
ರೇಣುಕಾರಾಧ್ಯ
ಗೆಳೆಯರೆ ಬೇಸರವಾಗಿದ್ದ ನಾನು ಹಾಗೆ ನನ್ನ ಮೆಚ್ಚಿನ ಕವಿ ಎ.ಕೆ.ರಾಮಾನುಜನ್ ಸಂಕಲನ ಕೈಗೆತ್ತಿಕೊಂಡೆ
ಈ ಕವಿತೆ ಸಿಕ್ಕಿತು.
ಇವತ್ತಿನ ಭಾರತವನ್ನು ಇದಕ್ಕಿಂತಲೂ ವಿವರಿಸಲು ಸಾಧ್ಯವಿಲ್ಲ ಎನಿಸಿತು.
ಪದ್ಯದ ಮಾತು ಬೇರೆ
ನಾನು ಕಾಗದಗಳಿಗೆ ಉತ್ತರ
ಬರೆಯೋದಿಲ್ಲ.ಬರೆದರೂ
ಪೋಸ್ಟ್ ಮಾಡುವುದಿಲ್ಲ.ಮಾಡಿದರೂ
ಎಷ್ಟೋ ಸಾರಿ ಅದು ಬರೆದವರಿಗೆ ಹೋಗಿ
ಸೇರೋದಿಲ್ಲ.ಸೇರಿದರೂ
ಅವರು ಅದನ್ನು ಪೂರ್ತಿ ಓದೋದಿಲ್ಲ,ಏನೇನೋ
ಕೆಲಸ ಅವರಿಗೆ.ಹಾಗೆ ಓದಿದರೂ
ನಾನು ಹೇಳಿದ್ದೊಂದು,ಅವರಿಗೆ ಅರ್ಥ
ಆಗಿದ್ದೊಂದು.ಇದರಿಂದ ಮನಸ್ತಾಪ ಬೇರೆ.ನನಗೆ ಮಿಕ್ಕವರಿಂದ ಕಾಗದ ಬಂದಾಗಲೂ
ಇದೇ ಗತಿ.ಅದಕ್ಕೇ ನಾನು ಕಾಗದಕ್ಕೆ ಉತ್ತರ ಬರೆಯೋದಿಲ್ಲ.
ಪದ್ಯದ ಮಾತು ಬೇರೆ.
ಅದು ಕುದುರಿಬಿಟ್ಟರಂತೂ
ಅಪಾರ್ಥ ಮಾಡಿಕೊಂಡರೆ
ಅದೂ ಒಂದು ತರಹ ಅರ್ಥವೇ ಅಂತ ಅನಿಸಿಬಿಡುತ್ತೆ.
ಪದ್ಯದಲ್ಲಿ ಅನರ್ಥ ವ್ಯರ್ಥ ಸಾರ್ಥ ಅನಿಸಿದರೆ
ಅವೆಲ್ಲ ನಿರರ್ಥಕದ ಕಲ್ಲು ಮಣ್ಣಿನ ಗಣಿ
ಯಲ್ಲಿ ಸಿಕ್ಕಿದ ಅರ್ಥ
ಸೋಸಿಕೊಳ್ಳುವ ಬೇರೆ ಬೇರೆ ತಂತ್ರ.
ಎಲ್ಲವೂ ಸಮರ್ಥ.ಸುಳ್ಳುಕೂಡ ನಿಜ.
ಪದವೇ ಪದಾರ್ಥ.
ಅದರ ಮಣ್ಣಿನಲ್ಲಿ ಚಿನ್ನದ ಕಣ.
ಕಲ್ಲಿನಲ್ಲಿ ಬೆಳ್ಳಿಯ ನರ.
ಕೆಸರಿನಲ್ಲೂ ಚಾಲೀಸ ಬಡಿದ ಹಳದಿಕಣ್ಣು,
ಕೆತ್ತನೆಗೆ ಕಾದಿರುವ ವೈಡೂರ್ಯ.
ಲಂಕೆ ಸುಟ್ಟದ್ದು ಹೇಗೆ?ಅಂತ ಚರಿತ್ರೆ
ಕೇಳಿದವರ ಮನೆಯನ್ನೆ “ಹೀಗೆ!’
ಅಂತ ಸುಟ್ಟು ತೋರಿಸಿ
ತೆನಾಲಿರಾಮ
ಆ ಹೊಗೆ ಆ ಬೂದಿ ಆ ಹಾಹಾಕಾರದೊಳಗೆ,
‘ನೋಡಿ ಇಲ್ಲಿ,
ಯಥಾರ್ಥ ರಾಮಾಯಣ ಇದೇ’,ಅಂತ
ತೋರಿಸಿದನಲ್ಲ,
ಹಾಗೆ..





0 Comments