ರಾಜಿ ರೈ
ಕಾಣಲಿಲ್ಲವೇ ಅರಮನೆಯಲ್ಲೇ
ವಾರ್ಧಕ್ಯ, ನೋವು
ಅವಸ್ಥಾಂತರ.
ಸಾವು ಏಕಾಏಕಿ ಎರಗುವುದೆಂಬ
ಸಿದ್ಧ ತತ್ವ ಆವರಿಸಿತ್ತೇ ನಿನ್ನನ್ನೂ?
ದೇಹಕ್ಕಿನಿತೇ ಜರೆಯೇ
ಹೇಳು
ಮನಸ್ಸಿನ ಸ್ಥಿತಿಯೂ
ಹೌದಲ್ಲವೇ?
ಅಮ್ಮ ಮಾಯಾದೇವಿ
ಉದ್ಯಾನವನದಲ್ಲೇ
ನಿನ್ನ ಪ್ರಸವಿಸಿದ್ದು
ಗೂಢಾರ್ಥವಲ್ಲವೇ?

ಚೆನ್ನನೊಂದು ನೆಪ ನಿನಗೆ.
ಸಪ್ತಪದಿ ತುಳಿದು
ಹೆಣ್ಣೊಪ್ಪಿಸುವಾಗ ನಿನ್ನ ರಾಣಿಯ
ಅಪ್ಪ ಅಮ್ಮಂದಿರು
ಅಳಲಿಲ್ಲವೇ?
ಅವರ ಮುಖ ಸುಕ್ಕುಗಟ್ಟಿರಲಿಲ್ಲವೇ
ಕೂದಲು ನರೆತಿರಲಿಲ್ಲವೇ?
ಹಾಲುಗಲ್ಲದ ರಾಹುಲ
ಯಶೋಧರೆಯ ಎದೆಗವಚಿ
ಧ್ಯಾನದಲ್ಲಿದ್ದಾಗ
ಏಕೆ ಜ್ಞಾನೋದಯವಾಗಲಿಲ್ಲ
ನಿನಗೆ?

ಅಪ್ಪನಿಲ್ಲದ ಮಗು
ಬೆಳೆದಾಗ
ಲೋಕದ ಜಂಜಡಗಳ
ತೆರೆದು ತೋರಲು
ಚೆನ್ನನೂ ಇರುವುದಿಲ್ಲ ಎನ್ನುವ
ನೆನಪೂ ಕಾಡಲಿಲ್ಲವೇ?
ನಿನಗಿಂತ ಮೊದಲೇ
ಬೆಳಕನ್ನರಸಿ
ತೊರೆದು ಹೋಗಿದ್ದರೆ
ಅಪ್ಪ ಶುದ್ಧೋದನ?






0 Comments