ಕೈಚೀಲ ಹಿಡಿದು ಪೇಟೆಗೆ ಹೋಗುವುದು..

ಚಂದ್ರಪ್ರಭಾ

ಕೈಚೀಲ ಹಿಡಿದು ಪೇಟೆಗೆ ಹೋಗುವುದು
ನನ್ನ ಯಾವತ್ತೂ ರೂಢಿ
ಸೊ ಕಾಲ್ಡ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ
ನನಗೆಂದೂ ಪ್ರಿಯವಾಗಲೇ ಇಲ್ಲ
ಹಾಗೂ ಅದನ್ನೇ ನೆಚ್ಚಿದಾಗ
ಭಾರ ತಾಳದೇ ಅದು ಕಿತ್ತು ಹೋಗುವುದು
ಒಳಗಿನ ಬಿಸಿಗೆ ತರಕಾರಿ ಹಣ್ಣು ಮಾಸುವುದು
ಇಂಥವೆಲ್ಲ ತರಾವರಿ ಕಿರಿಕಿರಿ
ಸಾಮಾನ್ಯ ಇದ್ದರಿಂದ
ಬಟ್ಟೆ ಕೈಚೀಲ ನನ್ನ
ಆಪ್ತ ಮಿತ್ರನಾಗುತ್ತಲೇ ಹೋಯ್ತು

ಈಗೀಗ ಅವ್ವ ಹೇಳಿ ಬರೆಯಿಸಿದ ಸಾಮಾನಿನ
ಲಿಸ್ಟು ಹಿಡಿದು ಪೇಟೆಗೆ ಹೋಗುತ್ತೇನೆ
ಅಲ್ಲಿ ನೋಡಿದರೆ ವಸ್ತುಗಳೇ ಮಟಾ ಮಾಯ!
ಎಲ್ಲಿ ನೋಡಿದರಲ್ಲಿ ಮಾರಾಟಕ್ಕಿರುವುದು
ತರಾವರಿ ಕನಸುಗಳು!!
ನಿಮಗಿಷ್ಟವಾದ ಯಾವುದನ್ನೂ ನೀವು
ಖರೀದಿಸಬಹುದು
ಅಷ್ಟೇ ಅಲ್ಲ ಕೊಡುಗೆಗಳ ಸುಗ್ಗಿಯೇ ಸುಗ್ಗಿ!!
ಒಂದನ್ನು ಖರೀದಿಸುವಾಗ ಮತ್ತೊಂದು ಉಚಿತ

ಒಂದಿಷ್ಟು ಕನಸುಗಳನ್ನು ನಾನೂ
ಕೈಚೀಲದಲ್ಲಿ ಇರಿಸಿಕೊಂಡು ಬರುತ್ತೇನೆ
ಸಿಡಿಮಿಡಿಗೊಳ್ಳುತ್ತಾಳೆ ಅವ್ವ
ಬುದ್ಧಿ ನೆಟ್ಟಗಿದೆಯಾ ನಿನಗೆ
ನಿನ್ನ ಹೊಟ್ಟೆ ನೆತ್ತಿ ತುಂಬಿಸುತ್ತಾ ಇದೆಲ್ಲಾ..?
ಮುಸಿ ಮುಸಿ ನಗುತ್ತದೆ ಕೈಚೀಲ

ನಾನು ಪೇಟೆಗೆ ಹೋಗುವುದು
ಮಾರಾಟಕ್ಕಿಟ್ಟ ಕನಸು ಹೊತ್ತು ತರುವುದು
ನನ್ನ ನಿತ್ಯದ ರೂಢಿಯೇ ಆಗಿದೆ ಇತ್ತೀಚೆಗೆ
ಅವ್ವ ಹೇಳಿದ್ದನೆಲ್ಲ ತರುವುದು
ಮರೆತೇ ಹೋಗುವಷ್ಟು
ಅವು ನನ್ನ ಆಕ್ರಮಿಸಿಕೊಂಡಿವೆ

ಯೋಧರು ಗಡಿ ಕಾಯುತ್ತಿದ್ದಾರೆ
ವೈದ್ಯರು ಆರೋಗ್ಯ ರಕ್ಷಣೆಗೆ ಕಟಿ ಬದ್ಧ
ಮನೆಯಿಂದಲೇ ಕೆಲಸ ಮಾಡುವವರು
ಕಚೇರಿಯಲ್ಲಿ ಕೆಲಸ ಮಾಡುವರೆಲ್ಲ ಕ್ಷೇಮ
ಬ್ಯಾಂಕುಗಳಲ್ಲಿ ಎಲ್ಲರ ಠೇವಣಿಯೂ ಸುರಕ್ಷಿತ
ಲಭ್ಯವಿದೆ ಪ್ರಾಥಮಿಕ ಶಾಲೆಯಿಂದ ವಿವಿ ವರೆಗೆ
ಎಲ್ಲರಿಗೂ ಉಚಿತ ಶಿಕ್ಷಣ
ಹೆಣ್ಣು ಮಗುವಂತೂ ಈ ದೇಶದ ಕಣ್ಣ ಗೊಂಬೆ!
ದೇವತೆಯಂತೆ ಪೂಜೆಗೊಳಗಾಗುವ ಭಾಗ್ಯ
ಯಾರಿಗುಂಟು ಯಾರಿಗಿಲ್ಲ
ಆದರೆ ಒಂದು ಮಾತು
ಆಕೆ ತಾನು
ಉಡುವ ತೊಡುವ ವೇಷಭೂಷಣ
ಆಡುವ ಆಟ ನೋಡುವ ನೋಟಗಳ
ವಿಷಯಕ್ಕೆ ಬಂದಾಗ ನಮ್ಮ
ಸಂಸ್ಕೃತಿ ಹೇಳುವುದನ್ನು ಕಡೆಗಣಿಸದಿರಬೇಕು
ಅದೇ ಅವಳಿಗೆ ಭೂಷಣ

ಯುವಕರು ಸರ್ಟಿಫಿಕೇಟ್ ಹಿಡಿದು
ಸಾಲುಗಟ್ಟಿ ನಿಂತರೂ ಎದೆಗುಂದಬಾರದು
ಬಂದೇ ಬರುತ್ತವೆ
ಒಳ್ಳೆಯ ದಿನಗಳು ಎಲ್ಲರಿಗೂ
ಇಂದಲ್ಲ ನಾಳೆ
ಕ್ರಮಬದ್ಧವಾಗಿ ಕಾಲ ಕಾಲಕ್ಕೆ ಬಿತ್ತರವಾಗುವ
ಸಂದೇಶಗಳು ಅವರನ್ನು ಸಲುಹುತ್ತಿಲ್ಲವೆ?

ಪರಿಸರ ಕಾಳಜಿಗಾಗಿ
ಆಯೋಗದ ಮೇಲೆ ಆಯೋಗವಿದೆ
ಹಿಮ ಪರ್ವತ ಕರಗುವುದು ಬಿಸಿಲ ತಾಪ
ಹೊಗೆ ಮಂಜು ವಾಹನ ದಟ್ಟಣೆ …
ನೀವ್ಯಾಕೊ ವಿನಾಕಾರಣ
ಮಂಡೆ ಬಿಸಿ ಮಾಡಿಕೊಂಡಿರುವಂತಿದೆ
ಎಲ್ಲವೂ ಇಲ್ಲಿ ಸರಿಯಾಗೇ ಇದೆ
ಯಾವ ಕನಸನ್ನು ಹೇಗೆಲ್ಲ ಕಾಣುವುದೆಂಬ
ತಿಳಿವಳಿಕೆ ನಿಮ್ಮಲ್ಲಿ ಮೂಡಿರಲಿಕ್ಕಿಲ್ಲ
ಸ್ವಲ್ಪ ಯೋಗ ಮಾಡಲು ಆರಂಭಿಸಿ
ನಿಮ್ಮ ದೈಹಿಕ ಮಾನಸಿಕ ಆರೋಗ್ಯ ಸುಧಾರಿಸೀತು
ಯೋಗ ಗುರುವಿನ ಪ್ರಾಡಕ್ಟಗಳನ್ನೇ ಖರೀದಿಸಿ
ದೇಶೀಯತೆಗೆ ನೀವು ಸಲ್ಲಿಸುವ ಸೇವೆ ಅದು

ಅವ್ವ ಬೈದರೂ ಪರವಾಗಿಲ್ಲ
ಕನಸುಗಳ ನೆಚ್ಚುವುದು ಈಗೀಗ
ನನಗೆ ತುಂಬ ಪ್ರಿಯವಾಗಿದೆ
ಘೋಷಣೆ ಕೂಗುವುದು ಜೈಕಾರ ಹಾಕುವುದು
ಎಲ್ಲ ಆಪ್ತವೆನಿಸುತ್ತವೆ
ಆದರೆ ಒಂದು ಮಾತ್ರ ಸತ್ಯ
ಕೈಯಲ್ಲಿ ಚೀಲಕ್ಕೆ ಬದಲಾಗಿ
ಬೇರೊಂದನ್ನು ಹಿಡಿಯದಂತೆ
ಅವ್ವ ನೋಡಿಕೊಂಡಿದ್ದಾಳೆ..

‍ಲೇಖಕರು avadhi

March 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಕು.ಸ.ಮಧುಸೂದನ್ ರಂಗೇನಹಳ್ಳಿ

    ಚಂದ್ರಾ ಮೇಡಂ ಕವಿತೆ ತುಂಬಾ ಚೆನ್ನಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: