ ಹೀಗೆ ಜೀವನದಲ್ಲಿ ನಡೆಯುವ ಅನೇಕ ವಿಚಾರಗಳನ್ನು ಇಲ್ಲಿ ಬರೆದಿದ್ದಾರೆ” ಎಂದು ಕಾದಂಬರಿಯ ಸಾರವನ್ನು ಹಿಡಿಯುವಲ್ಲಿ ಲೇಖಕಿ ಯಶಶ್ವಿಯಾಗಿದ್ದಾರೆ. ಶಿವಾಪೂರ ಕಂಬಾರರ ಸೃಜನಶೀಲತೆಯ ಕೇಂದ್ರ ಎನ್ನುವದನ್ನು ಸರಿಯಾಗಿಯೆ ಗ್ರಹಿಸಿದ ಲೇಖಕಿ ಅಲ್ಲಿನ ಮೌಲ್ಯಗಳು ಇಂದು ಎದುದರಿಸುತ್ತಿರುವ ತಲ್ಲಣಗಳು ಇವುಗಳ ಸುತ್ತಲೆ ಕಂಬಾರರು ಸುತ್ತುವದನ್ನು ಹೇಳುತ್ತಾರೆ. ನಾವು ಶಿವಾಪುರವನ್ನು ನಾಶ ಮಾಡಿ ಕನಕಪುರಿಯನ್ನು ಸ್ರೃಷ್ಟಿಸಲು ಹೊರಟಿರುವ ಆತಂಕವನ್ನು ಕಂಬಾರರು ತಮ್ಮ ಕಥೆ ಕಾದಂಬರಿಗಳ ಕಟ್ಟಿಕೊಡುವದನ್ನು ಲೇಖನ ಚೆನ್ನಾಗಿ ಹಿಡಿದಿಟ್ಟಿದೆ.

ಕೆಲವು ವಿಶಿಷ್ಟ ಕಥೆಗಳನ್ನು ಲೇಖಕರು ವಿಶ್ಲೇಷಣೆಗೊಳಪಡಿಸುತ್ತಾರೆ. ಅಂಥವುಗಳಲ್ಲಿ ಒಂದು ಅಬ್ಬಾಸ ರ ‘ಕೆರೆಯ ನೀರನು ಕೆರೆಗ ಚೆಲ್ಲಿ’ ಎನ್ನುವದು. ಪ್ರಸಿದ್ಧ ಕಥೆಗಾರ ಬಾಗಲಕೋಟೆಯ ಅಬ್ಬಾಸ ಮೇಲಿನಮನಿಯವರ ಈ ಕಥೆಯನ್ನು ವಿಶ್ಲೇಸಿದ ಲೇಖನ ‘ಕೆರೆಗಳ ಆಯುಷ್ಯ ಮುಗಿಯದಿರಲಿ’ ಎಂಬುದು. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ಕಥೆಯನ್ನು ಒಂದು ಕುಟುಂಬ ಸುತ್ತ ಕಥೆಗಾರ ಅಬ್ಬಾಸ ಅವರು ಹೆಣೆದುದನ್ನು ವಿಮರ್ಶಕರು ಇಲ್ಲಿ ವಿಶ್ಲೇಷಣೆ ಮಾಡಿದ್ದಾರೆ. “ಅಬ್ಬಾಸ ಅವರ ಜೀವನವನ್ನೇ ಬಸಿದು ಕಥೆ ಬರೆಯುವ ಅವರ ಕಥಾಲೋಕ ಬೆರಗುಗೊಳಿಸುತ್ತದೆ” ಎನ್ನುವ ಸಾಲು ಅಬ್ಬಾಸ ಅವರ ಕಥಾ ಸಾಹಿತ್ಯಕ್ಕೆ ಅಪ್ರತಿಮ ಗೌರವಸಲ್ಲಿಸಿದೆ.

ಬಾಗಲಕೋಟ ಜಿಲ್ಲೆಯ ಮತ್ತೊಬ್ಬ ಪ್ರಸಿದ್ಧ ಕವಿ, ಹೋರಾಟಗಾರ, ಪತ್ರಿಕಾಕರ್ತ ಚಿಂತಕ ಸಂಘಟಕ ಎಂದು ಹೆಸರಾದವರು ಶ್ರೀ ಎಸ್ಕೆ ಕೊನೆಸಾಗರ ಅವರು . ಅವರ ನಾಲ್ಕು ಕೃತಿಗಳ ಅವಲೋಕನ ವಿಮರ್ಶೆ ಇಲ್ಲಿರುವದು ಮಹತ್ವದ ಸಂಗತಿ. ಎರಡನೆಯ ಕವನ ಸಂಕಲನ ‘ಆ ಸಂಜೆ ಹೋದವರು’, ನಾಲ್ಕನೆಯ ಕವನ ಸಂಕಲನ ‘ಊರ್ಮಿಳೆಯ ಉರಿ’, ಮೂರು ಏಕಾಂಕ ನಾಟಕಗಳು ಮತ್ತು ಕೊನೆಸಾಗರ ಅವರ ವಿಶಿಷ್ಟ ಕೃತಿ ‘ಕನ್ನಡದ ಹೆಜ್ಜೆಗಳ ನೆರಳು’ ಹೀಗೆ ಈ ವಿಮರ್ಶಾ ಸಂಕಲನ ಸಂಖ್ಯೆ ಯ ದೃಷ್ಟಿಯಿಂದ ಹೆಚ್ಚಿನ ಲೇಖನಗಳು ಎಸ್ಕೆ ಕೊನೆಸಾಗರ ಅವರ ಸಾಹಿತ್ಯವನ್ನು ಕುರಿತದ್ದಾಗಿರುವದು ಮುಖ್ಯವಾಗಿದೆ. ನನ್ನ ಪ್ರಕಾರ ಎಸ್ಕೆ ಕೊನೆಸಾಗರ ಅವರ ಒಟ್ಟು ಸಾಹಿತ್ಯವನ್ನು ಶ್ರೀಮತಿ ಸಾರಂಗಮಠ ಅವರು ವಿಮರ್ಶೆಗೆ ಎತ್ತಿಕೊಂಡಿರು ವದು ಯೋಗ್ಯವಾದ ಕಾರ್ಯ.

ನಮ್ಮ ಸುತ್ತಲಿನ ಪ್ರತಿಭಾವಂತರನ್ನು ಅವರ ಕಾವ್ಯಕ್ಕೆ ಗೌರವ ಸಲ್ಲಿಸಲೆಂದಷ್ಟೇ ಅಲ್ಲ, ಅದರಿಂದ ಇಂದಿನ ಯುವ ಬರಹಗಾರರು ಪಡೆದುಕೊಳ್ಳಬೇಕಾದ ಪ್ರೇರಣೆಗಾಗಿ ನಮ್ಮ ವಿಮರ್ಶೆ ಚರ್ಚಿಸಬೇಕಾಗುತ್ತದೆ. ನಮ್ಮ ಚರ್ಚೆಯ ಮೂಲಕ ಆ ಹಿರಿಯರಿಗೆ ಆಗಬೇಕಾದುದು ಏನೂ ಇರುವದಿಲ್ಲ ವಾದರೂ ಅವರ ಹೆಜ್ಜೆಗಳು ಮುಂದಿನವರಿಗೆ ಮಾರ್ಗ ತೋರುತ್ತವೆ. ಅಂತಹ ದಿಟ್ಟ ಮಾರ್ಗ ತುಳಿಯುತ್ತಾ ಬಂದ ಕವಿ ಎಸ್ಕೆ ಕೊನೆಸಾಗರ ಅವರು . ಅವರ ‘ಊರ್ಮಿಳೆಯ ಉರಿ’ ಸಂಕಲನದಲ್ಲಿ ಪುರಾಣದ ಸ್ತ್ರೀ ಪಾತ್ರಗಳ ಜೊತೆಗೆ ಕವಿ ಮಾಡಿರುವ ಅನುಸಂಧಾನವನ್ನು ವಿಮರ್ಶಕರು ಎತ್ತಿ ಹೇಳಿದ್ದಾರೆ. “ಇಲ್ಲಿನ ಕವನಗಳು ಸ್ವಗತದಲ್ಲಿ ಮಾತನಾಡಿವೆ . ಮನಸಿನ ರಂಗಸ್ಥಳದಲ್ಲಿ ಅಸ್ಪಷ್ಟವಾಗಿ ಬೆಳೆಯುತ್ತಿದ್ದ ಪೌರಾಣಿಕ ಹೆಣ್ಣು ಪಾತ್ರಗಳನ್ನು ಇಲ್ಲಿನ ತಮ್ಮ ಕವಿತೆಗಳಲ್ಲಿ ಸ್ಪಷ್ಟವಾಗಿ ಗುರುತಿಸುತ್ತ ಆಪ್ತ ಸಂವಾದವನ್ನು ಕವಿ ನಡೆಸಿರುವದನ್ನು” .. ಊರ್ಮಿಳೆ, ಶಕುಂತಲೆ, ರಂಭಾ ಹೀಗೆ ಪುರಾಣದ ಪುಣ್ಯರೂಪಿಗಳೆಲ್ಲ ತಮ್ಮ ದಗ್ಧ ಮನಸ್ಸಿನ ಒಳತೋಟಿಗಳನ್ನು ನಿಸೂರಾಗಿ ತೋಡಿಕೊಳ್ಳುತ್ತ ಎಸ್ಕೆಯವರ ಕವಿತೆಗಳ ಮೂಲಕ ಓದುಗರಿಗೆ ಆಪ್ತರಾಗುತ್ತಾರೆ.” ಎಂದು ಕವಿತೆಗಳನ್ನು ಕುರಿತು ವಿವರಿಸಿದ್ದಾರೆ.

ಎಸ್ಕೆಯಯವರ ಎರಡನೆಯ ಕವನ ಸಂಕಲನ ‘ಆಸಂಜೆ ಹೋದವರು’ ವನ್ನು ಕುರಿತೂ ಇಲ್ಲಿ ಒಂದು ವಿಮರ್ಶಾ ಲೇಖನವಿದೆ. ಹಾಗೆಯೇ ಎಸ್ಕೆ ಕೊನೆಸಾಗರ ಅವರ ಮೂರು ಏಕಾಂಕ ನಾಟಕಗಳನ್ನು ಚರ್ಚೆಗೆಳಸಿದ್ದಾರೆ,. ೧೯೯೩ ರಲ್ಲಿ ಕರ್ನಾಟಕ ಸರ್ಕಾರ ಕನ್ನಡ ಜಾಗೃತಿ ವರ್ಷ ಎಂದು ಸಾರಿದಾಗ ಏಳು ಜನರು ಸೇರಿ ಹುನಗುಂದದಿ೦ದ ಬೆಂಗಳೂರಿಗೆ ೨೧ ದಿನ ಕಾಲ್ನಡಿಗೆಯಲ್ಲಿ ಕನ್ನಡಕ್ಕಾಗಿ ನಡೆದ ‘ಕನ್ನಡದ ಹೆಜ್ಜೆಗಳ ನೆರಳು’ ಆ ೨೧ ದಿನಗಳ ಅನುಭವಗಳ ಡೈರಿ ಸಂಪುಟದ ಪರಿಚಯ ಇಲ್ಲಿ ಲೇಖನವಾಗಿದೆ.

ಇನ್ನು ಎರಡು ಲೇಖನಗಳು ಹುನಗುಂದದ ಹಿರಿಯ ಕವಿ ಸಿದ್ದಲಿಂಗಪ್ಪ ಬೀಳಗಿಯವರ ಕವಿತೆ ಕುರಿತಾಗಿವೆ. ಒಂದು ಅವರ ಹೈಕು ಸಂಕಲನ ಕುರಿತು ಬರೆದ ವಿಮರ್ಶಾ ಲೇಖನ, ಮತ್ತು ಬೀಳಗಿಯವರ ಎರಡನೆಯ ಕವನ ಸಂಕಲನ ‘ಅವನಿಗೊಂದು ಪತ್ರ’ ಸಂಕಲನಕ್ಕೆ ಬರೆದ ಮುನ್ನುಡಿಯ ಮಾತುಗಳೂ ಇಲ್ಲಿ ಸೇರಿವೆ.

ಹಿರಿಯ ದಲಿತ ಕವಿ ಸತ್ಯಾನಂದ ಪಾತ್ರೋಟರು ಜಾಜಿ ಮಲ್ಲಿಗೆಯ ಕವಿ ಎಂದೇ ಹೆಸರಾದವರು. ಅವರು ಅವ್ವನ ಕುರಿತು ಬರೆದ ಕವಿತೆ ‘ತಾನು ಕವಿತೆಯಾಗಿ ನನ್ನನ್ನು ಕವಿತೆಯಾಗಿಸಿದಳು’ ಎಂಬ ವಿಶಿಷ್ಟ ಕವಿತೆಯ ವಿಮರ್ಶೆ ಇಲ್ಲಿದೆ. ಅವ್ವ ತನ್ನನ್ನು ಸುಟ್ಟುಕೊಂಡು ಬದುಕನ್ನು ಬೆಳಗಿದ ರೀತಿಯನ್ನು ಪಾತ್ರೋಟ ಅವರು ಹಿಡಿದಿಟ್ಟಿರುವ ರೀತಿಯನ್ನು ವಿಮರ್ಶೆ ಗ್ರಹಿಸಿದೆ.. ಪ್ರಾಯೋಗಿಕ ವಿಮರ್ಶೆಯ ಶ್ರೇಷ್ಠ ಮಾದರಿಗಳು ಈ ಎಲ್ಲ ಲೇಖನಗಳು.

ದೊರೆ ಈಡಿಪಸ್ ಒಂದು ಟಿಪ್ಪಣಿ, ರ‍್ಯಾಂಡಿಪಾಶ್ -ದಿ ಲಾಸ್ಟ ಲೆಕ್ಚರ್ ಎರಡೂ ಕಿರಿದಾದರೂ ವಿಶಿಷ್ಟ ಲೇಖನಗಳು. ಹೆಸರೇ ಹೇಳುವಂತೆ ಅವು ಟಿಪ್ಪಣಿಗಳಾದರೂ ಅನೇಕ ಒಳನೋಟಗಳು ಅಲ್ಲಿವೆ. ಹಾಗೆಯೇ ಹುನಗುಂದದ ಇತಿಹಾಸವನ್ನು ಮಾಹಿತಿಗಳನ್ನು ನೀಡುವ ಲೇಖನ ಹೊನ್ನದಿಪ್ತಿ ಸಂಚಿಕೆಯ ನೆನಪಿನಲ್ಲಿ ಬರೆದುದಾಗಿದೆ.

ಬಹಳ ವಿಶಿಷ್ಟವಾದ ಲೇಖನ ಡಾ.ನಾಗರಾಜ ನಾಡಗೌಡ ಅವರ ಸಂಶೋಧನ ಗ್ರಂಥ ‘ವಚನ ಸಾಹಿತ್ಯದ ಮೇಲಿನ ಟೀಕು ಸಾಹಿತ್ಯ’ ಕುರಿತದ್ದು. ಈ ಕೃತಿಯನ್ನು ‘ವಾಗರ್ಥ ಗಣಿ’ ಎಂದು ವಿಮರ್ಶಕರು ಕರೆದುದು ಡಾ.ನಾಗರಾಜ ಅವರ ಸಂಶೋಧನೆಗೆ ಸಂದ ಪ್ರಶಸ್ತಿ. “ಡಾ ನಾಗರಾಜ ನಾಡಗೌಡರು ಐದು ವರ್ಷಗಳ ತಮ್ಮ ಸಂಶೋಧನಾ ಯಾಣದಲ್ಲಿ ಹೊರತಂದ ಅನರ್ಘ್ಯ ರತ್ನ” ಎಂದು ಈ ಲೇಖನವನ್ನು ಸಾರಂಗಮಠ ಅವರು ವ್ಯಾಖ್ಯಾನಿಸಿದ್ದು ಸರಿಯಾಗಿಯೆ ಇದೆ. ಸಂಗಮ ಸಂಭ್ರದ ನೆನಪಲ್ಲಿ ಬಂದ ಕಾವ್ಯ ಸಂಚಯವನ್ನು ಒಂದು ಲೇಖನ ಅವಲೋಕಿಸಿದೆ.

ಹುನಗುಂದದ ಸರಕಾರಿ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿರುವ ಪ್ರವೃತ್ತಿಯಿಂದ ಕವಿಯಾಗಿರುವ ಶ್ರೀ ಶರಣಪ್ಪ ಹೂಲಗೇರಿಯವರು ಈ ಭಾಗದ ಇತ್ತೀಚಿನ ಕವಿಗಳಲ್ಲಿ ಎದ್ದು ಕಾಣುವ ಹೆಸರು. ಅವರ ‘ಮಾಡರ್ನ ಮಾನವರು’ ಸಂಕಲನದ ಚೇತೋಹಾರಿ ಸಂಗತಿಗಳನ್ನು ಇಲ್ಲಿ ಮುನ್ನುಡೊಯಲ್ಲಿ ಚರ್ಚಿಇಸದ್ದಾರೆ. ಅವರ ಈ ಸಂಕಲನವನ್ನು “ಅತ್ಯಂತ ಸರಳ ಶೈಲಿಯ ಬಿಗಿ ಬಂಧನವಲ್ಲದ ಕವನಗಳು” ಎಂದಿದ್ದಾರೆ.

ಗುರು ಹಿರೇಮಠ ಅವರ ಚುಟುಕು ಸಂಕಲನದ ವಿಮರ್ಶೆ ಕೂಡ ಇಲ್ಲಿದೆ. ಕೊನೆಯಲ್ಲಿ ಎಸ್ಕೆ ಕೊನೆಸಾಗರ ಅವರ ಎರಡು ಕವನ ಸಂಕಲನಗಳ ಬಗೆಗೆ ಬರೆದ ಚಿಕ್ಕ ಟಿಪ್ಪಣಿಗಳು, ಹಾಗೆಯೇ ಜಗದೀಶ ಹಾದಿಮನಿಯವರ ‘ಪ್ರೇಮಮಯಿ’ ಕಾವ್ಯಕ್ಕೆ ಬರೆದ ಒಂದು ಟಿಪ್ಪಣಿ ಕೂಡ ಇದೆ.

ಇಲ್ಲಿನ ಕೆಲವು ಲೇಖನಗಳು ಅವರ ಸುತ್ತಲಿನ ಪ್ರದೇಶದ ಸಾಹಿತಿಗಳನ್ನು ಕುರಿತೇ ಇವೆ. ಇವು ನನಗೆ ಬಹಳ ಮುಖ್ಯ ಲೇಖನಗಳು ಎನಿಸುತ್ತವೆ. ನನ್ನ ಸುತ್ತ ಯಾರು ಏನು ಬರೆಯುತ್ತಿದ್ದಾರೆ ಎಂಬುದನ್ನು ನಾವು ಗುರುತಿಸದೇ ಹೋದರೆ ಆ ಲೇಖಕನ ಬರಹಕ್ಕೆ ನ್ಯಾಯ ಸಲ್ಲದೇ ಹೋಗುತ್ತದೆ. ವಿಮರ್ಶಾ ಶಾಲೆಯ ಕೆಲವರಂತೂ ಇದೀಗ ತಾನೇ ಬರೆಯುತ್ತಿರುವ ಲೇಖಕರನ್ನು, ಗ್ರಾಮಾಂತರ ಪ್ರದೇಶ ಲೇಖಕರನ್ನು ಹೆಸರೂ ಕೂಡ ಹೇಳಲು ಹೋಗುವದಿಲ್ಲ. ಈ ಸಂದರ್ಭದಲ್ಲಿ ನಮ್ಮದೇ ಸುತ್ತ ವಿಮರ್ಶೆಯ ಘನತೆಯನ್ನು ಎತ್ತಿ ಹೇಳುವ ಲೇಖಕರು ಮುಂದೆ ಬಂದ ಆ ಕಾರ್ಯ ಮಾಡಬೇಕಾಗುತ್ತದೆ. ಅದನ್ನು ಜಗತ್ತಿಗೆ ಎತ್ತಿ ಪರಿಚಯಿಸುವದು, ಗುಣ ದೊಷಗಳನ್ನು ಹೇಳಿ ಲೇಖಕನ ಬೆಳವಣಿಗೆಗೆ ಸಹಕರಿಸುವದು ವಿಮರ್ಶಕರು ಮಾಡಬೆಕಾದ ಬಹು ದೊಡ್ಡ ಕಾರ್ಯ ಎಂಬುದು ನನ್ನ ಭಾವನೆ. ಹಾಗೆಂದು ವಿಮರ್ಶಕ ಮಹಾ ಜ್ಞಾನಿ, ಆತ ಇತರರ ಬರಹವನ್ನು ತಿದ್ದುವವ ಎಂಬ ಹುಂಬ ತಿಳಿವಳಿಕೆಯೂ ಅಲ್ಲ. ವಿಮರ್ಶೆಯ ವಿನಯ ಸದಾ ದೊಡ್ಡದು. ಇರುವದನ್ನು ಇರುವಂತೆ ಹೇಳಿದ್ದೇನೆ ಎಂಬ ನ್ಯಾಯದ ತಕ್ಕಡಿಯಲ್ಲಿ ಬರೆಯುತ್ತ ಹೋಗಬೇಕಾಗುತ್ತದೆ. ಇಲ್ಲಿನ ಬಹಳಷ್ಟು ಲೇಖನಗಳು ಆ ಕಾರ್ಯವನ್ನು ಮಾಡಿರುವದರಿಂದ ಶ್ರೀಮತಿ ಸಾರಂಗಮಠ ಅವರು ವಿಮರ್ಶಕರಾಗಿ ಅವರ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎನಿಸುತ್ತದೆ. ಆದರೆ ಇದು ನಾವು ವಿಮರ್ಶಕರಿಂದ ಬಂದ ಅತ್ಯಲ್ಪ ಕಾರ್ಯ. ಬರೆಯಬೇಕಾದುದು, ನಮ್ಮ ಲೇಖಕರ ಸಾಹಿತಿಗಳ ಬರಹವನ್ನು ಎತ್ತಿ ಜಗತ್ತಿಗೆ ಪರಿಚಯಿಸಬೇಕಾದುದು ಸಾಗರದಷ್ಟಿದೆ. ಅಂಥಹ ಕಾರ್ಯ ನಮ್ಮ ವಿಮರ್ಶಕರಿಗಾಗಿ ಕಾದಿದೆ.

ಲೇಖಕರ ಬಹುಶ್ರುತತೆ. ಅಪಾರ ಓದಿನ ಜ್ಞಾನ , ಅದನ್ನು ಸುಸಂಗತಗೊಳಿಸಿಕೊ೦ಡು ಹೊಂದಿಸುವ ಪರಿ ಇವು ಸಾರಂಗಮಠ ಅವರ ವೈಶಿಷ್ಟ್ಯಗಳು. ವಿಮರ್ಶೆ ಅಷ್ಟು ಬೇಗ ದಕ್ಕುವ ಬರಹವಲ್ಲ. ಅದು ಮುಳ್ಳಿನ ಹಾದಿ. ಯಾರನ್ನೋ ಮೆಚ್ಚಿಸಲು, ಯಾರನ್ನೋ ಬೇಕಂತಲೇ ತೆಗಳಲು ವಿಮರ್ಶೆ ಬರೆಯು ವದಲ್ಲ. ಅದು ನಾಯಪೀಠ. ಅಲ್ಲಿ ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಸಾಕ್ಷಿಕರಿಸುವ ಪ್ರಮನಿಕತೆ ಇರಬೆಕು. ಅಲ್ಲಿ ಲೇಖಕ ಕೇವಲ ಕೃತಿಗೆ ನ್ಯಾಯ ಒದಗಿಸಬೇಕೆ ಹೊರತು ತನು ಮುಂದೆ ಬರುವ ಕೆಲಸ ಮಾಡಬಾರದು. ಈ ಎಲ್ಲ ಗುಣಗಳು ಸಾರಂಗಮಠ ಅವರ ಕೃತಿಯಲ್ಲಿ ಕಣಿಸುವದು ಅವರ ಓದು ಮತ್ತು ಬರಹದ ಬಗ್ಗೆ ಗ್ವರವ ಮೂಡಿಸುತ್ತವೆ.

ಇಂದಿನ ಲೇಖಕರು ಅಷ್ಟಾಗಿ ಒಲಿಯದ ಬರಹ ವಿಭಾಗವನ್ನು ಆಯ್ದುಕೊಂಡು ಅದರಲ್ಲಿ ಉತ್ತಮವಾದುದನ್ನೇ ನೀಡುತ್ತಿರುವ ಅವರು ಇನ್ನಷ್ಟು ಇನ್ನಷ್ಟು ಬರೆಯಲಿ ತನ್ಮೂಲಕ ನಮ್ಮ ಭಾಗದ ಲೇಖಕರಿಗೆ ನ್ಯಾಯ ದೊರಕಲಿ.

‍ಲೇಖಕರು avadhi

March 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: