ಅಶ್ವಿನಿ ಶ್ರೀಪಾದ
ಇಲ್ಲಿ ….
ಬೇಸಿಗೆ ಕಾಲಕ್ಕೆ ಹಪ್ಪಳ ಸಂಡಿಗೆ ಒಣಗಿ,
ಡಬ್ಬದೊಳು ಪೇರಿಸಿಟ್ಟಾಯ್ತು ,
ಜಿಟಿ ಜಿಟಿ ಮಳೆ ಬಂದಾಗ
ಕರೆದು ತಿನ್ನಲು ಸಂಡಿಗೆ , ಮನಸ್ಸೊಳಗೆ ಮಂಡಿಗೆ
ಅಲ್ಲಿ …
ಒಂದೆರೆಡು ಹನಿ , ಪುಳಕ
ಜೋರು ಮಳೆ , ಜಳಕ
ಒಂದು ಎರೆಡು ಮೂರೂ ನಾಲ್ಕು
ಮಳೆ ನಿಲ್ಲಲೇ ಇಲ್ಲ ,
ಇಂದು ನಿಂತಿತು , ನಾಳೆ ಮುಗಿಯೋದು
ನಿಲ್ಲಲೇ ಇಲ್ಲ , ಜೋರು ಮತ್ತಷ್ಟು ಆರ್ಭಟ
ಇಲ್ಲಿ …
ಟಿವಿಯೊಳು ನೀರು , ಪೇಪರ್ ನಲ್ಲೂ
ವಾಟ್ಸಪ್ಪ್ ಫೇಸ್ಬುಕ್ ಎಲ್ಲೆಲ್ಲೂ ನೀರು
ಬೆರಳುಗಳು ತಿರುಗಿಸಿದಷ್ಟು
ಮೊಬೈಲ್ನಲ್ಲಿ ನೀರು
ಮನೆಯು, ಮನವು ತೋಯಿಸದ ನೀರು

ಅಲ್ಲಿ …
ಧರೆಗುರುಳಿದ ಮನೆ ,
ಬಿದ್ದ ಬುಡಸಮೇತ ಮರ
ನೀರೆಲ್ಲ ವಿಷದಂತೆ ಹರಡುತ್ತಲೇ ಇದೆ
ಊಟವಿಲ್ಲ , ಸೂರಿಲ್ಲ
ಊರೆಲ್ಲ ನದಿಪಾಲು
ಕಾಣದ ಕೈಗಳ ಸಹಾಯ ಹಸ್ತ
ಸಾಕಾಗುತ್ತಿಲ್ಲ !!
ಇಲ್ಲಿ..
ಬೇಸಿಗೆಯಲ್ಲಿ ದಂಡಿಯಾಗಿ ಮಾಡಿದ
ಹಪ್ಪಳ ಕರಿಯಬೇಕಿದೆ
ಜಿಟಿ ಜಿಟಿ ಮಳೆ
ಬಟ್ಟೆ ಒಣಗುವುದೆಂತೋ ?
ಅಲ್ಲಿನ ಮಳೆ ನೋಡಲು
ಮೊಬೈಲ್ ಚಾರ್ಜ್ ಮಾಡಬೇಕಿದೆ
ಹಾಳಾದ ಕೆ ಈ ಬಿ
ಈಗಲೇ ಕರೆಂಟು ತೆಗೆಯಬೇಕೇ
ನಮ್ಮ ಚಿಂತೆ ನಮ್ಮಗೆ !






very nice one
ಆಪ್ತ ಪದ್ಯ