
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
—-
ರೂಪದ ಕಡೆ ಗಮನ, ಸಾಂಪ್ರದಾಯಿಕ ಪ್ರಾಸ ಮತ್ತು ಲಯಗಳ ಪ್ರತಿ ಒಲವು, ಹಾಗೂ ಜ್ಯಾಪನೀಸ್ ‘ಟಾಂಕಾ’ (Tanka) ದಂತಹ ವಿದೇಶಿ ಪ್ರಕಾರಗಳ ಪ್ರಯೋಗಗಳಿಂದಾಗಿ ಅಯ್ದಸ್ ಮರ್ಚ್ಯೇನಸ್-ರು ತಮ್ಮದೇ ತಲೆಮಾರಿನ ಕವಿಗಳು ಹಾಗೂ ಕಿರಿಯ ಕವಿಗಳಿಂದ ಭಿನ್ನವಾಗಿ ಎದ್ದು ಕಾಣುತ್ತಾರೆ. ‘ಆಧುನಿಕೋತ್ತರ ವಿನೋದ’ಗಳ (postmodernist games) ಪ್ರತಿ ಇರುವ ಆಸಕ್ತಿಯನ್ನು ಅವರು ತಮ್ಮ ಕಾವ್ಯದಲ್ಲಿ ಪ್ರದರ್ಶಿಸುತ್ತಾರೆ, ಉದಾಹರಣೆಗೆ, ಅವರ ಕವನಗಳಲ್ಲಿ ವಿವಿಧ ಪರಿಚಿತ ಹಾಗೂ ಗೂಢ ಉಲ್ಲೇಖಗಳು, ಪ್ರಸ್ತಾಪಗಳು, ಹಾಗೂ ಅರ್ಥನಿರೂಪಣೆಗಳು ಕಂಡುಬರುತ್ತವೆ; ಅವರ ನಂತರದ ಸಂಕಲನಗಳಲ್ಲಿ ಅವರು ತಮ್ಮ ಕಾವ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದರ ಕುರಿತು ವಿವರವಾಗಿ ಬರೆದಿದ್ದಾರೆ.
ಅಸ್ತಿತ್ವದ ಸ್ಥಿರತೆಯ ಕಾರಣ ಮತ್ತು ರೂಪವಾಗಿರುವ ದೇವರನ್ನು ಹುಡುಕುವ ಮತ್ತು ಆತ್ಮದ ಅಮರತ್ವದ ಬಗ್ಗೆ ಮಾತನಾಡಿದ ಅವರ ಸಮಕಾಲೀನರಲ್ಲಿ ಅಯ್ದಸ್ ಮರ್ಚ್ಯೇನಸ್ ಮೊದಲಿಗರು. ಅವರು ತಮ್ಮ ಕಾವ್ಯದ ಹೆಚ್ಚಿನ ವಸ್ತುಗಳನ್ನು ವಿಲ್ನಿಯಸ್ ನಗರದಲ್ಲಿನ ದೈನಂದಿನ ಜೀವನದಿಂದ ತೆಗೆದುಕೊಳ್ಳುತ್ತಾರೆ. ಮರ್ಚ್ಯೇನಸ್ ರೂಪದ ಕಲಾಭಿಜ್ಙರಾಗಿದ್ದು, ಪ್ರಧಾನವಾಗಿ ಸಾನೆಟ್ಗಳನ್ನು ಬರೆಯುತ್ತಾರೆ.
ಅಯ್ದಸ್ ಮರ್ಚ್ಯೇನಸ್-ರ ಕವನಗಳು ಮೊದಲು 1980-ರ ದಶಕದ ಮಧ್ಯಭಾಗದಲ್ಲಿ ಲಿಥುವೇನಿಯನ್ ಪತ್ರಿಕೆಗಳಲ್ಲಿ ಕಾಣಿಸಿಕೊಂಡವು ಮತ್ತು ಅವರ ಮೊದಲ ಕವನ ಸಂಕಲನ Šulinys (The Water Well) 1988-ರಲ್ಲಿ ಪ್ರಕಟವಾಯಿತು. ಎರಡು-ಮೂರು ವರ್ಷಕ್ಕೊಮ್ಮೆ ಒಂದು ಕವನ ಸಂಕಲನವೆಂಬಂತೆ ಪ್ರಕಟಿಸುತ್ತಾ ಈವರೆಗೆ ಹದಿನೈದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕವನಗಳ ಜೊತೆಗೆ ಮರ್ಚ್ಯೇನಸ್-ರು ಪ್ರಬಂಧಗಳನ್ನು,ವಿಮರ್ಶೆಗಳನ್ನು, ಹಾಗೂ ವ್ಯಾಖ್ಯಾನಗಳನ್ನು ಸಹ ಪ್ರಕಟಿಸಿದ್ದಾರೆ.

ಅವರ ಮೊದಲ ಸಂಕಲನದಿಂದ ಹಿಡಿದು ಇತ್ತೀಚಿನ ಸಂಕಲನಗಳವರೆಗೂ, ಮರ್ಚ್ಯೇನಸ್-ರ ಕಾವ್ಯಕಾರ್ಯಕ್ಕೆ ಸಕಾರಾತ್ಮಕ ವಿಮರ್ಶೆಗಳು ಹಾಗೂ ಮನ್ನಣೆ ಎರಡೂ ದೊರಕಿವೆ. ಅವರ ಕಾವ್ಯದಲ್ಲಿ ಕಂಡುಬರುವ “ಶಾಸ್ತ್ರೀಯ ಮೌಲ್ಯಗಳು ಮತ್ತು ಸಮಕಾಲೀನತೆಯ ಸಾಮರಸ್ಯದ ಸಮತೋಲನಕ್ಕಾಗಿ” 2005-ರಲ್ಲಿ ಅವರಿಗೆ ‘ಲಿಥುವೇನಿಯನ್ ರಾಷ್ಟ್ರೀಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. “ಶಾಸ್ತ್ರೀಯ ಮೌಲ್ಯಗಳು” ಚರ್ಚಿಸಬಹುದಾದ ವಿಷಯವಾದರೂ, ಶಾಸ್ತ್ರೀಯ ಕಾವ್ಯದ ಸ್ವರೂಪಾತ್ಮಕ ಗುಣಲಕ್ಷಣಗಳಾದ ಪ್ರಾಸ ಮತ್ತು ಲಯಗಳ ಪ್ರತಿ ಕವಿಯ ನಿಷ್ಠೆಯನ್ನು ನಿರಾಕರಿಸಲಾಗದು. ಶಾಸ್ತ್ರೀಯ ರೂಪಗಳ, ವಿಶೇಷವಾಗಿ ‘ಸೊನಾಟಾ,’ ಮೇಲಿರುವ ಅವರ ಹತೋಟಿ, ಮರ್ಚ್ಯೇನಸ್-ರನ್ನು ಹಿಂದಿನ ಕಾವ್ಯದ ಅಂತರ್ಗತ ಗಾಂಭೀರ್ಯದಿಂದ ಹೊರತಾಗಿರುವ ವಿಶಿಷ್ಟವಾದ, ನೆಲಭದ್ರ ಭಾಷೆಯಲ್ಲಿ ಮಾತನಾಡುವುದನ್ನು ತಡೆಯುವುದಿಲ್ಲ.
ಲಿಥುವೇನಿಯಾದ ಮತ್ತೊಬ್ಬ ಹೆಸರಾಂತ ಕವಿ ಶಿಗಿತಾಸ್ ಪಾರೂಲ್ಶ್ಕಿಸ್ (Sigitas Parulskis) ಮರ್ಚ್ಯೇನಸ್-ರ ಕಾವ್ಯವನ್ನು ಹೀಗೆ ವರ್ಣಿಸಿದರು: “ನಾವು ಲಿಥುವೇನಿಯನ್ ಕಾವ್ಯದೇವತೆಗಳ ಪಂಕ್ತಿಯನ್ನು ಜತೆಗೂಡಿಸುವುದಾದರೆ, ಮರ್ಚ್ಯೇನಸ್-ರನ್ನು ‘ಸಾಧಾರಣತೆ’ಯ (banality) ದೇವತೆ ಎಂದು ಕರೆಯಬೇಕು. ನೇರವಾಗಿ ಹೇಳುವುದಾದರೆ, ಮರ್ಚ್ಯೇನಸ್-ರು ‘ಸಾಧಾರಣತೆ’ಯ ಗುಲಾಮನಲ್ಲ, ಅದರ ರಾಜ – ಅದು ಈ ರಾಜನ ಸೇವೆ ಮಾಡುತ್ತೆ ಮತ್ತು ಅವನಿಗೆ ತಲೆಬಾಗುತ್ತೆ, ಭಾಷೆಯ ದೇಹದಲ್ಲಿ ಮತ್ತು ಕಾವ್ಯದ ರಚನೆಯಲ್ಲಿ ಕೆಲವೊಮ್ಮೆ ಗಮನಿಸದ (ಆದರೆ ಬಹಳ ನಿರ್ಣಾಯಕ) ಕಾರ್ಯಗಳನ್ನು ನಿರ್ವಹಿಸುತ್ತದೆ. ಇಲ್ಲಿ ಸಾಧಾರಣತೆಯು ಕ್ಷುಲ್ಲಕತೆ ಅಥವಾ ವ್ಯಂಗ್ಯವಾಗಿರದೆ, ಸರಳತೆಯ ಅಥವಾ ನಿಷ್ಕಪಟತೆಯ ಅರ್ಥಗಳಿಗೆ ಹೆಚ್ಚು ಹತ್ತಿರವಾಗಿರುತ್ತದೆ.”
ಶಿಗಿತಾಸ್ ಪಾರೂಲ್ಶ್ಕಿಸ್-ರು ಹಿಂದೊಮ್ಮೆ ಮರ್ಚ್ಯೇನಸ್-ರ ಕಾವ್ಯವನ್ನು ಹೀಗೆ ವಿವರಿಸಿದ್ದರು: “ಸಾಮಾನ್ಯವಾಗಿ, ಸಾಧಾರಣತೆಯು ಒಂದು ಪಠ್ಯವನ್ನು ಅಧಿಕೃತ ಸಾಕ್ಷ್ಯಕ್ಕೆ (authentic testimony) ನಿರೋಧಕವಾಗಿಸುತ್ತದೆ. ಆದರೆ ಮರ್ಚ್ಯೇನಸ್ ಅವರ ಕಾವ್ಯದ ವಿಶಿಷ್ಟ ಲಕ್ಷಣವೆಂದರೆ ಸಾಧಾರಣತೆಗಳು ಮತ್ತು ಕಾವ್ಯಾತ್ಮಕ ಕ್ಲೀಶೆಗಳನ್ನು ಹೊಸದಾಗಿ ಪ್ರತಿಧ್ವನಿಸುವಂತೆ ಮಾಡುವ ಸಾಮರ್ಥ್ಯ. ಈ ಕಾರಣಕ್ಕಾಗಿ ಅವರ ಕವನಗಳು ತುಲನಾತ್ಮಕವಾಗಿ ಪಾರದರ್ಶಕ ಹಾಗೂ ಸುಲಭವಾಗಿ ಎಟುಕುವಂತಹ ಕವನಗಳು; ಅಲ್ಲದೆ, ಅವರ ಕವನಗಳಲ್ಲಿ ಲಿಥುವೇನಿಯನ್ ಗೀತ ಸಂಪ್ರದಾಯವು ಸ್ಪಷ್ಟವಾಗಿ ಕಂಡುಬರುತ್ತದೆ.”

ವಿಮರ್ಶಕ ಟೊಮಾಸ್ ಆ್ಯಂಡ್ರಿಯುಕೊನಿಸ್-ನ ಪ್ರಕಾರ ಮರ್ಚ್ಯೇನಸ್ ಅವರ ಕಾವ್ಯವು ಸಂಪರ್ಕತೆ ಮತ್ತು ವಿರೋಧಾಭಾಸಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯದಿಂದ ಗುರುತಿಸಲ್ಪಟ್ಟಿದೆ. ಕಾವ್ಯದಲ್ಲಿ ಈ ಸಂಪರ್ಕತೆಯು ಕ್ಲಾಸಿಕ್ ಮತ್ತು ಸಮಕಾಲೀನ, ಹಾಗೂ ಇತರ ಪಠ್ಯಗಳ ಬಳಕೆಯ ನಡುವೆ ಸಮತೋಲನವನ್ನು ಬಯಸುವಂತೆ ಕಾಣಿಸಿಕೊಳ್ಳುತ್ತದೆ. ‘ಸವೆದ ಉಡುಪು’ಗಳ ರೂಪಕದ ಮೂಲಕ ಮರ್ಚ್ಯೇನಸ್ ಈ ‘ಪೋಸ್ಟ್-ಮಾಡರ್ನಿಸ್ಟ್ ಪ್ಯಾಸ್ಟೀಶ್’ (post-modernist pastiche) ಶೈಲಿಯನ್ನು ವರ್ಣಿಸುತ್ತಾರೆ:
ಅವುಗಳನ್ನು ನಾನೇ ಹೊಲಿದುಕೊಳ್ಳುವುದು ಯಾವ ರೀತಿಯಲ್ಲೂ ಅಸಾಧ್ಯ
ಹೊಸ ಬಟ್ಟೆ ಕೊಳ್ಳುವ ಸಾಮರ್ಥ್ಯ ಖಂಡಿತವಾಗಿಯೂ ಹೊಂದಿಲ್ಲ
ನೀನು ಹೆಚ್ಚು ಹಣತೆತ್ತು ಅಥವಾ ಏನೂ ಕೊಡದೆ ಪಡೆದ ಬಟ್ಟೆಗಳು
ನೀನು ಕೊಟ್ಟ ಸೆಕೆಂಡ್-ಹ್ಯಾಂಡ್ ಬಟ್ಟೆಗಳಿಂದ ನನ್ನ ಆತ್ಮವನ್ನು ಹೊದ್ದುಕೊಳ್ಳುವೆ ಮರ್ಚ್ಯೇನಸ್ ಅವರ ಆರಂಭಿಕ ಸಂಗ್ರಹಗಳಲ್ಲಿನ ಕವನಗಳು, ಸುಮಾರು ಕಾಲದ ವರೆಗೂ ಅಗಲವಾದ ಕುಂಚದಿಂದ ಬಿಡಿಸಲ್ಪಟ್ಟ ಹಾಗೂ ಎತ್ತರದ ಸ್ವರವುಳ್ಳ ಕವನಗಳಾಗಿದ್ದವು – “ಕಾವ್ಯವು ಪ್ರಪಂಚದ ಏಕಾಂಗಿತನವನ್ನು ಸಂರಕ್ಷಿಸುವ ಸೃಜನಶೀಲ ಶಕ್ತಿ” ಎಂಬ ಘೋಷಣೆಯನ್ನು ಲಕ್ಷಿಸಿ ಬರೆಯಲ್ಪಟ್ಟ ಕವನಗಳಂತೆ. ಉದಾಹರಣೆಗೆ, ‘ಆರ್ಸ್ ಪೊಯೆಟಿಕಾ’ ಕವನದ ಈ ಸಾಲುಗಳನ್ನು ನೋಡಿ:
ಈ ಲೋಕ ಕೊನೆಗೊಳ್ಳುತ್ತಿದೆ,
ಆದ ಕಾರಣ,
ನೀನು ಕವನಗಳ ಬರೆಯಬೇಕು.
ಆದರೆ, ಅವರ ನಾಲ್ಕನೇ ಸಂಗ್ರಹದೊಂದಿಗೆ (Metai be Žiogo; A Year Without the Grasshopper, 1994) ಮರ್ಚ್ಯೇನಸ್-ರು ಅಗಲ ಕುಂಚದ ರೇಖೆಗಳು, ಪ್ರತಿಧ್ವನಿಸುವ ಅಮೂರ್ತತೆಗಳು ಮತ್ತು ಘೋಷಣಾ ಹೇಳಿಕೆಗಳನ್ನು ತ್ಯಜಿಸುತ್ತಿರುವಂತೆ ಸ್ಪಷ್ಟವಾಗಿ ಕಂಡು ಬರುತ್ತದೆ. ಇವುಗಳ ಬದಲಾಗಿ, ವಿವರಗಳ ನಿರ್ದಿಷ್ಟತೆ ಮತ್ತು ಆಡುಭಾಷೆಯ ಹಾಗೂ ಸ್ಥಳೀಯ ಭಾಷೆಯ ಪ್ರಯೋಗಗಳ ನಿದರ್ಶನಗಳು ಹೆಚ್ಚು ಹೆಚ್ಚಾಗಿ ಕಂಡು ಬರುತ್ತದೆ.
2001-ರಲ್ಲಿ ಪ್ರಕಟವಾದ ’Dėvėti’ (Second-hand) ಸಂಕಲನದಲ್ಲಿ ಮರ್ಚ್ಯೇನಸ್-ರು ಸ್ವಯಂ ಅಭಿವ್ಯಕ್ತಿಯ ಪರಿಪೂರ್ಣ ಸಾಧನವಾಗಿ ಕಾವ್ಯಾತ್ಮಕ ಭಾಷೆಯ ಭ್ರಮೆಯನ್ನು ನಿರಾಕರಿಸುತ್ತಾರೆ. ಮರ್ಚ್ಯೇನಸ್-ರ ಇತ್ತೀಚಿನ ಸಂಕಲನಗಳಲ್ಲಿ ವಿಶಿಷ್ಟವಾದ ಪರಿಕಲ್ಪನೆಗಳು ಹೊರಹೊಮ್ಮುತ್ತವೆ – ಉದಾಹರಣೆಗೆ, 2005-ರಲ್ಲಿ ಪ್ರಕಟವಾದ ’Pasauliai’ [Worlds] ಸಂಕಲನದಲ್ಲಿ ಒಂದು ಭಾಗವನ್ನು ‘ಪರಿವರ್ತಿತ ಸಾನೆಟ್ ಚಕ್ರ’ಗಳಿಗೆ (modified sonnet cycles) ಮೀಸಿಲಿಡಲಾಗಿದೆ; 2009-ರಲ್ಲಿ ಪ್ರಕಟವಾದ ’Dievų Taupyklė’ [Lockbox of the Gods] ಸಂಕಲನವನ್ನು “ಜೀವನದ ಹರಿವಿನಿಂದ ಹುಟ್ಟಿದ ಕಾವ್ಯ” ಎಂದು ವರ್ಣಿಸಲಾಗಿದೆ ಹಾಗೂ ಈ ಸಂಕಲನದಲ್ಲಿ ಒಟ್ಟು ಒಂದು ವರ್ಷದಲ್ಲಿ ಪ್ರತಿ ದಿನ ಒಂದು ಕವನದಂತೆ ಬರೆದ ಕವನಗಳಿವೆ; ಹಾಗೂ 2012-ರಲ್ಲಿ ಪ್ರಕಟವಾದ ’Ištrupėjusios Erdvės’ (Crumbling Spaces) ಸಂಕಲನದಲ್ಲಿ ಕೇವಲ ನಾಲ್ಕು-ಸಾಲಿನ ಜ್ಯಾಪನೀಸ್ ‘ಟಾಂಕಾ’ (Tanka) ಮಾದರಿಯ ಕವನಗಳಿವೆ.
ಅತ್ಯಂತ ಸೂಕ್ಷ್ಮ ದೃಷ್ಟಿಯ ಸಾಹಿತ್ಯ ವಿಮರ್ಶಕರೆಂದು ಕೂಡ ಮರ್ಚ್ಯೇನಸ್-ರು ಹೆಸರುಗಳಿಸಿದ್ದಾರೆ. ಅವರ ಸಣ್ಣ ಪ್ರಬಂಧಗಳು, ಸಂದರ್ಶನಗಳು, ಹಾಗೂ ವಿಮರ್ಶಾ ಲೇಖನಗಳು ಹಲವಾರು ಸಂಪುಟಗಳಲ್ಲಿ ಪ್ರಕಟವಾಗಿವೆ. ಯಾವುದೇ ಔಪಚಾರಿಕ ಸಾಹಿತ್ಯ ತರಬೇತಿಯಿಲ್ಲದೆ ಮರ್ಚ್ಯೇನಸ್-ರು ಇಷ್ಟೆಲ್ಲವನ್ನೂ ಸಾಧಿಸಿದ್ದಾರೆ. ಮರ್ಚ್ಯೇನಸ್-ರು ಸ್ವಲ್ಪ ಕಾಲ ‘ಟೆಲಿವಿಷನ್ ಪ್ರೊಡಕ್ಷನ್ ’ ಕಲಿತರು, ಆದರೆ ಈ ವಿಷಯದಲ್ಲಿ ಪದವಿ ಪಡೆಯಲಿಲ್ಲ. ಕೆಲ ಕಾಲ ಅವರು ಅಗ್ನಿಶಾಮಕ ದಳದ ಕೆಲಸ ಸೇರಿದಂತೆ ಎಲ್ಲಾ ರೀತಿಯ ಉದ್ಯೋಗಗಳನ್ನು ಮಾಡುತ್ತಾ ಜೀವನ ನಡೆಸಿದರು. ಮರ್ಚ್ಯೇನಸ್-ರ ಕವನಗಳನ್ನು ಇಂಗ್ಲಿಷ್, ಬೆಲೋರುಷಿಯನ್, ಪೋಲಿಷ್, ಫ್ರೆಂಚ್, ರಷ್ಯನ್ ಮತ್ತು ಇತರ ಭಾಷೆಗಳಿಗೆ ಅನುವಾದಿಸಲಾಗಿದೆ.
1993-ರಿಂದ ಅವರು ಲಿಥುವೇನಿಯನ್ ಬರಹಗಾರರ ಒಕ್ಕೂಟದ ಸದಸ್ಯರಾಗಿದ್ದಾರೆ. ‘ಪೊಯೆಟ್ರಿ ಸ್ಪ್ರಿಂಗ್ ಫೆಸ್ಟಿವಲ್’-ನ (ಕಾವ್ಯ ವಸಂತೋತ್ಸವ) ಪ್ರಧಾನ ಕವಿಯ ಸ್ಥಾನದ ಗೌರವ ಪಡೆದಿದ್ದಾರೆ ಹಾಗೂ ಅವರಿಗೆ 2005-ನೆಯ ರಾಷ್ಟ್ರೀಯ ಸಂಸ್ಕೃತಿ ಮತ್ತು ಕಲೆಗಳ ಪ್ರಶಸ್ತಿಯನ್ನು ನೀಡಲಾಯಿತು. ಅವರು ಪಡೆದ ಹಲವಾರು ಗೌರವಗಳು ಹಾಗೂ ಸನ್ಮಾನಗಳಲ್ಲಿ ಇವು ಮುಖ್ಯವಾದವು – 1989-ರಲ್ಲಿ ‘ಜಿಗ್ಮಾಸ್ ಗೆಲೆ’ (Zigmas Gėlė Prize) ಅತ್ಯುತ್ತಮ ಪ್ರಥಮ ಕೃತಿ ಪ್ರಶಸ್ತಿ, 1994-ರಲ್ಲಿ ‘Dulkės’ ಸಂಕಲನಕ್ಕೆಗೆ ಇಂಟರ್ನ್ಯಾಷನಲ್ ಪೊಯೆಟ್ರಿ ಫೆಸ್ಟಿವಲ್ ‘ಪೊಯೆಟ್ರಿ ಸ್ಪ್ರಿಂಗ್’ ಪ್ರಶಸ್ತಿ, 1999-ರಲ್ಲಿ ಜೆ. ಲಿಂಡೆ-ಡೊಬಿಲಾಸ್ ಪ್ರಶಸ್ತಿ (J. Lindė-Dobilas), 2002-ರಲ್ಲಿ “ಲಿಟಲ್ ಸ್ಪ್ರಿಂಗ್ ಆಫ್ ಪೊಯೆಟ್ರಿ” ಪ್ರಶಸ್ತಿ (“Little Spring of Poetry“ Award), 2008-ರಲ್ಲಿ ”Šokiai’ ಸಂಕಲನಕ್ಕೆ ಪೊಯೆಟಿಕ್ ಡ್ರುಸ್ಕಿನಿಂಕಾಯ್ ಫಾಲ್ ಯೊಟ್ವಿಂಗಿಯನ್ ಪ್ರೈಸ್ (Poetic Druskininkai Fall Yotvingian Prize), ಹಾಗೂ 2013-ರಲ್ಲಿ ಜೋನಾಸ್ ಐಸ್ಟಿಸ್ (Jonas Aistis) ಸಾಹಿತ್ಯ ಪ್ರಶಸ್ತಿ ಮತ್ತು ‘Tuščia jo’ ಸಂಕಲನಕ್ಕಾಗಿ ಲಿಥುವೇನಿಯನ್ ರೈಟರ್ಸ್ ಯೂನಿಯನ್ ಪ್ರಶಸ್ತಿ. 1960-ರಲ್ಲಿ ಲಿಥುವೇನಿಯಾದ ಕೌನಾಸ್ ನಗರದಲ್ಲಿ ಹುಟ್ಟಿದ ಮರ್ಚ್ಯೇನಸ್-ರು, ಆ ದೇಶದ ರಾಜಧಾನಿಯಾದ ‘ವಿಲ್ನಿಯಸ್’ ನಗರದಲ್ಲಿ ವಾಸವಾಗಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ, ಮರ್ಚ್ಯೇನಸ್-ರ ಇತ್ತೀಚಿನ ಸಂಗ್ರಹ, 2019-ರಲ್ಲಿ ಪ್ರಕಟವಾದ ’Ir’ (And) ಸಂಕಲನದಲ್ಲಿ ಕಂಡಂತೆ, ‘ಮೆಟಾ-ಪೊಯೆಟ್ರಿ’ಯ (Meta-poetry)ಪ್ರಾಬಲ್ಯ ಕಂಡುಬರುತ್ತದೆ.
ಈ ಕವನಗಳು ಕಾವ್ಯದ ಹುಟ್ಟು, ಭಾಷೆಯೊಂದಿಗಿರುವ ಕವಿಯ ಸಂಬಂಧ, ಭಾಷೆ ಮತ್ತು ಪ್ರಪಂಚದ ನಡುವಿನ ಸಂಪರ್ಕತೆ ಮತ್ತು ಕಾವ್ಯದೊಂದಿಗಿರುವ ಒಂದು ವೈಯಕ್ತಿಕ ಸಂಪರ್ಕ, ಮತ್ತೆ ಕಾವ್ಯದ ಜತೆಗಿನ ವಿಶೇಷ ಗೀಳನ್ನು ಪರಿಶೋಧಿಸುತ್ತವೆ. “ಕಾವ್ಯ ಎಂದರೇನು, ಅದನ್ನು ಯಾಕೆ ಬರೆಯುತ್ತಾರೆ, ಹೇಗೆ ಬರೆಯುತ್ತಾರೆ, ಎಲ್ಲಿಂದ ಬರೆಯಲ್ಪಡುತ್ತದೆ, ಯಾಕೆ ಕವಿತೆ ಹುಟ್ಟುತ್ತದೆ” … ಮರ್ಚ್ಯೇನಸ್-ರ ಪ್ರಕಾರ ಈ ತರಹದ ಪ್ರಶ್ನೆಗಳನ್ನು ಕವಿತೆ ಬರೆಯುವ ಕವಿ ಮಾತ್ರ ಉತ್ತರಿಸಬಹುದು.
ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ಅಯ್ದಸ್ ಮರ್ಚ್ಯೇನಸ್-ರ ಆರು ಕವನಗಳಲ್ಲಿ ಮೊದಲ ಎರಡು ಕವನಗಳನ್ನು ರಿಮಾಸ್ ಉಜ಼್ಗಿರಿಸ್-ರವರು (Rimas Uzgiris), ನಂತರದ ಮೂರು ಕವನಗಳನ್ನು ಲಾಯ್ಮಾ ವಿನ್ಸ್-ರವರು (Laima Vince), ಹಾಗೂ ಆರನೆಯ ಕವನವನ್ನು ವಿಟ್ ಬಕಾಯ್ಟಿಸ್-ರವರು (Vyt Bakaitis) ಲಿಥುವೇನಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.
೧
ಹಿಮ ಬೀಳುವುದ ನೋಡುವುದು
ಮೂಲ: To Watch the Snow Fall

ಹಿಮ ಬೀಳುವುದ ನೋಡುವುದು,
ಹಿಮದ ಮೇಲಿನ ನಿನ್ನೆಯ
ಹೆಜ್ಜೆಗುರುತುಗಳು ಹೇಗೆ ಇಂದು
ಹೊಸ ಹಿಮದಡಿ
ಮುಚ್ಚಿಹೋಗಿವೆ ಎಂದು ನೋಡುವುದು.
ನೆನಪಿಸಿಕೊಳ್ಳುವುದಕ್ಕೆ
ಅಮೂಲ್ಯವಾದವು ಯಾವುದೂ ಉಳಿದಿಲ್ಲ
ಎಂದಾಗ ಗಡಿ ಸಮೀಪಿಸುತ್ತಿದೆ
ಎಂದು ಅರಿಯುವುದು,
ಇದಕ್ಕೆ ಸಂಬಂಧಪಟ್ಟವರು ಸಹ
ಯಾರೂ ಉಳಿದಿಲ್ಲ ಎಂದರಿಯುವುದು.
ಮತ್ತೆ ನಿನ್ನ ಅಪ್ಪನನ್ನು ಅಮ್ಮನನ್ನು
ಮರಳಿ ಕರೆಸುವುದು, ಯೌವನಸ್ಥರಾಗಿ.
ಬೀಳುವ ಹಿಮದಲ್ಲಿ, ಕತ್ತಲೆಯಲ್ಲಿ.
ಚಿಕ್ಕವನಿದ್ದಾಗ,
ಮಫ್ಲರ್-ಗೆ ಹಿಮ-ಮೆತ್ತಿಸಿಕೊಂಡು,
ಟೋಪಿ ತಿರುಚಿಸಿಕೊಂಡು, ಎಲ್ಲೋ
ಕೈಗವಸುಗಳ ಕಳಕೊಂಡು,
ತಿಳಿದ ಪ್ರಪಂಚವನ್ನೆಲ್ಲಾ ಸುತ್ತಾಡಿ
ಮನೆಗೆ ಬರುತ್ತಿದ್ದೆ ನೀನು.
ಈಗಲೂ ಹಿಮ ಬೀಳುತ್ತಿದೆ, ನೋಡಿದೆಯಾ?
ಹಿಮ ಬೀಳುವಾಗ
ನಿಶ್ಶಬ್ಧ ಏನು ಹೇಳುತ್ತಿದೆಯೆಂದು
ಗಮನವಿಟ್ಟು ಆಲಿಸು.
ಇರಬಾರದೆಂದೇ? ಎಷ್ಟು ಉದಾತ್ತವಾಗಿ ಕೇಳಿಬರುತ್ತೆ ಅಲ್ವಾ,
ಆದರೆ ಯಾರಿಂದ ನಿಭಾಯಿಸಲು ಸಾಧ್ಯ?
೨
ದೀಪ್ತ
ಮೂಲ: Illuminated

ಏರೊಪ್ಲೇನಿನ ಬೆಳಗಿದ ಶಿಲುಬೆ.
ಕುಗ್ಗಿದ ದಿನಗಳು,
ನಿರ್ಮಲ ಆಕಾಶ, ಹಳೆ ಊರಿನ
ಹಳೆಯ ಕಬ್ರಸ್ತಾನದ ಪಕ್ಕದಲ್ಲಿರುವ
ಮೇಪಲ್ ಎಲೆಗಳನ್ನು ಹೊದ್ದ
ಗುಡ್ಡದ ಮೇಲಿಂದ ನೋಡಬಹುದು;
ನೀನು ಮತ್ತದೇ ಮಗು – ಬಿಟ್ಟ ಬಾಯಿಯಿಂದ,
ಕಿಟಕಿಯ ಗಾಜಿಗೆ ಮೂಗು ಒತ್ತಿಸಿ,
ಮೈಲಿ ಮೈಲಿಗಳು ಕೆಳಗೆ,
ಅಪರಿಚಿತ ಸ್ಥಳಗಳ ಸಜೀವ ನಕಾಶೆಯನ್ನು
ಎವೆಯಿಕ್ಕದೆ ನೋಡುತ್ತಾ –
ಮತ್ತೂ ಅದ್ಯಾವುದೋ ಒಂದು ವಿಷಯವ ತಿಳಿಯುವ ಪ್ರಯತ್ನ,
ಈ ಏರೋಪ್ಲೇನ್ ಕ್ಯಾಬಿನಲ್ಲಿರುವ ಎಲ್ಲರಿಗಿಂತಲೂ ಹೆಚ್ಚಾಗಿ.
೩
ಕಾವ್ಯದ ಕಲೆ
ಮೂಲ: Ars Poetica

ಈ ಲೋಕ ಕೊನೆಗೊಳ್ಳುತ್ತಿದೆ,
ಆದ ಕಾರಣ,
ನೀನು ಕವನಗಳ ಬರೆಯಬೇಕು.
ದಿನದಿಂದ ದಿನಕ್ಕೆ, ದೃಢ ಸಂಕಲ್ಪದೊಂದಿಗೆ,
ಯಾವುದೊ ಅರ್ಥಪೂರ್ಣ ಕಾರ್ಯ ಮಾಡುತ್ತಿರುವೆ ಎನ್ನುವಂತೆ,
ನಿನಗೊಬ್ಬನಿಗೆ ಮಾತ್ರ ಅರ್ಥವಾಗುವ ಕಾರ್ಯವೆಂಬಂತೆ,
ಕೆಲಸ ಮಾಡು ನೀನು, ಮನೆಯೊಂದ ಕಟ್ಟುತ್ತಿರುವಂತೆ,
ಯಾ ನಿನ್ನ ಕುಗ್ಗುತ್ತಿರುವ ಕುಟುಂಬಕ್ಕಾಗಿ ಹಡಗೊಂದ ಕಟ್ಟುತ್ತಿರುವಂತೆ,
ಯಾ ಎಂದೋ ಮಡಿದ ಮತವೊಂದರ
ಪವಿತ್ರ ದೇಗುಲದ ಜೀರ್ಣೋದ್ಧಾರ ಮಾಡುತ್ತಿರುವಂತೆ.
ನೀನು ಕವನಗಳ ಬರೆಯಬೇಕು,
ಆದಿತ್ಯವಾರದ ದಿನವೂ ಸಹ,
ಯಾಕೆಂದರೆ ಆದಿತ್ಯವಾರ ರಜೆಯ ದಿನ, ಹಾಗೂ
ನಿನ್ನ ಕೆಲಸ ಒಬ್ಬ ಪಾದ್ರಿಯ ಕೆಲಸದಂತೆ.
ಮತ್ತೆ, ಈ ಲೋಕ ದಿನದಿಂದ ದಿನಕ್ಕೆ
ಕೊನೆಗೊಳ್ಳುತ್ತಿರುವ ಕಾರಣ
ಅದು ಆದಿತ್ಯವಾರದ ದಿನವೂ ಕೊನೆಗೊಳ್ಳಬಹುದು.
ಆದ ಕಾರಣ,
ನೀನು ಕವನಗಳ ಬರೆಯಬೇಕು,
ನೀನು ನಿನ್ನ ಮನೆಯ ಕಟ್ಟಬೇಕು,
ಯಾರೂ ಅದರಲ್ಲಿ ಉಳಿದುಕೊಳ್ಳುವವರು ಇರದಿದ್ದರೂ,
ತಾಳ್ಮೆಯಿಂದ ನೀನದರ ಅಡಿಪಾಯ ಹಾಕುತ್ತಿರಬೇಕು
ದಿನದಿಂದ ದಿನಕ್ಕೆ,
ಯಾಕೆಂದರೆ ನುಡಿಗಿಂತ ಮೊದಲು ದೇವರು ಮಡಿದರೆ,
ಮತ್ತೆ ಲೋಕಕ್ಕಿಂತ ಮೊದಲು ನುಡಿ ಮಡಿದರೆ
ಅದೇ ಕೊನೆ.
೪
ಒಂದು ಅಸಲಿ ಕವನ
ಮೂಲ: A Real Poem

ನಾನೊಂದು ನುಸಿಯನ್ನು ಅಪ್ಪಚ್ಚಿ ಮಾಡಿದೆ,
ನನ್ನ ರಕ್ತ ಹೀರಿ ಉಬ್ಬಿಹೋಗಿತ್ತು ಅದು –
ಅದರ ಜೀವ ಚಿಮ್ಮಿ ಹೊರಹರಿಯಿತು,
ನೋಡಿ ನನಗೇ ಬೇಸರವಾಯಿತು,
ಏಕೆಂದರೆ
ಹಿಂದೆಂದೂ, ಅರ್ಜುನಾ,
ಹಿಂದೆಂದೂ, ಎಂದೂ
ಈ ರಕ್ತದ ಕಲೆಗಿಂತ,
ಈ ಕವನಕ್ಕಿಂತ,
ಈ ರಕ್ತ-ಹೀರುವ ಕಳೆಬರಕ್ಕಿಂತ
ಅಸಲಾಗಿರುವ ಯಾವುದನ್ನೂ
ಸೃಷ್ಟಿಸಿರಲಿಲ್ಲ ನಾನು.
೫
ಪ್ರತಿಬಿಂಬ
ಮೂಲ: Reflection

ನಾಳೆ ಅವನು ಎಲ್ಲವೂ ಆಗಿರುವ, ಆದರೆ
ಇಂದು – ಏನವನು?
ಒಂದು ಅನಿಸಿಕೆ, ಹೆಜ್ಜೆಗುರುತುಗಳು ಅಷ್ಟೇ,
ನಿನ್ನೆ ತನ್ನ ಪ್ರತಿಬಿಂಬವ ನೋಡಿ ನಕ್ಕಿದ್ದ,
ದಾರಿಯಿದೆಯೇ ಎಂದು ನೋಡಲು ರೆಂಬೆಯನು ಮೆಲ್ಲನೆ ಎತ್ತಿದ್ದ.
ಗಾಳಿಯಲ್ಲಿ ತೂಗಾಡುತ್ತಿರುವ ಹುಲ್ಲುಗಳ,
ಜೇನ್ನೊಣಗಳ ಝೇಂಕಾರ ಗುಂಯ್ ಗುಂಯ್ ಗಳ ಮಧ್ಯೆ;
ಆ ನದಿ ಸೇತುವೆಯ ಎದುರು ನಿಂತಿದೆ, ಏದುಸಿರು ಬಿಡುತ್ತಿದೆ.
ನಾನೆಲ್ಲಾದರೂ ನೀರಿನ ಹರಿವಿನೊಳಗೆ
ದಿಟ್ಟಿಸಿ ನೋಡುವುದಾದರೆ, ಎಚ್ಚರವಾಗುವೆ –
ಕಣ್ಣುಗಳಲ್ಲಿ ಅಚ್ಚರಿ – ನಾನು ಮುವ್ವತ್ತು ದಾಟಿರುವೆ –
ನಾನೊಬ್ಬ ನೀರಿನೊಳಗೆ ಕಾಲಿಡುತ್ತಿರುವ,
ಹೊಳೆಯ ಪಕ್ಕದಲ್ಲಿ ನಿಂತು ಪ್ರತಿಬಿಂಬಗಳ
ಜತೆ ಆಡುತ್ತಿರುವ ಹುಡುಗನಷ್ಡೇ –
ಈಗ ಇಲ್ಲಿದ್ದೇನೆ, ಈಗ ಇಲ್ಲಿಲ್ಲ –
ಒಪ್ಪವಾಗಿ ಹೋಗಲು ಕಲಿಯುವೆ,
ಶಾಂತವಾಗಿ ಮರಳಿ ಬರುವೆ.
೬
ಕಲ್ಲಿನೊಳಗೆ ಕಲ್ಲು ಸೇರಿ
ಮೂಲ: Rock Into Rock

ಭಾಷೆಯೊಂದೇ ನನ್ನನ್ನು ಕಾಪಾಡಲು ಸಾಧ್ಯ ಈಗ.
ಹಿಮದಂತಹ ಪದಗಳಿಂದ ಧ್ವನಿಯನ್ನು ಸುಡಲು,
ಭಾವನೆಗಳ ಧಾರೆಗಳನ್ನು ಕಿಡಿಗಲ್ಲಿನಂತೆ ಹೆಪ್ಪುಗಟ್ಟಿಸಲು,
ತನ್ನನ್ನು ಬೆಂಕಿಯಂತೆ ತನ್ನೊಳಗೇ ಬಂಧಿಸಿಕೊಳ್ಳಲು.
ಈ ಗರ್ಭಿತ ಸಮಯವ ನನ್ನೊಳು ಮುಚ್ಚಿಸಿಕೊಳ್ಳುವೆ.
ಇನ್ನೆಂದೂ ಕಣ್ಣುಗಳಿಗೆ, ದೇಹಕ್ಕೆ ವಿದಾಯ ಹೇಳಲಾರೆ.
ನಾನು ಅಡಗಿಸಿಟ್ಟುಕೊಂಡ ಎಲ್ಲವನ್ನೂ ಪೋಶಿಸುವೆ, ಕಾಪಾಡುವೆ.
ನೋವನ್ನು ಕಲ್ಲು-ನರಗಳನ್ನಾಗಿ ಮಾರ್ಪಡಿಸುವೆ.
ನನ್ನ ದೇಹದ ಮಾರುಲಿಗೆ ಸ್ಪಂದಿಸುವುದನ್ನು ಬಿಟ್ಟುಕೊಡುವೆ,
ನೆನಪಿನ ಅರಿವೆಗಳನ್ನು ಪದಗಳಿಗೆ ಕೊಟ್ಟುಬಿಡುವೆ,
ಒಳಗೆ ಕಲ್ಲಿನ ಆಳದಲ್ಲಿ ಜ್ವಾಲೆಗಳು, ತಂಪಾದ ಮೇಲ್ಮೈ,
ಸರಿಯುವಾಗ ಹಿಮನದಿಯು ಕಳಚಿಬಿಟ್ಟ ಪೊರೆಯಂತೆ.
ಭಾಷೆಯೊಂದೇ ನನ್ನನ್ನು ಕಾಪಾಡುವುದು: ನನ್ನೊಳಗೆ
ಮೌನವು ಹಿಮಯುಗದ ಶಿಲಾಖಂಡದಷ್ಟು ತಣ್ಣಗಾಗುವುದು,
ಹುಚ್ಚುತನದಷ್ಟು ಖಚಿತವಾಗಿದೆ ಈ ಅರಿವು,
ಕಲ್ಲು ಹೊತ್ತಿಸುತ್ತೆ ಕಲ್ಲಿನೊಳಗೆ ಹೊಳೆಯುವ ಸೂರ್ಯಾಸ್ತದ ಬೆಂಕಿಗಳನ್ನ.
*****






0 Comments