ಸ್ಮಿತಾ ಮಾಕಳ್ಳಿ
ಅಮವಾಸ್ಯೆಗಳು ಹುಟ್ಟುತ್ತಲೇ ಇರಬೇಕು
ಜೇನು ತೊಟ್ಟಿಕ್ಕುವಂತೆ
ದುಂಬಿ ಮುತ್ತುವಂತೆ
ಮರ ಮೈದುಂಬಿಯೂ ಕೆಲವೊಮ್ಮೆ ವಿಷಾದವ ಹೊದ್ದು ನಿಂತಂತೆ
ಮೊಗೆದಷ್ಟು ಬಾಚಿ ಮಡಿಲೊಳಗೆ
ಕತ್ತಲು ಉಳಿಯುವಷ್ಟು ಮಾತ್ರ
ಆ ರಾತ್ರಿಯಾಗಬೇಕು
ಆ ದಿನಗಳಲ್ಲಿ ಚಂದಿರ ಮತ್ತೆಲ್ಲೋ ಹೋಗಿರಬಹುದು
ಆದರೆ ಕತ್ತಲು ಸುರಿಯುತ್ತಲೇ ಇರುವುದು ಯಾವೂರಿನ ಬೆಳಕಿಗಾಗಿ ?
ಸಾವರಿಸಿಕೊಂಡು ಬಂದೇ ಬರುತ್ತಾನೆ ಚಂದಿರ
ಗೂಬೆಗಳ ಕಣ್ಣ ದೃಢತೆಯ ದಿಟ್ಟಿಸಲು
ಮನಸ್ಸಿನ ಬಣ್ಣ ಕತ್ತಲ ಸನಿಹ
ರಂಗೇರಲೂ, ಇಲ್ಲಾ ತಟಸ್ಥನಾಗಿರಲು
ಏಕೆಂದರೆ
ಅದು ಮಾಸುವ ಬಣ್ಣ ಅಲ್ಲವೇ ಅಲ್ಲಾ..
ಆದರೂ ಆ ಒಂದು ಅಮವಾಸ್ಯೆಯ ದಿನ ಊರ ಬಿಟ್ಟ .
ಕಾಡ ದಾರಿಯ ಚಂದಿರ
ಮರವ ಅಪ್ಪಿದ
ಒಂದೊಂದು ಪೊಟರೆಗಳು
ಕಣ್ಣು ಬಿಡುತ್ತಲೇ
ಎಚ್ಚರಗೊಂಡ
ನೂರಾರು ಗೂಡುಗಳ ರೆಕ್ಕೆಗಳು
ಸದ್ದು ಮಾಡಿ ನಸು ನಕ್ಕು
ಚಂದಿರನ ಗಲ್ಲಕ್ಕೆ ಒರಗಿದವು!

ಕೂಟ ಬೆಳೆಸಿ
ಮೊಬ್ಬು ಸರಿಸಿ
ಗಾಳಿ ಬಳಸಿ
ಕಥೆ ಹೊಸೆದ ಚಂದಿರ.
ಎದ್ದ ಹಕ್ಕಿಗಳೆಲ್ಲಾ ಕೊಂಬೆ ಕೊಂಬೆಗೂ ಆತು
ಕಿವಿಯಾದವು
ಒಂದೂರೆಂಬ ರಾಜ್ಯದೊಳಗೆ
ರಾಜ ರಾಣಿಗಳಿರದೆ
ಮಂತ್ರಿ ಸೈನಿಕರ ಕಾಳಗಗಳಿರದೆ
ಕಥೆಯಾದೀತು ಹೇಗೆ ?
ಎಂದು ಕಣ್ಣು ಬಿಟ್ಟ ಹಕ್ಕಿಗಳ ನೋಟಕ್ಕೆ
ಮುಗುಳ್ನಕ್ಕ.
ಹೀಗೆ ಆಟದ ಕಳೆಯ ಹಚ್ಚಿ
ನೀರ ಬುಗ್ಗೆಯ ಅಲೆಯ ತೇಲಿಸಿ
ದೂರದಲ್ಲೆಲ್ಲೋ ನವಿಲ ಕಣ್ಣ ನೆನೆದು
ಹಣತೆ ಹೊಳೆದು
ಹಸಿರು ಮರುಗಿತು
ಹಕ್ಕಿಗಳು ನಿದ್ದೆಗಿಳಿದಷ್ಟು ಇವನ ಉಸಿರು ಜೋರಾಗಿ
ಬೆಕ್ಕು ಹೆಜ್ಜೆಯನ್ನಾವರಿಸಿ
ಅಳಿಸಿದಷ್ಟು ಮತ್ತೆ ಮೂಡುವ ಗೀಜುಗನ ರೆಕ್ಕೆ
ಮತ್ತೆ ಕೊಕ್ಕೆಗೆ ತೂಗುತ್ತಿದ್ದರೂ
ಬರುತ್ತಾನೆ
ಮತ್ತಷ್ಟು ಮೇಲೇರಿ ಮತ್ತೊಂದು ದಿನ
ರೆಕ್ಕೆ ಬಲಿಯಲು, ಹೆಜ್ಜೆ ಮೂಡಲು
ಮಿಣುಕು ಪೂಚಿಯ
ಅರೆ ನಿಮಿಷಗಳ
ಹುಣ್ಣಿಮೆ, ಅಮವಾಸ್ಯೆಗಳು
ಕಣ್ಣ ರೆಪ್ಪೆಯಿಂದ
ಕೈಯೊಳಗೆ ಕೂಡಿಟ್ಟ ಗುಟ್ಟಾಗಿ
ಮೆಲ್ಲನೆ ಕೊಸರಿ
ಒಡೆದು ಬಯಲ ಆಗಸವ
ಹೊಳೆಸುವಾಗ
ನಿಜದ
ಅಮವಾಸ್ಯೆಗಳು ಹುಟ್ಟುತ್ತಿರಲಿ
ಚಂದಿರನೂ ಬರುತ್ತಿರಲಿ
ಮನದ ಕತ್ತಲೆಯು ತೀರಿಹೋಗುತ್ತಲಿರಲಿ…






0 Comments