ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಾ ಮೋಹನ್ ಕವಿತೆ- ಉಣ್ಣುತ್ತಿರುವವರು‌…

ವಿಜಯಾ ಮೋಹನ್

ಸೊಂಟದ ಮೇಲೊಂದು ಗಂಟು ಕಟ್ಟಿ
ಹಿಂಜಿಂಜಿ ಅಂಜಿಕೊಂಬುತ್ತಿರುವ ಪಂಚೆ
ಹರಾಜಿನೊಳಗಾರಾಜು ಕೂಗಿ
ತುಟಿ ಬಿಚ್ಚಿ ನವೆದ ಬಾಡಿ
ವಾರದುದ್ದಕ್ಕು ಹೊಗೆಯ
ರಥವ ಕಟ್ಟುವ ಮೋಟು ಬೀಡಿಗಳು
ಲೆಕ್ಕಕ್ಕೆ ದಕ್ಕುತ್ತಿಲ್ಲ ಎದೆಯ ಕಫದೊಳಗೆ
ಹೊಗೆಯ ಗೂಡಿನ ಸೈಜು
ಮಗ ಮುತ್ತಿನಂತವನು

ಕೆಂಡದುಂಡೆಯ ಕಣ್ಣು
ಕಾವು ಕುಂತ ಕೋಳಿ
ಇಂದಿಗೇಳು ದಿನವಾಗಿ
ರೆಕ್ಕೆ ಬಿಚ್ಚದ ರೋಗ
ಅದಕ್ಕೆ ರಾವುಗಾಲವಿಲ್ಲ
ಗುಳಿ ಕಾಲವಿಲ್ಲ ಯಮಗಂಡವು ಇಲ್ಲ
ಇರೋನು ಒಬ್ಬನೆ ಮಗ

ಅವಳು ಅಷ್ಟೆ ಅವ್ವನೆಂಬೋಳು
ಕೆನ್ನೊಲದ ಕಳೆ ಬಗೆದು
ಕೋಗಲೆಯ ಬೂದಿ ಎಳೆದು
ನಿಗಿ ನಿಗಿಯ ತಟ್ಟೆ ಚೊಂಬಲ್ಲಿ
ಬಿಸಿತುತ್ತ ನೀವಿಕ್ಕಿದವಳು ಅಪರೂಪದವನಿಗೆ

ಏರಿ ಎಗಲಿಗೆ ಕೊಟ್ಟು
ಕೇರಿ ಕಾವೊಳಗೆ ಕುಂತು
ಸರೀಕರ ಮದ್ಯದೊಳಗೊಂದು
ತಾವೆಂಬ ತಳವು ಗಿಟ್ಟಿಸಿ
ಅಪ್ಪಯ್ಯನ ಬಗಲಿಗಂಟಿಕೊಂಡವಳು

ನಿಗದ ಮೇಲೆ ನಿಗವಿಕ್ಕಿ
ಅಲ್ಲೆ ನಗುವೆಂಬ ನೊಗ ಕಟ್ಟಿ
ನವಿಲಾಗಿ ಗಿಳಿಯಾಗಿ
ಬೆಳವ ಬೆಳ್ಳಕ್ಕಿಯಾಗಿ
ಬಯಲ ಬಟ್ಟೆಯಲಿ
ಬದುಕ ನೀಚಿದವಳು

ಆರು ಮೂರಾಗಿ ಮೂರು ಮೈಲಿಗೆಯಾಗಿ
ಪಾರು ಪತ್ಯೇವಿನ ದೇವರಿಗೆ
ಕಡ್ಡಿ ಕರ್ಪೂರದ
ಹೊಗೆ ಮುಡಿಸಿದವಳು

ದೂರದೂರಿನ ಮಗ ಡಿಗ್ರಿ ಪುಸ್ತಕ ಓದಿ
ಕಣ್ಣಲ್ಲಿ ಬಲಿತ ಚುಕ್ಕಿ ಚಂದ್ರಮರ
ಹಕ್ಕು ಬಾದ್ಯೇವಿನ ಕನಸುಗಳ ಉಂಡು  
ದಿಕ್ಕಿಲ್ಲದ ದುಡ್ಡಿಗೆ ಉಸಿರು ಉಗಿಯುವಾಗ

ಕೆರೆಯಲ್ಲಿನ ಮೀನು ಮಾರಿ
ಗೂಡೊಳಗಿನ ಕೋಳಿ ಮಾರಿ
ನಿಕ್ಕರ್ರು ತುಂಬದ ಜೋಬು
ಎಪ್ಪತ್ತಾರು ತಡ ಕೈಯ್ಯ ನೀವಿ
ಅಪ್ಪಯ್ಯನ ಆನಂದಕ್ಕೆ ತೆಪ್ಪ ಕಟ್ಟಿದವರು

ಅಲ್ಲೆ ಬಲಿತು ನಾರಿದ ಕಾಲ
ಕಣ್ಣಿಗೆ ಕಣ್ಣಿನ ರೆಪ್ಪೆ ಅದುಮಿ ದೂಗರಿಸಲಿಲ್ಲ
ಮಗ ಗೌರ್ ಮೆಂಟಿನುಪ್ಪಿನಲಿ
ಕತ್ತೆತ್ತಿ ನೋಡುವ ಬಿಲ್ಡಿಂಗಿನವನು
ಸೊಸೆ ಕುರ್ಚಿ ಬಿಟ್ಟೇಳದ
ಕುಲೋಸ್ತರಿಗೆ ದಕ್ಕದವಳು

ಗಳಿಗೆಗೊಂದಂದು ಬಣ್ಣ
ನವಮಾಸಕ್ಕೆಟುಕದ ಮಾತು
ದಿಕ್ಕೆಟ್ಟ ಕಳ್ಳು ಬಳ್ಳಿ
ದಿವಾಳಿಗಂಜದ ಕಣ್ಣೀರು
ಮಗ ಸೊಸೆ ಅಲ್ಲೆ ಮೊಗ್ಗುಲಾದರು
ಅಪ್ಪ ಅಮ್ಮನೆಂಬೋರು
ಇಲ್ಲೇ ಮಣ್ಣು ಬಗೆಯುತ್ತ
ಮೌನ ಉಣ್ಣುತ್ತಿರುವವರು

‍ಲೇಖಕರು Admin

13 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading