ವೆಂಕಟೇಶ ಪಿ ಮರಕಮದಿನ್ನಿ
ಕುಂತಿತ್ತು ಬಗಲ ಚೂಟಿತ್ತು ತೊಗಲ
ಇನ್ನೇನ ಹಿಡಿಬೇಕು ಹೆಂಗಾನ ಪಡಿಬೇಕು
ಅನ್ನದರಾಗ
ಊರಾಡಿ ಬಂತು ಹಾರಾಡಿ ಬಂತು ಕವಿತೆ
ಉತ್ತತ್ತಿ ಕಾಯಾಗಿ ಎತ್ತೆತ್ತ ಬಾಯಾಗಿ
ಕೈಯಾಗ ಇರುವಾಗ ಮೈಯಾಗ ಬರುವಾಗ
ಏನಾತೋಏನೋ
ತೇರಿಗೆ ಬಿತ್ತು ದಾರಿಗೆ ಬಿತ್ತು ಕವಿತೆ
ಯಾರ್ಯಾರೊ ತೋಡಿ ನೀರಾದ ಒರತಿ
ನೀರಮುಂದ ನೀರಡಿಸಿ ನಿಂತ್ರೂನು ಸರತಿ
ಬರಲಿಲ್ಲ ಪಾಳಿ
ಮಳಿಯಾಗಿ ಬಂತು ಹೊಳಿಯಾಗಿ ಬಂತು ಕವಿತೆ
ಸಿಗಲಿಲ್ಲ ಖೂನ ಯಾರ್ಹೇಳು ನೀನ
ಯಾವತ್ತೂ ನೋಡಿಲ್ಲ ಏನೇನೂ ಗೊತ್ತಿಲ್ಲ
ಹಿಂಗನಸೊವಾಗ
ಹೆಸರಾಗಿ ಬಂತು ಸುಸುರಾಗಿ ಬಂತು ಕವಿತೆ

ಅವ್ವಿಲ್ಲ ಅಪ್ಪಿಲ್ಲ ಊಇಲ್ಲ ಆಇಲ್ಲ
ದಾರ್ಯಾಗ ನಿಂತಿತ್ತೊ ಏನೇನೋ ಅಂತಿತ್ತೊ
ಕರಿಲಿಲ್ಲ ನಾನು
ಹಿಂದಿಂದ ಬಂತು ಒಂದೊಂದ ಬಂತು ಕವಿತೆ
ಆಗಿತ್ತು ಈಗಿಲ್ಲ ತಾಳಿಲ್ಲ ಮೇಳಿಲ್ಲ
ಸಾಕತೋ ಎಪ್ಪ ಹೋಗ್ತಿನಿ ಗಪ್ಪ
ಇನ್ನೇನು ಹೊಂಡಾಗ
ಊರಾಡಿ ಬಂತು ಹಾರ್ಯಾಡಿ ಬಂತು ಕವಿತೆ






0 Comments