ಪಿ ಚಂದ್ರಿಕಾ ಅಂಕಣ – ಒಂದು ಸಲ ಮಗು ಅಳುವ ಸದ್ದು ಕೇಳಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

18

ಅಲೀಮಮ್ಮನಿಗೆ ಐವತ್ತೈದರ ಆಸುಪಾಸು ಅಥವಾ ಅರವತ್ತೇ ಇರಬಹುದೇನೋ? ಚಿಕ್ಕ ವಯಸ್ಸಿಗೇ ಮದುವೆಯಾಗಿದ್ದರಿಂದ ಜೀವನದ ಕಷ್ಟ ಸುಖಗಳನ್ನೆಲ್ಲಾ ಅನುಭವಿಸಿ ಜೀವ ಬೇಗ ಹಣ್ಣಾಗಿದ್ದರೂ ಇರಬಹುದು. ಆದರೆ ಆ ಕಳೆ ಮುಖದ ಮೇಲಿನ ಸುಕ್ಕಿನ ನಡುವೆಯೂ ಎದ್ದುಕಾಣುತ್ತಿತ್ತು. ಅಕ್ಕಪಕ್ಕದ ಯಾವ ತೆಂಗಿನ ಮರದಿಂದ ಗರಿ ಉದುರಿದರೂ ಮೊದಲು ಸದ್ದು ಕೇಳುತ್ತಿದ್ದುದು ಅಲೀಮಮ್ಮನಿಗೆ. ಶಾಂತವಾದ ಕಣ್ಣುಗಳು ಮತ್ತೆ ಅಷ್ಟೇ ಪ್ರಶಾಂತವಾದ ಮಾತುಗಳು. ಅವರ ಮನೆ ಮಾತ್ರವಲ್ಲ; ಆ ಕೇರಿಗಳಲ್ಲೇ ಜನ ಜೋರಾಗಿ ಮಾತಾಡಿದ್ದನ್ನು ನಾನು ಕೇಳಲಿಲ್ಲ.

ಮನೆಗಳನ್ನು ಹೊಕ್ಕು ಬಳಸುವಾಗ ಕೂಡಾ ಒಂದಿಬ್ಬರನ್ನು ಬಿಟ್ಟರೆ ಬೇರೆಯಾವ ಗಂಟಿಕ್ಕಿದ ಮುಖಗಳನ್ನು ನೋಡಲಿಲ್ಲ. ಜಗಳವೂ ಅಷ್ಟೇ ಸೌಮ್ಯವಾಗಿ ಆಡುತ್ತಾರೆ. ಬಯಲು ಸೀಮೆಯ ನಮ್ಮ ಜಗಳ ಆರಂಭವಾಗುವುದು ಏರು ಧ್ವನಿಯಿಂದ ಕೊನೆಯಾಗುವಾಗ ಯಾವ ರೌದ್ರಸ್ಥಿತಿ ತಲುಪುತ್ತದೋ ತಿಳಿಯದು. ನಮ್ಮ ಜೊತೆ ಸೌಮ್ಯವಾಗಿ ವರ್ತಿಸಲಿಕ್ಕೆ ಉಲ್ಲಾಳದ ದರ್ಗಾದಿಂದ ‘ಅವರಿಗೆ ಸಹಕರಿಸಿ’ ಎನ್ನುವ ಸಂದೇಶ ಬಂದಿದ್ದೂ ಕಾರಣವಿರಬಹುದು, ಮತ್ತು ಶೂಟಿಂಗ್ ಶುರುವಾದ ಮೂರನೆಯ ದಿನ ಶಾಸಕರಾದ ಯು. ಟಿ. ಖಾದರ್ ಬಂದು ಹೋಗಿದ್ದರಿಂದಲೂ ಇರಬಹುದು. ಅಥವಾ ಸ್ವತಃ ಜನರೇ ಹಾಗಿದ್ದಿರಲೂಬಹುದು.

ಅಲೀಮಮ್ಮನಿಗೆ ಆರೋ ಏಳು ಜನರೋ ಮಕ್ಕಳು-ಸರಿಯಾಗಿ ನೆನಪಿಲ್ಲ. ಮಗಳು ಬಾಣಂತನಕ್ಕೆ ಬಂದಿದ್ದರಿಂದ ಆಕೆಗೆ ತುಸು ಹೆಚ್ಚೇ ಕೆಲಸ ಇರುತ್ತಿತ್ತು. ಒಂದು ಸಲ ಮಗು ಅಳುವ ಸದ್ದು ಕೇಳಿ, ಎಲ್ಲಿ ಎಂದು ಹುಡುಕುವಾಗ, ಗುಂಡಗಿನ ಮಗುವನ್ನು ಪರದೆ ಸರಿಸಿ `ನೋಡಿ’ ಎಂದು ತೋರಿಸಿದ್ದರು. ಬಿಳಿ ಬಿಳಿ ಮುದ್ದೆಯ ಹಾಗಿದ್ದ ಮಗುವಿನ ಕೆನ್ನೆಯನ್ನು ಕಿಟಕಿಯಿಂದಲೇ ಸವರಿದ್ದೆ. ಸಣ್ಣ ಕೊಠಡಿ, ಚಿಕ್ಕ ವಯಸ್ಸಿನ ಬಾಣಂತಿ ಮಂಚದ ಮೇಲೆ ಕುಳಿತಿದ್ದಳು. ನಮ್ಮ ಕಡೆಯ ಹಾಗೆ ಬಾಣಂತಿ ಬೆಚ್ಚಗಿನ ಬಟ್ಟೆ ಹಾಕುವಂತೆಯೂ ಇರಲಿಲ್ಲ. ಬಿಸಿಲಿನ ಜಳಕ್ಕೆ ಇರುವ ಬಟ್ಟೆಯೇ ಭಾರವಾಗುವಾಗ ಬಾಣಂತಿಯಾದರೇನು? ಬಸುರಿಯಾದರೇನು?

ಅಕ್ಕಪಕ್ಕದ ಮನೆಗಳಲ್ಲಿ ಎಲ್ಲರ ಮನೆಗಳಲ್ಲೂ ಒಂದು ಕೂಸು ಇದ್ದೇ ಇರುತ್ತಿತ್ತು. ಹೀಗಿದ್ದೂ ನಮ್ಮ ಪಾತ್ರಧಾರಿ ಪಾತುಮ್ಮನ ಮಗಳು ಸಲ್ಮಾ ಹೆರಿಗೆಯಾದಾಗ ಒಂದು ಮಗು ಬೇಕಿತ್ತು. ಹಸೀನಮ್ಮ ಮಗುವನ್ನು ಜೋಲಿಯಲ್ಲಿ ಹಾಕಿ ತೂಗುತ್ತಿದ್ದಳು ಅದನ್ನು ನೋಡಿ `ಹೀಗೆ… ಒಂದು ಮಗು ಪಾತುಮ್ಮನ ಮನೆಯ ಜೋಲಿಯಲ್ಲು ತೂಗಬೇಕು’ ಎಂದಿದ್ದರು ಪಂಚಾಕ್ಷರಿ. ಜೋಲಿ ಕಟ್ಟಬಹುದು, ಮಗುವನ್ನೆಲ್ಲಿಂದ ತರುವುದು? ಈ ಸಿನಿಮಾ ಜನಕ್ಕೆ ಮಗುವೂ ಪ್ರಾಪರ್ಟಿಯಾಗುತ್ತಲ್ಲಾ ಎಂದುಕೊಂಡೆ. ಅಷ್ಟಕ್ಕೂ ಅದು ನನ್ನ ಕೆಲಸ ಅಲ್ಲವೂ ಅಲ್ಲ. ಅದು ಪ್ರೊಡಕ್ಷನ್ ಮ್ಯಾನೇಜರ್‌ನ ಕೆಲಸ. ಹುಡುಕಿದರೂ ಯಾರೂ ಕೊಡಲಿಕ್ಕೆ ಸಿದ್ಧವಿರಲಿಲ್ಲ. ಎಲ್ಲರಿಗೂ ಮಗುವಿಗೆ ದೃಷ್ಟಿ ತಾಕುತ್ತದೆ ಎನ್ನುವ ಭಯವೇ. ಸಿಕ್ಕವರೆಲ್ಲಾ `ಇಲ್ಲಿ ಹೋಗಿ ಆ ಮನೆಯಲ್ಲಿ ಒಂದು ಮಗುವಿದೆ’ ಎಂದು ಹೇಳುತ್ತಿದ್ದರಾದರೂ, ಅಲ್ಲಿ ಹೋಗಿ ಕೇಳಿದರೆ ಮತ್ತದೇ ಕಥೆ. ನಾನು ಪುಟ್ಟಣ್ಣ ಅವರಿವರನ್ನು ಕೇಳಿ ಕೊನೆಗೆ, ಆಟೋ ಮಾಡಿಕೊಂಡು ಮುಕ್ಕಚೇರಿ, ಸುಬಾಷ್‌ನಗರ, ಉಲ್ಲಾಳದವರೆಗೂ ಹೋಗಿ ಬಂದಿದ್ದೆವು. ಹುಡುಕಿ ಹೈರಾಣಾದ ನಮ್ಮ ಮೇಲೆ ಕರುಣೆ ಇಟ್ಟು ಯಾರೋ `ಬನ್ನಿ ತೋರಿಸುತ್ತೇನೆ, ಅವರು ಕೊಟ್ಟರೂ ಕೊಡಬಹುದು’ ಎಂದು ಕರಕೊಂಡು ಹೊರಟರು. ಅವರು ಬಂದದ್ದು ಸೀದಾ ನಮ್ಮ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೇ.

ಜಕ್ಕು ಮಹಮದರ ಮನೆಯಿಂದ ಮೂರು ಮನೆಗಳನ್ನು ದಾಟಿ ಓಣಿ ಶುರುವಾಗುತ್ತಿದ್ದ ಜಾಗದಲ್ಲಿ, ಹೆಂಗಸರೆಲ್ಲಾ ಬೀಡಿ ಕಟ್ಟಲು ಅಂಗಳದಲ್ಲಿ ಸೇರುತ್ತಿದ್ದರಲ್ಲ, ಆ ಮನೆಯಲ್ಲಿ ಒಂದು ಮಗು ಇತ್ತು. ಅವರೂ ಕೊಡಲಿಕ್ಕೆ ಸಿದ್ಧರಿರಲಿಲ್ಲ. `ನಿಮ್ಮ ಮಗುವಿನ ಮುಖ ತೋರಿಸುವುದಿಲ್ಲ’ ಎಂದು ಕಾಡಿ ಬೇಡಿ, ಕಡೆಗೆ ಅವರು ಕೇಳದಿದ್ದರೂ ನಾನೇ ಅದಕ್ಕಾಗಿ ಸ್ವಲ್ಪ ಹಣವನ್ನು ಕೊಡುತ್ತೇನೆ ಎಂದೆಲ್ಲಾ ಹೇಳಿದ ಮೇಲೆ ಅವರು ಒಪ್ಪಿದ್ದರು. ಇಷ್ಟೆಲ್ಲಾ ಆದಮೇಲೆ ಮಗುವನ್ನು ತಾಯಿಯೇ ಕರದುಕೊಂಡು ಬಂದು ಜೋಲಿಗೆ ಹಾಕಿದರೆ, ಮಗು ಅಳಲಿಕ್ಕೆ ಶುರು ಮಾಡಿಬಿಟ್ಟಿತು. ತೂಗಿದರೂ ಇಲ್ಲ, ಲಾಲಿ ಹಾಡಿದರೂ ಇಲ್ಲ. ಅಳು ನಿಲ್ಲಿಸದೆ ಕಲಾವಿದರು ಆಡುವ ಮಾತು ಸರಿಯಾಗಿ ಕೇಳುವುದಿಲ್ಲ ಸುಮ್ಮನೆ ಅಳುವ ಷಾಟ್ ತೆಗೆದುಕೊಂಡು ಮಗುವನ್ನು ತಾಯಿಯ ಕಡೆಗೆ ಕೊಟ್ಟೆವು. ಕೊನೆಗೆ ತೊಟ್ಟಿಲಲ್ಲಿ ದಿಂಬೊಂದನ್ನು ಮಗುವಿನಂತೆ ಮಲಗಿಸಿ ಆ ಸೀನ್ ಚಿತ್ರೀಕರಿಸಲಾಯಿತು. ಅಯ್ಯೋ ಇಷ್ಟಕ್ಕಾಗಿ ಅಷ್ಟೆಲ್ಲಾ ಸುತ್ತಬೇಕಾಯಿತಾ? ಎಂದು ನಿರಾಸೆಯೂ ಆಯಿತು. ಇಷ್ಟಾಗಿಯೂ ಹಣದ ವಿಷಯವನ್ನು ತಕ್ಷಣಕ್ಕೆ ನಿರ್ದೇಶಕರಿಗೆ ಹೇಳಿರಲಿಲ್ಲ. ನಮ್ಮ ಅಗತ್ಯಕ್ಕಾಗಿ ಮಗು ಬೇಕು ಎಂದಮೇಲೆ ಕೊಡುವವರಿಗೂ ಏನಾದರೂ ಕೊಡಲೇಬೇಕಲ್ಲವೇ? ಕಡೆಗೆ `ನನಗೆ ಹೇಳದೆ ಯಾಕೆ ಕಮಿಟ್ ಆದಿರಿ?’ ಎಂದು ಒಂದು ಮಾತು ಅವರ ಕಡೆಯಿಂದ ಬಂತು.  

ಅಲೀಮಮ್ಮ ಹಂಚಿನ ತೊಲೆಗೆ ತೂಗುತ್ತಿದ್ದ ಬಟ್ಟೆಯ ಜೋಲಿ ಅಳುವ ಕಂದನಿಗೆ ಹಾಡುತ್ತಿದ್ದರು. ಧ್ವನಿಯೇನೂ ಅಂತಾ ಚಂದ ಇರಲಿಲ್ಲ. ಜೊತೆಗೆ ಭಾಷೆಯೂ ಗೊತ್ತಾಗುತ್ತಿರಲಿಲ್ಲ. ಭಾಷೆ ಯಾವುದಾದರೇನು ಭಾವ ಎದೆಯನ್ನು ಮುಟ್ಟುತ್ತದೆ ಅಲ್ಲವೇ? ಎದುರು ಸಿಕ್ಕಾಗ ಒಂದಿಷ್ಟು ನಗು ಎಂಥವರನ್ನು ಬೇಕಾದರೂ ಹತ್ತಿರ ಮಾಡುತ್ತದೆ. ಮತ್ತೆ ದರ್ಗಾಕ್ಕೆ ಅಲೀಮಮ್ಮನ ಹರಕೆಯನ್ನು ಒಪ್ಪಿಸಿದ ಮೇಲೆ ಆಕೆಗೆ ಒಂದಿಷ್ಟು ಉತ್ತುತ್ತಿ, ಒಣದ್ರಾಕ್ಷಿ ಗೋಡಂಬಿ ಬಾದಾಮಿ, ಕಲ್ಲುಸಕ್ಕರೆಗಳನ್ನು ಕೊಟ್ಟು `ನಿಮ್ಮ ಹರಕೆ ಒಪ್ಪಿಸಿದ್ದೇನೆ’ ಎಂದು ತಿಳಿಸಿದ್ದೆ. ಆ ವಿಶ್ವಾಸ ಅಲೀಮಮ್ಮ ಮತ್ತು ನನ್ನ ನಡುವೆ ಇತ್ತು. `ನನ್ನ ಹರಕೆಯನ್ನು ನಿಮ್ಮ ಮೂಲಕ ಖುದಾ ಈಡೇರಿಸಿಕೊಂಡ ಎಂದರೆ, ನೀವು ಖುದಾಗೆ ಹತ್ತಿರದವರು’ ಎಂದಿದ್ದರು. ಧಾರ್ಮಿಕ ಶ್ರದ್ಧೆ ಎಷ್ಟು ದೊಡ್ಡದು ಅಲ್ಲವಾ!

ಎದುರು ಸಿಕ್ಕಾಗ ಒಂದೆರಡು ಮಾತು ಬಿಟ್ಟರೆ ನನ್ನ ಅಲೀಮಮ್ಮನ ನಡುವೆ ಅಂತಾದ್ದೇನೂ ನಡೆದಿರಲಿಲ್ಲ. ಒಂದು ದಿನ ಸಂಜೆ ಶೂಟ್ ಮಾಡುವಾಗ ತಂತಿಗೆ ಒಣಹಾಕಿದ್ದ ಸೀರೆ ಸೀನ್‌ನಲ್ಲಿ ಕಮಿಟ್ ಆಗಿಬಿಟ್ಟಿತ್ತು. ಅದೂ ಕಣ್ಣಿಗೆ ಡಾಳಾಗಿ ಕಾಣುವಂತೆ. ಗಾಢ ಹಸಿರು ಪ್ರಿಂಟ್‌ಗಳಿರುವ ಬಿಳಿಯ ಸೀರೆ. ಅದನ್ನು ಡೈರೆಕ್ಷನ್ ಡಿಪಾರ್ಟೆ್ಮಂಟಿನವರು ಗುರುತು ಮಾಡಿಕೊಂಡಿದ್ದರು. ಸಾಮಾನ್ಯವಾಗಿ ಸೀನ್‌ಗಾಗಿ ನಾವೇ ಬಟ್ಟೆಗಳನ್ನು ಒಣಗಿ ಹಾಕಿ ತೆಗೆದಿಟ್ಟಿಕೊಳ್ಳುತ್ತಿದ್ದೆವು. ಅದಕ್ಕಾಗಿ ಪ್ರತ್ಯೇಕವಾದ ಬಟ್ಟೆಯ ಗಂಟೊಂದು ಇರುತ್ತಿತ್ತು. ಅವತ್ತು ಯಾರೋ ಒಣಹಾಕಿದ್ದಾರೆ ಎಂದು ಸುಮ್ಮನಾಗಿಬಿಟ್ಟಿದ್ದೆ.

ಸಾಮಾನ್ಯವಾಗಿ ಯಾವುದಾದರೂ ಒಂದು ದೃಶ್ಯವನ್ನು ಶುರು ಮಾಡಿದರೆ ಅದು ಅವತ್ತೇ ಮುಗಿದು ಹೋಗುತ್ತೆ. ಆದರೆ ಆ ದೃಶ್ಯ ಸಮಯಾಭಾವದಿಂದ ಅವತ್ತು ಪೂರ್ತಿಯಾಗಲಿಲ್ಲ. ಮಾರನೆಯ ದಿನ ಇದೇ ಹೊತ್ತಿಗೆ ಮಾಡುವ ಎನ್ನುವ ನಿರ್ಧಾರಕ್ಕೆ ಬಂದೆವು. ಮಾರನೆಯ ದಿನ ಮಧ್ಯಾಹ್ನದ ಹೊತ್ತಿಗೆ ಸೀರೆಯ ವಿಷಯ ನನಗೆ ತಿಳಿಯಿತು. `ಇದನ್ನ್ನು ನಿನ್ನೆಯೇ ಹೇಳಬಾರದಿತ್ತೇ?’ ಎಂದೆ. `ಅದೆಲ್ಲಾ ನೋಡಿಕೊಳ್ಳುವುದು ನಿಮ್ಮ ಕೆಲಸ ಅಲ್ಲವಾ?’ ಎಂದುಬಿಟ್ಟಿದ್ದರು. ಆ ಸೀರೆ ಆ ದೃಶ್ಯಕ್ಕೆ ಬೇಕೇ ಬೇಕಿತ್ತು. ಇಲ್ಲಾಂದ್ರೆ ಕಂಟಿನ್ಯುಟಿ ಮಿಸ್ ಆಗುತ್ತಲ್ಲಾ. ಸರಿ ನಿನ್ನೆ ಇಲ್ಲಿ ಒಣ ಹಾಕಿದ್ದ ಸೀರೆ ಯಾರದ್ದು? ಎಂದು ಹುಡುಕತೊಡಗಿದೆ. ಯಾರನ್ನ ಕೇಳಿದರೂ, `ಯಾವ ಸೀರೆ?’ ಎನ್ನುತ್ತಿದ್ದರು. ನನಗೆ ಗೊತ್ತಿರುವ ಎಲ್ಲಾ ಮಾತುಗಳಲ್ಲಿ ವಿವರಿಸಿ ಹೇಳತೊಡಗಿದೆ. ನಾನು ಹೇಳಿದ್ದು ಅರ್ಥವಾಗಲಿಲ್ಲವೋ, ಹೇಳಿದ್ದೇ ಆ ಸೀರೆಗಿಂತ ಜಾಸ್ತಿಯಾಯ್ತೊ? ಗೊತ್ತಾಗಲಿಲ್ಲ.

ನಾಲ್ಕಾರು ಮನೆಯವರು ಅಲ್ಲಿ ಬಟ್ಟೆಗಳನ್ನು ಒಣ ಹಾಕುತ್ತಿದ್ದರು. ಎಲ್ಲರ ಮನೆಗೂ ಹೋಗಿ ಕೇಳಿದೆ, ಹಸೀನಮ್ಮ, `ನನ್ನ ಹತ್ತಿರ ಆ ಥರಾ ಸೀರೆಯೇ ಇಲ್ಲ’ ಎಂದರೆ, ಆ ಕಡೆಯ ಮನೆಯ ಜಮೀಲಾ, `ನಿನ್ನೆ ನಾನು ಬಟ್ಟೆಯೇ ಒಗೆದಿಲ್ಲ’ ಎಂದುಬಿಟ್ಟಳು. ಅಲೀಮಮ್ಮನ ಮನೆಗೆ ಹೋದಾಗ ಆಕೆ ಮಗಳಿಗೆ ಏನನ್ನೋ ತರಲಿಕ್ಕೆ ಪೇಟೆಗೆ ಹೋಗಿದ್ದರು. ಮತ್ತೆ ಅವಳ ಮಗಳು, `ಇಲ್ಲಿ ಆಚೆ ಬೀದಿಯವರೂ ತಂದು ಒಣ ಹಾಕ್ತಾರೆ, ನನಗಂತೂ ಏನೂ ಗೊತ್ತಾಗ್ತಾ ಇಲ್ಲ’ ಎಂದಳು. ನನಗೆ ಅಳು ಬರುವ ಹಾಗಾಗಿಬಿಟ್ಟಿತ್ತು. ನಾನು ಪ್ರೊಫೆಷನಲ್ ಅಲ್ಲವಾದ್ದರಿಂದ, ಹೀಗೆಲ್ಲಾ ಆಗುತ್ತೆ ಅಂತ ಗೊತ್ತೇ ಇರಲಿಲ್ಲ.

ಸುಮ್ಮನೆ ಬರೆದುಕೊಂಡು ಇರುವುದನ್ನು ಬಿಟ್ಟು ಇದ್ಯಾವ ಸಂಕಷ್ಟಕ್ಕೆ ಸಿಕ್ಕಿಕೊಂಡೆನಪ್ಪಾ? ಎಂದು ಒದ್ದಾಡತೊಡಗಿದೆ. ಚಂದ್ರಹಾಸರು `ಏನಾಯಿತು?’ ಎಂದರು ನಾನು ಸಪ್ಪಗಿದ್ದುದನ್ನು ನೋಡಿ. `ಏನಿಲ್ಲ’ ಎಂದರೂ ಒಳಗೇ ತಳಮಳ. ನಾಳೆ ಕಂಟಿನ್ಯುಟಿ ಇಲ್ಲಾಂದ್ರೆ, ಎಡಿಟಿಂಗ್ ಟೇಬಲ್‌ನಲ್ಲೆ ನನ್ನ ಬಗ್ಗೆ ಯಾರಾದರೂ ಕೆಟ್ಟ ಮಾತನ್ನು ಆಡಿಬಿಟ್ಟರೆ ಎನ್ನುವ ಭಯ ಕಾಡತೊಡಗಿತು. ನಾನೇನು ಅಲ್ಲಿರಲ್ಲವಲ್ಲ ಏನಾದರೂ ಅಂದುಕೊಳ್ಳಲಿ ಎನ್ನಲಿಕ್ಕೆ ಆಗಲೇ ಇಲ್ಲ. ಯಾಕಂದ್ರೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ನಾಕುತಂತಿ’ ಸೀರಿಯಲ್‌ನಲ್ಲಿ ಪ್ರಿವ್ಯೂ ಮಾಡುವಂತೆ ಅಪರೂಪಕ್ಕೆ ಹಿರಿಯ ನಿರ್ದೇಶಕರಾದ ಬಿ. ಸುರೇಶ್ ನನಗೆ ಹೇಳುತ್ತಿದ್ದರು. ಆಗ `ಇಂಥಾದ್ದೆಲ್ಲಾ ನೋಡಿ ನೋಟ್ ಮಾಡಿಕೊಂಡು ಏನು ಮಾಡ್ತಾರೆ, ಕಂಟಿನ್ಯುಟಿ ನೋಡಿಕೊಳ್ಳಲಿಕ್ಕೆ ಆಗಲ್ಲ ಎಂದ ಮೇಲೆ ಯಾಕೆ ಕೆಲ್ಸಕ್ಕೆ ಬರ್ತಾರೆ’ ಎಂದೆಲ್ಲಾ ನಾನೇ ಬೈಯ್ಯುತ್ತಿದ್ದೆ. ನನಗಿರುವ ಟೆನ್ಷನ್ ತಡೆಯಲಿಕ್ಕಾಗದೆ, `ಈ ಅಲೀಮಮ್ಮನಿಗೆ ಈಗಲೇ ಅರ್ಜೆಂಟ್ ಇತ್ತಾ ಪೇಟೆಗೆ ಹೋಗಲಿಕ್ಕೆ?’ ಎಂದು ಬೈದುಕೊಂಡು ಕೂತೆ. ಪುಟ್ಟಣ್ಣ, ಪುನೀತ ಇಬ್ಬರೂ, `ಸಿಗುತ್ತೆ ಇರಿ ಮೇಡಂ’ ಎಂದು ಸಮಾಧಾನ ಹೇಳಿದರೂ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ.  

ಪೇಟೆಯಿಂದ ಮನೆಗೆ ಬಂದ ಅಲೀಮಮ್ಮನಿಗೆ ಮಗಳು ಹೀಗೆ ಎಂದು ವಿಷಯ ಹೇಳಿದ್ದಾಳೆ. ಬುರ್ಕಾವನ್ನು ಬಿಚ್ಚಿ ಎತ್ತಿಟ್ಟವರೆ, ನಾನಿರುವಲ್ಲಿಗೆ ಬಂದು `ನಿನ್ನೆ ನಾನು ಒಗೆದ ಬಟ್ಟೆಗಳನ್ನು ಇನ್ನೂ ಮಡಚಿಟ್ಟಿಲ್ಲ. ಅದರಲ್ಲಿ ನಿಮಗೆ ಬೇಕಾದ ಸೀರೆ ಇದೆಯಾ ನೋಡಿ?’ ಎಂದು ಕರೆದರು. ಸೀರೆ ಸಿಕ್ಕರೆ ಸಾಕು ಎಂದು ಅವಳ ಜೊತೆ ಹೋದೆ. ಎರಡು ಬಟ್ಟೆಯನ್ನು ಸರಿಸಿದಾಗ ನಿನ್ನೆ ಸ್ವತಂತ್ರವಾಗಿ ಬಿಸಿಲು ಗಾಳಿಗೆ ಆಡುತ್ತಾ ಇದ್ದ ಸೀರೆ ಮುದುಡಿ ಬಿದ್ದಿದ್ದು ನನ್ನ ಕಣ್ಣಲ್ಲಿ ಅರಳಿ, ಗೆಲುವು ಮೂಡಿತು. `ಇದೇ ಸೀರೆ’ ಎಂದು ಜೋರಾಗಿ ಕೂಗಿದೆ- ಆರ್ಕಿಮಿಡೀಸ್ ಯುರೇಕಾ ಎಂದು ಕೂಗಿದ ಹಾಗೆ. ಅಲೀಮಮ್ಮ `ಸ್ವಲ್ಪ ಷರಬತ್ತ್ ಮಾಡ್ತೀನಿ’ ಎಂದರೂ ಬೇಡ ಬೇಡ ಎಂದು ಸೀರೆ ಹಿಡಿದು ಓಡಿದೆ. ದೊಡ್ಡ ನಿರಾಳತೆ ನನ್ನನ್ನೂ ಅನುಸರಿಸಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: