ಅಂಜಲಿ ಹಳಿಯಾಳ್‌ ನೆನಪಿನಲ್ಲಿ ಎಸ್ ಪಿ ಬಿ

ವಿಸ್ಮೃತಿಯಿಂದ ಶೃತಿಯೆಡೆಗೆ

ಅಂಜಲಿ ಹಳಿಯಾಳ್‌

‘ಆರನೆಯವರಾಗಿ ಆಯ್ಕೆಯಾಗಿದ್ದಾರೆ… ಶ್ರೀದೇವಿ..’ ಅಪರ್ಣಾ ಅವರ ಮೃದು ಮಧುರ ಧ್ವನಿ, ಪ್ರವೀಣ್ ಡಿ. ರಾವ್ ಅವರ ಗಂಭೀರ ಕಂಠ ಮೊಳಗಿತು. ಕುವೆಂಪು ಕಲಾಕ್ಷೇತ್ರದಲ್ಲಿ ಸಭಾಂಗಣ ತುಂಬಿ ತುಳುಕುತ್ತಿದೆ. ಸೂಜಿ ಬಿದ್ದರೂ‌ ಕೇಳಿಸುವಷ್ಟು ಮೌನ.. ಉಸಿರು ಬಿಗಿ ಹಿಡಿದು ಕಾಯುತ್ತಿರುವ ಕನಸುಗಣ್ಣಿನ ಸ್ವರಸಾಧಕಿಯರು, ಅವರ ಮನೆಯವರು..

ನನ್ನ ಪಕ್ಕದಲ್ಲಿ ಕುಳಿತಿದ್ದ ಗಾಯಕಿಯ ಪುಟ್ಟ ತಮ್ಮ, ತನ್ನ ಎರಡೂ ಕೈಗಳ ಬೆರಳುಗಳನ್ನು ಕ್ರಾಸ್ ಮಾಡಿಕೊಂಡು ಕಣ್ಣು ಮುಚ್ಚಿ ಕುಳಿತಿದ್ದ.  ನನಗೇನೂ ಅಂತಹ ಆತಂಕ ಇರಲಿಲ್ಲ.

 ನಮ್ಮ ಹರೆಯದ ಕನಸುಗಳನ್ನು ಉದ್ದೀಪಿಸಿದ ನಾಯಕರ ಧ್ವನಿಯಾಗಿ, ವಿಶ್ವವೇ ಮರುಳಾಗಿರುವ ಮಾಂತ್ರಿಕ ಧ್ವನಿಯ ಮೇರು ಗಾಯಕರಾದ ಎಸ್ ಪಿ ಬಿ ಅವರೊಡನೆ, ಈಟೀವಿ ಕನ್ನಡ ಚಾನೆಲ್ ನ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ೩-೪ ಯುಗಳ ಗೀತೆಗಳನ್ನು ಹಾಡುವ ಅತ್ಯದ್ಭುತ ಅವಕಾಶ. ಎಸ್.ಪಿ.ಬಿ. !!!

ಅವರ ಪಕ್ಕದಲ್ಲಿ ನಿಲ್ಲುವ ಯೋಗ್ಯತೆ ಇದೆಯೆ ? ನನಗೆ ?

ಎಸ್.ಪಿ.ಬಿ. ಅವರು ಕರೆ ಕೊಟ್ಟಿದ್ದರು… ‘ನನ್ನೊಡನೆ ಹಾಡಲು ನಿಮಗೆ ಆಸೆಯಿದೆಯೆ ? ಹಾಗಿದ್ದರೆ ಈ ಮೈಕ್ ನಿಮ್ಮದು. ನಿಮ್ಮ ಧ್ವನಿಯನ್ನು ಒಂದು ಕೆಸೆಟ್ ನಲ್ಲಿ ಧ್ವನಿಮುದ್ರಣ ಮಾಡಿ ನಮಗೆ ಕಳಿಸಿ. ಆಯ್ಕೆಯಾದಲ್ಲಿ ನನ್ನೊಡನೆ ಯುಗಳ ಗೀತೆ ಹಾಡುವ ಅವಕಾಶ ನಿಮ್ಮದಾಗುತ್ತದೆ…’

ಈ ಕರೆ ನನ್ನಲ್ಲಿ ಯಾವ ಆಸೆಗಳನ್ನೂ ಹುಟ್ಟು ಹಾಕಲಿಲ್ಲ. ಸಾಧನಾ ಸಂಗೀತ ಶಾಲೆಯಲ್ಲಿ ಸಾಧಾರಣ ವಿದ್ಯಾರ್ಥಿನಿ ಯಾಗಿದ್ದ ನನಗೆ, ಚಿಕ್ಕಂದಿನಿಂದ ಯಾವ ಸಂಗೀತದ ಹಿನ್ನೆಲೆ, ತರಬೇತಿ ಮತ್ತು ಹುಟ್ಟಿನಿಂದ ಬರಬಹುದಾದಂತಹ ಸ್ವರಸಂಸ್ಕಾರ ಇರಲಿಲ್ಲ. ನನ್ನ ಹಿರಿಮೆ ಎಂದರೆ, ಈಗಾಗಲೇ ಎಸ್.ಪಿ.ಬಿ.ಯವರೊಡನೆ ವೇದಿಕೆ ಹಂಚಿಕೊಂಡು ಹಾಡಿರುವ ಅತಿ ಪ್ರತಿಭಾವಂತ ಗೆಳತಿ ಜ್ಯೋತಿ ರವಿಪ್ರಕಾಶ್ ಶಾಲೆಯಲ್ಲಿ ನನ್ನ ಆತ್ಮೀಯ ಗೆಳತಿಯಾಗಿದ್ದು, ಅವಳೊಡನೆ ನಾನು ಓಡಾಡುತ್ತಿದ್ದುದೇ ನನ್ನ ಹೆಗ್ಗಳಿಕೆ.

‘ಏಳನೆಯವರಾಗಿ ಆಯ್ಕೆಯಾಗಿದ್ದಾರೆ ಸುಪ್ರಿಯಾ’ ಮತ್ತೊಮ್ಮೆ ತೇಲಿ ಬಂತು ವೇದಿಕೆಯ ಧ್ವನಿ. ನನಗೆ ಕುತೂಹಲ ಎಷ್ಟು ಜನರನ್ನು ಆಯ್ಕೆ ಮಾಡ್ತಾರೆ? ನಾನು ಆಯ್ಕೆ ಯಾಗಲಾರೆ ಎಂಬುದು ನನ್ನ ಖಚಿತ ವಿಶ್ವಾಸ.

ಸಾಧನಾ ಸಂಗೀತ ಶಾಲೆಯ ರೂವಾರಿ ಮಂಜುಳ ಗುರುರಾಜ್ ಮೇಡಂ, ನಿನ್ನ ಧ್ವನಿ ಗೀತಾ ದತ್ ಳನ್ನು ಹೋಲುತ್ತದೆ. ವಿಭಿನ್ನ ಧ್ವನಿ. ಸರಿಯಾಗಿ ಅಭ್ಯಾಸ ಮಾಡು, ಎಂದಿದ್ದರು. ಹಾಗೆಂದರೇನು ಎಂದು ತಿಳಿದುಕೊಳ್ಳುವ ವ್ಯವಧಾನವೆಲ್ಲಿತ್ತು? ಅತ್ತೆ ಮಾವ ನಾದಿನಿಯರ ತುಂಬು ಕುಟುಂಬ, ಏಳು ವರ್ಷದ ಅಸಾಧ್ಯ ಪುಂಡಾಟ ಮಾಡುವ ಮಗ, ಅಡುಗೆ ತಿಂಡಿ ಮುಗಿಸಿ, ೮.೩೦ಕ್ಕೆ ೨-೩ ಬಸ್ ಹಿಡಿದು ಓಡಬೇಕಾಗಿದ್ದ ನನ್ನ ಬಿ.ಎಸ್.ಎನ್.ಎಲ್. ನೌಕರಿ. ಮತ್ತೆ ಸಂಗೀತ ಶಾಲೆಗೆ ಸೇರಿದ್ದು ಯಾಕೆ? ಆಫೀಸಿನಲ್ಲಿ  ಬೇರೆಯವರಿಗಿಂತ ಸ್ವಲ್ಪ ಸುಮಾರಾಗಿ ಹಾಡುತ್ತಿದ್ದ, ನನ್ನನ್ನು ಸಮಾರಂಭಗಳಲ್ಲಿ ಪ್ರಾರ್ಥನಾಗೀತೆ, ಭಾವಗೀತೆ ಹಾಡಿ ಎಂದು ಪ್ರಾಣ ತೆಗೆಯುತ್ತಿದ್ದವರಿಗಾಗಿ ಒಂದೆರಡು ಹಾಡಿನ ಸಂಗ್ರಹವಿರಲಿ ಎಂಬುದೇ ನನ್ನ ಉದ್ದೇಶ. 

ನನಗಿಂತ ನನ್ನ ಗಾಯನ ಸಾಮರ್ಥ್ಯ ದ ಮೇಲೆ ನನ್ನ ಗೆಳತಿ ಜ್ಯೋತಿಗೇ ಹೆಚ್ಚು ವಿಶ್ವಾಸ. SPBಯವರು ಕರೆ ಕೊಟ್ಟಾಗ, ನಮ್ಮ ಮನೆಗೆ ಸ್ವತಃ ಬಂದು ತನ್ನ ಕೆಸೆಟ್ ನಲ್ಲಿ ನನ್ನ ಧ್ವನಿ ರೆಕಾರ್ಡ್ ಮಾಡಿ, ತನ್ನ cassette ನೊಡನೆ ಈಟೀವಿ ಕಛೇರಿಗೆ ಕಳಿಸಿದ್ದಳು. ‘ನೀವು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು’ ಎಂಬ ಪತ್ರ ಈಟೀವಿ ಯಿಂದ ಬಂದಾಗ ಹೀಗೂ ಉಂಟೇ ಎಂದು ನನ್ನ ಉದ್ಗಾರ.

ಎರಡು ಹಾಡುಗಳನ್ನು ರೆಡಿ ಮಾಡಿಕೊಂಡು, ಸಭಾಂಗಣಕ್ಕೆ ಕಾಲಿಟ್ಟಾಗ, ಕುಳಿತಲ್ಲಿ ನಿಂತಲ್ಲಿ ಕಡೆಯ ಕ್ಷಣದ ತಯಾರಿ ನಡೆಸುತ್ತಿದ್ದ ಅದ್ಭುತ ಗಾಯಕಿಯರನ್ನು ಕಂಡು ಅಧೀರತೆಯಾಗಿದ್ದು ನಿಜ. ರಾಜನ್- ನಾಗೇಂದ್ರ ಜೋಡಿಯ ರಾಜನ್ ಸರ್, ಮತ್ತು ಪ್ರವೀಣ್ ಡಿ.ರಾವ್ ತೀರ್ಪುಗಾರರು. ಮೃದು ಮಾತುಗಳಿಂದ ವೇದಿಕೆಯ ಮೇಲೆ ನಿಂತಾಗ ಧೈರ್ಯ ತುಂಬಿದ ಅಪರ್ಣ.

ನಾನು ಹಾಡಿದ ಗೀತೆ ಎಲ್. ಆರ್ ಈಶ್ವರಿ  ಹಾಡಿದ ‘ಓ ಗೆಳೆಯ, ಈ ದಾರಿ ಮರೆತೆಯಾ’.

‘ಆಯ್ಕೆಯಾದ ಕಡೆಯ ಅಭ್ಯರ್ಥಿಯ ಹೆಸರು…’ ಸರಿ…. ಇದನ್ನು ಕೇಳಿ ಮನೆಗೆ ಹೋದರಾಯ್ತು ಎಂದು ಕುಳಿತೆ. ಆಶ್ಚರ್ಯ! ನನ್ನ ಹೆಸರು ಕರೆದರೆ ?? !!!

ಆಯ್ಕೆಯಾಗಿ, ಎಸ್. ಪಿ.ಬಿ.ಯವರೊಡನೆ ೩ ಯುಗಳ ಗೀತೆ ಮತ್ತು ಒಂದು solo ಗೀತೆ ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಡಿ, ಪ್ರಸಾರವಾಗಿ ಅಪಾರ ಮೆಚ್ಚುಗೆ ಗಳಿಸಿದ ನಂತರ, ಸಂಗೀತದೆಡೆಗೆ ನನ್ನ ಯೋಚನಾಲಹರಿ ಬದಲಾಯ್ತು. ಇನ್ನು ನನ್ನ ಸಂಗೀತವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅರ್ಥವಾಗಿ, ೩೭ನೆಯ ವಯಸ್ಸಿನಲ್ಲಿ ಶಾಸ್ತ್ರೀಯ ತರಬೇತಿಗೆ ಸೇರಿದೆ.

ಅತ್ತೆ ಮನೆಯಲ್ಲಿ ಕುಳಿತಾಗ, ನಿಂತಾಗ, ಅಡುಗೆ ಮಾಡುವಾಗ, ಅಲ್ಲಿಂದಿಲ್ಲಿ ಓಡಾಡುವಾಗ ನಿರಂತರ ಅಭ್ಯಾಸ. ಬಹಳ ಕಷ್ಟದ ಸಮಯ. ಇರುವ ಅಲ್ಪ ಸಮಯದಲ್ಲಿ ನನ್ನ ಸ್ವಭಾವತಃ ವಿಭಿನ್ನ ಧ್ವನಿಯನ್ನು ಪಳಗಿಸುವುದು ಕಷ್ಟಕರ ಸಂಗತಿ ಎಂದು ತಿಳಿದದ್ದು ಆಗಲೇ.

ಟೀವಿಯಲ್ಲಿ ನನ್ನನ್ನು ನೋಡಿ, ಕಾರ್ಯಕ್ರಮ ಗಳಲ್ಲಿ ಹಾಡಲು ಆಹ್ವಾನ ಬರುವಾಗ, ಆ ಗೀತೆಗಳಿಗೆ ಬೇಕಾದ rangeನ ಕೊರತೆ ಕಾಡುತ್ತಿತ್ತು.  ಧ್ವನಿಸಂಸ್ಕಾರದ ಕಡೆ ನನ್ನ ಲಕ್ಷ್ಯ ಸದಾ. 

ಮನೆಯಲ್ಲಿರುವ ನನ್ನ ಮಂದಿಗೆ, ಈ ವಯಸ್ಸಿನಲ್ಲಿ ಇದೆಂಥ ಹುಚ್ಚು ..? ಸಂಗೀತ ಕಲಿಯುವುದೆಲ್ಲ ಸಣ್ಣ ವಯಸ್ಸಿನಲ್ಲಿ ಮುಗಿಸಿಬಿಡಬೇಕು ಎಂಬ ಅಭಿಪ್ರಾಯ. ಈಗ ಹುಚ್ಚುಚ್ಚಾಗಿ ಕುಳಿತಲ್ಲಿ ನಿಂತಲ್ಲಿ ಹಾಡ್ಕೊಂಡು ಓಡಾಡುವ ನನ್ನನ್ನು ಕಂಡು ಸಂದಿಗ್ಧ ಪರಿಸ್ಥತಿ. 

‘ನಿಮ್ಮ ಧ್ವನಿ ವಿಶಿಷ್ಟವಾಗಿದೆ, fast ಹಾಡುಗಳಿಗೆ ಹೊಂದುತ್ತದೆ, ಎಂದು ನಿಮ್ಮನ್ನು ಆಯ್ಕೆ ಮಾಡಿದೆವು’ ಎಂಬ ತೀರ್ಪುಗಾರರ ಸಮಿತಿಯಲ್ಲೊಬ್ಬರು ಹೇಳಿದ್ದು, ಒಂದೇ ನನ್ನಲ್ಲಿ ಚಿಗುರುತ್ತಿರುವ ಒಂದು ಆಕಾಂಕ್ಷೆಗೆ ನೀರೆರೆಯುತ್ತಿತ್ತು.

ಕಾರ್ಯಕ್ರಮಗಳಿಗೆ ಹಾಡಲು ಯಾಕಾದರೂ ಕರೆಯುತ್ತಾರಪ್ಪ ಎಂದು ಅಳುತ್ತ ಕೂರುವ ಪರಿಸ್ಥಿತಿ ನನ್ನದಾಗಿತ್ತು. ಮನದಣಿಯೆ ಕುಳಿತು ಅಭ್ಯಾಸ ಮಾಡಿ ನನ್ನ ಧ್ವನಿ ಪಳಗಿಸಲು ನನ್ನ ವೃತ್ತಿ, ಅತ್ತೆ ಮನೆಯ ಸೀಮಿತ ಅವಕಾಶ ನನ್ನನ್ನು ಖಿನ್ನತೆಗೆ ದೂಡುತ್ತಿತ್ತು. ಆದರೂ ನನ್ನ ಪತಿ, ಮನೆಯವರೆಲ್ಲರೂ ಸುಸಂಸ್ಕೃತರು. ನನ್ನನ್ನು ಹಾಡಿಕೊಳ್ಳಲು ಬಿಟ್ಟರು.

ಈ ನಡುವೆ ನಮ್ಮ ಹೊಸ ಮನೆಯ ಗೃಹಪ್ರವೇಶವಾಗಿ ನಾವು ಪ್ರತ್ಯೇಕ ಸಂಸಾರ ಹೂಡಿದಾಗ, ಜವಾಬ್ದಾರಿ, ಕೆಲಸಕ್ಕೆ ಹೋಗುವ ಕಷ್ಟ ಮತ್ತಷ್ಟು ಹೆಚ್ಚಿತು. ಹೈಸ್ಕೂಲ್ ಗೆ ಹೋಗುವ ಮಗ, ನನ್ನ ಪತಿ ನನ್ನನ್ನು ಅರ್ಥ ಮಾಡಿಕೊಂಡಿದ್ದನ್ನು ಈಗ ನೆನೆಯುತ್ತೇನೆ. ನನ್ನ ಧ್ಯಾನ ಒಂದೇ ಕಡೆಗೆ ಹರಿಯುತ್ತಿತ್ತು. ಬಸ್ ನಲ್ಲಿ ಸೀಟು ಸಿಗದೆ ನಿಂತಾಗ, ಸಂಗೀತದ ತಾನ್ ಗಳು ಹೊಳೆಯುತ್ತಿದ್ದಾಗ, ಅವನ್ನು ಆಫೀಸಿಗೆ ಹೋದ ಕೂಡಲೇ ಬರೆದಿಡುತ್ತಿದ್ದೆ.  ಅವನ್ನು ಮನೆಗೆ ಬಂದು ಯಾವಾಗ ಹಾಡಿಕೊಂಡೆನೋ ಎನಿಸುತ್ತಿತ್ತು.  ಮನೆಗೆ ಬಂದ ಮೇಲೆ ರಾತ್ರಿ ೧೦ರ ನಂತರ ಸಮಯ ಸಿಗುತ್ತಿತ್ತು. ಆದರೂ ಅದು ನನ್ನ ಗೀಳಾಗಿತ್ತು. ಆ ಸಮಯದಲ್ಲಿಯೂ ಸಹ ವೃತ್ತಿ ನಿರತ ಗಾಯಕಿಯಾಗಬೇಕೆಂದೇನೂ ನನ್ನ ಉದ್ದೇಶವಿರಲಿಲ್ಲ.  ಸಂಗೀತದ ಅಭ್ಯಾಸ ನನ್ನಲ್ಲಿ ಚೈತನ್ಯ ತುಂಬುತ್ತಿತ್ತು.

ಈಗ ಅನಿಸುತ್ತದೆ, ಇದೇ ರೀತಿಯ ಶ್ರದ್ಧೆ ನನ್ನ ವಿದ್ಯಾರ್ಥಿ ದೆಸೆಯಲ್ಲಿಯೂ ಇದ್ದಿದ್ದರೆ, ಅನಾಯಾಸವಾಗಿ ಓದಿ, ಪದವಿಯಲ್ಲಿ ಒಳ್ಳೆಯ ಅಂಕ ಪಡೆದಿದ್ದ ನಾನು ಇನ್ನೊಂದೆರಡು ಡಿಗ್ರಿ ಗಳಿಸಬಹುದಿತ್ತು ಎಂದು.

ಇದೇ ಸಮಯದಲ್ಲಿ ಮುಂದಿನ ಅಧಿಕಾರಿಯ ಹುದ್ದೆಗೆ ಇಲಾಖೆಯ ಪರೀಕ್ಷೆಯಲ್ಲಿ, ರಾಜ್ಯಕ್ಕೇ ಮೊದಲಿಗಳಾಗಿ ಅಂಕಗಳನ್ನು ಪಡೆದು, ಮತ್ತೆ ೩-೪ ತಿಂಗಳ ಟ್ರೇನಿಂಗ್ ಗಾಗಿ ಮೈಸೂರಿಗೆ ಹೋಗಬೇಕಾಯ್ತು. ತಿರುಗಿ ಬಂದಮೇಲೆ ಹೆಚ್ಚಿದ ಕೆಲಸದ ಜವಾಬ್ದಾರಿ, ಸಂಗೀತದೆಡೆಗಿನ ಸೆಳೆತ,  ಸರಿಯುತ್ತಿದ್ದ ಕಾಲ ನನ್ನನ್ನು ಹಣ್ಣು ಮಾಡಿದವು. ಮತ್ತೆ ಮುಂದಿನ ಬಡ್ತಿ ನೀಡಿ ಮತ್ತೊಂದು ಊರಿಗೆ ವರ್ಗಾವಣೆ ಮಾಡುವ ದಿನ ಸನ್ನಿಹಿತವಾಯ್ತು. ಮಗನ ಇಂಜಿನಿಯರಿಂಗ್ ಮುಗಿದು ಕೆಲಸ ಪ್ರಾರಂಭವಾಗಿತ್ತು. 

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಮನ… ಆ ಮೋಹನ ಮುರಲಿಯ ಧೇನಿಸುತ್ತ ಶಿಲೆಯಾಗುತ್ತಿತ್ತು. ಮಧ್ಯವಯಸ್ಸಿನ ತಲ್ಲಣಗಳ ನಡುವೆ, ನಾನು ಸರ್ಕಾರಿ ವೃತ್ತಿಯ ಅನಾಸಕ್ತ ಮನಸ್ಸಿನ, ಕಲೆಯೆಂದರೆ ಉಡಾಫೆ ಮಾಡುವ ನನ್ನ ಪರಿಸರದಲ್ಲಿದ್ದ ಕುಹಕಿಗಳೊಡನೆ ನನಗೆ ೬೦ವರ್ಷ ತುಂಬುವವರೆಗೆ ಕೆಲಸ ಮಾಡಿ, ನಂತರ ನನ್ನ ಧ್ವನಿಯನ್ನು ಕಳೆದುಕೊಂಡು, ನನ್ನತನವನ್ನು ಹೊಸಕಿ ಹಾಕಿ ನಿವೃತ್ತ ಜೀವನ ನಡೆಸುವ ಕಲ್ಪನೆ ನನ್ನಲ್ಲಿ ಅಶಾಂತಿಯನ್ನು ತರುತ್ತಿತ್ತು. 

ಕೇಂದ್ರ ಸರ್ಕಾರದ ಕೈತುಂಬ ಸಂಬಳ ತರುತ್ತಿದ್ದ ಅಧಿಕಾರಿ ಹುದ್ದೆಯನ್ನು ಬಿಡುವ ನಿರ್ಧಾರ ಮಾಡಿದ್ದು ನನ್ನ ಜೀವನದ ಒಂದು ಮಹತ್ವದ ದಿನ.  ನಿರ್ಧಾರ ತೆಗೆದುಕೊಳ್ಳಲು ಧೈರ್ಯ ನೀಡಿದ ನನ್ನ ಪತಿ ಮತ್ತು ಮಗನಿಗೆ ನಾನು ಋಣಿ. ೨೭ ವರ್ಷ ಸೇವಾವಧಿಯ ನಂತರ ನಿವೃತ್ತಿ ಪಡೆದಾಗ ಹೊಸ ಜೀವನ ದೂರದಲ್ಲಿ ಕೈಬೀಸಿ ಕರೆಯುತ್ತಿತ್ತು.

ಸಂಗೀತ ಉಸಿರಿನಷ್ಟೇ ಮುಖ್ಯವಾಗಿತ್ತು, ಇದರೊಡನೆ ನನ್ನವರೇ ಆಗಿರುವ ಮನೆ ಹಿರಿಯರ ಕಡೆಗೂ ಸ್ವಲ್ಪವಾದರೂ ಲಕ್ಷ್ಯ ಕೊಡಬಹುದೆಂಬ ಸಂತಸ. ತಡರಾತ್ರಿಯ ಕಾರ್ಯಕ್ರಮಗಳನ್ನು ಮುಗಿಸಿ ಮನೆಗೆ ಒಬ್ಬಳೇ ಬರಬೇಕಾದ ಸಂದರ್ಭಗಳಲ್ಲಿಯೂ, ಸಿಗುತ್ತಿದ್ದ ಪ್ರಶಂಸೆ, ನನ್ನ ಹಾಡಿಗೆ ತಲೆದೂಗುತ್ತಿದ್ದ, ಮತ್ತು ಎದ್ದು ಹೆಜ್ಜೆ ಹಾಕುತ್ತಿದ್ದ ಕೆಲವು ಸಭಿಕರು.. ಒಂದು ಬಗೆಯ ಆತ್ಮತೃಪ್ತಿಯನ್ನು ನೀಡುತ್ತಿದ್ದವು.  

ಮತ್ತೆ ಅನೇಕ ಪ್ರತಿಷ್ಠಿತ ಅವಕಾಶಗಳು ಅರಸಿ ಬಂದಾಗ, ಧನ್ಯತೆಯ ಭಾವದೊಂದಿಗೆ, ಒಂದು ಹಾಡು ಹಾಡಲೂ ಕಂಪಿಸುತ್ತಿದ್ದ ದಿನಗಳನ್ನು ಮರೆಯಲಾರೆ. 

ಇನ್ನೂ ಗಾಯನದಲ್ಲಿ ಬಹಳಷ್ಟು ಸಾಧಿಸಬೇಕಾಗಿರುವ ನಾನು ಈಗ ಬಂದಿರುವ ಸೊಸೆಯೊಡನೆ, ನನ್ನ ಉಡುಪು, ಹಾಡುಗಳ ಆಯ್ಕೆಯ ಬಗ್ಗೆ ಚರ್ಚಿಸಿ ಸಲಹೆ ಪಡೆಯುವಾಗ ಒಂದು ಬಗೆಯ ಖುಷಿ. ಅತ್ತೆಯಾಗುವ ಹೊಸ ಜೀವನ ಪಾಠವನ್ನೂ, ಎದುರಿಸಬೇಕಾಗಿರುವ ಅಸ್ಥಿರತೆಗಳನ್ನೂ ದೂರ ಮಾಡುವ ಶಕ್ತಿ ಸಂಗೀತ ನನಗೆ ನೀಡಿದೆ. 

ಹಿಂದೊಮ್ಮೆ, ಖ್ಯಾತ ಟೀ.ವಿ. ಅಭಿನೇತ್ರಿ, ಶೈಲಜಾರಾವ್ ಹೇಳಿದ ಮಾತು ನೆನಪಿಗೆ ಬರುತ್ತದೆ.

‘ಹೆಣ್ಣು, ಗೃಹಿಣಿಯಾಗಿರಲಿ, ಅಥವಾ ಉದ್ಯೋಗಸ್ಥೆಯಾಗಿರಲಿ, ಅವಳದೇ ಆದ ಆತ್ಮ ತೃಪ್ತಿ ತರುವಂತಹ ಹವ್ಯಾಸ ಅಥವ ಪ್ರವೃತ್ತಿ ಇರಲೇಬೇಕು. ಅವಳ ಆತ್ಮತೃಪ್ತಿ, ಅವಳನ್ನೂ, ಮನೆಯನ್ನೂ, ಪರಿಸರವನ್ನೂ ಸಮಾಜವನ್ನೂ ಆರೋಗ್ಯದಿಂದಿರಿಸುತ್ತದೆ.’

ಗಾಯನವೇ ಇರಲಿ, ಅಥವಾ ಯಾವುದೇ ಹವ್ಯಾಸವಿರಲಿ, ತಡವಾಗಿ ಯಾದರೂ, ಅದನ್ನು ಪೋಷಿಸಿ, ಸ್ವಲ್ಪ ಸಮಯ ಮೀಸಲಿಟ್ಟು, ತನ್ನ ಆನಂದದ ದಾರಿಯನ್ನು ಹುಡುಕಿಕೊಳ್ಳುವ ಮನೋಭಾವ ಹೆಣ್ಣಿಗೆ ಅತಿ ಮುಖ್ಯ ಅನಿಸುತ್ತದೆ. 

ಹೆಣ್ಣು ಹೃದಯದಿಂದ ಆಲೋಚಿಸುತ್ತಾಳೆ. ಭಾವುಕ ಮನಸ್ಸಿಗೆ ನೋವುಗಳು, ಅಪರಾಧಿ ಪ್ರಜ್ಞೆ ಗಳೂ ಬಿಡದೆ ಕಾಡುತ್ತವೆ. ಎಲ್ಲರನ್ನೂ ಮೆಚ್ಚಿಸಲು ಹೆಣಗುವ ಅವಳ ಮನೋಭಾವ, ತನಗೂ ಒಂದು ಆತ್ಮವಿದೆ, ಅದು ಸೊರಗಿ ಮೂಲೆಗುಂಪಾಗಿ ಯಾವಾಗಲೋ ಒಮ್ಮೆ ಭುಗಿಲೇಳುತ್ತದೆ ಎಂಬುದನ್ನು ಮರೆಯುತ್ತಾಳೆ. 

ಯಾವ ಕಲೆಯೂ ಸಣ್ಣದಲ್ಲ. ಅದರೆಡೆಗೆ ಗಮನ ಹರಿಸಿ ಪೋಷಿಸಿದಾಗ ಸಿಗುವ ತೃಪ್ತಿ, ಆನಂದ ಅವಳಿಗೆ ದೈತ್ಯ ಶಕ್ತಿ ನೀಡುತ್ತದೆ. ಜಂಜಡಗಳನ್ನು ಮರೆಸುತ್ತದೆ. ಕಡೆಗಾಲದಲ್ಲಿ ಊರುಗೋಲಾಗುತ್ತದೆ.

‍ಲೇಖಕರು Admin

September 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: