ವಿವೇಕ ಶಾನ್‌ ಭಾಗ್‌ ಓದಿದ ʼದೇವ್ರುʼ

‘ಕೇಪಿನ ಡಬ್ಬಿ’ ಮೂಲಕ ಹೆಸರಾದ ಕಥೆಗಾರ, ಪತ್ರಕರ್ತ ಪದ್ಮನಾಭ ಭಟ್ ಶೇವ್ಕಾರ ಅವರ ಕಾದಂಬರಿ ಸಿದ್ಧವಾಗಿದೆ.

ಅಂಕಿತ ಪ್ರಕಾಶನ’ ಪ್ರಕಟಿಸಿರುವ ‘ದೇವ್ರು’ ಕಾದಂಬರಿಗೆ ವಿವೇಕ ಶಾನ್‌ ಭಾಗ್‌ ಬೆನ್ನುಡಿ ಬರೆದಿದ್ದಾರೆ. ಅದು ಇಲ್ಲಿದೆ.

ವಿವೇಕ ಶಾನ್‌ ಭಾಗ್‌

ವಲಸೆಯಿಂದ ಹುಟ್ಟುವ ಘರ್ಷಣೆ ಮತ್ತು ಅನುಸಂಧಾನ ಮನುಷ್ಯ ಚರಿತ್ರೆಯ ಒಡಲಲ್ಲಿದೆ. ನೆಲೆ ಹುಡುಕುತ್ತ ಹೊರಟವರ ಚಲನಶೀಲತೆಯು ಇಂದು ಧರ್ಮ, ದೇಶ, ಭಾಷೆ, ವರ್ಣ ಇತ್ಯಾದಿಗಳ ನೆಪದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಇಂಥ ಮುಖ್ಯ ಸಮಸ್ಯೆಯೊಂದರ ಬಹುಮುಖಗಳನ್ನು ಅದರೆಲ್ಲ ಸಂಕೀರ್ಣತೆಯೊಡನೆ ಹಿಡಿಯುವ ಮಹತ್ವಾಕಾಂಕ್ಷೆ ಈ ಕಾದಂಬರಿಗಿದೆ.

ಸಹ್ಯಾದ್ರಿ ತಪ್ಪಲಿನ ಹಳ್ಳಿಯೊಂದರ ಜೀವನವನ್ನು ಅದರ ಸೌಂದರ್ಯ, ಕ್ರೌರ್ಯ ಮತ್ತು ಕಟುವಾಸ್ತವತೆಯ ಹಿನ್ನೆಲೆಯಲ್ಲಿ ಶೋಧಿಸುತ್ತಲೇ ನಗರದ ಸಹವಾಸಗಳನ್ನೂ ಈ ಕಥನವು ಎದುರಿಗಿಡುತ್ತದೆ. ಆಧುನಿಕ ತಂತ್ರಜ್ಞಾನವು ನಮ್ಮೊಳಗೆ ಹುಟ್ಟಿಸಿರುವ ಹುಸಿ ತಿಳಿವಳಿಕೆಯ ಅಹಂಕಾರದ ಪುಗ್ಗೆಯನ್ನು ಒಡೆಯುತ್ತ, ಮನುಷ್ಯ-ಪ್ರಕೃತಿಯ ಸಂಬಂಧದ ಜಟಿಲತೆಯನ್ನು ಅರಿಯಲು ಅಗತ್ಯವಿರುವ ತಾಳ್ಮೆ, ಸಂಯಮ, ವಿನಯಗಳ ಮಹತ್ವವನ್ನು ಮನಗಾಣಿಸುತ್ತದೆ.

ವಿಶಾಲವಾದ ಹರಹಿನ ಕೃತಿಯುದ್ದಕ್ಕೂ ಕಾಣುವ ಸೂಕ್ಷ್ಮಜ್ಞತೆ, ಬದುಕಿನ ವಿಪರ್ಯಾಸಗಳನ್ನು ಕಾಣುವ ಎಚ್ಚರ, ನಿಲುವಿಗಾಗಿ ಹಾತೊರೆಯುವ ಆತುರವಿಲ್ಲದ ಬರವಣಿಗೆಯು ಸಶಕ್ತ, ಪ್ರತಿಭಾವಂತ ಕಾದಂಬರಿಕಾರನ ಬರುವನ್ನು ಸಾರುತ್ತಿದೆ.

ಸೇತುವೆ ಮುರಿದ ಕ್ಷಣದಲ್ಲಿ…

ಪದ್ಮನಾಭ ಭಟ್ ಶೇವ್ಕಾರ

ಇದನ್ನು ಬರೆಯಲು ಕೂಡುವ ಹೊತ್ತಿಗೆ, 

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೇಡ್ತಿ ನದಿ ಉಕ್ಕಿ, ನನ್ನೂರಿಗೂ ಹೊರಜಗತ್ತಿಗೂ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ನಡುಮಧ್ಯ ಮುರಿದುಬಿದ್ದಿದೆ. ಪ್ರತಿವರ್ಷ ಹೊಳೆ ಬಂದಾಗ ಆ ಸೇತುವೆ ಮೇಲೆ ನಿಂತು ನೋಡುವುದು, ಅದರ ಕಂಭಕ್ಕೆ ಹೊಳೆಯಲ್ಲಿ ತೇಲಿಬಂದ ದಿಮ್ಮಿಗಳು ಬಡಿದು ಕಂಪಿಸಿದಾಗ ಭಯಭೀತರಾಗುವುದು… ಎಷ್ಟೆಲ್ಲ ನೆನಪುಗಳು ಉಕ್ಕುತ್ತಿವೆ. ಮತ್ತೊಂದೆಡೆ ಪ್ರವಾಹದ ವಿವಿಧ ಚಿತ್ರ, ದೃಶ್ಯದ ತುಣುಕುಗಳು, ಉತ್ಸಾಹದಿಂದ ಕೊಡುತ್ತಿರುವ ವೀಕ್ಷಕ ವಿವರಣೆಯ ಪರಿಚಿತ ಧ್ವನಿಗಳು ಮೊಬೈಲ್‍ನೊಳಗೆ ಸಂದಣಿಗಟ್ಟಿ ಹೇಷಾರವಗೈಯುತ್ತಿವೆ…

ಕೆಂಪಗೆ ಹೊಳೆಹೊಳೆಯುತ್ತ ಹರಿಯುತ್ತಿರುವ ಹೊಳೆಯ ಸರೀ ಒಳಸುಳಿಯ ಜಾಗಕ್ಕೇ ನಮ್ಮನ್ನು ಕರೆದೊಯ್ದು ಬಿಡುವಂತೆ ಕಾಣುತ್ತಿರುವ ಭಗ್ನಸೇತುವೆಯ ಚಿತ್ರ, ನಿಗೂಢ ರೂಪಕವಾಗಿಯೂ, ಗಾಢ ವಾಸ್ತವವಾಗಿಯೂ ದಿಕ್ಕೆಡಿಸುತ್ತಿರುವ ಈ ಹೊತ್ತಿನಲ್ಲಿ…

ಒಂದು ಕೃತಿ ಬರೆದು ಮುಗಿಸಿದ ಮೇಲೆ ಬರೆದವನ ಮನಸಲ್ಲಿ ಹುಟ್ಟುವ ಭಾವ ಯಾವುದು? ಸಂತೋಷವೋ? ನಿರಾಳವೋ? ಹೆಮ್ಮೆಯೋ?

ಬಹುಶಃ ವಿಷಾದ… ತನ್ನೊಳಗೇ, ತನ್ನ ಭಾಗವಾಗಿಯೇ ತನ್ನಷ್ಟಕ್ಕೆ ಇದ್ದದ್ದು ಹರಿದು ಬೇರಾಗುತ್ತಿರುವ ವಿಷಾದ… ರಪಗುಟ್ಟಿ ಹೊಡೆಯುತ್ತಲೇ ಇರುವ ಅಲೆಗಳ ದೂರ ತಳ್ಳಲೂ ಆಗದೆ, ಬರಸೆಳೆದುಕೊಳ್ಳಲೂ ಆಗದೆ ಭರಿಸುತ್ತಲೇ ಇರುವ ದಡದ ರೇವಿನ ಮೌನ ವಿಷಾದ… ಮುಳ್ಳಿನ ಮೊನೆಯನ್ನು ಸೂಜಿತುದಿಯು ಮುಟ್ಟಿದ ಹಾಗೆ ಬರಹದ ಬೆರಳತುದಿಯಲ್ಲಿಯೇ ಬದುಕಿನ ಯಾವುದೋ ಆಳವನ್ನು ಸವರಿದಾಗ ಘಟಿಸುವ ಚುಳ್ಳನೆಯ ವಿಷಾದ… ಏಕಕಾಲದಲ್ಲಿ ಇಂದಿನಲ್ಲಿ ನಿಂತೇ ಮುಂದನ್ನು ಕಂಡೂ ಅತ್ತಲೇ ಸಾಗಬೇಕಾದ ವಿಷಾದ…

ಅಥವಾ

ಇದಾವುದೂ ಅಲ್ಲವೋ ಏನೋ…

ಅದನ್ನು ಇದೇ ಅಂತ ಹಿಡಿದು ತೋರಲು ಸಾಧ್ಯವಿದ್ದರೆ ಸಾಹಿತ್ಯ ಯಾಕೆ ಬೇಕು?

‍ಲೇಖಕರು Admin

October 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: