ಲಲಿತಾ ಸಿದ್ಧಬಸವಯ್ಯ ಹೊಚ್ಚ ಹೊಸ ಕವಿತೆ- ಭಯ

ಲಲಿತಾ ಸಿದ್ಧಬಸವಯ್ಯ

ಹೀಗೆ ನಾವು ರಿಂಗ್ ಕಟ್ಟುತ್ತೇವೆ ಸ್ಟೀಲಿನ ಗಟ್ಟಿ ಕಡ್ಡಿಗಳ
ಜೋಡಿಸಿ ಜಂತೆಯ ಹಾಗೆ; ತಳಕ್ಕೆ ಬಂದೋಬಸ್ತು ಜರಡಿ
ಮೇಲಕ್ಕೆ ಹೋದಂತೆಲ್ಲ ವಿಸ್ತಾರ ವಿಸ್ತಾರವಾಗುವ ಹೊಟ್ಟೆ;
ಅರ್ಧಕ್ಕೆ ಕತ್ತರಿಸಿದ ಮರದ ಗ್ಲೋಬು ಉತ್ತರಧ್ರುವದ ಚಪ

ಚಪ್ಪಟ್ಟೆ ಕುಂಡಿ ಮೇಲೆ ಕೂತಂತೆ ನಾವು ರಿಂಗ್ ಕಟ್ಟುತ್ತ
ಪ್ರತಿ ಸಾಲ್ಡರಿಗೂ ಎರಡೆರಡು ಸಲ ಗಂಟು ಹಾಕುತ್ತೇವೆ; ಗ
ಮನವಿರಿಸಿ ಕಣ್ಣು ಕುರುಡುಗಟ್ಟುವ ಬೆಳಕಲ್ಲಿ ವೆಲ್ಡಿಂಗು
ಮಾಡಿ ಕೊನೆಗೆ ಅಂಚುಗಟ್ಟಿ ; ಓಡಿಸಿ ನೋಡಿ ಬೀಳದಿದು

ಆಮೇಲೆ ಸರ್ಕಸಿನವರು ಬಿಡುವರು ಮೋಟಾರು ಬೈಕಿನ
ವೀರಾಗ್ರಣಿಯ ಇದರೊಳಕ್ಕೆ; ಅವನು ಚಾಪೆಯಂಥ ರಸ್ತೆ
ಮೇಲೆ ಓಡಿಸುವುದಕೂ ಮಿಗೆ ಸಲೀಸಾಗಿ ಈ ರಸ್ತೆಯಿರದ
ರಿಂಗಿಗೆ ರಸ್ತೆಗಳ ಬರೆದುಕೊಂಡು ಓಡಿಸುತ್ತಾನೆ ಬ್ರುರ್ರುರ್ರೂ

ಮೊದಮೊದಲು ಗ್ರಿಪ್ಪಿಗೆ ಸೆಣೆಸಿ, ಟೈರುಗಳೂರಿದ್ದು ಬುದ್ದಿಗೆ
ಗೊತ್ತಾದ ತಕ್ಷಣ ರೌಂಡುಗಳ ಹಿಗ್ಗಿಸಿಕೊಂಡು ಸುತಳ ವಿತ ಳ
ಅತಳ ತಲಾತಳ ಮಹಾತಳ ರಸಾತಳ ಹೀಗೆ ಪಾತಾಳದ
ಹಲಗ್ರೇಡುಗಳೊಳಗೇ ಈ ಬಲಿ ಚಕ್ರವರ್ತಿಯ ಸಾಮ್ರಾಜ್ಯ

ಪಿಳ್ಳೆಗಳು ಬೊಬ್ಬಿರಿದು ಹಿರಿಯ ನಾಗರಿಕರು ತಲೆಯೊಗೆದು
‘ತ್ಚುತ್ಚುತ್ಚು ಎರಡು ತುತ್ತನ್ನಕ್ಕೆ ಇಂಥಾ ಅಪಾಯಕ್ಕೆ ಛ್ಛೆಛ್ಛೆ’
ನಿಜ, ಆದರೆ ಅನ್ನಕ್ಕೆ ಅನ್ನೋದು ಅರ್ಧನಿಜ ಸಾರ್; ನಿಜ
ಇನ್ನರ್ಧದ್ದು ಆ ಬ್ರುಬ್ರುಬ್ರುರ್ರೊಂಯ್ ಹಿತನಾದದಲ್ಲಿ ಸರ್

ಅದೇ ಕಾಣಿ ಆ ನಾಡಿಯ ಈ ತಹಲ್ ವರೆಗೆ ಮಿಡಿಸುತ್ತಿರು
ವುದು; ಟಿಕೀಟು ತಗೊಂಡು ಬಂದಿದ್ದೇ ಉಂಟಂತೆ ನೀವು;
ಕಮೆಂಟುಗಳು ಯಾಕೆ, ಉಪ್ಪಿಗಿಲ್ಲ ಹುಳಿಗಿಲ್ಲ; ಸುಮ್ಮನೆ
ಸರ್ಕಸ್ಸು ನೋಡಿ ಹೋಗಿಬಿಡಿ ; ಬುರ್ರ್ ಬ್ರುಬುರ್ರೊಂಯ್

ಸರ್ಕಸ್ಸಿನ ಓನರ್ರು ಕಾರ್ನರಿಗೆ ನಿಂತಿದ್ದಾನೆ ; ಕಣ್ಣುಗಳ ರಿಂ
ಗೊಳಗೆ ಒತ್ತೆ ಇಟ್ಟಿದ್ದಾನೆ; ಅವನೊಳಗೆ ರ್ರುವ್ವರ್ರುವ್ವರ್ರುವ್ವ
ಎವ್ವೆರಿ ಟೈಮ್ ಓತ್ ತಗೊತಾನೆ ; ಇಲ್ಲಿಲ್ಲ ಈ ಸಲಕೆ ಕೊನೆ
ಈ ಸಾಹಸ; ಆಮೇಲೆ ಮರೆತು ಓತೂ ಪೋಲೀಸೂ ಗಿಲೀ

ಸೂ ಮತ್ತದೇ ಬಲಿಚಕ್ರವರ್ತಿಯವತಾರಕೆ ವೇದಿಕೆ ಸಿದ್ಧ ಆ
ಟ್ರೆಪೀಜ್ ಆರ್ಟಿಸ್ಟಿಗೆ ಆಗಲೇ ನಲವತ್ತು ; ಅವಳ ಜೀ ವವೂ
ಅಂಗೈಗೆ ಬಂದಿದೆ; ಇದು ಸಾಕು ಕೊನೇ ಸಲವೆಂದು
ಅವಳೂ ತೆಗೆದುಕೊಳ್ಳುವಳು ಓತು; ಆ ಬುರ್ರೋ ಅವಳ

ಎರಡನೆ ಗಂಡ; ಈ ಡ್ಯಾಡಿಯಾದರು ಬದುಕಿರಲಿ ಮಕ್ಕಳಿ
ಗೆಂದು ಅವಳೂ ಪ್ರಾರ್ಥಿಸುವಳು ರಿಂಗಿನ ಕಡೆಗೆ ಮುಗಿದು
ನಾವು ರಿಂಗ್ ಕಟ್ಟಿದವರೂ ಪ್ರಾರ್ಥಿಸುತ್ತೇವೆ ; ಮುರಿಯ
ದಿರಲಿ ಎಲ್ಲೂ ಗ್ರಿಲ್ಲು ; ಮಿಸ್ಸಾಗದಿರಲಿ ನಮಗೆ ಮುಂದಿನ

ಕಂಟ್ರಾಕ್ಟು; ಮತ್ತೆ ನಮಗೂ ಭಯ ಪೋಲೀಸೂ ಕೇಸೂ
ಬ್ಲಾಕ್ ಪಟ್ಟಿ ; ಅವರಿಗೂ ಭಯ ನೋಡಿ, ಅಲ್ಲಿ ಬಿನಾ ಕಾ
ರಣ್ ಲಾಗ ಹೊಡಿತಾ ಎದ್ದು ಬಿದ್ದು ಉಳ್ಳಾಡುತಿದಾರಲ್ಲ
ಆಯಿಬ್ಬರು ಕುಳ್ಳರಿಗೂ; ಅರವತ್ತು ವರ್ಷ; ಬದಲಿ ಕುಳ್ಳ

ರು ಸಿಕ್ಕಿಲ್ಲದ್ದಕ್ಕೆ ರಿಟೈರು ಮಾಡಿಲ್ಲ ; ಅವರೂ ಪ್ರಾರ್ಥಿಸುತ
ಸಿಗದಿರಲಿ ಬದಲಿಗಳೆನುತ ಮೊರೆಯಿಡುತ್ತಾರೆ; ಹಾಸುಗೆ
ಯಲೊಬ್ಬರೊಬ್ಬರಿಗೆ ಹೆಂಡತಿಯಾಗುತ್ತಾರೆ; ಸುಳ್ಳುರಹಿತ
ಸಂಸಾರ ನಡೆಸುತ್ತಾರೆ; ನಾವು ರಿಂಗುಗಳ ಕಟ್ಟುತ್ತೇವೆ ;

‍ಲೇಖಕರು Admin

September 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: