ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಳ್ಳಿಗಳಲ್ಲಿ ಹಕ್ಕಿಗಳಿಗಾಗಿ ಭಾಗ-2 …

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

10.2

ನನ್ನ ಮೊಮ್ಮಗಳು ಸಿರಿ ಕ್ಯಾತುಂಗೆರೆ ಬಡಾವಣೆಯಲ್ಲಿ ಮನೆಪಾಠಕ್ಕೆ ಹೋಗುತ್ತಿದ್ದಳು. ಬಿಡಲು ಕರೆತರಲು ಅವಳ ಮಾವ ಹೋಗುತ್ತಿದ್ದರು. ಕೆಲದಿನ ನಾನು ಹೋಗುತ್ತೇನೆಂದು ಪಾಠಕ್ಕೆ ಬಿಟ್ಟು ಒಂದು ಗಂಟೆ ಕಾಯುವಾಗ ಪಕ್ಕದ ರಸ್ತೆಗೆ ಹೊರಳಿ ಕ್ಯಾತುಂಗೆರೆ ಪಕ್ಕ ಹೋದೆ. ಮೊದಲ ನೋಟದಲ್ಲೇ ಸೆರೆ ಹಿಡಿದದ್ದು ಅರಳಿ ಕೆರಳಿ ಕೆಂಪಾದಂತೆ ನಿಂತಿದ್ದ ಮೈಯೆಲ್ಲಾ ಹೂ ಮುಡಿದಿದ್ದ ಮುತ್ತುಗದ ಮರ. ಮರುದಿನದಿಂದ ನಾನೇ ಪಾಠಕ್ಕೆ ಬಿಡುತ್ತೇನೆಂದು ಸ್ವಯಂ ಕೋರಿಕೆ ಸಲ್ಲಿಸಿ ದಿನಾ ಒಂದು ಗಂಟೆ ಮರಕ್ಕೆ ಹಾಜರಾತಿ ಹಾಕಿದೆ. ಆದರೆ ನನಗಿನ್ನ ಮೊದಲೆ ಮರವನ್ನು ಮುತ್ತಿ ಆವರಿಸಿಕೊಳ್ಳುತ್ತಿದ್ದವು ಕಬ್ಬಕ್ಕಿ, ಗಿಳಿ, ಸೂರಕ್ಕಿ, ಬದನಿಕೆಗಳು. ಗಿಳಿಗಳಂತೂ ಹೂವೆಳೆದು ಥೇಟ್ ಬಕಾಸುರನಂತೆ ಮುಕ್ಕುತ್ತಿತ್ತು. ಮರಕ್ಕೆ ಮರವೇ ಹಕ್ಕಿಗಳ ಜೊತೆ ಮಾತಾಡುತಿತ್ತು. 

ಹಕ್ಕಿಗಳ ಹುಡುಕಾಟಕ್ಕೆ ಒಂದು ಗಂಟೆ ಸಾಲದ ಸಮಯ ಎನಿಸಿ ಸಿರಿಯ ಪಾಠಕ್ಕೆ ಕೈಕೊಟ್ಟೆ. ಅಂದರೆ ಆ ಜವಾಬ್ದಾರಿ ಸಿರಿಯ ಮಾವನಿಗೇ ಹೊರೆಸಿ ಹಕ್ಕಿ ಹುಡುಕಾಟದಲ್ಲಿ ಗಂಟೆ ಮೀರಿ ಕಾಲ ಕಳೆದೆ. ಮತ್ತೊಂದು ವರ್ಷ ಹೂ ಬಿಟ್ಟಾಗ ಮರದ ಕೆಳಗೆ ನನ್ನ ಕೆಲವು ಹಗಲ ಬದುಕು ಝಂಡಾ ಊರಿತ್ತು. ಎಷ್ಟು ತೆಗೆದರೂ ಈ Flame of the forest ಮತ್ತೆ ಮತ್ತೆ ಮೋಹಿಸುತ್ತಿತ್ತು. ಮಧುವೀರುತ್ತಾ ಮದವೇರುತ್ತಿದ್ದ ಕಬ್ಬಕ್ಕಿಗಳಾಟ ಕಣ್ಣು ಕೀಳದಂತೆ ಮಾಡಿದ್ದವು. ಆ ಮುತ್ತುಗದ ಮರ ಒಂದು ಹೊಲದಲ್ಲಿತ್ತು. ನಿತ್ಯ ಬರುತ್ತಿದ್ದ ನನ್ನನ್ನು ಕಂಡು ಹೊಲದೊಡೆಯ `ಫೋಟೋ ತಗೊಳಿ ಮೇಡಂʼ ಎಂದು ಅನುಮತಿಸಿ `ಇದನ್ನೂ ತಗೊಳಿʼ ಎಂದು ಬೆಳೆದ ಸೌತೆ, ಟೊಮೊಟೊ ಕೈಲಿಡುತ್ತಿದ್ದ. ಬೇಡ ಎಂದರೆ ಅಹಂಕಾರ ಆದೀತೆಂದು `ನೀವು ಕಾಸು ಪಡೆಯದಿದ್ದರೆ ತಗೊಳ್ಳಲ್ಲʼ ಎಂದು ಮುನಿಸಿನ ಬೆದರಿಕೆ ಒಡ್ಡಿದಾಗ ನೆಪಮಾತ್ರದ ಬೆಲೆ ಪಡೆದ. ತಾವು ಬೆಳೆದದ್ದು ತಮಗೆ ಮಾತ್ರವೆಂದು ಬಚ್ಚಿ ಮುಚ್ಚಿ ತಿನ್ನುವವರಲ್ಲ ರೈತರು. ಹಂಚುಣ್ಣುವ ಸುಖ ಅರಿತವರು, ಕೊಟ್ಟಷ್ಟೂ ಹೆಚ್ಚುತ್ತದೆನ್ನುವುದನ್ನು ಅರಿತು ಬಾಳಿದವರು ನಮ್ಮ ಅನ್ನದಾತರಾದ ಉಳುವ ಯೋಗಿಗಳು.

ಕ್ಯಾತುಂಗೆರೆಯ ಬಳಿ ಇನ್ನೊಂದು ಮುತ್ತುಗದ ಮರವಿತ್ತು, ಅಂದು ಗಂಟೆ ಎಂಟಾಗಿತ್ತು, ಹಕ್ಕಿಗಳಿರದೆ ಕ್ಯಾಮೆರಾ ಹೊರ ತೆಗೆದಿರಲಿಲ್ಲ. ನಾನು ಗಾಡಿ ನಿಲ್ಲಿಸಿ ಇಳಿದಿದ್ದನ್ನು ಕಂಡ ಒಬ್ಬರು ಕೇಳಿದರು `ಏನು ಮೇಡಂ ಸಮಾಚಾರ.’ ಹೀಗೆ ಹಕ್ಕಿ… ಏನೋ ಹೇಳಿದೆ. ಅವರು `ಮೇಡಂ ಜೋಪಾನ ಈ ಜಾಗ ಸರಿಯಿಲ್ಲ, ನೋಡಿ ಕುಡಿದು ಎಸೆದಿದ್ದಾರೆʼ ಎಂದು ಎಚ್ಚರಿಸಿ ಹೋದರು. ಇದು ಎಲ್ಲಿಲ್ಲ… ದೇಶದ ಯಾವ ಮೂಲೆಯಲ್ಲಿಲ್ಲ. ಬಹಳ ಶಿಷ್ಟವೆನಿಸಿಕೊಂಡ ದೂರದ ಊರಿನಿಂದ ಹಕ್ಕಿಗಳಿಗಾಗಿ ಬಂದವರು ಬೆಳಿಗ್ಗೆ ಎಲ್ಲಾ ಹಕ್ಕಿ ಚಿತ್ರ ಹಿಡಿದು ಸಂಜೆ ಪರಮಾತ್ಮನ ಪರಮಧ್ಯಾನದಲ್ಲಿ ಇರುತ್ತಿದ್ದರು. ಇನ್ನು ಈ ಹಳ್ಳಿಗಳ ಮೂಲೆ ಮೂಲೆಗಳಲ್ಲಿ, ಕಾಡಿನ ಸಂಧಿ ಗೊಂಧಿಗಳಲ್ಲಿ ಇದೇ ಕೆಲಸ. ಎಲ್ಲೆಲ್ಲೆ ನೋಡಲಿ, ನಿನ್ನನ್ನೇ ಕಾಣುವೆ ಎಂದು ಕಾಣುತ್ತಾ ಸಂತಸ ಅರಸುವ ಸಂತರಿವರು. ಏರಿಸಿದ್ದು ಇಳಿದ ಮೇಲೆ ಇಳಿದು ಕುಸಿಯುತ್ತಾರೆ. ನಾನಲ್ಲಿಗೆ ಬರದಿದ್ದರೆ ತಮ್ಮ ತೀರ್ಥ ಸೇವನಾ ಕಾರ್ಯಕ್ರಮ ಸುಗಮವೆಂದು `ಮೇಡಂ ಇಲ್ಲಿ ಹಾವು ಓಡಾಡುತ್ತವೆ’ ಎಂದು ಕೆಲವರು ಹೆದರಿಸಿದರು. ನಾನೂ ಇದೇ ನೆಲದ ಹೆಣ್ಣುಮಗಳಲ್ಲವೆ. `ಇರಲಿ ಬಿಡಪ್ಪ, ಬಂದರೆ ಬರಲಿ’ ಎಂದು ಕುಳಿತೆಡೆಯಿಂದದ ಮಿಸುಕಲಿಲ್ಲ. ಮಾತಾಡಿ ಪ್ರಯೋಜನವಿಲ್ಲವೆಂದು ತಮ್ಮ ಕಾಯಕ ಕಂಟಿನ್ಯೂಯಿಸಲು ಬೇರೆಡೆ ತೆರಳಿದರು. 

ನಾನು ನನ್ನಷ್ಟಕ್ಕೆ ಸಂತೆಯ ಗದ್ದಲದಲ್ಲೂ ಕಳೆದು ಹೋಗಬಲ್ಲೆ. ಆ ಮಟ್ಟಿಗೆ ನಿರ್ಲಿಪ್ತತೆ ನನ್ನ ಬದುಕಿಗೆ ಬಂದಿದೆ. ಹಕ್ಕಿ ಬೇಕು, ಹಕ್ಕಿ ಬೇಕೇಬೇಕು. ಅಷ್ಟೆ. ನೋಡಿದವರಿಗೂ ಈ ಯಮ್ಮನದ್ದು ಇದೇ ಕೆಲಸ ಎಂಬ ನೋಟ. ಮೊದಲಲ್ಲಿ ಎಲ್ಲರಿಗೂ ಕುತೂಹಲ `ತಕ್ಕಂಡೇನ್ ಮಾಡೀರಿ, ಟಿ.ವಿಗೆ ಕೊಟ್ಟೀರಾ, ಪೇಪರಿಗೆ ಹಾಕೀರಾ, ನಿಮಗೆಷ್ಟು ಸಿಕ್ಕದು, ಕ್ಯಾಮೆರಾಕ್ಕೆಷ್ಟು ಕೊಟ್ರಿ’. ಯಾವುದಕ್ಕೂ ಮೌನದ ನಗುವೇ ಉತ್ತರ. ಕ್ಯಾಮೆರಾ ಲೆನ್ಸಿಗೆಷ್ಟು ಕೊಟ್ಟೆನೆಂದು ನಿತ್ಯದ ಬದುಕಿಗೆ ಬಡಿದಾಡುವವರ ಮುಂದೆ ಹೇಗೆ ಹೇಳಲಿ. ಅದನ್ನು ಕೊಂಡದ್ದಾದರೂ ಮೂವತ್ತೈದು ವರ್ಷಗಳ ದುಡಿಮೆಯಲ್ಲಿ ಉಳಿಸಿದ ನನ್ನದೇ ಕಾಸಿನಿಂದ. ನಾಳೆಗಾಗಿ ಕೂಡಿಡುವ ಆಲೋಚನೆಗಳೂ ಇಲ್ಲದಿದ್ದಾಗ. ನನಗೆ ಹಕ್ಕಿಲೋಕದ ಒಡನಾಟ ಬೇಕೇಬೇಕೆಂಬ ಬಯಕೆ ಒಳಗೆ ಕೂತು ಮತ್ತೆಮತ್ತೆ ಕಾಡಿ ಕನವರಿಕೆಯಾದಾಗ. ಚಿಂತೆಯ ಕುಲುಮೆಯಲ್ಲಿ ಬೇಯುತ್ತಿದ್ದಾಗ ತಣ್ಣಗಾಗಲು ಇದೇ ದಾರಿ ಎನಿಸಿದಾಗ. ಚಿನ್ನ ಬಣ್ಣಗಳ ಮೋಹದಿಂದ ಹೊರಬಂದಿದ್ದವಳಿಗೆ ಹಕ್ಕಿ ಸೆಳೆತದಿಂದ ಪಾರಾಗಲಾರೆ ಎನ್ನುವುದು ಮನದಟ್ಟಾದಾಗ. ಪ್ರಶ್ನಾಸುರರಿಗೆ ಹೇಗೆ ವಿವರಿಸಲಿ. ಹೆಸರ ಮೋಹವಿರದೆ ಮನಸಿಗನಿಸಿದ ಕೆಲಸ ಮಾಡಿ ಹೆಸರಿಲ್ಲದೆ ಇದ್ದೆದ್ದು ಹೋಗಬಯಸಿದ್ದೆ. ಪ್ರತಿಫಲದ ಲೋಕದಲ್ಲಿ ನಾನಿಲ್ಲ. ಬೇಕಾಗಿಲ್ಲವೆಂದು ಚಿತ್ರವಾಗಿಸುವ ಕಾಯಕದಲ್ಲಿ ಧ್ಯಾನಸ್ಥಳಾಗಿದ್ದೆ. ಧ್ಯಾನವಿಲ್ಲದ ಲೋಕದಲ್ಲಿ ಸಂತೆಯ ಗದ್ದಲದಲ್ಲಿ ಹಕ್ಕಿ ಚಿತ್ರವಾಗುವುದೆ!?

ನನ್ನೂರಿನ ಸುತ್ತ ಜೊತೆಯಿಲ್ಲದಕ್ಕೆ ಇರುಳಲ್ಲಿ ಹೋಗುತ್ತಿರಲಿಲ್ಲ. ಜೊತೆ ಸಿಕ್ಕಿದ್ದಿದ್ದರೆ ಒಂದಿಷ್ಟು ಗೂಬೆ, ನತ್ತಿಂಗ ಹಿಡಿಯಬಹುದಿತ್ತೆಂಬ ಹಪಾಹಪಿ ಇದೆ. ಹಗಲು ಹಕ್ಕಿಗಳಿಗೆನ್ನ ಸಮಯ ಮೀಸಲು. ಬೆಳಗ್ಗಿನಿಂದ ಇಳಿಸಂಜೆಯ ತನಕ ಪ್ರಶ್ನೆಗಳನ್ನುಳಿದಂತೆ ಕ್ಲಿಕ್ಕಿಸುವ ಕೆಲಸ ನಿರಾತಂಕ. ನಿತ್ಯ ನೋಡುವವಳ ಬಳಿ ಎಷ್ಟೆಂದು ಅದದೇ ಪ್ರಶ್ನೆ ಕೇಳುತ್ತಾರೆ. ನಾನೂ ಅದಕ್ಕೆ ಒಗ್ಗಿಹೋದೆ. ಪ್ರಶ್ನಾರ್ಥಕ ನೋಟಗಳೂ ಹಕ್ಕಿ ಬದುಕಿನ ಭಾಗವಾದವು. ಪ್ರಶ್ನೆಗಳಿರಲಿ, ಬೇಡವೆನ್ನುವುದಿಲ್ಲ. ಆದರೆ ಬಾಣಗಳಂತಲ್ಲ, ಭಾವವನ್ನು ಕೆದಕಲಲ್ಲ. ಸಾಕ್ರೇಟಿಸ್ ನಮ್ಮೊಳಗೂ ಹೊರಗೂ ಜೀವಂತವಾಗಿರಬೇಕಲ್ಲವೆ. ಹೆಮ್ಲಾಕ್ ಮಾತ್ರ ಬೇಡ.

ಕ್ಯಾತುಂಗೆರೆಯಲ್ಲಿ ಕೆಂಪು ಮುನಿಯಗಳ ಹಿಂದೆ ಬಿದ್ದು ದಿನಗಟ್ಟಲೆ ಧ್ಯಾನಸ್ಥಳಾದೆ. ಹಿಡಿಯಷ್ಟಿದ್ದ ಮುನಿಯ ಉರುಳಾಡುತ್ತಾ ಹುಲ್ಲಿನ ಬೀಜ ಮೆಲ್ಲುವಾಗ ನಾನೂ ಅದೇ ಲೆವಲ್ಲಿಗೆ ಹಿಡಿಯಲು ಮಕಾಡೆ ಮಲಗಿ ಗ್ರೌಂಡ್ ಲೆವಲ್  ಷಾಟ್ ತೆಗೆಯುತ್ತಿದ್ದೆ. ಒಂದೊಳ್ಳೆಯ ಷಾಟ್ ಬಂದಿದೆ ಎನ್ನುವಾಗ ಆ ದಿನ ಕಾಯ್ದದ್ದಕ್ಕೆ ಫಲ ಸಿಕ್ಕಿತೆಂಬ ಸಾರ್ಥಕ ಭಾವ. ಕೆಂಪು ಮುನಿಯನನ್ನು ಹಿಡಿಯುವಾಗ ಹಾವೂ ದರ್ಶನವಿತ್ತಿತ್ತು. ಹಾವಿರುವ ಜಾಗಕ್ಕೆ ನಾ ಬಂದ ಮೇಲೆ ನಾನೇ ಅದಕ್ಕೆ ಆತಂಕ ತರುವವಳೆಂದು ಅದಕ್ಕೂ ಅನ್ನಿಸಿರಬಹುದಲ್ವೆ. ಸ್ವಲ್ಪ ಆತಂಕವಾದರೂ ಹಾವು ಹೋಗಿಯಾಯ್ತಲ್ಲ ಈಗೇಕೆ ಭಯ ಎಂದು ಚಿತ್ರಕಾಯಕ ಬಿಡಲಿಲ್ಲ. ಮನೆಗೆ ಬಂದ ಮೇಲೆ ಮಗಳಿಗೆ ಹೇಳಲಿಲ್ಲ, ಹೆದರಿಯಾಳು ಎಂದು. 

2018ರ ಹೊಸ ವರ್ಷದ ಮೊದಲ ದಿನ ಕ್ಯಾತುಂಗೆರೆಗೆ ಹೋದೆ. 2017ರ ಡಿಸೆಂಬರಿನಲ್ಲಿ ಮುನ್ನಾರಿನಿಂದ ಬಂದ ಬಳಿಕ ಕ್ಯಾಮೆರ ವಿರಾಮದಲ್ಲಿತ್ತು. ವರ್ಷದ ಮೊದಲ ದಿನ ಕ್ಯಾಮೆರಾ ಹಿಡಿಯದಿದ್ದರೆ ವರ್ಷ ಪೂರ್ತಿ ಹಿಡಿಯಲಾಗದಿದ್ದರೆ ಎಂದರಸಿ ಹೊರಟೆ. ನೀಲಕಂಠ ಎದುರಾದರೂ ಸಿಕ್ಕದೆ ಹಾರಿಹೋಯಿತು. ಪಕ್ಕದ ಮರದಲ್ಲೇನೋ ವಿಶೇಷವಿದೆ ಎನಿಸಿ ತಿರುಗಿದರೆ ತೆಂಗಿನ ಮರದಲ್ಲಿ ಮಹಡಿಮನೆ ಮಾಡಿಕೊಂಡು ಎರಡು ಗೂಬೆ ಕೂತಿವೆ. ಭಾಗ್ಯದ ಲಕ್ಷ್ಮಿ ಬಾರಮ್ಮ (ಪ್ಪ) ಎನ್ನುತ್ತಾ ಕ್ಲಿಕ್ಕಿಸಿಕೊಂಡೆ. `ನೋಡಪ್ಪಾ ಸುಜಾತ’ ಎಂದು ಗೆಳತಿಗೆ ತೆಗೆದ ಗೂಬೆ ಚಿತ್ರ ಕಳಿಸಿದರೆ ಆ ಕಡೆಯಿಂದ ಪುಟ್ಟ ಗೂಬೆಗವಿತೆ ಬಂತು.

‘ಅಯ್ಯೋ! ಮುದ್ದು ಗೂಬೇ 
ತೆಂಗಿನ ಮರವೇ ತಾವೇ 
ಮರದೊಳು ಕುಳಿತ ದೈನ್ಯವೇ ನೀನು 
ಹಗಲನು ಮರೆತ ಮಂಪರುಗಣ್ಣ 
ಇರುಳಲಿ ಹೊಳೆಸುವೇ ನೀನು 
ಗಾಂಪರು ಆದೆವು ತಿಳಿಯದೆ ಅದನು ನಾವು.’

ಗೂಬೆ, ಗೂಬೆ ಎಂದು ಗೂಬೆಯನ್ನೂ ಸೇರಿಸಿ ಬೈಯುವ ನಾವು ನಿಜಕ್ಕೂ ಗಾಂಪರು ಎಂದುಕೊಂಡೆ.

ಒಂದು ದಿನ ಕೆಂಪು ಮುನಿಯಗಳಿಗಾಗಿ ಕ್ಯಾತುಂಗೆರೆಯ ಹೊಲದಲ್ಲಿದ್ದೆ. ಅಲ್ಲಿ ಬೆಳೆದಿದ್ದ ಎಲೆಕೋಸು ಬಹುತೇಕ ಖಾಲಿಯಾಗಿ ಕೆಲವು ಉಳಿದಿದ್ದವು. ಕೊಳೆತ ಎಲೆಕೋಸಿನ ವಾಸನೆ ಮೂಗಿಗೆ ಅಡರುತ್ತಿತ್ತು. ಹಕ್ಕಿ ಚಿತ್ರ ತೆಗೆಯುವವರಿಗೆ ಕೊಳಚೆ, ಪಾಚಿ, ವಾಸನೆ ಗೀಸನೆ ಲೆಕ್ಕಕ್ಕೇ ಇಲ್ಲ. ಆಗಾಗ ಕೆಂಪು ಮುನಿಯ ಜೋಳದ ಕಡ್ಡಿ ಮೇಲೆ ಕೂತು ಹಾರಿ ಹೋಗುತ್ತಿದ್ದವು. ನೆಲಕ್ಕಿಳಿದರೂ ನನ್ನಿಂದ ದೂರ ಇದ್ದವು. ಚುಕ್ಕೆ ಮುನಿಯದ ಮರಿ ಎಲೆಕೋಸಿನ ಅಂಚಿನ ಮೇಲೆ balance ಮಾಡಿ ಕುಳಿತಿತು. ವ್ಹಾಹ್… ವ್ಹಾಹ್… ಏನ್ balance ತಂತಿ ಮೇಲಿನ ನಡಿಗೆ ಇದರ ಮುಂದೆ ಏನ್ ಮಹಾ! ಬೀಳುವ ಭಯವಿಲ್ಲದೆ ಕುಳಿತ ಅದರಿಂದ ನಾವು ಕಲಿಯಬೇಕಾದ ಪಾಠ ಎಷ್ಟಿದೆ ಎನಿಸಿತು. ಯಾರ್ಯಾರಿಗೋ ಪಾಠ ಕಲಿಸಲು ಸದಾ ಸನ್ನದ್ಧರಾದ ನಾವು ನಿಸರ್ಗದಿಂದ ಕಲಿಯುತ್ತೇವೆಯೇ!?

ಒಂದು ದಿನ ಕ್ಯಾತುಂಗೆರೆಯ ಮಾಮೂಲಿ ಜಾಗದಲ್ಲಿ ಸ್ಕೂಟರ್ ನಿಲ್ಲಿಸಿ ಸನಿಹದಲ್ಲೇ ಕಾಯುತ್ತಿದ್ದೆ. ಅಚಾನಕ್ಕಾಗಿ ಬಂದ ಚಿಲಿಪಿಲಿ ಕೇಳಿ ತಿರುಗಿ ನೋಡಿದರೆ, ನನ್ನ ಸ್ಕೂಟರಿನ ಕನ್ನಡಿಯಲ್ಲಿ ಎರಡು ಎಲೆವಕ್ಕಿ ತಮ್ಮನ್ನು ನೋಡಿಕೊಳ್ಳುವ, ಕುಕ್ಕುವ ಕಾಯಕದಲ್ಲಿವೆ. ಬಿಡೋರು ಉಂಟೆ? ಬಾರದು ಇಂತಹ ಸಮಯ ಸುಸಮಯ ಇನ್ನು ಬಾರದು ಎಂದು ಫಟಾಫಟ್ ಕ್ಯಾಮೆರದಲ್ಲಿ ಬೀಳಲಾರಂಭಿಸಿದವು. ಹಾರಿಹೋದ ಹಕ್ಕಿಗಳು ಅರ್ಧ ಗಂಟೆಯಲ್ಲಿ ಮತ್ತೊಮ್ಮೆ ಬಂದವು. ಆ ದಿನವೇ ಮೂರು ಸಲ ಬಂದವು. `ಕನ್ನಡಿಯಲ್ಲಿ ನೋಡಿಕೊಳ್ಳುವ ಮೋಹ ತೀರಿರಲಿಲ್ಲ ಅವಕ್ಕೆ. ಇನ್ನು ನನಗೆ ತೀರುವುದೆ? ಎಷ್ಟು ಚಿತ್ರ ತೆಗೆದರೂ ಆಸೆಗೇನೂ ಕಡಿಮೆಯಿಲ್ಲ. ನಂತರದ ನಾಲ್ಕೈದು ದಿನ ಅದೇ ಜಾಗದಲ್ಲಿ ಗಾಡಿ ನಿಲ್ಲಿಸಿ ಇನ್ನಷ್ಟು ಫೋಟೊ ತೆಗೆದೆ. ಅವುಗಳಿಗೂ ಕನ್ನಡಿಯಾಟ ಬೋರಾಯಿತೆಂದು ಕಾಣುತ್ತದೆ, ಬರುವುದನ್ನು ನಿಲ್ಲಿಸಿದವು. ಮತ್ತೊಂದು ದಿನ ಇನ್ನೊಂದು ಗದ್ದೆಯ ಬಳಿ ಗಾಡಿ ನಿಲ್ಲಿಸಿದ್ದಾಗ ಮತ್ತೆ ಕನ್ನಡಿಗೆ ಬಂದರೂ ನಾನು ದೂರದಲ್ಲಿದ್ದ ಕಾರಣ ಚಿತ್ರ ತೆಗೆದರೂ ಸರಿಯಾಗಿ ಬರಲಿಲ್ಲ. ಮತ್ತೊಮ್ಮೆ ಅದೇ ದಾರಿಯಲ್ಲಿ ನೇರಳೆ ಸೂರಕ್ಕಿ ಇದೆ ಎಂದು ಗಾಡಿ ನಿಲ್ಲಿಸಿ ನಾಲ್ಕು ಹೆಜ್ಜೆ ನಡೆದು ಹೋದೆ. ಅಷ್ಟರಲ್ಲಿ ಎಲೆವಕ್ಕಿ ಕನ್ನಡಿಯ ಮೇಲೆ ಕುಳಿತಿತ್ತು. ಆದರೆ ಜನ ಓಡಾಡುವ ರಸ್ತೆ ಆದುದ್ದರಿಂದ ಹೆಚ್ಚಿನ ಕಸರತ್ತು ನಾ ನಡೆಸುವ ಮೊದಲೇ ಅದು ಹಾರಿ ಪರಾರಿಯಾಯಿತು.

ಮೋಳೆಕೊಪ್ಪಲಿನ ಒಂದೇ ಆವರಣದಲ್ಲಿ 60-70ಕ್ಕೂ ಹೆಚ್ಚು ಬಗೆಯ ಹಕ್ಕಿಗಳು ಸಿಕ್ಕಿವೆ. ಅಲ್ಲೊಂದು ಆಲದ ಮರವಿದೆ. ಜನವರಿ ತಿಂಗಳ ಒಂದು ದಿನ ಬೆಳಗಿನ ಒಂದೆರಡು ಗಂಟೆ ಕ್ಯಾಮೆರಾ ಸಮೇತ ಕಾಯುತ್ತಾ ಕ್ಯಾಮೆರಾ ಜೋಳಿಗೆ ತುಂಬಿಸಿ ತಂದಿದ್ದೆ. ಬದುಕಿನ ಸಾರ್ಥಕತೆಯ ಸಾಕ್ಷಾತ್ಕಾರ. ಮರವಿತ್ತ ನೆರಳಿನಲ್ಲಿ ತಂಪಾಗಿ ಕೂತೆ, ಕಣ್ಣಾದೆ. ಹಣ್ಣಿನ ಸವಿಯರಸಿ ಬಂದ ಹತ್ತಾರು ಹಕ್ಕಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಗಿಳಿ, ಗೊರವಂಕ, ಕಬ್ಬಕ್ಕಿ, ಕುಟ್ರ, ಹಳದಿ ಕಾಲಿನ ಹಸಿರು ಪಾರಿವಾಳ, ಕೋಗಿಲೆ, ದಾಸಮಂಗಟ್ಟೆ, ಹರಟೆಮಲ್ಲ, ಎರಡು ರೀತಿಯ ಪಿಕಳಾರ, ಸೂರಕ್ಕಿ, ಚೇಕಡಿ, ಫ್ಲವರ್ ಪೆಕರ್ ಹೀಗೆ ಸಾಲುಗಟ್ಟಿ ಹಾರಿ ಚಿಲಿಪಿಲಿ ಉಲಿಯೊಡನೆ ಹಣ್ಣು ಸವಿಯುತ್ತಲಿದ್ದವು. ಮಿಂಚುಳ್ಳಿಯೊಂದೂ ಮಿಂಚಿನಂತೆ ಬಂದರೆ, ಕೀಟಕ್ಕಾಗಿ ಹೊನ್ನಬೆನ್ನಿನ ಮರಕುಟುಕವೂ ಬಂದಿತು. ಅಳಿಲೂ ವಿಶಿಷ್ಟವಾದ ಸೌಂಡ್ ಮಾಡುತ್ತಾ ಸಂಚರಿಸುತ್ತಿತ್ತು. ಒಂದು ಮರ ಎಷ್ಟು ಜೀವಕ್ಕೆ ಚೈತನ್ಯದಾಯಿ. ಮರವುಳಿದರೆ ನಾವು ಇಲ್ಲದಿರೆ ಸಾವು ಎನಿಸಿತು. 

ಮೋಳೆಕೊಪ್ಪಲಿನ ತೋಟದ ಬಳಿ ಗಾಡಿಯಲ್ಲಿ ಬರುತ್ತಿದ್ದಾಗ ಬಣ್ಣವೊಂದು ಸೆಳೆದೆಳೆದು ಗಾಡಿ ನಿಲ್ಲಿಸುವಂತೆ ಮಾಡಿತು. ಸರಸರ ಕ್ಯಾಮೆರಾ ಕೈಗೆತ್ತಿಕೊಂಡು ಸಿದ್ಧವಾಗಿ ಮೂರೋ ನಾಲ್ಕೋ ಷಾಟ್ ತೆಗೆಯುವಷ್ಟರಲ್ಲಿ ಉದ್ದನೆಯ ಮೋಹಕ ಬಾಲ ಹಾರಿಸಿಕೊಂಡು ಹಾರಿಹೋಯಿತು. ನನ್ನ ಪ್ರೀತಿಯ Asian paradise flycatcher Brown Morphನಲ್ಲಿ ಕಣ್ಣನು ಕ್ಷಣಕಾಲ ತಣಿಸಿ ನೆನಪುಳಿಸಿ ಹೋಯಿತು. ಆ ತೋಟದ ಸುತ್ತ ಮರುದಿನ ಅಡ್ಡಾಡಿದೆ, ಕಾಯುತ್ತಾ ಕುಳಿತೆ, ಮುಂದೊಂದು ದಿನ ಆ ತೋಟಕ್ಕೆ ಮತ್ತೊಮ್ಮೆ ಹೊಕ್ಕೆ, ಒಡತಿ ನನ್ನ ವಿದ್ಯಾರ್ಥಿನಿ. ಬನ್ನಿ ಮೇಡಂ ಎಂದಳು. ಹೋಗದೆ ಬಿಟ್ಟೇನೆಯೆ. ಮುಂದಿನ ಮೂರು ದಿನ ಬ್ರೌನ್ ಮಾರ್ಫಿನ ಬಾಲದಂಡೆಯನ್ನು ಬೇಕಾದಷ್ಟು ಕ್ಲಿಕ್ಕಿಸಿಕೊಂಡೆ. ಹಾಗೆ ಶಿಷ್ಯೆ ಹಾಗೂ ಅವಳ ಮಕ್ಕಳ ಫೋಟೋ ತೆಗೆದುಕೊಟ್ಟೆ. ಆಸೆ ಮುಗಿಯಿತೆ! ಖಂಡಿತಾ ಇಲ್ಲ. ಮತ್ತೆ ಬಾಲದಂಡೆಯ ಬಾಲಂಗೋಚಿ ಆಗಲು ನೋಡುತ್ತಲೇ ಇದ್ದೇನೆ.

ಎಲ್ಲದಕ್ಕೂ ಕಳಶಪ್ರಾಯವೆನಿಸಿ ಸಾರ್ಥಕ ಎನಿಸಿದ್ದು ನವಿಲುಗಳ ಚಿತ್ರ ಹಿಡಿದಾಗ. ನವಿಲೆಂದರೆ ಏನೋ ನವಿರು ಏನೋ ಪುಳಕ. ಹಕ್ಕಿ ಪಯಣ ಆರಂಭಿಸಿದ ಮೊದಲ ದಿನಗಳಲ್ಲಿ ಸುತ್ತಮುತ್ತಣ ಹಳ್ಳಿಗಳಲ್ಲಿ, ಬಂಡೀಪುರ, ಕಬಿನಿ, ಬಿಳಿಗಿರಿ ಎಲ್ಲೆಂದರಲ್ಲಿ ನವಿಲು ನೋಡಿದ್ದೆ. ಕಣ್ಣರಳಿಸಿ ನೋಡಿದ್ದೆ. ಚಿತ್ರವನ್ನೂ ತೆಗೆದಿದ್ದೆ. ಚೀರನಹಳ್ಳಿಯ ಒಂದೆರಡು ದಿನಗಳ ಸೆಷನ್‌ಗಳು, ಮೋಳೆಕೊಪ್ಪಲಿನ ಕೆಲ ದಿನಗಳು ನವಿಲಾಯಣದ ಸುವರ್ಣ ಕ್ಷಣಗಳು. ಅವೆಲ್ಲಾ ಪಕ್ಕಾ perfect captures ಎಂದಲ್ಲ. ಆದರೆ ಆ ಸೊಬಗು ಮನಕಾನಂದ ನೀಡಿದವು. ಆಡು ಬಾ ನವಿಲೆ, ಕುಣಿದಾಡು ಬಾ ನವಿಲೆ ಎಂದು ನಾ ನವಿಲಾಗುವಂತೆ ಗರಿಗೆದರಿಸಿದವು. ಬದುಕಿನ ಪಯಣದಲ್ಲಿ ಒಂದೈದು ವರ್ಷ ಕಿರಿಯಳನ್ನಾಗಿಸಿ ಹುಮ್ಮಸ್ಸು ಹುಟ್ಟಿಸಿದವು. ಚೀರನಹಳ್ಳಿಯ ಗದ್ದೆಯ ಬಳಿ ಶಿಕ್ರಾ ಹಸಿರು ಹಿನ್ನೆಲೆಯಲ್ಲಿ ಕೂತಿತ್ತು. ಒಂದಷ್ಟು ಫೋಟೊ ತೆಗೆದೆ. ಮುಂದೆ ಹೆಜ್ಜೆ ಹಾಕಿದರೆ ಜಮೀನಿನ ಹಿಂಭಾಗದಲ್ಲಿದ್ದ ಪಂಪಿನ ಮನೆಯ ಮೇಲೆ ನಾಲ್ಕಾರು ನವಿಲು ಹತ್ತಿ ಇಳಿದು, ಗರಿಗೆದರುತ್ತಿದ್ದವು. ನಾನೋ ಸಂಪೂರ್ಣವಾಗಿ ಬ್ಯಾಕ್ ಸೈಡಿನಲ್ಲಿದ್ದೆ. ಫೋಟೊಗೆ ಅಗತ್ಯವಾದ ಹಿನ್ನೆಲೆ, ಬೆಳಕು ಎರಡೂ ಈ ಬದಿಯಿಂದ ಸಿಗುತ್ತಿರಲಿಲ್ಲ. ಆದರೆ ಎಂದೂ ಆ ಕಡೆಗೆ ಹೋಗಿರಲಿಲ್ಲ. ಗಾಡಿ ಸಾಗಿ ಹಳ್ಳ ಬಿದ್ದಿದ್ದ ಗದ್ದೆ ದಾರಿ, ಕಾಲ ಬಳಿ ಕ್ಯಾಮೆರಾ. ಸೀಟಿನಲ್ಲಿ ಟ್ರೈಪಾಡ್ ಇರಿಸಿಕೊಂಡು ಗಾಡಿ ಓಡಿಸೋದೂ ಕಷ್ಟ ಎನಿಸುತ್ತಿತ್ತು. ಮಧ್ಯಾಹ್ನವೂ ಆಗಿದ್ದರಿಂದ ಮನೆಗೆ ಮರಳಿದೆ.

ಮರುದಿನ ಅದೇ ಜಾಗಕ್ಕೆ ಬೇರೆ ರಸ್ತೆಯಿಂದ ಹೊರಟೆ. ತಿರುವಿನ ಮರದಲ್ಲಿದ್ದ ಗೂಬೆಯಿಂದ ಆಕರ್ಷಿತವಾಗಿ ನವಿಲನ್ನೆ ಮರೆತೆ. ಗೂಬೆಯ ನಾಲ್ಕಾರು ಫೋಟೊ ತೆಗೆದ ಬಳಿಕ ಜೋಪಾನವಾಗಿ ಗಾಡಿ ಓಡಿಸುತ್ತಾ ನವಿಲಿದ್ದ ಜಾಗ ತಲುಪಿದೆ. ನೋಡ್ತೀನಿ… ನಾನು ಕುಣಿಯುವುದೊಂದು ಬಾಕಿ. ಪಂಪಿನ ಮನೆ ಮೇಲೆ ನವಿಲು ಗರಿತೆರೆದು ನರ್ತಿಸುತ್ತಿದೆ. ಕ್ಯಾಮೆರಾ ಜೋಡಿಸುವ ತನಕ ಇರುತ್ತದೆಯೋ ಇಲ್ಲವೋ ಎಂಬ ಆತಂಕದ ನಡುವೆ ಟ್ರೈಪಾಡಿರಿಸಿ ಕ್ಯಾಮೆರಾ ಲೆನ್ಸ್ ಹೊಂದಿಸಿಕೊಂಡೆ. ಕ್ಲಿಕ್ ಕ್ಲಿಕ್ ಕ್ಲಿಕ್ ಎಷ್ಟು ಉಸಿರು ಬಿಗಿ ಹಿಡಿದೆನೋ ನನಗೆ ಗೊತ್ತಿಲ್ಲ. ಕಾಲುನೋವೂ ಗೊತ್ತಾಗಲೂ ಇಲ್ಲ. ಅರ್ಧ ಗಂಟೆಯ ತನಕ ಕ್ಯಾಮೆರಾ ಉದರ ಭರ್ತಿಯಾಯಿತು.

ಕಾಯುತ್ತಿದ್ದವಳಿಗೆ ಅನಿರೀಕ್ಷಿತ ವರವೂ ಸಿಕ್ಕಿತು. ನೋಡ ನೋಡುತ್ತಿದ್ದಂತೆ ಹಾರುವ ಭಂಗಿಗೆ ನವಿಲು ಸಜ್ಜಾಯಿತು, ಹಾರುತ್ತದೆಂದು ಕ್ಯಾಮೆರಾ ಅಡ್ಜೆಸ್ಟ್ ಮಾಡಿದೆ. ಹಾರಿತು, ಪೂರ್ಣ ಗರಿತೆರೆದು ಎದುರಿನ ಮರಕ್ಕಿಳಿಯಿತು, ನಾಲ್ಕೈದು ಷಾಟ್… ನಾಲ್ಕೈದೇ ಷಾಟ್. ನವಿಲೇ ನನ್ನೊಲವಿನ ನವಿಲೆ, ನನ್ನ ನಲವಿನ ನವಿಲೆ ಏನು ನಿನ್ನ ಬೆಡಗಿನ ಲೀಲೆ! ಲೀಲಾ ಪೂರಾ ಪೂರಾ ಬಿದ್ದೇಹೋಗಿದ್ದಳು. ಆನಂದದ ಅಮಲಿನಲ್ಲಿ ಬಿದ್ದೇಹೋಗಿದ್ದಳು. Mary Oliver ಹೇಳಿದಂತೆ `I held my breath as we do sometimes to stop time when something wonderful has touched us’. ಹೇಳಲು ಕೇಳಲು ಇನ್ನೇನಿದೆ. ಓ ಸೃಷ್ಟಿಕರ್ತ I am in love with you, for ever, for ever and for ever. 

ದೇವತೆಯೊಂದು ನನ್ನೆದುರೆ ನನ್ನ ಕಣ್ಣೆದುರೆ ದೇವಲೋಕಕ್ಕೆ ತೇಲಿ ಹೋದ ಸುಂದರ ಸುರಸ್ವಪ್ನವೊಂದು ಸಾಕಾರಗೊಂಡು ಮಾತು ಮರೆತ ಮೂಕಿಯಾದೆ, ದಣಿದ ಮುದ್ದಿನ ಮಗು ಕ್ಯಾಮೆರಾಗೆ ರೆಸ್ಟಿತ್ತೆ. ನಾಲ್ಕೈದು ಮೈಲಿ ದೂರದ ಮನೆಗೆ ಹೇಗೆ ಬಂದೆನೋ ಗೊತ್ತಿಲ್ಲದ ಟ್ರಾನ್ಸ್ ಸ್ಟೇಜಿನಲ್ಲಿದ್ದೆ. ಗಾಡಿ ಮತ್ತು ನಾನು ಮನೆ ತಲುಪಿದೆವು ಅಷ್ಟೆ. ಸಿಸ್ಟಂಗೆ ಕಾರ್ಡ್ ಹಾಕಿದೆ, ಕಾರ್ಡ್ ರೀಡ್ ಆಗುವವರೆಗೆ ಎದೆಯ ಬಡಿತ ಎಣಿಸಿಕೊಳ್ಳುವಂತೆ ಬಡಿದುಕೊಳ್ಳುತ್ತಿತ್ತು. ನೋಡಿದರೆ ನಾಲ್ಕೂ ಷಾಟ್‌ಗಳು ಬ್ಲರ್ ಆಗಿರಲಿಲ್ಲ ಅನ್ನೋದು ಸಮಾಧಾನದ ನಿಡಿದಾದ ಉಸಿರು. ಕ್ವಾಲಿಟಿ, ಕ್ಲ್ಯಾರಿಟಿ, ಯಾವುದೂ ಲೆಕ್ಕಕ್ಕಿರಲಿಲ್ಲ. ಅದು ಅತ್ಯುತ್ಕೃಷ್ಟ ಎಂದೂ ಭಾವಿಸುವುದಿಲ್ಲ. ಬ್ಲರ್ ಆಗಿಲ್ಲವಲ್ಲ, ಅಷ್ಟು ಸಾಕು. ಮಹತ್ಕಾರ್ಯ ಮಾಡಿದಂತೆ ನೆಮ್ಮದಿಯಿಂದ ಮೈಮರೆತು ಮಲಗಿದೆ. ಬಿದ್ದ ಸ್ವಪ್ನಗಳಲ್ಲಿಯೂ ಆ ಮಯೂರನೇ ಮಯೂರಾಸನದ ಅಧಿಪತಿಯಾಗಿದ್ದ. ಒಂದು ಚಿತ್ರ ನೂರು ದಿನದ ಶ್ರಮವನ್ನೆಲ್ಲ ಮರೆಸಿತು, ಮತ್ತಷ್ಟು ನವಿಲುಗಳ ಹುಚ್ಚಿಗೆ ಸಿಲುಕಿಸಿತು. ಆ ಒಂದು ಚಿತ್ರ ಫೇಸ್ ಬುಕ್ಕಿನಲ್ಲಿ ಎಷ್ಟು ಜನಪ್ರೀತಿ ಗಳಿಸಿತೆಂದರೆ ಲೈಕಿಗ ಸಂಖ್ಯೆ ಐದು ಸಾವಿರ ದಾಟಿತ್ತು.

ಮರುದಿನಗಳಲ್ಲಿ ನವಿಲಿನೆಡೆಗೆ ನನ್ನ ನಡಿಗೆ. ಗಂಟೆಗಟ್ಟಲೆ ಕಾಯುತ್ತಿದ್ದೆ, ನವಿಲುಗಳು ಇದ್ದವು, ಬರುತ್ತಿದ್ದವು, ಆದರೆ ಆ ಚಿತ್ರ ಚರಿತ್ರೆ ಪುನರಾವರ್ತನೆ ಆಗಲಿಲ್ಲ. ಹಳಗನ್ನಡ ಸಾಹಿತ್ಯದಿಂದ ಹೊಸಗಾಲದ ಕನ್ನಡ, ಜಾನಪದ, ಚಿತ್ರಗೀತೆಗಳಲ್ಲಿ ನವಿಲಿನ ವರ್ಣನೆಯನ್ನು ಪ್ರಾತಿನಿಧಿಕವಾಗಿ ಚಿತ್ರಿಸಲು ಅಗತ್ಯವಾದ ನವಿಲಿನ ಚಿತ್ರಗಳಿಗಾಗಿ ಚೀರನಹಳ್ಳಿ ನಂತರ ಮೋಳೆಕೊಪ್ಪಲಿಗೆ ಹೊರಳಿದೆ. ಕಾಮಧೇನುವಿನಂತೆ ಆಸೆ ಪೂರೈಸಿತು. ನವಿಲ ಚಿತ್ರಗಳೂ ಕೈವಶವಾದವು. ಆ ಮರ, ಈ ಮರ, ಆ ಹೊಲ, ಈ ಗದ್ದೆ, ಆ ತೆವರಿ ಎಲ್ಲೆಂದರಲ್ಲಿ ನವಿಲೋ ನವಿಲುಗಳು. 12ಕ್ಕೂ ಹೆಚ್ಚು ಕಂತುಗಳಲ್ಲಿ ಈ ನವಿಲಿನ ಕಥಾನಕವನ್ನು ಬರಹ ರೂಪಕ್ಕೆ ತಂದೆ. ನನ್ನ ನಿಡುಗಾಲದ ಗೆಳತಿ ಕವಯತ್ರಿ ಎಚ್.ಆರ್. ಸುಜಾತಾ ಒಂದು ಕಂತಿಗಾಗಿ ನವಿಲ ಕವಿತೆ ಬರೆದುಕೊಟ್ಟರು. ನವಿಲಿನ ಕಥಾನಕ ಮುಗಿದರೂ ನವಿಲಿನ ಚಿತ್ರ ತೆಗೆಯೋದು ನಿಲ್ಲಲಿಲ್ಲ. ನನ್ನ ಮುಂದಿನ ಹೊರರಾಜ್ಯದ ಪ್ರವಾಸಗಳು ಸತತವಾಗಿದ್ದ ಕಾರಣ ಮಂಡ್ಯದ ಅಕ್ಕಪಕ್ಕ ಚಿತ್ರ ತೆಗೆಯುವ ಕೆಲಸ ತಾತ್ಕಾಲಿಕವಾಗಿ ನಿಲ್ಲುತ್ತಿತ್ತು. ನವಿಲ ಚಿತ್ರ ನೋಡಿದ ನನ್ನ ಮೆಚ್ಚಿನ ಶಿಷ್ಯೆ ಶುಭಶ್ರೀ `ಮೇಡಂ, ನನ್ನನೊಂದು ದಿನ ನವಿಲಿಗೆ ಕರೆದುಕೊಂಡು ಹೋಗ್ತೀರಾ’ ಎಂದಳು, ಬಂದಳು. ಅವಳಿಗೊಂದು ಕ್ಯಾಮೆರಾ ಇತ್ತೆ. ಕ್ಲಿಕ್ಕಿಸಿದ ಅವಳು ಪತ್ರಿಕೆಯೊಂದಕ್ಕೆ ನವಿಲಿನ ಬಗ್ಗೆ ಲೇಖನ ಬರೆದಳು. ನಾನೂ ನವಿಲ ಬಗ್ಗೆ ಉದಯವಾಣಿ, ವಿಶ್ವವಾಣಿ ಪತ್ರಿಕೆಗಳಿಗೆ ಲೇಖನ ಬರೆದುಕೊಟ್ಟೆ.

ಮೋಳೆಕೊಪ್ಪಲಿನಲ್ಲಿ ನಾನು ಅಡ್ಡಾಡುತ್ತಿದ್ದ ನವಿಲ ಅಡ್ಡಾಗಳು ಮೊದಲಿನಂತಿಲ್ಲ. ಅಲ್ಲಿದ್ದ ಕೋಳಿ ಫಾರಂ. ಚಾಲೂ ಆಗಿದ್ದಕ್ಕಿಂತಲೂ ಮುಚ್ಚಿದ್ದೇ ಹೆಚ್ಚು. ಮೇಲೆ ಹತ್ತಿ ಅಡ್ಡಾಡುತ್ತಿದ್ದ ನವಿಲು ಕೂಗಿ ಕರೆಯುತ್ತಿದ್ದವು. ಈಗಲ್ಲಿ ಸವಾರಿ ಮಾಡುವ ನವಿಲು ಕಡಿಮೆಯಾಗಿವೆ. ಫಾರಂ ಹಿಂದಿನ ಖಾಲಿ ಇದ್ದ ಹೊಲಗಳ ಬಯಲಲ್ಲಿ ಬಿಸಿಲಲ್ಲಿ ಕಾಯುತ್ತಿದ್ದವಳು ನಾನು. ಹಕ್ಕಿ ಬೇಕೆಂದರೆ ಬಿಸಿಲೂ ಫ್ರೀಯಾಗಿ ಸಿಗುತ್ತಿತ್ತು. ಕೋಳಿಫಾರಂ ಕೈಯಿಂದ ಕೈಯಿಂದ ಬದಲಾಗುತ್ತಾ ಸ್ಥಗಿತ ಸ್ಥಿತಿಗೆ ತಲುಪಿತು. ಹೆಂಚು ಕುಸಿಯುತ್ತಿದ್ದವು, ಅಲ್ಲಿ ವಸತಿ ಕಂಡುಕೊಂಡ ಗೂಬೆಗಳು ನನ್ನೆಡೆಗೆ ಪಿಳಿಪಿಳಿಸುತ್ತಾ ಎಚ್ಚರದ ನೋಟದಲ್ಲಿ ನಾನೇನು ಮಾಡುತ್ತೇನೆಂದು ಕಾಯ್ದವು. ಕಳ್ಳಹಜ್ಜೆ ಹಾಕುತ್ತಾ ಸಮೀಪಿಸಿದರೆ ಕ್ಯಾಮೆರಾ ಹಿಡಿದವಳನ್ನೂ ಉದ್ದದ ಲೆನ್ಸನ್ನು ಸಂಶಯದ ಕಣ್ಣಿನಲ್ಲಿ ನೋಡುತ್ತಿದ್ದವು, ಹತ್ತು ಹೆಜ್ಜೆ ಮುಂದಿರಿಸಿದರೆ ಹಾರುತ್ತಿದ್ದವು.  

ಒಮ್ಮೆ ಮೂರೂ ಗೂಬೆಗಳಿಗಾಗಿ ಕಾಯುತ್ತಿದ್ದಾಗ ಮೂರ್ನಾಲ್ಕು ಜನ ಬಂದರು. “ಏನು ಮೇಡಂ ಏನ್ ಮಾಡ್ತಾ ಇದೀರಿ” ಎಂದು ನಿಂತೇ ಬಿಡೋದೆ. ಕ್ಯಾಮೆರಾ ಇಟ್ಕೊಂಡು ಇನ್ನೇನು ತಾನೆ ಮಾಡಲು ಸಾಧ್ಯ? ಆದರೂ `ಹಕ್ಕಿ ಫೋಟೋ ತೆಗೆಯುತ್ತಿದ್ದೆ’ ಎಂದೆ ಮೆಲುದನಿಯಲ್ಲಿ. ಅವರಾಗಿಯೇ “ನೀವು ಲೀಲಾ ಅಪ್ಪಾಜಿ ಮೇಡಂ ಅಲ್ವೆ. ವುಮೆನ್ಸ್ ಕಾಲೇಜಲ್ಲಿ ಪ್ರಿನ್ಸಿಪಾಲರಾಗಿದ್ರಿ. ನಮ್ಮ ಹುಡುಗಿ ನಿಮ್ಮ ಕಾಲೇಜಿನಲ್ಲಿದ್ದಾಗ ನಾನೂ ಕಾಲೇಜಿಗೆ ಬಂದಿದ್ದೆ, ಅವಳಿಗೆ ಅಟೆಂಡೆನ್ಸ್ ಕೊರತೆಯಾಗಿ ಪರೀಕ್ಷೆಗೆ ಕೂರಿಸಲ್ಲ ಎಂದಿದ್ದಿರಿ” ಎಂದ. ಆ ನೆನಪುಗಳ ಭಾರವನ್ನೆತ್ತಿ ದೂರ ಒಗೆದು ನಾನೂ ನಾನೇ ಆಗಿದ್ದ ನನಗೀಗ ಈಗ ಎದೆಯಂಗಳಕ್ಕೆ ಇಳಿಸಿಕೊಳ್ಳಲಿರಲಿ ತಾಕಿಸಿಕೊಳ್ಳಲೂ ಮನಸ್ಸಿರಲಿಲ್ಲ. ಬಂದವರ ಜೊತೆ ಮಾತಾಡುತ್ತಾ ಆ ಜಾಗ ಅವನದ್ದೆಂದು ಖಾತ್ರಿಯಾಯಿತು. ಅದೇ ಊರಿನ ರೈತನೊಬ್ಬ ಅವನಿಗೂ ಹೇಳದೇ ಅವನ ಹೊಲದಲ್ಲಿ ಹುರುಳಿ ಚೆಲ್ಲಿದ್ದ. ನಾಲ್ಕಾರು ದಿನ ಬಿಟ್ಟು ಹೋದರೆ ಹೊಲಕ್ಕೆ ತಂತಿ ಬೇಲಿ ಬಿಗಿದು ತನ್ನಾಸ್ತಿಯನ್ನು ಬಂದೋಬಸ್ತಿಸಿದ್ದ. ದಾಟಲೂ ದಾರಿಯನ್ನೂ ಬಿಟ್ಟಿರಲಿಲ್ಲ. ನವಿಲು ಗರಿ ಬಿಚ್ಚುತ್ತಿದ್ದ ಗದ್ದೆ ಬಯಲಿಗೆ ತೆಂಗನ್ನು ನೆಟ್ಟರು, ಜೊತೆಗೆ ಕಬ್ಬನ್ನೂ. ನೂರಾರು ಸಲ ತಾನೂ ಕುಣಿದು ನನ್ನನ್ನೂ ಕುಣಿಸಿದ್ದ ನವಿಲುಗಳಿಗೆ ದಿಗ್ಬಂಧನವಾಗಿತ್ತು. ಮರಿಗಳೊಡನೆ ಸಾಲಾಗಿ ಸಾಗುತ್ತಿದ್ದ ನವಿಲುಗಳು ಕಾಣೆಯಾದವು. ಸಖಿಗೆ ಹಂಬಲಿಸಿ ಕೂಗುತ್ತಿದ್ದ ನವಿಲುಗಳು ದೂರದೂರವಾದವು. ಕೊರೊನಾ ಬಳಿಕ ಮೋಳೆಕೊಪ್ಪಲು, ಚೀರನಹಳ್ಳಿಯ ಪಯಣಗಳು ಬಹುತೇಕ ತಟಸ್ಥ. ಆಗಾಗ್ಗೆ ಕ್ಯಾತುಂಗೆರೆಗೆ ಮಾತ್ರ ಹೋಗುತ್ತಿದ್ದೇನೆ. ನಡೆಯುವಷ್ಟು ಕಾಲ ಕಾಲು ಇರಬೇಕು. ಹಲವು ಸಲ ಬಿದ್ದೆದ್ದ ಸ್ಕೂಟರ್ ಸವಾರಿ ನಿಲ್ಲಿಸಿದ್ದೇನೆ ಕಾಲು ಸರ್ಜರಿಯ ಬಳಿಕ. ಕಾಲಿಗೂ ಕಾಲಕ್ಕೂ ಕ್ಯಾಮೆರಾಕ್ಕೂ ನಮಸ್ಕಾರ… ಕಾಲಿಗೆ ನಡೆ ಇರುವ ತನಕ ಕ್ಯಾಮೆರಾ ಕೈಯಲ್ಲಿರಲಿ ಎಂದಷ್ಟೆ ಕೋರಿಕೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

January 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: