ಥೇಟ್ ಅವಳಂತೆಯೇ..

ಷಾಹಿನಾ ಇ. ಕೆ.

ಕನ್ನಡಕ್ಕೆ: ಜೆಸ್ಸಿ ಎಲಿಜಬೆತ್ ಜೋಸೆಫ್

ಕತ್ತಲು, ನಗರದ ಮೇಲೆ ನೆರಳನ್ನು ಹಾಸಲು ಆರಂಭಿಸಿತ್ತು. ಬೀದಿ ಬದಿಯಲ್ಲಿ, ಚಿಕ್ಕ ಗುಂಪುಗಳು ಮತ್ತೊಂದು ಸಂಜೆಯನ್ನು ಕೂಡಾ ಸಂಭ್ರಮದಿಂದ ಆಚರಿಸುತ್ತಾ ಮುಗಿಸುತ್ತಿದ್ದವು. ಇವರ ಗಹಗಹಿಸುವ ನಗು, ಗೌಜು ಗದ್ದಲಗಳ ನಡುವೆ ಮಗ ಆತನೊಂದಿಗೆ ನಡೆಯುತ್ತಿದ್ದ. ದಪ್ಪ ಗಾಜಿನ ಕನ್ನಡಕದೊಳಗಿನಿಂದ ಆಗಾಗ್ಗೆ ತೂರಿ ಬರುತ್ತಿದ್ದ ಅವನ ನೋಟವು ಇನ್ನಾರ ಬಗ್ಗೆಯೋ ಅಸಹನೆಯಿಂದ ಆತನನ್ನು ನೆನಪಿಸಿತ್ತು.”ತುಂಬಾ ಎತ್ತರವಾಗಿದ್ದೀಯಾ ನೀನು ನನಗಿಂತ ಅಲ್ಲವೇ?”
ಒಂದು ಆರಂಭಕ್ಕೆ ಎನಿಸುವಂತೆ ಆತ ಹೇಳಿದ.
   ಮಗ ಪೂರ್ಣವಾಗಿ ಮೌನಿಯಾಗಿದ್ದ. ಸುಮ್ಮನೆ ನಗಲು ಪ್ರಯತ್ನಿಸಿ, ಸೋತು ಹೋದ ಆತನ ಮುಖವು ತನ್ನೊಳಗೆ ಒಂದು ವೇದನೆಯಾಗಿ ತುಂಬಿ ಕೊಳ್ಳುತ್ತಿರುವುದನ್ನು ಆತ ಅರಿತುಕೊಂಡ.
   ಅಲ್ಲದಿದ್ದರೂ ಅವನು ತಾನೇ ಹೇಗೆ, ಹಿಂದೆಂದೋ ಕಂಡು ಮರೆತ ಓರ್ವನೊಂದಿಗೆ ಅಪರಿಚಿತೆಯಿಲ್ಲದೆ… ಒಂದು ವೇಳೆ ನೆನಪಿನಲ್ಲಿ ಕೂಡಾ ಇಲ್ಲದ ಓರ್ವ ವ್ಯಕ್ತಿಯೊಂದಿಗೆ ಹೇಗೆ ತಾನೇ…
   ಅರಳಿದ ಕಣ್ಣುಗಳಲ್ಲಿ ಸದಾ ವಿಸ್ಮಯವನ್ನು ತುಂಬಿಕೊಂಡಿರುವ ಪುಟ್ಟ ಹುಡುಗನಲ್ಲವಲ್ಲ ಎದುರಲ್ಲಿ. ಅವನು ತುಂಬಾ ಬೆಳೆದಿದ್ದಾನೆ. ಗಂಭೀರತೆಯ ಹೊದಿಕೆಯಿರುವ ಕನ್ನಡಕದ ಬದಿಯಿಂದಿರುವ ನೋಟ, ನಸು ನಗು ಬೆರೆತಿರುವ ಸಪೂರವಾದ ತೆಳ್ಳನೆಯ ತುಟಿಗಳು, ಗಾಳಿಯೊಂದಿಗೆ ನೃತ್ಯವಾಡುತ್ತಿರುವ ಕೂದಲಿನ ದಟ್ಟ ಕಂದು ಬಣ್ಣ…
   ಥೇಟ್ ಅವಳಂತೆಯೇ.
    ಎಲ್ಲವೂ ಅವಳಂತೆಯೇ.


    ಅವಳು, ಅವಳು ಹೇಗಿರಬಹುದು ಈಗ. ಇಷ್ಟು ವರ್ಷಗಳ ನಂತರ…
    ಸ್ವಲ್ಪ ಕೂದಲು ಬೆಳ್ಳಗಾಗಿ, ಒಟ್ಟಾರೆ ದಪ್ಪವಾಗಿ ಹಿಂದಿಗಿಂತಲೂ ನಿಶ್ಯಬ್ದಳಾಗಿ…
   ಕೊನೆಯಿಲ್ಲದ ಬಿರುಕುಗಳು.. ಅವು ಎಷ್ಟು ವೇಗವಾಗಿ ಬೆಳೆಯುತ್ತದೆ. ಬೆಳೆದು ಬೆಳೆದು…
   “ಅಪ್ಪಾ, ನೀವು ಯಾಕೆ ನನ್ನನ್ನು ನೋಡಬೇಕೆಂದು ಪತ್ರ ಬರೆದಿದ್ದು?”
   ಮಗನ ಥಟ್ಟನೆಯ ಪ್ರಶ್ನೆ ಆತನನ್ನು ಬಹಳವಾಗಿ ನಡುಗಿಸಿ ಬಿಟ್ಟಿತು. ಬಹಳ ಅಸಹನೆಯಿಂದ ಆತನ ನಿಶ್ಶಬ್ದತೆಯನ್ನೇ ಕಾಯುತ್ತಾ ಅವನು ಒಂದು ಪ್ರತ್ಯುತ್ತರ ಕ್ಕಾಗಿ ಕಾದನು.
    ಸುಮ್ಮನೆ ಅಪ್ಪು, ನಿನ್ನನ್ನೊಮ್ಮೆ ನೋಡಲು, ಸುಮ್ಮನೆ ಮುಂಚಿನಂತೆಯೇ ನಿನ್ನ ಕೈ ಹಿಡಿದು, ನಮಗೆ ನಷ್ಟವಾದ ಹಾದಿಯಲ್ಲೆಲ್ಲಾ ಮತ್ತೊಮ್ಮೆ…
   ಹಾಗೆ ಏನೇನನ್ನೋ ಹೇಳಬೇಕೆಂದಿತ್ತು ಆತನಿಗೆ… ಬಹಳಷ್ಟು ಸಮಯದಿಂದ ಗಂಟಲಿನಲ್ಲಿ ಸಿಲುಕಿಕೊಡಿದ್ದ ಹಲವಾರು ವಿಚಾರಗಳು…
    “ನಿನಗೆ ಕಷ್ಟವಾಯಿತೇ ಅಪ್ಪೂ?”
     “….”
     ಮಗ ಏನನ್ನೂ ಹೇಳಲಿಲ್ಲ. ಉದುರಿ ಬಿದ್ದಿದ್ದ ತರಗೆಲೆಗಳ ಮೇಲೆ ಕಾಲನ್ನು ಒತ್ತಿದಾಗ ಅವುಗಳು ಏನೇನನ್ನೋ ಪಿಸುಗುಟ್ಟಿದವು. ಅವಳಂತೆಯೇ, ಯಾವಾಗಲೂ ನಿಶ್ಯಬ್ದನಾಗಿರುತ್ತಿದ್ದ ಮಗ ಎಂದು ಆತ ನೆನಪಿಸಿಕೊಂಡ. ಏಕಾಂಗಿತನ ಮಡುಗಟ್ಟಿದ ದೊಡ್ಡ ಕಣ್ಣುಗಳು ಕೂಡಾ… ಹೇಳದೇ ಹೇಳಿಕೊಂಡಿದ್ದ ಕಣ್ಣುಗಳು…
   ಅವೆಲ್ಲವೂ ಕೂಡಾ ನಿದ್ದೆಯ ಮಧ್ಯದಲ್ಲೆಲ್ಲೋ ನಷ್ಟವಾದ ಕನಸುಗಳಾಗಿದ್ದವುಎಂದು ಆತನಿಗೆ ಅನಿಸಿತು. ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆಯೇ ಮರೆತು ಹೋಗುತ್ತಿದ್ದವು …
    ಬಿಸಿಯಾದ ಗಾಳಿಯು, ಇದ್ದಕ್ಕಿದ್ದಂತೆಯೇ ಅವರ ಮಧ್ಯದಿಂದ ಹಾದು ಹೋಯಿತು.ವಾತಾವರಣದಲ್ಲಿ ಅಪರಿಚಿತವಾದ ಸುಗಂಧವು ಉಳಿಯಿತು…
   ಯಾವುದೂ ಕೂಡಾ ಬೇಕಾಗಿರಲಿಲ್ಲವೆಂದು ಆತನಿಗೆ ಅನಿಸಿತು.
   ಮಗನ ಹೆಸರಿಗೆ, ಹಳೆಯ ಅಂಚೆ ವಿಳಾಸದಲ್ಲಿ ಪತ್ರ ಬರೆಯುವಾಗ ಅದು ಅವನಿಗೆ ದೊರಕುವುದೆಂದೋ, ಅವನು ಬರುವನೆಂದೋ ಭರವಸೆಯಿರಲಿಲ್ಲ. ಆದರೂ ಕೆಲವೇ ಗಂಟೆಗಳ ಪ್ರಯಾಣದ ದೂರದಲ್ಲಿ ಅವನು ಇರುವನೆಂದು ಅರಿಯುವಾಗ…
    … ಈ ನಿಮಿಷಗಳಿಗಾಗಿ ಎಷ್ಟೊಂದು ಕಾಯಬೇಕಾಯಿತು…
    ಒಂದೊಮ್ಮೆ, ತನ್ನ ಪ್ರೀತಿ ಪಾತ್ರರಾಗಿದ್ದವರು…ಸಂಬಂಧಗಳ ವಿಚಿತ್ರವಾದ ಯಾತ್ರೆಯಲ್ಲಿ, ದಾರಿಯಲ್ಲಿ ತ್ಯಜಿಸುವಾಗ, ಪಾಪ ಪ್ರಜ್ಞೆಯಿಲ್ಲದೇ, ಮತ್ತೊಂದೆಡೆ ವಾಸಿಸುವಾಗ, ಅಂದೆಲ್ಲಾ ಯಾರ ಬಗ್ಗೆಯೂ ಯೋಚಿಸಿರಲಿಲ್ಲವಲ್ಲಾ…
    ಮತ್ತೀಗ…
    ಹೇಳಲಸಾಧ್ಯವಾದ ವ್ಯಥೆಯೊಂದಿಗೆ, ಮಗನ ಮುಖವನ್ನು ನೋಡದೇ ಆತ ಮೆಲ್ಲಗೆ ಕೇಳಿದ.
     “ಅಮ್ಮ?”
     “ನನ್ನ ಜೊತೆಯಿದ್ದಾರೆ.”
     ಮಗನ ನಿಸ್ಸಂಗತೆಯಿಂದ ಕೂಡಿದ ಪ್ರತ್ತ್ಯುತ್ತರ ಆತನಿಗೆ ಒಮ್ಮೆಗೇ ಆಶ್ಚರ್ಯ ಹಾಗೂ ವೇದನೆಯನ್ನು ಉಂಟು ಮಾಡಿತು. ಇನ್ನೇನಾದರೂ ಹೇಳಬಹುದೆಂದು ಅನ್ನಿಸಿದ್ದರಿಂದ ಆತ ಪುನಃ ಅವನನ್ನು ನೋಡಿದ.
   ಹೆಗಲಿನಲ್ಲಿ ನೇತು ಹಾಕಿದ ಬ್ಯಾಗ್ ಅನ್ನು ಮತ್ತೊಮ್ಮೆ ಎಳೆದು ಸರಿಪಡಿಸಿಕೊಂಡು, ಮಗ ಆಗ ಯಾರೊಡನೆಯೂ ಅಲ್ಲವೆಂಬಂತೆ ಪಿಸುಗುಟ್ಟಿದ.
   “ಅಮ್ಮ ಒಬ್ಬಳೇ ಇದ್ದಾಳಲ್ಲ… ನನಗಿಂದೇ ಹೋಗಬೇಕು.”
ಈಗ ಆತ ಬಹಳವಾಗಿ ನಡುಗಿ ಹೋದ. ಮಾತುಗಳು ಒಂದು ಸಾವಿರ ಮುಳ್ಳುಗಳಾಗಿ ಒಳಗೆ ಚುಚ್ಚುವುದನ್ನೂ, ಒಣಗದೇ ಇರುವ ಗಾಯಗಳು ರಕ್ತ ಚಿಮ್ಮುವುದನ್ನೂ ಆತ ಅರಿತ. ಕಠಿಣವಾದ ಒಂದು ಆತ್ಮ ನಿಂದೆಯೊಂದಿಗೆ ಮಗನನ್ನು ನೋಡುತ್ತಿರುವಾಗ, ನಸು ನಗುವಿನೊಂದಿಗೆ ಅವನು ಮುಂದುವರೆಸಿದ :
    “ಹಿಂದೆಲ್ಲಾ, ಬಣ್ಣ ಹಚ್ಚಿ ವಿಕೃತಗೊಳಿಸುತ್ತಿದ್ದೆ ಅಪ್ಪನ ಚಿತ್ರಗಳನ್ನು. ಅಮ್ಮ ನೋಡಿದರೆ ಬೈಯುತ್ತಿದ್ದಳು ಆದರೂ…ಆದರೆ, ನಿಮಗೆ ತಿಳಿದಿದೆಯೇ ಅಪ್ಪ ಎಂದರೆ ಆ ರೂಪವೇ ನನ್ನೊಳಗೆ… ಅಲ್ಲದಿದ್ದರೂ ನಾನು ಹೀಗಿದ್ದೇನೆ ಎಂದು ತೋರಿಸಲು ಅಪ್ಪ ಒಮ್ಮೆ ಕೂಡಾ…
   ಎಲ್ಲೋ ನೋಯುತ್ತಿರುವುದಾಗಿಯೂ, ಒಂದು ಶಬ್ದ ಕೂಡಾ ಹೇಳಲಾಗದ ರೀತಿ ಗಂಟಲು ಒಣಗಿ ಹೋಗುತ್ತಿರುವುದಾಗಿಯೂ ಆತನಿಗೆ ಅನಿಸಿತು…
    ಸ್ವಲ್ಪ ಹೊತ್ತು ನಿಶ್ಶಬ್ದನಾಗಿ ಮಗ ಪುನಃ ಕೇಳಿದ.
    “ತಂಗಿ ಹಾಗೂ ಚಿಕ್ಕಮ್ಮ ಇವರೆಲ್ಲಾ…”
    ಬಹಳವಾದ ನೋವಿನಿಂದ ಆತ ಮಗನನ್ನು ನೋಡಿದ. ನಂತರ ಮೆಲ್ಲನೆ ಹೇಳಿದ :
    “ಅವರಿಗೆ ನಿನ್ನನ್ನು ನೋಡಬೇಕೆಂದಿದೆ. ಇನ್ನು ಇಂದು ಹೋಗದೆ ಅಲ್ಲಿಯವರೆಗೆ ಒಮ್ಮೆ ಬರುವುದಾದರೆ…”
    ಒಂದು ಮಾತು ಕೂಡಾ ಹೆಚ್ಚಿಗೆ ಹೇಳಲು ಆಗುತ್ತಿಲ್ಲವೆಂದು ಆತ ಅರಿತ.
   ವಿವಶತೆಯಿಂದ ಮಗನನ್ನು ನೋಡಲು, ಹಣೆಯ ಮೇಲೆ ಬಿದ್ದಂತಹ ಕೂದಲನ್ನು ಕೈಯಿಂದ ಆಚೆ ಸರಿಸುತ್ತಾ ಮಗ ಹೇಳಿದ : ‘ ಆದರೆ, ಅಮ್ಮ ಒಬ್ಬಳೇ ಇದ್ದಾಳಲ್ಲ…’
   ಎಲ್ಲೆಲ್ಲಿಯೋ ಸುತ್ತಿ ತಿರುಗಾಡಿಕೊಂಡು ಬಂದ ಗಾಳಿಯು ಅಪರಿಚಿತತೆಯೊಂದಿಗೆ ಆತನನ್ನು ಹಾದು ಹೋಯಿತು.
   ಮರಗಳ ಸಾಲುಗಳ ಮಧ್ಯದಿಂದ ಮಗ ಹಿಂದಿರುಗಿ ಹೋಗತೊಡಗಿದ್ದ.
    ದಾರಿಯಲ್ಲಿ ಆಗ ಆತನೂ, ಕತ್ತಲೆಯೂ ಮಾತ್ರ ಬಾಕಿಯಾದರು…

‍ಲೇಖಕರು avadhi

October 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: