ಭುವನೇಶ್ವರಿ ಹೆಗಡೆ ಅಂಕಣ- ನಗುವಿನ ದೀಕ್ಷೆಕೊಟ್ಟ ಪ್ರೊಫೆಸರ್ ರಮೇಶ್

11

ನಾನು ಸಿರ್ಸಿಯ ಕಾಲೇಜಿಗೆ ಡಿಗ್ರಿ ಓದಲು ಸೇರಿದಾಗ ಶಿರಸಿ ಆಗಿನ್ನೂ ಹಳ್ಳಿಯ ಲಕ್ಷಣಗಳನ್ನೇ ಉಳಿಸಿಕೊಂಡ ಸಣ್ಣ ಪೇಟೆ. ನಗರೀಕರಣದ ಭರಾಟೆ ಇನ್ನೂ ಕಾಲಿಡದ ತಣ್ಣನ ದಿನಗಳು. ಮಲೆನಾಡಿನ ಅಗ್ರಮಾನ್ಯ ಕಾಲೇಜು ಎಂದೇ ಹೆಸರಾದ ಮೋಟಿನಸರ ಮೆಮೋರಿಯಲ್ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜು ಆ ದಿನಗಳಲ್ಲಿ ಅತ್ಯಂತ ಪ್ರತಿಭಾವಂತ ಪಾಂಡಿತ್ಯ ಹೊಂದಿದ ಪ್ರಾಧ್ಯಾಪಕರುಗಳೇ ತುಂಬಿದ್ದ ಕಾಲೇಜು.

ಇಂಗ್ಲಿಷ್, ಕನ್ನಡ, ಸಂಸ್ಕೃತ, ಹಿಂದಿ ನಾಲ್ಕೂ ಭಾಷೆಗಳಲ್ಲಿ ಸಮಾನ ಸಾಧನೆ ಗೈದ ಆಸಕ್ತ ಪ್ರಾಧ್ಯಾಪಕರುಗಳು ಇದ್ದರು. ಹೆಚ್ಚಿನ ಕಾಲೇಜುಗಳಲ್ಲಿ ಕಂಡುಬರದ ಭೂಗೋಳಶಾಸ್ತ್ರ ಮನಶ್ಶಾಸ್ತ್ರ ತತ್ತ್ವಶಾಸ್ತ್ರ ಹಾಗೂ ಸಂಗೀತ ಈ ಅಪರೂಪದ ಕಾಂಬಿನೇಶನ್ ನಮ್ಮ ಕಾಲೇಜಿನಲ್ಲಿತ್ತು. ಇದೇ ಕಾರಣಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಸಹ ಶಿರಸಿಯ ಕಾಲೇಜಿಗೆ ಸೇರಲು ವಿದ್ಯಾರ್ಥಿಗಳು ಬರುತ್ತಿದ್ದರು.

ಆಗ ನನ್ನ ಹಳ್ಳಿ ಕತ್ರ ಗಾಲಿನ ಸುತ್ತಮುತ್ತ ಅಂದರೆ ತಾಲ್ಲೂಕು ಕೇಂದ್ರ ಸಿದ್ಧಾಪುರದಲ್ಲಿ ಕಾಲೇಜು ಇರಲಿಲ್ಲ. ಆದ್ದರಿಂದ ನನಗೆ ಶಿರಸಿ ಕಾಲೇಜಿನಲ್ಲಿ ಎಡ್ಮಿಶನ್ ಮಾಡಲಾಯಿತು. ಮತ್ತು ಅದೇ ಕಾಲೇಜಿನಲ್ಲಿ ನನ್ನ ಅಣ್ಣ ಅರ್ಥಶಾಸ್ತ್ರದ ಪ್ರಾಧ್ಯಾಪಕನಾದ್ದರಿಂದ ಇಂಗ್ಲಿಷ್ ಮೇಜರ್ ಮಾಡುತ್ತೇನೆಂದರೂ ಅರ್ಥಶಾಸ್ತ್ರ ಮೇಜರ್ ಆಗಿ ತೆಗೆದುಕೋ ನನ್ನ ನೋಟ್ಸ್ ಹೇಗೂ ಇದೆ ಎಂದು ಅರ್ಥಶಾಸ್ತ್ರವನ್ನೇ ಕೊಡಿಸಿದ್ದ. ಆಗೆಲ್ಲ ಕೈಯಲ್ಲೇ ನೋಟ್ಸ್ ಬರೆದು ಓದ ಬೇಕಾದ್ದರಿಂದ ರೆಡಿಮೇಡ್ ನೋಟ್ಸ್ ಸಿಗುತ್ತದೆಯೆಂದರೆ ನಿಧಿ ಸಿಕ್ಕ ಹಾಗೆ.

ಆಗ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದವರು ದಿ. ಎಲ್ ಟಿ ಶರ್ಮ ಅವರು. ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಧುರೀಣ. ಭಾರತದ ಅರ್ಥಶಾಸ್ತ್ರದ ಬಗ್ಗೆ ಯಾವುದೇ ನೋಟ್ಸ್ ಚೀಟಿ ಇಲ್ಲದೆ ನಿರರ್ಗಳವಾಗಿ ಗಂಟೆ ಪೂರ್ತಿ ಪಾಠ ಮಾಡಬಲ್ಲವರು. ಅಂಕಿ ಸಂಖ್ಯೆಗಳನ್ನು ನಿಖರವಾಗಿ ನೆನಪಿನ  ಬಲದಿಂದಲೇ ಬರೆದು ತೋರಿಸುತ್ತಿದ್ದರು. ಅವರ ವಾಕ್ಝರಿ ಅನೇಕರನ್ನು ಮಂತ್ರಮುಗ್ಧವಾಗಿಸುತ್ತಿತ್ತು. 

ಮೊದಲ ದಿನದ ಮೊದಲ ಪೀರಿಯಡ್ ಎಲ್ ಟಿ. ಶರ್ಮಾ ಅವರದ್ದು ಅರ್ಥಶಾಸ್ತ್ರದ ಮೇಜರ್. ಕ್ಲಾಸು. ಸ್ಪಷ್ಟವಾದ ವಿಚಾರ ಧಾರೆಯನ್ನು ಸ್ಪುಟವಾದ ಮಾತುಗಳಲ್ಲಿ ಕೊರೆದಿಟ್ಟಂತೆ ಕಟೆಯುತ್ತ ಹೋಗುವ ಆ ಚಿಕ್ಕ ಮೂರ್ತಿಯ ಕ್ಲಾಸಿನಲ್ಲಿಯೇ ‘ಈ ಕಾಲೇಜು ಸೇರಿ ಒಳ್ಳೆಯದು ಮಾಡಿದೆ’ ಎಂಬ ಭಾವ ನನ್ನಲ್ಲಿ ಮೂಡಿತು.

ಮುಂದಿನ ಪಿರಿಯಡ್ ಐಚ್ಛಿಕ ಕನ್ನಡ ಕ್ಲಾಸು. ಟೈಮ್ ಟೇಬಲ್ ನಲ್ಲಿದ್ದ ಕ್ಲಾಸ್ ರೂಮಿಗೆ ಹೋದರೆ ಫೈನಲ್ ಇಯರ್ ಮಕ್ಕಳು ತುಂಬಿ ಹೋಗಿದ್ದಾರೆ. ಪಾಪ ಇದೇ ಕ್ಲಾಸಿನವರು ಎಂಬ ಅನುಕಂಪದಲ್ಲಿ ಜಾಗ ಬಿಟ್ಟುಕೊಟ್ಟವರ ನಡುವೆ ಅಲ್ಲೇ ಮುದುರಿ ಕುಳಿತಿದ್ದಾಯಿತು.

ನೋಡಲು ಗಿಡ್ಡ ಎನ್ನಬಹುದಾದ ವಿಶೇಷ ಲೌಕಿಕ ಚಹರೆಗಳು ಇಲ್ಲದ ತನ್ನದೇ ಲೋಕದಲ್ಲಿ ತನ್ಮಯವಾಗಿದ್ದ ಮೇಷ್ಟ್ರೊಬ್ಬರು ತರಗತಿಯನ್ನು ಪ್ರವೇಶಿಸಿದರು. ಹರಿಶ್ಚಂದ್ರ ಕಾವ್ಯದ ಪಠ್ಯ. ನೋಡಲು ಗಂಭೀರವಾಗಿದ್ದ ಈ ಮೇಷ್ಟ್ರು ಪುಸ್ತಕ ತೆರೆದು ಮಾತಾಡಲು ಮೊದಲಿಟ್ಟುದೆ ತಡ ಒಂದು ದಟ್ಟನೆಯ ನಗೆ ಮಂಜಿನ ಸ್ಪರ್ಶಕ್ಕೆ ನಾವೆಲ್ಲಾ ಒಳಗಾದ ಅನುಭವ.

ಮಾತು ಮಾತಿಗೆ ಸಾಲು ಸಾಲಿಗೆ ಅದೆಲ್ಲಿಂದ ಆಕರ್ಷಕ ಉಪಮೆ ಚಟಾಕಿಗಳು ಬಂದೊದಗುತ್ತಿದ್ದವೊ! ನಾನು ತೆರೆದ ಬಾಯಿ ಮುಚ್ಚಲೇ ಇಲ್ಲ. ನಗುವಿನ ತಿಳಿ ಬೆಳಕಿನಲ್ಲಿ ಅದ್ದಿಟ್ಟ ಅನುಭವ. ಜೀವನದ ಜಟಿಲ ಸಂಗತಿಗಳನೇಕ ಇವರ ಬಾಯಲ್ಲಿ ಹಗುರಾದ ಹರಟೆಗಳಾಗಿ ಹೊರಹೊಮ್ಮುವ ರೀತಿ ಹೊಸದೊಂದು ಹೊಳಹನ್ನು ತೆರೆದು ತೋರಿಸಿತು. ಸುತ್ತಮುತ್ತ ಕುಳಿತ ಎಲ್ಲ ವಿದ್ಯಾರ್ಥಿಗಳ ಮುಖದಲ್ಲೂ ಒಂದು ಮಂದಹಾಸದ ನವಿರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: