ಕತೆಗಳನ್ನು ಹೇಳಿಕೊಳ್ಳೋಣ, ಬನ್ನಿ…

ಎಂ ಆರ್ ಕಮಲ

ಬಹಳ ಜೋಪಾನವಾಗಿ ನಾವಿಟ್ಟುಕೊಂಡಿರುವ ವಸ್ತುಗಳು ತೀರಾ ಸಂಬಂಧವಿಲ್ಲದವರಿಗೆ ಸಿಕ್ಕರೆ ಏನಾಗಬಹುದು? ಬಹುಶಃ ಅವೆಲ್ಲವನ್ನು ಕಸದ ಬುಟ್ಟಿಗೆ ಎಸೆಯಬಹುದು. ಒಬ್ಬರ ಕಸ ಮತ್ತೊಬ್ಬರಿಗೆ ಕಸವರ (ಚಿನ್ನ)! ಈ ವಸ್ತುಗಳಾದರೂ ಸುಸ್ಥಿತಿಯಲ್ಲಿರುತ್ತವೆಯೇ ಎಂದರೆ ಖಂಡಿತ ಇಲ್ಲ. ಹೆಚ್ಚಿನವು ಹರಕು ಮುರುಕುಗಳೇ. ಬಟ್ಟೆಯಾದರೆ ಎಳೆ ಬಿಟ್ಟೋ , ಹಿಸಿದೋ, ಅಂಚು ಹರಿದೋ ಹೋಗಿರುತ್ತದೆ. ವಸ್ತುಗಳಾದರೆ ಬಣ್ಣ ಕಳಕೊಂಡು ಮುರಿದೇ ಹೋಗಿರುತ್ತದೆ. ಆದರೂ ಅವುಗಳ ಮೇಲೆ ಇನ್ನಿಲ್ಲದ ಮೋಹ!

ಆಫ್ರಿಕನ್-ಅಮೇರಿಕನ್ ಕವಿ ಆಲೀಸ್ ವಾಕರ್ ತನ್ನದೊಂದು ಕವಿತೆಯಲ್ಲಿ ತಾನು ಕಾಪಾಡಿಕೊಳ್ಳುವ ಒಡೆದ, ಮುರಿದ ( `I Will Keep broken things ‘ ) ವಸ್ತುಗಳ ಬಗ್ಗೆ ಹೇಳುತ್ತಾಳೆ. ಈ ವಸ್ತುಗಳನ್ನು ಇಡಲು ಆಕೆ ಮನೆಯ ಮೂಲೆಯಲ್ಲೊಂದು ಕಪಾಟನ್ನೇ ಇಟ್ಟುಕೊಂಡಿದ್ದಾಳೆ. ಗುಲಾಮಿ ಮಾರುಕಟ್ಟೆಯಲ್ಲಿಟ್ಟಿರುತ್ತಿದ್ದ ಬುಟ್ಟಿ, ಯಾವುದೋ ಮಡಕೆ ಚೂರು ಎಂಥೆಂಥವೋ. ಅವನ್ನೆಂದೂ ಸರಿಪಡಿಸಬೇಕಿಲ್ಲ, ಉಪಯೋಗಿಸಲೂ ಬೇಕಿಲ್ಲ. ಆದರವು ಬೇಕು. ಅವುಗಳೊಂದಿಗೆ ಯಾವುದೋ ಗಾಢ, ಗೂಢ ನೆನಪುಗಳು ತುಂಬಿಕೊಂಡಿವೆ. ಅಲೀಸ್ ಕವಿತೆ ಅಷ್ಟಕ್ಕೇ ಮುಗಿಯದೆ ಮತ್ತಷ್ಟು ಅರ್ಥ ವಿನ್ಯಾಸಗಳನ್ನು ಪಡೆಯುತ್ತ ಹೋಗುತ್ತದೆ. ಕಪಾಟಿನಲ್ಲಿ ವಸ್ತುಗಳೊಂದಿಗೆ ತಾನು ಕಳೆದುಕೊಂಡ ನಿರಾಳ ನಗುವನ್ನು, `ನೋವಿನ ಯಾತ್ರಿಕ’ಳನ್ನು ಸಹ ಇಟ್ಟುಕೊಂಡಿದ್ದೇನೆ ಎನ್ನುತ್ತಾಳೆ. ಹಾಗೆ ನೋಡಿದರೆ ಕವಿಯೂ ಕೂಡ ಅನೇಕ ಬಗೆಯಲ್ಲಿ ಮುರಿದ ವಸ್ತುವೇ!

ಈ ಮುರಿದ ವಸ್ತುಗಳೊಂದಿಗೆ ಬೆಸೆದುಕೊಂಡಿರುವ ನೆನಪುಗಳು ಮಾತ್ರ ಕೆಲವೊಮ್ಮೆ ನೋವು ತಂದರೂ ಬದುಕಿಗೆ ಚೆಲುವು, ಭರವಸೆಯನ್ನು ತುಂಬುತ್ತದೆ ಎನ್ನುವುದೇ ವಿಶೇಷ. ಈ ಕಾರಣಕ್ಕೆ ಆ ವಸ್ತುಗಳಿಗೆ ಅಲೀಸ್ ಕೃತಜ್ಞಳಾಗಿದ್ದಾಳೆ. ಹಾಗೆ ನೋಡಿದರೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲೋ ಅಥವಾ ಎದೆಯಲ್ಲೋ ಇಂತಹದ್ದೊಂದು ಕಪಾಟನ್ನು ಹೊಂದೇ ಇರುತ್ತಾರೆ. ನಾನಂತೂ ಕಪಾಟಿರಲಿ, ನನ್ನ ಬಾಲ್ಯದ, ಆದರೆ ಈಗ ಮುರಿದು ಹೋಗಿರುವ ಮನೆಯನ್ನೇ ಹೊತ್ತು ಓಡಾಡುತ್ತಿರುತ್ತೇನೆ. ಅಲ್ಲಿಯ ಬಾಗಿಲ ಮೂಲಕವೇ ಇಲ್ಲಿ ಬೆಳಕನ್ನು ಪಡೆಯುತ್ತಿರುತ್ತೇನೆ. ಇಲ್ಲಿ ಕೊಂಡ ಬಟ್ಟೆಗಳನ್ನು ಅಲ್ಲಿಯ ಮುರಿದ ಮರದ ಬೀರುವಿನಲ್ಲಿ ಜೋಡಿಸುತ್ತಿರುತ್ತೇನೆ.

ಮೊನ್ನೆ ಹೀಗಾಯಿತು. ದೊಡ್ಡದೊಂದು ಡಬ್ಬಿಯಲ್ಲಿ ಇಟ್ಟು ಕೊಂಡಿರುವ ಕುಚ್ಚು, ಚೌರಿ, ಕಾಗದದ ಮಲ್ಲಿಗೆ, ಹೇರ್ ಪಿನ್ ಇತ್ಯಾದಿಗಳನ್ನು ಜೋಡಿಸಿಡುತ್ತಿದ್ದೆ. ಈ ಎಲ್ಲ ವಸ್ತುಗಳು ಹೆಚ್ಚು ಕಮ್ಮಿ ಮೂವತ್ತೈದು ವರ್ಷಗಳಷ್ಟು ಹಳೆಯವು. ಕೆಲವು ಪಿನ್ನುಗಳು ಬಣ್ಣ ಬದಲಿಸಿವೆ, ಸಾಮಾನ್ಯವಾಗಿ ಚೌರಿಯ ಜೊತೆ ಹೆಣೆಯುವ ಕುಚ್ಚಿನಲ್ಲಿ ಮೂರು ಗೊಂಡೆಗಳಿರುತ್ತವೆ. ಅದರಲ್ಲಿ ಒಂದು ಗೊಂಡೆ ಕಿತ್ತೇ ಹೋಗಿದೆ. ಕಾಗದದ ಮಲ್ಲಿಗೆ ಮಾಸಲಾಗಿದೆ. ಚೌರಿಯು ಗಂಟು ಕಟ್ಟಿಕೊಂಡಿದೆ. ಡಬ್ಬಿಯಲ್ಲಿಟ್ಟುಕೊಂಡಿರುವ ಒಂದು ಸಣ್ಣ ಹಾಳೆ ತುದಿ ಮಡಿಸಿಕೊಂಡಿದೆ. ಅದು ನೃತ್ಯ ಗೆಳತಿ ವೀಣಾಳ ಬರವಣಿಗೆ. ಮೇಡಂ ಹೇಳಿದ್ದನ್ನು ಪ್ರತಿಯೊಬ್ಬರಿಗೂ ಬರೆದುಕೊಟ್ಟಿದ್ದಾಳೆ. ಪ್ರತಿ ನೃತ್ಯ ಕಾರ್ಯಕ್ರಮದಲ್ಲಿ ತಪ್ಪದೇ ತರಬೇಕಾದ ವಸ್ತುಗಳ ಚೀಟಿ. ಆ ಚೀಟಿಗೆ ಅನುಗುಣವಾಗಿಯೇ ಡಬ್ಬಿಯಲ್ಲಿ ವಸ್ತುಗಳನ್ನು ತುಂಬಿಕೊಂಡಿದ್ದೇನೆ. ಚೌರಿ, ಗೊಂಡೆಯಿರುವ ಕುಚ್ಚು, ಒಂದು ಮೀಟರ್ ಕಪ್ಪು ಕಾಟನ್ ದಾರ, ಎರಡು ಡಜನ್ ಚಿಕ್ಕ ಹೇರ್ ಪಿನ್ನುಗಳು, ಎರಡು ಡಜನ್ ಸೇಫ್ಟಿ ಪಿನ್ನುಗಳ ಜೊತೆ ಚಿನ್ನದ ಬಣ್ಣದ ಒಂದು ಡಜನ್ ಪುಟ್ಟ ಸೇಫ್ಟಿ ಪಿನ್ನುಗಳು, ಜುಮುಕಿ, ಓಲೆ, ಮಾಟಿ, ಎರಡು ಡಜನ್ ಬಳೆಗಳು(ಉಮಾ ಗೋಲ್ಡ್ ), ಬಿಳಿ ಮತ್ತು ಕಪ್ಪು ಬಣ್ಣದ ಹೊಲಿಯುವ ದಾರ, ಸೂಜಿ, ಒಂದು ಚಿಕ್ಕ ಕತ್ತರಿ. ಮುಂದಿನಿಂದ ತೆಗೆಯಬಹುದಾದ ಬಟ್ಟೆ. (ಹೇರ್ ಸ್ಟೈಲ್ ಮಾಡಿದ ಮೇಲೆ ಉಡುಪನ್ನು ಸಾಮಾನ್ಯವಾಗಿ ಧರಿಸುವುದರಿಂದ ಅದು ಕೆಡಬಾರದು ಎನ್ನುವ ಉದ್ದೇಶ) ಮತ್ತು ಚಿನ್ನವನ್ನು ಹಾಕಿಕೊಳ್ಳಬಾರದು.

ಇದನ್ನು ನೋಡುತ್ತಾ ನೋಡುತ್ತಾ ನನಗನ್ನಿಸಿದ್ದನ್ನು ನಿಮಗೆ ಹೇಳಲೇ ಬೇಕಲ್ಲ! ಇವೆಲ್ಲ ಡಬ್ಬಿಯಲ್ಲಿ ಮಾತ್ರ ಇಟ್ಟಿರಬಹುದಾದ ವಸ್ತುಗಳೇ, ನೆನಪುಗಳೇ? ಮುಂದೆ ನನ್ನ ಮಗನಿಗೆ ಅಮ್ಮ ತುಂಬಿಕೊಂಡಿರುವ `ಕಸ’ ಎನ್ನಿಸದೆ? ಆದರೆ ನನಗೆ ಇದರೊಂದಿಗೆ ಮೇಡಂ ನೆನಪಿಗೆ ಬರುತ್ತಾರೆ, ರಿಹರ್ಸಲ್ ಸಮಯದಲ್ಲಿ ಅವರು ಮಾಡಿಕೊಡುತ್ತಿದ್ದ ತಿಂಡಿ, ತೋರುತ್ತಿದ್ದ ಕಾಳಜಿ , ಬುದ್ಧಿ ಮಾತು, ಮಾಡುತ್ತಿದ್ದ ಕೇಶ ವಿನ್ಯಾಸ, ಮೇಷ್ಟ್ರು ಹೇಳಿ ಕೊಡುತ್ತಿದ್ದ ನೃತ್ಯ ಪಾಠ, ವೇದಿಕೆಯ ಮೇಲೆ ನಡೆಯುತ್ತಿದ್ದ ವಿಚಿತ್ರಗಳು ಎಲ್ಲವೂ. ನಾನೊಮ್ಮೆ ನೃತ್ಯ ನಾಟಕವೊಂದರಲ್ಲಿ ಎರಡು ನಿಮಿಷದಲ್ಲಿ ಬಟ್ಟೆ ಬದಲಿಸಬೇಕಿತ್ತು. ಅದನ್ನು ಹಿಂದು ಮುಂದಾಗಿ ಹಾಕಿಕೊಂಡು ವೇದಿಕೆಗೆ ಹೋಗಿದ್ದೆ. ಯಾರಿಗೆ ತಿಳಿಯಿತೋ ಇಲ್ಲವೋ ನನ್ನೊಂದಿಗೆ ನೃತ್ಯ ಮಾಡುತ್ತಿದ್ದವಳು ನನ್ನನ್ನು ನೋಡಿ ಅಭಿನಯಿಸುವುದನ್ನು ಬಿಟ್ಟು ನಗುತ್ತಲೇ ಇದ್ದಳು. ಒಂದೆರಡು ನಿಮಿಷದ ಪಾತ್ರವಾದ್ದರಿಂದ ಜನರ ಗಮನಕ್ಕೆ ಬರಲೇ ಇಲ್ಲ. ನಾನೀಗ ಅದನ್ನು ನೆನೆದು ಖುಷಿ ಪಡುತ್ತಿದ್ದೇನಲ್ಲ! ಉಳಿದವರ ಪಾಲಿಗೆ `ಕಸ’ವೆನಿಸಿದ್ದು ಇಷ್ಟು ಸಂತೋಷವನ್ನು ಕೊಟ್ಟಿತಲ್ಲ! ಅದಕ್ಕೇನು ಹೇಳುವುದು? ಈ ಚೌರಿಯೊಂದಿಗೆ ವಿಕ್ಟೊರಿಯಾ ಆಸ್ಪತ್ರೆಯ ಬಳಿ ನನಗೆ ಚೌರಿ ಮಾಡಿಕೊಡುತ್ತಿದ್ದವಳ ಗೋಳಿನ ಕತೆಯೂ ನೆನಪಿಗೆ ಬರುತ್ತದಲ್ಲ. ಈ `ಕಸ’ಗಳಲ್ಲಿ ಎಷ್ಟೊಂದು ಕತೆಗಳಿವೆ.

ಇವೆಲ್ಲವನ್ನೂ ಎಸೆದು ಬದುಕಲಾರೆ. ನಾನು ಕತೆಗಳನ್ನು ಹೇಳುತ್ತಿದ್ದ ಕುಟುಂಬದಲ್ಲಿಯೇ ಹುಟ್ಟಿ ಬೆಳೆದವಳು. ಮನೆಯಿಂದ ತೋಟಕ್ಕೆ ಹೋಗುವಾಗ ನಡೆದ ಸಣ್ಣ ಪುಟ್ಟ ಘಟನೆಗಳನ್ನು ನನ್ನ ತಂದೆ ಕತೆಯ ರೂಪದಲ್ಲಿ ಹೇಳುತ್ತಿದ್ದರು ಅಥವಾ ನಿಜಕ್ಕೂ ಅವುಗಳು ಕತೆಗಳಾಗಿದ್ದವೋ ತಿಳಿಯದು. ಮೊನ್ನೆ ತಾನೇ ನನ್ನನ್ನು ಹಿಂಬಾಲಿಸುತ್ತಿದ್ದ ನಾಯಿಗೆ ಸ್ನಾನ ಮಾಡಿಸಿದ, ಟೆರೇಸ್ ಮೇಲಿನಿಂದ ಇಳಿಸಿದ್ದ ಕತೆಯನ್ನು ನಿಮಗೆ ಹೇಳಿದ್ದೆ. ಒಳಗೆ ಯಾವುದೋ ಸಮಸ್ಯೆಯಿಂದ ನರಳುತ್ತಿದ್ದ ಆ ಪುಟ್ಟ ಮರಿ ಬಂದು ಬಾಗಿಲ ಬಳಿ ಬಿದ್ದು ಹೋಯಿತು. ಎರಡು ಮೂರು ದಿನ ಒಳಗಿಟ್ಟುಕೊಂಡು ಕಾಳನ ವಸ್ತುಗಳನ್ನು ಕೊಟ್ಟು ಆಟವಾಡಿಸಿದೆ. ಹಾಲು ಕುಡಿಸಿದೆ. ಆದರದು ಬದುಕಲಿಲ್ಲ. ಆಟವಾಡಲು ಕೊಟ್ಟ ವಸ್ತುಗಳು ಈಗ ನನ್ನ ಕಪಾಟಿಗೆ ಸೇರಿವೆ. ಆ ಹಳೆಯ ವಸ್ತುಗಳೊಂದಿಗೆ, ಕಾಳ ಮತ್ತು ಪುಟ್ಟ ಮರಿ ಜೀವಂತವಾಗಿದ್ದಾರೆ. ಅವು ತರುವ ನೆನಪುಗಳು ನೋವೋ, ನಲಿವೋ?

ವಸ್ತುಗಳನ್ನೇನೋ ನಿಜದ ಕಪಾಟಿನಲ್ಲೋ ಅಥವಾ ಎದೆಯ ಕಪಾಟಿನಲ್ಲೋ ನಾನಿಟ್ಟು ಬಿಡಬಹುದೇನೋ? ಆದರೆ ಅವು ಹೇಳುವ ಕತೆಗಳನ್ನು ಒಳಗಿಟ್ಟುಕೊಳ್ಳಲಾರೆ. ಅವು ನಿಮ್ಮ ಪಾಲಿಗೆ `ಕಸ’ವೇ ಆಗಿರಬಹುದು. ನನಗದು ಮುಖ್ಯವಲ್ಲ.

‍ಲೇಖಕರು avadhi

May 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: