ರೇವಣಸಿದ್ದಪ್ಪ ಜಿ ಆರ್ ಕವಿತೆ – ಅಪರಿಚಿತರು…

ರೇವಣಸಿದ್ದಪ್ಪ ಜಿ ಆರ್

1.

ಇವ ಬಾರಿನಲ್ಲಿ ಕುಳಿತು
ಬೀರು ಹೀರುತ್ತಿದ್ದ.
ಎದುರು ಕುಳಿತಿದ್ದ
ಅಪರಿಚಿತ ಕುಡುಕನೊಬ್ಬ
ಪರಿಚಿತ ನಗೆ ನಕ್ಕು
ಒಂದು ಸಿಗರೇಟಿಗೆ
ಬೇಡಿಕೆ ಇಟ್ಟ.
ಬೇಡಿದವನು
ಭಿಕಾರಿಯಾಗಿರಲಿಲ್ಲ.
ಬಾಲ್ಯದ ಸ್ನೇಹಿತನಿಗೆ
ಕೊಡುವಂತೆ
ಇವ ಅವಗೆ
ಸಿಗರೇಟೊಂದ ಕೊಟ್ಟು
ಪುಳಕಿತನಾದ!

ಸುರುಳಿಯಾಗಿ ತೇಲುತ್ತಿದ್ದ
ಹೊಗೆಯಂತೆ ಹರಿಯತೊಡಗಿತ್ತು
ಮಾತಿನ ಲಹರಿ ಈರ್ವರ ಮಧ್ಯೆ.
ಅವರ ಮಾತಿನಲ್ಲಿ
ಬಂದು ಹೋದರು
ಅವರವರ
ಹೆಂಡತಿ ಮಕ್ಕಳು,
ಬಂಧು ಬಳಗ;
ಬಂದು ಹೋದವು
ವೃತ್ತಿ ಪ್ರವೃತ್ತಿ ಎಲ್ಲಾ.

ಕೊನೆಯ ಗುಟಕು
ಕುಡಿದು ಇವನು ಮೇಲೆದ್ದಾಗ
ಅವನು ಮರೆಯಲಿಲ್ಲ
ಹುಷಾರಾಗಿ ಹೋಗಿರೆಂದು
ಹೇಳಲು,
ಮತ್ತೆ ಸಿಗೋಣವೆಂದು
ಕೈಕುಲುಕಲು.
ಮಂದ ಬೆಳಕಿನಲ್ಲಿ
ಮನುಷ್ಯತ್ವ
ಹೇಗೆ ತೆರೆದುಕೊಳ್ಳುತ್ತದೆ ನೋಡಿ!

ಒಬ್ಬರ
ಕೈಕುಲುಕುವುದು,
ಆಲಂಗಿಸುವುದು,
ಹಗುರಾಗುವುದು
ಎಷ್ಟು ಸಲೀಸು!

ಒಮ್ಮೊಮ್ಮೆ
ಅಂದುಕೊಳ್ಳುತ್ತೇನೆ-
ರಣರಂಗದಲ್ಲಿ
ಎದುರಾಗುವ ಅಪರಿಚಿತರು
ತಮ್ಮತಮ್ಮ
ಬಂದೂಕು ಬದಿಗಿಟ್ಟು
ಪರಸ್ಪರ
ಸುಖದುಃಖ
ವಿಚಾರಿಸುವಂತಾದರೆ
ಪಾಪಸ್ ಕಳ್ಳಿಯ ಜಾಗದಲ್ಲಿ
ಗುಲಾಬಿ ನಗುತ್ತದೆ.

2. ಕಟ್ಟು

ಹಲಾಲ್ ಕಟ್,
ಜಟ್ಕಾ ಕಟ್,
ಗುಡ್ಡೆ ಮೀಟ್ ಕಟ್-
ಈ ಎಲ್ಲಾ ಕಟ್ಟುಗಳಲ್ಲಿ
ಆಹುತಿಯಾಗುವುದು
ಕುರಿ,ಕೋಳಿ,ಕೋಣ,ಎಮ್ಮೆ,
ಹಸು,ಹಂದಿ,ಮೇಕೆ,ಟಗರು,
ಒಂಟೆ ಇತ್ಯಾದಿ
ಪಾಪದ ಪ್ರಾಣಿಗಳು;
ಹುಲಿಚಿರತೆಗಳಲ್ಲ.
ಕಡೆಗೆ ಕಬಳಿಸುವುದು
ಸತ್ತ ಪ್ರಾಣಿಗಳನ್ನೇ.

ಮಾಂಸಕ್ಕೂ
ಮಾತು ಬಂದಿದ್ದರೆ
ಹೇಳುತ್ತಿತ್ತೇನನ್ನು?
ಮನುಷ್ಯನಿಗೆ ಮನುಷ್ಯನೇ
ಮಚ್ಚು ಬೀಸುತ್ತಿರುವಾಗ
ಮಾಂಸದ ಮಾತೇಕೆ?
ಕೊಲ್ಲುವುದಕ್ಕೂ
ಕೊಲ್ಲದಿರುವುದಕ್ಕೂ
ತಿನ್ನುವುದಕ್ಕೂ
ತಿನ್ನದಿರುವುದಕ್ಕೂ
ನಮ್ಮನಮ್ಮ
ದೇವರು ಧರ್ಮಗಳ
ಹೆಸರಲ್ಲಿ ಸಮರ್ಥನೆ!

ಭೀಕರ ಚಿತ್ರವೊಂದು
ಆಗೊಮ್ಮೆ ಈಗೊಮ್ಮೆ
ಸುಳಿದು ಮರೆಯಾಗುತ್ತದೆ-
ದೊಡ್ಡದೊಂದು
ಮಾಂಸದಂಗಡಿಯಲ್ಲಿ
ಭಯಂಕರವಾಗಿ
ಕೊಚ್ಚಿ ಕತ್ತರಿಸಿ
ರುಂಡ,ಮುಂಡ,
ಕೈಕಾಲು, ಕರುಳು,
ತೊಡೆ,ತೋಳು,
ಕಿಡ್ನಿ, ಲಿವರು,
ಹೃದಯಗಳ
ಅಚ್ಚುಕಟ್ಟಾಗಿ
ನೇತುಹಾಕಲಾಗಿದೆ;
ಅಂಗಡಿಯ ತುಂಬೆಲ್ಲಾ
ರಕ್ತಸಿಕ್ತ ಮಾಂಸದುಂಡೆಗಳು
ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಎಲ್ಲವೂ ಮನುಷ್ಯರವೇ!
ನರನಾಡಿಯಲ್ಲಿ
ವಿದ್ಯುತ್ ಪ್ರವಹಿಸಿದಂತಾಗಿ
ಧಾರಾಕಾರ ಬೆವರು
ಹರಿಯುತ್ತದೆ.

‍ಲೇಖಕರು Admin

May 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: