ವಸುಂಧರಾ ಕದಲೂರು ಓದಿದ ‘ಈ ಕೂಸು ನನಗಿರಲಿ

ಮತ್ತೆ ಕೂಸಾಗುವ ಹೊತ್ತಿಗೆ ಕೊಂಡೊಯ್ಯುವ ಹೊತ್ತಗೆ’

ವಸುಂಧರಾ ಕದಲೂರು

ಚಿತ್ರಗಳು: ವಿಶಾಲಾ ಆರಾಧ್ಯ ಅವರ ಸಂಗ್ರಹದಿಂದ

ಶ್ರೀಮತಿ ಬಿ. ಎಸ್. ಮಧುಮತಿಯವರ ‘ಈ ಕೂಸು ನನಗಿರಲಿ’ ಎಂಬುದು ಅವರ ಬಾಲ್ಯದ ಕನವರಿಕೆಗಳ ಲೇಖನ ಸಂಕಲನ. ಇಡೀ ಪುಸ್ತಕದಲ್ಲಿ ಅವರು ಸಂಚರಿಸಿ ಬಂದ ಬಾಲ್ಯಕಾಲದ ಹಲವು ಜಗತ್ತುಗಳಿವೆ, ನಿಲುದಾಣಗಳಿವೆ. ಅವರ ನೆನಪುಗಣ್ಣಿನ ನೋಟವಿದೆ. ಬಾಲ್ಯದಲಿ ಉಂಡ ತುತ್ತುಗಳ ಮೆಲುಕಾಟವಿದೆ.

ಹಾಗೆಂದು ಅವು ಲೇಖಕಿಯವರಿಗೆ ಮಾತ್ರ ಸಲ್ಲುವ ಬಾಲ್ಯದ ನೆನಪುಗಳೆಂದು ಹೇಳುವುದು ಸರಿಯಲ್ಲ.  ಈ ಕೃತಿಯು ಅರವತ್ತು ಎಪ್ಪತ್ತು ಎಂಬತ್ತರ ಹಾಗೂ ಭಾಗಶಃ ತೊಂಬತ್ತರ ದಶಕಗಳ ಸುಂದರ ಕಾಲಮಾನಗಳಲ್ಲಿ ತಮ್ಮ ಬಾಲ್ಯವನ್ನು ಕಳೆದವರಿಗೆ ಅತ್ಯಾಪ್ತವಾಗುತ್ತದೆ. ಓದುಗರು ಬಹುಶಃ ಈ ಕೃತಿಯ ಬಂಡಿಯ ಏರಿ ತಮ್ಮತಮ್ಮ ನಿಲುದಾಣಗಳನ್ನು ಗುರುತಿಸಿಕೊಂಡು ಇಳಿದು ಹಳತನೆಲ್ಲಾ ನೆನೆದು ಖುಷಿಪಟ್ಟೋ ದುಃಖಿಸಿಯೋ ದಣಿದು ತುಸು ವಿರಮಿಸಿ ಬಂದಾರು; ತಂತಮ್ಮ ಬಾಲ್ಯವನು ಮರಳಿ ಪಡೆದು ಹರ್ಷಿಸಿ ಮೈಮರೆತಾರು!

ಧಾವಂತದ ಬದುಕು ಕಟ್ಟಿಕೊಂಡು ಓಡುತ್ತಿರುವ ಹೊತ್ತಿನಲ್ಲಿ ‘ಈ ಕೂಸು ನನಗಿರಲಿ’ ಹೊತ್ತಗೆಯು ನಿಜಕ್ಕೂ ಆಪ್ತಭಾವದ ಸಮಾಧಾನ ನೀಡುವುದು. ತಮ್ಮ ಬಾಲ್ಯಕಾಲದ ಹಲವು ಅನುಭವಗಳಲ್ಲಿ ಮರೆತದ್ದೋ ಮರೆಯಲಾಗದ್ದೋ ಮರೆಯಬಾರದ್ದೋ ಇಲ್ಲಿರುವುದನ್ನು ಓದುಗರೂ ಸಹ ಗುರುತಿಸಬಹುದು. ಕೃತಿಕಾರರು ಯಾವ ಜಟಿಲತೆಯೂ ಇಲ್ಲದೆ, ನೆನಪುಗಳಿಗಾಗಿ ತಿಣುಕಾಟ ಪಟ್ಟುಕೊಳ್ಳದೆ ಬರೆದ ಇಲ್ಲಿನ ಬರೆಹಗಳು ಸಹಜ ನಡೆಯಲ್ಲಿದ್ದು ಪುಸ್ತಕವನ್ನು ಒಮ್ಮೆ ಕೈಗೆ ತೆಗೆದುಕೊಂಡರೆ ಕೆಳಗಿರಿಸಲಾಗದಂತೆ ಮಾಡುತ್ತವೆ.  

ಈಗ ‘ಬಾಲ್ಯವೆಂದರೆ ಬಾಲ್ಯವಲ್ಲವೇ?!’ ಎಂದು ಅಚ್ಚರಿಯ ಪ್ರಶ್ನೆ ಕೇಳಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಈಗಿನ ಮಕ್ಕಳ ಬಾಲ್ಯದಲ್ಲಿ ಏನಿದೆ ಎಂದು ನಮ್ಮ ಬಾಲ್ಯವನ್ನು ಹೋಲಿಸಿಕೊಂಡು ವಿಷಾದಿಸುತ್ತೇವೆ. ನಮಗೆ ಬದುಕಿನೊಡನೆ ನಂಚಿಕೊಂಡು ಮೆಲುಕಾಡಲು ಎಷ್ಟು ವ್ಯಂಜನ ವಿಷಯಗಳಿವೆ! ಈಗಿನ ಮಕ್ಕಳಿಗೆ ಅವುಗಳು ದಕ್ಕಿವೆಯೇ?! ದಕ್ಕಿಸಿಕೊಳ್ಳಲು ಪೋಷಕರಾದ ನಾವು ಅವಕಾಶ ಮಾಡಿಕೊಟ್ಟಿದ್ದೇವೆಯೇ?! ಎಂಬುದು ಕ್ಲೀಷೆಯ ಪ್ರಶ್ನೆಗಳಾಗಿದ್ದರೂ ಅವುಗಳೇ ಮತ್ತೆ ಕಾಡುವಂತೆ ಮಾಡುವುದು ಈ ಕೃತಿಯನ್ನು ಓದಿಯಾದ ಮೇಲೆ ತಡೆದು ನಿಲ್ಲುವ ಪ್ರಶ್ನೆಗಳು. 

ಕೂಡುಕುಟುಂಬದ ಬಾಳು, ಮದುವೆ, ನೆಂಟರ ಬರುವಿಕೆಗಳ ಸಂಭ್ರಮ, ಶ್ರೀಮಂತಿಕೆಯ ಡೌಲು ಇಲ್ಲದಿದ್ದರೂ ಬಾಧಿಸದ ಬಡತನ, ಹೃದಯ ವೈಶಾಲ್ಯದ ನಡವಳಿಕೆಯ ಜನರು ಮತ್ತವರ ಸ್ವಭಾವಗಳು, ಅರ್ಥವಾಗದ ವಿಚಾರಗಳ ಬಗೆಗಿನ ಕೌತುಕದ ಕಣ್ಣು, ಬದುಕನ್ನು ಪ್ರಭಾವಿಸಿದ ವ್ಯಕ್ತಿ ವ್ಯಕ್ತಿತ್ವಗಳು…  ಇವುಗಳನ್ನು ಈ ಕೃತಿಯೊಳಗಿನ ಬಿಡಿಬಿಡಿ ಲೇಖನಗಳಲ್ಲಿ ಹಿಡಿಹಿಡಿಯಾಗಿ ಕಾಣಬಹುದು. 

“ಬಾಲ್ಯ ಎಂಬುದು ಎಲ್ಲರ ಜೀವನದಲ್ಲಿ ಬರುವ ಜವಾಬ್ದಾರಿಗಳಿಲ್ಲದ, ಚಿಂತೆಗಳಿಲ್ಲದ, ನಿರ್ಧಾರ ತೆಗೆದುಕೊಳ್ಳಲೇಬೇಕಾದ ಒತ್ತಡವಿಲ್ಲದ ಒಂದು ಘಟ್ಟ….” ಎಂಬ ಅನಿಸಿಕೆಯನ್ನು ನಮ್ಮೊಂದಿಗೆ ಹೇಳಿಕೊಳ್ಳುತ್ತಲೇ ಅಂತಹ ಬಾಲ್ಯವನ್ನು ಸವಿದ ತಮ್ಮ ಬದುಕಿನೊಡನೆ ಸೊಮಾಲಿಯಾ, ಇಥಿಯೋಪಿಯಾದ ಮಕ್ಕಳನ್ನು, ಯುದ್ಧ ರಾಷ್ಟ್ರಗಳಲ್ಲಿ ಹುಟ್ಟಿ ನಲುಗುತ್ತಿರುವ ಮಕ್ಕಳನ್ನು ನೆನೆದು ನೋಯುವ ಲೇಖಕರದ್ದು ಅಂತಃಕರುಣೆಯ ವ್ಯಕ್ತಿತ್ವ ಎನ್ನುವುದನ್ನು ಪ್ರತೀ ಲೇಖನದ ಒಳಸುರಿಯಲ್ಲಿ ಕಾಣಬಹುದು.

ಬಾಲ್ಯವನ್ನು ಅವಲೋಕನ ಮಾಡುವ ಜೊತೆಜೊತೆಗೇ ಅವರ ಜೀವಪರ ಕಾಳಜಿಯನ್ನೂ ಗುರುತಿಸಬಹುದು. ಯಾವುದೇ ದ್ವೇಷ, ಹತಾಶೆ, ನೋವು, ಕ್ರೋಧ, ನಿರಾಶೆಗಳನ್ನು ತೋರ್ಪಡಿಸದ ಇಲ್ಲಿನ ಲೇಖನಗಳಲ್ಲಿ ಕೃತಜ್ಞತೆ, ಪ್ರೀತಿ, ಸೌಹಾರ್ದತೆ, ಸ್ನೇಹ, ಕಾಳಜಿಯೇ ಮೊದಲಾದ ಭಾವಗಳಿವೆ. ‘ಕಾಲ್ರಂಜು, ಅಮ್ಮನ ಜಾದೂ, ಸ್ಟೀಲ್ ಪಾತ್ರೆ ಸಾಮಾನ್, ಶಾಲಾ ದಿನಗಳು, ಹೇನು ರಂಜನೆ, ಚಿಂದಿ ಬಟ್ಟೆಯ ಹುಚ್ಚಿ…’ ಒಳಗೊಂಡಂತೆ ಕೃತಿಯೊಳಗಿರುವ ಒಟ್ಟು ಇಪ್ಪತ್ನಾಲ್ಕು ಲೇಖನಗಳು ಬಹುತೇಕರ ಬಾಲ್ಯದ ಹೆಜ್ಜೆ ಗುರುತುಗಳೊಡನೆ ತಾಳೆಯಾಗುವಂತಿವೆ. ಇವೇ ಕಾರಣಗಳು ಈ ಕೃತಿಯನ್ನು ಸದಾಕಾಲ ಜೀವಂತವಾಗಿ ಇರುವಂತೆ ಮಾಡುತ್ತವೆ. ಬರಹದ ಯಶಸ್ಸಿಗೆ ಮತ್ತೇನು ಬೇಕು?!

 ಒಂದು ಆಹ್ಲಾದಕರ ಓದಿಗೆ ಈ ಪುಸ್ತಕವು ಸಾಂಗತ್ಯ ನೀಡುತ್ತದೆ. ಓದಿನ ಖುಷಿಯನ್ನು ಹೆಚ್ಚಿಸುತ್ತದೆ. ಆಗಾಗ್ಗೆ ಭಾವತಲ್ಲಣಗಳನ್ನು ಉಂಟುಮಾಡಿದರೂ ಓದು ಮುಗಿದ ಮೇಲೆ ಸ್ಥಾಯಿಯಾಗಿ ನಿಲ್ಲುವುದು ಬಾಲ್ಯ ಎನ್ನುವ ಸಿಹಿಯಾದ ಪೆಪ್ಪರಮೆಂಟನ್ನು ಮೆಲುಕಾಡಿದ ಸಿಹಿಯೊಂದೇ… ಪುಸ್ತಕವನ್ನು ಓದುವವರು ಹಳೆಯ ಬೆಂಗಳೂರಿನ ಸೊಗಸನ್ನು ಕಂಡುಂಡಿದ್ದರೆ, ಮತ್ತೊಮ್ಮೆ ಅದರ ನೆನಪನ್ನು ಭಾವಪಟಲಕ್ಕೆ ತಂದುಕೊಳ್ಳಬಹುದು. ಇತರೆ ಯಾವುದೇ ಒತ್ತಡಗಳನ್ನು ಹೇರದ ಈ ಕೃತಿಯು ಸರಳವಾದ ಆಪ್ತ ನಿರೂಪಣೆಯೊಂದಿಗೆ ಅಲ್ಲಲ್ಲಿ ನಮ್ಮದೇ ಬಾಲ್ಯದ ಕತೆಗಳಾಗಿ ಕಂಡರೆ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ, ನಾವೆಲ್ಲರೂ ಹೇಳಿಯೇಹೇಳುತ್ತೇವೆ, ಬಾಲ್ಯ ಎನ್ನುವ ‘ಈ ಕೂಸು ನನಗಿರಲಿ’ ಎಂದು. 

‍ಲೇಖಕರು avadhi

July 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: