ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೀಲ್ ಜಮಾನದ ರಿಯಲಿಸ್ಟಿಕ್ ಜನರೇಶನ್

– ಶಿವಕುಮಾರ ಮಾವಲಿ

” Loyalty to country ALWAYS. Loyalty to government, when it deserves it.” – Mark Twain

ನಾಲ್ಕಾರು ಸಂಬಂಧಿಕರೋ ಅಥವಾ ಸ್ನೇಹಿತರೊಂದಿಗೆ, ಊಟ ಮಾಡುತ್ತಿರುವಾಗಲೋ, ನ್ಯೂಸ್ ನೋಡುತ್ತಿರುವಾಗಲೋ ನಿಮ್ಮ ಮನೆಯಲ್ಲಿರುವ ಒಬ್ಬ ಅಥವಾ ಇಬ್ಬರು ಮಕ್ಕಳು(ಹದಿ ಹರೆಯದವರು ಮತ್ತು ಅದಕ್ಕಿಂತ ಸ್ವಲ್ಪ ದೊಡ್ಡವರು) ನಿಮ್ಮ ಆ ಚರ್ಚೆಯಲ್ಲಿ ಸ್ವಲ್ಪವೂ ಭಾಗವಹಿಸದೆ ತಮ್ಮ ಮೊಬೈಲ್ ನೊಳಗೆ ಮುಳುಗಿ ಹೋಗಿರುತ್ತಾರೆ ಅಲ್ಲವೆ? ನೀವು ನ್ಯೂಸ್ ನೋಡಿ ನಿಮ್ಮ ನೆಚ್ಚಿನ ಪ್ರಧಾನಿಯನ್ನೋ, ಮುಖ್ಯಮಂತ್ರಿಯನ್ನೋ ಪ್ರಶಂಸಿಸುತ್ತಿರುತ್ತೀರಿ ಇಲ್ಲವೆ ಅವರನ್ನು ನಿಂದಿಸುತ್ತಿರುತ್ತೀರಿ. ಇದ್ಯಾವುದೂ ತನಗೆ ಸಂಬಂಧವೇ ಇಲ್ಲವೆಂಬಂತೆ ಯಾವುದೋ ರೀಲ್ ನೋಡುತ್ತ ಕೋಣೆಯೊಳಗೆ ಇಲ್ಲವಾದರೆ ಮನೆಯ ತಾರಸಿಗೆ ಹೋಗುವ ಇಂಥ ಹುಡುಗ ಹುಡುಗಿಯರು ಅವರಿಗಿಂತ ಹಿರಿಯ ತಲೆಮಾರಿನ ಬಹುತೇಕರಿಗೆ ಸಂಪೂರ್ಣವಾಗಿ ಇನ್ನೂ ಅರ್ಥವಾಗಿಲ್ಲ. ಯಾವಾಗಲೂ ಮೊಬೈಲ್ ನಲ್ಲಿ ಕಳೆದು ಹೋಗುವ ಇವರಿಗೆ ಅದೊಂದೇ ಪ್ರಪಂಚ ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬ ಅರಿವೇ ಅವರಿಗೆ ಇರುವುದಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ ಆ ಹುಡುಗ/ಹುಡುಗಿ ಹಾಗೆ ನಗುತ್ತಾ ಹೊರ ಹೋಗಿದ್ದು, ಈ ಅಂಕಲ್ ಅಥವಾ ಆಂಟಿಯರ ಜಡ್ಡುಗಟ್ಟಿದ ರಾಜಕೀಯ ಜ್ಞಾನ ಅಥವಾ ಅಜ್ಞಾನಕ್ಕೇ ಆಗಿರುತ್ತದೆ. ಏಕೆಂದರೆ ಅವರ ಬಳಿ ಇಡೀ ಜಗತ್ತಿನ ರಾಜಕೀಯದ ಆಗುಹೋಗಗಳ‌ ಬಗ್ಗೆ ಅರಿವಿರುತ್ತದೆ. ಆದರೆ ಅದನ್ನು ಈ ಹಿರಿಯರಿಗೆ ಅರ್ಥ ಮಾಡಿಸೋಕೆ ಆಗಲ್ಲ ಎಂಬ ಕಾರಣಕ್ಕೆ ಅವರು ವ್ಯಂಗ್ಯದ ನಗು ಬೀರುತ್ತಿದ್ದಾರೆ. ಅಂಥ ಅನೇಕರ ಬಳಿ ಮಾತನಾಡಿದಾಗ ನಾನು ಗಮನಿಸಿದ್ದೇನೆಂದರೆ, ಇಡೀ ಜಗತ್ತಿನ ರಾಜಕೀಯದ ಸ್ಥಿತ್ಯಂತರದ ಬಗ್ಗೆ , ಎಲಾನ್ ಮಸ್ಕ್, ಟ್ರಂಪ್, ಕಿಮ್, ಪುಟಿನ್, ಮೆಲೋನಿ ಮುಂತಾದವರ ಪೂರ್ತಿ ಜೀವನ ಚರಿತ್ರೆಯನ್ನು ಅವರು ನಿರರ್ಗಳವಾಗಿ ಹೇಳಬಲ್ಲರು. ಅವರ ಕಣ್ಣುಗಳಲ್ಲಿ ತಮ್ಮ ಹಿರಿಯರ ಅಜ್ಞಾನ ಮತ್ತು ಆಶಾಡಭೂತಿತನದ ಬಗ್ಗೆ ಅಸಮಾಧಾನ ಇದೆ. ಆದರೆ ಅವರೆಲ್ಲ ತಮ್ಮವರೆಂಬ ಸಹಾನುಭೂತಿಯೂ ಇದೆ.

ತಮ್ಮ ಮನೆಯ ಹಿರಿಯರು ಜಾತಿ ಮತ್ತು ಧರ್ಮಗಳ ಸಂಕೋಲೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ಈ ತಲೆಮಾರು ಸ್ಪಷ್ಟವಾಗಿ ಗ್ರಹಿಸಿದೆ. ಊಟದ ಟೇಬಲ್ಲಿನಲ್ಲಿ ಬರುವ ಹಿರಿಯರ ರಾಜಕೀಯ ಕಮೆಂಟುಗಳು ಇವುಗಳಿಂದ ಬಿಡಿಸಿಕೊಂಡಿಲ್ಲ ಎಂಬುದನ್ನು ಅವರು ಬಲ್ಲರು‌. ಕೆಲವೊಮ್ಮೆ ಅದನ್ನು ಸೂಕ್ಷ್ಮವಾಗಿ ಹೇಳಿ ತಿದ್ದಲು ನೋಡಿದರೂ ಹಿರಿಯರು ತಮ್ಮ ಹಳೆಯ ಚಾಳಿಯಿಂದ ಹೊರ ಬರುವುದಿಲ್ಲ ಎಂದು ತಿಳಿದಮೇಲೆ ಹೀಗೆ ನಕ್ಕು ಸುಮ್ಮನಾಗುವುದನ್ನು ಅವರು ಕಲಿತದ್ದು. ಆದರೆ ಅವರಿಗೆ ಎಲ್ಲದರ ಅರಿವೂ ಇದೆ. ರಾಜಕೀಯ ವ್ಯವಸ್ಥೆಯ ಆಟಾಟೋಪಗಳ ಬಗ್ಗೆ ಹೇವರಿಕೆ ಮೂಡಿದೆ. ಅಂಥ ಒಂದು ದೊಡ್ಡ ವರ್ಗವೇ ಇಂದು ದೇಶದಾದ್ಯಂತ ಪ್ರತಿಭಟನೆಗೆ ಇಳಿದದ್ದು. ಇದು ಕೇವಲ ನೀಟ್ ಪರೀಕ್ಷೆಯದ್ದು ಮಾತ್ರ ಅಲ್ಲ. ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳ ಅಕ್ರಮಗಳನ್ನು ನೋಡಿ ಈ ತಲೆಮಾರು ಬೇಸತ್ತಿದೆ. ಆ ಬಗ್ಗೆ ಆಳುವವರ ‘ಒಣಮಾತು’ ಕೇಳಿ ರೋಸಿ ಹೋಗಿದೆ. ಹಾಗಾಗಿಯೇ ತಮ್ಮ ಚುರುಕುತನ, ಬುದ್ಧಿವಂತಿಕೆ ಮತ್ತು ತಂತ್ರಜ್ಞಾನವೆಂಬ ಸಂಪನ್ಮೂಲಗಳೊಂದಿಗೆ ಬೀದಿಗಿಳಿದಿದ್ದಾರೆ. ಥೇಟ್ ಮನೆಯ ಮಕ್ಕಳು ಕೋಪ ಮಾಡಿಕೊಂಡಾಗ ಊಟ ಬಿಟ್ಟು ಹೆದರಿಸುವ ಹಾಗೆಯೇ ಇವರು ಹಠ ಹಿಡಿದಿದ್ದಾರೆ. ಆದರೆ ‘ಉತ್ತರದಾಯಿತ್ವ’ ಎಂಬುದನ್ನು ಕಾಲಡಿಯಲ್ಲಿಟ್ಟು ಮರೆತಿರುವ ರಾಜಕೀಯ ನಾಯಕರಿಗೆ ಇದರ ಗಂಭೀರತೆ ಬಹಳ ದಿನಗಳವರೆಗೆ ಅರ್ಥವಾಗಿರಲಿಲ್ಲ. ಅವರು ಇದನ್ನೂ ಕೂಡ ವೀರೋಧಪಕ್ಷದವರ ಧರಣಿಯಂತೆ ಕಾಣುತ್ತಿದ್ದರು. ತಮ್ಮ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಕೆಲವು ವಿರೋಧ ಪಕ್ಷಗಳೂ ಇದರಲ್ಲಿ ಭಾಗವಹಿಸಿರಬಹುದು. ಆದರೆ ಯುವ ಸಮುದಾಯದ ಬೇಡಿಕೆ ನಮ್ಮನ್ನಾಳುವವರ ಸಾಂಪ್ರದಾಯಿಕ ಪ್ರತಿಕ್ರಿಯೆಯನ್ನು ಅಲುಗಾಡಿಸಿದೆ. ಹಾಗೆ ನೋಡಿದರೆ ಇತ್ತೀಚಿನ ವರ್ಷಗಳಲ್ಲಿ ಬಹು ದೊಡ್ಡ ವಿದ್ಯಾರ್ಥಿ ಚಳವಳಿಗಳು ನಡೆದ ಉದಾಹರಣೆಗಳು ಹೆಚ್ಚಿಲ್ಲ. ಅಂಥ ಸಮುದಲ್ಲಿ ಇದೊಂದು ಬೃಹತ್ ಆಂದೋಲನದಂತೆ ಕಂಡು ಬರುತ್ತಿದೆ.

ಆಳುವ ಸರ್ಕಾರ ಪ್ರತಿ ಬಾರಿ ಮಾಡಿದಂತೆ ಈ ಬಾರಿಯೂ ಇದೊಂದು ಪಿತೂರಿ, ವಿದೇಶೀ ಕೈವಾಡ, ದೇಶದ್ರೋಹಿಗಳ ಮಸಲತ್ತು ಎಂದು ಬಿಂಬಿಸಲು ಹೋಯಿತು. ಆದರೆ ಇಂಥ ಪ್ರಶ್ನೆಗಳಿಗೆ ಯುವ ಸಮೂಹ ಕೊಡುತ್ತಿರುವ ಖಡಕ್ ಉತ್ತರಗಳು ರಾಜಕೀಯ ಪಕ್ಷಗಳಿಗೆ ತೀರ ಹೊಸತು. ತಮ್ಮ ಭಾಷಣಗಳಲ್ಲಿ ಭಾರತ ಯುವಕರು ಹೆಚ್ಚಿರುವ ದೇಶ ಎನ್ನುತ್ತಲೇ, ಅವರ ಒಂದು ಬೇಡಿಕೆಯನ್ನು ತುಚ್ಛವಾಗಿ ಕಾಣುವ ಆಳುವವರ ವಿರುದ್ಧ ಈ ಸಮೂಹ ಕೇಳುತ್ತಿರುವ ಪ್ರಶ್ನೆಗಳು ನೈಜವಾಗಿದ್ದವು. ತಮ್ಮ ಪ್ರತಿಭಟನೆಯನ್ನು ಅವರು ದಾಖಲಿಸುತ್ತಿರುವ ಪರಿಯೂ ಅನನ್ಯವಾದದ್ದು. ತಮ್ಮ ತಂದೆ ತಾಯಿಗಳ ಸರ್ವಾಧಿಕಾರಿ ಧೋರಣೆಯನ್ನೇ ಸಹಿಸದ ಈ ತಲೆಮಾರು ಒಂದಿಡೀ ಸರ್ಕಾರ ಸರ್ವಾಧಿಕಾರಿಂತೆ ವರ್ತಿಸುವುದನ್ನು ಹೇಗೆ ಸಹಿಸೀತು? ಸರ್ಕಾರ ಎಂಬುದು ತಾಯಿ ಇದ್ದಂತೆ ಇರಬೇಕು. ಮುನಿಸಿಕೊಂಡ ಮಕ್ಕಳನ್ನು ರಮಿಸುವ ತಾಯಿಯಾಗದೆ ಅವರನ್ನು ಥಳಿಸುವ ಅಧಿಕಾರಿಣಿ ಆಗಬಾರದಿತ್ತು.

ಈ ಹುಡುಗ ಹುಡಗಿಯರಿಗೆ ಮತ್ತೊಂದು ವಿಷಯ ಚೆನ್ನಾಗಿ ತಿಳಿದಿದೆ. ಈ ದೇಶದಲ್ಲೀಗ ನಾಗರಿಕರು ಅಥವಾ ಸಾರ್ವಜನಿಕರು ಸಿಗುವುದೇ ಇಲ್ಲ. ಅವರಲ್ಲಿ ಬಹುತೇಕರು ಪಕ್ಷಗಳ ನಡುವೆ ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ಮುಂತಾದವರಾಗಿ ಹಂಚಿ ಹೋಗಿದ್ದಾರೆ. ಹಾಗಾಗಿ ಸರ್ಕಾರವನ್ನು ಟೀಕಿಸುವುದನ್ನು ದೇಶವನ್ನೇ ಟೀಕಿಸಿದಂತೆ ಎಂದು ಬಿಂಬಿಸಲು ಹೊರಡುತ್ತಾರೆ. ಸಂಪೂರ್ಣವಾಗಿ ನಾಗರಿಕರು ಯಾವುದೋ ಒಂದು ಪಕ್ಷಕ್ಕೆ ಒತ್ತೆಯಾಳಾಗುವುದು ಎಂಥ ಅಪಾಯಕಾರಿ ಎಂಬುದನ್ನು ಅವರು ತಮ್ಮ ಮನೆಯ ಹಿರಿಯರನ್ನು ನೋಡಿಯೇ ಕಲಿತಿದ್ದಾರೆ. ಮೂರು ನಾಲ್ಕು ದಶಕಗಳ ಹಿಂದೆ ಕಟ್ಟಾ ಕಾಂಗ್ರೆಸ್ ಆಗಿದ್ದವರ ಮಕ್ಕಳು ಒಂದು ದಶಕದ ಹಿಂದೆ ಬಿಜೆಪಿಯವರಾಗಿ ಬದಲಾಗಿದ್ದರಲ್ಲವೆ? ಈಗ ಅವರ ಮಕ್ಕಳು ಈ ಬದಲಾವಣೆಯ ಹಂತ ತಲುಪಿದ್ದಾರೆ ಎನಿಸುತ್ತದೆ. ಮಂದಿರ, ಮಸೀದಿ, ಚರ್ಚುಗಳ ವಿವಾದಗಳನ್ನು ಅವರು ತಾರ್ಕಿಕವಾಗಿ ಅಲೋಚಿಸುತ್ತಿದ್ದಾರೆ. ನಮ್ಮನ್ನು ಶತಮಾನಗಳಷ್ಟು ಹಿಂದೆ ಕರೆದೊಯ್ಯುವ ಯಾವುದರಲ್ಲೂ ಅವರಿಗೆ ಆಸಕ್ತಿ ಇಲ್ಲ.‌ Kahlil Gibran ಹೇಳುವಂತೆ Life never tarries with yesterday ಎಂಬ ಸಾಲನ್ನು ಅವರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿಯೇ ಬರಿ ‘ನಿನ್ನೆ’ಯನ್ನು ಹಿಡಿದುಕೊಂಡು ‘ಜಗ್ಗಾಡುವ’ ಸಾಂಪ್ರದಾಯಿಕ ರಾಜಕಾರಣಿಗಳಿಗೆ ಇವರ ಪ್ರತಿಭಟನೆಯ ಪರಿ ಅರ್ಥವೂ ಆಗಲಾರದು. ಯಾವ ಐಟಿ ಸೆಲ್ ಗಳನ್ನು ಬಳಸಿ ಪಕ್ಷಗಳು ಅಭಿಪ್ರಾಯ ರೂಪಿಸಬಲ್ಲವೋ, ಅದೇ ಸೋಷಿಯಲ್ ಮೀಡಿಯಾ ಬಳಸಿ ಈ ಯುವಕರು ದೇಶಾದ್ಯಂತ ಇರುವ ಯುವ ಸಮೂಹವನ್ನು ತಲುಪಿದ್ದಾರೆ. ಮುಖ್ಯ ವಾಹಿನಿ ಮಾಧ್ಯಮಗಳ ಬೆಂಬಲ ಇಲ್ಲದೆಯೂ ಇದು ಸಾಧ್ಯ‌ ಎಂದು ತೋರಿಸುತ್ತಿದ್ದಾರೆ. ಈ ತಲೆಮಾರಿನವರಲ್ಲಿ ಕುರುಡು ಪಕ್ಷಪ್ರೇಮ, ಜಾತಿ ಪ್ರೇಮ ಇಲ್ಲವೇ ಇಲ್ಲವೆಂದಲ್ಲ. ಆದರೆ ಅವರ ಸಂಖ್ಯೆ ತೀರಾ ಕಡಿಮೆ. ಯಾವಾಗಲೂ ರೀಲ್ ನೋಡಿಕೊಂಡಿರುತ್ತಾರೆ ಎಂಬ ಸಮೂಹವೊಂದು ರಿಯಲ್ ಆಗಿ ರಸ್ತೆಗೂ ಇಳಿಯಬಲ್ಲದು ಎಂಬುದನ್ನು ಅವರು ತೋರಿಸುತ್ತಿದ್ದಾರೆ. ಪಕ್ಷಗಳ ಸಮಾವೇಶಗಳಿಗೆ ದುಡ್ಡು ಕೊಟ್ಟು ಕರೆತರುವ ಬಾಡಿಗೆ ಕಾರ್ಯಕರ್ತರಂತಲ್ಲ, ನಿಜವಾದ ಪ್ರತಿಭಟನಾಕಾರರಂತೆ. ಮನೆಯ ಮಕ್ಕಳು ಉಪವಾಸ ಕೂತು ಹಠ ಹಿಡಿದರೆ, ರಮಿಸಬೇಕಾಗಿದ್ದ ಸರ್ಕಾರವೆಂಬ ತಾಯಿ, ಅವರ ಮೇಲೆ ಜಿದ್ದಿಗೆ ಬಿದ್ದು ಕೊನೆಗೆ ಮಣಿಯಲೇಬೇಕಾಯಿತು. ಹಾಗಾಗಿ ಮಾರ್ಕ್ ಟ್ವೈನ್ ಹೇಳಿದ ಮಾತನ್ನು ನಾವು ಪಾಲಿಸಲೇಬೇಕಾಗುತ್ತದೆ. ಅದನ್ನೇ ಜೆನ್ ಝೀಗಳು ಈಗಾಗಲೇ ಶುರು ಮಾಡಿದ್ದಾರೆ.

‍ಲೇಖಕರು Admin

1 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading