ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷ್ಮಣ್ ಕೆ ಪಿ ಕವಿತೆ: ರೋಹಿತನ ನೆನಪಿಗೆ…

ಲಕ್ಷ್ಮಣ್ ಕೆ ಪಿ

**

ಪತ್ರ ಓದಿದೆ; ಮತ್ತೆ,
ಅವನು ಮೊದಲ ಬಾರಿಗೆ ಬರೆದ
ಕೊನೆಯ ಪತ್ರ
ಜೀವ ತೆಗೆದುಕೊಳ್ಳುವ ಗಳಿಗೆಗಳಿಗೂ ಕೆಲಗಳಿಗೆ ಮೊದಲು

ಹುಟ್ಟು ಸಾವುಗಳು ಕೊನೆ ಮೊದಲುಗಳಲ್ಲ
ಹರಿವ ಜೀವ ನಿರಂತರ ತೊರೆ

ಬಿದ್ದ ದೇಹ
ಗೊಬ್ಬರವಾಗಬಹುದು
ಭೂಮಿ ಕೆಳಗೆ
ಬೇರಿನೊಳಗೆ
ಹರಿದು ಹೂವಾಗಬಹುದು ಕಂಡವರ ಕಣ್ಣಿಗೆ
ನಗು, ಕಣ್ಣೀರು,ಮೌನ ನಕ್ಷತ್ರವಾಗಬಹುದು
ನೆಲದ ಕಕ್ಷೆ ದಾಟಿ
ಸಮೀಕ್ಷೆ ಮಾಡಲಾಗದ ನಭದ ವ್ಯೂಹ ಸಮುದ್ರದೊಳಗೆ
ಬೆಳಕಿನ ಚಿಂದಿಯಾಗಿ ತೂಗಾಡಬಹುದು

ಬುದ್ದ
ಇದ ತೊದಲಿ ನಾದವಾಗಿ
ಜೀವ ಮಂಡಲದ ಕಾಲದಲಿ
ಕರಗಿ ಹೋದ

ಇದ್ದವನೊಬ್ಬ ಗೆಳೆಯ
ಇವನೂ
ನಕ್ಷತ್ರದ ಸೆಳವಿಗೆ ಸಿಕ್ಕು
‘Let my funeral be silent and smooth’ ಅಂದು ರೂಪಾಂತರವಾದ …

ಇಲ್ಲಿ ಉಸಿರಿದ್ದವರ ಪಾಡೇನು?

ಮೌನದಲ್ಲಿ ಮಣ್ಣು ಮಾಡುವುದು
ಇವನನೊಬ್ಬನದೆ ಆಗಿದ್ದರೆ
ನಾನು ಅನುದಿನವೂ ಹೆಣಭಾರವಾಗಿ
ಬರೀ ಕೂಳು ಮಡಕೆಯ ಬೋಕಿ ಪಿಲ್ಲೆಗಳೆ
ದಾರಿಯಾದಲ್ಲಿ
ಓಡಾಡುತ್ತಿರಲಿಲ್ಲ ..

ಅಬ್ಬಾ..
ಭಾರವಾದ ಉಸಿರನ್ನು ಎಷ್ಟೆಂದು ಹೊರುವುದು,ಹೇರುವುದು
ಬದುಕಿದ್ದವರ ಬಿಕ್ಕಳಿಕೆಗಳು ಬದುಕಿದ್ದವರಿಗೇ ತಲುಪುವುದಿಲ್ಲ
ನಕ್ಷತ್ರವಾದವರಿಗೆ ತಲುಪುತ್ತವೆ ಎಂದು ಹೇಗೆ ನಂಬುವುದು ?

‍ಲೇಖಕರು avadhi

17 January, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading