ತಮ್ಮಣ್ಣ ಬೀಗಾರ ಓದಿದ ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’

ಖುಷಿ ಹಾಗೂ ಅರಿವಿನ ಪರಿಧಿ ಹೆಚ್ಚಿಸುವ ಪುಸ್ತಕ

ತಮ್ಮಣ್ಣ ಬೀಗಾರ

ಪಟ ಪಟ ಮಳೆ ಹನಿಗಳು ಉದುರುತ್ತವೆ. ಒಣಗಿದ ಮಣ್ಣು ಹಸಿಯಾಗುತ್ತ ಘಮಘಮಿಸ ತೊಡಗುತ್ತದೆ. ನಾವು ಮಕ್ಕಳಾಗಿದ್ದಾಗ ಮೊದಲ ಮಳೆಯ ಸಂಭ್ರಮದಲ್ಲಿ ಒಂದಾಗುತ್ತಿದ್ದೆವು. ಮಿಂಚು ಗುಡುಗುಗಳ ಆರ್ಭಟಕ್ಕೂ ಹೆರುತ್ತಿರಲಿಲ್ಲ. ಕತ್ತಲು ಕವಿದು ಗಾಳಿ ಬೀಸಿ ಚಕ್ ಚಕ್ ಎಂದು ಮಿಂಚುವಾಗಲೇ ಅಂಗಳಕ್ಕೆ ಬಂದು ಕುಣಿಯುತ್ತಿದ್ದೆವು. ಸಿಡಿಲು ಬಡಿದರೆ ಏನಾಗಬಹುದೆಂಬ ತಿಳುವಳಿಕೆಯಾಗಲಿ, ಭಯವಾಗಲಿ ನಮ್ಮಲ್ಲಿರಲಿಲ್ಲ.

ಮಕ್ಕಳ ಸಂಭ್ರಮವೇ ಹಾಗೆ. ಅವರಿಗೆ ಎಲ್ಲಿಲ್ಲದ ಕುತೂಹಲ. ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಅವರಲ್ಲಿ ಮೂಡುತ್ತಿರುತ್ತವೆ. ಆಟದಲ್ಲಿ ಅವರು ಯಾವಾಗಲೂ ನಿರತರು. ಎಂದೆ೦ದೂ ದಣಿವಾಗದ ಚೈತನ್ಯ ಅವರದು. ಸಿಟ್ಟು, ಬೈಗಳ, ಹಟಗಳೆಲ್ಲ ತಾತ್ಕಾಲಿಕ. ಅವರು ಎಲ್ಲ ಮರೆತು ಸುಖವಾಗಿ ನಿದ್ರಿಸುತ್ತಾರೆ. ಪ್ರತಿಸಲವೂ ಹೊಸ ಹೊಸ ಬೆರಗಿನಿಂದ ಕಣ್ತೆರೆಯುತ್ತಾರೆ.

ಇದನ್ನೆಲ್ಲ ಯಾಕೆ ಬರೆದೆನೆಂದರೆ ಯುವ ಪ್ರತಿಭಾವಂತ ಕವಿ ಸ್ನೇಹಿತ ಟಿ.ಪಿ. ಉಮೇಶ ಅವರ ಮಕ್ಕಳ ಕವಿತಾ ಸಂಕಲನ ಮುಂದಿಟ್ಟುಕೊ೦ಡಿದ್ದೇನೆ. ಹೌದು ಮಕ್ಕಳಿಗಾಗಿ ಬರೆಯುವುದೆಂದರೆ ಮಕ್ಕಳ ಕುತೂಹಲ, ಅವರ ಕಲ್ಪನೆ, ಆಟ, ನಡೆನುಡಿ, ಗೆಳೆತನ, ಸಿಟ್ಟು, ಸಾಹಸ ಮುಂತಾದ ಅನೇಖ ಸಂಗತಿಗಳೊಡನೆ ಅನುಸಂಧಾನ ನಡೆಸುವುದೇ ಆಗಿರುತ್ತದೆ. ಹಾಗಾಗಿ ನಾವು ಮಕ್ಕಳಿಗಾಗಿ ಬರೆಯಲು ತೊಡಗುವಾಗ ಅವರ ವಿಶಿಷ್ಟ ಜಗತ್ತಿಗೆ ಪ್ರವೇಶ ಪಡೆಯಬೇಕಾಗುತ್ತದೆ. ಒಂದು ರೀತಿಯಲ್ಲಿ ನಾವು ಮಗುವಾಗುತ್ತೇವೆ. ಆದರೆ ನಾವು ಬೇಕಂತಲೇ ಪ್ರಜ್ಞಾ ಪೂರ್ವಕವಾಗಿ ಪ್ರವೇಶ ಪಡೆದ ಜಗತ್ತು ಅಷ್ಟೇ.

ಟಿ.ಪಿ. ಉಮೇಶ ಅವರ ಮಕ್ಕಳ ಕವನ ಸಂಕಲನ ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’ ದಲ್ಲಿ ಲೇಖಕರು ಪೂರ್ತಿಯಾಗಿ ಮಕ್ಕಳ ಸುತ್ತಲಿನದೇ ಅವರ ಜಗತ್ತಿನದೇ ಸಂಗತಿಯನ್ನು ಎತ್ತಿಕೊಂಡು ಬರೆದಿರುವುದು ಮೊದಲ ಯಶಸ್ಸಾಗಿದೆ.

ಮಕ್ಕಳ ಪ್ರೀತಿಯ ಸಂಗತಿಗಳು ಎಂದಾಗ ಪುನಃ ಪುನಃ ಅದೇ ಮಳೆ, ಚಂದ್ರ, ರೈಲು, ಚಿಟ್ಟೆಗಳೆಲ್ಲ ಕಂಡುಬರುತ್ತವೆ. ಆದರೆ ಕವಿ ತನ್ನದೇ ಆದ ರೀತಿಯಲ್ಲಿ ನೋಡುವಲ್ಲಿ ಹೊಸತನದ ಆಕರ್ಷಣೆ ಇರುತ್ತದೆ. ‘ಬೀಜ ನೋಡು ಚಿಕ್ಕದು’ ಎಂಬ ಕವನದ ಸಾಲುಗಳು ಹೀಗೆ ಸಾಗಿವೆ.

‘ಬೀಜ ನೋಡು ಚಿಕ್ಕದು
ಚಿಗಿತು ಬೆಳೆದು ಮರವಾಗುವುದು
ಮೊಟ್ಟೆ ನೋಡು ಚಿಕ್ಕದು
ಒಡೆದು ಬೆಳೆದು ಹಕ್ಕಿಯಾಗುವುದು
ಬೆಂಕಿ ಕಡ್ಡಿ ನೋಡು ಚಿಕ್ಕದು
ಅಡಿಗೆ ಒಲೆಯ ಉರಿಸುವುದು’
ಇಲ್ಲಿ ಚಿಕ್ಕ ಚಿಕ್ಕ ವಸ್ತುಗಳಲ್ಲಿರುವ ಶಕ್ತಿಯನ್ನು ಮಗುಸಹಜ ಕುತೂಹಲದಿಂದ ನೋಡಿದುದು ಇದೆ. ಅಲ್ಲದೇ ಚಿಕ್ಕದಾದರೂ ದೊಡ್ಡ ಶಕ್ತಿ ಹೊಂದಿರುವುದನ್ನು ಹೇಳುತ್ತ ಮಗುವಿಗೆ ತಾನಾಗಿ ಒಂದಿಷ್ಟು ಅರಿವಿನ ವಿಸ್ತಾರ ಮಾಡುತ್ತದೆ.

ಪೇಟೆಯ ಮಕ್ಕಳಿಗೆ ಹಳ್ಳಿಯ ಬದುಕಿನ ಅರಿವು ಇರುವುದೇ ಕಡಿಮೆ. ಅಪ್ಪ ರೈತನಾಗಿ ದುಡಿಯುತ್ತಿದ್ದರೂ ಅವನೊಂದಿಗೆ ಹೊಲಕ್ಕೆ ಹೋಗಿ ಅಲ್ಲಿಯ ಸಂಗತಿಗಳನ್ನು ತಿಳಿದುಕೊಳ್ಳದ ಮಕ್ಕಳೂ ಇರುತ್ತಾರೆ. ಮಕ್ಕಳು ಅದನ್ನೆಲ್ಲ ತಿಳಿಯುವ ಅಗತ್ಯವಿಲ್ಲ. ಅವರು ಓದಲಿ ಎಂದು ಒತ್ತಾಯಿಸುವ ಪಾಲಕರೂ ಇರುತ್ತಾರೆ. ಆದರೆ ಮಗುವಿನ ಅರಿವಿನ ವಿಸ್ತಾರಕ್ಕೆ ಹಾಗೂ ಅದರ ಸುತ್ತಲಿನ ಪರಿಸರದ ಪ್ರೀತಿ ಬೆಳೆಯಲು ಎಲ್ಲವೂ ಬೇಕು ಎಂಬುದನ್ನು ನಾವು ತಿಳಿದಿರಬೇಕು. ‘ಭಾನುವಾರ ಶಾಲೆಗೆ ರಜಾ ದಿನ’ ಪದ್ಯದಲ್ಲಿ ಅಪ್ಪನ ಜೊತೆಯಲ್ಲಿ ಮಕ್ಕಳನ್ನು ಓಡಾಡಿಸುತ್ತ ಬಹಳ ಅಂದದ ಸಾಲುಗಳನ್ನ ಉಮೇಶ ಅವರು ಬರೆದಿದ್ದಾರೆ.

‘ನವಣೆ ಹೊಲದಲಿ ಸಜ್ಜೆಯ ಸಾಲು
ಶೇಂಗಾ ಕಡಲೆ ಮೆಕ್ಕೆಜೋಳ
ಸುಟ್ಟು ಬೇಸಿ ತಿನ್ನಲು ಸವಿ ಸವಿ!
ಅಪ್ಪನ ಶ್ರಮ ಅಧಿಕ ತಿಳಿ ತಿಳಿ!
ಪಕ್ಕದ ಕೆರೆಯಲಿ ಸ್ನಾನವ ಮಾಡಿ
ಜೀರುಂಡೆ ಹಿಡಿದು ಆಡಿಸಿ ನೋಡಿ
ಸೂರ್ಯಕಾಂತಿಯ ಮೆಲ್ಲುತ ಅಲ್ಲಿ
ಬೇಲದ ಹಣ್ಣು ಆರಿಸಿ ಇಲ್ಲಿ’
ಹೀಗೆ ಗೆಲುವಾಗಿ ಸಾಗಿದೆ ಇಲ್ಲಿನ ಸಾಲುಗಳು. ಮಕ್ಕಳು ಓದುತ್ತ ಖುಷಿ ಖುಷಿಯಾಗಿ ಪದ್ಯದೊಂದಿಗೆ ಸಾಗದೇ ಇರಲಾರರು.

ಇನ್ನೊಂದು ಪದ್ಯದಲ್ಲಿ…
“ಸಿಂಹದ ಘರ್ಜನೆ ಶಬ್ದದ ಮುಂದೆ
ನನ್ನ ಧ್ವನಿಯು ತುಂಬಾ ಕಡಿಮೆ
ಆನೆಯ ಫೀಳಿನ ಶಬ್ದದ ಮುಂದೆ
ನನ್ನ ಧ್ವನಿಯು ತುಂಬಾ ಕಡಿಮೆ
ನಾಯಿಯ ಬೊಗಳುವ ಶಬ್ದದ ಮುಂದೆ
ನನ್ನ ಧ್ವನಿಯು ತುಂಬಾ ಕಡಿಮೆ”
ಹೀಗೆ ಸಾಗುವ ಪದ್ಯವು ಮಗುವಿನ ವಿನಯವಂತಿಕೆಯನ್ನು ಹೇಳುವುದಲ್ಲದೇ ಪ್ರಾಣಿಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ ಎಲ್ಲರೂ ಮಳೆಯ ಕುರಿತು, ಚಂದ್ರನ ಕುರಿತು ಬರೆಯುತ್ತಲೇ ಇರುತ್ತಾರೆ. ಮಕ್ಕಳಾಗಿ ನಾವು ಸುಖ ಅನುಭವಿಸುತ್ತಿರುವಾಗ ನಕ್ಷತ್ರ, ಮೋಡ, ಮಳೆ, ಚಂದ್ರ ಇವೆಲ್ಲ ಮತ್ತೆ ಮತ್ತೆ ಕಣ್ಣ ಮುಂದೆ ಬರುತ್ತವೆ. ಆಗಲೇ ಹೇಳಿದ ಹಾಗೆ ಅವುಗಳನ್ನು ಇಡುವ ರೀತಿಯಲ್ಲಿ ಆಪ್ತತೆ ಉಂಟಾಗುತ್ತದೆ. ಪ್ರತಿಭೆ ಅನಾವರಣಗೊಳ್ಳುತ್ತದೆ. ‘ಮಳೆ ಮಳೆ ಓಡಿ ಬಂತೆ’ ಪದ್ಯದ ಸಾಲುಗಳು ನನಗೆ ತುಂಬಾ ಇಷ್ಟವಾದವು.

‘ಮಳೆ ಮಳೆ ಹಾಡುತ ಬಂತೆ
ಮಕ್ಕಳ ಕಾಲ್ಗಳ ಹೆಜ್ಜೆಯಲು
ಕರುಗಳ ಕೊರಳ ಗೆಜ್ಜೆಯಲು
ದೇವರ ಘಂಟಾ ನಾದದಲು!’
ಚಂದ್ರನನ್ನು ಪುಟ್ಟ ಮಗುವೆಂದು ಭಾವಿಸಿ ಅವನಿಗೆ ಬಹಳ ಪ್ರೀತಿಯಿಂದ, ಹಿರಿತನದ ಜವಾಬ್ಧಾರಿಯಿಂದ ಅಣ್ಣ ತಮ್ಮನಿಗೆ ಮಾಡುವ ಕಾಳಜಿಯಂತೆ ಹಾಡು ಹೆಣೆದಿರುವುದು ಹೊಸತಾಗಿದೆ.

‘ಆ ಬಾನಿನಿಂದ ಚಂದಿರ ನಮ್ಮ ಮನೆಗೆ ಬಂದರೆ
ದಿನದಿನವೂ ಮುದ್ದು ಮಾಡುವೆ ಕೊಡುತ ಸಕ್ಕರೆ
ಜಳಕ ಮಾಡಿಸಿ ಉಣಿಸಿ ಸಮವಸ್ತ್ರ ತೊಡಿಸುವೆ
ಕೈ ಹಿಡಿದುಕೊಂಡು ನಮ್ಮ ಶಾಲೆಗೆ ಕರೆದೊಯ್ಯುವೆ
ಎಲ್ಲಾ ಮನೆಗೆಲಸಗಳನು ಮಾಡಿಸುವೆನು ತಿದ್ದಿ ತೀಡಿ
ಬೇಸರಿಸದಂತೆ ಕಲಿಸುವೆನು ಹಾಲು ಬೆಣ್ಣೆ ನೀಡಿ’.

ನಕ್ಷತ್ರ, ಚಂದ್ರ, ಬೇರೆ ಬೇರೆ ಗ್ರಹಗಳೆಲ್ಲಕ್ಕಿಂತ ನಮಗೆ ಭೂಮಿಯ ಬದುಕೇ ಪ್ರೀತಿ ಅನ್ನುವ ‘ಬಾಳಿ ಬದುಕು ಭೂಮಿಯಲ್ಲೆ’ ಎನ್ನುವ ಪದ್ಯ, ಪ್ರಾಣಿ ಪಕ್ಷಿಗಳೆಲ್ಲ ಒಟ್ಟಾಗಿ ಕಬಡ್ಡಿ ಆಟ ಆಡುವ ಸುಂದರ ಚಿತ್ರಣ ಇರುವ ‘ಪ್ರಾಣಿ ಪಕ್ಷಿಗಳ ಕಬಡ್ಡಿ ಆಟ’, ಪರಿಸರ ಕಾಳಜಿ ಬಿತ್ತುವ ‘ಕಾಡಿನ ಮಂಗಣ್ಣ’, ರೈಲಿನೊಂದಿಗೆ ದಿನಚರಿ ಬೆಸೆದು ವಿಭಿನ್ನವಾಗಿ ಬರೆದಿರುವ ‘ರೈಲು ಬಂತು ರೈಲು’ ಪದ್ಯಗಳೆಲ್ಲ ಆಕರ್ಷಕವಾಗಿವೆ.

ಹಿರಿಯರಿಗಾಗಿಯೂ ಕವನಗಳನ್ನೂ ವಚನಗಳನ್ನೂ ಬರೆಯತ್ತಿರುವ ಉಮೇಶ ಅವರ ಈ ಎರಡನೇ ಮಕ್ಕಳ ಸಂಕಲನ ಒಂದಿಷ್ಟೆಲ್ಲ ಹೊಸದಿಗೆ ಚಾಚಿಕೊಳ್ಳುತ್ತ… ಮಕ್ಕಳ ಆಪ್ತತೆಯ ನೆರಳಿನ ಹಂದರದಡಿಯಲ್ಲಿ ಓಡಾಡುತ್ತ ಮಕ್ಕಳಲ್ಲಿ ಖುಷಿ ತುಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರತಿಭಾವಂತ ಕಲಾವಿದ ಸಂತೋಷ ಸಸಿಹಿತ್ಲು ಮುಖಪುಟ ಹಾಗೂ ಒಳಗಿನ ಪುಟಗಳಲ್ಲಿಯ ಚಿತ್ರಗಳನ್ನು ಆಕರ್ಷಕವಾಗಿ ಚಿತ್ರಿಸಿ ಪುಸ್ತಕದ ಸೊಗಸು ಹೆಚ್ಚಿಸಿದ್ದಾರೆ. ಹಿರಿಯ ಸಾಹಿತಿ ಆನಂದ ಪಾಟೀಲರ ಮುನ್ನುಡಿ ಇದೆ. ಇಂತಹ ಒಂದು ಒಳ್ಳೆಯ ಪ್ರಯತ್ನ ಮಾಡಿದ ಕಿರಿಯ ಸ್ನೇಹಿತ ಉಮೇಶ ಅವರಿಗೆ ವಂದನೆಗಳು. ಉಮೇಶ ಅವರ ಈ ಪುಸ್ತಕ ಕನ್ನಡದ ಮಕ್ಕಳ ಕೈ ತಲುಪಿ ಅವರ ಖುಷಿ ಹಾಗೂ ಅರಿವಿನ ಪರಿಧಿ ಹೆಚ್ಚಲಿ ಎಂದು ಆಶಿಸುತ್ತೇನೆ.

ಪುಸ್ತಕದ ಹೆಸರು: ಅಪ್ಪನು ಕೊಡಿಸಿದ ಮೊದಲ ಪುಸ್ತಕ (ಮಕ್ಕಳ ಕವನ ಸಂಕಲನ)
ಲೇಖಕರು: ಟಿ.ಪಿ. ಉಮೇಶ್
ಪುಟ: ೬೪
ಬೆಲೆ: ೫೦
ಪ್ರಕಾಶಕರು: ಲೇಖನ ಪ್ರಕಾಶನ ಚಿತ್ರದುರ್ಗ

‍ಲೇಖಕರು Admin

May 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: