ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಹ್… ವಾಹ್… ಎಂದು ಸುಳ್ಳೇ ಉನ್ಮಾದವನ್ನು ನಟಿಸುತ್ತೇನೆ..

ಕೆಟ್ಟವರೇನಲ್ಲ

ಸವಿರಾಜ್ ಆನಂದೂರು

ಅಪರೂಪಕ್ಕೊಮ್ಮೆ ಮೈಥುನ ಮತ್ತು ನಿದ್ದೆಯ ನಡುವೆ
ಸಮಯ ಉಳಿತಾಯವಾದರೆ,
ಅವನಿಗೂ ಪ್ರೀತಿ ಹುಟ್ಟುವುದಿದೆ
ಕೆಟ್ಟವನೇನಲ್ಲ ನನ್ನವನು ಒಳ್ಳೆಯವನೇ
ಒಮ್ಮೊಮ್ಮೆ ಕೆಲವೇ ಘಳಿಗೆ ಕೈಕಾಲು ಬಡಿದು
ಬಳಲುತ್ತಾನೆ
ನಾನೋ ಅದ್ಭುತ ಈಜುಗಾರನ ರಭಸಕ್ಕೆ
ಸಿಕ್ಕಿ ಕಂಗಾಲಾಗಿ ಗಡಚಿಕ್ಕುವ ನೀರಿನಂತೆ ನಟಿಸುತ್ತೇನೆ
ಸೋತವನ ಕೊರಳ ಸುತ್ತ ಬಂಗಾರದ ಪದಕವಾಗುತ್ತೇನೆ
ಅಂವ ಡೌಲಿನಿಂದ ಮೀಸೆಯ ತುದಿ ತಿರುವುತ್ತಾನೆ
ಕೆಟ್ಟವನೇನಲ್ಲ ನನ್ನವನು, ಒಳ್ಳೆಯವನೇ

ಆಗೆಲ್ಲ ಅವನಿಗೂ ಹುಕಿ ಹುಟ್ಟಿ ಕವಿಯಾದದ್ದಿದೆ
ಉಪಮೆಗಳೋ ಅಂವ ಸುಖಿಸುವಾಗ ಒರಲುವ
ಲವ್ ಯೂ ಬೇಬಿ, ಲವ್ ಯೂ ಬೇಬಿಗಳಷ್ಟೇ ಕ್ಲೀಷೆ
ಚಂದ್ರಮುಖಿ, ತಾವರೆಯ ಕಣ್ಣವಳು, ಹೆಜ್ಜೇನ ತುಟಿ,
ಸಿಂಹ ಕಟಿ
ನಾನು ವಾಹ್… ವಾಹ್… ಎಂದು ಸುಳ್ಳು ಸುಳ್ಳೇ ಉನ್ಮಾದವನ್ನು ನಟಿಸುತ್ತೇನೆ
ಇವಿವೇ ಕಾಂಪ್ಲಿಮೆಂಟು ಬೇರೆ ಗಂಡಸರಾರೋ ಕೊಟ್ಟರೋ
ಹಾದಿ ಬೀದಿಯ ಸೂರ್ಯರು ತಾವರೆಯ ಮೇಲೆ ಕಣ್ಣಿಟ್ಟರೋ
ಬೂದಿಯೊಳಗೊಳಗೆ ಕನಲಿ ಕೆಂಡವಾಗುತ್ತಾನೆ
ಕಳ್ಳನಂತೆ ನನ್ನ ಮೊಬೈಲಿನ ಒಳಹೊಕ್ಕು
ಯಾವನೇ ಸಿಕ್ಕರೂ, ಸಿಗದಿದ್ದರೂ ಚಡಪಡಿಸುತ್ತಾನೆ
ಅರಿವಿದ್ದೂ ಪೆದ್ದಿಯಂತೆ ತೆಪ್ಪಗಿರುತ್ತೇನೆ ನಾನು!

ಕೆಟ್ಟವನೇನಲ್ಲ ನನ್ನವನು ಒಳ್ಳೆಯವನೇ ನಂಬಿ
ತೊಡೆಯ ಮೇಲೆ ಮಲಗಿ ಹೆಂಡತಿ ಬರೇ ಹೆಂಡತಿಯಲ್ಲ
ತಾಯಿ, ಮಗಳು, ಗೆಳತಿಯೂ ಕೂಡಾ:
ವೇದಾಂತ ಒರೆಯುತ್ತಾನೆ
ಬಾಸ್ ನನ್ನ ಡ್ರಾಪ್ ಮಾಡಿದ ಸಂಜೆ ರಂಡೆಯೂ ಕೂಡಾ
ಆಮೇಲೊಂದು ವಾರ ನಾನು ಹುಟ್ಟು ಕಿವುಡಿ!

ಅವನದೇನೂ ತಪ್ಪಿಲ್ಲ ಬಿಡಿ, ಎಷ್ಟೆಂದರೂ ಮುಗ್ಧ
ಮೆಟ್ರೋ ರೈಲಿನ ಗಜಿಬಿಜಿಯಲ್ಲಿ ಸಣ್ಣ ಹುಡುಗಿಯರ
ಮೈ ಸವರಿ ಮನೆಗೆ ಬಂದವನು
ಹೆಂಡತಿಯ ಮೈ ಮೂಸಿ ಖಾತ್ರಿ ಮಾಡಿಕೊಂಡರೆ
ಅಪರಾಧವೇ ಹೇಳಿ?
ಕೆಟ್ಟವನೇನಲ್ಲ ನನ್ನವನು ಒಳ್ಳೆಯವನೇ ಪ್ಲೀಸ್‌ ನಂಬಿ

ಇದೆಲ್ಲಾ ಹಳೆಯ ಕಥೆ!
ಈಗ ನಾನೇ ಬೇರೆ, ಅವನೇ ಬೇರೆ
ಆಗ ಅವನೊಬ್ಬನೇ ರಂಡೆ ಎನ್ನುತ್ತಿದ್ದ
ಈಗ ‘ಎಂಥ ಜಂಟಲ್‌ಮನ್‌ನ ಬಿಟ್ಟುಹೋದಳು
ರಂಡೆ’, ಗುಂಪಿನಲ್ಲಿ ಅವನ ಗೆಳೆಯರು ಆಡುತ್ತಾರೆ
ಆದರೂ ಕೆಟ್ಟವರೇನಲ್ಲ ಅವನ ಗೆಳೆಯರು, ಒಳ್ಳೆಯವರೇ
ಒಬ್ಬೊಬ್ಬರೇ ಸಿಕ್ಕಾಗ ಅಪಾರವಾದ
ಕಾಳಜಿಯಿಂದ ಮಾತನಾಡಿಸುತ್ತಾರೆ

ಈಗೀಗ ಜಗತ್ತು ನನ್ನ ಬೆನ್ನ ಹಿಂದೆ ನಿಂತು
ಮೈಯ ತಿರುವುಗಳಲ್ಲೇ ನೋಟವ ನೆಟ್ಟು
ತುಟಿಯ ಮೇಲೆ ನಾಲಗೆಯ ಹೊರಳಿಸಿ
ಉಗುಳು ನುಂಗುತ್ತದೆ
ಆದರೂ ಕೆಟ್ಟದ್ದೇನಲ್ಲ ಜಗತ್ತು, ಒಳ್ಳೆಯದೇ
ಎದುರಿಗೆ ಸಿಕ್ಕಾಗ ಸೌಜನ್ಯದ ನಗುವನ್ನೇ ನಗುತ್ತದೆ!

 

‍ಲೇಖಕರು avadhi

22 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading