ರೂಪಾ ಪ್ರಭು ಓದಿದ ‘ಪಕ್ಕಿ ಹಳ್ಳದ ಹಾದಿಗುಂಟ’

ಅನುಪಮಾ ಪ್ರಸಾದ್ ಅವರ “ಪಕ್ಕಿಹಳ್ಳದ ಹಾದಿಗುಂಟ” ಕಾದಂಬರಿಯಲ್ಲಿ ಇಕೊ ಫೆಮಿನಿಸಮ್

ರೂಪಾ ಪ್ರಭು.ಬಿ., ಹೈದರಾಬಾದ್

ಕಾದಂಬರಿ: ಪಕ್ಕಿ ಹಳ್ಳದ ಹಾದಿಗುಂಟ (2019)

ಲೇಖಕಿ: ಅನುಪಮಾ ಪ್ರಸಾದ್

ಪ್ರತಿಗಳಿಗಾಗಿ ಸಂಪರ್ಕಿಸಿ: ಪಲ್ಲವ ಪ್ರಕಾಶನ– 94803 53507

ಸಾಹಿತ್ಯ ಹಾಗು ಸಮಾಜದ ನಡುವೆ ಅವಿನಾಭಾವ ಸಂಬಂಧವಿದೆ. ಸಮಾಜದಲ್ಲಿ ನಡೆಯುವ ಘಟನೆಗಳಾಗಲೀ, ಸಂಸ್ಕøತಿಯ ಮೇಲೆ ಇದರ ಪ್ರಭಾವವಾಗಲೀ ಮನುಷ್ಯನ ಜೀವನದ ಮೇಲೆ ಉಂಟಾಗುವ ಪರಿಣಾಮಗಳಾಗಲಿ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ವ್ಯಕ್ತವಾಗುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಸ್ತ್ರೀ ಸಾಹಿತ್ಯವು ಕೇವಲ ಸೀಮಿತ ಕಥಾ ವಸ್ತುವನ್ನು ಕೇಂದ್ರವಾಗಿಸಿ ರಚನೆಯಾಗುತ್ತಿಲ್ಲ. ಹತ್ತು ಹಲವು ಆಯಾಮ ಹಾಗು ದೃಷ್ಠಿ ಕೋನಗಳನ್ನು ಒಳಗೊಂಡು ಹೊಸ ವಿಷಯಗಳೊಂದಿಗೆ ಓದುಗರ ಮನಸ್ಸಿನಲ್ಲಿ ಸಂವೇದನೆಯನ್ನು ಉಂಟು ಮಾಡುವುದರಲ್ಲಿ ಯಶಸ್ವಿಯಾಗಿದೆ.

ಸ್ತ್ರೀ ನಿಷ್ಠ ವಿಮರ್ಶೆ ಅಥವಾ ಸ್ತ್ರೀ ವಾದಿ ವಿಮಶೆಯ ಹೊಸ ಅಲೆಯ ರೂಪದಲ್ಲಿ ಸ್ತ್ರೀಯನ್ನು ಪ್ರಕೃತಿಯೊಂದಿಗೆ ಹೋಲಿಸಿ , ಅವಳ ಸೌಂದರ್ಯವನ್ನು ಪ್ರಕೃತಿ ಸೌಂದರ್ಯದೊಂದಿಗೆ ತುಲನೆ ಮಾಡಿ ಶೃಂಗಾರ ಕಾವ್ಯಗಳ ರಚನೆಯನ್ನು ಓದುತ್ತ ಬಂದಿರುವ ನಮಗೆ ಈ ವಾದವು ತುಸು ಹೊಸದಾಗಿ ಕಾಣುವುದು ಆಶ್ಚರ್ಯವೇನಲ್ಲ. ಸ್ತ್ರೀವಾದಿ ಸಾಹಿತ್ಯದಲ್ಲಿ ಸ್ತ್ರೀಯ ಮೇಲೆ ಭೌತಿಕ ಹಾಗು ಮಾನಸಿಕ ಶೋಷಣೆ, ಅವಳ ಅಸ್ತಿತ್ವದ ಮೇಲೆ ನಡೆಯುತ್ತಿರುವ ನಿರಂತರ ಪ್ರಹಾರಗಳ ಬಗ್ಗೆ ಸಾಹಿತ್ಯದಲ್ಲಿ ಒಡಮೂಡಿರುವ ಬಗ್ಗೆ ಗುರುತಿಸುವುದೇ  ಇದರ ಪ್ರಮುಖ  ಉದ್ದೇಶವಾಗಿದೆ.

“ಇಕೊ ಫೆಮಿನಿಸಂ” ಅನ್ನು ಗುರುತಿಸಲಾಗುತ್ತಿದೆ. ಈ ಪದವನ್ನು ಕಟ್ಟಿದವರು ಫ್ರೆಂಚ್ ಬರಹಗಾರ್ತಿ ಫ್ರಾನ್ಸ್ವಾ ದು’ ಬೊನ್( Francoise d’eaubonne) .  ಈಕೆ 1974ರಲ್ಲಿ ರಚಿಸಿದ ‘Le feminism ou la mort ಎಂಬ ಪುಸ್ತಕದಲ್ಲಿ ಮೊದಲಿಗೆ ಬಳಸಿದ್ದಾರೆ. ಭಾರತೀಯ ಸಂದರ್ಭ ಇದನ್ನು ಅವಲೋಕಿಸಿದಾಗ ತಿಳಿದುಬರುವುದೇನೆಂದರೆ ಪುರುಷ ಕೇಂದ್ರಿತ ಸಮಾಜದಲ್ಲಿ ಸ್ತ್ರೀ ಹಾಗು ಪರಿಸರದ ಮೇಲೆ ಏಕರೂಪವಾಗಿ ಶೋಷಣೆ ನಡೆಯುತ್ತಿದೆ. ಮುಖ್ಯವಾಗಿ ಸ್ತ್ರೀ ಹಾಗು ಪರಿಸರವನ್ನು ಭೊಗದ ವಸ್ತುವೆಂದು ಭಾವಿಸಿ ಇವರ ಮೇಲೆ ಅಧಿಪತ್ಯ ಸ್ಥಾಪಿಸುವ ಉದ್ದೇಶದ ವಿರುದ್ಧ ಸಾಹಿತ್ಯದಲ್ಲಿ ಕಂಡು ಬಂದ ಪ್ರತಿರೋಧ ಅಥವಾ ಆಕ್ರೋಶವನ್ನು ಇಕೊ ಫೆಮಿನಿಸಂನ ನೆಲೆಗಟ್ಟಿನಲ್ಲಿ ವಿಶ್ಲೇಷಿಸಬಹುದು.

ಅನುಪಮಾ ಪ್ರಸಾದ್ ಅವರ ಕಾದಂಬರಿ ಪಕ್ಕಿ ಹಳ್ಳದ ಹಾದಿಗುಂಟ ಬಹು ಆಯಾಮಗಳಿಗೆ ತೆರೆದುಕೊಳ್ಳುವ ಕಾದಂಬರಿಯಾಗಿಯೂ, ಅತ್ಯಂತ ಪ್ರಭಾವಶಾಲಿಯಾಗಿ ಇಕೋ ಫೆಮಿನಿಸಂ ಅನ್ನು ಪ್ರತಿನಿಧಿಸುತ್ತದೆ. ಇಲ್ಲಿ ಬರುವ ಅನೇಕ ಪಾತ್ರಗಳಲ್ಲಿ ಇದನ್ನು ಗುರುತಿಸಬಹುದು. ಎಂಡೊ ಸಲ್ಫಾನ್ ಕೀಟ ನಾಶಕದ ದುಷ್ಪರಿಣಾಮದ ಕಾರಣ ಹರಿಣಾಕ್ಷಿಯ ಜೀವನದಲ್ಲಿ ನಡೆಯುವ ಏರು ಪೇರುಗಳ, ಪರಿಸರ ನಾಶದಿಂದಾಗಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವಳ ಶರೀರ ಹಾಗು ಮನಸ್ಸಿನ ಮೇಲೆ ಉಂಟಾಗುವ ಆಘಾತಗಳ ಗಾಢ ಚಿತ್ರಣವಿದೆ.

ಹರಿಣಾಕ್ಷಿ ಪಾತ್ರದ ಮೂಲಕ ಅನುಪಮಾರವರು ಸ್ತ್ರೀ  ಮನಸಿನ ವಿವಿಧ ಪದರಗಳನ್ನು ಕಲಾತ್ಮಕವಾಗಿ ತೆರೆದಿಡುತ್ತಾ ಅವಳ ಸುಪ್ತ ಮನಸಿನ ಭಾವನೆಗಳನ್ನು , ತೊಳಲಾಟಗಳನ್ನು, ದ್ವಂದ್ವಗಳನ್ನು ಸಮರ್ಥವಾಗಿ ನಿರೂಪಿಸುತ್ತಾರೆ. ಹರಿಣಾಕ್ಷಿ ಪಾತ್ರದ ವಿಶೇಷತೆ ಏನೆಂದರೆ, ಅವಳು ಕಾದಂಬರಿ ಉದ್ದಕ್ಕೂ ಎಲ್ಲೂ ತನ್ನ ನೋವನ್ನು ಪ್ರತ್ಯಕ್ಷವಾಗಿ ವ್ಯಕ್ತ ಪಡಿಸುವುದಿಲ್ಲ. ಹೆಚ್ಚಿನ ಕಥೆಗಳಲ್ಲಿ  ಕಂಡು ಬರುವ ಸುದೀರ್ಘ ಸಂವಾದಗಳಾಗಲೀ, ಸ್ತ್ರೀ ಸಶಕ್ತೀಕರಣದ ಬಗ್ಗೆ ಅವಳಿಗೆ ಅರಿವು ಉಂಟು ಮಾಡುವ ಯಾವುದೇ ಘಟನೆಗಳಾಗಲೀ ನೇರವಾಗಿ ಇಲ್ಲ. ಆದರೆ, ಅವಳ ಅಸ್ತಿತ್ವದ ಅರಿವು  ಅವಳಲ್ಲಿ ಸ್ವಯಂ ಮೂಡುತ್ತದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಅವಳು ಸಶಕ್ತಳಲ್ಲ. ಕಾದಂಬರಿಯಲ್ಲಿ ಅವಳು ತೆಗೆದುಕೊಳ್ಳುವ ದೃಡ ನಿರ್ಧಾರವು ಹಲವರಿಗೆ ಅಸಮಾಧಾನವನ್ನು ಕೂಡಾ ಉಂಟು ಮಾಡಬಹುದು. ಆದರೆ, ಇಲ್ಲಿ ಅವಳ ಈ  ನಿರ್ಧಾರಕ್ಕೆ ಕಾರಣವಾಗುವ ಅಂಶಗಳ ವಿವೇಚನೆಯು ಅತ್ಯಂತ ಮುಖ್ಯವಾಗಿದೆ. ಹರಿಣಾಕ್ಷಿಯು ಸ್ವಭಾವತಃ ಅತ್ಯಂತ ಕೋಮಲ, ಮೃದು ಸ್ವಭಾವದ ಹೆಣ್ಣು ಮಗಳು. ಅವಳ ಚಂದದ ಸಂಸಾರದಲ್ಲಿ ಎಂಡೊ ಸಲ್ಫಾನ್ ವಿಷವು ಬಿರುಗಾಳಿಯಾಗಿ ಬಂದು ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತದೆ. ಮನೆಗೆ ಆಧಾರವಾಗಿದ್ದ ಗಂಡ ಹಾಸಿಗೆ ಹಿಡಿಯುತ್ತಾನೆ. ಮಗುವಿನಲ್ಲಿ ಅಂಗ ವೈಕಲ್ಯದ ಸಮಸ್ಯೆ ಇರುತ್ತದೆ. ಇಷ್ಟೆಲ್ಲ ಸಮಸ್ಯೆಗಳು ಎದುರಾದರೂ ದೃತಿಗೆಡದೆ ಸ್ವಾಭಿಮಾನದಿಂದ ದುಡಿದು ಮನೆ ನಡೆಸುವ ಛಲವಿದ್ದ ಮಹಿಳೆಗೆ ಅವಳ ಸುತ್ತಲಿನ ಸಮಾಜ ಅನುಮಾನದಿಂದ ನೋಡುತ್ತದೆ. ಅವಳಿಗೆ ಅತ್ಯಂತ ಪ್ರಿಯವಾದ ಪಕ್ಕಿ ಹಳ್ಳ ಎಂಡೊ ಸಲ್ಫಾನಿಂದ ವಿಷಯುಕ್ತವಾಗುತ್ತದೆ. ಇಲ್ಲಿ ಪ್ರಕೃತಿ ದತ್ತ ನೀರಿನಲ್ಲಿ ಮಾನವನಿಂದಾಗಿ ವಿಷ ಬೆರೆತಿದ್ದು ಗೋಚರಿಸುತ್ತದೆ. ಆದರೆ, ಇದೇ ಕಾರಣದಿಂದ ಹರಿಣಾಕ್ಷಿಯ ಹಾಲಿನಂತಹ ಸಂಸಾರದಲ್ಲಿ ವಿಷ ಬೆರೆತಿದ್ದು ಪ್ರತ್ಯಕ್ಷವಾಗಿ ಗೋಚರಿಸಲಾರದು.  ಹರಿಣಾಕ್ಷಿಯಂತಹ ಸಾವಿರಾರು ಮಹಿಳೆಯರು ಪರಿಸರ ನಾಶದಿಂದ ಪರೋಕ್ಷವಾಗಿ ಘಾಸಿಗೊಂಡಿದ್ದಾರೆ.

ಕಾದಂಬರಿಯಲ್ಲಿ ತೊಂಡಜ್ಜನ ಮೂಲಕ ಪರಿಸರ ನಾಶದ ಭೀಕರತೆ  ಈ ರೀತಿಯಾಗಿದೆ. “ನಿಂಗೆ ಗೊತ್ತಾಗುವುದಿಲ್ಲ ಮಗಾ, ನಮ್ಮ ಭೂಮಿ, ನಮ್ಮ ನೀರು ಎಲ್ಲವನ್ನು ಕಾಳಿಂದಿ ಮಡು ಮಾಡುತ್ತಾರೆ. ನಮ್ಮ ಪಕ್ಕಿ ಹಳ್ಳದಲ್ಲು ಕಾಳಿಂದಿ ಬಂದು ಕೂತ್ಕೊಳ್ತದೆ. ಕೃಷ್ಣ ಮಾತ್ರ ಎಲ್ಲಿಂದ ಬರ್ತಾನೊ” (ಪುಟ ಸಂಖ್ಯೆ 330) ವಿಷ ಸಿಂಪರಣೆಗೆ ಬರುವ ಹೆಲಿಕಾಪ್ಟರ್ ನೋಡಲು ಮಕ್ಕಳು ಗುಡ್ಡದ ತುದಿಗೆ ಓಡುತ್ತಿದ್ದಾಗ ವಯೋವೃದ್ಧ ತೊಂಡಜ್ಜ ಹೇಳುವ ಮಾತುಗಳಿವು. ಈ ಹಿರಿಯ ಜೀವ ಯಾವುದೇ ವಿಜ್ಞಾನಿ ಅಥವಾ ಪರಿಸರ ಹೋರಾಟಗಾರರಲ್ಲ. ಆದರೆ, ಅವರ ಅನುಭವದ ದೊಡ್ಡದು. ಎಂಡೊ ಸಲ್ಫಾನನ್ನು ಕಾರ್ಕೋಟಕ ವಿಷಕ್ಕೆ ಹೋಲಿಸಿ , ನೀರು ಕಲುಷಿತವಾಗಬಹುದಾದ ಪರಿಯನ್ನು ಅರ್ಥ ಮಾಡಿಕೊಂಡು ಮುಂದೆ ನಡೆಯಬಹುದಾದ ವಿನಾಶದ ಬಗ್ಗೆ ಸೂಚ್ಯವಾಗಿ ಮಾತಾಡುವ ತೊಂಡಜ್ಜನ ನಂತರದ ತಲೆಮಾರಿನ ಹರಿಣಾಕ್ಷಿಗೆ ಪಕ್ಕಿ ಹಳ್ಳವೆಂದರೆ ಪ್ರಾಣ. ಒಂದು ಕಾಲದಲ್ಲಿ ಪಕ್ಕಿ ಹಳ್ಳದ ದಂಡೆಗುಂಟ ನಡೆಯುತ್ತಿದ್ದ ಹೆಣ್ಣು. ಪಕ್ಕಿಹಳ್ಳದಲ್ಲಿ ಹದವಾಗಿ ನೀರಿದ್ದಾಗ ಬಂಡೆಯಿಂದ ಬಂಡೆಗೆ ಜಿಗಿಯುತ್ತ, ಏಡಿ ಹುಡುಕುತ್ತ, ಈಜುತ್ತ ಅಲೆಯುತ್ತಿದ್ದ ಹೆಣ್ಣು. (ಪುಟ 304) ಸಮಸ್ತ ಜೀವರಾಶಿಗೆ ಜೀವನಾಧಾರವಾಗಿರುವ ನೀರು ಎಂಡೊ ಸಲ್ಫಾನಿಂದ ವಿಷಯುಕ್ತವಾಗುತ್ತದೆ. ಇದೇ ಎಂಡೋಸಲ್ಫಾನ್ ಹರಿಣಾಕ್ಷಿಯ ಜೀವನದಲ್ಲು ವಿಷವಾಗುತ್ತದೆ. ದೈಹಿಕ ವಿಕಲತೆಯಿಂದ ಅಸಹಾಯಕನಾದ ಹರಿಣಾಕ್ಷಿಯ ಗಂಡ  ಜಯಂತ ಮಾತಿನ ವಿಷದಿಂದ ಅವಳನ್ನು ಘಾಸಿಗೊಳಿಸುತ್ತಾನೆ. ಜಯಂತನಿಗೆ ನೋವಿನೆಣ್ಣೆ ಹಚ್ಚಿ ಇನ್ನೇನು ವಿಶ್ರಾಂತಿ ತೆಗೆದುಕೊಳ್ಳಲು ಹೋಗಬೇಕು ಎನ್ನುವಷ್ಟರಲ್ಲಿ ಅವಳ ಗಂಡನ ಮಾತುಗಳು ತಿವಿಯುತ್ತದೆ. “ಎಂತಾಗಿದೆ ನಿಂಗೆ? ನಾನಿಲ್ಲಿ ಬೇನೆಯಿಂದ ಸಾಯ್ತಾ ಇದ್ರೆ ನಿಂಗೆ ಮದ ಏರಿದಾ? ಕೈಲಾಗದವನು ಅಂತ ಹಂಗು ಬರಿಸ್ಲಿಕ್ಕೆ  ನೋಡ್ತೀಯಾ? ಅಷ್ಟು ಸಸಾರ ಆದೆ ಅಲ್ಲ ನಾನು. ನಿಂಗೆ..ನಿಂಗೇ..ನಾನು ಅಡ್ಡಿಯಾಗ್ತೇನಂತಾದ್ರೆ ನನ್ನನ್ನು ಆ ಪಕ್ಕಿ ಹಳ್ಳಕ್ಕೆ ಹಾಕು.. ನಡಿ ಇಲ್ಲಿಂದ..ಮುಟ್ಬೇಡ” (ಪುಟ ಸಂಖ್ಯೆ 294) ಇಲ್ಲಿ ವಿಷದ ಮಾತುಗಳು ಹರಿಣಾಕ್ಷಿಯ ಮನೋಬಲವನ್ನು, ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದರೆ ಇಂತವುಗಳು   ಯಾವುತ್ತೂ ಮುಖ್ಯ ಧಾರೆಯಲ್ಲಿ ಪ್ರಮುಖ ಚರ್ಚೆಗೆ ಒಳಗಾಗುವ ವಿಷಯಗಳೇ ಅಲ್ಲ.  ಸಮಾಜದಲ್ಲಿ ಮಹಿಳೆಗೆ ಅನೇಕ ರೀತಿಯ ಅಡೆತಡೆಗಳು ಯಾವತ್ತೂ ಇವೆ. ಲೈಂಗಿಕ ದೌರ್ಜನ್ಯ, ಅಪವಾದ, ಅವಮಾನ ಮುಂತಾದವುಗಳಿಗೆ ಅವಳು ಬಲಿಯಾಗುತ್ತಲೇ ಇದ್ದಾಳೆ.

ಕಾದಂಬರಿಯಲ್ಲಿ ಬರುವ ಈ ಘಟನೆ ಅತ್ಯಂತ ವಯಕ್ತಿಕವಾದುದು. ಇಲ್ಲಿ ಅಪರಾಧಿ ಯಾರು..? ಪ್ರಕೃತಿ ಸಹಜ ಕಾಮನೆಗಳೋ..ಖಾಯಿಲೆಯ ಅಸಹಾಯ ವ್ಯಕ್ತಿಯೊ.. ಅಥವಾ  ಅಭಿವೃದ್ದಿ ಎಂಬ ಭೋಗ-ವಿಲಾಸದ ಜೀವನದ ಹಿಂದೆ ಓಡುತ್ತಾ ಪ್ರಕೃತಿಯ ಮೇಲೆ ನಿರಂತರ ಪ್ರಹಾರ ಮಾಡುತ್ತಿರುವ ಮಾನವನ ಲೋಭಗ್ರಸ್ತ ಮಾನಸಿಕತೆಯೋ..? ಈ ಎಲ್ಲ ಸನ್ನಿವೇಶದ ದುಷ್ಪರಿಣಾಮಕ್ಕೆ ಅಂತಿಮ ಬಲಿಪಶುವಾಗಿರುವುದು ಪ್ರಕೃತಿ ಹಾಗು ಹೆಣ್ಣು. ಅವಳ ಹಾಗು ಮಣ್ಣಿನ  ಈ ದುರ್ದೆಶೆಗೆ ಕಾರಣವಾಗಿರುವುದು ಮನುಷ್ಯನ ವಿಲಾಸ ಪೂರಿತ ಭೋಗ ಲಾಲಸೆಯ ವಿಪರೀತ ವ್ಯಾಮೋಹ ಹಾಗು ಮನುಷ್ಯ ಕೇಂದ್ರಿತ ಪರಿಸರ ನಿರ್ಮಾಣದ ಹುಚ್ಚು  ಪ್ರಯತ್ನ. ಸೃಷ್ಟಿಯಿರುವುದೇ ಪರಿಸರ ಕೇಂದ್ರಿತವಾಗಿ. ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ದೈತ್ಯ ಡೈನೋಸಾರ್ ಗಳವರೆಗೂ ಎಲ್ಲವನ್ನೂ ನಿಯಂತ್ರಿಸುವುದು ಈ ಪ್ರಾಕೃತಿಕ ಪರಿಸರ ಮಾತ್ರ. ಹಾಗಾಗಿಯೇ ಬೃಹತ್ ಎನಿಸುವ  ಮನುಷ್ಯ ನಿರ್ಮಾಣಗಳು ಕ್ಷಣಮಾತ್ರದಲ್ಲಿ ನಾಶವಾಗುವುದನ್ನು ನಾವು ನೋಡುತ್ತಿದ್ದೇವೆ. ಆದರೂ ಮನುಷ್ಯ ಪ್ರಕೃತಿಯ ಮೇಲೆ ವಿಜಯ ಸಾಧಿಸುವ ಲಾಲಸೆಯಿಂದ ವಿನಾಶದಂಚಿಗೆ ತಲುಪುತ್ತಿದ್ದಾನೆ. ಸೃಷ್ಠಿಯಲ್ಲಿ ಜೀವವನ್ನು ಮರು ಸೃಷ್ಠಿಗೊಳಿಸುವ ಶಕ್ತಿ ಇರುವುದು ಭೂಮಿ ಹಾಗು ಹೆಣ್ಣಿಗೆ ಮಾತ್ರ.  ಪರಿಸರ ನಾಶದಿಂದ ಮಣ್ಣು ಹಾಗು ಹೆಣ್ಣಿನ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಸಾಹಿತ್ಯದಲ್ಲಿ ವ್ಯಕ್ತವಾಗುತ್ತಿರುವ ಪ್ರತಿರೋಧವನ್ನು ಗುರುತಿಸುವ ಕಾರ್ಯವನ್ನು ಇಕೋ ಫೆಮಿನಿಸಂ ಮಾಡುತ್ತಿದೆ.

ಹರಿಣಾಕ್ಷಿಯು ತನ್ನ ವಿಕಲಾಂಗ ಮಗುವಿಗೆ ಬರವಸೆಯಂತಿರುವ, ಅವಳ ಭಾವನೆಗಳಿಗೆ ಸ್ಪಂದಿಸುವ ಮುಕ್ತಾ ತಾಯಿಯೊಂದಿಗೆ ದೇವನಗರಿಯಿಂದ ನಿರ್ಗಮಿಸುತ್ತಾಳೆ. ಹರಿಣಾಕ್ಷಿಯ ಈ ನಿರ್ಧಾರ ಓದುಗರನ್ನು ಅನೇಕ ರೀತಿಯ ಚಿಂತನೆಗಳಿಗೆ ಒಡ್ಡುತ್ತದೆ. ಕಾದಂಬರಿಯಲ್ಲಿ ಹರಿಣಾಕ್ಷಿಯ ಕುರಿತು ಬರುವ ಕಾವೇರಿಯ ಈ ಮುಂದಿನ  ಮಾತುಗಳು “ಅವಳಾದ್ದಕ್ಕೆ  ಬೀಡಿ ಕಟ್ಟುತ್ತ, ಇನ್ನೊಬ್ಬರ ಮನೆಯಲ್ಲಿ ಗೇಯುತ್ತ ಸಂಸಾರ ಸಾಕಿದ್ಲು. ನಾನಾಗಿದ್ರೆ ಇಷ್ಟು ಹೊತ್ತಿಗೆ ಯಾವಾಗಲೋ ಬಾವಿಗೆ ಹಾರಿಕೊಳ್ಳುತ್ತಿದ್ದೆನೇನೋ ..”(ಪು 326)  ಹರಿಣಾಕ್ಷಿಯ ಆತ್ಮ ಸ್ಥೈರ್ಯವನ್ನು ಬಿಂಬಿಸುತ್ತದೆ. ಏಕಾಂಗಿಯಾಗಿ ಸಮಸ್ಯೆಗಳನ್ನು ಎದುರಿಸುವ ಹರಿಣಾಕ್ಷಿ ಅವಳು ಅತ್ಯಂತ ಗೌರವಿಸುವ ಬಲ್ಲಾಳರಿಂದಲೂ ಒಂದು ಸಂದರ್ಭದಲ್ಲಿ  ಘಾತಕ ಮಾತುಗಳನ್ನು ಸಹಿಸುವ ಸಂದರ್ಭ ಬರುತ್ತದೆ.

ಜಯಂತನ ಸ್ನೇಹಿತ ಮಹೇಂದ್ರನು ಮಾನವೀಯತೆಯಿಂದ ಗೆಳೆಯನೆಂಬ  ಕಕ್ಕುಲಾತಿಯಿಂದ ಮಕ್ಕಳಿಗೆ ಪುಸ್ತಕ, ಬಟ್ಟೆ,ಚೀಲ ಪೆನ್ಸಿಲುಗಳನ್ನು ತಂದುಕೊಟ್ಟಿದ್ದನ್ನು ಉದಾಹರಣೆಯಾಗಿಸಿ “ಯಾರು ಏನಾದ್ರೂ ಹೇಳ್ಲಿ ಹರಿಣಾಕ್ಷಿ. ನಮ್ಮ ಸತ್ಯ ನಮಗೆ ಗೊತ್ತಿದ್ರೆ ಸಾಕು.” ಹೇಳುವ ಮಾತು (ಪುಟ ಸಂಖ್ಯೆ 290) ಅವಳನ್ನು ವಿಪರೀತ ಘಾಸಿಗೊಳಿಸುತ್ತದೆ. ಲೇಖಕಿ ಅನುಪಮಾ ಪ್ರಸಾದ್ ಅತ್ಯಂತ ಸಹಜವಾಗಿ ಹಾಗು ಅಷ್ಟೇ ಪರಿಣಾಮಕಾರಿಯಾಗಿ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಹೆಣ್ಣಿನ ಜೀವನದ ವಿವಿಧ ಮಜಲುಗಳನ್ನು ಬೇರೆ ಬೇರೆ ಪಾತ್ರದ ಮೂಲಕ ಎಳೆಎಳೆಯಾಗಿ ಚಿತ್ರಿಸಿದ್ದಾರೆ. ಆಧುನಿಕ ಸಭ್ಯ ಸಮಾಜದಲ್ಲಿ ದಿನ ನಿತ್ಯವೂ ಹೆಣ್ಣಿನ ಮೇಲೆ ನಡೆಯುವ ದೈಹಿಕ ಹಾಗು ಮಾನಸಿಕ ಪ್ರಹಾರಗಳು ಜನರಿಗೆ ಸರ್ವೇ ಸಾಮಾನ್ಯದಂತೆ ಗೋಚರಿಸಲಾರಂಭಿಸಿದೆ. ಇದು ಸಮಾಜದ ಸ್ವಸ್ಥ ಬೆಳವಣಿಗೆಗೆ ಪೂರಕವಲ್ಲ. ಅನುಪಮಾ ಪ್ರಸಾದರ ಪಕ್ಕಿ ಹಳ್ಳದ ಹಾದಿಗುಂಟ ಕಾದಂಬರಿಯು ಓದುಗರಲ್ಲಿ ಇಂತಹ ಸಂವೇದನೆಯನ್ನು ಜಾಗ್ರತಗೊಳಿಸಲು ಸಫಲವಾಗುತ್ತದೆ. ಇಕೊ ಫೆಮಿನಿಸಂ ದೃಷ್ಠಿಯಲ್ಲಿ ಗಮನಿಸಿದರೂ  ಈ ಕಾದಂಬರಿಯು ಕನ್ನಡ ಕಾದಂಬರಿ ಜಗತ್ತಿನಲ್ಲಿ ಒಂದು ಮೈಲುಗಲ್ಲು ಎಂದು ಹೇಳಬಹುದಾಗಿದೆ.

—-

(ಲೇಖನ ಸಂದರ್ಭ: ತೆಲಂಗಾಣ ವಿಶ್ವ ವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಸಾಹಿತ್ಯದಲ್ಲಿ ಇಕೊ ಫೆಮಿನಿಸಂ ಸಂಶೋಧನಾತ್ಮಕ ಅಧ್ಯಯನದ ಭಾಗವಾಗಿ ಹಿಂದಿಯಲ್ಲಿ  ಮಂಡಿಸಲಾದ  ಲೇಖನದ ಭಾಗ

ಕಾದಂಬರಿ: ಪಕ್ಕಿ ಹಳ್ಳದ ಹಾದಿಗುಂಟ (2019)

ಲೇಖಕಿ: ಅನುಪಮಾ ಪ್ರಸಾದ್

ಪಲ್ಲವ ಪ್ರಕಾಶನ

‍ಲೇಖಕರು avadhi

September 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: